ಮಧ್ಯಾಹ್ನ ಊಟ ಮಾಡುತ್ತಿರುವಾಗ ಮಹಾಪುರುಷಜಿ ಹೇಳಿದರು: “ನನಗೆ ಅನ್ನ ಕಾಯಿಪಲ್ಯದ ಸರಳ ಭೋಜನ ಇಷ್ಟ. ತೃಪ್ತಿಯೂ ಆಗುತ್ತದೆ. ಆದರೆ ನೋಡು ಇವನ್ನೆಲ್ಲ (ತುಸು ಕಹಿಯಾದ ಒಂದು ತರಹದ ಪಲ್ಯವನ್ನು ತೋರಿಸಿ) ಔಷಧ ತೆಗೆದುಕೊಳ್ಳುವಂತೆ ತೆಗೆದುಕೊಳ್ಳುತ್ತೇನೆ.” ಬೇಯಿಸಿದ ಪಡವಲಕಾಯನ್ನು ತಿನ್ನುತ್ತಾ “ನಿಜವಾಗಿ ನೋಡಿದರೆ, ಊಟ ಕೂಡ ಔಷಧವೆ, ಆಚಾರ್ಯ ಶಂಕರರು ಹೇಳುತ್ತಾರೆ ‘ದಿನಂಪ್ರತಿ ಭಿಕ್ಷಾರೂಪದ ಔಷಧಿ ಸೇವನೆ ಮಾಡಿ ಕ್ಷುಧಾರೂಪದ ವ್ಯಾಧಿಗೆ ಚಿಕಿತ್ಸೆ ನೀಡು’ ‘ಕ್ಷುದ್‌ವ್ಯಾಧಿಶ್ಚ ಚಿಕಿತ್‌ಸ್ಯತಾಂ, ಪ್ರತಿದಿನಂ ಭಿಕ್ಷೌಷಧಂ ಭುಜ್ಯತಾಮ್.’ ಕ್ಷುಧೆಯೂ ಒಂದು ವ್ಯಾಧಿಯೆ. ಔಷಧಿ ವ್ಯಾಧಿಯನ್ನು ಉಪಶಮನಗೊಳಿಸುವಂತೆ, ಹಸಿವೆಯ ರೋಗಕ್ಕೆ ಊಟವೆ ಔಷಧಿ. ಉಣ್ಣುವಾಗಲೆಲ್ಲ ನಾವಿದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಮಹಾಜ್ಞಾನಿಯಾದ್ದರಿಂದಲೆ ಶಂಕರಾಚಾರ್ಯರು ಹಾಗೆ ಬೋಧಿಸಿದ್ದಾರೆ, ಆತ್ಮಕ್ಕಾದರೋ ಹಸಿವೆ ಮೊದಲಾದ ಬಾಧೆಗಳು ಇಲ್ಲವೆ ಇಲ್ಲ; ಅದು ನಿರ್ವಿಕಾರ, ಶುದ್ಧ ಚೈತನ್ಯ ಸ್ವರೂಪ, ಹಸಿವು ಬಾಯಾರಿಕೆಗಳು ಪರಮಾತ್ಮನ ಧರ್ಮಗಳಲ್ಲ; ಅವೆಲ್ಲ ದೇಹದ ಧರ್ಮಗಳು.”

* * *

ಗ್ರಂಥಮಭ್ಯಸ್ಯ ಮೇಧಾವೀ ಜ್ಞಾನವಿಜ್ಞಾನ ತತ್ಪರಃ
ಪಲಾಲಮಿವ ಧಾನ್ಯಾರ್ಥೀ ತೃಜೇತ್ ಗ್ರಂಥಮಶೇಷತ ||  – ವಿದ್ಯಾರಣ್ಯರ ‘ಪಂಚದಶೀ’

“ಶಾಸ್ತ್ರಜ್ಞಾನದಲ್ಲಿಯೂ ಅನುಭವದಲ್ಲಿಯೂ ತತ್ಪರನಾದ ಮೇಧಾವಿಯು ಗ್ರಂಥವನ್ನು ಅಭ್ಯಾಸಮಾಡಿದ ಮೇಲೆ, ಕಾಳು ಬೇಕಾದವನು ಹುಲ್ಲನ್ನು ಎಸೆಯುವಂತೆ, ಗ್ರಂಥಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು.”

* * *