ಭಾನುವಾರ, ಸ್ವಾಮಿ ಶಿವಾನಂದರ ಕೊಠಡಿಯಲ್ಲಿದ್ದ ಅನೇಕ ಜನ ಭಕ್ತರಲ್ಲಿ ಒಂದು ಗುಂಪು ಬಾರಿಸಾಲ್ ಪ್ರದೇಶದಿಂದ ಪರಮಾರ್ಥ ಪ್ರಸಂಗ ಶ್ರವಣಾರ್ಥವಾಗಿ ಬಂದಿತ್ತು. ಅದರಲ್ಲಿ ವಯಸ್ಸಾದ ಒಬ್ಬರು ಎಲ್ಲರ ಪರವಾಗಿ ಮಾತನಾಡಿದರು: “ಮಹಾರಾಜ್, ನಮಗೆ ಹಿತೋಪದೇಶ ಮಾಡಬೇಕು. ಪ್ರಾಪಂಚಿಕರಾಗಿ ಸಂಸಾರದಲ್ಲಿ ಬಾಳುತ್ತಾ ಅನೇಕ ಪಾಶಗಳಿಂದ ಬದ್ಧರಾಗಿ ಹಗಲಿರುಳೂ ಬೇಯುತ್ತಿದ್ದೇವೆ. ಬದುಕಿನಲ್ಲಿ ಶಾಂತಿ ಲಭಿಸುವಂತೆ ಆಶೀರ್ವದಿಸಬೇಕು.”

ಮಾತನಾಡಿದವರೆ ತೀವ್ರವಾದ ಶ್ರದ್ಧೆಗೆ ಮಹಾಪುರುಷಜಿ ಬಗೆಗರಗಿ ಕನಿಕರಿಸಿ ಹೇಳಿದರು: “ಏನು ಹಿತೋಪದೇಶ ಮಾಡಲಿ? ನಮ್ಮ ಬಳಿ ಇರುವುದೆಲ್ಲ ಒಂದೇ ಉಪದೇಶ- ದೇವರನ್ನು ಮರೆಯಬೇಡಿ. ಅದೇ ಸರ್ವ ಧರ್ಮೋಪದೇಶಗಳ ಸಾರ. ನಾವು ಕೂಡ ಅದನ್ನು ಅನುಷ್ಠಾನಕ್ಕೆ ತರಲೆಂದೇ ಸಾಧನೆ ಮಾಡುತ್ತಿದ್ದೇವೆ. ನಮ್ಮಲ್ಲಿಗೆ ಬೆಳಕನ್ನು ಅರಸಿ ಬರುವವರಿಗೂ ಅದನ್ನೇ ಹೇಳುತ್ತೇವೆ. ನೀವು ಸಂಸಾರದಲ್ಲಿದ್ದೀರಿ; ಇದ್ದರೇನಂತೆ? ಯಾರಾದರೂ ಸಂಸಾರದ ಹೊರಗಿದ್ದಾರೆಂದು ಹೇಳಿ. ಆದರೆ ಭಗವಂತನನ್ನು ಮರೆಯದಂತೆ ಜಾಗರೂಕರಾಗಿಬೇಕಾದುದು ನಿಮ್ಮ ಕರ್ತವ್ಯ. ನಿಮ್ಮ ದಿನದಿನದ ಕೆಲಸಗಳನ್ನೆಲ್ಲ ಮಾಡಿ; ಆದರೆ ದಿನದ ಕೊನೆಯಲ್ಲಿ ಒಮ್ಮೆಯಾದರೂ ದೇವರನ್ನು ನೆನೆದು ಅವನಿಗೆ ಮೊರೆಯಿಡಿ. ಹೌದು, ಕರ್ತವ್ಯಗಳೂ ಹೊರೆಹೊಣೆಗಳೂ ಇದ್ದೇ ಇರುತ್ತವೆ. ಅವುಗಳನ್ನೆಲ್ಲ ನಿರ್ಲಕ್ಷಿಸಬೇಕೆಂದು ನಾನು ಹೇಳುವುದಿಲ್ಲ. ಆದರೆ ಅವುಗಳ ನಡುವೆಯೆ ದೇವರನ್ನು ನೆನೆಯಬೇಕು; ಪ್ರಾರ್ಥಿಸಬೇಕು; ಭಗವನ್ನಾಮ ಸಂಕೀರ್ತನೆ ಮಾಡಬೇಕು; ಆಧ್ಯಾತ್ಮಿಕವಾದ ಪ್ರಯತ್ನಗಳನ್ನು ಕೈಬಿಡಬಾರದು.”

“ವೈಷ್ಣವ ಗ್ರಂಥಗಳಲ್ಲಿ ಒಂದು ಸುಭಾಷಿತವಿದೆ: ‘ಲೋಕದ ಕೆಲಸ ಕೈಯಲ್ಲಿರಲಿ, ದೇವರ ಹೆಸರು ಬಾಯಲ್ಲಿರಲಿ!’ ಅದು ನಿಜವಾಗಿಯೂ ಒಂದು ಅಮೋಘವಾದ ಉಪದೇಶ. ಇತರ ಎಲ್ಲ ಕೆಲಸಗಳಿಗೂ ಒಂದು ಸಮಯ ಒಂದು ಉದ್ದೇಶ ಇಟ್ಟುಕೊಳ್ಳುವಂತೆ ಧ್ಯಾನಕ್ಕೂ ಒಂದು ಸಮಯ ಗೊತ್ತುಮಾಡಿ ಕೊಳ್ಳಬೇಕು. ಆ ಸಮಯದಲ್ಲಿ ನಿಮಗೆ ನೂರೊಂದು ಕೆಲಸವಿದ್ದರೂ ಭಗವಂತನನ್ನು   ಚಿಂತಿಸಿ ಧ್ಯಾನಿಸಬೇಕು. ಈಶ್ವರನು ಸರ್ವರ ಹೃದಯಲ್ಲಿಯೂ ಇದ್ದಾನೆ; ಆದ್ದರಿಂದ ಹೃದಯವನ್ನರಿತು ಅನುಗ್ರಹಿಸುತ್ತಾನೆ, ದೇವರನ್ನು ನೆನೆಯುವಾಗ, ಕ್ಷಣಕಾಲವೆ ಆದರೂ ಚಿಂತೆಯಿಲ್ಲ, ಹೃತ್ಪೂರ್ವಕವಾದ ಶ್ರದ್ಧೆಯಿಂದ ಧ್ಯಾನಿಸು, ಅದನ್ನೊಂದು ಮಹಾರಹಸ್ಯವೆಂದು ತಿಳಿ, ಸಂಸಾರದಲ್ಲಿ ಶಾಂತಿಯನ್ನು ಅನುಭವಿಸಬೇಕಾದರೆ ಅದೊಂದೇ ಹಾದಿ. ಅದನ್ನು ಮರೆತೆ? ಬಂತು ಕಷ್ಟ!”

ಮಹಿಳಾ ಭಕ್ತೆ: “ಮಹಾರಾಜ್, ನಾವು ದೇವರನ್ನು ಮರೆಯುವುದೇಕೆ? ನಮ್ಮ ಮನಸ್ಸು ಅವನ ಚರಣಕ್ಕೆ ದೂರಾವರ್ತಿಯಾಗುವುದು ಏತಕ್ಕೆ?”

ಸ್ವಾಮೀಜಿ: “ಭಗವಂತನನ್ನು ನಾನೇಕೆ ಮರೆಯುತ್ತೇನೆ? ಎಂದಲ್ಲವೆ ನೀನು ನನ್ನನ್ನು ಕೇಳುತ್ತಿರುವುದು. ವತ್ಸೆ, ಅದನ್ನೆ ಮಾಯೆ ಎಂದು ಕರೆಯುವುದು. ಮಾಯಾಮೋಹಕ್ಕೆ ಸಿಲುಕಿ ಮನುಷ್ಯ ದೇವರನ್ನು ಮರೆತು ಕ್ಷಣಭಂಗುರವಾದ ಇಂದ್ರಿಯ ವಿಷಯಗಳಲ್ಲಿ ಆಸಕ್ತನಾಗುತ್ತಾನೆ. ನೀನು ವಿಷಯಸುಖಗಳಲ್ಲಿ ಆಸಕ್ತಿ ತೋರುವಂತೆ ದೇವರಲ್ಲಿ ಆಸಕ್ತೆಯಾಗುತ್ತೀಯಾ? ನಾನೇನು ನಿನಗೆ ಹೊಸದಾಗಿ ಹೇಳಬೇಕೆ? ಈ ಪ್ರಪಂಚ, ಈ ನಿನ್ನ ದೇಹ, ನೀನು ಅತ್ಯಾಸಕ್ತಿ ತೋರುವ ಈ ಬಂಧುಬಾಂಧವರು ಎಲ್ ಅಲ್ಪಾಯುಗಳೆಂದು ನಿನ್ನ ಕಣ್ಣು ಮುಂದೆಯೆ ನಿನಗೆ ಕಾಣುತ್ತಿದೆ: ಇವತ್ತು ಇದ್ದುದು ನಾಳೆ ಇರುವುದಿಲ್ಲ. ಈ ಕ್ಷಣದಲ್ಲಿ ಇರುವುದು ಇನ್ನೊಂದು ಕ್ಷಣದಲ್ಲಿ ಇರುವುದಿಲ್ಲ. ಇವತ್ತು ಹುಟ್ಟಿದವನು ನಾಳೆ ಸಾಯಬಹುದು. ಸುಖದ ಬೆನ್ನು ಹತ್ತಿಯೆ ಬರುತ್ತದೆ ದುಃಖ. ಆದರೂ ಜನಕ್ಕೆ ಪ್ರಾಪಂಚಿಕತೆ ಎಂದರೆ ಅಷ್ಟು ಇಷ್ಟ; ವಿಷಯಸುಖಗಳಲ್ಲಿ ಮಗ್ನರಾಗಿರುತ್ತಾರೆ.”

ಮಹಿಳಾ ಭಕ್ತೆ: “ಮಹಾರಾಜ್, ನಮಗೆ ಹೇಗೆ ರಕ್ಷಣೆ? ನಾವು ಮಾಯೆಯಿಂದ ಮುಕ್ತರಾಗುವುದು ಹೇಗೆ? ಕೃಪೆಯಿಟ್ಟು ಆಶಿರ್ವಾದ ಮಾಡಬೇಕು.”

ಸ್ವಾಮೀಜಿ: “ದೇವರ ಕೃಪೆಯಿಲ್ಲದಿದ್ದರೆ ಪ್ರಪಂಚ ಅನಿತ್ಯ ಎಂಬ ಬೋಧನೆ ಯಾರಿಗೂ ಉದಯಿಸುವುದಿಲ್ಲ. ಭಗವಂತನ ಅಡಿದಾವರೆಗಳಲ್ಲಿ ಶರಣುಹೊಕ್ಕು ಸರ್ವ ಸಮರ್ಪಣ ಮಾಡಿಕೊಳ್ಳದಿದ್ದರೆ ಮಾಯಾಪಾಶದಿಂದ ಪಾರಾಗುವುದಕ್ಕೆ ಬೇರೆ ಉಪಾಯವೆ ಇಲ್ಲ. ಗೀತೆಯಲ್ಲಿ ಭಗವಂತ ಏನು ಹೇಳುತ್ತಾನೆ ಗೊತ್ತಿದೆಯೆ ತಾಯೀ?”

ದೈವೀ ಹ್ಯೇಷಾ ಗುಣಮಯೀ ಮಮ ಮಾಯಾ ದುರತ್ಯಯಾ |
ಮಾಮೇವ ಪ್ರಪದ್ಯಂತೇ ಮಾಯಾಮೇತಾಂ ತರಂತಿ ತೇ ||

‘ಗುಣಮಯವಾದ ನನ್ನ ಈ ದೈವೀ ಮಾಯೆಯನ್ನು ದಾಟಲು ಬಹುಕಷ್ಟ. ಯಾರು ನನಗೆ ಶರಣು ಬರುತ್ತಾರೋ ಅವರು ಮಾತ್ರ ಈ ಮಾಯೆಯಿಂದ ಪಾರಾಗುತ್ತಾರೆ.’ ಅನನ್ಯ ಮನದಿಂದ ಭಗವಂತನಲ್ಲಿ ಮೊರೆಯಿಡುವುದೊಂದೆ ಉಪಾಯ, ಬೇರೆ ಇಲ್ಲ. ನೀನು ಸಮಸಾರಲ್ಲಿದ್ದೀಯ; ಮಾಡುವುದಕ್ಕೆ ಅನೇಕ ಕೆಲಸ ಕಾರ್ಯಗಳಿರುತ್ತವೆ. ಜಪತಪ ಸಾಧನೆ ಭಜನೆಗಳಿಗೆ ಹೆಚ್ಚು ಕಾಲ ದೊರೆಯುವುದಿಲ್ಲ. ಅದ್ದರಿಂದಲೆ ಭಗಂತನಲ್ಲಿ ಸಂಪೂರ್ಣ ಶರಣಾಗತರಾಗಿ ಕಣ್ಣೀರಿಡುತ್ತಾ ಹೃತ್ಪೂರ್ವಕವಾಗಿ ‘ಕರುಣಿಸೋ, ಪ್ರಭು, ಕರುಣಿಸು’ ಎಂದು ಮೊರೆ ಇಡಬೇಕು. ಭಕ್ತಿಯ ಕಂಬನಿ ಮನದ ಮೈಲಿಗೆಯನ್ನೆಲ್ಲ ತೊಳೆದು ಹಾಕುತ್ತದೆ. ಆಗ ದೇವರು ಕೋಟಿಸೂರ್ಯ ಪ್ರಕಾಶವಾಗಿ ಮೈದೋರುತ್ತಾನೆ. ಆಗ ಅರಿವಾಗುತ್ತದೆ ಭಗವಂತನು ನಿನ್ನೊಳಗೇ ಇದ್ದಾನೆಂದು. ಭಗವಂತನಿಗಾಗಿ ಅಳು; ನಡು ನಡುವೆ ಸದಸದ್ ವಿಚಾರಮಾಡು. ಭಗವಂತನೊಬ್ಬನೇ ಸತ್ಯ; ಸಂಸಾರ, ಜನ್ಮಮೃತ್ಯು, ಸುಖದುಃಖ ಎಲ್ಲವೂ ಅನಿತ್ಯ, ಇಂತಹ ಸದಸದ್ ವಿಚಾರಮಾಡುತ್ತಾ, ಮತ್ತೆ ಮತ್ತೆ ಪ್ರಾರ್ಥಿಸುತ್ತಿದ್ದರೆ ನಿನ್ನ ಮೇಲೆ ಭಗವದ್ದಯೆ ಮೂಡುತ್ತದೆ.’

ಮಹಿಳಾ ಭಕ್ತೆ: “ನನ್ನ ತಂದೆ, ಸ್ವಲ್ಪ ಆಶೀರ್ವಾದ ಮಾಡಿ. ನಿಮ್ಮ ದಯೆಯೊಂದಿದ್ದರೆ ಸಂಸಾರ ಸಾಗರವನ್ನು ದಾಟಲು ಸಮರ್ಥೆಯಾಗುತ್ತೇನೆ.”

ಸ್ವಾಮೀಜಿ: “ನಮ್ಮ ಬಳಿ ಆಶೀರ್ವಾದವಲ್ಲದೆ ಇನ್ನೇನೂ ಇಲ್ಲ, ತಾಯಿ. ಜನ ಈ ಮಾಯಾಜಾಲವನ್ನು ಭೇದಿಸಬೇಕು. ಈ ಸಂಸಾರ ಸಾಗರವನ್ನು ದಾಟಬೇಕು – ಇದೇ ನಮ್ಮ ಹೃದಯದ ನಿರಂತರೇಚ್ಛೆ. ಅದೊಂದೇ ನಮ್ಮ ಅಪೇಕ್ಷೆ. ನಾನು ಪ್ರಾಣಪೂರ್ವಕವಾಗಿ ಪ್ರಾರ್ಥಿಸುತ್ತೇನೆ- ನಿನ್ನ ಹೃದಯಲ್ಲಿ ಭಗವದನುರಾಗ ಉದಯಿಸಲಿ ಎಂದು, ಇನ್ನೇನು ಹೇಳಲಿ, ತಾಯಿ?”

ಭಕ್ತರೆಲ್ಲ ತುಂಬಿದ ಹೃದಯದಿಂದ ಭಕ್ತಿಭರಿತವಾಗಿ ಮಹಾಪುರುಷ ಮಹಾರಾಜರಿಗೆ ಪ್ರಣಾಮಮಾಡಿ ಬೀಳ್ಕೊಂಡರು. ಸ್ವಲ್ಪ ಹೊತ್ತಾದ ಮೆಲೆ ಸೇವಕ ಸಾಧುವೊಬ್ಬರು ಸ್ವಾಮೀಜಿ ಬಂದಿದ್ದ ಆ ದಿನದ ಅಂಚೆಯ ಕಾಗದಗಳನ್ನೆಲ್ಲ ಓದಿ ಹೇಳಿದರು. ಒಬ್ಬ ಭಕ್ತ ಸ್ವಾಮಿಗಳಿಗೆ ತನ್ನ ಶಾರೀರಿಕ ಶ್ರಮರೂಪವಾದ ಸ್ವಂತ ಸೇವೆ ಸಲ್ಲಿಸಲು ಅವಕಾಶ ದೊರೆಯದಿದ್ದುದಕ್ಕಾಗಿ ತುಂಬ ವ್ಯಥೆಯನ್ನು ವ್ಯಕ್ತಗೊಳಿಸಿದ್ದನು. ಅದಕ್ಕೆ ಉತ್ತರವಾಗಿ ಮಹಾಪುರಷಜಿ ಹೇಳಿದರು “ಆ ಭಕ್ತನಿಗೆ ನನ್ನ ಹೃತ್ಪೂರ್ವಕವಾದ ಆಶೀರ್ವಾದಗಳನ್ನು ನೀಡಿ, ಹೀಗೆಂದು ಬರೆ: ಆತನು ಮಾಡಲೆಳೆಸುವ ಸೇವೆಗೆ ಇಲ್ಲಿ ಯಾವ ವಿಧವಾದ ಆವಶ್ಯಕತೆಯಾಗಲಿ ಅವಕಾಶವಾಗಲಿ ಇರುವುದಿಲ್ಲ. ಗುರುದೇವರ ಇಚ್ಛೆಯಿಂದ ನನಗಾವುದರ ಅಭಾವವೂ ಇರುವಂತೆ ತೋರುವುದಿಲ್ಲ. ಭಗವಂತನ ಚಿಂತನ ಧ್ಯಾನಗಳಲ್ಲಿ ಆತನು ಆಸಕ್ತನಾದರೆ ಅದಕ್ಕಿಂತಲೂ ಹೆಚ್ಚಿನ ಆನಂದ ನನಗೆ ಬೇರೊಂದಿರುವುದಿಲ್ಲ. ಅದೊಂದೇ ನನ್ನ ಆನಂದ.”

* * *

ರೂಪಂ ರೂಪವಿವರ್ಜಿತಸ್ಯ ಭವತೋ ಧ್ಯಾನೇನ ಯತ್ಕಲ್ಪಿತಂ
ಸ್ತುತ್ಯಾನಿರ್ವಚನೀಯತಾಖಿಲಗುರೋ ದೂರೀಕೃತಾ ಯನ್ಮಯಾ
ವ್ಯಾಪಿತ್ವಂ ಚ ನಿರಾಕೃತಂ ಭಗವತೋ ಯತ್ತೀರ್ಥಯಾತ್ರಾದಿನಾ
ಕ್ಷನ್ತವ್ಯಂ ಜಗದೀಶ ತದ್ವಿಕಲತಾ ದೋಷತ್ರಯಂ ಮತ್‌ಕೃತಂ! – ಶಂಕರಾಚಾರ್ಯ

“ರೂಪವಿಲ್ಲದ ನಿನಗೆ ಧ್ಯಾನಸಮಯದಲ್ಲಿ ರೂಪಕಲ್ಪನೆ ಮಾಡಿದ್ದೇನೆ. ನಿನ್ನನ್ನು ಸ್ತೋತ್ರಮಾಡಿ ನಿನ್ನ ಅನಿರ್ವಚನೀಯತೆಯನ್ನು ದೂರೀಕರಿಸಿದ್ದೇನೆ. ತೀರ್ಥಯಾತ್ರಾದಿಗಳನ್ನು ಕೈಕೊಂಡು ನಿನ್ನ ವ್ಯಾಪಿತ್ವವನ್ನು ನಿರಾಕರಿಸಿದ್ದೇನೆ. ಹೇ ಜಗದೀಶ, ಬುದ್ಧಿ ವಿಕಲತೆಯಿಂದ ನಾನು ಮಾಡಿರುವ ಈ ಮೂರು ಅಪರಾಧಗಳೂ ಕ್ಷಮಾರ್ಹ, ಸ್ವಾಮಿ!”