ಸಂಜೆ ಸುಮಾರು ಐದುವರೆ ಗಂಟೆ. ಮಹಾಪುರುಷಜಿ ಬೇಲೂರು ಮಠದ ಮುಖ್ಯ ಮಂದಿರದ ಪೂರ್ವ ದಿಕ್ಕಿನ ವರಾಂಡದಲ್ಲಿ ಕುಳಿತಿದ್ದರು. ಚಳಿಗಾಲವಾದ್ದರಿಂದ ಒಂದು ತೆಳ್ಳನೆಯ ಫ್ಲಾನಲ್ ಜಾಕೆಟನ್ನು ಮೈಗೆ ತೊಟ್ಟುಕೊಂಡಿದ್ದರು. ರಕ್ತದ ಒತ್ತಡ(ಬ್ಲಡ್ ಪ್ರೆಷರ್) ದೆಸೆಯಿಂದ ದಪ್ಪ ಬಟ್ಟೆ ಹಾಕಿಕೊಳ್ಳುತ್ತಿರಲಿಲ್ಲ. ರಾತ್ರಿ ಕೂಡ ತುಂಬ ತೆಳ್ಳನೆಯ ಬಟ್ಟೆ ಹೊದ್ದು ಕೊಳ್ಳುತ್ತಿದ್ದರು.

ಕೆಲವು ಜನ ಯುವಭಕ್ತರು ದರ್ಶನಾರ್ಥವಾಗಿ ಬಂದರು. ಅವರೆಲ್ಲರೂ ಒಂದು ಶಾಲೆಯಲ್ಲಿ ಉಪಾಧ್ಯಾಯ ವೃತ್ತಿಯನ್ನು ಅವಲಂಬಿಸಿದವರಾಗಿದ್ದರು. ಸಾಷ್ಟಾಂಗ ಪ್ರಣಾಮಮಾಡಿದ ಮೇಲೆ ಎಲ್ಲರೂ ಕುಳಿತುಕೊಂಡರು. ಕುಶಲ ಪ್ರಶ್ನೆ ಕೇಳಿದ ತರುವಾಯ ಸ್ವಾಮೀಜಿ ಅವರು ವಿದ್ಯಾಲಯದ ವಿಚಾರವಾಗಿ ಅನೇಕ ಪ್ರಶ್ನೆಗಳನ್ನು ಹಾಕಿದರು, ಪಾಠ ಪ್ರವಚನ ಹೇಗೆ ನಡೆಯುತ್ತಿವೆ? ಆಟಗಳಿಗೆ ಸರಿಯಾದ ವ್ಯವಸ್ಥೆಮಾಡಲಾಗಿದೆಯೆ? ಇತ್ಯಾದಿ. ತರುವಾಯ ಸ್ವಲ್ಪ ಹೊತ್ತು ಅಂತರ್ಮುಖಿಯಾದಂತೆ ಸುಮ್ಮನೆ ಕುಳಿತರು. ಕೆಲವೊಮ್ಮೆ ಗಂಗಾನದಿಯ ವಿಶಾಲ ಜಲ ವೃಕ್ಷದ ಕಡೆಗೆ ಬಿಡುಗಣ್ಣಾಗಿ ನೋಡುತ್ತಿದ್ದರು. ಸ್ವಲ್ಪ ಹೊತ್ತಿನ ಮೇಲೆ ಮೆಲ್ಲನೆ ಕೇಳಿದರು: “ನೀವೆಲ್ಲರೂ ದಿನವೂ ಸ್ವಲ್ಪ ಕಾಲವನ್ನಾದರೂ ಜಪಧ್ಯಾನಗಳಲ್ಲಿ ಕಳೆಯುತ್ತೀರಲ್ಲವೆ?”

ಒಬ್ಬ ಭಕ್ತರು: “ಹೌದು. ಕಳೆಯುತ್ತೇನೆ.”

ಸ್ವಾಮೀಜಿ: “ಯಾವಾಗ? ಎಷ್ಟು ಹೊತ್ತಿನಲ್ಲಿ?”

ಭಕ್ತರು: “ಮಧ್ಯಾಹ್ನಾನಂತರ ಶಾಲೆಯ ಕೆಲಸದ ತರುವಾಯ ಸ್ವಲ್ಪ ವಿಶ್ವಾಂತಿ ತೆಗೆದುಕೊಂಡು ಆಮೇಲೆ ದೇವರ ಮನೆಗೆ ಹೋಗಿ ಸ್ವಲ್ಪಕಾಲ ಧ್ಯಾನ ಮಾಡುತ್ತೇನೆ ಪ್ರಾತಃಕಾಲವೂ ಅಷ್ಟೇನೂ ಕೆಲಸವಿಲ್ಲದಿರುವಾಗ ಮಾತ್ರ ಸ್ವಲ್ಪ ಕಾಲ ಧ್ಯಾನಮಾಡುವುದುಂಟು. ಬೆಳಿಗ್ಗೆ ಧ್ಯಾನಕ್ಕೆ ಸಮಯ ಸಿಕ್ಕದಿದ್ದರೆ ಶಾಲೆಗೆ ಹೊರಡುವ ಮುನ್ನ ದೇವರಿಗೆ ಪ್ರಣಾಮವನ್ನಾದರೂ ನಿವೇದಿಸಿ ಹೊರಡುತ್ತೇನೆ.”

ಸ್ವಾಮೀಜಿ: “ಪ್ರಣಾಮ ಸಲ್ಲಿಸಬೇಕು. ಸರಿ, ಆದರೆ ಅಷ್ಟೇ ಸಾಲದು. ಸ್ವಲ್ಪ ಕಾಲವಾದರೂ ಧ್ಯಾನಮಾಡಲು ಪ್ರಯತ್ನಿಸಬೇಕು. ರಾತ್ರಿಯೆ ಧ್ಯಾನಜಪಗಳಿಗೆ ಪ್ರಶಸ್ತ ಸಮಯ. ಧ್ಯಾನ ಮಾಡುವಾಗ, ಎಷ್ಟು ಸ್ವಲ್ಪವೆ ಕಾಲವಾದರೂ ಚಿಂತೆಯಿಲ್ಲ, ಮನಸ್ಸನ್ನು ಸಂಪೂರ್ಣವಾಗಿ ಕೆಲಸಕರ್ಮಗಳಿಂದ ಪ್ರತ್ಯೇಕಿಸಿ ನಿರ್ಲಿಪ್ತವನ್ನಾಗಿ ಮಾಡಿಕೊಳ್ಳಬೇಕು. ಕೆಲಸಕಾರ್ಯ, ಸಂಸಾರದ ಸುಖದುಃಖ ಎಲ್ಲದರಿಂದಲೂ ಮನಸ್ಸನ್ನು ಹಿಂದಕ್ಕೆ ಸೆಳೆದು ಆತ್ಮದಲ್ಲಿ ಮಾತ್ರ ಅದು ನೆಲಸುವಂತೆ ಮಾಡಬೇಕು. ದಿನಕ್ಕೊಮ್ಮೆಯಾದರೂ ಈ ಸಾಧನೆಯನ್ನು ಕೈಕೊಳ್ಳಬೇಕು. ಎಷ್ಟು ಅಲ್ಪಾವಕಾಶವಿದ್ದರೂ ಚಿಂತೆಯಿಲ್ಲ. ಸಂಸಾರದಲ್ಲಿ ಸುಖದುಃಖ, ಕೆಲಸ ಕಾರ್ಯ, ಕರ್ಮ ಕರ್ತವ್ಯ ಇವು ಇದ್ದೇ ಇರುವುದು ಸ್ವಾಭಾವಿಕ. ಆದರೆ ಅವೆಲ್ಲ ಅನಿತ್ಯ; ಎರಡು ದಿನದ ಆಟ-ಅದಕ್ಕಿಂತಲೂ ನಿಶ್ಚಿತವಾದದ್ದು ಬೇರೊಂದಿಲ್ಲ.”

ನೀವು ಮಾಡುತ್ತಿರುವ ಕೆಲಸವೇನೊ ಒಳ್ಳೆಯ ಕೆಲಸವೆ. ಆದರೂ ಇಂತಹ ಕೆಲಸದಿಂದಲೂ ನಿಮ್ಮ ಮನಸ್ಸನ್ನು ಹಿಂದಕ್ಕೆ ಸೆಳೆದು ಅದನ್ನು ಭಗವಂತನ ಶ್ರೀಪಾದಪದ್ಮದಲ್ಲಿ ಅರ್ಪಣಮಾಡಬೇಕು. ಪರಮಪಿತನಾದ ಪರಮೇಶ್ವರನ ಮಂಗಳಮಯರೂಪದಲ್ಲಿ ಮನಸ್ಸು ಮುಳುಗುವಂತೆ ಮಾಡಬೇಕು. ಆಗಲೀಗ ಭಗವಂತನು ನಿಮ್ಮ ಹೃದಯವನ್ನು ಸಂಪೂರ್ಣವಾಗಿ ಆಕ್ರಮಿಸಿ ಅಲ್ಲಿ ನಿತ್ಯವಾಸಿಯಾಗುತ್ತಾನೆ. ಜೀವ ಜಗತ್ತಿನ ಯಾವ ಭಾವವೂ ಅಲ್ಲಿರುವುದಿಲ್ಲ. ಕಡೆಗೆ ನಾನು ಎಂಬುದು ಕೂಡ ಅಳಿಸಿಹೋಗುತ್ತದೆ. ಹೀಗೆಂದು ಪ್ರಾರ್ಥಿಸಿ: ‘ಹೇ ಪ್ರಭೂ, ನನಗೆ ಭಕ್ತಿ ವಿಶ್ವಾಸಗಳನ್ನು ನೀಡು. ಜ್ಞಾನವನ್ನು ದಯಪಾಲಿಸು, ವಿವೇಕವನ್ನು ಕೊಡು; ನಿನ್ನ ಭುವನಮೋಹಿನಿಯಾದ ಮಾಯೆಯಿಂದ ಮುಗ್ಧನಾಗದಂತೆ ಅನುಗ್ರಹಿಸು.’ ಪ್ರಾಣಭರವಾಗಿ ಈ ಪ್ರಾರ್ಥನೆ ಮಾಡಬೇಕು. ಅಲ್ಲದೆ ಧ್ಯಾನಮಾಡುವಾಗ ಭಗವಂತನೊಡನೆ ಐಕ್ಯಭಾವವನ್ನೂ ಅಭೇದ ಬೋಧವನ್ನೂ ಅನುಸಂಧಾನಮಾಡಲು ಅಭ್ಯಾಸಮಾಡಬೇಕು, ಸರ್ವವಿಧದಿಂದಲೂ ಇಂತಹ ಸಾಧನೆಯನ್ನೇ ಕೈಕೊಳ್ಳಬೇಕು.

“ವತ್ಸರಿರಾ, ನಿಮಗೆ ಮತ್ತೆ ಮತ್ತೆ ಹೇಳುತ್ತೇನೆ: ದಿನದ ಕೊನೆಯಲ್ಲಿ ಎಷ್ಟು ಹೊತ್ತು ಸಾಧ್ಯವೊ ಅಷ್ಟು ಹೊತ್ತು, ಉಳಿದೆಲ್ಲವನ್ನೂ ಮರೆತುಬಿಟ್ಟು ಭಗವಂತನ ಸಂಗದಲ್ಲಿ ಒಂದಾಗಲು ಯತ್ನಿಸಬೇಕು. ಆತನ ದಿವ್ಯ ಸಾನಿಧ್ಯ ಸಾಧನೆ ಮಾಡಬೇಕು. ಮೊದ ಮೊದಲು ಈ ಸಾಧನೆ ಮಾಡಬೇಕು. ಮೊದ ಮೊದಲು ಈ ಸಾಧನೆ ಸ್ವಲ್ಪ ಕಷ್ಟವಾಗಿ ತೋರಬಹುದು; ಆಮೇಲೆ ಹಾಗಾಗುವುದಿಲ್ಲ. ಎಂತಾದರೂ ಸಾಧನೆಯನ್ನು ನಿಲ್ಲಿಸಬಾರದು. ಮನಃಪೂರ್ವಕ ಪ್ರಾರ್ಥನೆಮಾಡಿ; ಅವನೇ ನಿಮಗೆ ಶಾಂತಿಯನ್ನು ದಯಪಾಲಿಸುತ್ತಾನೆ. ಅವನೇ ಕೃಪೆಯಿಂದ ನಿಮ್ಮ ಮನಕ್ಕೆ ಬಲವನ್ನು ಕೊಡುತ್ತಾನೆ. ಅವನ ಸಂಗದಲ್ಲಿ ಒಂದಾಗುವಂತೆ ಅನುಗ್ರಹಿಸುತ್ತಾನೆ. ಧ್ಯಾನ ಮಾಡುತ್ತಾ ಮಾಡುತ್ತಾ ಮನಶ್ಯಾಂತಿ ಹೆಚ್ಚುತ್ತದೆ. ಆವಾಗಲೇ ನಿಮ್ಮಿಂದ ನಿಜವಾದ ಲೋಕ ಹಿತಕರ ಕಾರ್ಯ ಸಾಧ್ಯವಾಗುವುದು. ಈ ಜಗತ್ತು, ಇಲ್ಲಿಯ ಜೀವರಾಶಿಗಳು ಎಲ್ಲವೂ ಅವನದೆಂದು ಅರಿಯಿರಿ. ಅದರಲ್ಲಿ ಅನುಮಾನ ಬೇಡ. ಅವನೇ ಕರ್ತ, ನೀವು ಅವನ ದಾಸರು. ಅವನು ಕೃಪೆಯಿಟ್ಟು ನಿಮ್ಮಿಂದ ಅವನ ಜೀವರಾಶಿಗಳಿಗೆ ಎಷ್ಟು ಸೇವೆ ಸಲ್ಲುವಂತೆ ಮಾಡಿದರೆ ಅಷ್ಟು ಮಾತ್ರ ನೀವು ಧನ್ಯರು! ಭಗವದ್ ಧ್ಯಾನ ಮಾಡುತ್ತ ಮಾಡುತ್ತಾ ನಮ್ಮ ಅಹಂಭಾವ ಸಂಪೂರ್ಣವಾಗಿ ಲಯವಾಗುತ್ತದೆ. ಆಮೇಲೆ ಉಳಿಯುವುದು ಕೇವಲ ಅವನೆ. ನಿಮ್ಮ ಮನಸ್ಸು ಈ ಪರಿಪಕ್ವ ಸ್ಥಿತಿಗೆ ಎಂದು ಏರುತ್ತದೆಯೊ ಅಂದು ನಿಜವಾದ ಜನಹಿತಕರ ಕಾರ್ಯ ಪ್ರಾರಂಭವಾಗುತ್ತದೆ.”

* * *

ಸೂತ್ರಧಾರಿಣಿ ನೀನು; ಪಾತ್ರಚರಿಯು ನಾನು;
ಯಾವ ಪಾತ್ರವನಿತ್ತರೇನು ನೀನೆನಗೆ?
ನಿನ್ನ ಅಧ್ಯಕ್ಷತೆಯ ಈ ನಿನ್ನ ಲೀಲೆಯಲಿ
ಪರಮ ಪುರುಷಾರ್ಥ ರೂಪಿಣಿ ನೀನೇ ಕೊನೆಗೆ! – ಕುವೆಂಪು

* * *