ಸಾಯಂಕಾಲ ಸುಮಾರು ಒಂದು ಗಂಟೆಯಾಗಿತ್ತು. ಸಂನ್ಯಾಸಿಯೊಬ್ಬರು ಮಹಾಪುರುಷಜಿಗೆ ಪ್ರಣಾಮ ಸಲ್ಲಿಸಿದ ಮೇಲೆ ಅವರು “ಏನು ವಿಷಯ? ಏನಾದರೂ ಹೇಳುವುದಿದೆಯೆ?” ಎಂದು ಪ್ರಶ್ನಿಸಿದರು. ಹಾಗೆ ಕೇಳಿದ್ದಕ್ಕೆ ಕಾರಣ, ಆ ಸ್ವಾಮೀಜಿ ಆ ವೇಳೆಯಲ್ಲಿ ಬರುತ್ತಿದ್ದುದು ಅತ್ಯಪೂರ್ವವಾಗಿದ್ದುದರಿಂದ.

ಸಂನ್ಯಾಸಿ: “ಹೌದು ಸ್ವಾಮೀಜಿ, ನಿನ್ನೆ ಮಾಸ್ತರ್ ಮಹಾಶಯರ ಹತ್ತಿರಕ್ಕೆ ಹೋಗಿದ್ದೇವು. ಅವರು ಪರಮಹಂಸರ ವಿಚಾರವಾಗಿ ಮಾತಾಡುತ್ತಾ ನಮ್ಮೊಡನೆ ಬಹಳ ಹೊತ್ತು ಕಳೆದರು.”

ಸ್ವಾಮೀಜಿ: “ಆಹಾ! ಅವರು ಶ್ರೀರಾಮಕೃಷ್ಣರ ಮಹಾಭಕ್ತರು. ಗುರು ಮಹಾರಾಜರ ವಿಚಾರವನ್ನಲ್ಲದೆ ಬೇರೆ ಏನನ್ನೂ ನೀವು ಅವರ ಬಳಿ ಕೇಳುವುದಿಲ್ಲ.”

ಸಂನ್ಯಾಸಿ: “ಮಹಾರಾಜ್, ಮನಸ್ಸಿನಲ್ಲಿ ನನಗೆ ಮಹಾ ಅಶಾಂತಿ. ಸಾಧನೆ ಭಜನೆ ಜಪ ಧ್ಯಾನಾದಿಗಳನ್ನು ಹೆಚ್ಚಿಗೆ ಮಾಡಲಾಗುತ್ತಿಲ್ಲ. ಕಾಲವೂ ಸೋರಿ ಹೋಗುತ್ತಿದೆ. ಏನು ಗತಿ ನಮಗೆ?”

ಸ್ವಾಮೀಜಿ: “ಅಯ್ಯಾ, ದೇವರಿಗೆ ಶರಣಾಗತನಾಗಿರು. ಅವನ ಕೃಪೆಯಿಲ್ಲದೆ ಏನೂ ಸಾಧ್ಯವಿಲ್ಲ: ಮನುಷ್ಯಮಾತ್ರನಾದವನು ಬರಿಯ ಜಪಧ್ಯಾನಮಾಡಿಯೇ ಭಗವಂತನನ್ನು ಹಿಡಿಯಲು ಸಾಧ್ಯವೇ? ಅವನೇ ದಯೆಯಿಂದ ಮೈದೋರಿದರೆ ಆಗ ಮಾತ್ರ ಅವನನ್ನು ಕಾಣಲು ಸಾಧ್ಯ, ಇಲ್ಲದಿದ್ದರೆ ಇಲ್ಲ. ಯಾರಿಗೆ ತಾನೆ ಸಾಧ್ಯ ಅವನನ್ನು ಹಿಡಿಯುವುದಕ್ಕೆ? ಒಬ್ಬ ಮನುಷ್ಯ ಸಾಧನೆ ಭಜನೆಯನ್ನಾದರೂ ಎಷ್ಟು ಹೊತ್ತು ಮಾಡಿಯಾನು? ಎರಡು ಗಂಟೆ! ಅಷ್ಟೇ ಅಲ್ಲ; ಸಾಧನೆಗೆ ಪ್ರವೃತ್ತಿಯನ್ನೂ ಕೊಡುವವನು ಅವನೇ. ಸರ್ವಶಕ್ತಿಯ ಆಧಾರವೂ ಆತನೆ! ಅವನ ದಯೆ ಇರದಿದ್ದರೆ, ಅವನು ಶಕ್ತಿ ಕೊಡದಿದ್ದರೆ, ಸಾಧನೆ ಭಜನೆ ಮಾಡಿ ನೀನೇನು ಮಾಡಬಲ್ಲೆ? ಅದಕ್ಕೇ ನಾನು ಹೇಳುವುದು ‘ಶರಣುಹೋಗು’ ಎಂದು. ಕಾತರಭಾವದಿಂದ ಪ್ರಾರ್ಥನೆಮಾಡು, ‘ಪ್ರಭೂ, ಕೃಪೆದೋರು; ಪ್ರಭೂ, ಕೃಪೆದೋರು’ ಎಂದು, ಹಾಗೆ ಮಾಡಿದರೇ ಅವನು ಕೃಪೆದೊರುವುದು. ಕೃಪೆ! ಕೃಪೆ! ಕೃಪೆಯೊಂದೇ ಗತಿ. ಶ್ರೀ ಠಾಕೂರರು ಹೇಳುತ್ತಿದ್ದರು ‘ನೀನು, ನಿನ್ನದು, ಎನ್ನಬೇಕು: ನಾನು ನನ್ನದು ಎಂದಲ್ಲ.’ ಅವನು ದಯೆತೋರಿ ಕಾಣಿಸಿಕೊಳ್ಳದಿದ್ದರೆ ನಾವೇನು ತಾನೆ ಮಾಡಬಲ್ಲೆವು? ದಯೆ! ದಯೆ! ಪ್ರಭೂ, ದಯೆ ತೋರು!”

ಸಂನ್ಯಾಸಿ: “ಪ್ರಾರ್ಥನೆ ಕೂಡ ಮಾಡಲಾರೆ, ಮಾಹಾರಾಜ್. ಮನಸ್ಸೂ ಚಂಚಲ; ಸ್ಥಿರಗೊಳಿಸಲೂ ಸಾಧ್ಯವಾಗುತ್ತಿಲ್ಲ.!”

ಸ್ವಾಮೀಜಿ: “ಆಗದು; ಅದಾಗದು. ಪ್ರಾರ್ಥನೆ ಮಾಡಲೇಬೇಕು. ಅದೂ ಅತ್ಯಂತ ವ್ಯಾಕುಲ ಹೃದಯದಿಂದ ಪ್ರಾರ್ಥನೆ ಮಾಡಬೇಕು. ಮನದಲ್ಲಿ ನೈರಾಶ್ಯ ತಂದುಕೊಳ್ಳಬೇಡ. ದುಃಖಪಡಬೇಡ, ಆನಂದಚಿತ್ತನಾಗಿಯೆ ಪ್ರಾರ್ಥನೆಮಾಡು. ಅವನು ಎಲ್ಲವನ್ನೂ ದಯಪಾಲಿಸುತ್ತಾನೆ. ಅಯ್ಯಾ, ಎಲ್ಲವನ್ನೂ ಕೊಟ್ಟೇ ಕೊಡುತ್ತಾನೆ. ನಿನಗೆ ಕೊಡದೆ ಯಾವುದನ್ನೂ ನಿನ್ನಿಂದ ಹಿಡಿದಿಟ್ಟುಕೊಳ್ಳುವುದಿಲ್ಲ. ಭಕ್ತಿ, ವಿಶ್ವಾ, ತ್ಯಾಗ, ಪವಿತ್ರತೆ, ವಿವೇಕ, ವೈರಾಗ್ಯ ಎಲ್ಲವನ್ನೂ ನೀಡುತ್ತಾನೆ. ಅವನಿಗೆ ಏನೇನಿದೆಯೋ ಅದೆಲ್ಲವನ್ನೂ ನಿನಗೀಯುತ್ತಾನೆ. ನಿನಗಾಗಿ, ನಿನಗೆ ಕೊಡುವುದಕ್ಕೆಂದೇ, ಅವನು ಬಂದದ್ದು. ನಿನಗೆ ದಯಪಾಲಿಸಲೆಂದೇ ಅವನು ಇಲ್ಲಿಗೆ ಸೆಳೆದಿದ್ದಾನೆ, ಆಶ್ರಯವಿತ್ತಿದ್ದಾನೆ, ತನ್ನ ಆಶ್ರಯದಲ್ಲಿಯೇ ಇಟ್ಟುಕೊಂಡಿದ್ದಾನೆ. ನಿನ್ನ ಪ್ರಯತ್ನದ ಫಲವಾಗಿಯೆ ನೀನು ಇಲ್ಲಿಗೆ ಬಂದೆ ಎಂದು ತಿಳಿದು ಕೊಂಡಿದ್ದೀಯೇನು? ಹಾಗೆಂದೂ ತಿಳಿಯಬೇಡ. ಅಂತಹ ಭಾವಕ್ಕೆ ಮನಸ್ಸಿನಲ್ಲಿ ಸ್ವಲ್ಪವೂ ಜಾಗ ಕೊಡಬೇಕು. ಆತನ ಕೃಪೆಯೇ ನಿಮ್ಮೆಲ್ಲರನ್ನೂ ಈ ಎಡೆಗೆ ಎಳೆತಂದಿದೆ. ಆತನು ಅಹೇತುಕ ಕೃಪಾ ಸಿಂಧು! ಅಯ್ಯಾ, ಶರಣುಹೋಗು; ಕಾಲಕ್ರಮೇಣ ಎಲ್ಲವೂ ಕೈಗೂಡುತ್ತದೆ, ಭಕ್ತಿ ವಿಶ್ವಾಸಗಳನ್ನು ಪರಿಪೂರ್ಣವಾಗಿ ದಯಪಾಲಿಸುತ್ತಾನೆ.”

ಹೀಗೆಂದು ಸ್ವಾಮಿಗಳು ಹಾಡತೊಡಗಿದರು:

‘ನಿನ್ನಲಿಯೆ ನೀನಿರು, ಓ ಮನವೆ;
ಅಲ್ಲಿಲ್ಲಿಗೆ ಅಲೆಯದಿರೋ ಮನವೆ;
ನೀ ಬಯಸುವುದಲ್ಲಾ ತಾನಿಹುದಲ್ಲಿ
ನಿನ್ನಂತಃಕರಣದ ಅಂತಃಪುರದಲ್ಲಿ!’

“ನೀನು ಶ್ರೀ ಗುರುವಿನ ಆಶ್ರಯದಲ್ಲಿದ್ದೀಯೆ. ಏತಕ್ಕೆ ಭಯ ನಿನಗೆ? ಏತರ ಭಯ ನಿನಗೆ?”

* * *