ಇಂದು ಶ್ರೀರಾಮಕೃಷ್ಣ ಪರಮಹಂಸರ ಜನ್ಮೋತ್ಸವದ ಮಹಾ ದಿನ. ಮಹಾಪುರುಷ ಮಹಾರಾಜರಿಗೆ ಮೈಸರಿಯಾಗಿರಲಿಲ್ಲ. ತುಂಬ ನೆಗಡಿಯಾಗಿತ್ತು, ಹಿಂದಿನ ರಾತ್ರಿಯೇನೊ ತಕ್ಕಮಟ್ಟಿಗೆ ನಿದ್ದೆಮಾಡಿದ್ದರು. ಮಹಾಪುರಷಜಿಯ ಶ್ರೀಚರಣ ದರ್ಶನಾರ್ಥಿಗಳಾದ ಅನೇಕ ಭಕ್ತರು ಹೊತ್ತಾರೆ ಬಹಳ ಮುಂಚಿತವಾಗಿಯೆ ಬರಲು ಆರಂಭಿಸಿದರು. ಏಕೆಂದರೆ ಹೊತ್ತೇರಿದ ಮೇಲೆ ದರ್ಶನ ತೆಗೆದುಕೊಳ್ಳಲು ಅವರಿಗೆ ಅನುಕೂಲವಾಗುತ್ತಿರಲಿಲ್ಲ. ಸ್ವಲ್ಪ ವಯೋವೃದ್ಧರಾದ ಭಕ್ತರೊಬ್ಬರು ಪ್ರವೇಶಿಸಿ ಪ್ರಣಾಮಾನಂತರ ಕುಶಲಪ್ರಶ್ನೆ ಕೇಳಲು ಮಹಾಪುರುಷಜಿ ನಗುಮೊಗರಾಗಿ “ಶರೀರಕ್ಕೇನೊ ಸ್ವಲ್ಪವೂ ಸ್ವಸ್ಥವಿಲ್ಲ” ಎಂದರು”

ಭಕ್ತರು: “ಏನಾಗಿದೆ ಮಹಾರಾಜ್? ನಿನ್ನೆ ರಾತ್ರಿ ಸರಿಯಾಗಿ ನಿದ್ದೆ ಬರಲಿಲ್ಲವೆ?”

ಸ್ವಾಮೀಜಿ: “ಹಾಗೇನಿಲ್ಲ, ತಕ್ಕಮಟ್ಟಿಗೆ ನಿದ್ದೆ ಬಂತು. ಆದರೇನಂತೆ? ಒಡಲು ಮುದಿಯಾಯ್ತು. ಒಂದಲ್ಲ ಒಂದು ಬೇನೆ ಇದ್ದೇ ಇರುತ್ತದೆ. ಎಷ್ಟೆಂದರೂ ಷಡ್‌ವಿಕಾರಾತ್ಮಕ ಶರೀರ! (ಜನ್ಮ, ಅಸ್ತಿತ್ವ, ವೃದ್ಧಿ, ಪರಿಣತಿ, ಕ್ಷಯ ಮತ್ತು ವಿನಾಶ) ದೇಹದ ಧರ್ಮವೇ ಅದು. ಎಲ್ ವಿಕಾರಗಳನ್ನೂ ಮುಗಿಸಿ ಇನ್ನುಳಿದ ಕೊನೆಯ ವಿಕಾರದ ಕಡೆಗೆ ಪ್ರಯಾಣ ಹೊರಟಿದೆ. ಇವೆಲ್ಲ ವಿಕಾರಗಳೂ ದೇಹಕ್ಕೆ ಮಾತ್ರವೇ; ಒಳಗಿರುವ ಪರಮಾತ್ಮ ಹೇಗಿದ್ದನೋ ಹಾಗೆಯೇ ಇರುತ್ತಾನೆ. ಆತ್ಮ ನಿತ್ಯ. ನಿರ್ವಿಕಾರ, ಈ ಯಾವ ವಿಕಾರವೂ ಅದಕ್ಕಿಲ್ಲ. ಯಾರು ದೇಹಿಯೋ ಅವನು ಚೆನ್ನಾಗಿಯೇ ಇದ್ದಾನೆ. ಈ ದೇಹವೇ ದೇಹಿ ಎಂದರೆ ಆತ್ಮ ಅಲ್ಲ. ಶ್ರೀಗುರು ಕೃಪೆಯಿಂದ ನಮಗೆ ಆ ಜ್ಞಾನ ದಯಪಾಲಿಸಿದ್ದಾರೆ. ಈಗ ಶರೀರ ಇದ್ದರೂ ಒಂದೇ ಹೋದರೂ ಒಂದೇ.” ತುಸು ಹೊತ್ತು ರೆಪ್ಪೆ ಮುಚ್ಚಿದ್ದು ಸ್ವಾಮೀಜಿ ಗಟ್ಟಿಯಾಗಿಯೆ ನಗುತ್ತಾ ಹೇಳಿದರು: “ನಿಜ, ಹೌದು ಠಾಕೂರರು ನನ್ನ ಹೃದಯದಲ್ಲಿ ಪೂರ್ಣಜ್ಞಾನವನ್ನೆ ದಯಪಾಲಿಸಿದ್ದಾರೆ. ಈಗ ಅವರಿಚ್ಛೆ ಇದ್ದರೆ ಶರೀರ ಇರುತ್ತೆ, ಇಲ್ಲದಿದ್ದರೆ ಹೋಗುತ್ತೆ. ಎಲ್ಲ ಅವರಿಚ್ಛೆ ಇರುವಂತೆ. ಅಲ್ಲದೆ ಇವೊತ್ತಿಗೆ ಈ ದೇಹಕ್ಕೇನು ಕ್ಮಮಿ ವಯಸ್ಸಾಗಿದೆಯೆ?”

* * *