ಬೆಳಿಗ್ಗೆ ಮದರಾಸಿನಿಂದ ಬಂದ ಸಂನ್ಯಾಸಿಯೊಬ್ಬರು ಮಹಾಪುರುಷಜಿಗೆ ಪ್ರಣಾಮ ಸಲ್ಲಿಸಿದಾಗ ಅವರು ಹೇಳಿದರು; “Blessed are those who have not seen me but have faith in me. (ಯಾರು ನನ್ನನ್ನು ನೋಡದೆ ಇದ್ದರೂ ನನ್ನಲ್ಲಿ ವಿಶ್ವಾಸವಿಡುತ್ತಾರೆಯೊ ಅವರೆ ಧನ್ಯರು!) ನೀನು ನಿಜವಾಗಿಯೂ ಕೃತಾರ್ಥ. ನೀನು ಶ್ರೀರಾಮಕೃಷ್ಣರನ್ನು ಕಂಡಿಲ್ಲ. ಆದರೂ ಅವರಲ್ಲಿ ಎಷ್ಟು ಶ್ರದ್ಧೆಯಿಟ್ಟಿದ್ದೀಯೆ!”

ಅವೊತ್ತೆ ಸಾಯಂಕಾಲ ಇವರಿಗೆ ಪ್ರಣಾಮಮಾಡಿ ಆಶೀರ್ವಾದ ಮಾಡುವಂತೆ ಬೇಡಿಕೊಂಡ ಭಕ್ತರೊಬ್ಬರಿಗೆ ಸ್ವಾಮಿಗಳು ಹೇಳಿದರು: “ನಮ್ಮಲ್ಲಿ ಇರುವುದೆಲ್ಲ ಬರೀ ಆಶೀರ್ವಾದ, ಶಾಪವಲ್ಲ. ಆಶೀರ್ವಾದವಲ್ಲದೆ ಮತ್ತೆ ಬೇರೇನೂ ಇಲ್ಲವಯ್ಯ!”

* * *

ನಿನ್ನ ಪದಕಮಲದಲಿ ಮನೆ ಮಾಡಿರುವ ನನಗೆ
ಆ ಸ್ಥಾನ ಈ ಸ್ಥಾನ ಎಲ್ಲವಾಸ್ಥಾನ!
ಆಲ್ಲಿಲ್ಲಿ ಎನಲೇನು? ನೀನೆ ಅಡಿಯಿಡುವಲ್ಲಿ
ದಿವ್ಯ ಪದವಿಗಳಲ್ತೆ ಮಾನಾವಮಾನ?  – ಕುವೆಂಪು