ಈ ಸಾರಿ ಕಾಶಿಯಿಂದ ಹಿಂತಿರುಗಿ ಬಂದಮೇಲೆ ಮಹಾಪುರುಷಜಿ ಮೈ ಸರಿಯಾಗಿರಲಿಲ್ಲ. ಆಗಾಗ್ಗೆ ತಲೆ ಸುತ್ತುತ್ತಿತ್ತು. ಹೆಚ್ಚಿಗೆ ನಡೆಯಲೂ ಆಗುತ್ತಿರಲಿಲ್ಲ. ನಡೆಯಲ ಯತ್ನಿಸಿದರೆ ಕಾಲು ನಡುಗುತ್ತಿತ್ತು. ಯಾರಾದರೂ ಮೈ ಹೇಗಿದೆ ಎಂದು ವಿಚಾರಿಸಿದರೆ “ಮೈ ಸರಿಯಾಗಿಲ್ಲ. ಒಂದಲ್ಲ ಒಂದು ತೊಂದರೆ ಅದರದ್ದು ಇದ್ದೇ ಇರುತ್ತದೆ. ಇದೆಲ್ಲ ನೋಟೀಸ್! ಸಮನ್ ಜಾರಿಮಾಡುವ ಮೊದಲು ಸೂಚನೆ ಕೊಡುವಂತೆ! ಶರೀರ ಇನ್ನೇನು ಹೆಚ್ಚುಕಾಲ ಇರುವುದಿಲ್ಲ ಎನ್ನುವುದಕ್ಕೆ ಇದೆಲ್ಲ ನೋಟೀಸು! ನಾವು ರೆಡಿ(ready) ಯಾಗಿಯೆ ಇದ್ದೇವೆ. We are ever ready to jump into mother’s lap. (ಅಮ್ಮನ ತೊಡೆಗೆ ನೆಗೆಯುವುದಕ್ಕೆ ನಾವೂ ಸದಾ ಸಿದ್ದರಾಗಿಯೆ ಇದ್ದೇವೆ.) ಶ್ರೀ ಗುರು ಕೃಪೆಯಿಂದ ನಮಗೆ ಚೆನ್ನಾಗಿ ಗೊತ್ತಾಗಿದೆ. ‘ಈ ಶರೀರ ನಾನಲ್ಲ’ ಎಂದು. ಆ ಜ್ಞಾನವನ್ನು ಅವರು ಕರುಣೆದೋರಿ ನಮಗೆ ಪೂರ್ಣಪ್ರಮಾಣದಲ್ಲಿಯೆ ದಯಪಾಲಿಸಿದ್ದಾರೆ.

ದೇಹಿನೋsಸ್ಮಿನ್ ಯಥಾ ದೇಹೇ ಕೌಮಾರಂ ಯೌವನಂ ಜರಾ!!
ತಥಾ ದೇಹಾಂತರಪ್ರಾಪ್ತಿಃ ಧೀರಸ್ತತ್ರನ ಮುಹ್ಯತಿ!! – ಗೀತೆ

“ದೇಹಧಾರಿಯಾದ ಜೀವಾತ್ಮನ ದೇಹಕ್ಕೆ ಬಾಲ್ಯ ಯೌವನ ಮುಪ್ಪುಗಳೊದಗುವಂತೆ ಸಾವು ಎಂದು ಕರೆಯುವ ದೇಹಾಂತರವೂ ಪ್ರಾಪ್ತವಾಗುತ್ತದೆ. ಆತ್ಮಜ್ಞಾನಿ ಅದಕ್ಕಾಗಿ ಮರುಗುವುದಿಲ್ಲ.”

* * *