ಇಳಿ ಹಗಲು. ಬೇಲೂರು ಮಠದ ಮಹಡಿಯ ಕೆಳಗಡೆ ಪೂರ್ವ ದಿಕ್ಕಿನ ವರಾಂಡದಲ್ಲಿ ಸ್ವಾಮಿ ಶಿವಾನಂದರು ನಿಂತುಕೊಂಡಿದ್ದರು. ಅವರ ಎದುರುಗಡೆ ಇದ್ದ ಹಸಿರು ಮೈದಾನದಲ್ಲಿ ಕಲ್ಕತ್ತೆಯಿಂದ ಬಂದಿದ್ದ ತರುಣರು ಕೆಲವರು ಗರಡಿಸಾಧನೆ ಮೊದಲಾದ ಕಸರತ್ತುಗಳನ್ನು ಪ್ರದರ್ಶಿಸುತ್ತಿದ್ದರು. ಮಠದ ಸಾಧುಗಳೂ ಆಶ್ರಮದ ಭಕ್ತವೃಂದವೂ ಆ ಕ್ರೀಡಾಲೋಕನದಲ್ಲಿ ಆಸಕ್ತರಾಗಿ ಇದ್ದಂತೆಯೆ ಸ್ವಾಮಿಗಳೂ ತುಂಬಾ ಕುತೂಹಲದಿಂದಲೂ ಉತ್ಸಾಹದಿಂದಲೂ ಅದನ್ನು ವೀಕ್ಷಿಸುತ್ತಿದ್ದರು. ಸ್ವಾಮಿಗಳು ಅಲ್ಲಿದ್ದ ಸಾಧುವೊಬ್ಬರಿಗೆ ಮಠದ ಉಗ್ರಾಣದಿಂದ ಮಿಠಾಯಿ ತಂದು ತರುಣರಿಗೆ ಹಂಚುವಂತೆ ಹೇಳಿದರು.

ಮಾಂಸಖಂಡಗಳನ್ನು ಹೇಗೆ ಬೇಕೆಂದರೆ ಹಾಗೆ ಹತೋಟಿಯಲ್ಲಿಟ್ಟುಕೊಳ್ಳುವ ಸ್ನಾಯುಸಿದ್ಧಿಯನ್ನು ಪ್ರದರ್ಶಿಸಿದ ಬಾಲಕನೊಬ್ಬನನ್ನು ತುಂಬ ಮೆಚ್ಚಿಕೊಂಡು ಸ್ವಾಮೀಜಿ ಹೇಳಿದರು: “ಅಃ! ಈ ಹುಡುಗ ಬಹಳ ಚೆನ್ನಾಗಿ ಮಾಡಿದ; ಭೇಷ್! ಇಂತಹ ದೈಹಿಕವಾದ ಕಸರತ್ತಿಗೂ ಕೂಡ ಬ್ರಹ್ಮಚರ್ಯ ಆವಶ್ಯಕ. ಯಾವ ಕೆಲಸವನ್ನಾಗಲಿ ಪೂರ್ಣವಾಗಿ ಸಾಧಿಸಬೇಕಾದರೆ ಬ್ರಹ್ಮಚರ್ಯ ಅತ್ಯಂತ ಅನಿವಾರ್ಯ. ನಮ್ಮ ದೇಶದ ಅವನತಿಗೂ ಬ್ರಹ್ಮಚರ್ಯೆಯ ಅಭಾವವೆ ಪ್ರಧಾನ ಕಾರಣ.” ಮಕ್ಕಳಿಗೆಲ್ಲ ಸಿಹಿತಿಂಡಿ ಪ್ರಸಾದಗಳನ್ನು ಹಂಚಿದ ಮೇಲೆ ಸ್ವಾಮೀಜಿ ಮಹಡಿಗೆ ಹೋದರು.

ಆ ವ್ಯಾಯಾಮ ಪ್ರದರ್ಶನದಿಂದ ಅತ್ಯಂತ ಸಂತುಷ್ಟರಾಗಿ, ಹತ್ತಿರ ಇದ್ದ ಕೆಲವರು ಆಶ್ರಮದ ಸಾಧುಗಳನ್ನು ಕುರಿತು “ನೀವೆಲ್ಲರೂ ತಪ್ಪದೆ ಅಂಗಸಾಧನೆ ಮಾಡುತ್ತೀರಿ ಎಂದು ಹಾರೈಸುತ್ತೇನೆ” ಎಂದರು. ಇಬ್ಬರು ಹೌದು ಎಂದರು. ಸ್ವಾಮೀಜಿ ಮತ್ತೆ ಹೇಳಿದರು “ಪ್ರತಿದಿನವೂ ಕ್ರಮಬದ್ಧವಾದ ಅಂಗಸಾಧನೆ ಮಾಡಬೇಕು. ಶಾಸ್ತ್ರಗಳೂ ಹೇಳುತ್ತವೆ, ‘ಸಾಧನೆಯ ಮೊದಲ ಮೆಟ್ಟಿಲೆ ಅಂಗಸಾಧನೆ’ ಎಂದು. ಧರ್ಮ ಸಾಧನೆಯಲ್ಲಿ ಮುಂದುವರಿಯಬೇಕಾದರೆ ಆರೋಗ್ಯ ಶರೀರ ಅತ್ಯಗತ್ಯ, ದೃಢ ತನುವಿನಲ್ಲಿ ಧೀರ ಮನಸ್ಸು’ ಎಂಬಂತೆ. ಶ್ರೀರಾಮಕೃಷ್ಣರ ಶಿಷ್ಯರೆಲ್ಲರೂ ಎಂತಹ ಬಲಶಾಲಿಗಳಾಗಿದ್ದರೆಂಬುದು ನಿಮಗೆ ತಿಳಿದಿಲ್ಲವೆ? ವಿವೇಕಾನಂದರು, ಬ್ರಹ್ಮಾನಂದರು, ಮತ್ತಿತರರು ಎಲ್ಲರೂ ದೃಢ ಶರೀರಿಗಳಾಗಿದ್ದರು. ಸ್ವಾಮೀಜಿ ಮತ್ತು ಬ್ರಹ್ಮಾನಂದರಂತೂ ಗರಡಿಯಲ್ಲಿ ಪ್ರವೀಣರಿಂದ ಕುಸ್ತಿಯ ಕಲೆಯನ್ನು ಅಭ್ಯಾಸಮಾಡಿದ್ದರು. ನಮ್ಮಲ್ಲಿ ಮೈಕಟ್ಟು ಕೊಂಚ ಕಡಿಮೆಯಾಗಿದ್ದವರೆಂದರೆ ಸ್ವಾಮಿ ಯೋಗಾನಂದರು ಮತ್ತು ಸ್ವಾಮಿ ಪ್ರೇಮಾನಂದರು.”

ಉತ್ತಮವಾದ ದೇಹಾರೋಗ್ಯ ದಾರ್ಢ್ಯಗಳಿಲ್ಲದೆ ತಪಸ್ಯೆ ಸಾಧನೆಗಳ ಬಿರುಸನ್ನು ಸಹಿಸಲು ಯಾರಿಗೆ ತಾನೆ ಸಾಧ್ಯ? ನಿಮಗಿನ್ನೂ ಎಳೆವಯಸ್ಸು, ಸಕ್ರಮ ವ್ಯಾಯಾಮ ಆವಶ್ಯಕ. ನೀವೇನು ಪೈಲ್ವಾನರೋ ಕಸರತ್ತುಗಾರರೋ ಆಗುವುದು ಬೇಕಾಗಿಲ್ಲ. ಆದರೆ ಒಳ್ಳೆಯ ಆರೋಗ್ಯಕ್ಕಾಗಿಯಾದರೂ ವ್ಯಾಯಾಮ ಮಾಡಬೇಕು. ಸಂನ್ಯಾಸ ತೆಗೆದುಕೊಂಡುಬಿಟ್ಟರೆ ಮಾತ್ರ ಸಾಲದು. ಉಪನಿಷತ್ತುಗಳು ಹೇಳುತ್ತವೆ; ಸಾಧಕನಾದವನಿಗೆ ಉತ್ಸಾಹ, ಶ್ಕತಿ, ಉಲ್ಲಾಸ, ಅಧ್ಯಯನಾಭಿಲಾಷೆ, ಮೇಧಾಶಕ್ತಿ ಇರಬೇಕು ಎಂದು. ಈ ಲಕ್ಷಣಗಳಿದ್ದರೆ ಬ್ರಹ್ಮಜ್ಞಾನ ಸಾಧನೆಗೆ ಅವನು ಅಧಿಕಾರಿಯಾಗುತ್ತಾನೆ. ಸ್ವಾಮೀಜಿ ಹೇಳುತ್ತಿದ್ದರು. ‘ಹೃದಯದಲ್ಲಿ ಕಿಚ್ಚಿಲ್ಲದ ಸತ್ತ್ವಹೀನ ದುರ್ಬಲನಿಗೆ ಸಾಧನೆಯಲ್ಲಿ ಮುಂಬರಿಯುವುದು ದುಸ್ಸಾಧ್ಯ ‘. ಎಂತಹ ಸತ್ಯ!

“ನಮಗೆ ಕಾಯಿಲೆಯಾಗಿರುವಾಗ ದೇಹದ ಶುಶ್ರೂಷೆಗಾಗಿಯೆ ಎಷ್ಟು ಸಮಯ ವ್ಯಯವಾಗುತ್ತದೆ! ಆಗ ಧ್ಯಾನಕ್ಕೆ ಜಪಕ್ಕೆ ಅಧ್ಯಯನಕ್ಕೆ ಕೆಲಸಕ್ಕೆ ಸಮಯವೆಲ್ಲಿ? ಅದೂ ಅಲ್ಲದೆ, ತಕ್ಕಮಟ್ಟಿಗಾದರೂ ದೇಹಬಲವಿಲ್ಲದಿದ್ದರೆ ಆಧ್ಯಾತ್ಮಿಕ ಅನುಭವಗಳಿಂದಾಗುವ ಪ್ರತಿಕ್ರಿಯೆಯನ್ನು ತಡೆದುಕೊಳ್ಳಲು ಅದಕ್ಕೆ ಸಾಧ್ಯವಾಗುವುದಿಲ್ಲ. ತಲೆ ಕೆಟ್ಟು ಹುಚ್ಚು ಗಿಚ್ಚು ಹಿಡಿಯುತ್ತದೆ, ಇಲ್ಲವೆ ಶರೀರ ಸಂಪೂರ್ಣವಾಗಿ ಜಜ್ಜರಿತವಾಗುತ್ತದೆ. ಇದೆಲ್ಲಕ್ಕೂ ಮಿಗಿಲಾಗಿ, ವತ್ಸರಿರಾ, ಸಂನ್ಯಾಸಿಗಳಾದ ನೀವೆಲ್ಲ ಶ್ರೀರಾಮಕೃಷ್ಣ, ಸ್ವಾಮಿ ವಿವೇಕಾನಂದರ ಯೋಧರೆಂದು ಭಾವಿಸಿರಿ. ಈ ಲೋಕದಲ್ಲಿ ಮಾಡುವ ಕರ್ತವ್ಯ ಎಷ್ಟೊಂದಿದೆ ನಿಮಗೆ? ಬಲಿಷ್ಠರಾದ ತರುಣರನ್ನು ಕಂಡರೆ ಸ್ವಾಮೀಜಿಗೆ ತುಂಬ ಇಷ್ಟ. ಇವರೂ ಕೂಡ ಸ್ವತಃ ಬಲಿಷ್ಠದೇಹಿಯೂ ಆರೊಗ್ಯ ದೃಢಕಾಯರೂ ಆಗಿದ್ದುದರಿಂದ ಅತ್ಯಲ್ಪಕಾಲದಲ್ಲಿ ಜಗತ್ತನ್ನೆ ಅಲ್ಲೋಲ ಕಲ್ಲೋಲ ಮಾಡಲು ಸಮರ್ಥರಾದರು.”

ಸ್ವಲ್ಪ ಹೊತ್ತಾದಮೇಲೆ ಮಹಾಪುರಷಜಿ ಉಪ್ಪರಿಗೆಯಿಂದ ಕೆಳಗಿಳಿದರು. ಮಠಕ್ಷೇತ್ರದ ಆಗ್ನೇಯ ಭಾಗಕ್ಕೆ ನಡದು, ಒಂದೆಡೆ ನಿಂತು, ಮೇಯುತ್ತಿದ್ದ ದನಗಳ ಬೆನ್ನನ್ನು ಮುದ್ದಿಗಾಗಿ ಚಪ್ಪರಿಸತೊಡಗಿದರು, ಸ್ವಾಮಿಗಳ ಅಪ್ಪಣೆಯ ಮೇರೆಗೆ ಅವುಗಳಿಗೆ ರುಚಿಯಾದ ತಿಂಡಿ ಹಾಕಿದ್ದರು. ಅವುಗಳ ಹಿಗ್ಗನ್ನು ನೋಡಿದ ಸ್ವಾಮಿಗಳ ಸಂತೋಷಕ್ಕೆ ಪಾರವೆ ಇರದಾಯಿತು. ಆಮೇಲೆ ಕೆಲವು ಜನ ಭಕ್ತರಿಂದ ಪರವೃತರಾಗಿ ಅಲ್ಲಲ್ಲಿ ಕಾಲಾಡತೊಡಗಿದರು.

ಬಳಿಯಿದ್ದವರೊಡನೆ ಸಂಭಾಷಿಸುತ್ತಾ ಹೀಗೆಂದರು:

“ಗುರುಮಹಾರಾಜ್ ಮತ್ತು ಸ್ವಾಮೀಜಿ ಇವರ ಸಂದೇಶವನ್ನು ಸರ್ವರೂ ಸ್ವೀಕರಿಸಲೇಬೇಕಾಗುತ್ತದೆ. ಶ್ರೀ ಗುರುದೇವರ ಶಾಂತಿ ಮತ್ತು ಸಮನ್ವಯ ಸಂದೇಶಗಳನ್ನು ಲೋಕಕ್ಕೆ ಸಾರುವುದಕ್ಕಾಗಿಯೆ ಸ್ವಾಮೀಜಿ ಜನ್ಮವೆತ್ತಿದರು. ನೀವೇ ನೋಡುತ್ತೀರಿ, ಪಾಶ್ಚಾತ್ಯದೇಶಗಳು ಆ ಸಂದೇಶವನ್ನು ಹೇಗೆ ಒಪ್ಪಿ ಸ್ವೀಕರಿಸುತ್ತವೆ ಎಂಬುದನ್ನು. ಅದು ಈಗತಾನೆ ಪ್ರಾರಂಭವಾಗಿದೆ – ಬರಿಯ ಮುನ್ನುಡಿ ಮಾತ್ರ. ಪಾಶ್ಚಾತ್ಯರು ವಿಚಾರ ಪಕ್ಷಪಾತಿಗಳು; ಆದ್ದರಿಂದ ಗುರುಮಹಾರಾಜರ ವಿಶ್ವವ್ಯಾಪಕವಾದ ತತ್ತ್ವೋಪದೇಶಗಳು ಅವರಿಗೆ ಹಿಡಿಸೆಯೆ ಹಿಡಿಸುತ್ತವೆ. ಏಕೆಂದರೆ ಆ ಸಮನ್ವಯದೃಷ್ಟಿ ಸರ್ವರಲ್ಲಿಯೂ ಸರ್ವ ಜನಾಂಗಗಳಲ್ಲಿಯೂ ಮೂಡಿದಲ್ಲದೆ ಜಗತ್ತಿಗೆ ಶಾಂತಿ ದೊರೆಯುವುದಿಲ್ಲ.”

“ಬೇರೆ ಬೇರೆ ದೇಶಗಳಲ್ಲಿ, ಈಗಾಗಲೇ, ಶ್ರೀರಾಮಕೃಷ್ಣ ಮತ್ತು ಸ್ವಾಮಿ ವಿವೇಕಾನಂದರ ಬೋಧನೆಯ ಪ್ರಭಾವಕ್ಕೆ ಒಳಗಾದವರು ಕೆಲವರು ಆ ಆದರ್ಶಗಳ ಮೇಲೆ ತಮ್ಮ ತಮ್ಮ ನಾಮಮುದ್ರಿಕೆಗಳನ್ನೊತ್ತಿ ಪ್ರಕಟಿಸುತ್ತಿದ್ದಾರೆ. ಅವರಿಷ್ಟದಂತೆ ಅವರು ಮಾಡಲಿ ಚಿಂತೆಯಿಲ್ಲ. ಶ್ರೀರಾಮಕೃಷ್ಣರು ಮತ್ತು ವಿವೇಕಾನಂದರು ಹೆಸರು ಕೀರ್ತಿಗಳಿಗೆ ಎಂದೂ ಆಸೆಪಟ್ಟವರಲ್ಲ. ಅವರು ಬಂದದ್ದು ಜಗತ್‌ಕಲ್ಯಾಣಕ್ಕಾಗಿ. ಆ ಉದ್ದೇಶ ನೆರವೇರಿದರಾಯಿತು, ಆ ಉಪದೇಶ ಹರಡಿದರಾಯಿತು, ಅವರಿಗೆ ತೃಪ್ತಿ. ಕೀರ್ತಿಯನ್ನು ಜೀರ್ಣಿಸಿಕೊಳ್ಳುವುದು ಬಹಳ ಕಷ್ಟವೆಂಬುದು ನಿಮಗೆ ಗೊತ್ತಿಲ್ಲವೆ? ಆತ್ಮಸಾಕ್ಷಾತ್ಕಾರವಾಗದವರು ಯಾರೂ ಹೆಸರು ಕೀರ್ತಿಗಳ ಆಸೆಯಿಂದ ಪಾರಾಗಲಾರರು. ಇತ್ತೀಚೆಗಂತೂ ಎಷ್ಟೊಂದು ಅವತಾರಗಳು ಹುಟ್ಟಿಕೊಳ್ಳುತ್ತಾ ಇವೆ! ಒಂದು ಸ್ವಲ್ಪ ಭಕ್ತಿಯನ್ನೊ ಭಾವವನ್ನೊ ಆರ್ಜಿಸಿದರಾಯಿತು, ತಾವು ಅವತಾರಪುರುಷರೆಂದು ಘೋಷಿಸುತ್ತಾರೆ. ಸರಿ, ಅಲ್ಲಿಗೇ ಮುಕ್ತಾಯ! ಏಕೆಂದರೆ, ಈ ಅಹಂಕಾರದ ದಂಭಗಳ ದೆಸೆಯಿಂದ ಅವರು ಅಧ್ಯಾತ್ಮದಲ್ಲಿ ಒಂದಿನಿತೂ ಮುಂಬರಿಯಲು ಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲ. ಅದುವರೆಗೆ ಸಾಧಿಸಿದ್ದನ್ನೂ ಕಳೆದುಕೊಳ್ಳುತ್ತಾರೆ.”

* * *