ಬೊಂಬಾಯಿ ಆಶ್ರಮದ ಸಾಧುಗಳೂ ಭಕ್ತರೂ ಭಕ್ತಿಪೂರ್ವಕವಾಗಿ ಆಹ್ವಾನಕೊಟ್ಟು ಪ್ರಾರ್ಥಿಸಿದ್ದರಿಂದ ಸ್ವಾಮಿ ಶಿವಾನಂದರು ಮದ್ರಾಸಿನಿಂದ ಅಲ್ಲಿಗೆ ಬಂದ ಹೆಚ್ಚು ದಿನಗಳಾಗಿರಲಿಲ್ಲ. ತಮಗೆ ಅವರ ದಿವ್ಯ ಸಂಗ ಸಾನಿಧ್ಯಗಳು ದೊರೆತುದಕ್ಕಾಗಿ ಅವರಿಗೆ ಮಹದಾನಂದವಾಗಿತ್ತು. ಪ್ರತಿ ದಿನವೂ ದೇವರ ವಿಷಯವಾದ ಮಾತುಕತೆ ನಡೆಯುತ್ತಿತ್ತು; ಭಜನೆ ಕೀರ್ತನೆಗಳೂ ಸಾಗುತ್ತಿದ್ದುವು. ಆಶ್ರಮದಲ್ಲಿ ಪ್ರತಿಯೊಬ್ಬನ ಹೃದಯದಲ್ಲಿಯೂ ಆನಂದೋಲ್ಲಾಸ, ಆಧ್ಯಾತ್ಮಿಕ ಸಾಧನೋತ್ಸಾಹ ತುಂಬಿತುಳುಕುತ್ತಿತ್ತು. ಸ್ವಾಮಿ ಶಿವಾನಂದರು ಹಿಂದೊಮ್ಮೆ ೧೯೨೪ರಲ್ಲಿ ಆಶ್ರಮವು ಬಾಡಿಗೆಯ ಮನೆಯಲ್ಲಿದ್ದಾಗ ಅಲ್ಲಿಗೆ ಬರುವ ಅನುಗ್ರಹ ಮಾಡಿದ್ದರು. ಆ ವರ್ಷವೆ ಈಗಿರುವ ಹೊಸ ಆಶ್ರಮದ ಕಟ್ಟಡಕ್ಕೆ ಅವರೇ ಶಂಕುಸ್ಥಾಪನೆ ಮಾಡಿದ್ದರು. ಮೂರೆ ವರ್ಷಗಳಲ್ಲಿ ಪೂಜಾ ಮಂದಿರವೂ ಸಂನ್ಯಾಸಿಗಳ ನಿವಾಸಕ್ಕಾಗಿ ಆಶ್ರಮವೂ ಕಟ್ಟಿ ಪೂರೈಸಿದ್ದವು. ಮಹಾಪುರುಷಜಿ ಈಗ ತಂಗಿದ್ದುದು ಹೊಸ ಆಶ್ರಮದಲ್ಲಿಯೆ.

ಆಗ ಜನವರಿ ತಿಂಗಳು. ಚಳಿಗಾಲ ಪ್ರಾರಂಭವಾಗಿತ್ತು. ಚೆನ್ನಾಗಿ ಬೆಳಗಾಗಿ ಸೂರ‍್ಯೋದಯವಾದ ಮೇಲೆ ಸ್ವಾಮಿಗಳು ಅಲ್ಲಿಯೇ ಬಳಿಯ ಜುಹೂ ಸಮೀಪದ ಸಮುದ್ರ ತೀರಕ್ಕೆ ಸಂಚಾರಾರ್ಥವಾಗಿ ಹೋಗುತ್ತಿದ್ದರು. ಕೆಲವು ಸಾರಿ ಕಡಲತೀರದಲ್ಲಿ ಆ ಕೇರಿಯ ಬೆಸ್ತರು ಕಟ್ಟಿದ್ದ ಶಿವದೇವಾಲಯಕ್ಕೂ ಹೋಗುತ್ತಿದ್ದರು. ಆ ಬೆಸ್ತರ ಕೇರಿಯ ಮಕ್ಕಳು ಹುಡುಗರು ಮುದುಕರು ಆದಿಯಾಗಿ ಎಲ್ಲರೂ ಸ್ವಾಮಿಗಳನ್ನು ನೋಡಲು ತವಕಿಸುತ್ತದ್ದರು. ಸ್ವಾಮಿಗಳಲ್ಲಿ ಎಷ್ಟು ಭಕ್ತಿ ಅವರಿಗೆ!

ಆ ದಿನ ಪ್ರಾತಃಕಾಲ ಮಹಾಪುರುಷಜಿ ಅವರು ಇಳಿದುಕೊಂಡಿದ್ದ ಕೊಠಡಿಯಲ್ಲಿ ಕುಳಿತಿದ್ದರು. ಆಶ್ರಮದ ಸಂನ್ಯಾಸಿ ಒಬ್ಬರು ಪ್ರವೇಶಿಸಿ, ಪ್ರಣಾಮ ಮಾಡಿ ಕುಳಿತುಕೊಂಡರು, ಯಾವುವೋ ಸಂಸ್ಥೆಗಳ ವಿಚಾರ ಮಾತು ಬಂದು ಸ್ವಾಮಿಗಳು ಹೇಳಿದರು: “ವತ್ಸ, ಅಂಥ ವಿಷಯಗಳೆಲ್ಲ ನಡೆಯುವುದು ಸ್ವಾಭಾವಿಕವೆ. ಅಂತಹ ಅನುಭವಗಳಾದರೆ ಜನರಿಗೆ ಗೊತ್ತಾಗುವುದು, ಯಾವುದು ಋಜು ಯಾವುದು ಕಪಟ ಎಂದು. ಯಾರು ಹೃತ್ಪೂರ್ವಕವಾಗಿ ಸತ್ಯವನ್ನೆ ಅಪೇಕ್ಷಿಸಿ ಅನ್ವೇಷಿಸುತ್ತಾರೊ ಅವರು ಎಂದಿಗೂ ಅದನ್ನು ತ್ಯಜಿಸುವುದಿಲ್ಲ. ಸತ್ಯಕ್ಕೆ ಜಯ, ಅನೃತಕ್ಕಲ್ಲ. ‘ಸತ್ಯಮೇವ ಜಯತೇ ನಾನೃತಂ.’ ಕೊನೆಯ್ಲಿ ಪಟ್ಟಾಭಿಷೇಕವಾಗುವುದು ಸತ್ಯಕ್ಕೇ. ನಟನೆ ವಂಚನೆ ಕಪಟ ಎಲ್ಲವೂ ಸತ್ಯದ ಗಾಳಿಯಲ್ಲಿ ತೂರಿ ಹೋಗುತ್ತವೆ. ಇದನ್ನು ತಿಳಿ: ಯಾರು ಶ್ರದ್ಧೆಯಿಂದ ಸತ್ಯರೂಪನಾಗಿರುವ ಭಗವಂತನನ್ನು ಅರಸುತ್ತಾರೊ ಅಂಥವರನ್ನು ಆತನೆ ತಪ್ಪದೆ ಕೈಹಿಡಿದು ಋಜುಪಥದಲ್ಲಿ ನಡೆಸುತ್ತಾನೆ. ಅಂತಹವರಿಗೆ ಭಯಕ್ಕೆ ಕಾರಣವಿಲ್ಲ.”

ಸಂಭಾಷಣೆಯ ಮಧ್ಯೆ ಶ್ರೀರಾಮಕೃಷ್ಣರ ವಿಚಾರವಾಗಿ ಪ್ರಸ್ತಾಪಿಸುತ್ತಾ ಸಾಧುವೊಬ್ಬರು ಕೇಳಿದರು: “ಮಹಾರಾಜ್, ನೀವು ಶ್ರೀರಾಮಕೃಷ್ಣರ ಬಳಿಗೆ ಹೋಗುತ್ತಿದ್ದಾಗ ಅವರನ್ನು ಏನೆಂದು ತಿಳಿದುಕೊಂಡಿದ್ದಿರಿ?”

ಸ್ವಾಮೀಜಿ: “ನಾವು ಅವರೆಡೆಗೆ ಹೋದಾಗ ಅವರು ಭಗವಂತನ ಅವತಾರ ಹೌದೊ ಅಲ್ಲವೊ ಎಂಬ ವಿಚಾರ ನಮ್ಮ ತಲೆಗೆ ಬರುತ್ತಿರಲಿಲ್ಲ. ಇಡೀ ಜಗತ್ತಿನಲ್ಲಿ ಅವರು ಇಂತಹ ಅತಿಮಾನುಷವಾದ ಮಹತ್ತರ ಶಕ್ತಿ ಪ್ರವಾಹವನ್ನು ಪ್ರಚೋದಿಸುತ್ತಾರೆ ಎಂಬುದಂತೂ ನಮ್ಮ ಊಹೆಗೂ ಅಗೋಚರವಾಗಿತ್ತು. ನಾಲ್ಕೈದು ಅಡಿಯ ಅಲ್ಪಗಾತ್ರದ ಆ ಮನುಷ್ಯವ್ಯಕ್ತಿಯಿಂದ ಸಮಸ್ತ ಪ್ರಪಂಚವೆ ಸ್ಫೂರ್ತಗೊಳ್ಳುವುದೆಂದು ಆಗ ಯಾರಿಗೆ ತಾನೆ ಊಹಾಸಾಧ್ಯವಾಗಿತ್ತು? ಅವರು ನಮ್ಮನ್ನು ಲೋಕಾತೀತ ಎಂಬಂತಹ ಅಸಾಧಾರಣ ವಿಶ್ವಾಸದಿಂದ ಕಾಣುತ್ತಿದ್ದರು. ಅವರ ಆ ಅಸಾಧಾರಣ ದೈವಿಕ ಪ್ರೇಮವೇ ನಮ್ಮನ್ನು ಅವರೆಡೆಗೆ ಆಕರ್ಷಿಸುವುದಕ್ಕೆ ಮುಖ್ಯ ಕಾರಣವಾಗಿತ್ತು. ಆ ವಾತ್ಸಲ್ಯವನ್ನು ಹೇಗೆ ತಾನೆ ನಿಮಗೆ ಬಣ್ಣಿಸಲಿ? ಅದು ಅನಿರ್ವಚನೀಯ. ಮಕ್ಕಳಾಗಿದ್ದಾಗ ತಾಯಿತಂದೆಯರ ವಾತ್ಸಲ್ಯವನ್ನು ಅನುಭವಿಸಿ ಅದಕ್ಕಿಂತಲೂ ಹೆಚ್ಚಿನದು ಇನ್ನಿಲ್ಲ ಎಂದು ಭಾವಿಸಿದ್ದೆವು. ಆದರೆ ನಾವು ಗುರುಮಹಾರಾಜರ ಬಳಿಗೆ ಬಂದು ಅವರ ವಾತ್ಸಲ್ಯವನ್ನು ಸವಿದ ಮೇಲೆ  ಗೊತ್ತಾಯಿತು, ನಮ್ಮ ಮಾತಾಪಿತೃಗಳ ಪ್ರೀತಿಯೆಂದುಬುದು ಎಷ್ಟು ಅಲ್ಪ ಎಷ್ಟು ಸಾಮಾನ್ಯ ಎಂದು. ಅವರೆಡೆಗೆ ಬಂದಾಗ ತವರೂರಿಗೆ ಬಂದಂತಾಯ್ತು ನಮಗೆಲ್ಲ; ಅದುವರೆಗೂ ಪರದೇಶದಲ್ಲಿ ಅಲೆದಾಡುತ್ತಿದ್ದ ಪರದೇಶಿಗಳಾಗಿದ್ದೆವು ಎಂಬುದೂ ಅರಿವಿಗೆ ಬಂತು. ನಾವು ಶ್ರೀರಾಮಕೃಷ್ಣರ ಬಳಿಗೆ ಬಂದಾಗಲೆಲ್ಲ ನನಗೆ ಆ ಅನುಭವವಾಗುತ್ತಿತ್ತು. ನಾವು ಅವರನ್ನು ಸಂಧಿಸಿದ ಮೊದಲನೆಯಸಲವೆ ಅವರು ನನ್ನನ್ನು ಸಂಪೂರ್ಣವಾಗಿ ವಶಪಡಿಸಿಕೊಂಡರು.”

“ಒಂದು ದಿನ ಶ್ರೀರಾಮಕೃಷ್ಣರು ಹೇಳಿದರು: ‘ನೋಡು, ಎಷ್ಟು ಜನ ಬರುತ್ತಾರೆ ಇಲ್ಲಿಗೆ, ಸಾಧಾರಣವಾಗಿ ನಾನು ಯಾರನ್ನೂ ಅವರ ಮನೆಯ ವಿಚಾರವಾಗಿಯಾಗಲಿ ಮನೆತನದ ವಿಚಾರವಾಗಿಯಾಗಲಿ ಕೇಳುವುದಿಲ್ಲ; ಅದನ್ನು ತಿಳಿಯಬೇಕೆಂಬ ಮನಸ್ಸೂ ಬರುವುದಿಲ್ಲ. ನಾನು ನಿನ್ನನ್ನು ಮೊದಲ ಬಾರಿಗೆ ಕಂಡಾಗಲೆ ನೀನು ಇಲ್ಲಿಗೆ ಸೇರಿದವನೆಂಬುದು ಹೃದಯಕ್ಕೆ ಹೊಳೆಯಿತು: ಹಾಗೆಯೇ, ನಿನ್ನ ಮನೆ ತಂದೆತಾಯಿಗಳು ಇತ್ಯಾದಿ ವಿಚಾರ ವಿವರಗಳನ್ನು ಅರಿಯಬೇಕೆಂದೂ ಮನಸ್ಸಾಯಿತು. ಏಕೆಂದು ಹೇಳಬಲ್ಲೆಯಾ? ನಿನ್ನೆ ಮನೆ ಎಲ್ಲಿ? ನಿನ್ನ ತಂದೆಯ ಹೆಸರೇನು?’ ಅವರ ಪ್ರಶ್ನೆಗೆ ಉತ್ತರವಾಗಿ ನಾನು ಬರಾಸೆಟ್ಟಿನಿಂದ ಬರುತ್ತಿದ್ದೇನೆಂದೂ ನನ್ನ ತಂದೆಯ ಹೆಸರು ರಾಮಕನ್ಯೆ ಘೋಷಾಲ್ ಎಂದೂ ಹೇಳಿದೆ.”

ಅದನ್ನು ಕೇಳಿದೊಡನೆ ಗುರುಮಹಾರಾಜ್ ಹೇಳಿದರು: ‘ನಿಜವಾಗಿ! ನೀನು ರಾಮಕನ್ಯೆ ಘೋಷಾಲದ ಮಗನೇ? ಈಗ ಗೊತ್ತಾಯಿತು. ನಿನ್ನ ಮನೆಯ ವಿಚಾರವಾಗಿ ಅರಿಯಬೇಕೆಂಬ ಆಸೆಯನ್ನು ತಾಯಿ ಏಕೆ ನನ್ನ ಮನಸ್ಸಿನಲ್ಲಿ ಮೂಡಿಸಿದಳು ಎಂದು. ನಿನ್ನ ತಂದೆ ನನಗೆ ಚೆನ್ನಾಗಿ ಗೊತ್ತು; ಅವರು ರಾಣಿ ರಾಸಮಣಿಯ ವಕೀಲರಾಗಿದ್ದರು. ರಾಣಿಯೂ ಆಕೆಯ ಮನೆಯವರೂ ನಿನ್ನ ತಂದೆಯ ವಿಚಾರದಲ್ಲಿ ಬಹಳ ಗೌರವಿಟ್ಟಿದ್ದಾರೆ; ದಕ್ಷಿಣೇಶ್ವರ ತೋಟಕ್ಕೆ ಅವರು ಬಂದಾಗಲೆಲ್ಲ ಅವರ ಅನುಕೂಲಕ್ಕೆ ಬೇಕಾದುದೆಲ್ಲವನ್ನೂ ಸಜ್ಜುಗೊಳಿಸುತ್ತಾರೆ; ನಿವಾಸ, ಭೋಜನ, ಸೇವಕರು ಇತ್ಯಾದಿ ಎಲ್ಲವನ್ನೂ ಎಚ್ಚರಿಕೆಯಿಂದ ಸರಿಯಾಗಿ ಒದಗಿಸುತ್ತಾರೆ. ಅವರು ನಿಜವಾಗಿಯೂ ತುಂಬ ಮೇಲುಮಟ್ಟದ ಸಾಧಕರು. ಅವರು ಇಲ್ಲಿಗೆ ಬಂದಾಗಲೆಲ್ಲ ಗಂಗೆಯಲ್ಲಿ ಮಿಂದು, ಕೆಂಬಟ್ಟಯ ಮಡಿಯುಟ್ಟು, ದೇವಿಯ ಗುಂಡಿಗೆ ಹೋಗುತ್ತಿದ್ದರು. ನೋಡುವುದಕ್ಕೆ ಸಾಕ್ಷಾತ್ ಭೈರವನಂತೆ (ಶಿವನ ಅನುಚರ) ಕಾಣಿಸುತ್ತಿದ್ದರು. ಧೀರ್ಘದೇಹಿ, ಮಹಾಕಾಯ, ಗೌರವರ್ಣ; ಅವರ ವಕ್ಷಸ್ಥಳ ಯಾವಾಗಲೂ ಕೆಂಪೇರಿರುತ್ತಿತ್ತು. ತಾಯಿಯ ಗುಡಿಯಲ್ಲಿ ಅವರು ಬಹಳಕಾಲ ಧ್ಯಾನಮಾಡುತ್ತಿದರು. ಅವರು ತಮ್ಮ ಬಳಿ ಒಬ್ಬ ಹಾಡುಗಾರನನ್ನೂ ಇಟ್ಟು ಕೊಂಡಿರುತ್ತಿದ್ದರು; ಅವನು ಅವರ ಹಿಂದೆ ಕುಳಿತು ಮನುಷ್ಯಶರೀರ ಮತ್ತು ಯೋಗಚಕ್ರಗಳನ್ನು ಕುರಿತ ಸಂಕೇತದ ಹಾಡುಗಳನ್ನೂ ಕಾಲಿಕಾದೇವೀ ಸ್ತೋತ್ರಗಳನ್ನೂ ಹಾಡುತ್ತಿದ್ದನು. ನಿನ್ನ ತಂದೆ ಧ್ಯಾನಮಗ್ನರಾಗಿರುತ್ತಿದ್ದರು; ಅವರ ಕಣ್ಣಿಂದ ಭಕ್ತಿಯ ಬಾಷ್ಪ ಧಾರೆಧಾರೆಯಾಗಿ ಹರಿಯುತ್ತಿತ್ತು, ಧ್ಯಾನಾನಂತರ ಅವರು ಗುಡಿಯಿಂದ ಹೊರಗೆ ಹೊರಟಾಗ ಭಾವೋತ್ಕರ್ಷದಿಂದ ಅವರ ಮುಖ ಮಂಡಲ ಕೆಂಪೇರಿರುತ್ತಿತ್ತು; ಆಗ ಯಾರಿಗೂ ಅವರನ್ನು ಮಾತನಾಡಿಸುವ ಧೈರ್ಯವಾಗುತ್ತಿರಲಿಲ್ಲ. ಆ ಸಮಯದಲ್ಲಿ ಒಮ್ಮೆ ನನಗೆ ಮೈಯೆಲ್ಲ ಜ್ವಾಲಾಮಯವಾಗಿ ಉರಿ ಏಳುವಂತೆ ಆಸಹ್ಯ ವೇದನೆಯಾಗುತ್ತಿತ್ತು. ನಿನ್ನ ತಂದೆಯವರನ್ನು ಸಂಧಿಸಿದಾಗ ಕೇಳಿದ: ನೋಡಪ್ಪಾ ನೀನು ತಾಯಿಯ ಭಕ್ತ: ನಾನೂ ಅವಳ ಭಕ್ತನೆ, ನಾನು ಸ್ವಲ್ಪ ಧ್ಯಾನಮಾಡುತ್ತೇನೆ. ಆದರೆ ನನ್ನ ಮೈಯಲ್ಲಿ ಉರಿ ಏಳುತ್ತದೆಯಲ್ಲ ಏಕೆ ಹೇಳಬಲ್ಲೆಯ? ಒಂದೊಂದು ಸಾರಿ ಆ ಉರಿ ಅಸಹನೀಯವಾಗುತ್ತದೆ! ಆಗ ನನ್ನ ಇಷ್ಟದೇವತೆಯ ನಾಮಮಂತ್ರದ ಒಂದು ‘ಯಂತ್ರ ‘ವನ್ನು ಧರಿಸುವಂತೆ ಅವರು ಸಲಹೆ ಕೊಟ್ಟರು. ನೋಡು, ಹೇಳಿದರೆ ಆಶ್ಚರ್ಯದಂತೆ ಕಾಣಬಹುದು, ಅದನ್ನು ಧರಿಸಿದ ಒಡನೆಯೆ ಆ ಯಾತನೆ ಇಳಿದುಬಿಟ್ಟಿತು. ಇಲ್ಲಿಗೊಮ್ಮೆ ಬಂದು ನನ್ನನ್ನು ಕಾಣುವಂತೆ ನಿಮ್ಮ ತಂದೆಗೆ ತಿಳಿಸುತ್ತೀಯಾ?’

“ಆಗ ನಾನು ಕಲ್ಕತ್ತಾದಲ್ಲಿ ಇರುತ್ತಿದ್ದೆ: ಆಗೊಮ್ಮೆ ಈಗೊಮ್ಮೆ ಮನೆಗೆ ಹೋಗಿಬರುತ್ತಿದ್ದೆ. ನಮ್ಮ ತಂದೆಗೆ ಬಹಳ ಸಂತೋಷವಾಯ್ತು, ನಾನು ಶ್ರೀರಾಮಕೃಷ್ಣರ ವಿಚಾರ ಹೇಳಿದಾಗ. ಅವರು ಒಡನೆಯ ಗುರುಮಹಾರಾಜರನ್ನು ನೋಡಲು ದಕ್ಷಿಣೇಶ್ವರಕ್ಕೆ ಹೋದರು. ಇನ್ನೊಂದು ಸಂದರ್ಭದಲ್ಲಿ ಗುರು ಮಹಾರಾಜ್ ಹೇಳಿದರು: ನಿನ್ನ ತಂದೆಯ ಸಾಧನೆ ಸಕಾಮವಾಗಿತ್ತು. ಕೆಲವು ಲೌಕಿಕವಾದ ಪ್ರಯೋಜನಗಳಿಗಾಗಿ. ಆ ಸಾಧನೆಯ ಫಲವಾಗಿ ಅವರಿಗೆ ಯಥೇಚ್ಛವಾಗಿ ಐಶ್ವರ್ಯ ಲಭಿಸಿತು; ಅದನ್ನು ಉದಾರವಾಗಿ ಖರ್ಚೂ ಮಾಡಿದರು.”

ತಮ್ಮ ಬಾಲ್ಯವನ್ನು ಕುರಿತು ಮಹಾಪುರಷಜಿ ಹೀಗೆ ಹೇಳಿದರು: “ನನ್ನ ಬಾಲ್ಯಕಾಲದ ನೆನಪು ನನಗೆ ಅಷ್ಟೇನೂ ಹೆಚ್ಚಾಗಿ ಉಳಿದಿಲ್ಲ. ಆದರೆ ಒಂದು ವಿಚಾರ ಚೆನ್ನಾಗಿ ನೆನಪಿದೆ, ನಮ್ಮ ತಂದೆ ಬಹಳ ಜನರಿಗೆ ಊಟ ಬಟ್ಟೆ ಕೊಟ್ಟು ಹೊರೆಯುತ್ತಿದ್ದರು, ಮನೆತುಂಬ ಜನ ಇರುತ್ತಿದ್ದರು. ಅವರಿಗೆ ಊಟ ಉಪಚಾರ ಮಾಡಿಸುವುದೆಂದರೆ ಬಹಳ ಇಷ್ಟ. ಆಗ ನಮ್ಮ ತಂದೆಗೆ ಇರುತ್ತಿದ್ದ ಉತ್ಪತ್ತಿಯಲ್ಲಿ ಅಡುಗೆಯವರನ್ನು ಇಟ್ಟುಕೊಳ್ಳುವುದು ಸಾಧ್ಯವಾಗಿತ್ತು; ಆದರೆ ನಮ್ಮ ತಾಯಿ ಅದಕ್ಕೆ ಒಪ್ಪಿರಲಿಲ್ಲ. ಸ್ವಲ್ಪ ಹೆಚ್ಚು ಕಡಿಮೆ ಮನೆಗೆಲಸವನ್ನೆಲ್ಲ ಅವರೊಬ್ಬರೆ ಮಾಡಿಬಿಡುತ್ತಿದ್ದರು. ಅವರು ಹಾಗೆ ದಿನವೆಲ್ಲ ದುಡಿಯುವುದನ್ನು ಕಂಡು ನಮ್ಮ ತಂದೆಗೆ ಸಂಕಟವಾಗಿ ಏನಾದರೂ ಹೇಳಿದರೆ ಅವರು ‘ಅನ್ನಸೇವೆ ಮಾಡುವ ಅವಕಾಶ ಅದೊಂದು ಕಷ್ಟವೆ? ಆಶೀರ್ವಾದ. ಅವರೆಲ್ಲ ನನಗೆ ಮಕ್ಕಳಲ್ಲವೆ?’ ಎನ್ನುತ್ತಿದ್ದರು. ನನ್ನ ಒಂಬತ್ತನೆಯ ವರ್ಷದಲ್ಲಿ ತಾಯಿ ತೀರಿಕೊಂಡರು. ಅವರು ಯಾವಾಗಲೂ ಕೆಂಪಂಚಿನ ದಪ್ಪ ಸೀರೆಯನ್ನು ಉಟ್ಟುಕೊಳ್ಳುತ್ತಿದ್ದುದು ಅವರ ಪದ್ಧತಿ. ಇದಕ್ಕಿಂತಲೂ ಹೆಚ್ಚಾಗಿ ನನಗೇನೂ ನೆನಪಿಲ್ಲ. ನನ್ನ ಮಾತೃ ಸಹೋದರ ಹೇಳುತ್ತಿದ್ದರು, ನಮ್ಮ ತಾಯಿ ತಮಗಾಗಿ ಏನೊಂದನ್ನೂ ಕೇಳುತ್ತಿರಲಿಲ್ಲವಂತೆ, ತಾವು ಉಟ್ಟುಕೊಳ್ಳುವ ಸೀರೆ ವಿಚಾರವಾಗಿ ಕೂಡ.

ಹೀಗೆ ಸ್ವಲ್ಪಕಾಲ ಆದಮೇಲೆ, ನಾನು ದಕ್ಷಿಣೇಶ್ವರಕ್ಕೆ ಹೋಗಿಬರುತ್ತಾ ಇದ್ದುದರ ಫಲವಾಗಿ ಲೌಕಿಕ ಸಂಬಂಧಗಳನ್ನೆಲ್ಲ ತ್ಯಜಿಸಲು ಮನಸ್ಸು ಮಾಡಿ, ಬೀಳ್ಕೊಡುವ ಸಲುವಾಗಿ ತಂದೆಯ ಬಳಿಗೆ ಹೋದೆ. ಅದವ ಕಣ್ಣಿಂದ ನೀರು ಉಕ್ಕಿ ಕಪೋಲಗಳ ಮೇಲೆ ಧಾರಾಕಾರವಾಗಿ ಹರಿಯತೊಡಗಿತು. ನಮಗೊಂದು ದೇವರ ಮನೆ ಇತ್ತು. ಮನೆದೇವರಿಗೆ ಪ್ರಣಾಮ ಸಲ್ಲಿಸುವಂತೆ ಹೇಳಿ, ನನ್ನನ್ನು ಆಶೀರ್ವದಿಸಿದರು. ನನ್ನ ತಲೆಯ ಮೇಲೆ ಕೈಯಿಟ್ಟು ‘ನಿನಗೆ ಭಗವತ್ ಸಾಕ್ಷಾತ್ಕಾರವಾಗಲಿ! ನನಗೂ ಸಂಸಾರ ತ್ಯಾಗಮಾಡಿ ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳಬೇಕೆಂಬ ಆಸೆ ಬಲವಾಗಿತ್ತು. ಆದರೆ ಫಲಿಸಲಿಲ್ಲ! ಆದುದರಿಂದ ನಿನಗೆ ಆಶೀರ‍್ವಾದ ಮಾಡುತ್ತೇನೆ; ನಿನಗಾದರೂ ಅವನು ಕೃಪೆಮಾಡಲಿ!’ ಇದನ್ನೆಲ್ಲ ಶ್ರೀಗುರುವಿಗೆ ಹೇಳಿದೆ. ಕೇಳಿ ಅತ್ಯಂತ ಸಂತೋಷವಾಯಿತು ಅವರಿಗೆ. ‘ಹಾಗಾದದ್ದು ಬಹಳ ಮಂಗಳಕರ’ ಎಂದರು.

ಸಾಧು: “ಈ ಕಾಲದಲ್ಲಿ ಅಂತಹ ತಂದೆತಾಯಿಯವರು ಸಿಕ್ಕುವುದು ಕಷ್ಟ. ಇಲ್ಲವೆ ಇಲ್ಲ ಎಂದು ಹೇಳಿದರೂ ಅತಿಶಯೋಕ್ತಿಯಾಗಲಾರದು.”

ಸ್ವಾಮೀಜಿ: “ಹೌದು ನೀನು ಹೇಳುವುದು ಸುಳ್ಳಲ್ಲ. ನಮ್ಮ ತಂದೆಯ ಹಾಗೆ ವರ್ತಿಸಲು ಸಾಧ್ಯವಾದುದಕ್ಕೆ ಕಾರಣ ಅವರೇ ಸ್ವತಃ ಸಾಧಕರಾಗಿದ್ದದ್ದು. ಸತ್ಯರೂಪನಾದ ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಳ್ಳಬೇಕೆಂದು ಅವರಿಗೆ ಹೃತ್ಪೂರ್ವಕವಾದ ಅಭಿಲಾಷೆಯಿದ್ದರೂ ಅವರು ಅದರಲ್ಲಿ ಕೃತಕೃತ್ಯರಾಗಲಿಲ್ಲ. ಅಲ್ಪದೆ ಲೋಕಾನುಭವವೂ ಅವರಿಗೆ ಸಮಧಿಕಪ್ರಮಾಣದಲ್ಲಿಯೆ ದೊರೆಕೊಂಡಿತ್ತು. ಆದ್ದರಿಂದಲೆ ನನ್ನನ್ನು ಅಷ್ಟೊಂದು ಸುಲಭವಾಗಿ ಕಳುಹಿಸಿಕೊಡಲು ಅವರಿಗೆ ಸಾಧ್ಯವಾಯಿತು.”

ಸ್ವಾಮಿ ಶಿವಾನಂದರು ಸಂಜೆಯೂಟಕ್ಕೆ ಕುಳಿತಿದ್ದರು. ಶ್ರೀಗುರುಮಹಾರಾಜರು ಊಟಮಾಡುತ್ತಿದ್ದ ರೀತಿಯ ವಿಚಾರವಾಗಿ ಸಂನ್ಯಾಸಿಯೊಬ್ಬರು ಪ್ರಶ್ನೆ ಹಾಕಿದರು: “ಮಹಾರಾಜ್, ಅದು ನಿಜವೇ, ಶ್ರೀಗುರುಮಹಾರಾಜರ ಕೈ ಎಷ್ಟು ಕೋಮಲವಾಗಿತ್ತೆಂದರೆ ಒಮ್ಮೆ ಅವರು ಭೋಜನ ಸಮಯದಲ್ಲಿ ಲೂಚಿ ಮುರಿಯುವಾಗ ಗಾಯವಾಗಿ ನೆತ್ತರು ಬಂತಂತೆ?”

ಸ್ವಾಮೀಜಿ: “ಹೌದು, ಅವರ ಕೈ ಬಹಳ ಮೆದುವಾಗಿದ್ದವು. ಆದರೆ ಕೈಯೇ ಏಕೆ! ಅವರ ಶರೀರ ಸಮಸ್ತವೂ ಹಾಗೆಯೇ ಇತ್ತು. ಸ್ವಲ್ಪ ಗಟ್ಟಿಯಾಗಿರುವ ಒಂದು ಜಾತಿ ಲೂಚಿಯಿದೆ ನಿನಗೆ ಗೊತ್ತಿಲ್ಲವೆ? ಅವರ ಕೈ ಗಾಯವಾದುದು ಅಂತಹ ಲೂಚಿಯನ್ನು ಮುರಿಯುತ್ತಿದ್ದಾಗ.”

ಅಲ್ಲಿದ್ದವರಲ್ಲಿ ಒಬ್ಬರು ಗುರುಮಹಾರಾಜರ ಸಾಯಂಭೋಜನದ ಪರಿಮಾಣದ ವಿಚಾರವಾಗಿ ಕೇಳಿದರು. ಅದಕ್ಕೆ ಸ್ವಾಮಿ ಶಿವಾನಂದರು ತಮ್ಮ ಎಲೆಯ ಮೇಲಿದ್ದ ಸಣ್ಣದೊಂದು ಲೂಚಿಯನ್ನು ತೋರಿಸುತ್ತಾ ಹೇಳಿದರು: “ರಾತ್ರಿ ಊಟದಲ್ಲಿ ಇಂತಹ ಒಂದೊ, ಹೆಚ್ಚು ಎಂದರೆ ಎರಡೋ, ಲೂಚಿ ತಿನ್ನುತ್ತಿದ್ದರು. ಜೊತೆಗೆ ಸ್ವಲಪ್ ‘ಸಿಹಿತೊವ್ವೆ’ ತೆಗೆದುಕೊಳ್ಳುತ್ತಿದ್ದರು. ಅವರಿಗೆ ಹಾಲನ್ನು ಜೀರ್ಣಿಸಿಕೊಳ್ಳಲು ಆಗುತ್ತಿರಲಿಲ್ಲವಾದ್ದರಿಂದ ಅದಕ್ಕೆ ನೀರು ಬೆರಸಿ, ಅದಕ್ಕೆ ಸ್ವಲ್ಪ ಗೋಧಿಯ ನುಣ್ಣನ್ನು ಸೇರಿಸಿ, ಆವಿಯಲ್ಲಿ ಬೇಯಿಸಿದ ಒಂದು ತರಹ ಗಿಣ್ಣು ಮಾಡಿಕೊಡುತ್ತಿದ್ದರು. ಅದನ್ನೂ ಒಂದು ಚೂರು ತೆಗೆದುಕೊಳ್ಳುತ್ತಿದ್ದರು. ಗೋಡೆಯ ಗೂಡಿನಲ್ಲಿ ‘ಜಾಣ ‘ದಿಂದ ಮಾಡಿದ ಸಿಹಿತಿಂಡಿ ಇರುತ್ತಿತ್ತು. ಹಸಿವು ಆದಾಗ ಒಂದನ್ನೊ ಎರಡನ್ನೊ ಅಥವಾ ಅರ್ಧವನ್ನೊ ಬಾಯಿಗೆ ಹಾಕಿಕೊಳ್ಳುತ್ತಿದ್ದರು. ಉಳಿದುದನ್ನು ಅಲ್ಲಿದ್ದವರಿಗೆ ಹಂಚಿಬಿಡುತ್ತದ್ದರು. ಅವರ ರೀತಿ ಎಳೆಮಕ್ಕಳಂತಿತು. ಅವರೇ ಒಂದು ಹಸುಗೂಸೆ ಎಂಬಂತೆ ವರ್ತಿಸುತ್ತಿದ್ದರು. ಭೋಜನಾಂತರ ಸ್ವಾಮಿ ಶಿವಾನಂದರು ತಮ್ಮ ಕೊಠಡಿಯಲ್ಲಿ ಬತ್ತಿ ಸೇದುತ್ತಾ ಕುಳಿತಿದ್ದರು. ಸಾಧುವೊಬ್ಬರು ಮಹಾರಾಜ್, ಗುರುಮಹಾರಾಜರ ಕೊನೆಗಾಲದ ಕಾಯಿಲೆಯ ಸಮಯದಲ್ಲಿ ನೀವು, ಸ್ವಾಮೀಜಿ ಮತ್ತು ಸ್ವಾಮಿ ಅಭೇದಾನಂದರು ಮೂವರು ಗುರುದೇವರಿಗೆ ಗೊತ್ತಾಗದಂತೆ ಬುದ್ಧಗಯೆಗೆ ಹೋಗಿದ್ದಿರಷ್ಟೆ. ಆ ಯಾತ್ರೆಯಿಂದ ಹಿಂತಿರುಗಿ ಬಂದಮೇಲೆ ನಿಮಗೇನಾದರೂ ಹೇಳಿದರೇ ಅವರು?”

ಸ್ವಾಮೀಜಿ: “ಹೌದು ಬಿಡುತ್ತಾರೆಯೇ? ಹೇಳಿಯೆ ಹೇಳಿದರು! ತಮ್ಮ ಬೆರಳಿನಿಂದ ಚಕ್ರಾಕಾರವಾಗಿ ಗಾಳಿಯಲ್ಲಿ ಸೊನ್ನೆ ಸುತ್ತುತ್ತ ಹೆಬ್ಬೆರಳನ್ನೆತ್ತಿ ಅತ್ತಿತ್ತ ಅಲ್ಲಾಡಿಸಿ, ಹೇಳಿದರು: ‘ಎಲ್ಲೆಲ್ಲಿ ಅರಸಿದರೂ ಏನೂ “ಭಗವತ್ತು” (ದೈವಿಕತೆ) ಸಿಕ್ಕುವುದಿಲ್ಲ!’ ಆಮೇಲೆ ತಮ್ಮನ್ನು ತಾವೇ ತೋರಿಸಿಕೊಂಡು ಹೇಳಿದರು: ಈ ಸಾರಿ ಎಲ್ಲಾ ಇಲ್ಲಿಯೆ. ಮನಸ್ಸು ಬಂದಕಡೆ ಎಷ್ಟು ಬೇಕಾದರೂ ಸುತ್ತಬಹುದು ನೀವು. ಆದರ ಎಲ್ಲಿಯೂ ಏನೂ (ಆಧ್ಯಾತ್ಮಿಕ ಶಕ್ತಿ) ದೊರೆಯುವುದಿಲ್ಲ. ಇಲ್ಲಿ ಎಲ್ಲಾ ಬಾಗಿಲುಗಳೂ ತೆರೆದಿವೆ.”

* * *