ಸಾಯಂಕಾಲ, ಆಶ್ರಮದ ಸಾಧುಗಳೂ ಬ್ರಹ್ಮಚಾರಿಗಳೂ ಸ್ವಾಮಿ ಶಿವಾನಂದರ ಕೊಠಡಿಯಲ್ಲಿ ಅವರ ಪವಿತ್ರ ಸಾನ್ನಿಧ್ಯಲಾಭದ ಆಕರ್ಷಣೆಯಿಂದ ನೆರೆದಿದ್ದರು. ಕೊಠಡಿ ನಿಶ್ಯಬ್ಧವಾಗಿತ್ತು. ಸಂವಾದ ಅತ್ತಿತ್ತ ಅಲೆದು ಸ್ವಾಮಿ ವಿವೇಕಾನಂದರ ಕಡೆಗೆ ತಿರುಗಿತು.

ಸ್ವಾಮೀಜಿ ಹೇಳಿದರು: “ಈ ಮುಂಬಯಿ ನಗರದಲ್ಲಿ ಸ್ವಾಮೀಜಿ ಛಾವಿಲ್‌ದಾಸ್ ಅವರ ಮನೆಯಲ್ಲಿ ಬಹಳ ಕಾಲ ತಂಗಿದ್ದರು. ಆಗಲೇ ಅವರು ದೇಶದ ಈ ಭಾಗದಲ್ಲಿ ಅನೇಕ ಸ್ಥಳಗಳನ್ನು ನೋಡಿಕೊಂಡು ಬಂದ್ದದ್ದು. ಆರ್ಯ ಸಮಾಜಕ್ಕೆ ಸೇರಿದ್ದ ಛಾವಿಲ್ ದಾಸರಿಗೆ ದೇವತೆಗಳಾಗಲಿ ಸಾಕಾರ ಪೂಜೆಯಾಗಲಿ ಹಿಡಿಸುತ್ತಿರಲಿಲ್ಲ. ಆ ವಿಚಾರವಾಗಿ ಸ್ವಾಮೀಜಿಯೊಡನೆ ಬಹಳ ಚರ್ಚೆ ನಡೆಸಿದ್ದರು. ಒಮ್ಮೆ ಅವರು ಸ್ವಾಮೀಜಿಗೆ ಹೇಳಿದರು: ಸ್ವಾಮೀಜಿ, ನೀವು ಹೇಳುತ್ತೀರಿ-ದೇವ ದೇವತೆಗಳ ಪೂಜೆ, ವಿಗ್ರಹಾರಾಧನೆ ಎಲ್ಲ ಸತ್ಯ ಎಂದು. ನಿಮ್ಮ ವಾದವನ್ನು ವೇದಗಳ ಆಧಾರದ ಮೇಲೆ ನೀವು ಸಿದ್ಧಾಂತಪಡಿಸುವಿರಾದರೆ ನಾನು ಆರ್ಯಸಮಾಜವನ್ನು ಬಿಟ್ಟು ಬಿಡುತ್ತೇನೆ.”

ಸ್ವಾಮೀಜಿ: ‘ಅದೇನು ಕಷ್ಟದ ಕೆಲಸ? ವೇದಗಳ ಆಧಾರದಿಂದಲೇ ನಾನು ಸಮರ್ಥಿಸುತ್ತೇನೆ’ ಎಂದು ಹೇಳಿ, ವಿಗ್ರಹಾರಾಧನೆಯ ವಿಚಾರವಾದ ಹಿಂದೂ ದೃಷ್ಟಿಯನ್ನು ವೇದಗಳ ಆಧಾರದಿಂದಲೆ ವಿವರಿಸಿ ಸಮರ್ಥಿಸಿದರು. ಛಾವಿಲ್‌ದಾಸರಿಗೆ ಸಂಪೂರ್ಣ ಸಮಾಧಾನವಾಯಿತು. ಅವರು ತಮ್ಮ ಮಾತಿನಂತೆ ಆರ್ಯಸಮಾಜವನ್ನು ತ್ಯಜಿಸಿದರು. ಸ್ವಾಮೀಜಿ ಅಂತಹ ಪ್ರತಿಭಾಶಾಲಿ; ಅವರಿಂದ ಏನೂ ಸಾಧ್ಯವಾಗುತ್ತಿತ್ತು.

“ಆ ಕಾಲದಲ್ಲಿಯೆ ಸ್ವಾಮೀಜಿ ಪೂನಾ ಮಲಬಾರ್ ಮುಂತಾದ ಸ್ಥಳಗಳಿಗೆ ಹೋಗಿಬಂದದ್ದು. ಸಾಧಾರಣವಾಗಿ ಅವರು ರೈಲಿನಲ್ಲಿ ಪ್ರಯಾಣಮಾಡುತ್ತಿರಲಿಲ್ಲ. ರೈಲಿನಲ್ಲಿ ಪ್ರಯಾಣ ಮಾಡುವುದಾದರೆ ಮೊದಲ ತರಗತಿಯಲ್ಲಿಯೆ ಹೋಗುತ್ತಿದ್ದರು. ಒಂದು ವೇಳೆ ಯಾರಾದರೂ ಬಲವಂತ ಮಾಡಿದರೆ ನಿನಗೆ ಅಷ್ಟೊಂದು ಇಷ್ಟವಿದ್ದರೆ ಒಂದು ಫಸ್ಟ್ ಕ್ಲಾಸ್ ಟಿಕೆಟ್ ತೆಗೆದುಕೊಂಡು” ಎನ್ನುತ್ತಿದ್ದರು. ಆಗ ಅವರಿಗೆ ಹೊಟ್ಟೆಯ ತೊಂದರೆ ಇದ್ದುದರಿಂದ ಆ ಅನುಕೂಲಕ್ಕಾಗಿ ಮೊದಲ ತರಗತಿಯಲ್ಲಿಯೆ ಪ್ರಯಾಣ ಮಾಡುವುದು ವಾಡಿಕೆಯಾಗಿತ್ತು.

“ಒಮ್ಮೆ ಅವರು ಥಾಕೂರ್ ಸಾಹೇಬರ ಆಹ್ವಾನವನ್ನು ಸ್ವೀಕರಿಸಿ ಲಿಮ್ಡಿಗೆ ಹೋಗುತ್ತಿದ್ದರು. ಮೊದಲನೆಯ ತರಗತಿಯ ಒಂದು ಸೀಟಿನ ಮೇಲೆ ಬಹಳ ಸಾಮಾನ್ಯವಾದ ಉಡುಪು ತೊಟ್ಟು ಕುಳಿತಿದ್ದರು. ಕೆಲವು ದೊಡ್ಡ ಮನುಷ್ಯರೂ ಅದೇ ಗಾಡಿಗೆ ಬೇರೆಯ ಪಕ್ಕದ ಬಾಗಿಲಿಂದ ಹತ್ತಿದರು. ಸಂನ್ಯಾಸಿಯೊಬ್ಬನು ಇಡೀ ಬೆಂಚನ್ನೆಲ್ಲ ಆಕ್ರಮಿಸಿಕೊಂಡು ಕುಳಿತಿದ್ದುದನ್ನು ಕಂಡು ತಮ್ಮ ಅಸಮಾಧಾನವನ್ನು ಇಂಗ್ಲೀಷಿನಲ್ಲಿ ತಮ್ಮ ತಮ್ಮೊಳಗೆ ವ್ಯಕ್ತಪಡಿಸಿಕೊಂಡರು. ‘ಈ ಸಂನ್ಯಾಸಿಗಳ ದೆಸೆಯಿಂದಲೇ ಭಾರತಭೂಮಿ ಈ ದುಃಸ್ಥಿತಿಗೆ ಇಳಿದದ್ದು’ ಎಂದರು. ಸ್ವಾಮೀಜಿ ಸೀಟಿನ ಮೇಲೆ ಕಾಲುಚಾಚಿ ಮಲಗಿಕೊಂಡೇ ಅವರ ಟೀಕೆಗಳನ್ನೆಲ್ಲ ಉದಾಸೀನರಾಗಿ ಕೇಳುತ್ತಿದ್ದರು. ಆದರೆ ತುಸು ಹೊತ್ತಾದ ಮೇಲೆ ಟೀಕೆ ಅತಿಯಾಗಿ ಮೇರೆ ಮೀರಿದಾಗ ಅವರಿಗೆ ತಾಳ್ಮೆ ತಪ್ಪಿತು. ತಟಕ್ಕನೆ ಎದ್ದು ಕುಳಿತು ವಾದದ ಗದೆಯಿಂದ ಎದುರಾಳಿಗಳನ್ನು ಅಪ್ಪಳಿಸಿದರು. ಏನು ನೀವು ಹೇಳುತ್ತಿರುವುದು! ಸಂನ್ಯಾಸಿಗಳಲ್ಲ ಭರತಖಂಡವನ್ನು ಹಾಳುಮಾಡಿದವರು. ಏನಾದರೂ ಜೀವ ಉಳಿದಿದ್ದರೆ ಅದು ಸಂನ್ಯಾಸಿಗಳಿಂದಲೇ ರಕ್ಷಿತವಾದದ್ದು. ಬುದ್ಧಗುರು, ಶಂಕರಾಚಾರ್ಯ, ಚೈತನ್ಯದೇವ ಇಂಥವರನ್ನು ನೆನೆಯಿರಿ. ಭರತಖಂಡಕ್ಕೆ ಅವರಿಂದಾಗಿರುವ ಉಪಕಾರವನ್ನು ಸ್ವಲ್ಪ ಆಲೋಚಿಸಿ!”

“ಹೀಗೆ ಸ್ವಾಮೀಜಿ ಇತಿಹಾಸದ ಆಧಾರದಿಂದಲೆ ಭರತಖಂಡವನ್ನು ಜೀವಂತವಾಗಿಟ್ಟಿರುವವರು ಸಂನ್ಯಾಸಿಗಳೆಂದೇ ಸಿದ್ಧಾಂತಪಡಿಸಿದರು. ಅಂತಹ ಜನಗಳ ವಾದಕ್ಕೆ ಎಷ್ಟು ಸೊಗಸಾಗಿ ಪ್ರತಿವಾದ ಒಡ್ಡುತ್ತಿದ್ದರೆಂದರೆ ಆಲಿಸಿದವರು ವಿಸ್ಮಿತರಾಗಿ ಹೋಗುತ್ತಿದ್ದರು. ಆ ವಾದಿಗಳಲ್ಲಿ ಅತ್ಯಂತ ಮುಂದಾಳಾಗಿದ್ದಾತನು ಸ್ವಾಮೀಜಿ ಇಂಗ್ಲಿಷಿಗೂ ಅವರ ವಿದ್ವತ್‌ಪೂರ್ಣವಾದ ವಾದಸರಣಿಗೂ ಮರುಳಾಗಿ ಅವರನ್ನು ತನ್ನ ಮನೆಗೆ ಆಹ್ವಾನಿಸಿದನು. ಆದರೆ ಸ್ವಾಮೀಜಿ ಆಹ್ವಾನವನ್ನು ಸ್ವೀಕರಿಸಲಾಗಲಿಲ್ಲ. ಏಕೆಂದರೆ ತಮ್ಮಲ್ಲಿ ಬಹಳ ಪೂಜ್ಯಭಾವವಿಟ್ಟಿದ್ದ ಲಿಮ್ಡಿಯ ಥಾಕೂರ್ ಸಾಹೇಬರ ಆಹ್ವಾನವನ್ನು ಮನ್ನಿಸಿ ಅಲ್ಲಿಗೆ ಹೊರಟಿದ್ದರು. ಒಮ್ಮೆ ಸ್ವಾಮೀಜಿ ಪೂನಾದಲ್ಲಿಯೂ ತಂಗಿದ್ದರು.”

ಸ್ವಲ್ಪ ಹೊತ್ತಾದ ಮೇಲೆ ಸಂನ್ಯಾಸಿಯೊಬ್ಬರು “ಮಹಾರಾಜ್, ತಮಗೆ ‘ಮಹಾಪುರಷ’ ಎಂಬ ಹೆಸರು ಕೊಟ್ಟವರಾರು?” ಎಂದು ಕೇಳಿದರು.

ಸ್ವಾಮೀಜಿ: “ಸ್ವಾಮೀಜಿಯೆ ನನ್ನನ್ನು ಮಹಾಪುರುಷ ಎಂದು ಕರೆಯಲು ಮೊದಲು ಮಾಡಿದ್ದು.”

ಸಂನ್ಯಾಸಿ: “ಏಕೆ? ಹಾಗೆ ಕರೆಯಲು ವಿಶೇಷ ಕಾರಣವೇನಾದರೂ ಇತ್ತೇನು?”

ಸ್ವಾಮೀಜಿ: “ಹೌದು, ಇತ್ತು. ಆಗ ನಾವು ಗುರುಮಹಾರಾಜರಲ್ಲಿಗೆ ಹೋಗಿಬರುತ್ತಿದ್ದಾಗ ನಾನು ಪದೇ ಪದೇ ನಮ್ಮ ಮನೆಗೆ ಹೋಗಬೇಕಾಗುತ್ತಿತ್ತು. ಏಕೆಂದರೆ ನನಗೆ ಮದುವೆಯಾಗಿತ್ತು. ನನಗೆ ಹಾಗೆ ಹೋಗಲು ಇಷ್ಟವಿರುತ್ತಿರಲಿಲ್ಲ. ಹಾಗೂ ಹೀಗೂ ದೇವರನಾಮ ಜಪ ಮಾಡುತ್ತಾ ರಾತ್ರಿಯನ್ನು ಮನೆಯಲ್ಲಿ ಕಳೆಯುತ್ತಿದ್ದೆ. ನನ್ನ ಹೆಂಡತಿಗೆ ತುಂಬ ದುಃಖವಾಗಿ ಅಳುತ್ತಿದ್ದಳು. ಅದನ್ನೆಲ್ಲಾ ಗುರುಮಹಾರಾಜರೊಡನೆ ಹೇಳಿ, ನನ್ನ ಲೌಕಿಕ ಬಂಧನ ಹರಿಯುವಂತೆ ಕೃಪೆ ಮಾಡಬೇಕೆಂದು ಪ್ರಾರ್ಥಿಸಿದೆ. ನನ್ನ ಕಥೆಯನ್ನೆಲ್ಲ ಕೇಳಿ ಶ್ರೀಗುರು ಒಂದು ವ್ರತಾಚರಣೆ ಮಾಡಲು ಉಪದೇಶಮಾಡಿ, ಧೈರ್ಯ ಹೇಳಿದರು: ನೀನೇನೂ ಹೆದರಬೇಡ, ನಿನ್ನನ್ನು ರಕ್ಷಿಸಲು ನಾನಿದ್ದೇನೆ. ನನ್ನನ್ನು ಧ್ಯಾನಿಸುತ್ತಾ ವ್ರತವನ್ನು ಆಚರಿಸು. ನಿನಗೆ ಯಾವ ಅಪಾಯವೂ ಆಗುವುದಿಲ್ಲ. ಒಂದೇ ಕೋಣೆಯಲ್ಲಿ ನಿನ್ನ ಹೆಂಡತಿಯೊಡನೆ ನೀನು ಮಲಗಿದರೂ ನಿನಗೆ ಯಾವ ಅಪಾಯವೂ ತಟ್ಟುವುದಿಲ್ಲವೆಂದು ಭರವಸೆ ಕೊಡುತ್ತೇನೆ. ಅಷ್ಟೇ ಅಲ್ಲ. ಅದಕ್ಕೆ ಬದಲಾಗಿ ನಿನ್ನ ವೈರಾಗ್ಯ ಬುದ್ಧಿ ಇನ್ನೂ ಪ್ರೋಜ್ವಲವಾಗುವುದನ್ನೂ ನೀನು ನೋಡಬಹುದು.”

“ಸ್ವಾಮಿ ಬ್ರಹ್ಮಾನಂದರಿಗೂ ಗುರುಮಹಾರಾಜರು ಅದೇ ವ್ರತವನ್ನು ಉಪದೇಶಿಸಿದ್ದರು. ಅವರ ಉಪದೇಶದಂತೆಯೆ ಆ ವ್ರತವನ್ನು ಆಚರಿಸಿದೆ; ಯಾವ ತೊಂದರೆಯೂ ಆಗಲಿಲ್ಲ. ಯಾವಾಗಲೋ ಮಾತನಾಡುತ್ತಿದ್ದಾಗ ಸ್ವಾಮೀಜಿಗೆ ಈ ವಿಚಾರ ತಿಳಿಸಿದೆ. ಅವರು ಅತ್ಯಂತ ವಿಸ್ಮಿತರಾಗಿ ‘ಅದೇನು ಅಲ್ಪ ವಿಷಯವೆ? ಅದು ಮಹಾಪುರುಷನ ಲಕ್ಷಣ. ನೀವು ನಿಜವಾಗಿಯೂ ಮಹಾಪುರುಷ ಎಂದು ಸಂಬೋಧಿಸುತ್ತಿದ್ದುದನ್ನು ಕೇಳಿ ಸ್ವಾಮಿ ಪ್ರೇಮಾನಂದರ ತಾಯಿ ‘ಅದೇನು ಹೇಳಿದೆ? ಮಹಾಪುರುಷ ಎಂದರೆ ಮರದ ಮೇಲೆ ವಾಸಿಸುವುದಲ್ಲವೆ? (ಮಂಗ ಎಂಬುದು ಇಂಗಿತಾರ್ಥ.) ಇದು ಯಾವ ಜಾತಿಯ ಮಹಾಪುರುಷ?’ ಎಂದು ಕೇಳಿದರು. ನಾನು ನಿಜವಾಗಿಯೂ ಮಹಾಪುರುಷ ಎಂಬುದನ್ನು ಸ್ವಾಮೀಜಿ ಅವರಿಗೆ ವಿವರಿಸಿ ಹೇಳಿದರು. ಅದನ್ನು ಕೇಳಿ ಆ ತಾಯಿ ಬಹಳ ಸಂತೋಷಪಟ್ಟರು.

* * *