ಶ್ರೀರಾಮಕೃಷ್ಣ ಸಂಘದಲ್ಲಿ ಮಾತೃಸ್ಥಾನೀಯಯರಾಗಿದ್ದ ಪೂಜ್ಯಪಾದ ಶರತ್ ಮಹಾರಾಜರು – ಸ್ವಾಮಿ ಶಾರದಾನಂದರು – ಇಂದಿಗೆ ಕೆಲವೆ ದಿನಗಳ ಹಿಂದೆ ಶ್ರೀಗುರುಪಾದಪದ್ಮದಲ್ಲಿ ಮಿಲಿತವಾಗಿದ್ದರು. ಮಠದ ಸಾಧುವೃಂದ ಭಕ್ತಗಣ ಎಲ್ಲರೂ ಶೋಕದಲ್ಲಿ ಮುಳುಗಿದ್ದರು.

ಮಹಾಪುರುಷಜಿ ಎಲ್ಲರಿಗಿಂತಲೂ ಹೆಚ್ಚಾಗಿ ದುಃಖಿತರಾದಂತೆ ತೋರುತ್ತಿದ್ದರು. ಸ್ವಾಮಿ ಶಾರದಾನಂದರಿಗೆ ಆಪೋಪ್ಲೆಕ್ಸಿ* ತಗುಲಿದ ವಾರ್ತೆ ಬಂದಂದಿನಿಂದ ಅವರು ಅಸಾಧಾರಣ ಗಾಂಭೀರ್ಯವಶರಾಗಿದ್ದರು. ಅವರ ಮುಖಮಂಡಲದಿಂದ ಒಂದು ದುಶ್ಚಿಂತೆಯ ಭಾವ ಮೂಡಿತ್ತು. ತುಂಬ ವ್ಯಸ್ತಭಾವದಿಂದ ಮತ್ತೆ ಮತ್ತೆ ಶಾರದಾನಂದ ಕಾಯಿಲೆಯ ವಿಚಾರವಾಗಿ ಕೇಳಿ ಕೇಳಿ ತಿಳಿದುಕೊಳ್ಳೂತ್ತಿದ್ದರು. ದೀಕ್ಷೆಗಾಗಿಯಾಗಲಿ ಅಥವಾ ಮತ್ತಾವ ಕೆಲಸಕ್ಕಾಗಿಯಾಗಲಿ ಯಾರಾದರೂ ಬಳಿಗೈದಿದರೆ ತುಂಬಿದ ಶಾಂತ ಭಾವದಿಂದಲೆ “ಈಗ ಬೇಡ; ನನಗೆ ಮನಸ್ಸು ಸರಿಯಾಗಿಲ್ಲ, – ಶಾರದಾನಂದರಿಗೆ ಸ್ವಸ್ಥವಿಲ್ಲ’ ಎಂದು ಹೇಳುತ್ತಿದ್ದರು. ಅವರು ಏನಾದರೂ ಮಾತಾಡಿದರೂ ಅದು ವಿಶೇಷವಾಗಿ ಸ್ವಾಮಿ ಶಾರದಾನಂದರನ್ನು ಕುರಿತೇ ಆಗಿರುತ್ತಿತ್ತು.

ಬೇಲೂರು ಮಠದಲ್ಲಿ ಶರತ್ ಮಹಾರಾಜರ ಪೂತದೇಹಕ್ಕೆ ಅನಲಸತ್ಕಾರ ಮಾಡುವುದಕ್ಕೆ ಸ್ವಲ್ಪ ಮುನ್ನ ಮಹಾಪುರುಷಜಿ “ಶರತ್ ಮಹಾರಾಜರಿಗೆ ಗಂಗಾಸ್ನಾನವೆಂದರೆ ಬಹಳ ಪ್ರೀತಿ. ಅವರ ಕಳೇಬರವನ್ನು ಗಂಗೆಯಲ್ಲಿ ಮೀಯಿಸಿ” ಎಂದರು.

ಅಂದು ಶನಿವಾರ, ಮಧ್ಯಾಹ್ನಾನಂತರ ಮಹಾಪುರುಷಜಿಯ ಕೊಠಡಿಯಲ್ಲಿ ಬಹುಜನ ಭಕ್ತರು ನೆರೆದರು. ಮಹಾಪುರುಷಜಿ ತಾವೇ ಶೋಕಸಂತಪ್ತರಾಗಿದ್ದರೂ ಸಕಲರಿಗೂ ಕುಶಲಪ್ರಶ್ನೆ ಹಾಕಿ ಆಶೀರ್ವಾದ ಮಾಡಿದರು.

ನಾಲ್ಕಾರು ಮಾತುಗಳ ಒಳಗೇ ಶರತ್ ಮಹಾರಾಜರ ಪ್ರಸ್ತಾಪ ಬಂತು. ಮಹಾಪುರಷಜಿ ಹೇಳಿದರು: ಆಹಾ! ಹೋದ ಶನಿವಾರ ಕಾಯಿಲೆ ಬೀಳುವುದಕ್ಕೆ ಹಿಂದೆ ಒಂದು ವಾರಕ್ಕೆ ಮುನ್ನ ಶರತ್ ಮಹಾರಾಜ್ ಬೇಲೂರು ಮಠಕ್ಕೆ ಬಂದಿದ್ದರು. ಆವೊತ್ತು ಸಂಘದ ಗವರ್ನಿಂಗ್ ಬಾಡಿ ಮೀಟಿಂಗ್ ಇತ್ತು. ಆವಾಗಲೆ ನನ್ನೊಡನೆ ‘ನೋಡಿ, ಶರೀರ ಬಹಳ ಹೀನಸ್ಥಿತಿಗೆ ಬಂದಿದೆ. ಇನ್ನೇನು ಬಹಳ ಕಾಲವಿಲ್ಲ ಅನಿಸುತ್ತಿದೆ’ ಎಂದು ಹೇಳಿದ್ದರು. ಆದರೆ ಇಷ್ಟು ಬೇಗ ನಮ್ಮನ್ನು ಅಗಲುತ್ತಾರೆಂದು ನಾನು ಊಹಿಸಲಿಲ್ಲ.

“ಅವರು ನಿಜವಾಗಿಯೂ ಧನ್ಯಪುರುಷರು. ಅವರ ಮೇಲೆ ಶ್ರೀಮಾತೆಯವರ ಕೃಪೆ ವಿಶೇಷವಾಗಿತ್ತು. ಅದಕ್ಕಾಗಿಯೆ ಅವರಿಗೆ ಪ್ರಶಾಂತ ಮರಣ ಲಭಿಸಿದುದು. ಬದುಕಿನಲ್ಲಿ ಹೇಗೊ ಹಾಗೆ ಸಾಯುವಾಗಲೂ ಅನೇಕ ಭಕ್ತರ ಆಶೆಗಳನ್ನು ತೃಪ್ತಿಗೊಳಿಸಿದರು. ಎಷ್ಟು ಜನಗಳಿಗೆ ಸರಿಯಾದ ದಾರಿ ತೋರಿದ್ದರು! ಎಷ್ಟು ಜೀವಿಗಳಿಗೆ ಬೆಳಕು ತಂದಿದ್ದರು! ಹಾಗೆಯೆ ಸಾವಿನ ಸಮಯದಲ್ಲಿ ಅವರಿಗೆ ಸೇವೆ ಸಲ್ಲಿಸಬೇಕು ಎಂಬ ಆಶೆಯಿಟ್ಟುಕೊಂಡಿದ್ದವರಿಗೆಲ್ಲ ತಮ್ಮ ಶುಶ್ರೂಷೆಗೆ ಅವಕಾಶ ಕಲ್ಪಿಸಿಕೊಟ್ಟರು. ಸಾಧಾರಣವಾಗಿ ಅವರು ಯಾರನ್ನೂ ತಮ್ಮ ಶರೀರ ಸೇವೆ ಮಾಡಲು ಬಿಡುತ್ತಿರಲಿಲ್ಲ. ಆದರೆ ಅವರು ಅಸ್ವಸ್ಥರಾಗಿದ್ದಾಗ ಅವರ ಸೇವೆಗೆ ಎಷ್ಟು ಜನ ಹುಡುಗರಿಗೆ ಅವಕಾಶ ಸಿಕ್ಕಿತು! ಹನ್ನೆರಡು ವರ್ಷ ಸಾಧನೆ ಭಜನೆ ತಪಸ್ಯೆ ಆಚರಿಸಿದ್ದರೂ ಲಭಿಸಲಾರದಷ್ಟು ಲಭಿಸಿತು, ಕೆಲದಿನದ ಸೇವೆಯಿಂದಲೆ! ಭಕ್ತರ ಮನೋರಥವನ್ನು ಪೂರ್ಣಗೊಳಿಸುವುದಕ್ಕಾಗಿಯೆ ಅವರು ಅಷ್ಟು ದಿನ ಆ ಸ್ಥಿತಿಯಲ್ಲಿದ್ದರು. ಎಷ್ಟು ಜನ ಯಾವ ಯಾವ ಸ್ಥಳಗಳಿಂದ ಅವರನ್ನು ನೋಡುವುದಕ್ಕೆ ಬಂದು, ಸೇವೆ ಸಲ್ಲಿಸುವ ಸದವಕಾಶ ಪಡೆದರು! ಯಾರ ಯಾವ ಆಶೆಗೂ ಭಂಗಬಾರದಂತೆ ಎಲ್ಲರನ್ನೂ ತೃಪ್ತಿಗೊಳಿಸಿದ್ದರು.”

“ಅವರು ಮಹಾಯೋಗಿ. ಸಮಾಧಿಸ್ಥಿತಿಯಲ್ಲಿಯೆ ದೇಹತ್ಯಾಗ ಮಾಡಿ ಶ್ರೀಗುರು ಶ್ರೀಮಾತೆಯರ ಬಳಿಗೆ ಹೋದರು. ಶರೀರ ಹೇಗೆ ಕಳಚಿಬಿದ್ದರೇನಂತೆ ಶಾಸ್ತ್ರವೂ ಹೇಳುತ್ತದೆ – ಬ್ರಹ್ಮಜ್ಞಪುರುಷ ಮೂರ್ಛೆ ಮರೆವುಗಳಲ್ಲಿ ಶರೀರತ್ಯಾಗ ಮಾಡಿದರೂ ಆತನ ಜ್ಞಾನಕ್ಕೆ ಹಾನಿಯಾಗುವುದಿಲ್ಲ. ಆಪೋಪ್ಲೆಕ್ಸಿಯದ ಪ್ರಥಮ ಆಘಾತವಾದಾಗ ಕೆಲವು ದಿನಗಳು ಅವರು ಬಾಹ್ಯಪ್ರಜ್ಞಾಶೂನ್ಯರಾದಂತೆ ತೋರುತ್ತಿದ್ದರು. ಆದರೆ ಅವರ ಅಂತರಪ್ರಜ್ಞೆ ಪೂರ್ಣಜಾಗ್ರತವಾಗಿಯೆ ಇತ್ತು. ಅವರನ್ನು ನೋಡುವುದಕ್ಕೆ ನಾನು ಒಂದೇ ಸಾರಿ ಹೋಗಿದ್ದೆ. ಆಮೇಲೆ ಹೋಗಲಿಲ್ಲ. ಏಕೆಂದರೆ ಆ ದೃಶ್ಯವನ್ನು ನೋಡಲು ನನಗೆ ಮತ್ತೆ ಇಚ್ಛೆಯಾಗಲಿಲ್ಲ.”

“ಸ್ವಾಮಿ ಅಖಂಡಾನಂದರು ‘ದಾದಾ, ದಾದಾ!’ (ಅಣ್ಣಾ, ಅಣ್ಣಾ!) ಎಂದು. ಕರೆದಾಗ ಒಮ್ಮೆ ಕಣ್ಣು ತೆರೆದು ನೋಡಿ ಮತ್ತೆ ಮುಚ್ಚಿಕೊಂಡರು. ಡಾ!! ಘೋಷರು ಅವರನ್ನು ‘ಶರತ್, ಶರತ್!’ ಎಂದು ಹೆಸರು ಹಿಡಿದು ಕರೆದಾಗ ಕಣ್ಣು ತೆರೆದು ನೋಡಿದರು.  ‘ಟೀ ಕುಡಿಯುತ್ತೀರಾ’ ಎಂದು ಕೇಳಿದಾಗ ಬೇಡವೆಂದು ತಲೆಯಲ್ಲಾಡಿಸಿದರು. ಗುರುಚರನಾಮೃತ ತೆಗೆದುಕೊಳ್ಳುತ್ತೀರಾ ಎಂದು ಕೇಳಿದಾಗ ತಲೆದೂಗಿ ತಮ್ಮ ಒಪ್ಪಿಗೆ ಸೂಚಿಸಿದರು, ತೀರ್ಥ ತಂದುಕೊಟ್ಟಾಗ ಕುಡಿದರು.”

ಸ್ವಲ್ಪ ಹೊತ್ತು ಸುಮ್ಮನಿದು ಮತ್ತೆ ಹೇಳಿದರು, ಮಹಾಪುರುಷಜಿ: “ತೀರಿಕೊಳ್ಳುವ ಮುನ್ನ ಕೆಲವು ವರುಷಗಳಿಂದಲೂ ಶರತ್ ಮಹಾರಾಜ್ ತುಂಬಾ ಕಠಿಣವಾದ ಸಾಧನೆ ಭಜನೆ ತಪಸ್ಯೆಗಳಲ್ಲಿ ನಿರತರಾಗಿದ್ದರು. ಬೆಳಿಗ್ಗೆ ಗಂಗೆಯಲ್ಲಿ ಸ್ನಾನಮಾಡಿ ಧ್ಯಾನಕ್ಕೆ ಕುಳಿತುಕೊಂಡರೆ ಅಪರಾಹ್ನ ಒಂದು ಒಂದೂವರೆ ಗಂಟೆ ಹೊಡೆಯುವವರೆಗೂ ಆಸನದಿಂದ ಅಳ್ಳಾಡುತ್ತಿರಲಿಲ್ಲ. ನಡುವೆ ಅತ್ಯಲ್ಪಕಾಲದ ವಿರಾಮಾಂತರಲ್ಲಿ ಧ್ಯಾನಸನದ ಮೇಲೆ ಕುಳಿತೇ ಕೊಂಚ ಟೀ ಕುಡಿಯುತ್ತಿದ್ದರು.”

“ಭಕ್ತರ ಮೇಲೆ ಅವರ ಕೃಪೆ ಬಹಳವಾಗಿತ್ತು. ಅದರಲ್ಲಿಯೂ ವಿಶೇಷವಾಗಿ ಮಹಿಳಾ ಭಕ್ತೆಯರಿಗೆ ಅವರ ಸಾನ್ನಿಧ್ಯ ಒಂದು ಶಾಂತಿಯ ಸ್ವಧಾಮವಾಗಿತ್ತು. ಅಪರಾಹ್ನ ನಾಲ್ಕು ಗಂಟೆಯ ಹೊತ್ತಿಗೆ ಅವರೆಲ್ಲ ಬರಲು ತೊಡಗುತ್ತಿದ್ದರು; ಬೈಗು ಕಪ್ಪಾಗುವವರೆಗೂ ಅವರಿಗೆ ಹಿರೋಪದೇಶಮಾಡುತ್ತಿದ್ದರು. ತರುವಾಯ ಪುರುಷ ಭಕ್ತರ ವೃಂದ ನೆರೆಯುತ್ತಿತ್ತು; ಅವರೊಡನೆಯೂ ರಾತ್ರಿ ಬಹಳ ಹೊತ್ತಿನವರೆಗೆ ಕಾಲ ಕಳೆಯುತ್ತಿದ್ದರು; ಅವ ದಯಾಮಯ ಹೃದಯದ ದ್ವಾರ ಯಾವಾಗಲೂ ತೆರೆದಿರುತ್ತಿತ್ತು. ಆಃ! ಎಂತಹ ಅದ್ಭುತ ಜೀವನ ಅವರದಾಗಿತ್ತು- ಸ್ಥಿರ, ಧೀರ, ಶಾಂತ, ಗಂಭೀರ! ಶರತ್ ಮಹಾರಾಜರು ರಾಗವಶರಾದುದನ್ನು ನಾವೆಂದೂ ನೋಡಿಲ್ಲ. ವಿಶ್ವಾಸ, ಕೃಪೆ ಎರಡೇ ಅದರಲ್ಲಿದ್ದುದು. ಈಗ ಅವರು ಶ್ರೀಗುರು ಮತ್ತು ಶ್ರೀಮಾತೆಯವರಲ್ಲಿ ಮಿಲನವಾಗಿ ಮಹಾನಂದಾನುಭವದಲ್ಲಿದ್ದಾರೆ; ಅಲ್ಲದೆ ಸರ್ವಕ್ಷಣದಲ್ಲಿಯೂ ಭಕ್ತರ ಕಲ್ಯಾಣಕಾಮನೆಯಲ್ಲಿ ಆಸಕ್ತರಾಗಿ ನೆರವು ನೀಡುತ್ತಿದ್ದಾರೆ. ಅವರೂ ಅವರಂತಹ ಇತರರೂ ಯಾವಾಗಲೂ ಶ್ರೀಗುರುವಿನಲ್ಲಿ ಲೀನರಾಗಿರತಕ್ಕವರು; ಎಲ್ಲಿಯೋ ಮಧ್ಯೆ ಒಂದೆರಡು ಕಾಲದ ಮಟ್ಟಿಗೆ, ಜಗತ್ತಿನ ಕಲ್ಯಾಣಕ್ಕಾಗಿ ಲೀಲಾವಿಗ್ರಹಧಾರಣೆಮಾಡಿ ಮನುಷ್ಯರಂತೆ ಬಾಳುತ್ತಾರೆ. ನಿಜವಾಗಿಯೂ ನೋಡಿದರೆ ಶ್ರೀಗುರುವಲ್ಲದೆ ಅವರಿಗೆ ಪೃಥಕ್ ಸತ್ತೆ ಎಂಬುದೇ ಇಲ್ಲ. ಅವರನ್ನು ನೆನೆದರೆ ಶ್ರೀಗುರುವನ್ನು ನೆನೆದಂತೆಯೆ. ಅನೇಕರಿಗೆ ಶ್ರೀರಾಮಕೃಷ್ಣರನ್ನು ನೋಡುವ ಪುಣ್ಯಯೋಗ ಇರಲಿಲ್ಲ. ಬಹುಶಃ ಅವರು ಸ್ವಾಮೀಜಿಯನ್ನೊ ಬ್ರಹ್ಮಾನಂದರನ್ನೊ ಪ್ರೇಮಾನಂದರನ್ನೊ ತುರೀಯಾನಂದರನ್ನೊ ಅಥವಾ ಶಾರದಾನಂದರನ್ನೊ ನೋಡಿರಬಹುದು. ಅಥವಾ ಶ್ರೀರಾಮಕೃಷ್ಣರ ಯಾರಾದರೊಬ್ಬ ಅಂತರಂಗ ಶಿಷ್ಯರನ್ನು ನೋಡಿದ್ದು ಅವರಲ್ಲಿ ಭಕ್ತಿ ಶ್ರದ್ಧೆಗಳಿಂದ ನಡೆದುಕೊಳ್ಳುತ್ತಿರಬಹುದು. ಅಂತಹ ಭಕ್ತಿ ಶ್ರದ್ಧೆ ಏನಿದ್ದರೂ ಅದೆಲ್ಲ ಶ್ರೀಗುರುಚರಣಕ್ಕೇ ಹೋಗಿ ಸೇರುತ್ತದೆ.”

ಆಗಲೆ ರಾತ್ರಿ ಎಂಟುಗಂಟೆಯ ಸಮಯವಾಗಿತ್ತು. ಕೆಲವರು ಭಕ್ತರು ಮಹಾಪುರುಷಜಿಯ ಕೊಠಡಿಗೆ ಬಂದರು. ಅವರಲ್ಲಿ ಒಬ್ಬಾತನು ಬಾರಿಶಾಲ್ ಪ್ರದೇಶದ ನಿವಾಸಿ. ಮಾತು ಅತ್ತ ಇತ್ತ ಹೊರಳ ಬಾರಿಶಾಲಿನ ಅಶ್ವಿನೀಕುಮಾರ ದತ್ತ ಮಹಾಶಯನ ವಿಷಯಕ್ಕೆ ತಿರುಗಿತು. ಸ್ವಾಮೀಜಿ ಹೇಳಿದರು: “ನಿಮ್ಮ ಕಡೆಯ ಪ್ರಾಂತವಾದ ಬಾರಿಶಾಲ್ ಪ್ರದೇಶದಲ್ಲಿ ಅಶ್ವೀನೀಬಾಬು ಅತ್ಯಂತ ಪ್ರಭಾವಶಾಲಿಯಾದ ವ್ಯಕ್ತಿ. ಆತನ ತಂದೆ ವ್ರಜಮೋಹನದತ್ತರು ಶ್ರೀಗುರು ಮಹಾರಾಜರಲ್ಲಿಗೆ ಬರುತ್ತಿದ್ದರು. ಅವರು ಸಬ್ ಜಡ್ಜ್ ಆಗಿದ್ದರು. ಒಂದು ಹೊಸ ಕಾಲೇಜನ್ನು ಸ್ಥಾಪಿಸುವುದಕ್ಕಾಗಿ ಶ್ರೀಗುರು ಆಶೀರ್ವಾದ ಪಡೆಯಲು ಬಂದಿದ್ದರು. ಬಹಳ ಒಳ್ಳೆಯ ಮನುಷ್ಯ.”

ಒಬ್ಬ ಭಕ್ತ: “ಮಹಾರಾಜ್, ಠಾಕೂರರು (ಶ್ರೀ ಗುರುಮಹಾರಾಜ್) ಇಂತಹ ವೈಷಯಿಕ ವ್ಯಾಪಾರಗಳಿಗೂ ಆಶೀರ್ವಾದ ಮಾಡುತ್ತಿದ್ದರೆ?”

ಸ್ವಾಮೀಜಿ: “ಮಾಡದೆ ಇರುತ್ತಿದ್ದರೇ? ಮಾಡಿಯೆ ಮಾಡುತ್ತಿದ್ದರು. ಅವರು ತುಂಬಾ ದಯಾಲು. ಯಾರಾದರಾಗಲಿ ಸದ್ ವ್ಯಾಪಾರದಲ್ಲಿ ಆಸಕ್ತರಾಗಿದ್ದರೆ ಸಾಕು. ಅವರು ಹೃತ್ಪೂರ್ವಕವಾಗಿ ಆಶೀರ್ವಾದ ಮಾಡುತ್ತಿದ್ದರು.”

ಭಕ್ತ: “ಠಾಕೂರರು ದೀಕ್ಷಾದಿಗಳನ್ನೂ ಕೊಡುತ್ತಿದ್ದರೆ?”

ಸ್ವಾಮೀಜಿ: “ಹೌದು. ಕೊಡುತ್ತಿದ್ದರು; ಆದರರೆ ಅತ್ಯಂತ ಅಪೂರ್ವ ಪ್ರಸಂಗಗಳಲ್ಲಿ ಮಾತ್ರ. ಆದರೆ ಅವರ ದೀಕ್ಷಾವಿಧಾನ ಅಸಾಮಾನ್ಯರೂಪದ್ದಾಗಿರುತ್ತಿತ್ತು. ಶಿಷ್ಯನ ಕಿವಿಯಲ್ಲಿ ಮಂತ್ರೋಚ್ಛಾರಣೆ ಮಾಡುವುದು ಮಾತ್ರವೆ ಆಗಿರಲಿಲ್ಲ. ಕೆಲವರಿಗೆ ಸ್ಪರ್ಶಮಾತ್ರದಿಂದ ಚೈತನ್ಯ ಉದ್ಬೋಧನವಾಗುವಂತೆ ಮಾಡುತ್ತಿದ್ದರು; ಕೆಲವರು ನಾಲಗೆಯ ಮೇಲೆ ಬೀಜಮಂತ್ರ ಬರೆದು ಕುಲಕುಂಡಲಿನಿ ಜಾಗ್ರತವಾಗುವಂತೆ ಮಾಡುತ್ತಿದ್ದರು. ಮತ್ತೆ ಕೆಲವರಿಗೆ ಇಚ್ಛಾಶಕ್ತಿಯಿಂದ ಅವರ ಮನಸ್ಸೆ ಪರಿವರ್ತಿತವಾಗುವಂತೆ ಮಾಡುತ್ತಿದ್ದರು. ಅವರು ಸಾಕ್ಷಾತ್ ಜಗದ್ಗುರು ಆಗಿದ್ದುದರಿಂದ ಅವರ ದೀಕ್ಷಾವಿಧಾನವೂ ಅಸಾಧಾರಣವಾಗಿರುತ್ತಿತ್ತು. ‘ಮಾನುಷ  ಗುರು ಕರ್ಣಕ್ಕೆ ದೀಕ್ಷೆಕೊಟ್ಟರೆ ಜಗದ್ಗುರು ಪ್ರಾಣಕ್ಕೆ ದೀಕ್ಷಸೆ ಕೊಡುತ್ತಾನೆ.’ ಅವರೇ ಭಕ್ತಾದಿಗಳ ಅಂತರಂಗದ ಐಶೀಶಕ್ತಿ; ಆದ್ದರಿಂದಲೆ ಅವರುಗಳಲ್ಲಿ ಈಶ್ವರೀಯ ಭಾವವನ್ನು ಉದ್ದೀಪನಗೊಳಿಸಬಲ್ಲವರಾಗಿದ್ದರು. ಅಲ್ಲದೆ ಸಾಧಕರಿಗೆ ಅವರವರ ಅಧಿಕಾರಿ ಭೇದದಂತೆ ಬೇರೆ ಬೇರೆ ರೀತಿಯ ಸಾಧನ ವಿಧಾನಗಳನ್ನು ನಿಯಮಿಸುತ್ತಿದ್ದರು. ಅವರು ಏಕಮುಖ ಏಕನಾದವಾಗಿರಲಿಲ್ಲ. ಪ್ರತಿಯೊಬ್ಬ ಸಾಧಕನೂ ತನ್ನ ಮಾರ್ಗಕ್ಕೆ ಅನುರೂಪವಾದ ಸಹಾಯವನ್ನೆ ಅವರಿಂದ ಪಡೆಯುತ್ತಿದ್ದನು.”

ಗುರುಮಹಾರಾಜರು ಅನೇಕಾನೇಕ ಭಾವಸಾಧನೆಗಳನ್ನು ಏತಕ್ಕೆ ಕೈಕೊಂಡರೆಂಬುದು ನಮಗೀಗ ದಿನ ಕಳೆದಂತೆಲ್ಲಾ ಅರ್ಥವಾಗುತ್ತಿದೆ. ಎಲ್ಲ ಧರ್ಮಗಳೂ ಸತ್ಯ; ಆ ಎಲ್ಲ ಧರ್ಮಗಳೂ ಪರಮಪುರುಷ ಸತ್ಯರೂಪಿ ಶ್ರೀ ಭಗವಂತನಲ್ಲಿಗೇ ನಮ್ಮನ್ನು ಕರೆದೊಯ್ಯುವ ನಾನಾ ಪಥಗಳಾಗಿವೆ-ಸರ್ವ ಧರ್ಮಗಳ ಸಮನ್ವಯವನ್ನು ಕಂಡು ಹಿಡಿದು ಸಾಕ್ಷಾತ್ಕರಿಸಿಕೊಳ್ಳುವ ಸಲುವಾಗಿಯೇ ಅವರು ನಾನಾ ಭಾವಸಾಧನೆಗಳನ್ನು ಕೈಕೊಂಡರೆಂಬುದು ಸತ್ಯವಲ್ಲ. ಅವರ ಸಾಧನೆಗೆ ಅದಕ್ಕಿಂತಲೂ ಗೂಢತರವಾದ ಅರ್ಥವಿದೆ. ಆ ಕಾರಣದಿಂದಲೆ ಹಿಂದೂ ಧರ್ಮದ ಪ್ರತ್ಯೇಕ ಸಂಪ್ರದಾಯಗಳಿಗೆ ಸೇರಿರುವ ಜನರು ಗುರುಮಹಾರಾಜರನ್ನು ತಮ್ಮ ಜೀವನದ ಆದರ್ಶವನ್ನಾಗಿ ಮಾಡಿಕೊಂಡಿದ್ದಾರೆ. ನೂರಾರು ಕ್ರೈಸ್ತರೂ ಅವರನ್ನು ತಮ್ಮ ಇಷ್ಟದೈವ ಯೇಸುಕ್ರಿಸ್ತನೇ ಎಂದು ಪೂಜಿಸುತ್ತಿದ್ದಾರೆ. ಆದರೆ ಒಂದು ವಿಷಯ ಮುಖ್ಯವಾಗಿ ನೆನಪಿನಲ್ಲಿಡಬೇಕು: ಆ ಪೂಜೆಗೆ ಕಾರಣ ಯಾರ ಯಾವ ವಿಧವಾದ ಪ್ರಚಾರೋಪದೇಶವೂ ಅಲ್ಲ. ಶ್ರೀ ರಾಮಕೃಷ್ಣರನ್ನು ಪ್ರಚಾರ ಮಾಡುವಂತಹ ಸಮರ್ಥರು ಯಾರಿದ್ದಾರೆ? ಸತ್ಯಸ್ವರೂಪವನ್ನೆ ಪ್ರಕಾಶಪಡಿಸಬಲ್ಲವರು ಯಾರಿದ್ದಾರೆ? ಗೀತೆಯೂ ಹೇಳುತ್ತದೆ-

ನ ತದ್ ಭಾಸಯುತೇ ಸೂರ್ಯೇ ನ ಶಶಾಂಕೋ ನ ಪಾವಕಃ

‘ಆ ಬ್ರಹ್ಮವನ್ನು ಸೂರ್ಯನೂ ಪ್ರಕಾಶಗೊಳಿಸಲಾರ, ಚಂದ್ರನೂ ಆರ, ಅಗ್ನಿಯೂ ಆರ.’

“ನಿನಗೆ ಆಶ್ಚರ್ಯವಾಗಬಹುದು, ಈಗಿನ ಅನೇಕ ಮುಸಲ್ಮಾನ ಸ್ತ್ರೀ ಪುರುಷರೂ ಗುರುಮಹಾರಾಜರನ್ನು ದೇವರ ದೂತನಾದ ಮಹಮದ್ ಪೈಗಂಬರನೆಂದೇ ಭಾವಿಸಿ ಪೂಜಿಸುತ್ತಿದ್ದಾರೆ. ನಾನು ಒಂದು ಸಾರಿ ನೀಲಗಿರಿಗೆ ಹೋಗಿದ್ದೆ, ಭಕ್ತರು ನನ್ನ ನಿವಾಸಕ್ಕಾಗಿ ಕೂನೂರಿನ ಒಂದು ಬಂಗಲೆಯನ್ನು ಗೊತ್ತುಮಾಡಿದ್ದರು. ನಾನು ಅಲ್ಲಿರುವುದನ್ನು ಕೇಳಿ ಒಬ್ಬ ಮುಸಲ್ಮಾನ ಡಾಕ್ಟರು ಬೊಂಬಾಯಿಯಿಂದ ಸಂಸಾರ ಸಮೇತವಾಗಿ ನನ್ನನ್ನು ನೋಡುವುದಕ್ಕಾಗಿಯೇ ಅಲ್ಲಿಗೆ ಬಂದರು. ವಿಚಾರಿಸಲಾಗಿ ಅವರು ಪ್ರಸಿದ್ಧ ಡಾಕ್ಟರ್ ಎಂದೂ ತಮ್ಮ ವಿದ್ಯಾಭ್ಯಾಸವನ್ನೆಲ್ಲ ಇಂಗ್ಲೆಂಡಿನಲ್ಲಿಯೆ ಮುಗಿಸಿದ್ದರೆಂದೂ ಬೊಂಬಾಯಿಯಲ್ಲಿ ಅವರಿಗೆ ತುಂಬ ಲಾಭದಾಯಕವಾದ ಪ್ರಾಕ್ಟಿಸ್ ಇದೆ ಎಂದೂ ತಿಳಿದುಬಂದಿತು. ಜೊತೆಯಲ್ಲಿ ಆತನ ಹೆಂಡತಿ ಇಬ್ಬರು ಮಕ್ಕಳು ಇದ್ದರು. ನೋಡುವುದಕ್ಕೆ ತುಂಬ ಲಕ್ಷಣವಾಗಿದ್ದರು.”

ಸಂವಾದ ಸಮಯದಲ್ಲಿ ಡಾಕ್ಟರ್ ಹೇಳಿದರು: ‘ನಾವು ತಮ್ಮ ದರ್ಶನ ಮಾಡುವುದಕ್ಕಾಗಿಯೆ ಬಂದಿದ್ದೇವೆ. ಅದರಲ್ಲಿಯೂ ನನ್ನ ಹೆಂಡತಿ ತಮ್ಮೊಡನೆ ಮಾತನಾಡಲು ವಿಶೇಷ ಕಾತರೆಯಾಗಿದ್ದಾಳೆ.’ ಹಾಗೆಂದು ಹೇಳಿ ಆತ ಪಕ್ಕದ ಕೊಠಡಿಗೆ ಹೋದರು. ಆತನ ಹೆಂಡತಿ ತುಂಬ ಭಕ್ತಿಭರದಿಂದ ನನಗೆ ಪ್ರಣಾಮಮಾಡಿ, ತನ್ನ ಆಧ್ಯಾತ್ಮಿಕ ಭಾವಜೀವನದ ಅನೇಕ ಮಾರ್ಮಿಕ ವಿಷಯಗಳನ್ನು ನನಗೆ ಮನಬಿಚ್ಚಿ ಹೇಳಿದಳು. ಬಾಲ್ಯಕಾಲದಿಂದಲೂ ಆಕೆ ಕೃಷ್ಣಭಕ್ತೆಯಂತೆ. ಶ್ರೀಕೃಷ್ಣನನ್ನು ಬಾಲಗೋಪಾಲ ಭಾವದಲ್ಲಿ ಭಜಿಸುತ್ತಿದ್ದು, ಒಮ್ಮೊಮ್ಮೆ ಆತನ ದರ್ಶನವೂ ಲಭಿಸುತ್ತಿತ್ತು. ಶ್ರೀಗುರುಮಹಾರಾಜರ ಜೀವನಚರಿತ್ರೆಯನ್ನು ಓದಿ ಅವರ ವಚನಾಮೃತವನ್ನು ಸವಿದ ಮೇಲೆ ಆಕೆ ಅವರ ಭಕ್ತೆಯಾದಳು. ತನ್ನ ಇಷ್ಟದೇವತೆಯಾದ ಶ್ರೀಕೃಷ್ಣನೆ ಶ್ರೀರಾಮಕೃಷ್ಣ ರೂಪದಿಂದ ಜಗತ್ತಿನಲ್ಲಿ ಅವತಾರ ಮಾಡಿದ್ದಾನೆಂಬುದೆ ಆಕೆಯ ನಂಬುಗೆ.

ಶ್ರೀ ಗುರುವಿನ ಮೇಲೆ ಆಕೆಯ ಭಕ್ತಿ ಅಪಾರವಾಗಿರುವಂತೆ ನನಗೆ ಕಂಡುಬಂದಿತು. ಸಾಧನೆ ಭಜನೆಯಲ್ಲಿಯೂ ಆಕೆ ಮುಂದುವರಿದಿದ್ದಳು. ಠಾಕೂರರೂ ನಾನಾ ರೀತಿಗಳಿಂದ ಆಕೆಯ ಮೇಲೆ ಕೃಪೆ ತೋರಿದ್ದರು. ಬೀಳ್ಕೊಡುವಾಗ ಆಕೆ ಮೊಳಕಾಲೂರಿ  ನಮಸ್ಕರಿಸುತ್ತಾ ‘ನನ್ನ ತಲೆಯ ಮೇಲೆ ಕೈಯಿಟ್ಟು ನನ್ನನ್ನು ಆಶೀರ್ವದಿಸಬೇಕೆಂದು ಪ್ರಾರ್ಥಿಸುತ್ತೇನೆ. ತಾವು ಶ್ರೀರಾಮಕೃಷ್ಣರ ಸಂಗದಿಂದ ಪುನೀತರಾದವರು; ಅವರ ಕೃಪೆಗೆ ಪಾತ್ರರಾದವರು. ಶ್ರೀರಾಮಕೃಷ್ರ ಸ್ಪರ್ಶದಿಂದ ಪವಿತ್ರವಾದ ತಮ್ಮ ಪುಣ್ಯಹಸ್ತವನ್ನು ನನ್ನ ತಲೆಯ ಮೇಲಿಟ್ಟು ಹರಸಬೇಕು’ ಎಂದು ಭಾವತಿಶಯದಿಂದ ಕಂಬನಿಗರೆಯುತ್ತಾ ಬೇಡಿಕೊಂಡರು. ನನ್ನ ಮನಸ್ಸಿನಲ್ಲಿಯೆ ನಾನು ಹೇಳಿಕೊಂಡೆ ‘ಧನ್ಯ ಪ್ರಭೂ! ಧನ್ಯ ನಿನ್ನ ಮಹಿಮೆ! ಯಾರು ತಾನೆ ನಿನ್ನನ್ನು ಅರಿಯಬಲ್ಲರು?’ ಹಾಗೆಯೆ ಶಿವಮಹಿಮ್ನ ಸ್ತೋತ್ರದ ಈ ಪಂಕ್ತಿಗಳನ್ನು ನೆನೆದೆ:

ತವ ತತ್ತ್ವಂ ಜಾನಾಮಿ ಕೀದೃಶೋ-ಸಿ ಮಹೇಶ್ವರ |
ಯಾದೃಶೋ-ಸಿ ಮಹಾದೇವ ತಾದೃಶಾಯ ನಮೋ ನಮಃ ||

‘ಹೇ ಮಹೇಶ್ವರ, ನಿನ್ನ ರೂಪವೇನೋ ತತ್ತ್ವವೇನೋ ಅದನ್ನು ನಾನರಿಯೆ, ಹೇ ಮಹಾದೇವ, ಹೇಗಿರುವೆಯೊ ಹಾಗಿರುವ ನಿನಗೆ ಮತ್ತೆ ಮತ್ತೆ ನಮಸ್ಕಾರ!’

“ನಿಜವಾಗಿಯೂ, ಗುರುಮಹಾರಾಜರ ವಿಚಾರವಾಗಿ ನಾವೂ ಹಾಗೆಯೆ ಹೇಳಬೇಕಾಗುತ್ತದೆ. ಅವರನ್ನು ಅರಿಯುವವರು ಯಾರಿದ್ದಾರೆ? ಮುಸಲ್ಮಾನರಲ್ಲಿ ಶ್ರೀರಾಮಕೃಷ್ಣರ ಭಕ್ತರಾಗಿರುವ ಇನ್ನೂ ಅನೇಕರನ್ನು ನಾನು ಕಂಡಿದ್ದೇನೆ. ಅಂತಹ ಒಬ್ಬರನ್ನು ಕಡಪಾದಲ್ಲಿ ಕಂಡಿದ್ದೆ. ತುಂಬ ಗೌರವ ವ್ಯಕ್ತಿ. ಬ್ರಿಟಿಷ್ ಸರ್ಕಾರ ಆತನಿಗೆ ಖಾನ್ ಬಹದ್ದೂರ್ ಬಿರುದು ಕೊಟ್ಟಿತು. ಆತನು ಇಸ್ಲಾಂ ಮತದ ಸೂಫಿ ಪಂಥಿಯಾಗಿದ್ದರೂ ಶ್ರೀ ಶ್ರೀ ಠಾಕೂರರಲ್ಲಿ ತುಂಬ ಭಕ್ತಿ. ಕಡಪಾದಲ್ಲಿ ಒಂದು ಚಿಕ್ಕ ಶ್ರೀರಾಮಕೃಷ್ಣಾಶ್ರಮವಿದೆ. ಅದರ ಸ್ಥಾಪನೆಗೆ ಕಾರಣರಾಗಿದ್ದವರೆಂದರೆ ಆ ಖಾನ್ ಬಹದ್ದೂರ್, ಮತ್ತು ಅಲ್ಲಿಯ ಸ್ಥಳೀಯ ಕಲೆಕ್ಟರ್ (ಆತನೂ ಮುಸಲ್ಮಾನನೆ) ಮತ್ತು ಇತರ ಭಕ್ತರು. ನಾವೂ ಮೂರು ನಾಲ್ಕು ದಿನ ಅಲ್ಲಿದ್ದೆವು. ಹೆಚ್ಚು ಕಡಿಮೆ ಪ್ರತಿದಿನವೂ ಆ ಖಾನ್ ಬಹದ್ದೂರ್ ಅವರು ಆಶ್ರಮದ ದೇವರ ಮನೆಯ ಒಂದು ಮೂಲೆಯಲ್ಲಿ ಧ್ಯಾನಕ್ಕೆ ಕುಳಿತು ಅತ್ಯಂತ ವಿನಮ್ರಭಕ್ತಿಭಾವದಿಂದ ಪೀಠದ ಮೇಲಿದ್ದ ಭಗವಾನ್ ಶ್ರೀರಾಮಕೃಷ್ಣರ ಚಿತ್ರದ ಕಡೆಗೆ ನೋಡುತ್ತಿದ್ದುದನ್ನು ಕಾಣಬಹುದಾಗಿತ್ತು. ಆತನ ನಂಬಿಕೆ ಪೈಗಂಬರ್ ಮಹಮ್ಮದನೇ ಶ್ರೀರಾಮಕೃಷ್ಣರ ರೂಪದಲ್ಲಿ ಜಗತ್ತಿನ ಕಲ್ಯಾಣಕ್ಕಾಗಿ ಬಂದಿದ್ದಾನೆ ಎಂದು. ಯಾವ ಯಾವ ರೀತಿಯಲ್ಲಿ ಯಾರು ಯಾರಿಗೆ ಶ್ರೀಗುರು ಕೃಪೆ ತೋರಿಸುತ್ತಿದ್ದಾನೆ ಎಂಬುದು ನಮ್ಮ ಬುದ್ಧಿಗೆ ಆಗಮ್ಯ.”

ಒಬ್ಬ ಭಕ್ತರು: “ನಾವಂತೂ, ಮಹಾರಾಜ್, ಸಂಸಾರದಲ್ಲಿ ಆಸಕ್ತರಾಗಿ ಸಿಕ್ಕಿಬಿದ್ದಿದ್ದೇವೆ. ಸಾಧನೆ ಭಜನೆ ಮಾಡುವುದಂತೂ ನಮಗೆ ದೂರದ ಕಥೆಯೇ ಆಗಿದೆ. ಭಗವಂತನ ಸ್ಮರಣ ಮನನಗಳಿಗೂ ನಾವು ಸಮರ್ಥರಾಗಿಲ್ಲ. ನಮ್ಮ ಗತಿ ಏನು?”

ಸ್ವಾಮೀಜಿ: “ಅಯ್ಯಾ, ಸಾಧನೆ ಭಜನೆ ಸಾಧ್ಯವಾಗದಿದ್ದರೆ ಭಗವಂತನ ಸ್ಮರಣ ಮನನಗಳನ್ನಾದರೂ ಮಾಡಿ ಅವನ ಗುಣಗಾನ ಮಾಡಬಹುದಲ್ಲಾ! ಸಂಸಾರವೇನು ನಮಗೆ ಹಗಲಿರುಳೂ ಬಂಧಿಸಿರುತ್ತದೆಯೆ? ಅಷ್ಟು ಅಲ್ಪಸ್ವಲ್ಪವನ್ನೂ ಮಾಡಲೂ ನಿಮಗೆ ಆಗದಿದ್ದರೆ ಏನು ಫಲ ದೊರಕಿತು? ಏನೇ ಆಗಲಿ ಭಗವಂತನ ಮೇಲೆ ಇಷ್ಟವಾದರೂ ಇರಬೇಕು; ಅವನಿಂದ ಆಕರ್ಷಿತರಾಗಬೇಕು. ಅಂತೂ ಇಂತೂ ಎಂತಾದರೂ ಭಗವದ್ಭಕ್ತಿಯನ್ನು ಹೃದಯದಲ್ಲಿ ಮೊಳೆಯಿಸಿಕೊಳ್ಳಬೇಕು. ಭಗವಂತನ ಪರವಾದ ಅಭೀಪ್ಸೆ ಇಲ್ಲದಿದ್ದರೆ ಆಧ್ಯಾತ್ಮಿಕ ಪ್ರಗತಿ ಸಾಧ್ಯವಿಲ್ಲ. ಶ್ರೀ ಠಾಕೂರರು ಹೇಳುತ್ತಿದ್ದರೇನು ಗೊತ್ತೇ ‘ಮಗು ಗೊಂಬೆ ಆಟದಲ್ಲಿ ಮಗ್ನವಾಗಿರುವ ತನಕ ಅದಕ್ಕೆ ತಾಯಿ ನೆನಪು ಆಗುವುದಿಲ್ಲ: ತಾಯಿಯೂ ತನ್ನ ಕೆಲಸದಲ್ಲಿಯೇ ಮುಳುಗಿರುತ್ತಾಳೆ. ಆದರೆ ಮಗುವಿಗೆ ಗೊಂಬೆಯಾಟ ಸಾಕಾಗಿ, ಅದನ್ನು ಬಿಟ್ಟು ಅಮ್ಮಾ ಅಮ್ಮಾ ಎಂದು ಕೂಗಿಕೊಂಡಿತೆಂದರೆ ತಾಯಿ ಒಡನೆಯೆ ಕೆಲಸವೇನಿದ್ದರೂ ಬಿಟ್ಟು ಓಡಿಬಂದು ಎತ್ತಿಕೊಳ್ಳುತ್ತಾಳೆ.’ ನೀವೂ ಸಂಸಾರದ ಗೊಂಬೆಯಾಟದಲ್ಲಿ ಆಸಕ್ತರಾಗಿರುವವರೆಗೆ ದೇವರ ದರ್ಶನ ಪಡೆಯಲು ಸಾಧ್ಯವಿಲ್ಲ. ದುರ್ಲಭವಾದ ಈ ಮನುಷ್ಯಜನ್ಮ ಲಭಿಸಿಯೂ ಅದನ್ನು ಸರಿಯಾಗಿ ಉಪಯೋಗಿಸಿಕೊಂಡು ಧನ್ಯನಾಗದಿದ್ದರೆ ಅದಕ್ಕಿಂತಲೂ ದುರುದೃಷ್ಟ ಮತ್ತೊಂದಿಲ್ಲ. ಇದನ್ನು ಉಪದೇಶಮಾಡಿ ಮನಸ್ಸನ್ನು ಎಚ್ಚರಿಸುವುದಕ್ಕಾಗಿಯೆ ಶ್ರೀಗುರು ಈ ಹಾಡನ್ನು ಆಗಾಗ್ಗೆ ಹೇಳುತ್ತಿದ್ದರು:

‘ಓ ಮನವೆ, ಕೃಷಿಕಾರ್ಯವನು ನೀನರಿಯೆ,
ಪಾಳು ಬಿದ್ದಿದೆ ಉಳುಮೆಯಿಲ್ಲದೆ ಬಗೆಯ ಹೊಲ,
ಉತ್ತಿದ್ದರೆ ಬಿತ್ತಿದ್ದರೆ ಹೊನ್ನ ಪೈರು ರಾಶಿಯಾಗುತ್ತಿತ್ತು;
ಎಂದೆಂದಿಗೂ ಕುಯ್ದು ಪೂರೈಸುವ ಹೊನ್ನ ಪೈರು!
ಓ ನನ್ನ ಮನವೆ, ಹೊಲವನುಳು, ಬೆಳೆಯ ಬೆಳೆ;
ಎದೆಯ ಕಣಜ ತುಂಬಿ ತುಳುಕುವಂತೆ ಅಳೆ, ಪೈರನಳೆ!’

ಭಕ್ತರು: “ಶ್ರೀ ಠಾಕೂರರನ್ನು (ಶ್ರೀ ಪರಮಹಂಸರನ್ನು) ಅರಿಯುವುದು ನಮಗೆ ಅಸದಳ; ಆದರೆ ರಮ್ಮ ಪದತಲದಲ್ಲಿ ಕುಳಿತುಕೊಳ್ಳುವುದೆ ನಮಗೆ ಇಷ್ಟ! ಸ್ವಲ್ಪಕಾಲ ನಿಮ್ಮ ದರ್ಶನ ತೆಗೆದುಕೊಳ್ಳುವುದಕ್ಕೆ ಆಗದಿದ್ದರೆ ನಮ್ಮ ಹೃದಯ ತುಡಿಯುತ್ತದೆ. ಆದ್ದರಿಂದ ಓಡಿ ಬರುತ್ತೇವೆ. ನಿಮ್ಮನ್ನು ಕುರಿತು ಆಗಾಗ್ಗೆ ಆಲೋಚಿಸುತ್ತೇವೆ; ನೋಡಲೂ ಅರಕೆಯಾಗುತ್ತದೆ. ನಮ್ಮಿಂದಾಗುವುದು ಅಷ್ಟೆ.”

ಸ್ವಾಮೀಜಿ: ಶ್ರೀ ಠಾಕೂರರ ಹೊರತೂ ನಮಗೆ ಬೇರೇನೂ ಗೊತ್ತಿಲ್ಲ. ಒಳಗೂ ಹೊರಗೂ ಇರುವವರು ಅವರೇ. ಅವರೇ ಸರ್ವಸ್ವ. ನಾವು ಅವರ ಮಕ್ಕಳು; ಅವರ ಪದತಲವೇ ನಮಗೆ ಪರಮಾಶ್ರಮ ಎಂಬುದನ್ನು ಮರೆಯಬೇಡಿ. ನಮ್ಮನ್ನು ನೆನೆಯುವುದರಿಂದ ಅವರನ್ನೇ ನೆನೆಯುತ್ತೀರಿ.

* * *
* ತೀಕ್ಷ್ಣವಾಯು : ಮೆದುಳಿಗೆ ರಕ್ತ ನುಗ್ಗಿ ನರ ಒಡೆದು ಚಲನಶಕ್ತಿ ಸ್ತಂಭವಾಗುವ ರೋಗ.