ಮುಂಬಯಿಯ ಶ್ರೀರಾಮಕೃಷ್ಣಾಶ್ರಮದಲ್ಲಿ ತಮ್ಮ ಕೊಠಡಿಯಲ್ಲಿ ಸ್ವಾಮಿ ಶಿವಾನಂದರು ಕುಳಿತಿದ್ದಾರೆ. ಸಾಯಂಕಾಲ ಭೋಜನ ಪೂರೈಸಿದ ಅನಂತರ ಆಶ್ರಮದ ಅನೇಕ ಸಾಧುಗಳೂ ಬ್ರಹ್ಮಚಾರಿಗಳೂ ಅಲ್ಲಿ ನೆರೆದಿದ್ದಾರೆ. ಸಂನ್ಯಾಸಿ ಒಬ್ಬರು ಕೇಳಿದರು: “ಮಹಾರಾಜ್, ಗುರುಮಹಾರಾಜರು ‘ಯಾರು ಈ ಎಡೆಗೆ ಬರುತ್ತಾರೊ ಅವರಿಗೆ ಇದೇ ಕೊನೆಯ ಜನ್ಮ’ ಎಂದು ಹೇಳುತ್ತಿದ್ದರಂಬುದನ್ನು ಕೇಳಿದ್ದೇವೆ. ಅವರು ಹಾಗೆ ಕೇಳಿದ್ದನ್ನು ನೀವು ಎಂದಾದರೂ ಕೇಳಿದ್ದೀರಾ?” ಮಹಾಪುರುಷಜಿ ಸ್ವಲ್ಪ ಕಾಲ ಮೌನವಾಗಿದ್ದು ಅನಂತರ ಹೇಳಿದರು: “ಅವರನ್ನು ಕುರಿತು ಬರೆದ ಪುಸ್ತಕಗಳಲ್ಲಿ ಅದು ಉಕ್ತವಾಗಿದೆಯಲ್ಲಾ.”

ಸಂನ್ಯಾಸಿ: “ಗುರುಮಹಾರಾಜರ ಆ ಮಾತಿನ ಅರ್ಥವೇನು? ಆ ಮಾತು ಗುರುಮಹಾರಾಜರನ್ನು ಪ್ರತ್ಯಕ್ಷ ನೋಡಿ, ಅವರ ಕೃಪೆಯಿಂದ ಭಕ್ತರಾಗಿದ್ದವರಿಗೆ ಮಾತ್ರ ಅನ್ವಯಿಸುತ್ತದೆಯೆ? ಅಥವಾ ಅವರ ವಿಚಾರ ತಿಳಿದು, ಅವರಿಗೆ ಭಕ್ತರಾಗಿ, ಆರಾಧಿಸುವವರೆಲ್ಲರಿಗೂ ಅನ್ವಯಿಸುತ್ತದೆಯೆ?”

ಸ್ವಾಮೀಜಿ: “ಅವರ ಮಾತಿಗೆ ಆ ಎರಡೂ ಅರ್ಥವಿದೆ. ಯಾರಿಗೆ ಅವರಲ್ಲಿ ಸಮಧಿಕ ಪೂಜ್ಯಭಾವನೆ ಇರುತ್ತದೆಯೊ, ಯಾರು ಸಂಪೂರ್ಣ ಅವರಿಗೆ ಶರಣು ಹೋಗುತ್ತಾರೆಯೊ, ಅಂಥವರು ಅವರನ್ನು ಶರೀರದಲ್ಲಿ ನೋಡಿರಲಿ ನೋಡದಿರಲಿ, ಅವರು ಮುಕ್ತರಾಗುತ್ತಾರೆ; ಅವರಿಗೆ ಪುನರ್ಜನ್ಮವಿರುವುದಿಲ್ಲ. ಆದರ ಆ ಪ್ರಪತ್ತಿ ಸಮರ್ಪಣ, ಆ ಶರಣು ಪೂರ್ಣವಾಗಿರಬೇಕು.”

ಸಂನ್ಯಾಸಿ: “ಮಹಾರಾಜ್, ಅವರಲ್ಲಿ ಆಶ್ರಯ ಬೇಡಿ, ಈ ಶ್ರೀರಾಮಕೃಷ್ಣ ಸಂಸ್ಥೆಗೆ ಸೇರಿರುವವರಿಗೂ ಮುಕ್ತಿಲಾಭವಿದೆಯೆ?”

ಸ್ವಾಮೀಜಿ: “ಸಂದೇಹವೇಕೆ? ಇದ್ದೇ ಇದೆ. ಆದರೆ ನೈಜಮುಕ್ತಿ ದೊರೆಯಬೇಕಾದರೆ ಸಂಪೂರ್ಣ ಸಮರ್ಪಣೆ ಅತ್ಯಗತ್ಯ.”

ಸಂನ್ಯಾಸಿ: “ಎಲ್ಲಿ? ನಾವು ಏನೂ ಮುಂದೆ ಸಾಗುತ್ತಿರುವಂತೆ ತೋರುವುದಿಲ್ಲವಲ್ಲ!”

ಸ್ವಾಮೀಜಿ: “ವತ್ಸ, ನೀನು ಇದುವರೆಗೆ ಮಾಡಿರುವುದಾಗಲಿ, ಈಗ ಮಾಡುತ್ತಿರುವುದಾಗಲಿ ಅಲ್ಪ ಎಂದು ಎಣಿಸಬೇಡ. ಆತನ ಕೃಪೆಯಿಲ್ಲದಿದ್ದರೆ ಅಷ್ಟೊ ಸಾಧ್ಯವಾಗುತ್ತಿರಲಿಲ್ಲ. ಶ್ರೀಗುರು ನಿಮ್ಮ ಮೇಲೆ ಎಂತಹ ಕೃಪೆತೋರಿದ್ದಾನೆ! ನಿಮ್ಮ ಮನೆಮಾರುಗಳನ್ನು ಬಿಡಿಸಿ, ತಂದೆ ತಾಯಿಗಳಿಂದ ನಿಮ್ಮನ್ನು ಆತನು ಸೆಳೆದುಕೊಂಡಿರುವುದು ಸಾಮಾನ್ಯವೇನೂ ಅಲ್ಲ. ನಿನ್ನ ಮೇಲೆ ಆತನ ಕೃಪೆ ವಿಶೇಷವಾಗಿರುವುದರಿಂದಲೇ ನಿನ್ನನ್ನಿಲ್ಲಿಗೆ ತಂದಿದ್ದಾನೆ. ಜೀವನದ ಪರಮ ಪುರುಷಾರ್ಥ ಸಾಧನೆಗಾಗಿ ನಿನಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾನೆ.”

ಸಂನ್ಯಾಸಿ: “ಆದರೆ ಮಹಾರಾಜ್, ಒಂದೊಂದು ವೇಳೆ ಹೀಗೆನ್ನಿಸುತ್ತದೆ: ನಾವು ಇಲ್ಲಿ ದಿನವೂ ಕೈಗೊಳ್ಳೂತ್ತಿರುವ ಕಾರ‍್ಯಾನೇಕಗಳ ದೆಸೆಯಿಂದ ನಮ್ಮ ಸಂನ್ಯಾಸಧರ್ಮಕ್ಕಾಗಲಿ ವೈರಾಗ್ಯಸಾಧನೆಗಾಗಲಿ ನೆರವಾಗಲಿ ಪುಷ್ಟಿಯಾಗಲಿ ದೊರೆಯುತ್ತಿಲ್ಲ ಎಂದು.”

ಸ್ವಾಮೀಜಿ: “ನೀವು ಇಲ್ಲಿ ಏನೆ ಮಾಡುತ್ತಿರಲಿ ಅದು ಆತನ ಸಂತೋಷಕ್ಕಾಗಿ ಮಾಡುತ್ತಿರುವುದು. ನೀವು ಯಾವ ವಿಧವಾದ ಸ್ವಾರ್ಥದ ಅಥವಾ ಲೌಕಿಕದ ಪ್ರಯೋಜನಾಭಿಲಾಷೆಯಿಂದ ಪ್ರೇರಿತರಾಗಿಲ್ಲ. ನೀವು ಇಲ್ಲಿ ಕೈಕೊಳ್ಳುವ ಕಾರ್ಯಗಳಿಂದ ನಿಮ್ಮ ಸಂನ್ಯಾಸಕ್ಕೂ ವೈರಾಗ್ಯಕ್ಕೂ ನೆರವೂ ಪುಷ್ಟಿಯೂ ಒದಗುವುದರಲ್ಲಿ ಸಂದೇಹವೇ ಇಲ್ಲ. ಹೃಷೀಕೇಶದಲ್ಲಿದ್ದುಕೊಂಡು ಭಿಕ್ಷಾಟನೆ ಮಾಡುವುದರಿಂದ ಮಾತ್ರವೆ ವೈರಾಗ್ಯ ಸಾಧನೆಯಾಗುವುದೆಂದು ಭಾವಿಸಬಾರದು. ಚಿಃ!-ನೀನು ಸರಿಯಾದ ದಾರಿಯನ್ನೆ ಹಿಡಿದಿದ್ದೀಯೆ. ಸದ್ಯಕ್ಕೆ ನಿನ್ನ ಪ್ರಜ್ಞೆಗೆ ಆ ಸತ್ಯ ಗೋಚರವಾಗದಿರಬಹುದು; ಕ್ರಮೇಣ ಗೊತ್ತಾಗಿಯೆ ಆಗುತ್ತದೆ; ಕೊನೆಗೆ ಸಂಪೂರ್ಣವಾಗಿ ಪ್ರಜ್ಞಾಸ್ಥಿತವಾಗಿಯೂ ಆಗುತ್ತದೆ. ಎಲ್ಲವೂ ಅವನದೇ ಎಂಬುದನ್ನೂ, ನನ್ನದೆಂದು ಭಾವಿಸಬೇಕಾದುದು ಏನೂ ಇಲ್ಲ ಎಂಬುದನ್ನೂ, ನೀನು ಅನುಭವದಿಂದ ಅರಿಯುತ್ತೀಯೆ.”

ಸಂನ್ಯಾಸಿ: “ಮಹಾರಾಜ್, ನಮಗೆ ಆ ಅನುಭವ ಆಗಿರುವಂತೆ ತೋರುವುದಿಲ್ಲ. ಧ್ಯಾನದಲ್ಲಿ ಅಹಂಕಾರದ ಸಂಪೂರ್ಣ ಲಯವಾಗಿದ್ದರೆ ಶಾಂತಿಯ ಅನುಭವವಾಗಲಾರದು. ಅಂತಹ ಧ್ಯಾನವೋ ನಮ್ಮ ಭಾಗಕ್ಕೆ ಅತ್ಯಪೂರ್ವ! ಇಲ್ಲವೆಂದೇ ಹೇಳಬಹುದು!”

ಸ್ವಾಮೀಜಿ: “ಎಲ್ಲವೂ ಕಾಲ ಬಂದಾಗ ಬಂದೇ ಬರುತ್ತದೆ. ವತ್ಸ, ನನ್ನ ಮಾತಿನಲ್ಲಿ ನಂಬುಗೆ ಇಡು.”

* * *