ಸಾಯಂಕಾಲ ಮುಂಗೇರ್ ನಗರದಲ್ಲಿ ವಕೀಲಿ ವೃತ್ತಿಯಲ್ಲಿದ್ದ ಶ್ರೀಯುತ ಗಂಗಾಚರಣ ಮುಖ್ಯೋಪಾಧ್ಯಾಯರು ಅವರ ಮಗಳು ಮತ್ತು ಮನೆಯ ಕೆಲವು ಭಕ್ತರು ಸಹಿತವಾಗಿ ಮಠಕ್ಕೆ ಬಂದರು. ಮಹಾಪುರುಷ ಮಹಾರಾಜರಿಗೆ ಸಾಷ್ಟಾಂಗ ಪ್ರಣಾಮ ಮಾಡಿದ ಮೇಲೆ ಗಂಗಾಚರಣ ಬಾಬು “ನಿಮ್ಮ ಶರೀರ ತುಂಬ ಖಿಲವಾಗಿ ಹೋಗಿರುವಂತೆ ಕಾಣುತ್ತಿದೆ ಮಹಾರಾಜ್, ಹೋದ ವರುಷ ನಾನು ನೋಡಿದಾಗ ಇದ್ದುದಕ್ಕಿಂತಲೂ ಇಳಿದುಹೋಗಿದೆ” ಎಂದರು.

ಸ್ವಾಮೀಜಿ: “ಹೌದು, ಶರೀರ ತುಂಬ ಖಿಲವಾಗಿದೆ. ದಿನದಿನಕ್ಕೂ ಹೆಚ್ಚು ಹೆಚ್ಚು ಖಿಲವಾಗುತ್ತಲೂ ಇದೆ. ಇದು ಷಡ್‌ವಿಕಾರಾತ್ಮಕವಾದ ಶರೀರ; ಈಗ ಕೊನೆಯ ವಿಕಾರದ ಕಡೆಗೆ ಸಮೀಪಿಸುತ್ತಿದೆ ಹಾಗಾಗುವುದು ಸ್ವಾಭಾವಿಕ. ದೇಹದ ಧರ್ಮವೇ ಅದು. ಎಲ್ಲ ಶರೀರಗಳ ವಿನಾಶವೂ ಒಂದು ದಿನ ನಿಶ್ಚಯ.”

ಗಂಗಾಚರಣ: “ಮಠದಿಂದ ಬರುತ್ತಿದ್ದ ಒಂದೊಂದು ಕಾಗದದಲ್ಲಿಯೂ ನಿಮ್ಮ ಆರೋಗ್ಯದ ಇಳಿಮುಖ ವಿಷಯವೇ ಇರುತ್ತಿತ್ತು. ಆದ್ದರಿಂದ ತಮ್ಮನ್ನು ನೋಡಿಕೊಂಡು ಹೋಗೋಣ ಎಂದು ಬಂದೆ; ತುಂಬ ಆಶೆಯಾಯಿತು.”

ಸ್ವಾಮೀಜಿ: (ನಗುನಗುತ್ತ) “ಈ ಹೊರಗಡೆಯ ನೋಡುವಿಕೆಯಿಂದ ಏನು ಪ್ರಯೋಜನ, ಹೇಳು? ಒಳಗಡೆಯ ಸಂದರ್ಶನವೆ ನಿಜವಾದ ಸಂದರ್ಶನ. ಭಗವಂತ ಎಲ್ಲರ ಒಳಗೂ ಇದ್ದಾನೆ. ಸರ್ವಲೋಕಗಳ ಉದ್ಭವಕ್ಕೂ ಆತನೆ ಆದಿಮೂಲ.”

ಏತಸ್ಮಾಜ್ಜಾಯತೇ ಪ್ರಾಣೋ ಮನಃ ಸರ್ವೇಂದ್ರಿಯಾಣಿ ಚ |
ಖಂ ವಾಯುರ್ ಜ್ಯೋತಿರಾಪಃ ಪೃಥಿವೀ ವಿಶ್ವಸ್ಯ ಧಾರಿಣೀ ||

“ಅವನಿಂದಲೆ ಪ್ರಾಣ, ಮನಸ್ಸು, ಸರ್ವೇಂದ್ರಿಯಗಳು. ಆಕಾಶ, ವಾಯು, ಜ್ಯೋತಿ, ಜಲ, ಎಲ್ಲಕ್ಕೂ ಆಧಾರಭೂತವಾದ ಪೃಥಿವೀ. ಅಲ್ಲದೆ ಅವನೆ ಎಲ್ಲದರ ನಿಯಂತೃ. ‘ಭಯಾತ್‌ತಪತಿ ಸೂರ‍್ಯಃ’ ಇತ್ಯಾದಿ. ಅವನ ಭಯದಿಂದಲೆ ಸೂರ್ಯನು ಉಷ್ಣಕಾಂತಿಗಳನ್ನು ಕೊಡುತ್ತಾನೆ. ಮತ್ತೆ ಅವನಲ್ಲಿಯೆ ಎಲ್ಲವೂ ಲಯಹೊಂದುತ್ತವೆ. ‘ತಜ್ಜಲಾನ್’ – ಅವನಿಂದಲೆ ಬಂದು, ಅವನಲ್ಲಿಯೆ ಸಲ್ಲುವುದು ಈ ಜಗತ್. ಅವನೆ ವಿಶ್ವದ ಆದಿ, ಅವನೆ ಅಂತ್ಯ, ಅವನಲ್ಲಿಯೆ ಅದು ಕ್ರಿಯಾಶೀಲವಾಗಿರುತ್ತದೆ. ಹುಟ್ಟು ಸಾವುಗಳು ಅನಿವಾರ್ಯ ವ್ಯಾಪಾರ. ಯಾರೂ ಅವುಗಳನ್ನು ತಡೆಯಲಾಗುವುದಿಲ್ಲ. ದೇವರೊಬ್ಬನೆ ಅಜರ, ಅಮರ, ಶುದ್ಧ ಬುದ್ಧ ಮುಕ್ತ ಸ್ವಭಾವ. ಅಂತರಂಗದಲ್ಲಿ ಅವನನ್ನು ಅನುಸಂಧಾನ ಮಾಡುವುದೇ ಜೀವನದ ಉದ್ದೇಶ. ಅವನನ್ನು ಪಡೆದರೆ ಎಲ್ಲವನ್ನೂ ಪಡೆಯುತ್ತೇವೆ. ಆಮೇಲೆ ಈ ದೇಹ ಇದ್ದರೂ ಒಂದೆ, ಬಿದ್ದರೂ ಒಂದೇ ಅವನು ನಮ್ಮಲ್ಲಿ ಸರ್ವದಾ ನೆಲೆಸಿದ್ದಾನೆ, ಹೃದಯಮಂದಿರದಲ್ಲಿ ನಿತ್ಯಸ್ಥಿತಿ. ಅವನು ಸರ್ವ ಭೂತಾಂತರಾತ್ಮ. ಅವನೇ ಅಮೃತಧಾಮ, ಎಲ್ಲರೊಳಗೂ ಇದ್ದಾನೆ- ಆದರೆ ಸಂಪೂರ್ಣವಾದ ಅರಿವು ನಮಗಾಗಬೇಕು.”

ಗಂಗಾಚರಣ: ‘ಮಹಾರಾಜ್. ಒಂದು ಪ್ರಶ್ನೆ ಮನಸ್ಸಿಗೆ ಮೂಡಿದೆ. ಸತ್ತಮೇಲೆ ಎಲ್ಲರೂ ಪ್ರೇತಶರೀರ ಧಾರಣೆಮಾಡಲೇಬೇಕೆ?”

ಸ್ವಾಮೀಜಿ: “ಅದೇಕೆ? ಯಾರು ಭಗವದ್‌ಭಕ್ತರೊ, ಯಾರಿಗೆ ನಿಜವಾಗಿಯೂ ಭಕ್ತಿಲಾವಾಗಿದೆಯೊ, ಅವರು ಪ್ರೇತಶರೀರ ಧಾರಣೆಮಾಡಬೇಕಾದುದೇಕೆ? ಅಂಥವರೆಲ್ಲ ಭಗವಂತನೊಡನೆ ಒಂದಾಗುತ್ತಾರೆ. ಮುಕ್ತರಾಗುತ್ತಾರೆ.”

ಗಂಗಾಚರಣ: “ಹಾಗಾದರೆ ಈ ಶ್ರಾದ್ಧಾದಿ ಕ್ರಿಯಾವ್ಯವಸ್ಥೆ ಇದೆಯಲ್ಲ ಅದಕ್ಕೆಲ್ಲ ಅರ್ಥವೇನು? ವರ್ಷಕ್ಕೊಮ್ಮೆಯಾಗಲಿ ಅಥವಾ ಗೊತ್ತಾದ ಸಮಯಗಳಲ್ಲಾಗಲಿ ಎಲ್ಲರೂ ಶ್ರಾದ್ಧಾದಿಗಳನ್ನು ಮಾಡಬೇಕೋ ಬೇಡವೋ?”

ಸ್ವಾಮೀಜಿ: “ಹೌದು, ಅದನ್ನೇನೊ ಮಾಡಬೇಕು. ಅದು ಸಾಧಾರಣ ನಿಯಮ, ಎಲ್ಲರೂ ಅನುಸರಿಸುತ್ತಾರೆ. ಆದರೆ ಅದಕ್ಕೂ ಹೊರತುಗಳಿವೆ. ಉದಾಹರಣೆಗೆ ನಿನ್ನ ಹೆಂಡತಿಯನ್ನೆ ತೆಗೆದುಕೊಳ್ಳಬಹುದು. ನೀನು ಬೇಕಾದರೆ ಶ್ರಾದ್ಧಾದಿ ಕ್ರಿಯೆಗಳನ್ನು ಮಾಡಬಹುದು; ಮಾಡದೆ ಇದ್ದರೂ ಏನೂ ಅಪಾಯವಿಲ್ಲ. ಆಕೆ ಮಹಾಭಕ್ತೆಯಾಗಿದ್ದಳು. ಆಕೆಯ ವಿಷಯವೇ ಬೇರೆ. ನಿನ್ನ ಸಹಧರ್ಮಿಣಿ ದೇಹತ್ಯಾಗ ಮಾಡಿದ ಮೇಲೆ ಆಕೆ ಕೈಲಾಸ ಧಾಮಕ್ಕೆ ಹೋಗುತ್ತಿದ್ದುದನ್ನು ನಾನು ಸ್ಪಷ್ಟವಾಗಿ ಕಂಡೆ. ಆಕೆಗೆ ಮಹಾ ಉಚ್ಚಗತಿ ದೊರಕಿದೆ. ಆ ವಿಚಾರದಲ್ಲಿ ನೀನು ನಿಶ್ಚಿಂತನಾಗಿರು. ಏನೂ ಯೋಚನೆ ಬೇಡ.”

ಹಠಾತ್ತನೆ ಗಂಗಾಚರಣಬಾಬು ಗಟ್ಟಿಯಾಗಿ ರೋದಿಸುತ್ತಾ ಕಣ್ಣೀರು ಹರಿಸುತ್ತಾ ಕೈಜೋಡಿಸಿ ಮಹಾಪುರುಷಜಿಯ ಅಡಿಯ ಬಳಿ ಅಡ್ಡಬಿದ್ದು ಹೇಳಿದರು: “ನನಗೆ ನೀವು ಭಿಕ್ಷೆ ಕೊಡಬೇಕು, ಮಹಾರಾಜ್, ತಾಯಿಯ ಶ್ರೀಪಾದ ಪದ್ಮದಲ್ಲಿ ನನಗೆ ಶ್ರದ್ಧಾಭಕ್ತಿಗಳು ಮೂಡುವಂತೆ, ಬದುಕಿನ ಕೊನೆಯಲ್ಲಿ ಆಕೆಯ ಚರಣತಲದಲ್ಲಿ ಆಶ್ರಯ ದೊರೆಯುವಂತೆ.” ಹೇಳುತ್ತಾ ಹಸುಳೆಯಂತೆ ಅಳತೊಡಗಿದರು.

ಮಹಾಪುರುಜಿ ಗಂಗಾಚರಣಬಾಬುವಿನ ತಲೆಯ ಮೇಲೆ ಕೈಯಿಟ್ಟು “ಅಯ್ಯಾ, ನಿನ್ನ ಪ್ರಾರ್ಥನೆ ನೆರವೇರಲಿ. (ಇಲ್ಲಿ ತಟ್ಟನೆ ಗೌರವಾರ್ಥದ ನೀವು ನಿಮ್ಮ ಎಂಬ ಸಂಬೋಧನೆ ನಿಂತಿತು) ನಿನ್ನಲ್ಲಿ ಭಕ್ತಿ ವಿಶ್ವಾಸಗಳು ಇವೆ; ಅವು ಇನ್ನೂ ಹೆಚ್ಚಾಗಲಿ, ಹೃದಯ ತುಂಬಿ ಹರಸುತ್ತೇನೆ; ನಿನ್ನ ಭಕ್ತಿ ವಿಶ್ವಾಸಗಳು ನೂರ್ಮಡಿಯಾಗಲಿ. ನಿನ್ನ ಮೇಲೆ ತಾಯಿಯ ಕೃಪೆ ವಿಶೇಷವಾಗಿದೆ.”

ಗಂಗಾಚರಣಬಾಬು: “ತಾವು ಹರಸಿದರೆ ಅದು ಆಗಿಯೆ ಆಗುತ್ತದೆ. ತಾಯಿ ತಮ್ಮ ಮಾತನ್ನು ಕೇಳಿಯೆ ಕೇಳುತ್ತಾಳೆ. ತಾವೇ ನನ್ನ ಬಲ, ಭರವಸೆ ಎಲ್ಲ.”

ಸ್ವಾಮೀಜಿ: “ತಾಯಿ, ನನ್ನ ಮಾತನ್ನು ಕೇಳಿಯೆ ಕೇಳುತ್ತಾಳೆ. ನಿನ್ನ ಮಾತನ್ನೂ ಕೇಳುತ್ತಾಳೆ. ಯಾರು ಸರಳಹೃದಯರಾಗಿ ಕಾತರ ಭಾವದಿಂದ ಅವಳನ್ನು ಕೂಗುತ್ತಾರೋ ಅವರ ಮೊರೆಯನ್ನು ಕೇಳಿಯೇ ಕೇಳುತ್ತಾಳೆ. ದಯೆ! ದಯೆ! ಆಕೆಯ ದಯೆಯಿಲ್ಲದೆ ಏನನ್ನೂ ಸಾಧಿಸಲಾಗುವುದಿಲ್ಲ. ಜಯ್ ಪ್ರಭೂ; ಜಯ್ ಕರುಣಾಮಯ ಠಾಕೂರ್!”

ಗಂಗಾಚರಣಬಾಬು ಸ್ವಾಮೀಜಿಗಳ ಆಶೀರ್ವಾದದಿಂದ ಸಮಾಧಾನ ತಂದುಕೊಂಡರು. ಒಂದೆರಡು ಮಾತುಕತೆ ಆಡಿ ಬೀಳ್ಕೊಡಲು ಅನುವಾದರು. ಒಬ್ಬೊಬ್ಬರಾಗಿ ನಮಸ್ಕಾರ ಮಾಡಿ ಎದ್ದು ನಿಂತರು. ಕೊನೆಯಲ್ಲಿ ಗಂಗಾಚರಣ ಬಾಬುವಿನ ಮಗಳು ಪ್ರಣಾಮಮಾಡಿ ಆಶೀರ್ವಾದ ಬೇಡಿದಳು.

ಸ್ವಾಮೀಜಿ ತಂಬ ಕರುಣಸ್ವರದಿಂದ ಹೇಳಿದರು: “ಸುಖ ಶಾಂತಿ ತುಂಬಿ ಬಾಳಮ್ಮ. ನಿನ್ನ ಗಂಡ, ಮಗ, ಮಗಳು ಬಂಧುಬಳಗ ಎಲ್ಲರೂ ಸುಖವಾಗಿ ಬಾಳಲಿ. ಸಂಸಾರದಲ್ಲಿ ಸುಖವೆಂಬುದೆ ಅಪೂರ್ವ. ದುಃಖ ಕಷ್ಟಗಳಿಗೆ ಹೋಲಿಸಿದರೆ ಸುಖವೆಂಬುದು ಎಲ್ಲಿಯೋ ಸ್ವಲ್ಪ. ಆದರೆ ಯಾರು ಭಗವದ್ ಭಕ್ತರಾಗಿರುತ್ತಾತೋ ಅವರಿಗೆ ಸ್ವಲ್ಪವಾದರೂ ಶಾಂತಿ ಲಾಭವಾಗುತ್ತದೆ. ದುಃಖ, ಕಷ್ಟಗಳು ಬಂದಾಗ ಅಂಥವರು ಅಸುಖಿಗಳಾಗಿ ವಿಚಲಿತರಾಗುವುದಿಲ್ಲ. ಏಕೆಂದರೆ ಅವನ್ನೆಲ್ಲ ಕೊಡುವವನೂ ಭಗವಂತನೆಂದೇ ಅವರ ತಿಳಿವಳಿಕೆ. ಯಾವ ದೇವರು ಸುಖ ಕೊಡುತ್ತಾನೆಯೋ ಅವನೇ ದುಃಖಕಷ್ಟಗಳನ್ನೂ ಕೊಡುತ್ತಾನೆ. ಆದ್ದರಿಂದ ಬರುವುದನ್ನೆಲ್ಲ ಭಗವಂತನ ಆಶೀರ್ವಾದವೆಂದೇ ಬಗೆದು ನೀರವವಾಗಿ ಸಹಿಸಲು ಸಮರ್ಥರಾಗುತ್ತಾರೆ. ಅಂಥವರು ಸುಖದಲ್ಲಿ ಉತ್ಫುಲ್ಲರಾಗುವುದಿಲ್ಲ; ದುಃಖದಲ್ಲಿ ಅಧೀರರಾಗುವುದಿಲ್ಲ. ಸಂಸಾರದಲ್ಲಿ ಸುಖ ಎಷ್ಟರಮಟ್ಟಿಗೆ ಅನಿತ್ಯವೋ ಕ್ಷಣಸ್ಥಾಯಿಯೋ ದುಃಖವೂ ಅಷ್ಟೇ ಅನಿತ್ಯ, ಕ್ಷಣಸ್ಥಾಯಿ. ಬರುತ್ತವೆ, ಹೋಗುತ್ತವೆ. ಯಾವುದೂ ನಿಲ್ಲುವುದಿಲ್ಲ, ಏಕಮಾತ್ರ ನಿತ್ಯವಸ್ತು, ಏಕಮಾತ್ರ ಶಾಂತಿಯ ಆಲಯ ಎಂದರೆ ಶ್ರೀಭಗವಾನ್. ತಾಯಿ, ಅವನ ಪಾದವನ್ನು ಮಾತ್ರ ಬಲವಾಗಿ ಹಿಡಿದಿರಬೇಕು. ಆಗ ಮಾತ್ರ ಬದುಕಿನಲ್ಲಿ ನಿನಗೆ ಶಾಂತಿ ಸಾಧ್ಯ.”

ಇನ್ನೂ ಮದುವೆಯಾಗದ ಚಿಕ್ಕ ಹುಡುಗಿಯೊಬ್ಬಳು ಪ್ರಣಾಮಮಾಡಲು ಸ್ವಾಮಿಗಳು ಆಕೆಯ ತಲೆಯ ಮೇಲೆ ಕೈಯಿಟ್ಟು ಆಶೀರ್ವದಿಸಿ ಹೇಳಿದರು: “ಇವರೆಲ್ಲರೂ ಆ ತಾಯಿಯೆ. ‘ಸ್ತ್ರೀಯಃ ಸಮಸ್ತಾಃ ಸಕಲಾ ಜಗತ್ಸು!’ ಲೋಕದಲ್ಲಿರುವ ವಿವಿಧ ಶಕ್ತಿಯುಕ್ತ ಸಕಲ ಸ್ತ್ರೀಯರೂ ನಿನ್ನ ವಿಭಿನ್ನ ರೂಪಗಳೆ!”

ಇನ್ನೂ ಬೈಗಾಗಿರಲಿಲ್ಲ. ಭಕ್ತೆಯೊಬ್ಬಳು ಬಂದು ನಮಸ್ಕಾರ ಮಾಡಿ “ಮಹಾರಾಜ್, ನಿಮ್ಮ ದೇಹಸ್ಥಿತಿ ಈಗ ಹೇಗಿದೆ?” ಎಂದು ವಿಚಾರಿಸಿದರು.

ಸ್ವಾಮೀಜಿ: “ದೇಹಸ್ಥಿತಿ ಅಷ್ಟೇನೂ ಸರಿಯಾಗಿಲ್ಲ, ತಾಯಿ. ಈ ಮುದಿ ದೇಹ ಹೇಗೆ ತಾನೆ ಸರಿಯಾದೀತು?”

ಭಕ್ತೆ: “ನೀವು ಊಟ ಮಾಡುವುದು ತೀರಾ ಕಡಿಮೆಯಾಗಿದೆ.”

ಸ್ವಾಮೀಜಿ: “ಹೌದು, ಮಧ್ಯಾಹ್ನ ಕೊಂಚ ಅನ್ನ, ಸಾರು, ರಾತ್ರಿ ಸ್ವಲ್ಪ ಹಾಲು. ಅದಕ್ಕಿಂತ ಹೆಚ್ಚನ್ನು ಜೀರ್ಣಿಸಿಕೊಳ್ಳಲಾರೆ; ಅಲ್ಲದೆ ಅದನ್ನೂ ಇದನ್ನೂ ತಿನ್ನಬೇಕೆಂಬ ಪ್ರವೃತ್ತಿಯೂ ಇಲ್ಲ. ತಿನ್ನುವುದು ಗಿನ್ನುವುದೆಲ್ಲ ಏಕೆ? ಶರೀರ ಧಾರಣೆಗಾಗಿ. ಅದಕ್ಕಾಗಿ ಸ್ವಲ್ಪ ಆಹಾರ ತೆಗೆದುಕೊಳ್ಳುತ್ತೇನೆ, ಶರೀರ ಇರುವಷ್ಟು ಕಾಲ ಭಗವಂತನ ನಾಮಸ್ಮರಣೆ ಮಾಡಲು ಸಮರ್ಥವಾಗಲಿ ಎಂದು. ಭಗವಂತನ ಧ್ಯಾನ ಚಿಂತನೆಗಳನ್ಮುಳಿದು ಬೇರೆ ಯಾವ ಆಸೆಯೂ ನನಗಿಲ್ಲ. ಹೃದಯಲ್ಲಿ ಭಗವದ್ದರ್ಶನವಾಗುತ್ತಿದ್ದರೆ ಅದೇ ಆನಂದ. ಪ್ರಪಂಚ ಎರಡು ದಿನದ್ದು. ತಾಯಿ ತಂದೆ ಅಣ್ಣ ತಮ್ಮ ಬಂಧು ಬಳಗ ಎಲ್ಲ ಅನಿತ್ಯ. ಈ ಲೋಕ ಸಂಸಾರ ಹೇಗೆದೆಯೋ ಹಾಗೆಯೇ ಇರುತ್ತದೆ, ನಾವು ಹೋದ ಮೇಲೆಯೂ; ಅಂತರಾತ್ಮನೊಬ್ಬನೇ ಸರ್ವಕಾಲಕ್ಕೂ ಇದ್ದಾನೆ ಮತ್ತು ಇರುತ್ತಾನೆ. ಅವನೇ ನಿತ್ಯ.”

ಭಕ್ತೆ: “ಮಹಾರಾಜ್, ನಮ್ಮ ಗತಿ ಏನು? ನಾವು ಬದ್ಧಜೀವರು. ಈ ಸಂಸಾರದಲ್ಲಿ ನಮಗೆ ತುಂಬ ಆಸಕ್ತಿ, ನಾನು ನನ್ನದು ಅನ್ನುವುದನ್ನು ಬಿಡಲಾರೆವು, ಎಷ್ಟು ದುಃಖ, ಎಷ್ಟು ಕಷ್ಟ ಇದೆ! ಆದರೂ ಮೇಲಕ್ಕೆರಲಾರೆವು.”

ಸ್ವಾಮೀಜಿ: “ದೇವರೊಬ್ಬನೆ ಗತಿ; ಅವನನ್ನು ಶರಣುಹೋಗು. ಅವನೇ ನಮ್ಮ ಸರ್ವಸ್ವ. ‘ತ್ವಮೇವ ಮಾತಾ ಚ ಪಿತಾ ತ್ವಮೇವ’ ಇತ್ಯಾದಿ. ತಾಯಿ, ತಂದೆ, ಅಣ್ಣ, ಬಂಧು, ಸುಖ ಎಲ್ಲವೂ ಅವನೇ. ವ್ಯಾಕುಲತೆಯಿಂದ ಅವನಲ್ಲಿ ಮೊರೆಯಿಡು, ಅವನು ನಿಜವಾಗಿಯೂ ಕೃಪೆದೋರುತ್ತಾನೆ. ಈ ದುಃಖಮಯ ಸಂಸಾರದಲ್ಲಿ ಭಗವಂತನೊಬ್ಬನೆ ನಮಗಿರುವ ಸುಖ, ಶಾಂತಿ, ಗುರುಮಹಾರಾಜ್ ಒಂಟೆ ಮುಳ್ಳನ್ನೆ ತಿನ್ನುವ ವಿಚಾರ ಹೇಳುತ್ತಿದ್ದರು. ಸಂಸಾರೀ ಜೀವದ ಸುಖವೂ ಆ ಒಂಟೆಯ ಸುಖದಂತೆ. ತಾಯಿ ದೇವರ ಕೃಪೆಯಿಲ್ಲದೆ ನಾವು ಏನನ್ನೂ ಸಾಧಿಸಲಾರೆವು.”

ಸ್ವಲ್ಪಕಾಲ ಸುಮ್ಮನಿದ್ದ ಬಳಿಕ ಸ್ವಾಮಿಗಳು ಮತ್ತೆ ಎಂದರು: “ಸಂಸಾರದ ಅನಿತ್ಯತೆಯನ್ನು ಬೋಧೆಗೆ ತಂದುಕೊಳ್ಳುವುದೇನೂ ಅಷ್ಟು ಸುಲಭವಲ್ಲ. ಅದಕ್ಕೂ ಅವನ ಕೃಪೆ ಬೇಕು; ಅವನ ಕೃಪೆಯಿಲ್ಲದಿದ್ದರೆ ಆ ಬೋಧೆ ಅಸಧ್ಯ. ಅಳು, ಕಂಬನಿ ತುಂಬಿ ಪ್ರಾರ್ಥನೆ ಮಾಡು, ಅವನ ಕೃಪೆ ದೊರೆಯುತ್ತದೆ. ಅವನು ನಮ್ಮೊಳಗೆಯೆ ಇದ್ದಾನಲ್ಲವೆ? ಅವನು ಕೃಪೆದೋರಿ ಮಾಯೆಯ ಆವರಣವನ್ನು ಓಸರಿಸಿದಾಗ ದರ್ಶನವಾಗುತ್ತದೆ. ಕೃಪೆ, ಕೃಪೆ! ಕೃಪೆಯಿಲ್ಲದೆ ಬೇರೆ ಉಪಾಯವೆ ಇಲ್ಲ.”

* * *

ಉಪೇಕ್ಷೃ ತತ್ತೀರ್ಥಯಾತ್ರಾ ಜಪಾದೀನೇವ ಕುರ್ವತಾಮ್ |
ಪಿಂಡಂ ಸಮುತ್ಸೈಜ್ಯ ಕರಂ ಲೇಢೀತಿ ನ್ಯಾಯ ಆಪತೇತ್ ||  -‘ಪಂಚದಶೀ’

“(ಅಪರೋಕ್ಷ ಜ್ಞಾನಕ್ಕೆ ಹತ್ತಿರವಾಗಿರುವ) ನಿರ್ಗುಣೋಪಾಸನೆಯನ್ನು ಬಿಟ್ಟು ತೀರ್ಥಯಾತ್ರೆ ಜಪ ಮೊದಲಾದವುಗಳನ್ನೆ ಮಾಡುವವರು ಅಂಗೈಯಲ್ಲಿರುವ ಸಿಹಿಯಾದ ತುತ್ತನ್ನು ಬಿಟ್ಟು ಮುಂಗೈಯನ್ನು ನೆಕ್ಕುತ್ತಿರುವವರ ಹಾಗೆ ಆಗುತ್ತಾರೆ.”

* * *