ಪೂರ್ವಾಹ್ನ ಸುಮಾರು ೧೧|| ಗಂಟೆ. ಸ್ವಾಮಿ ಶಿವಾನಂದರು ಸ್ನಾನ ಮುಗಿಸಿಕೊಂಡು ಬಚ್ಚಲು ಮನೆಯಿಂದ ಮಲಗುವ ಮನೆಗೆ ಬರುತ್ತಿದ್ದರು. ಸಾಷ್ಟಾಂಗ ಸಲ್ಲಿಸಲೆಂದು ಕಾದುನಿಂತಿದ್ದ ಕೇದಾರ ಬಾಬ (ಸ್ವಾಮಿ ಅಚಲಾನಂದ) ಕಾಲುಮುಟ್ಟಿ ಪ್ರಣಾಮ ಮಾಡಿದರು. ಮಹಾಪುರುಷಜಿ ನಗುತ್ತಾ ಜೈ ಕೇದಾರ ಬಾಬ, ಜೈ ಅಚಲಾನಂದ ಸ್ವಾಮಿ! ಎಂದವರೆ ಮರುಚರಣದಲ್ಲಿಯೆ ತುಂಬ ಗಂಭೀರ ಭಾವದಿಂದ ಹೇಳಿದರು: “ಜಯ್ ಪ್ರಭು, ಜಯ್ ಠಾಕೂರ್, ದೀನ ಶರಣು ಪ್ರಭು!” ಹೀಗೆ ಹೇಳುತ್ತ ಹೇಳುತ್ತ ಊಟ ಮಾಡುವುದಕ್ಕೋಸ್ಕರ ಮಣೆಯಮೇಲೆ ಕುಳಿತರು. ತುಸುಹೊತ್ತು ಬಿಟ್ಟು ಮತ್ತೆ ಹೇಳಿದರು: “ಪ್ರಭೂ, ಶ್ರದ್ಧಾಭಕ್ತಿಯನ್ನು ನಮಗೆ ದಯಪಾಲಿಸು, ಬೂಟಾಟಿಕೆಯ ಭಕ್ತಿ ಬೇಡ. ಅವನ್ನು ತೆಗೆದುಕೊಂಡು ನಾವೇನು ಮಾಡೋಣ? ಪರಮದಯಾಳು ಅವನು. ಯಾರು ಯಾವುದನ್ನು ಬಯಸುತ್ತಾರೊ ಅವರಿಗೆ ಅದನ್ನೆ ಕೊಡುತ್ತಾನೆ.”

ಮತ್ತೆ ಕೇದಾರ ಬಾಬ ಅವರನ್ನು ಕುರಿತು ಹೀಗೆಂದರು: “ಈಗ ನಾರಾಯಣನಿಗಷ್ಟು ನೈವೇದ್ಯ ಮಾಡುತ್ತೇನ. ಇಗೋ ನಿನಗೆ ಇಲ್ಲಿದೆ ಪ್ರಸಾದ, ನೀನು ನಾರಾಯಣ-ನಿನ್ನ ಸೇವೆ ಮೊದಲಾಗಲಿ.” ಹೇಳುತ್ತಲೆ ತಮ್ಮ ತಟ್ಟೆಯಲ್ಲಿದ್ದುದರಲ್ಲಿ ಅತ್ಯಂತ ರುಚಿರುಚಿಯಾಗಿದ್ದ ಪದಾರ್ಥಗಳನ್ನೆ ಕೇದಾರ ಬಾಬ ಅವರ ಕೈಗೆ ಕೊಡುತ್ತಾ ಇದೆಲ್ಲ ಠಾಕೂರರ ಪ್ರಸಾದ, ಮೊದಲು ನಾರಾಯಣನಿಗೆ ನಿವೇದಿಸಿ ಆಮೇಲೆ ಉಣ್ಣಬೇಕು. ಸ್ವಾಮೀಜಿ (ವಿವೇಕಾನಂದರು) ಕೆಲವು ವೇಳೆ ತಮ್ಮ ಕೈಯಿಂದಲೆ ಅಡುಗೆ ಮಾಡುತ್ತಿದ್ದರು. ಅವರ ಹತ್ತಿರ ಒಂದು ಮಣ್ಣಿನ ಚೆಟ್ಟಿ ಇತ್ತು. ಉತ್ತರದ ಕಡೆಯ ಸಾಧುಗಳ ಹತ್ತಿರ ಇರುತ್ತದಲ್ಲ ಅಂಥಾದ್ದು. ಅವರೇ ಬೇಳೆ ಅನ್ನ ಬೇಯಿಸುತ್ತಿದ್ದರು. ತರುವಾಯ ಎಲ್ಲವನ್ನೂ ಶ್ರೀಗುರುವಿಗೆ ನಿವೇದಿಸಿ, ನಮಗೆಲ್ಲರಿಗೂ ಮೊದಲು ಪ್ರಸಾದ ಹಂಚುತ್ತಿದ್ದರು; ಆಮೇಲೆ ತಾವು ಉಣ್ಣುತ್ತಿದ್ದರು. ಆಗ ಅವರು ಹೇಳುತ್ತಿದ್ದರು: ‘ಮೊದಲು ನಾರಾಯಣನ ಸೇವೆ, ಆಮೇಲೆ ನಮ್ಮ ಸೇವೆ.’

ಕೇದಾರ ಬಾಬ ಪ್ರಸಾದ ಸ್ವೀಕರಿಸಿ ನಮಸ್ಕರಿಸಿ ಬೀಳ್ಕೊಂಡು ತರುವಾಯವೆ ಮಹಾಪುರುಷಜಿ ಊಟಮಾಡಲು ತೊಡಗಿದರು.

ಅವರ ಹತ್ತಿರವೆ ಸೇವಕಸಾಧು ಒಬ್ಬರು ಕುಳಿತಿದ್ದರು. ಅದು ಇದು ಮಾತನಾಡುತ್ತಾ ಪಕ್ಕದ ಹಳ್ಳಿಯೊಂದರಲ್ಲಿ ಮಾಧುಕರಿ ಭಿಕ್ಷೆಯಿಂದ ಜೀವಿಸುತ್ತಿದ್ದ ಮಠದ ಸಾಧುವೊಬ್ಬರ ಪ್ರಸಂಗ ಬಂದಿತು. ಸ್ವಾಮಿ ಶಿವಾನಂದರು ಹೇಳಿದರು: “ನಾವೂ ಒಂದು ಕಾಲದಲ್ಲಿ ಮಾಧುಕರಿ ಭಿಕ್ಷಾಟನೆ ಮಾಡಿದ್ದೆವು. ಬಹಳ ಹಿಂದೆ. ಆಗ ಸ್ವಾಮೀಜಿ(ವಿವೇಕಾನಂದರು) ಒಂದು ನಿಯಮ ಮಾಡಿದ್ದರು. ಎಲ್ಲರೂ ಬೆಳಿಗ್ಗೆ ನಾಲ್ಕು ಗಂಟೆಗೆ ಹೊಡೆದೊಡನೆ ಏಳಬೇಕು. ಪ್ರಾತರ್ವಿಧಿಗಳನ್ನು ಪೂರೈಸಿಕೊಂಡು ದೇವರಮನೆಗೆ ಧ್ಯಾನಕ್ಕೆ ಹೋಗಬೇಕು. ಸ್ವಾಮೀಜಿಯೂ ತಪ್ಪದೆ ಧ್ಯಾನಕ್ಕೆ ಬರುತ್ತಿದ್ದರು. ಯಾರಾದರೂ ಸಮಯಕ್ಕೆ ಸರಿಯಾಗಿ ಬರದೆ ತಪ್ಪಿದರೆ ಅವರಿಗೆ ಕೊಡುತ್ತಿದ್ದ ಶಿಕ್ಷೆ ಎಂದರೆ ಮಾಧುಕರೀ ಭಿಕ್ಷೆ. ಅವರಿಗೆ ಆವೊತ್ತು ಮಠದಲ್ಲಿ ಊಟವಿಲ್ಲ. ಅವರು ಮನೆಮನೆಗೂ ಹೋಗಿ ಭಿಕ್ಷೆ ಪಡೆದು ಹೊಟ್ಟೆ ತುಂಬಿಕೊಳ್ಳಬೇಕು. ಸಾಮಾನ್ಯವಾಗಿ ನಾವೆಲ್ಲರೂ ಹೊತ್ತಿಗೆ ಸರಿಯಾಗಿ ಎದ್ದು ಧ್ಯಾನಕ್ಕೆ ಹೋಗುತ್ತಿದ್ದೆವಾದರೂ ಒಮ್ಮೊಮ್ಮೆ ಹೊಡೆದ ಗಂಟೆ ಕೇಳಿಸದಷ್ಟೂ ನಿದ್ದೆ ಮಾಡಿಬಿಡುತ್ತಿದ್ದೆವು. ಬೆಳಿಗ್ಗೆ ಸ್ವಾಮೀಜಿ ಸ್ವಲ್ಪ ಭರ್ತ್ಸನೆ ಮಾಡಿಯೇ ಹೇಳುತ್ತಿದ್ದರು. ‘ನಾವೇ ಕ್ರಮವರಿತು ನಿಯಮಪಾಲನೆ ಮಾಡದಿದ್ದರೆ ಇನ್ನು ಹುಡುಗರಿಂದ (ಹೊಸತಾಗಿ ಮಠಕ್ಕೆ ಸೇರಿದವರು; ಕಿರಿಯರು) ತಾನೆ ಅದನ್ನು ನಿರೀಕ್ಷಿಸುವುದು ಹೇಗೆ?’ ಆದ್ದರಿಂದಲೆ ಪ್ರಾಯಶ್ಚಿತ್ತರೂಪವಾಗಿ ಮಾಧುಕರೀ ಭಿಕ್ಷೆಯನ್ನು ನಿಯಮಿಸುತ್ತಿದ್ದರು. ಒಂದೋ ಎರಡೋ ಸಾರಿ ನನಗೂ ‘ಮಾಧುಕರೀ ಭಿಕ್ಷೆ’ ಒದಗಿತ್ತು.”

ಸಂಜೆ ಸುಮಾರು ಐದೂವರೆಯಾಗಿತ್ತು, ಮಹಾಪುರುಷಜಿ ತಮ್ಮ ಕೊಠಡಿಯಲ್ಲಿ ಕುಳಿತಿದ್ದರು. ತರುಣಭಕ್ತನೊಬ್ಬನು ಪ್ರವೇಶಿಸಿ ಪ್ರಣಾಮ ಮಾಡಿ, ಬಳಿಯೆ ನೆಲದ ಮೇಲೆ ಕುಳಿತುಕೊಂಡನು. ಆತನ ಹೆಸರನ್ನು ಕೇಳಿ ಮಹಾಪುರುಷಜಿ “ಇಲ್ಲಿಂದ (ಎಂದರೆ ತಮ್ಮ ಕೈಯಿಂದ) ನಿನಗೆ ದೀಕ್ಷೆಯಾಗಿತ್ತೆ?” ಎಂದು ಕೇಳಿದರು:

ಭಕ್ತ: “ಹೌದು, ಹೋದ ಶ್ರಾವಣಮಾಸಲ್ಲಿ ತಮ್ಮಿಂದಲೆ ದೀಕ್ಷೆ ತೆಗೆದುಕೊಂಡಿದ್ದೇನೆ.”

ಸ್ವಾಮೀಜಿ: “ಒಳ್ಳೆಯದು, ಸರಿಯಾಗಿ ಜಪಧ್ಯಾನ ಮಾಡುತ್ತಿದ್ದೀಯೊ? ಇಲ್ಲಿಂದ ನಿನಗೆ ದೀಕ್ಷೆಯಾಗಿರಲಿ ಬಿಡಲಿ, ಆತನ ನಾಮಜಪವನ್ನು ಮಾತ್ರ ಬಿಡಬೇಡ. ಅದರಿಂದ ಮಾತ್ರವೆ ನಿನಗೆ ಶಾಂತಿ, ಆನಂದ, ಕಾತರಭಾವದಿಂದ ಆತನನ್ನು ಕುರಿತು ಹೀಗೆಂದು ಪ್ರಾರ್ಥಿಸು, ಹೇ ಸ್ವಾಮಿ, ನನಗೆ ಭಕ್ತಿಯನ್ನು ದಯಪಾಲಿಸು; ವಿಶ್ವಾಸವನ್ನು ನೀಡು; ನಿನ್ನ ಭುವನಮೋಹಿನಿಯಾದ ಮಾಯೆಯಲ್ಲಿ ನಾನು ಮುಳುಗಿಹೋಗದಂತೆ ಕೃಪೆಮಾಡು.’ ನಾಮ ಜಪಮಾಡು; ಹೃತ್ಪೂರ್ವಕ ಪ್ರಾರ್ಥಿಸು: ಎಷ್ಟು ಸಮಯ ಸಿಕ್ಕರೆ ಅಷ್ಟು ಸಮಯ, ಸಾಧ್ಯವಾದಷ್ಟು.”

ಭಕ್ತ: “ಮೊದಲು ಬಹಳ ಹೊತ್ತಿನನವರೆಗೂ ಹಾಗೆಯೆ ಮಾಡುತ್ತಿದ್ದೆ. ಆದರೆ ಇತ್ತೀಚೆಗೆ ಸಮಯ ಸಿಕ್ಕುವುದೆ ಕಷ್ಟವಾಗಿದೆ. ಆದ್ದರಿಂದ ಸ್ವಲ್ಪ ಕಾಲ ಮಾತ್ರ ಜಪಧ್ಯಾನ ಮಾಡುತ್ತೇನೆ.”

ಸ್ವಾಮೀಜಿ: “ಸರಿ ಒಳ್ಳೆಯದೆ! ಆದರೂ ಹೊತ್ತು ಸ್ವಲ್ಪವಾದರೂ ಚಿಂತೆಯಿಲ್ಲ. ಜಪಧ್ಯಾನ ಮಾಡುವಾಗ ತುಂಬ ಅನುರಾಗದಿಂದ, ತುಂಬ ಪ್ರೇಮದಿಂದ ಮಾಡಬೇಕು. ಏದೊ ಹೊತ್ತು ನಿಮಿಷ ಮಾಡಿದರೂ ಸಮಸ್ತ ಪ್ರಾಣ ಮನಃಪೂರ್ವಕವಾಗಿ ಮಾಡಬೇಕು. ದೇವರು ಅಂತರ‍್ಯಾಮಿ. ನಿನ್ನೊಳಗೂ ಇದ್ದಾನೆ, ಅವನು ನೋಡುವುದು ನಿನ್ನ ಹೃದಯವನ್ನು. ನಿನ್ನ ಅನುರಾಗವನ್ನು ನೋಡುತ್ತಾನೆಯೆ ಹೊರತು ನೀನು ಎಷ್ಟು ಸಮಯ ಕಳೆಯುತ್ತೀಯೆ ಎನ್ನುವುದನ್ನಲ್ಲ. ದಿನಾಂತದಲ್ಲಿ ಸಮಯವೊದಗಿದಾಗಲೆಲ್ಲ ದೇವರನ್ನು ಕೂಗಿ ಕರೆ. ‘ಹೇ ಪ್ರಭು, ಈ ಸಂಸಾರಸಾಗರದಲ್ಲಿ ಸಿಕ್ಕಿ ನಿನ್ನನ್ನು ಮರೆಯದಂತಾಗಲಿ!’ ಎಂದು. ಈ ಬದುಕೆಲ್ಲ ಎರಡು ದಿನದ್ದು. ಮಾಯೆಯಲ್ಲಿ ಸಿಕ್ಕಿಬಿದ್ದು ಅವನನ್ನು ಮರೆಯಬೇಡ. ನೀನು ನೂರು ಕೆಲಸ ಮಾಡುತ್ತಿರಬಹುದು, ಸಾವಿರಾರು ರೂಪಾಯಿ ಸಂಪಾದಿಸುತ್ತಿರಬಹುದು, ಆದರೆ ಮನಸ್ಸಿನ ಅಂತರಾಳದಲ್ಲಿ ಈ ಅರಿವಿರಲಿ: ಇವೆಲ್ಲ ಅನಿತ್ಯ, ಇಂದಲ್ಲ ನಾಳೆ ಒಂದು ದಿನ ನಾವು ಅವನ್ನೆಲ್ಲ ಬಿಟ್ಟು ಹೋಗಲೇಬೇಕು ಎಂದು. ಏಕಮಾತ್ರ ನಿತ್ಯವಸ್ತು ಎಂದರೆ ಭಗವಾನ್. ಅವನನ್ನೆ ಕರೆ, ಅವನಲ್ಲಿಯೆ ಶರಣಾಗು, ನಿನ್ನ ಬಂಧನವೆಲ್ಲ ಕೊಚ್ಚಿಹೋಗುತ್ತದೆ, ಮಗೂ.”

ಭಕ್ತ: “ತಾವು ಆಶೀರ್ವಾದ ಮಾಡಿದರೆ ಎಲ್ ಸರಿಹೋಗುತ್ತದೆ”

ಸ್ವಾಮೀಜಿ: “ಆಶೀರ್ವಾದವನ್ನೇನೂ ಮಾಡುತ್ತೇನೆ; ತುಂಬ ಆಶೀರ್ವಾದ ಮಾಡುತ್ತೇನೆ. ಆಶೀರ್ವಾದವಲ್ಲದೆ ಬೇರೆ ಏನು ಮಾಡುತ್ತೇನೆ? ಆಶೀರ್ವಾದ ರೂಪವಾಗಿಯೇ ಇದನ್ನೆಲ್ಲ ನಿನಗೆ ಹೇಳುತ್ತಿರುವುದು. ಶ್ರೀ ಠಾಕೂರರಿಗೆ ಮೊರೆಯಿಡು; ಅವರಿಗೆ ಶರಣುಹೋಗು. ನಮ್ಮ ಗುರುಮಹಾರಾಜರು ಜೀವಂತವಿದ್ದಾರೆ. ವ್ಯಾಕುಲನಾಗಿ ಪ್ರಾರ್ಥಿಸು; ಉತ್ತರ ದೊರೆತೆ ದೊರೆಯುತ್ತದೆ. ಬಹುಜನರ ಕಲ್ಯಾಣಾರ್ಥವಾಗಿ ಭಗವಂತನು, ಯಾವುದನ್ನು ಪರಬ್ರಹ್ಮ ಎಂದು ಕರೆಯುತ್ತಾರೊ ಅದು, ಈ ಯುಗದಲ್ಲಿ ಶ್ರೀರಾಮಕೃಷ್ಣ ರೂಪಧಾರಣೆ ಮಾಡಿ ಬಂದಿದ್ದಾನೆ. ಎಂದು ನೀನು ಈ ಯುಗಾವತಾರ ಶ್ರೀ ರಾಮಕೃಷ್ಣರ ಅಡಿದಾವರೆಯಲ್ಲಿ ಆಶ್ರಯ ಪಡೆದೆಯೋ ಅಂದೇ ನಿನಗೆ ಭಯನಿವಾರಣೆ ಯಾಯಿತೆಂದು ತಿಳಿ.”

ಭಕ್ತ: ಇದುವರೆಗೆ ನಾನೊಂದು ಸಂಗತಿ ತಮಗೆ ತಿಳಿಸಲಿಲ್ಲ, ಹೆದರಿಕೆಯಿಂದ ನಾಚಿಕೆಯಿಂದ. ಕೆಲದಿನಗಳ ಹಿಂದೆ ನನಗೆ ಮದುವೆಯಾಯ್ತು. ತಂದೆ ತಾಯಿಯರ ಕಣ್ಣೀರಿನ ಬಲತ್ಕಾರದಿಂದಲೂ ಅವರ ಸಂತೋಷಾರ್ಥವಾಗಿ ಒಪ್ಪಬೇಕಾಯಿತು, ನನಗೆ ಸ್ವಲ್ಪವೂ ಇಷ್ಟವಿರದಿದ್ದರೂ.

ಸ್ವಾಮೀಜಿ: “ಆದರೇನಂತೆ? ಹುಟ್ಟು, ಸಾವು, ಮದುವೆ ಈ ಮೂರು ಮನುಷ್ಯರ ಕೈಯಲ್ಲಿ ಇಲ್ಲ. ಮದುವೆ ವಿಧಾತನ ನಿಯಮ. ಮದುವರೆಯಾದರೇನಂತೆ? ಅದರಲ್ಲಿಯೆ ಆಸಕ್ತನಾಗಿ ಮುಳುಗಿರಬೇಕೆಂದೇನೂ ಇಲ್ಲವಲ್ಲ! ಸರಿ. ನೀನು ನಿನ್ನ ಕೆಲಸಕಾರ್ಯಗಳನ್ನು ಮಾಡು. ನಿನಗೆ ಸಾಧ್ಯವಾದಷ್ಟೂ ಸಾಧನೆ ಭಜನೆ ಮಾಡು, ನಿನ್ನ ಹೆಂಡತಿಯೂ ಹಾಗೇ ಮಾಡಲಿ; ಆಕೆಗೂ ಇದೆ ಒಂದು ಜೀವನೋದ್ದೇಶ. ಈ ಜೀವನ ಭೋಗವಿಲಾಸಕ್ಕಾಗಿ ಅಲ್ಲ. ನೀನು ಹೇಗೆ ಭಗವಂತನ ಸೃಷ್ಟಿಯ ಒಂದು ಜೀವವೋ ಹಾಗೆಯೇ ಆಕೆಯೂ. ನೀನು ಹೇಗೆ ಭಗವಂತನ ಅಂಶವೋ ಆಕೆಯೂ ಹಾಗೆಯೆ ಜಗದಂಬೆಯ ಅಂಶ. ನೀನು ಎಂತಹ ಬಾಳು ಬದುಕಿತ್ತೀಯೋ ಅಂತಹದನ್ನೇ ಆಕೆಗೂ ಕಲಿಸು. ಆಕೆಯೂ ಭಗವಂತನ ನಾಮಸ್ಮರಣೆ ಮಾಡುತ್ತಾಳೆ; ಪೂಜೆ, ಪ್ರಾರ್ಥನೆ ಮಾಡುತ್ತಾಳೆ; ಪವಿತ್ರ ಕೃತಿಗಳನ್ನು ಓದುತ್ತಾಳೆ, ಸಂಸಾರದ ಕೆಲಸಕಾರ್ಯಗಳನ್ನು ಮಾಡುತ್ತಾಳೆ; ಗುರುಜನರ ಸೇವೆ ಶುಶ್ರೂಷೆ ಮಾಡುತ್ತಾಳೆ. ಈ ಹಾದಿಯಲ್ಲಿ ಆಕೆಯನ್ನು ನಡೆಸು. ಅದೇ ತಾನೆ ಮಾಡಬೇಕಾದದ್ದು? ಹೀಗೆ ಮಾಡದೆ, ಆಕೆಯನ್ನು ದೇಹ ಭೋಗ ವಿಲಾಸಕ್ಕಾಗಿ ಉಪಯೋಗಿಸಿದರೆ, ಆಗ ನಾನು ಚಿಃ ಎನ್ನುತ್ತೇನೆ. ಭೋಗಾಸಕ್ತನಾಗಿ ಬಿಡಬಾರದಯ್ಯ, ಕಾಮಕಾಂಚನಗಳು ಮನುಷ್ಯನ ಮನುಷ್ಯತ್ವವನ್ನೇ ಹಾಳು ಮಾಡಿಬಿಡುತ್ತವೆ.”

ಭಕ್ತ: “ನನಗೆ ಭರವಸೆಯಿದೆ, ತಮ್ಮ ಆಶೀರ್ವಾದವಿರುವಾಗ, ಗುರುದೇವರ ಆಶ್ರಯವಿರುವಾಗ ಎಲ್ಲವೂ ಸರಿಹೋಗುತ್ತದೆ ಎಂದು.”

ಸ್ವಾಮೀಜಿ: “ಎಲ್ಲಕ್ಕಿಂತಲೂ ಹೆಚ್ಚಾಗಿ ಬದುಕಿನ ಗುರಿ ಏನು ಎಂಬುದನ್ನು ಮರೆಯದಿರು. ಜೀವನ ಎರಡು ದಿನದ್ದು, ಅನಿತ್ಯ, ಭೋಗವಿಲಾಸಕ್ಕಾಗಿಯಲ್ಲ- ಇದನ್ನು ಚೆನ್ನಾಗಿ ನೆನಪಿನಲ್ಲಿಡು. ಈಗ ದೇವರ ಮನೆಗೆ ಹೋಗಿ, ಸ್ವಲ್ಪ ಹೊತ್ತು ಅಲ್ಲಿರು. ಠಾಕೂರರಿಗೆ ಪ್ರಣಾಮ ಮಾಡು; ಧ್ಯಾನಮಾಡು; ಹೃತ್‌ಪೂರ್ವಕವಾಗಿ ಪ್ರಾರ್ಥನೆಮಾಡು. ಅವರು ನಿಶ್ಚಯವಾಗಿಯೂ ನಿನಗೆ ಶಾಂತಿಯನ್ನು ದಯಪಾಲಿಸುತ್ತಾರೆ.”

* * *

ಈಶ ಸೂತ್ರವಿರಾಡ್ ವೇಧೋ ವಿಷ್ಣುರುದ್ರೇಂದ್ರವಹ್ನಯಃ |
ವಿಘ್ನ ಭೈರವ ಮೈರಾಲ ಮಾರಿಕಾ ಯಕ್ಷ ರಾಕ್ಷಸಾಃ ||
ವಿಪ್ರ ಕ್ಷತ್ರಿಯ ವಿಟ್ ಶೂದ್ರಾ ಗವಾಶ್ಚ ಮೃಗ ಪಕ್ಷಿಣಃ |
ಅಶ್ವತ್ಥ ವಟ ಚೂತಾದ್ಯಾ ಯವವ್ರೀಹಿ ತೃಣಾದಯಃ ||
ಜಲ ಪಾಷಾಣ ಮೃತ್ಕಾಷ್ಠ ವಾಸ್ಯಾ ಕುದ್ದಾಲಕಾದಯಃ |
ಈಶ್ವರಾಃ ಸರ್ವ ಏವೈತೇ ಪೂಜಿತಾಃ ಫಲದಾಯಿನ!!  – ವಿದ್ಯಾರಣ್ಯರ ‘ಪಂಚದಶೀ’

“ಈಶ್ವರ ಹಿರಣ್ಯಗರ್ಭ, ಬ್ರಹ್ಮ, ವಿಷ್ಣು, ರುದ್ರ, ಇಂದ್ರ, ಅಗ್ನಿ, ಗಣೇಶ, ಭೈರವ, ಮೈರಾಲ, ಮಾರಿಕಾ, ಯಕ್ಷರು, ರಾಕ್ಷಸರು, ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು, ಶೂದ್ರರು, ಗೋವು, ಕುದುರೆ, ಮೃಗಪಕ್ಷಿಗಳು, ಅಶ್ವತ್ಥ, ಆಲದಮರ, ಮಾವಿನಮರ, ಗೋಧಿ ನೆಲ್ಲು ಹುಲ್ಲು ಮೊದಲಾದವು, ನೀರು, ಕಲ್ಲು, ಮಣ್ಣು, ಕಟ್ಟಿಗೆ, ಬಾಚಿ, ಗುದ್ದಲಿ ಇವೆಲ್ಲವನ್ನೂ ಈಶ್ವರ ಭಾವದಿಂದ ಪೂಜಿಸಿದರೆ ಫಲವನ್ನು ಕೊಡುತ್ತವೆ.”

* * *