ಮಹಾಪುರುಷಜಿಯ ಶರೀರ ಅಷ್ಟೇನೂ ಸರಿಯಾಗಿರಲಿಲ್ಲ. ಸೇವೆಗಿದ್ದ ಸಾಧುವೊಬ್ಬರನ್ನು ಕುರಿತು ಹೇಳಿದರು: “ಒಂದಲ್ಲ ಎರಡಲ್ಲ ಎಲ್ಲ ತರಹದ ದೇಹವ್ಯಾಧಿಗಳೂ ಸೇರಿಕೊಂಡಿವೆ. ಯಾವುದಕ್ಕೆ ಅಂತಾ ಗಮನ ಕೊಡೋದು. ಒಂದು ಕಡೆಗೆ ಗಮನಕೊಟ್ಟು ಪೂರೈಸುವುದರ ಒಳಗೆ ಇನ್ನೊಂದು ಕಡೆ ದೂರು! ನೆಗಡಿಗೆ ಔಷಧಿ ಮಾಡಿದರೆ ವಾತಕ್ಕೆ ವಿರೋಧವಾಗುತ್ತದೆ. ಈ ಸ್ಥಿತಿಯಲ್ಲಿ ದೇಹ ಬಹಳ ಕಾಲ ಇರಬಾರದು; ಜೊತೆಗೆ ನಿಮಗೆಲ್ಲ ತೊಂದರೆ ಬೇರೆ ಕೊಡುತ್ತಾ ಇದ್ದೇನೆ.”

ಸೇವಕ ಸಾಧು: “ಉಂಟೆ, ಮಹಾರಾಜ್? ನಮಗೇನು ತೊಂದರೆ? ನೀವೇ ನಮ್ಮ ತಾಯಿ ತಂದೆ ಎಲ್ಲ. ನಿಮ್ಮ ಶರೀರಕ್ಕೆ ವೃದ್ಧಾಪ್ಯ ಒದಗಿರುವಾಗ ಸ್ವಲ್ಪ ಸೇವೆ ಮಾಡಬಾರದೆ? ನಿಮಗಿಷ್ಟಾದರೂ ಸೇವೆ ಸಲ್ಲಿಸುವ ಅಧಿಕಾರ ನಮಗೆ ಒದಗಿರುವುದು ನಮ್ಮ ಸೌಭಾಗ್ಯ.”

ಸ್ವಾಮೀಜಿ: “ನನಗೆ ಚೆನ್ನಾಗಿ ಗೊತ್ತು. ನೀವೆಲ್ಲ ಎಷ್ಟು ಅಕ್ಕರೆಯಿಂದ ಸೇವೆ ಮಾಡುತ್ತೀದ್ದೀರಿ ಎಂದು. ಆದರೆ ಮೂರು ಹೊತ್ತು ನರಳುತ್ತಾ ದೇಹ ಇಟ್ಟುಕೊಂಡು ಇರೋದು ನನಗೇ ಇಷ್ಟವಿಲ್ಲ. ಎಲ್ಲ ಗುರುಮಹಾರಾಜರ ಇಚ್ಛೆ. ಏನೆ ಅಘಲಿ ಅವರಿಚ್ಚೆ ನೆರವೇರಿದರಾಯಿತು.”

ಸೇವಕ ಸಾಧು: “ಮಹಾರಾಜ್, ನಾವು ಗುರುಮಹಾರಾಜರನ್ನು ಕಂಡಿಲ್ಲ. ನೀವು ಈಗ ಇಲ್ಲಿದ್ದೀರಿ: ಅದೇ ನಮಗೆ ಮಹದಾನಂದ. ನೀವು ಪರಮಹಂಸರ ಅಂತರಂಗ ಶಿಷ್ಯವರ್ಗಕ್ಕೆ ಸೇರಿದವರು. ನಿಮ್ಮ ಸಾನ್ನಿಧ್ಯ ಸಹವಾಸಗಳಲ್ಲಿ ಇರುವುದೆಂದರೇನು ಸಾಧಾರಣ ಸೌಭಾಗ್ಯವೇ? ನೀವು ಇರುವುದೇ ಸಾಧು ಸಂನ್ಯಾಸಿ ಭಕ್ತರಿಗೆ ಒಂದು ಆನಂದ. ನಾನು ಒಂದೊಂದು ಸಾರಿ ಭಾವಿಸುತ್ತೇನೆ: ಎಷ್ಟು ಜನರು ದೂರ ದೂರ ದೇಶಗಳಿಂದ ನಿಮ್ಮ ದರ್ಶನಕ್ಕೆ, ನಿಮ್ಮನ್ನ ಒಂದೇ ಒಂದು ಸಾರಿ ನೋಡಿ ಹೋಗುವುದಕ್ಕೆ ಬರುತ್ತಾರೆ! ನಾವು ನಿಮ್ಮ ಜೊತೆಯಲ್ಲಿಯೆ ಇರುವಂತಾಗಿದೆಯಲ್ಲ, ನಾವೆಷ್ಟು ಅದೃಷ್ಟಶಾಲಿಗಳು ಎಂದು.”

ಸ್ವಾಮೀಜಿ: “ಹೌದು ನಿಮ್ಮ ಮೆಲೆ ಶ್ರೀಠಾಕೂರರ ವಿಶೇಷ ಕೃಪೆಯಿದೆ. ಆದ್ದರಿಂದಲೆ ತಮ್ಮ ಭಕ್ತರ(ಎಂದರೆ ಶಿವಾನಂದ ಸ್ವಾಮಿಗಳ) ಸೇವೆಯನ್ನು ನಿಮ್ಮ ಕೈಯಿಂದ ಮಾಡಿಸುತ್ತಿದ್ದಾರೆ. ನೀವೂ ಧನ್ಯರು, ನಾನೂ ಧನ್ಯ, ನಿಮ್ಮೆಲ್ಲರ ಸಂಗದಲ್ಲಿ ಇರುವುದರಿಂದ. ಅಲ್ಲದಿದ್ದರೆ, ಇನ್ನೆಲ್ಲಿರುತ್ತಿದ್ದೆನೋ ಯಾರು ಬಲ್ಲರು? ನಿಜ, ಶ್ರೀಗುರು ನಮ್ಮೆಲ್ಲರನ್ನೂ ಅನವರತವೂ ರಕ್ಷಿಸುತ್ತಿದ್ದಾರೆ! ದೇಹ ತ್ಯಾಗಕ್ಕೆ ಮುನ್ನ ಸ್ವಾಮಿ ಬ್ರಹ್ಮಾನಂದರು ತಮಗೆ ಸೇವೆಮಾಡಿದವರನ್ನೆಲ್ಲ ಕೃಪಾ ಕಟಾಕ್ಷದಿಂದ ನೋಡಿ ‘ನೀವೆಲ್ಲ ನಮ್ಮ ಸೇವೆ ಮಾಡಿದ್ದೀರಿ. ಏನೆಂದು ಆಶೀರ್ವದಿಸಲಿ? ನಿಮಗೆಲ್ಲರಿಗೂ ಬ್ರಹ್ಮಜ್ಞಾನ ಉದಿಸಲಿ,’ ಎಂದರು. ನಾನೂ ಹಾಗೆಯೇ ಹರಸುತ್ತೇನಯ್ಯಾ – ನಿಮಗೆಲ್ಲರಿಗೂ ಬ್ರಹ್ಮಜ್ಞಾನವಾಗಲಿ, ಪೂರ್ಣಭಕ್ತಿ ವಿಶ್ವಾಸ ಲಾಭವಾಗಲಿ, ನಿಮಗೆಲ್ಲರಿಗೂ ಪೂರ್ಣಾನಂದ ಲಭಿಸಲಿ!”

ದೇಹಸ್ವಸ್ಥತೆಯ ನಿಮಿತ್ತ ಮಹಾಪುರುಷಜಿ ದೀಕ್ಷೆ ಕೊಡುವುದಕ್ಕಾಗಿಯೂ ಮತ್ತು ಇತರ ಕಾರ್ಯಗಳಿಗಾಗಿಯೂ ದಿನವೂ ದೇವರ ಮನೆಗೆ ಹೋಗುವುದಕ್ಕೆ ಆಗುತ್ತಿರಲಿಲ್ಲ. ಅನೇಕ ಸಮಯ ತಮ್ಮ ಕೊಠಡಿಯಲ್ಲಿಯೆ ಮಂಚದ ಮೇಲೆ ಕುಳಿತುಕೊಂಡೆ ದೀಕ್ಷಾದಿಗಳನ್ನು ನೀಡುತ್ತಿದ್ದರು. ಅಪರಾಹ್ನ ಸುಮಾರು ನಾಲ್ಕೂವರೆ ಗಂಟೆಯ ಹೊತ್ತಿಗೆ ಮದರಾಸಿನ ಕಡೆಯಿಂದ ಭಕ್ತರೊಬ್ಬರು ದೀಕ್ಷೆ ತೆಗೆದುಕೊಳ್ಳಬೇಕೆಂಬ ತಮ್ಮ ಅಭಿಲಾಷೆಯನ್ನು ವ್ಯಕ್ತಪಡಿಸಿದರು. ಅದಕ್ಕೆ ಸ್ವಾಮಿಗಳು “ಅದಕ್ಕೇನಂತೆ! ನಿನಗೆ ನಾಳೆಯೆ ದೀಕ್ಷೆ ಕೊಡುತ್ತೇನೆ. ಆಗಬಹುದಷ್ಟೆ?”

ಭಕ್ತರು: “ನಿಮ್ಮ ಇಚ್ಛೆಯಂತೆ ಮಹಾರಾಜ್.”

ಸ್ವಾಮೀಜಿ: “ಬೇಕಾದರೆ ನಾನೀಗಲೇ ನಿನಗೇ ದೀಕ್ಷೆ ಕೊಡಲು ಬಲ್ಲೆ. ಯಾವಾಗ ಇಚ್ಛೆ ಬಂದರೆ ಆಗಲೇ ಶ್ರೀ ಠಾಕೂರರ ನಾಮವನ್ನು ನೀಡಬಲ್ಲೆ. ಅದಕ್ಕೆ ನಾನು ಕಾಲಾಕಾಲ ವಿಚಾರಮಾಡಬೇಕಾದ ಅವಶ್ಯಕತೆಯಿಲ್ಲ. ನಮ್ಮ ಠಾಕೂರರು ಪತಿತಪಾವನ; ಪತಿತರ ಉದ್ಧಾರಕ್ಕಾಗಿಯೆ ಜನ್ಮವೆತ್ತಿ ಬಂದರು. ನಾವು ಅವರ ದಾಸರು; ಅವರ ಮಕ್ಕಳು. ಎಲ್ಲಿಯವರೆಗೆ ಶರೀರವಿರುತ್ತದೆಯೊ ಅಲ್ಲಿಯವರೆಗೆ ಆ ತಾರಕಬ್ರಹ್ಮನಾಮವನ್ನು ಜನರಿಗೆ ನೀಡಿಯೇ ನೀಡುತ್ತೇವೆ. ನಮ್ಮ ದೀಕ್ಷೆಯೂ ಬ್ರಾಹ್ಮಣಭಟ್ಟಾಚಾರರ್ಯರ ದೀಕ್ಷೆಯಂತಲ್ಲ. ನಮ್ಮ ಗುರು ಮಹಾರಾಜರ ಹೆಸರನ್ನು ಬಿಟ್ಟು ಬೇರೆ ಯಾವುದನ್ನೂ ನಾವರಿಯೆವು. ನಮಗೆ ಗೊತ್ತು ಯಾರು ರಾಮನಾಗಿದ್ದನೊ ಯಾರು ಕೃಷ್ಣನಾಗಿದ್ದನೊ ಅವನೆ ಇಂದು ರಾಮಕೃಷ್ಣನಾಗಿ ಬಂದಿದ್ದಾನೆ. ಸಮಸ್ತ ಭಾವಗಳ, ಸಮಸ್ತ ದೇವ ದೇವಿಯರ ಘನೀಭೂತ ಮೂರ್ತಿಯಾಗಿದ್ದಾರೆ ನಮ್ಮ ಶ್ರೀಗುರು.”

* * *