ಸಾಯಂಕಾಲ ಐದು ಗಂಟೆಯಾಗಿತ್ತು. ಮಹಾಪುರುಷಜಿ ಅವರ ಕೊಠಡಿಯಲ್ಲಿ ಕುಳಿತುಕೊಂಡಿದ್ದರು. ಕೆಲವರು ಭಕ್ತರು ಅವರ ಬಳಿ ಇದ್ದರು. ಅದು ಇದು ಮಾತುಕತೆ ನಡೆಯುತ್ತಾ ತಬಲ ಬಾರಿಸುವುದರಲ್ಲಿ ಪ್ರವೀಣನಾಗಿದ್ದ ಒಬ್ಬ ನಾಲ್ಕು ವರ್ಷದ ಹುಡುಗನ ಪ್ರಸ್ತಾಪ ಬಂತು. ಸ್ವಾಮೀಜಿ ಹೇಳಿದರು: “ಇಂತಹ ನಿದರ್ಶನಗಳನ್ನು ನೋಡಿದ ಮೇಲೆ ಪುನರ್ಜನ್ಮ ಮತ್ತು ಜನ್ಮಾಂತರ ಸಿದ್ಧಾಂತವನ್ನು ಒಪ್ಪಿಕೊಳ್ಳದೆ ಇರುವುದಕ್ಕಾಗುವುದಿಲ್ಲ. ಯಾರಿಗೆ ಆಗಲಿ ಎಷ್ಟು ಎಳೆಯ ವಯಸ್ಸಿನಲ್ಲಿ ಅಂತಹ ಅದ್ಭುತ ಶಕ್ತಿ ಇರಬೇಕಾದರೆ ಅದು ಅವನೊಂದಿಗೆ ಬಂದದ್ದೆ. ಪೂರ್ವ ಜನ್ಮಗಳಿಂದ ಅವನು ತಂದದ್ದೆ ಆಗಿರಬೇಕಲ್ಲದೆ ಅನ್ಯಥಾ ಹೇಗೆತಾನೆ ಸಾಧ್ಯವಾಗುತ್ತದೆ? ಆ ಮಗು ಎಷ್ಟು ಅದ್ಭುತವಾಗಿ ತಬಲ ಬಾರಿಸುತ್ತದೆ! ಏನು ತಾಳ, ಏನು ಲಯ! ಅದನ್ನು ಯಾರು ಅವನಿಗೆ ಕಲಿಸಿದವರು?”

ಸಾಯಂಕಾಲದ ಮಂಗಳಾರತಿ ಆದ ಮೇಲೆ ಶ್ರೀರಾಮನಾಮಸ್ತವನ ಪ್ರಾರಂಭವಾಯಿತು. ಅನೇಕ ಸಾಧುಗಳೂ ಭಕ್ತರೂ, ಅದರಲ್ಲಿ ಭಾಗಿಗಳಾದರು. ಸ್ವಾಮಿ ಶಿವಾನಂದರು ತಾವು ನಿತ್ಯವೂ ಕೂರುವ ಆಸನದ ಮೇಲೆ ಕುಳಿತುಕೊಂಡು ತದೇಕಚಿತ್ತರಾಗಿ ಆಲಿಸಿದರು. ಕ್ರಮೇಣ ಸ್ತವನಗಾಯನ ಕೊನೆಗೊಂಡಿತು. ಪ್ರಸಾದ ಸ್ವೀಕಾರವಾದ ಮೇಲೆ ಭಕ್ತರು ಒಬ್ಬೊಬ್ಬರಾಗಿ ಬಂದು ತಮ್ಮ ತಮ್ಮ ಗೃಹಗಳಿಗೆ ಹೋಗುವ ಮುನ್ನ ನಮಸ್ಕಾರ ಮಾಡಿದರು.

ಅವರನ್ನು ಉದ್ದೇಶಿಸಿ ಸ್ವಾಮಿಗಳೆಂದರೆ; “ಸ್ವಾಮಿ ಬ್ರಹ್ಮಾನಂದರು ಈ ಶ್ರೀರಾಮನಾಮ ಸಂಕೀರ್ತನೆಯನ್ನು ಮೊದಲು ಕೇಳಿದ್ದು ದಕ್ಷಿಣ ಭಾರತದಲ್ಲಿ. ಅವರಿಗೆ ಅದು ಅತ್ಯಂತ ಹೃದಯಸ್ಪರ್ಶಿಯಾಗಿದ್ದುದರಿಂದ ಅದನ್ನು ಇಲ್ಲೂ ಬೇಲೂರು ಮಠದಲ್ಲಿಯೂ ಪ್ರಾರಂಭಿಸಿದರು. ಈಗ ನಾವು ಪ್ರತಿ ಏಕಾದಶಿಯಲ್ಲಿಯೂ ಇಲ್ಲಿ ರಾಮನಾಮಸಂಕೀರ್ತನ ಮಾಡುತ್ತೇವೆ. ಈ ರಾಮನಾಮ ಎಷ್ಟು ಬೇಗ ಹಬ್ಬಿಬಿಟ್ಟಿದೆ ನಮ್ಮ ದೇಶದಲ್ಲಿ! ಎಷ್ಟು ಜೀವರಿಗೆ ಶಾಂತಿ ಸಂತೋಷಗಳನ್ನು ದಯಪಾಲಿಸುತ್ತಿದೆ! ಮಹಾವೀರನ (ಆಂಜನೇಯನ) ಪೂಜೆಯನ್ನು ಪ್ರತಿಯೊಂದು ಭಾರತೀಯ ಗೃಹದಲ್ಲಿಯೂ ಸಂಸ್ಥಾಪಿಸಬೇಕೆಂದು ಸ್ವಾಮೀಜಿಯ (ವಿವೇಕಾನಂದರ) ಇಷ್ಟವಾಗಿತ್ತು. ಶ್ರೀರಾಮಭಕ್ತಾಗ್ರೇಸರನಾಗಿರುವ ಮಹಾವೀರನ ಪೂಜೆ ಈ ರಾಮನಾಮ ಸಂಕೀರ್ತನೆಯ ಒಂದು ವಿಶೇಷಾಂಗ. ಮಹಾವೀರ ಆಂಜನೇಯನು ಪರಮ ಬ್ರಹ್ಮಚಾರಿ. ಬ್ರಹ್ಮಚರ್ಯಕ್ಕೆ ಸೀಮಾಮೂರ್ತಿ. ಆತನ ಆರಾಧನೆಯಿಂದ ಜನಾಂಗದ ಹೃದಯದಲ್ಲಿ ನಿದ್ರಾವಸ್ಥೆಯಲ್ಲಿರುವ ಶಕ್ತಿಗಳೆಲ್ಲ ಎಚ್ಚರಗೊಂಡು, ರಾಷ್ಟ್ರ ಕುಂಡಲಿನ ಜಾಗ್ರತಗೊಳ್ಳುವುದರಲ್ಲಿ ಸಂದೇಹವಿಲ್ಲ.

ಭಕ್ತರಲ್ಲಿ ಅನೇಕರು ನಮಸ್ಕಾರ ಮಾಡಿ ಬೀಳ್ಕೊಂಡರು. ಸ್ವಾಮಿ ಶಿವಾನಂದರು ಸಾಯಂಭೋಜನಕ್ಕೆ ಅಣಿಯಾಗುತ್ತಿದ್ದರು. ಆಗ ಅಲ್ಲಿದ್ದ ಭಕ್ತನೊಬ್ಬನು ಜಾತಿಪದ್ಧತಿಯ ವಿಚಾರವನ್ನೆತ್ತಿ ಹೇಳಿದನು: “ಮಹಾರಾಜ್, ಪರಮಹಂಸರ ಜನ್ಮೋತ್ಸವ ಸಮಯದಲ್ಲಿ ಮಠದಲ್ಲಿ ನಡೆಯುವ ಸಮಾರಾಧನೆಯಲ್ಲಿ ಜಾತಿಪದ್ಧತಿಯನ್ನು ಗಮನಿಸುವುದಿಲ್ಲವೆಂದು ಅನೇಕರು ಸ್ವಾಮಿ ವಿವೇಕಾನಂದರನ್ನು ಟೀಕಿಸುತ್ತಾರೆ; ವರ್ಣಾಶ್ರಮ ಧರ್ಮಕ್ಕೆ ಅವರು ವಿರೋಧವಾಗಿ ವರ್ತಿಸಿದರೆಂದು ದೂರುತ್ತಾರೆ.”

ಸ್ವಾಮೀಜಿ ಹೀಗೆ ಉತ್ತರಕೊಟ್ಟರು: “ಎಷ್ಟು ಸಣ್ಣ ವಯಸ್ಸು ಅವರದು. ಜನ್ಮೋತ್ಸವ ಕಾಲದಲ್ಲಿ ಅಡುಗೆಗೆ ಬ್ರಾಹ್ಮಣರನ್ನೇ ಗೊತ್ತು ಮಾಡುತ್ತೇವೆ; ಅಟ್ಟುದೆಲ್ಲವನ್ನೂ ದೇವರಿಗೆ ಅರ್ಪಿಸಿ ನೈವೇದ್ಯವನ್ನಾಗಿ ಪರಿವರ್ತಿಸುತ್ತೇವೆ. ರಾಶಿರಾಶಿಯಾಗಿ ಬೇಯಿಸುವ ಕಿಚ್ಚಡಿ ತರಕಾರಿ ಎಲ್ಲವನ್ನೂ ಮೊದಲು ದೇವರಿಗೆ ನೈವೇದ್ಯ ಮಾಡಿ ಆಮೇಲೆ ಜನಗಳಿಗೆ ಬಡಿಸುತ್ತೇವೆ. ಇಲ್ಲಿ ಎಲ್ಲರೊಂದಿಗೂ ಕುಳಿತು ಭೇದವಿಲ್ಲದೆ ಸಹಪಂಕ್ತಿ ಭೋಜನಮಾಡುವವರು ತಮ್ಮ ಇಷ್ಟದಿಂದಲೆ ಮಾಡುತ್ತಾರೆ. ಯಾರನ್ನೂ ಯಾವಾಗಲೂ ಬಲಾತ್ಕರಿಸುವುದಿಲ್ಲ. ಗಂಗಾತೀರದಲ್ಲಿ ಬ್ರಾಹ್ಮಣ ಪಾಚಕರಿಂದ ಸಿದ್ಧವಾಗಿ ಭಗವಂತನಿಗೆ ಅರ್ಪಿತವಾದುದನ್ನು ಸೇವಿಸುವುದನ್ನೂ ನಿಷಿದ್ಧಾಚರಣೆ ಎನ್ನುವವರನ್ನು ನಾವು ಏನೆಂದು ಕರೆಯಬೇಕು?”

“ಬಾಯಿಬಿಟ್ಟು ಹೇಳುವುದಾರೆ ಬೇಕಾದಷ್ಟಿದೆ. ಈ ದೇಶದಲ್ಲಿ ಈಗ ಜಾತಿ ಪರಿಶುದ್ಧಿ ಎಲ್ಲಿದೆ? ಯಾವನಾದರೂ ಹನ್ನೆರಡು ವರ್ಷ ಶೂದ್ರಸೇವಕನಾದರೆ ಅಂಥವನು ಶೂದ್ರತ್ವಕ್ಕೆ ಇಳಿಯುತ್ತಾನೆ ಎಂದು ಶಾಸ್ತ್ರವಿದೆ. ಹನ್ನೆರಡು ವರುಷವೇ? ಹನ್ನೆರಡಲ್ಲ ಇಪ್ಪತುನಾಲ್ಕು ವರುಷಗಳೂ ಮ್ಲೇಚ್ಛರಿಗೆ ಗುಲಾಮರಾಗಿದ್ದುದ್ದನ್ನು ನಾವು ಕಂಡಾಗಿದೆ. ಆದರೂ ಜಾತಿ ಜಾತಿ ಶುದ್ಧಿ ಶುದ್ಧಿ ಎಂದು ಜಂಭ ಹೊಡಕೊಳ್ಳುತ್ತಾರೆ! ತಮ್ಮಿಂದ ಏನೊಂದು ಕೆಲಸಮಾಡಲು ಕೈಲಾಗುವುದಿಲ್ಲ; ಜಾತಿ ಶುದ್ಧಿ ವಿಚಾರವಾಗಿ ಮಾತ್ರ ಉದ್ದುದ್ದ ಮಾತು! ಈಗೆಲ್ಲಿವೆ ಆ ಕರ್ಮ, ಆ ಕ್ರಿಯೆ, ಆ ತಪಸ್ಯೆ? ಆ ದಾನ, ಯಜ್ಞ, ವ್ರತ, ಧ್ಯಾನ, ತ್ಯಾಗ? ಅವೆಲ್ಲ ಗತಕಾಲದ ವಿಷಯಗಳಾಗಿವೆ. ಅದಕ್ಕೇ ಸ್ವಾಮೀಜಿ ಜುಗುಪ್ಸೆಯಿಂದ ಹೇಳಿದ್ದು ‘ನಿಮ್ಮ ಮತ, ಧರ್ಮ, ದೇವರು ಎಲ್ಲ ಪಾಕಶಾಲೆಯ ಪಾತ್ರೆಗಳಲ್ಲಿ ಮನೆಮಾಡಿಕೊಂಡಿವೆ, ಸ್ಪರ್ಶಮಾತ್ರದಿಂದಲೆ ಪತಿತರಾಗಿಬಿಡುತ್ತೇವೆ ಎಂದು ಭಯಭ್ರಾಂತರಾಗಿದ್ದೀರಿ!’ ಎಂದು.”

* * *

ನನ್ನಾಶೆ ನಿನ್ನಿಚ್ಛೆಯಪ್ಪನ್ನೆಗಂ ಸಲ್ಲದಿರಲಿ;
ನನ್ನ ಸಾಹಸ ನಿನ್ನದಪ್ಪನ್ನೆಗಂ ಗೆಲ್ಲದಿರಲಿ,
ಗೆಲ್ ಅಹಂಕಾರವನೆ ಬಲಿವನ್ನೆಗಂ ಸೋಲೆ ಬರಲಿ;
ಸುಖ ನಿನ್ನ ಮರೆವಂತೆ ಮಾಳ್ಪನ್ನೆಗಂ ದುಃಖವಿರಲಿ,
ನನ್ನಿಷ್ಟದಿಷ್ಟ ನೀನಪ್ಪನ್ನೆಗಂ ಕಷ್ಟಬರಲಿ;
ಲಾಭ ಗುರುಲಾಭ ನೀನಪ್ಪನ್ನೆಗಂ ನಷ್ಟವಿರಲಿ  – ಕುವೆಂಪು.