ಶ್ರೀ ರಾಮಕೃಷ್ಣರ ಜನ್ಮೋತ್ಸವ ಸಮಾರಂಭ ಅತ್ಯಂತ ವಿಜೃಂಭಣೆಯಿಂದ ಜರುಗಿ ಮೂರು ದಿನ ಆಗಿತ್ತು. ಆ ಪವಿತ್ರ ಸಂದರ್ಭದಲ್ಲಿ ಏಳುಜನ ಬ್ರಹ್ಮಚಾರಿಗಳು ಸಂನ್ಯಾಸ ಧರ್ಮದಲ್ಲಿಯೂ ಇಪ್ಪತ್ತೊಂದು ಜನ ಯುವಕರು ಬ್ರಹ್ಮಚರ್ಯ ವ್ರತದಲ್ಲಿಯೂ ದೀಕ್ಷೆ ತೆಗೆದುಕೊಂಡಿದ್ದರು. ಅದಕ್ಕೆ ಸಂಬಂಧಪಟ್ಟ ಹೋಮಾದಿ ಕ್ರಿಯೆಗಳು ನಡೆಯುತ್ತಿದ್ದಾಗ ಮಹಾಪುರುಷ ಮಹಾರಾಜರೂ ಅಲ್ಲಿಯೆ ಉಪಸ್ಥಿತರಾಗಿದ್ದರು. ಆವೊತ್ತು ಬೆಳಗ್ಗೆ ಅವರಿಗೆ ಸ್ವಲ್ಪ ಶೀತವಾಗಿ ತೊಂದರೆಯಾಗಿತ್ತು; ಆದರೆ ಇವತ್ತು ಬಹುಮಟ್ಟಿಗೆ ಸುಧಾರಿಸಿತ್ತು. ದೇಹಸ್ಥಿತಿ ಅಷ್ಟೇನೂ ಉತ್ತಮವಾಗಿರದಿದ್ದರೂ ಮನಸ್ಸು ಪ್ರಫುಲ್ಲವಾಗಿತ್ತು. ನಾನಾ ಪ್ರಕಾರವಾದ ಮಾತುಕತೆಗಳು ನಡೆಯುತ್ತಿದ್ದಾಗ, ಹೊಸದಾಗಿ ದೀಕ್ಷೆ ತೆಗೆದುಕೊಂಡಿದ್ದ ಸಂನ್ಯಾಸಿಯೊಬ್ಬರನ್ನು ಕುರಿತು ನಗುಮೊಗದಿಂದ ಕೇಳಿದರು: ‘ಏನು ಹೆಸರು ಕೊಟ್ಟಿದ್ದಾರೆ?’ ಪಕ್ಕದಲ್ಲಿದ್ದ ಇನ್ನೊಬ್ಬರು ನವದೀಕ್ಷಿತ ಸಂನ್ಯಾಸಿಯ ಹೆಸರು ಹೇಳಿದರು. ಆಗ ಮಹಾಪುರುಷಜಿ ತುಂಬ ಗಂಭೀರಭಾವದಿಂದ ಇಂತೆಂದರು:

“ಬಾಬಾ, ನಿನ್ನ ಜೀವಮಾನದಲ್ಲಿ ಇನ್ನು ಮುಂದೆ ನಡೆಯುವುದೇನಿದ್ದರೂ ಸ್ವಯಂ ಭಗವತ್‌ಕೃಪೆಯಿಲ್ಲದೆ ನಡೆಯುವುದಿಲ್ಲ. ಸಂನ್ಯಾಸ ಧರ್ಮ ಸ್ವೀಕಾರ ಮಾಡುವುದೇನೂ ಸುಲಭ: ಆದರೆ ಪರಾಭಕ್ತಿ ಪರಮಜ್ಞಾನ ಇವು ಭಗವಂತನ ಕೃಪೆಯಿಲ್ಲದೆ ಒದಗುವುದಿಲ್ಲ. ಯಾರ ಹೃದಯದಲ್ಲಿ ವ್ಯಾಕುಲಪೂರ್ಣವಾದ ಅಭೀಪ್ಸೆಯಿರುತ್ತದೆಯೊ ಅಂತಹವರಿಗೆ ದೇವರ ಕೃಪೆ ದೊರತೇ ದೊರೆಯುತ್ತದೆ. ಕಾವಿಬಟ್ಟೆ ತೊಟ್ಟುಕೊಂಡ ಮಾತ್ರದಿಂದ ಏನು ಬಂದೀತು, ಪೂರ್ಣಜ್ಞಾನ ಮತ್ತು ಪರಾಭಕ್ತಿ ಲಭಿಸದಿದ್ದರೆ? ನಾನು ಕಂಡಿದ್ದೇನೆ, ಉತ್ತರ ಭಾರತದಲ್ಲಿ ಕಾಶಿ ಹರಿದ್ವಾರ ಮುಂತಾದ ಸ್ಥಳಗಳಲ್ಲಿ – ಅನೇಕ ಮಠಗಳಿವೆ. ಮಂದಿ ಕೊಂಚ ಗೋಧಿಹಿಟ್ಟು, ಬಟ್ಟೆ, ನಾಲ್ಕಾಣೆ, ಎರಡಾಣೆ ತೆಗೆದುಕೊಂಡು ಬಂದು ಆ ಮಠದ ಮಹಂತರ ಹತ್ತಿರ ‘ಬಿಜಾ ಹೋಮ ಮಾಡಿ’ ಎಂದು ಬೇಡುತ್ತಾರೆ. ಅವರಿಗೆ ‘ವಿರಜಾ ಹೋಮ’ ಎಂದು ಉಚ್ಚಾರಣೆ ಮಾಡಲೂ ಬರುವುದಿಲ್ಲ. ಸರಿ ಆ ಮಹಂತರು ದಾನ ದಕ್ಷಿಣೆ ತೆಗೆದುಕೊಂಡು ವಿರಜಾ ಹೋಮದ ಕವಾತು ಮಾಡಿಸುತ್ತಾರೆ. ಸರಿ, ಸೃಷ್ಟಿಯಾಗುತ್ತಾನೆ ಮತ್ತೊಬ್ಬ ಸಂನ್ಯಾಸಿ! ಆವೊತ್ತಿನಿಂದ ಆ ನೂತನ ಸಂನ್ಯಾಸಿ ಭಿಕ್ಷೆ ಬೇಡಲು ಅಧಿಕಾರ ಪಡೆದು ಭಿಕ್ಷೆಯಿಂದಲೆ ಜೀವನ ಮಾಡುತ್ತಾನೆ. ಕೆಲವರು ಸಣ್ಣ ಪುಟ್ಟ ವ್ಯಾಪಾರದ ಕಸುಬಲ್ಲಿ ತೊಡುಗತ್ತಾರೆ. ಅಂತಹ ಸಂನ್ಯಾಸಿಗಳು ಲಕ್ಷಲಕ್ಷಗಟ್ಟಲೆ ಇದ್ದಾರೆ! ಆದರೆ, ಬಾಬಾ, ಅವರಲ್ಲಿ ನಿಜವಾದ ಮುಮುಕ್ಷುಗಳೆಷ್ಟು? ವಿರಜಾ ಮಾಡಿಸಿಕೊಳ್ಳಬೇಕು, ಸಂನ್ಯಾಸಿಯಾಗಬೇಕು, ಮಂತ್ರ ಹೇಳಬೇಕು-ಎಂಬುವುಗಳ ಪರವಾಗಿ ಯಾವ ಕಾತರತೆಯಿರುತ್ತದೆಯೊ ಅದೇ ಕಾತರತೆ ದೇವರನ್ನು ಪಡೆಯಬೇಕು ಎಂಬುದರ ಪರವಾಗಿದ್ದರೆ ಅವನೀಗ ಧನ್ಯ. ಅವನೀಗ ನಿಜವಾಗಿಯೂ ಮಹಾಭಾಗ್ಯವಂತ! ಭಗವತ್ ಸಾಕ್ಷಾತ್ಕಾರಕ್ಕಾಗಿ ಸರ್ವವನ್ನೂ ತ್ಯಜಿಸುವಾತನೇ ಮಹಾಧನ್ಯ! ಆದರೆ ಅಂತಹವರ ಸಂಖ್ಯೆ ಬಹಳ ಕಡಿಮೆ; ಅವರು ಹೊರಗಡೆಯ ವೇಷಕ್ಕೆ ಅಷ್ಟು ಗಮನ ಕೊಡುವುದಿಲ್ಲ. ಬಾಬಾ, ಉಡುವ ಬಟ್ಟೆ ಬಿಳಿಯದಾಗಿರಲಿ, ಕಾವಿಯಾಗಿರಲಿ ಅದು ಗೌಣ. ನಿನ್ನ ಮನಸ್ಸೆಲ್ಲ ಮುಖ್ಯದ ಮೇಲಿರಲಿ-ಭಗವಂತನ ಸಾಕ್ಷಾತ್ಕಾರದ ಮೇಲೆ.”

ನವದೀಕ್ಷಿತ ಸಂನ್ಯಾಸಿ ಅತ್ಯಂತ ಕಾತರದಿಂದ ಮಹಾಪುರುಷ ಮಹಾರಾಜರ ಆಶೀರ್ವಾದವನ್ನೂ ಕೃಪೆಯನ್ನೂ ಬೇಡಿದಾಗ ಅವರೆಂದರೆ: “ಬಾಬಾ, ನಾವೂ ಹೃತ್ಪೂರ್ವಕವಾಗಿ ಪ್ರಾರ್ಥಿಸುತ್ತೇವೆ: ನಿಮಗೆಲ್ಲ ಭಕ್ತಿ ವಿಶ್ವಾಸಗಳು ಲಭಿಸಲಿ, ಪರಮಜ್ಞಾನ ಲಾಭವಾಗಲಿ, ಮುಕ್ತಿಲಾಭವೂ ಆಗಲಿ. ಎಲ್ಲರೂ ಜೀವನ್ಮುಕ್ತರಾಗಲಿ. ಜಯ ಪ್ರಭು ಕರುಣಾಮಯ, ದೀನಶರಣ ಗುರುದೇವ!”

ಹಿಂದಿನ ದಿನ ಹೊಸದಾಗಿ ಸಂನ್ಯಾಸ ತೆಗೆದುಕೊಂಡವರೆಲ್ಲ ಪದ್ಧತಿಯಂತೆ ಮಾಧುಕರೀ ಭಿಕ್ಷೆಗೆ ಹೋಗಿದ್ದರು. ಅದನ್ನು ಪ್ರಸ್ತಾಪಿಸಿ ಮಹಾಪುರುಷಜಿ “ಹಾಗೆ ಭಿಕ್ಷೆಗೆ ಹೋಗುವುದು ಆ ಕಡೆ ಅಷ್ಟು ರೂಢಿಯಲಿಲ್ಲ” ಎಂದರು.

ಸ್ವಲ್ಪಕಾಲ ಮೌನವಾಗಿತ್ತು ಮತ್ತೆ ವಿಶೇಷವಾದ ಆವೇಶಭರದಿಂದ ಮಹಾಪುರುಷಜಿ ಹೇಳಿದರು: “ಪ್ರಭೂ, ನಿನ್ನ ಚರಣತಲಕ್ಕೆ ಈ ಮುಮುಕ್ಷುಗಳೆಲ್ಲ ಬಂದಿದ್ದಾರೆ; ಅವರಿಗೆಲ್ಲ ಭಕ್ತಿ ವಿಶ್ವಾಸಗಳನ್ನು ದಯಪಾಲಿಸು! ಅವರನ್ನೆಲ್ಲ ಪೂರ್ಣರನ್ನಾಗಿ ಮಾಡು!”

* * *