ಸಾಯಂಕಾಲ ಐದು ಗಂಟೆಯ ಮೇಲೆ ಆಗಿತ್ತು. ಕೊಠಡಿಯಲ್ಲಿ ಸಹಿಸಲಾರದಷ್ಟು ಸೆಕೆಯಾದುದರಿಂದ ಹೊರ ಬಂದು ಪೂರ್ವದಿಕ್ಕಿನ ವರಾಂಡದಲ್ಲಿ ಆರಾಮ ಕುರ್ಚಿಯ ಮೇಲೆ ಅರೆಮಲಗಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಪೂಜ್ಯ ಸ್ವಾಮಿ ಅಭೇದಾನಂದರು ಆ ದಿನ ಮಠಕ್ಕೆ ಬಂದಿದ್ದರು. ಅವರ ಸಂಗಡ ಅವರ ಸಂನ್ಯಾಸೀ ಅನುಚರರೊಬ್ಬರು ಬಂದಿದ್ದರು. ಆ ಅನುಚರರು ಮಹಾಪುರುಷಜಿಗೆ ಪ್ರಣಾಮಮಾಡಿ ಪಕ್ಕಕ್ಕೆ ಸರಿದು ನಿಂತರು. ಮಹಾಪುರುಷಜಿ ಅವರೊಡನೆ ಸ್ವಾಮಿ ಅಭೇದಾನಂದರ ವಿಚಾರವಾಗಿ ಮಾತಾಡತೊಡಗಿದರು. ಸ್ವಲ್ಪ ಹೊತ್ತಾದ ಮೇಲೆ ಆ ಅನುಚರ ಸಂನ್ಯಾಸಿ ಮಹಾಪುರುಷಜಿಗೆ “ಮಹಾರಾಜ್, ಇತ್ತೀಚೆಗೆ ನಿಮಗೆ ಸ್ವಲ್ಪ ಉತ್ತಮಕಾಣಿಸುವುದಿಲ್ಲವೆ?” ಎಂದು ಕೇಳಿದರು. ಅದಕ್ಕೆ ಅವರು ನಗುತ್ತಾ ಹೇಳಿದರು: “ಇಲ್ಲ. ಈ ಮುದಿಯೊಡಲು ಮತ್ತೆ ಹೇಗೆ ತಾನೆ ಉತ್ತಮಗೊಂಡೀತು, ನೀನೇ ಹೇಳು! ಈ ಶರೀರದ ಯಾತ್ರೆ ಗುರು ದೇವನ ಇಚ್ಛೆಯಂತೆ ಎಷ್ಟು ದಿನವೋ ಅಷ್ಟು ದಿನ ನಡೆಯುತ್ತದೆ.”

ಅನುಚರ: “ಕ್ರಮೇಣ ಶ್ರೀಗುರುವಿನ ಅಂತರಂಗ ಶಿಷ್ಯರಲ್ಲಿ ಒಬ್ಬರಾದ ಮೇಲೊಬ್ಬರಾಗಿ, ಸ್ವಲ್ಪ ಹೆಚ್ಚು ಕಡಿಮೆ ಎಲ್ಲರೂ, ಪರಂಧಾಮವಾಸಿಗಳಾದರು. ಇನ್ನು ಉಳಿದವರೆಂದರೆ ನೀವು, ಇನ್ನೊಂದಿಬ್ಬರು ಮಾತ್ರ. ಈಗ ನಿಮ್ಮ ದೇಹ ಸ್ಥಿತಿಯೂ ಬಹಳ ಚಿಂತಾಜನಕವಾಗಿದೆ. ನೀವು ಹೋದಮೇಲೆ ಮತ್ತೆ ಯಾವಾಗ ಬರುತ್ತೀರೊ ಯಾರು ಬಲ್ಲರು? ನೀವಂತೂ ಶ್ರೀ ಠಾಕೂರರು ಅವತಾರ ಮಾಡದೆ ಬರುವುದೆ ಇಲ್ಲವಲ್ಲವೆ?”

ಸ್ವಾಮೀಜಿ: “ಅದು ಯಾರಿಗೆ ಗೊತ್ತಯ್ಯಾ? ಗುರುಮಹಾರಾಜರಿಗೆ ಎಷ್ಟೋ ಜನ ಭಕ್ತರಿದ್ದಾರೆ. ನಮ್ಮನ್ನೇ ಕರೆತರುತ್ತಾರೆ ಎಂಬ ನಿಶ್ಚಯ ಹೇಗೆ?”

ಅನುಚರ: “ನೀವು ಠಾಕೂರರ ಅಂತರಂಗ ವರ್ಗಕ್ಕೆ ಸೇರಿದ ಶಿಷ್ಯರು. ಅವರು ಮತ್ತೊಮ್ಮೆ ಅವತಾರ ಮಾಡಿದಾಗ ನೀವೂ ಬಂದೇ ಬರುತ್ತೀರಿ.”

ಸ್ವಾಮೀಜಿ: “ಯಾರಿಗೆ ಗೊತ್ತು? ಈ ವ್ಯಕ್ತಿತ್ವ (Individuality)ಗಳೆಲ್ಲ ನಶ್ವರ; ಈ ಜಗತ್ತೂ ಅನಿತ್ಯ ಪ್ರವಾಹಾಕಾರದಲ್ಲಿ ನಿತ್ಯ. ಭಗವಂತನೊಬ್ಬನೇ ಏಕಮಾತ್ರ ಸತ್ಯ. ಅವನು ಚಿರಕಾಲವಿರುತ್ತಾನೆ. ಲೋಕಕಲ್ಯಾಣಾರ್ಥವಾಗಿ ಯುಗ ಯುಗದಲ್ಲಿಯೂ ನರದೇಹ ಧಾರಣೆ ಮಾಡುತ್ತಾನೆ. ಅದಕ್ಕೆ ಅವನ ಅಹೈತುಕೀ ಕೃಪೆಯೆ ಕಾರಣ. ಅವನು ತನಗೆ ತಾನೆ ಪೂರ್ಣ ಶುದ್ಧ ಬುದ್ಧ ಮುಕ್ತಸ್ವಭಾವ. ಅವನಿಗೆ ಈ ಪ್ರಪಂಚದಿಂದ ದೊರಬೇಕಾದ ಯಾವ ಪ್ರಯೋಜನವೂ ಇಲ್ಲ. ಅವನಿಗೆ ಪ್ರಾಪ್ಯವೂ ಇಲ್ಲ, ಅಪ್ರಾಪ್ಯವೂ ಇಲ್ಲ. ಏಕೆಂದರೆ ಅವನು ಸ್ವಯಂಪೂರ್ಣ. ಭೂಭಾರ ಹೆಚ್ಚಿದಾಗ, ಅಧರ್ಮದ ಅಭ್ಯುದಯವಾದಾಗ ಆ ಭಗವಂತನು ಪತಿತರ ಪರಿತ್ರಾಣಕ್ಕಾಗಿ ಸ್ವೇಚ್ಛೆಯಿಂದ ನರದೇಹ ಧಾರಣಮಾಡಿ ಲೋಕದ ದುಃಖಕಷ್ಟಗಳನ್ನು ದೂರಮಾಡುತ್ತಾನೆ. ಭಗವದ್ಗೀತೆಯಲ್ಲಿ ಅವನು ವಚನಕೊಟ್ಟಿಲ್ಲವೆ?”

ನ ಮೇ ಪಾರ್ಥಾಸ್ತಿ ಕರ್ತವ್ಯಂ ತ್ರಿಷು ಲೋಕೇಷು ಕಿಂಚನ!
ನಾನವಾಪ್ತಮವಾಪ್ತವ್ಯಂ ವರ್ತ ಏವ ಚ ಕರ್ಮಣಿ!!  – ಇತ್ಯಾದಿ

‘ಪಾರ್ಥ, ಮೂರು ಲೋಕಗಳಲ್ಲಿಯೂ ನನಗೆ ಮಾಡಲೇಬೇಕಾಗಿರುವ ಕರ್ತವ್ಯವಿಲ್ಲ, ಪಡೆಯದಿರತಕ್ಕದ್ದೂ ಇಲ್ಲ, ಪಡೆಯಬೇಕಾದ್ದೂ ಇಲ್ಲ. ಆದರೂ ನಾನು ಕರ್ಮದಲ್ಲಿ ವರ್ತಿಸುತ್ತೇನೆ.’

“ಅವನೇಕೆ ಕರ್ಮದಲ್ಲಿ ವರ್ತಿಸುತ್ತಾನೆ? ಅವನು ಕರ್ಮದಲ್ಲಿ ತೊಡಗದಿದ್ದರೆ ಮನುಷ್ಯರೂ ಅವನನ್ನು ಅನುಸರಿಸುತ್ತಾರೆ. ಹಾಗಾದರೆ ಲೋಕವೆಲ್ಲ ಉತ್ಸನ್ನವಾಗುತ್ತದೆ, ವರ್ಣಸಂಕವಾಗುತ್ತದೆ, ಇನ್ನೂ ಅನೇಕ ರೀತಿಯ ಅನರ್ಥ ಪರಂಪರೆ ಘಟಿಸುತ್ತದೆ. ಭಗವಂತನಿಗೆ ಗೊತ್ತು ಈ ಜಗತ್ತು ಅನಿತ್ಯ ಎಂದು. ಆದರೂ ಈ ಜಗತ್ತಿನ ಕಲ್ಯಾಣಕ್ಕಾಗಿ ಎಷ್ಟೆಷ್ಟೂ ಕಷ್ಟ ಸ್ವೀಕಾರ ಮಾಡುತ್ತಾನೆ. ಏಕೆ, ಶ್ರೀರಾಮಕೃಷ್ಣರ ಜೀವನವನ್ನೆ ನೋಡಬಾರದೆ? ಅವರು ಎಲ್ಲ ರೀತಿಯಿಂದಲೂ ಸಾಧಾರಣ ಮನುಷ್ಯರಂತೆ ವರ್ತಿಸುತ್ತಿದ್ದರು; ಆದರೆ ಆ ಕಿರಿಯೊಡಲ ಚೌಕಟ್ಟಿನಲ್ಲಿ ಬ್ರಹ್ಮಾಂಡರೂಪಿ ಪೂರ್ಣ ಈಶ್ವರನೆ ಲೀಲಾಮಯನಾಗಿದ್ದಾನಲ್ಲ! ಹೊರಗೆ ನರಾಕಾರ, ಒಳಗೆ ನಾರಾಯಣ ವಿರಾಟ್!”

* * *