ಇಂದು ದೇಲ್ ಪೂರ್ಣಿಮೆ, (ಭೂಮಿಯ ಫಲವತ್ತಿಕೆಯನ್ನುನುತಿಸುವ ಪ್ರಾಚೀನಕಾಲದ ಒಂದು ವಸಂತೋತ್ಸವ ಶ್ರೀಕೃಷ್ಣನ ಕಥೆಯಲ್ಲಿ ಸಂಗಗೊಂಡಿದೆ. ಹೋಳಿ ಹಬ್ಬವೆಂದು ಕರೆಯುತ್ತಾರೆ) ಬೆಳಗಿನಿಂದಲೂ ಕೀರ್ತನೆಯಾಗುತ್ತಿದೆ. ಹೋಳಿ ಉತ್ಸವದಲ್ಲಿ ಭಾಗಿಗಳಾಗಿ ಬೇಲೂರು ಮಠದ ಸಾಧುಗಳೂ ಬ್ರಹ್ಮಚಾರಿಗಳೂ ಇತರ ಭಕ್ತವರ್ಗದವರೂ ಸಂತೋಷಪರವಶರಾಗಿದ್ದಾರೆ, ಕೀರ್ತನೆ ನಡೆಯುತ್ತಿದ್ದಾಗಲೆ ಶ್ರೀರಾಮಕೃಷ್ಣರ ಸಮೀಪ ಬಂಧುವಾದ(ಭ್ರಾತೃಪುತ್ರ) ರಾಮಲಾಲದಾದ ಅವರು ದಕ್ಷೀಣೇಶ್ವರದಿಂದ ಆಗಮಿಸಿದರು. ಅವರನ್ನು ಕಂಡು ಸಕಲರ ಉತ್ಸಾಹವೂ ಒಂದಕ್ಕೆ ನೂರಾಯಿತು. ಅವರೂ ಬಂದವರೆ ಕೀರ್ತನೆಯಲ್ಲಿ ಭಾಗವಹಿಸಿದರು. ಅವರು ಸೀರೆಯುಟ್ಟು ಸ್ತ್ರೀಯಂತೆ ವೇಷ ಹಾಕಿಕೊಂಡು ನೃತ್ಯ ಮಾಡತೊಡಗಿದರು.

ಗಾನ ಹೀಗಿತ್ತು:

ಅರಸಿ ಕಂಡೆವೊ ನಿನ್ನ ನಿಧುವನ ನಿಕುಂಜದಲಿ;
ಹೋಳಿಯೋಕುಳಿ ಯಾಟವಾಡುವೆವೂ ನಿನ್ನೊಡನೆ; ಬಾರಯ್ಯ ಶಾಮ |

ಎಲ್ಲರೂ ರಾಮಲಾಲದಾದರ ಸುತ್ತುವರಿದು ಮಹದಾನಂದದಿ ನೃತ್ಯಮಾಡ ತೊಡಗಿದರು. ಸ್ವಲ್ಪ ಹೊತ್ತಾದ ಮೇಲೆ ರಾಮಲಾಲರು ಸ್ತ್ರೀವೇಷದಲ್ಲಿಯೆ ಉಪ್ಪರಿಗೆ ಏರಿ ಮಹಾಪುರುಷಜಿಯನ್ನು ನೋಡಲು ಹೋದರು. ಮಹಾಪುರುಷಜಿಗೆ ಫಕ್ಕನೆ ಅವರ ಗುರುತೇ ಸಿಗದಂತಾಯಿತು!

ಮಧ್ಯಾಹ್ನಾನಂತರ ಭಕ್ತರೊಬ್ಬರು ತಮ್ಮ ಪುಟ್ಟ ಹುಡುಗನನ್ನು ಮಹಾಪುರುಷಜಿಯ ಬಳಿಗೆ ಕೊಂಡೊಯ್ದು ಅವನಿಂದ ಅವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿಸಿ “ಮಹಾರಾಜ್, ಮಗುವಿಗೆ ಆಶೀರ್ವಾದ ಮಾಡಬೇಕು. ಅವನು ಒಳ್ಳೆಯವನಾಗುವಂತೆ, ಅವನಿಗೆ ಒಳ್ಳೆಯದಾಗುವಂತೆ” ಎಂದು ಬೇಡಿಕೊಂಡರು.

ಸ್ವಾಮೀಜಿ: “ಮೊದಲು ನೀವು ಒಳ್ಳೆಯವರಾಗಿ; ಆಮೇಲೆ ಮಗು ತನಗೆ ತಾನೆ ಒಳ್ಳೆಯವನಾಗುತ್ತಾನೆ.”

ಇನ್ನೇನು ಬೈಗಾಗುವ ಹೊತ್ತು. ಮಹಾಪುರುಷಜಿ ಮಠದ ಚಾವಡಿಯಲ್ಲಿ ತಿರುಗಾಡುತ್ತಿದ್ದರು. ಸಂಜೆಯ ಆರತಿಗೆ ಎಲ್ಲ ಸಿದ್ಧವಾಗುತ್ತಿತ್ತು. ಮಹಾಪುರುಷಜಿ ಹೇಳಿದರು: “ಭೇಷ್, ದಾದ. ಬೆಳಿಗ್ಗೆ ನಿಮ್ಮ ವೇಷ ಬಹಳ ಚೆನ್ನಾಗಿ ನಡೆಯಿತು. ನನಗೆ ಮೊದಲು ಗುರುತೇ ಸಿಕ್ಕಲಿಲ್ಲ. ಯಾರು ಈ ಹೆಂಗಸು ಅಂದುಕೊಂಡಿದ್ದೆ. ಆಮೇಲೆ ಗೊತ್ತಾಯಿತು ರಾಮಲಾಲದಾದ ಎಂದು!”

ಇಬ್ಬರೂ ಚೆನ್ನಾಗಿ ನಕ್ಕುಬಿಟ್ಟರು, “ಇವತ್ತು ಅನೇಕರಿಗೆ ದೀಕ್ಷೆಯ ಆಶೀರ್ವಾದ ಲಭಿಸಿದಂತೆ” ಎಂದರು ರಾಮಲಾಲದಾದ.

ಸ್ವಾಮೀಜಿ: “ಹೌದು, ದಾದ.”

ದಾದ: “ಬಹಳ ಹೊತ್ತು ಒಂದೇ ಸ್ಥಳದಲ್ಲಿ ಹಾಗೆ ಕೂತಿರುವುದು ನಿಮಗೆ ತುಂಬ ಪ್ರಯಾಸಕರವಾಗಿರಬೇಕು ಅಲ್ಲವೆ?”

ಸ್ವಾಮೀಜಿ: “ಅಂತಹ ಹೇಳಿಕೊಳ್ಳುವ ಪ್ರಯಾಸವೇನೂ ಆಗಲಿಲ್ಲ. ಅದಕ್ಕೆ ಬದಲಾಗಿ, ನನಗೇ ತುಂಬ ಸಂತೋಷವಾಯಿತು; ಮಹದಾನಂದವಾಯಿತು – ಶ್ರೀ ಠಾಕೂರರ ನಾಮವನ್ನು ಅನೇಕರ ಕಿವಿಗಳಲ್ಲಿ ಉಚ್ಚರಿಸಿದುದಕ್ಕೆ. ಅವರ ಹೆಸರಿಗಾಗಿ ಎಷ್ಟು ಜನ ಇಲ್ಲಿಗೆ ಬರುತ್ತಾರೆ. ಭಕ್ತಿಭರದಿಂದ ಅವರ ಅಭೀಪ್ಸೆ ವ್ಯಾಕುಲತೆಗಳನ್ನು ನೋಡಿ ನನಗೆ ಸುಮ್ಮನಿರಲಾಗುವುದಿಲ್ಲ. ಶ್ರೀಗುರುದೇವನೇ ಅವರನ್ನು ಇಲ್ಲಿಗೆ ಆಕರ್ಷಿಸುತ್ತಾರೆ. ಎಲ್ಲಿಯವರೆಗೆ ಈ ಶರೀರವಿರುವುದೊ ಅಲ್ಲಿಯವರೆಗೆ ಜನರಿಗೆ ದೇವರ ಕಥೆ ಹೇಳುತ್ತೇನೆ. ದೇವರ ಹೆಸರು ಕೊಡುತ್ತೇನೆ. ಅದಕ್ಕಾಗಿಯೆ ಶ್ರೀ ಠಾಕೂರರು ನನ್ನನ್ನಿಲ್ಲಿ ಉಳಿಸಿರುವುದು.”

ದಾದ: “ನಿಮ್ಮ ಹೃದಯ ದಯಾಮಯ! ಆದಕಾರಣ ಶಾರೀರಿಕ ಕ್ಲೇಶವನ್ನು ಪರಿಗಣಿಸದೆ ಕೃಪೆ ದೋರುತ್ತಿದ್ದೀರಿ.”

ಸ್ವಲ್ಪ ಹೊತ್ತು ಇಬ್ಬರೂ ಸುಮ್ಮನಿದ್ದರು. ತರುವಾಯ ಮಹಾಪುರುಷಜಿ ತುಂಬ ಗಂಭೀರಭಾವದಿಂದ ನಿಧಾನವಾಗಿ ಹೇಳಿದರು: “ಹೌದು, ದಾದ, ದಿನ ಕಳೆದತೆಲ್ಲ ಶ್ರೀಗುರುಮಹಾರಾಜರು ಸಾಕ್ಷಾತ್ ಈಶ್ವರನಲ್ಲದೆ ಬೇರೆಯಲ್ಲ ಎಂಬ ಬುದ್ಧಿ ನನ್ನಲ್ಲಿ ಹೆಚ್ಚು ಹೆಚ್ಚು ಸ್ಥಿರವಾಗುತ್ತಿದೆ. ಮೊದಲಮೊದಲು ನಾವು ಅವರ ವಿಶ್ವಾಸದಿಂದ ಆಕರ್ಷಿತರಾಗಿ ಅವರೆಡೆಗೆ ಮತ್ತೆ ಮತ್ತೆ ಹೋಗುತ್ತಿದ್ದೆವು. ಈಗ ಗೊತ್ತಾಗುತ್ತಿದೆ, ಅವರು ಸಾಧಾರಣ ಮಾನವನಂತೆ ತೋರಿ, ಹಾಗೆಯೆ ವರ್ತಿಸುತ್ತಿದ್ದರೂ ಅವರಲ್ಲಿ ಅನೇಕ ಬ್ರಹ್ಮಾಂಡಗಳೆ ಅಡಗಿವೆ ಎಂಬ ಸತ್ಯ.”

ದಾದ: “ನಾನು ಮೊದಮೊದಲು ಅವರ ವಿಚಾರವಾಗಿ ತಪ್ಪು ಭಾವನೆಯಿಂದಲೆ ಇದ್ದೆ. ಆದರೆ ಒಮ್ಮೊಮ್ಮೆ, ಮಿಂಚಿನಂತೆ, ಅವರ ಮಹತ್ತು ನನ್ನ ಮನಸ್ಸನ್ನು ಬೆಳಗುತ್ತಿತ್ತು: ಮರುಕ್ಷಣವೇ ಮನಸ್ಸು ಮತ್ತೆ ಸಂದೇಹಗ್ರಸ್ತವಾಗಿ ನನ್ನ ತಿಳಿವು ಭ್ರಾಂತಿಯೋ ಏನೋ, ಎಂದು ಆಂದೋಳಿತವಾಗುತ್ತಿತ್ತು. ಒಂದು ದಿನ ಶ್ರೀ ಠಾಕೂರರನ್ನು ಕೇಳಿದೆ ‘ಏತಕ್ಕೆ ಹಾಗಾಗುತ್ತದೆ?’ ಎಂದು. ಅವರು ಹೇಳಿದರು: ‘ಹಾಗಾಗದಿದ್ದರೆ ಸೇವಾಕಾರ್ಯ (ಎಂದರೆ ತಮ್ಮ ಸ್ವಂತ ಸೇವೆ) ನಡೆಯುವುದು ಹೇಗೆ? ದಕ್ಷಿಣೇಶ್ವರ ದೇವಾಲಯದ ಪೂಜೆ ನಡೆಯುವುದು ಹೇಗೆ? ನಿನ್ನ ಮನೆಯವರನ್ನು ನೋಡಿಕೊಳ್ಳುವವರು ಯಾರು?’ ಎಂದು.”

ಸ್ವಾಮೀಜಿ: “ಹೌದು, ಹೌದು! ಹಾಗಲ್ಲದಿದ್ದರೆ ಅವನ ಲೀಲೆ ನಡೆಯಬೇಕಲ್ಲಾ!”

ದಾದಾ: “ಈಗ ಅವರ ಭಕ್ತರ ಸಂಖ್ಯೆ ಹೆಚ್ಚಿದೆ, ಇತ್ತೀಚೆಗೆ ಕೆಲವು ವರ್ಷಗಳಿಂದ ಅವರ ಭಾವಬೋಧೆಗಳು ಎಲ್ಲೆಲ್ಲಿಯೂ ಹರಡುತ್ತಿವೆ! ಯಾವ ಯಾವ ದೇಶಗಳಿಂದಲೋ ಯಾವ ಯಾವ ಭಾಷೆಗಳನ್ನು ಆಡುವವರೋ ಪಂಚವಟಿಗೆ ಬರುತ್ತಾರೆ; ಪೂಜೆ ಸಲ್ಲಿಸುತ್ತಾರೆ. ಅಲ್ಲಿಯ ಮಣ್ಣನ್ನೋ ಅಶ್ವತ್ಥವೃಕ್ಷದ ಎಲೆಯನ್ನೋ ಬಿಲ್ವವೃಕ್ಷದ ಪತ್ರವನ್ನೋ ಪವಿತ್ರ ಸ್ಮಾರಕವಾಗಿ ತೆಗೆದುಕೊಂಡು ಹೋಗುತ್ತಾರೆ.”

ಅಷ್ಟರಲ್ಲಿ ಆರಾತ್ರಿಕ ಪ್ರಾರಂಭವಾಯಿತು. ಸಾಧುಗಳೂ ಭಕ್ತರೂ ‘ಖಂಡನ ಭವಬಂಧನ ಜಗವಂದನ ವಂದಿ ತೋಮಾಯ್’ ಇತ್ಯಾದಿಯಾಗಿ ಸಮಸ್ವರದಲ್ಲಿ ಗಾಯನ ಮಾಡಿದರು.

ಭವಬಂಧನವನು ಖಂಡಿಸುವಾತನೆ,
ಲೋಕವೇ ವಂದಿಸುವಾತನೆ,
ವಂದಿಸುವೆವು ನಿನಗೆ!

ನರರೂಪಧರ ನಿರಂಜನ ನಿರ್ಗುಣ ಗುಣಮಯನೆ,
ವಂದಿಸುವೆವು ನಿನಗೆ!
ಜಗಭೂಷಣ ಚಿದ್ ಘನಕಾಯನೆ, ಅಘದೂಷ ಮೋಚನನೆ,
ಜ್ಞಾನಾಂಜನ ವಿಮಲನಯನ ವೀಕ್ಷಣ ಮಾತ್ರದಿ
ಮೋಹತಿಮಿರವನು ಪರಿಹರಿವಾತನೆ,
ವಂದಿಸುವೆವು ನಿನಗೆ!

ಭಕ್ತಜನ ಭವಸಾಗರ ತಾರಣ ಚರಣ ಯುಗಲ ಭಾಸವರನೆ,
ಹೇ ಯುಗ ಈಶ್ವರ, ಜಗದೀಶ್ವರ, ಯೋಗಸಹಾಯನೆ,
ಪದತಲದಲಿ ಚಿತ್ತವನಿಡೆ ಕೃಪೆದೋರ‍್ಯೆ!

ದುಃಖಾಟವಿ ದವರೂಪನೆ, ಕರ್ಮಕಠೋರನೆ, ಕರುಣಾ ಘನಮೂರ್ತಿ,
ಜಗದುದ್ಧಾರಣ ಪ್ರಾಣಾರ್ಪಣ ಕಾರಣ ಹೇ ಕಲಿ ವಿಧ್ವಂಸನ ಕೀರ್ತಿ;
ಕಾಮಿನಿಕಾಂಚನ ಅತಿನಿಂದಿತ ಇಂದ್ರಿಯ ರಾಗ ವಿದೂರ,
ನಿರ್ಭಯ ಗತಸಂಶಯ ದೃಢ ನಿಶ್ಚಯ ಮಾನಸ ಸಾರ,
ಜಯ ನರವರ, ಹೇ ತ್ಯಾಗೀಶ್ವರ, ವಂದನೆ ಶತವಂದನೆ ಕೃಪೆದೋರ!

ತವ ಪದ ಸಂಪದಕೀ ಭವಸಾಗರವೂ ಗೋಷ್ಟದ ವಾರಿ ಸಮಾನ,
ಭಕ್ತ ಶರಣ ಹೇ ಮುಕ್ತಿ ನಿಷ್ಕಾರಣ ತ್ಯಕ್ತ ಜಾತಿ ಕುಲ ಮಾನ!
ಉಜ್ವಲ ಸ್ವರ್ ಜ್ಯೋತಿರ್ ಜ್ಯೋತಿಯೆ, ಹೃತ್‌ಕಂದರ ಘನ ತಮ ಹಾರಿ,
ನಮೋ ನಮೋ ಹೇ ಗುರುದೇವ ವರೇಣ್ಯ, ಜಗತ್ ಸರ್ವ ಚಿತ್‌ಸಂಚಾರಿ!
ಆರತಿಯಿದೊ ಆರತಿಯಿದೊ ಆರತಿಯಿದೋ ದೇವ!

ಜಯ ಜಯ ಆರತಿ ಇದೊ ದೇವ
ಹರ ಹರ ಆರತಿ ಇದೊ ದೇವ!
ಶಿವ ಶಿವ ಆರತಿ ಇದೊ ದೇವ
ಆರತಿಯಿದೊ ಆರತಿಯಿದೊ ಆರತಿಯಿದೊ ಶ್ರೀಗುರುದೇವ

ದಾದಾ: “ನನಗೆ ಈ ಸ್ತೋತ್ರ ತುಂಬ ಇಷ್ಟ. ಇದನ್ನು ಆಲಿಸಿದಾಗಲೆಲ್ಲಾ ಒಂದು ಚಿತ್ರ ಕಣ್ಣಿಗೆ ಕಟ್ಟುತ್ತದೆ: ಶ್ರೀಗುರುದೇವರು ಸಮಾಧಿಸ್ಥರಾಗಿ ನಿಂತಿದ್ದಾರೆ, ಅವರ ಸುತ್ತಲೂ ಸುತ್ತುತ್ತಾ ಭಕ್ತವೃಂದ ಇದನ್ನು ಹಾಡುತ್ತಿದೆ! ಎಂತಹ ದಿವ್ಯ ಚಿತ್ರ… ಆಗಲಿ, ಮಹಾರಾಜ್, ನಾನೀಗ ಸ್ವಲ್ಪ ದೇವರ ಮನೆಗೆ ಹೋಗುತ್ತೇನೆ.”

ಶ್ರೀ ರಾಮಲಾಲರು ಹೋದಮೇಲೆ ಮಹಾಪುರುಷಜಿ ಹೇಳಿದರು. “ಮೊದಲಮೊದಲು ಮಠದಲ್ಲಿ ಆರತಿ ಸಮಯಕ್ಕೆ ಈ ಸ್ತೋತ್ರ ಹೇಳುತ್ತಿರಲಿಲ್ಲ. ಆಗ ಹಾಡುತ್ತಿದ್ದುದ್ದು ‘ಜಯ ಶಿವ ಓಂಕಾರ್ ಭಜ ಶಿವ ಓಂಕಾರ್’ ಇತ್ಯಾದಿ. ಆಮೇಲೆ ಸ್ವಾಮೀಜಿಯೇ ಈ ಸ್ತೋತ್ರ ರಚಿಸಿ, ಸ್ವರಹಾಕಿ, ಆರತಿ ಸಮಯದಲ್ಲಿ ಹಾಡಲು ಮೊದಲು ಮಾಡಿದರು. ಅವರೇ ಪಕ್ಕವಾದ್ಯವನ್ನೂ ಬಾರಿಸುತ್ತಾ ಸ್ತೋತ್ರವನ್ನು ಪ್ರಾರಂಭಿಸುತ್ತಿದ್ದರು. ಅದೊಂದು ಅದ್ಭುತ ದೃಶ್ಯ! ಅವರದು ಮೊದಲೇ ಸಾಕ್ಷಾತ್ ಭೈರವನಂತಹ ದಿವ್ಯಕಾಂತಿ ಶರೀರ! ಭಾವಾವೇಶದಿಂದ ಸ್ತೋತ್ರ ಮಾಡಲು ತೊಡಗಿದರೆಂದರೆ, ಕೇಳಬೇಕೆ?”

* * *