ಮಹಾಪುರುಷಜಿ ತಮ್ಮ ಕೊಠಡಿಯಲ್ಲಿ ಕುಳಿತುಕೊಂಡು ಮಠದ ಸಂನ್ಯಾಸಿಯೊಬ್ಬರೊಡನೆ ಮಾತುಕತೆಯಾಡುತ್ತಿದ್ದರು. ಕೆಲವರು ಸಾಧುಗಳೂ ಬ್ರಹ್ಮಚಾರಿಗಳೂ ಅಲ್ಲಿದ್ದರು. ಮಾತಿನ ನಡುವೆ ಆ ಸಾಧು ಪ್ರಾಸಂಗಿಕವಾಗಿ ಹೇಳಿದರು: “ಭಾವನೆ (emotion) ಸರ್ವಸ್ವ; ವಿಚಾರ (reason) ದಾರಿಯ ಒಂದಂಶವನ್ನು ಮಾತ್ರ ತೋರಿಸಬಲ್ಲದು. ಸ್ವಾಮಿ ತುರೀಯಾನಂದರೂ ಹೇಳುತ್ತಿದ್ದರು: ‘ಮನುಷ್ಯನನ್ನು ಧರ್ಮಪಥಕ್ಕೆ ಸೆಳೆಯುವುದು ಭಾವವೇ. ಬುದ್ಧಿ (intellect) ಸಾಮಾನ್ಯ ಸಹಾಯವನ್ನು ಮಾತ್ರ ನೀಡಬಲ್ಲದು. ಆದ್ದರಿಂದ ಬುದ್ಧಿಯ ಅಥವಾ ವಿಚಾರದ ಮೂಲಕ ಆಧ್ಯಾತ್ಮವನ್ನು ಅರಿಯುವುದು ಅಸಾಧ್ಯ’ ಎಂದು.

ಸ್ವಾಮೀಜಿ: “ಧರ್ಮವೆಂದರೆ, ಸ್ವಾಮೀಜಿ ಹೇಳಿದಂತೆ ಅನುಭೂತಿಯ ವಸ್ತು Religion is realisation – ಅನುಭೂತಿಯೇ ಧರ್ಮ. ಅದುವರೆಗೆ ಬುದ್ಧಿ ಅಧಿಕಾರ ನಡೆಸುತ್ತದೆ. ಗುರುಮಹಾರಾಜರು ಇದನ್ನು ಒಂದು ನಿದರ್ಶನದಿಂದ ಅದೆಷ್ಟು ಸರಳವಾಗಿ ವಿವರಿಸಿದ್ದಾರೆ. ನೀರು ತುಂಬಿಕೊಳ್ಳುವಾಗ ಕೊಡ ಸದ್ದುಮಾಡುತ್ತದೆ; ತುಂಬಿದ ಮೇಲೆ ಸುಮ್ಮನಾಗುತ್ತದೆ. ಎಷ್ಟು ಸುಂದರ ಉಪಮೆ. ಅವರ ಸಾಮಾನ್ಯವಾದ ಮಾತುಗಳಲ್ಲಿ ಅತ್ಯಂತ ಗಹನವಾದ ವಿಚಾರಗಳು ಅಡಗಿರುತ್ತವೆ. ಉಪನಿಷತ್ತು ಹೇಳುತ್ತದೆ: ‘ನಾಯಮಾತ್ಮಾ ಬಲಹೀನೇನ ಲಭ್ಯಃನ ಮೇಧಯಾ ನ ಬಹುನಾ ಶ್ರುತೇನ’ – ಈ ಆತ್ಮ ಕೇವಲ ಪ್ರವಚನ ಅಥವಾ ಶಾಸ್ತ್ರವ್ಯಾಖ್ಯೆಯಿಂದ ಲಭಿಸತಕ್ಕದ್ದಲ್ಲ. ಮೇಧಾಶಕ್ತಿಯಿಂದಾಗಲಿ ಬಹುವಿಧ ಶಾಸ್ತ್ರಾಧ್ಯಯನದ ಮೂಲಕವಾಗಲಿ ದೊರೆಯಲಾರದು – ಸರಿಯಾದ ಮಾತು. ಮನುಷ್ಯ ತನ್ನ ಕ್ಷುದ್ರ ಬುದ್ಧಿಯಿಂದ ಅದನ್ನು ಹೇಗೆ ಅರಿಯುತ್ತಾನೆ? ಸಾಧ್ಯವಿಲ್ಲ. ಶ್ರೀ ಶ್ರೀ ಠಾಕೂರರೂ ಹಾಡುತ್ತಿದ್ದರು ‘ಕಾಳಿಯನರಿಯಲು ಬಲ್ಲವರಾರು? ಸೋತುವು ಕಣಾ ದರ್ಶನ ಆರು!’ ಎಂದು ಹೀಗೆಂದು ಮಹಾಪುರುಷಜಿ ತನ್ಮಯ ಭಾವದಿಂದ ಆ ಕೀರ್ತನೆಯನ್ನು ಪೂರ್ಣವಾಗಿ ಹಾಡಿದರು. ‘ಮಹಾಕಾಲನಿಗಲ್ಲದೆ ಇತರರಿಗೆ ಆ ತಾಯಿ ಮಹಾಕಾಲಿ ವೇದ್ಯಳೇ?’ ಎಂಬ ಪಂಕ್ತಿಯನ್ನು ಮತ್ತೆ ಮತ್ತೆ ಹಾಡಿದರು.

ಸ್ವಲ್ಪ ಹೊತ್ತಾದ ಮೇಲೆ ನಿದ್ದೆಯಿಂದೇಳುವವರಂತೆ ಎಚ್ಚರಗೊಂಡು ಬುದ್ಧಿಯ ಮೂಲಕ ಮನುಷ್ಯ ಅವ್ಯಕ್ತವನ್ನು ಹೇಗೆ ಅರಿಯುವುದು? ಮಹಾಮಾಯೆ ಕೃಪೆಯಿಂದ ಆವರಣವನ್ನು ಒಂದಿನಿತು ಓಸರಿಸಿದರೆ ಮಾತ್ರ ಅದು ಸಾಧ್ಯ. ಋಗ್ವೇದದ ನಾಸದೀಯ ಸೂಕ್ತದಲ್ಲಿ ಆ ಅವ್ಯಕ್ತಾವಸ್ಥೆ ಬಹು ಸುಂದರವಾಗಿ ವರ್ಣಿತವಾಗಿದೆ:

ನಾಸದಾಸೀನ್ನೋ ಸದಾಸೀತ್ತದಾನಿಂ
ನಾಸೀದ್ರಜೋ ನೋ ವ್ಯೋಮಾ ಪರೋ ಯತ್!
ಕಿಮಾವರೀವಃ ಕುಹ ಕಸ್ಯ ಶರ್ಮನ್
ಅಮ್ಬಃ ಕಿಮಾಸೀದ್ಗಹನಂ ಗಭೀರಮ್!!

“ಅಃ ಎಷ್ಟು ಭವ್ಯವಾಗಿದೆ! ಆ ಮೇಜಿನ ಮೇಲೆ ಈ ಸೂಕ್ತದ ಒಂದು ಪ್ರತಿ ಇದೆ. ನಾನು ಅದನ್ನು ಪದೇ ಪದೇ ಓದುತ್ತೇನೆ. ಅದು ವರ್ಣಿಸುವುದು, ತುಂಬ ಗಂಭೀರವಾದ ಧ್ಯಾನದ ಅವಸ್ಥೆ. ಅದನ್ನೊಮ್ಮೆ ಓದುತ್ತೀಯಾ?”

ಅವರ ಅಪೇಕ್ಷೆಯಂತೆ ಸಂನ್ಯಾಸಿಯೊಬ್ಬರು ಅದನ್ನು ತೆಗೆದುಕೊಂಡು ಓದತೊಡಗಿದರು. ಮಹಾಪುರುಷಜಿಯೂ ಜೊತೆ ಜೊತೆಗೇ ಉಚ್ಚರಿಸುತ್ತಿದ್ದರು.

ನ ಮೃತ್ಯುರಾಸೀದಮೃತಂ ನ ತರ್ಹಿ
ನರಾತ್ಯ್ರಾ ಅಹ್ನ ಅಸೀತ್ ಪ್ರಕೇತಃ!
ಅನೀದವಾತಂ ಸ್ವಧಯಾ ತದೇಕಮ್
ತಸ್ಮಾದ್ಧಾನ್ಯನ್ನ ಪರಃ ಕಿಂ ಚ ನಾಸ!!
ತಮ ಆಸೀತ್ ತಮಸಾ ಗೂಢಮಗ್ರೇ
sಪ್ರಕೇತಂ ಸಲಿಲಂ ಸರ್ವಮಾ ಇದಮ್!
ತುಚ್ಛೇನಾಭ್ವಪಿಹಿತಂ ಯದಾಸೀತ್
ತಪಸಸ್ತನ್ಮಹಿನಾಜಾಯತೈಕಮ್!!
ಕಾಮಸ್ತದಗ್ರೇ ಸಮವರ‍್ತತಾಧಿ
ಮನಸೋ ರೇತಃ ಪ್ರಥಮಂ ಯದಾಸೀತ್!
ಸತೋ ಬಂಧುಮಸತಿ ನಿರವಿಂದನ್
ಹೃದಿ ಪ್ರತೀಷ್ಯಾ ಕವಯೋ ಮನೀಷಾ!!
ತಿರಶ್ಚೀನೋ ವಿತತೋ ರಶ್ಮಿ ರೇಷಾಮ್
ಅಧಃ ಸ್ವಿದಾಸೀದುಪರಿ ಸ್ವಿದಾಸೀತ್!
ರೇತೋದಾ ಆಸನ್ ಮಹಿಮಾನ ಆಸನ್
ಸ್ವಧಾ ಅವಸ್ತಾತ್ ಪ್ರಯತಿಃ ಪರಸ್ತಾತ್!!
ಕೋ ಅದ್ದಾ ವೇದ ಕ ಇಹ ಪ್ರವೋಚತ್
ಕುತ ಆಜಾತ ಕತ ಇಯಂ ವಿಸೃಷ್ಟಿಃ!
ಆರ್ವಾಗ್ದೇವಾ ಅಸ್ಯ ವಿಸರ್ಜನೇನ
ಅಥಾ ಕೋ ವೇದ ಯತ ಆಬಭೂವ
ಇಯಂ ವಿಸೃಷ್ಟರ್ಯತ ಆಬಭೂವ
ಯದಿ ವಾ ದಧೇ ಯದಿ ವಾ ನ!
ಯೋ ಅಸ್ಯಾಧ್ಯಕ್ಷಃ ಪರಮೇ ವ್ಯೋಮನ್
ಸೋ ಅಙ್ಗ ವೇದ ಯದಿ ವಾ ನ ವೇದ!!

ಸೂಕ್ತದ ಪಠನ ಪೂರೈಸಿತು. ಅಲ್ಲಿದ್ದವರೆಲ್ಲರ ಪ್ರಾಣ ಸಮಸ್ತವೂ ಒಂದು ಅಲೌಕಿಕ ಶಾಂತ ಗಾಂಭೀರ್ಯದಲ್ಲಿ ಪರಿಪೂರ್ಣವಾಯಿತು. ಸ್ವಲ್ಪ ಹೊತ್ತಾದ ಮೇಲೆ ಮಹಾಪುರುಷಜಿ ಸೂಕ್ತದ ವಂಗಾನುವಾದವನ್ನು ಓದಲು ಹೇಳಿದರು. ಅದನ್ನು ಓದಲಾಯಿತು:

ತತ್ಕಾಲದಲ್ಲಿ, ಯಾವುದು ಇಲ್ಲವೊ ಅದೂ ಇರಲಿಲ್ಲ. ಯಾವುದು ಇದೆಯೊ ಅದೂ ಇರಲಿಲ್ಲ. ಪೃಥಿವಿಯೂ ಇರಲಿಲ್ಲ, ಅತಿ ದೂರ ವಿಸ್ತಾರದ ಆಕಾಶವೂ ಇರಲಿಲ್ಲ. ಇದನ್ನೆಲ್ಲ ಆವರಿಸಿಕೊಂಡು ಇದ್ದುದಾದರೂ ಏನು? ಆವರಿಸಿಕೊಂಡಿದ್ದುದಾದರೂ ಯಾವುದು? ಏನನ್ನಾವರಿಸಿಕೊಂಡಿತ್ತು? ಗಹನವೂ ಗಂಭೀರವೂ ಆದ ನೀರು ಇದ್ದೀತ್ತೇ?

ಆಗ ಮೃತ್ಯುವೂ ಇರಲಿಲ್ಲ; ಅಮರತ್ವವೂ ಇರಲಿಲ್ಲ. ಇರುಳು ಹಗಲುಗಳ ಪ್ರಭೇದವೂ ಇರಲಿಲ್ಲ. ಕೇವಲ ಆ ಏಕಮಾತ್ರ ವಸ್ತು. ವಾಯುಸಹಕಾರಿತಾ ವ್ಯತಿರೇಕವಾಗಿ, ಆತ್ಮಮಾತ್ರ ಅವಲಂಭನಕ್ಕೋಸುಗ ನಿಶ್ವಾಸ ಪ್ರಶ್ವಾಸಯುಕ್ತವಾಗಿ ಜೀವಿತವಾಗಿತ್ತು. ಅದಲ್ಲದೆ ಮತ್ತೆ ಬೇರೇನೂ ಇರಲಿಲ್ಲ.

ಮೊತ್ತಮೊದಲು ಕತ್ತಲೆಯ ಗರ್ಭದಲ್ಲಿ ಕತ್ತಲೆ ಹುದುಗಿತ್ತು. ಸಮಸ್ತವೂ ಚಿಹ್ನವರ್ಜಿತವಾಗಿತ್ತು; ಚತುರ್ದಿಕ್ಕೂ ಜಲಮಯವಾಗಿತ್ತು; ಎಲ್ಲವೂ ಅವಿದ್ಯಾರೂಪವಾದ ಅಂಧಕಾರದಲ್ಲಿ ಅಂತರ್ಹಿತವಾಗಿತ್ತು. ತಪಸ್ಸಿನ ಪ್ರಭಾವದಿಂದ ಆ ಏಕವಸ್ತು ಅಭಿವ್ಯಕ್ತವಾಯಿತು:

ಮನಸ್ಸಿನ ಮೂಲ ಬೀಜ ಸ್ವರೂಪವಾದ ಅದು ಮೊದಲು ಕಾಮದಂತೆ ತನ್ನಲ್ಲಿ ತಾನು ಚಲಿಸಿತು. ಋತುದರ್ಶಿಗಳಾದ ಕವಿಗಳು ಅಸತ್ತಿನಲ್ಲಿ ಸತ್ತಿನ ಪ್ರಭವವಾಗುವುದನ್ನು ಹೃದಯದಿಂದ ಅನುಭವಿಸಿ ಬುದ್ಧಿಯಿಂದ ಆಲೋಚಿಸಿದರು.

“ಅವರ ಪ್ರಜಾರಶ್ಮಿ ಮಧ್ಯಲೋಕವನ್ನೆಲ್ಲ ವ್ಯಾಪಿಸಿತ್ತು, ಆದರೆ ಅಧೋಲೋಕದಲ್ಲಿ ಏನಿತ್ತು? ಊರ್ಧ್ವಲೋಕದಲ್ಲಿ ಏನಿತ್ತು? ಸೃಷ್ಟಿ ಶಕ್ತಿಗಳಿದ್ದುವು; ಸೃಷ್ಟಿಯ ಮಹಾಚಿದ್ರೂಪಗಳಿದ್ದುವು. ಸೃಷ್ಟಿ ಪ್ರೇರಕವಾದ ಸ್ವಧೆ ಹಿಂದೆಯಿತ್ತು; ಸೃಷ್ಟಿಯನ್ನು ಆಕರ್ಷಿಸುವ ಪ್ರಯತಿ ಮುಂದೆಯಿತ್ತು.

“ಯಾರು ಬಲ್ಲರು ಆ ರಹಸ್ಯವೆ? ಎಲ್ಲಿಂದ ಬಂದುದೀ ಸೃಷ್ಟಿ? ಯಾರಿಂದ ಹೊಮ್ಮಿತೀ ಸೃಷ್ಟಿ? ಸೃಷ್ಟಿಯ ತರುವಾಯದ ಕಾರ್ಯಗಳಾಗಿ ಮೂಡಿದರಲ್ಲವೆ ದೇವತೆಗಳು? ಆದ್ದರಿಂದ ಯಾರು ಬಲ್ಲರು ಅದರ ಆದಿ ಎಲ್ಲಿಂದೆಂದು?

“ಎತ್ತಣಿಂದಾದುದೀ ವಿಸೃಷ್ಟಿ? ಅವನಿಂದಲೆ ಬಂದುದೊ ಮೇಣ್ ಅವನಿಂದಲ್ಲವೊ? ಆರು ಆ ಪರಮವ್ಯೋಮದ ಅಧ್ಯಕ್ಷನೊ ಅವನಿಗೆ ಮಾತ್ರವೆ ಅದು ಗೊತ್ತು: ಅಥವಾ ಅನಿಗೂ ಅದು ಗೊತ್ತಿಲ್ಲವೊ ಏನೋ!”

ಅನುವಾದದ ಪಠನ ಪೂರೈಸಿದ ಮೇಲೆ ಮಹಾಪುರುಷಜಿ ಹೇಳಿದರು: “ನೋಡಿ, ಇದೆಲ್ಲ ಅತಿ ಮಹೋನ್ನತ ಅವಸ್ಥೆಯ ವರ್ಣನೆ. ಯೋಗಿಗಳಿಗೆ ಧ್ಯಾನಾವಗಾಹಿತ ಚಿತ್ತದಲ್ಲಿ ಈ ಅವಸ್ಥೆ ಗೋಚರವಾಗುತ್ತದೆ. ಸಾಧಾರಣ ಮನೋವಾಕ್ಕುಗಳಿಗೆ ಅತೀತವಾದ ಅವಸ್ಥೆಯ ವರ್ಣನೆ ಅದು. ಸ್ವಾಮೀಜಿ (ವಿವೇಕಾನಂದರು) ಈ ನಾಸದೀಯ ಸೂಕ್ತವನ್ನು ತುಂಬ ಸೊಗಸಾಗಿ ಘೋಷಿಸುತ್ತಿದ್ದರು. ಅವರು ವೈದಿಕ ಛಂದಸ್ಸಿನಲ್ಲಿ ಸ್ವರ ಹಾಕಿ ಉಚ್ಚರಿಸುತ್ತಿದ್ದರೆ ಸಾಕ್ಷಾತ್ ವೈದಿಕಮೂರ್ತಿಯೇ ತನ್ನ ಅನುಭವವನ್ನು ಮಂತ್ರರೂಪದಲ್ಲಿ ಘೋಷಿಸುತ್ತಿರುವಂತೆ ಭಾಸವಾಗುತ್ತಿತ್ತು.

ತಮ ಆಸೀತ್ ತಮಸಾ ಗೂಢಮಗ್ರೇ-
sಪ್ರಕೇತಂ ಸಲಿಲಂ ಸರ್ವಮಾ ಇದಮ್!

ಸೂಕ್ತದ ಈ ಭಾಗವನ್ನು ಪುನಃ ಪುನಃ ಉಚ್ಚರಿಸುತ್ತಾ ಸ್ವಾಮೀಜಿ ಹೇಳುತ್ತಿದ್ದರು ‘ಎಲ್ಲಿಯೂ ಯಾವ ಸಾಹಿತ್ಯದಲ್ಲಿಯೂ ಇಂತಹ ಕಾವ್ಯ ಸೌಂದರ್ಯ ಪ್ರಕಟವಾಗಿಲ್ಲ’ ಎಂದು. ಅವರ ಬರವಣಿಗೆಯಲ್ಲಿಯೂ ಈ ಅಭಿಪ್ರಾಯವನ್ನು ಒಂದು ಕಡೆ ಬಹಳ ಚೆನ್ನಾಗಿ ವ್ಯಕ್ತಪಡಿಸಿದ್ದಾರೆ.”

ಸಾಧು: “ಹೌದು, ಮಹಾರಾಜ್, ‘ವೀರವಾಣಿ’*ಯಲ್ಲಿ.”

ಅಂಧಕಾರ ಉಗ್ರದಲ್ಲಿ ಅಂಧಕಾರವಿತ್ತು;
ಹುಹಂಕರಿಸಿ ಪ್ರಲಯವಾಯು ಶ್ವಾಸವಾಡುತ್ತಿತ್ತು!

ಸ್ವಾಮೀಜಿ: “ಆಃ! ಎಂತಹ ಸುಂದರ ಭಾವಪ್ರಕಾಶ – ‘ಅಂಧಕಾರ ಉಗ್ರದಲ್ಲಿ ಅಂಧಕಾರವಿತ್ತು!’ ಇವೆಲ್ಲವೂ ಪ್ರಲಯಾವಸ್ಥೆಯ ವರ್ಣನೆ, ಆ ಅವ್ಯಕ್ತ ಅವಸ್ಥೆಯಿಂದಲೆ ಕ್ರಮ ಕ್ರಮವಾಗಿ ಈ ವ್ಯಕ್ತ ಸಂಭವಿಸುತ್ತದೆ.”

* * *

ದೇಹೋsಹಮಿತ್ಯೇವ ಜಡಸ್ಯ ಬುದ್ಧಿಃ!
ದೇಹೋ ಚ ಜೀವೇ ವಿದುಷಸ್ತ್ವಹಂ ಧೀಃ!!
ವಿವೇಕ ವಿಜ್ಞಾನವತೋ ಮಹಾತ್ಮನೋ!
ಬ್ರಹ್ಮಾಹಮಿತ್ಯೇವ ಮತಿಃ ಸದಾತ್ಮನಿ!! -ಶಂಕರಾಚಾರ್ಯ

ಜಡಮತಿಯಾದವನು ಹೇಳುತ್ತಾನೆ “ದೇಹವೆ ನಾನು.” ತಿಳಿದವನು “ದೇಹದಲ್ಲಿ ಜೀವವಾಗಿದ್ದಾನೆ” ಎನ್ನುತ್ತಾನೆ, ವಿವೇಕ ವಿಜ್ಞಾನವಂತನಾದ ಮಹಾತ್ಮನಾದರೋ “ಬ್ರಹ್ಮವೆ ತಾನು” ಎಂದರಿಯುತ್ತಾನೆ.

* * ** ಸ್ವಾಮಿ ವಿವೇಕಾನಂದರ ಕವನ ಸಂಗ್ರಹ.