ರಾಗ್ಯದ ಆದರ್ಶದಿಂದ ಆಕರ್ಷಿತನಾದ ಒಬ್ಬ ಯುವಕನು ಆಧ್ಯಾತ್ಮಿಕ ಸಾಧನೆಯ ಸಲುವಾಗಿ ಬಿ.ಎ. ಪರೀಕ್ಷೆಗೂ ಕೂತುಕೊಳ್ಳದೆ. ಗೃಹತ್ಯಾಗಮಾಡಿ ಹೋಗಿದ್ದನು. ಅವನ ಬಂಧುಗಳು ಅವನನ್ನು ಹಿಂದಕ್ಕೆ ಕರೆತಂದು, ಮನೆಯಲ್ಲಿಯೆ ಸಾಧನೆ ಭಜನೆ ಭಗವದ್ ಧ್ಯಾನಗಳನ್ನು ಮಾಡಬಹುದೆಂದು ಹೇಳಿದರು. ಅಂದಿನಿಂದ ಅವನು ಮನೆಯಲ್ಲಿಯೆ ಇದ್ದುಕೊಂಡು ಸ್ವಾಮಿ ಶಿವಾನಂದರ ಉಪದೇಶದಂತೆ ಸಾಧನೆ ಭಜನೆಗಳನ್ನು ಮಾಡತ್ತಿದ್ದನು. ಆ ಯುವಕ ಮಠಕ್ಕೆ ಬಂದು ಮಹಾ ಪುರುಷಜಿಗೆ ಪ್ರಣಾಮಮಾಡಿದಾಗ ಅವರು “ಓಹೋ, ಹೇಗಿದ್ದೀಯಯ್ಯಾ?” ಎಂದು ಕುಶಲಪ್ರಶ್ನೆ ಮಾಡಿದರು.

ಯುವಕ: “ನನ್ನ ದೇಹಸ್ಥಿತಿಯೇನೊ ಚೆನ್ನಾಗಿಯೆ ಇದೆ ಮಹಾರಾಜ್, ಆದರೆ ಮನಸ್ಸೆ ಬಹಳ ಚಂಚಲವಾಗಿದೆ. ಮನಸ್ಸಿಗೆ ಸ್ವಲ್ಪವೂ ಶಾಂತಿಯಿಲ್ಲ, ಮಹಾ ಅಶಾಂತಿ.”

ಸ್ವಾಮೀಜಿ: “ನಿನ್ನ ಮನಸ್ಸಿಗೆ ಇಷ್ಟೊಂದು ಅಶಾಂತಿ ಬಂದಿರುವುದರಿಂದಲೆ ತಾಯಿ ನಿನಗೆ ಕೃಪಾಮಯಿಯಾಗಿದ್ದಾಳೆ ಎಂಬುದನ್ನು ತೋರಿಸುತ್ತದೆ. ಆಕೆಯನ್ನು ನೋಡಲೇಬೆಕೆಂಬ ನಿನ್ನ ಹಂಬಲವೂ ಇನ್ನೂ ಕಾಣಿಸಲಿಲ್ಲವಲ್ಲಾ ಎಂಬ ವ್ಯಾಕುಲತೆಯೂ ಆಕೆಯ ಕೃಪಾಪ್ರಸಾದಗಳೆ. ಬಹು ಜನ್ಮಗಳ ಸುಕೃತಿಯ ಫಲದಿಂದ ಮತ್ತು ಭಗವತ್‌ಕೃಪೆಯಿಂದ ಮನಸ್ಸಿನಲ್ಲಿ ಮುಕ್ತಿ ಪಡೆಯಬೇಕೆಂಬ ಹಂಬಲದ ಮುಮುಕ್ಷುತ್ವ ಹುಟ್ಟುತ್ತದೆ. ನೀನೀಗ ತುಂಬ ವ್ಯಾಕುಲಚಿತ್ತದಿಂದ ಅತ್ತು ಪ್ರಾರ್ಥಿಸು: ‘ತಾಯಿ, ನನಗೆ ಮೈದೋರು, ನಾನು ಸಾಧನಹೀನ, ದುರ್ಬಲ. ಕೃಪೆಮಾಡಿ ನನಗೆ ಪ್ರತ್ಯಕ್ಷಳಾಗು’ ಎಂದು. ಇನ್ನೊಂದರ ಕಡೆ ಕಣ್ಣೆತ್ತಿಯೂ ನೋಡಬೇ. ತಾಯಿಯನ್ನು ಕರೆಯುವುದೊಂದೇ ನಿನ್ನ ಕೆಲಸವಾಗಲಿ. ಮನಸ್ಸು ಸ್ಥಿತವಾಗಿರಲಿ ಬಿಡಲಿ, ತಾಯಿಯನ್ನು ಕರೆಯುವುದನ್ನು ಮಾತ್ರ ಬಿಡಬೇಡ. ಏನೇ ಆಗಲಿ; ಒಕ್ಕಲಿಗ ತನ್ನ ನೆಲಕ್ಕೆ ಅಂಟಿಕೊಳ್ಳುವಂತೆ ನಿನ್ನ ಧ್ಯೇಯಕ್ಕೆ ನೀನು ಅಂಟಿಕೊ. ಹಾಗೆ ಮಾಡಿದರೆ ತಾಯಿಯ ಕೃಪೆ ಒದಗಿಯೇ ಒದಗುತ್ತದೆ. ಅದಕ್ಕೇ ನಾನು ಹೇಳುವುದು ಸುಮ್ಮನೆ ಅಲ್ಲಿ ಇಲ್ಲಿ ಅಲೆಯಬೇಡ ಎಂದು. ಮನೆಯಲ್ಲಿದ್ದುಕೊಂಡೆ ಅಮ್ಮನನ್ನು ಕರೆ. ಇದ್ದಲ್ಲಿಯೆ ನಿನಗೆ ಸಂಸಾರದ ಅನಿತ್ಯತ್ವದ ಬೋಧೆಯನ್ನು ದಯಪಾಲಿಸುತ್ತಾಳೆ ಅಮ್ಮ. ಸಂಸಾರ ಬಂಧನವನ್ನು ಕತ್ತರಿಸುತ್ತಾಳೆ.”

ಯುವಕ: “ಒಮ್ಮೊಮ್ಮೆ ಧ್ಯಾನ ಮಾಡುತ್ತಾ ತುಂಬ ಆನಂದವನ್ನು ಅನುಭವಿಸುತ್ತೇನೆ. ಮತ್ತೊಮ್ಮೆ ಇದ್ದಕ್ಕಿದ್ದಂತೆ ಒಂದೇ ಸಾರಿಗೆ ಮನಸ್ಸು ಅಲ್ಲೋಲಕಲ್ಲೋಲವಾಗಿ, ಅದನ್ನು ವಶಕ್ಕೆ ತರುವುದಕ್ಕೆ ಆಗುವುದಿಲ್ಲ.”

ಸ್ವಾಮೀಜಿ: “ಮನಸ್ಸಿನ ಸ್ವಭಾವವೆ ಹಾಗೆ, ಕಲ್ಲೋಲಪ್ರಾಯ. ನೀನು ಅಲೆಗಳನ್ನು ನೋಡಿಲ್ಲವೆ? ಏರು, ಇಳಿ, ಏರು, ಇಳಿ. ಒಂದು ಅಲೆ ಮೇಲೆದ್ದು ಬಂದರೆ ಪಕ್ಕಲ್ಲಿಯೆ ಗರ್ತ, ಸುಳಿ. ಒಂದು ಬಂದು ಹೋಯಿತು ಎನ್ನುವುದರಲ್ಲಿಯೆ ಮತ್ತೊಂದು ನುಗ್ಗುತ್ತದೆ. ಒಮ್ಮೆಮ್ಮೊ ನಿನ್ನ ಮನಸ್ಸಿನ ಮೇಲೆ ನಿನಗೆ ಹತೋಟಿ ಸಂಪೂರ್ಣವಾಗಿ ತಪ್ಪುವುದನ್ನು ನೋಡಿದರೆ ಭಗವತ್ ಕೃಪೆಯ ದೊಡ್ಡ ಅಲೆಯೊಂದು ಬರುತ್ತದೆ ಎಂಬುದನ್ನು ಸೂಚಿಸುತ್ತದೆ; ಆಗ ನಿನಗೆ ಆನಂದ ದೊರೆಯುತ್ತದೆ. ಆದರೆ ನಿಜವಾದ ಭಕ್ತರು ಆನಂದ ಬಂದಾಗ ಅತ್ಯುತ್ಸಾಹಿಗಳಾಗುವುದೂ ಇಲ್ಲ. ನಿರಾನಂದವಾದಾಗ ಹತಾಶರೂ ಆಗುವುದಿಲ್ಲ. ಎಲ್ಲ ತಾಯಿಯ ಇಚ್ಚೆ: ತಾಯಿ ಸದಾ ಕರುಣಾಮಯಿ ಎಂದು ತಿಳಿದು ಅವಳನ್ನು ಕರೆಯುತ್ತಲೆ ಇರಬೇಕು. ತಾಯಿಗೆ ಇಚ್ಛೆಬಂದ ಯಾವ ಸ್ಥಿತಿಯಲ್ಲಿ ಬೇಕಾದರೂ ನಿನ್ನನ್ನು ಇಡಲಿ. ಹೀಗೆ ಮಾಡುತ್ತಾ ಮಾಡುತ್ತಾ ತಾಯಿಯ ಪೂರ್ಣ ಕೃಪಾ ರೂಪವಾದ ನಿರವಚ್ಛಿನ್ನ ಆನಂದಕ್ಕೆ ಪಾತ್ರನಾಗುತ್ತೀಯೆ. ಅಯ್ಯಾ, ಏನಾದರಾಗಲಿ ವಿಚಲಿತನಾಗಬೇಡ. ತಾಯಿ ನಿನಗೆ ಕೃಪೆದೋರಿದ್ದಾಳೆ; ಮುಂದೆಯೂ ಕೃಪೆದೋರಿಯೆ ತೋರುತ್ತಾಳೆ; ನಾನು ಹೇಳುತ್ತೇನೆ ಕೇಳು.”

“ನಿನ್ನ ಕೂದಲನ್ನೇಕೆ ಅಷ್ಟುದ್ದ ಬೆಳೆಸಿದ್ದೀಯಾ? ಸರಿಯಾಗಿ ಕ್ಷೌರ ಮಾಡಿಸಿಕೊ. ಉದ್ದುದ್ದ ಕೂದಲು ಬೆಳೆಯಿಸಿಕೊಂಡು, ಆದಷ್ಟು ವಿಕಾರ ಮಾಡಿಕೊಂಡರೆ ಆಧ್ಯಾತ್ಮಿಕತೆ ಹೆಚ್ಚುತ್ತದೆಯೆ? ಹೊರಗೆ, ನಾಲ್ಕು ಜನ ಇರುವಂತೆ ಇರುವುದನ್ನು ಕಲಿ; ಒಳಗೆ ತಾಯಿಯನ್ನು ಕರೆಯುತ್ತಿದ್ದರು. ಅವಳೇನು ನಿನ್ನ ಹೊರಗೆ ಇದ್ದಾಳೆಯೆ? ದೇವರ ಮನೆಗೆ ಹೋಗಿ ಠಾಕೂರರ ದರ್ಶನಮಾಡು. ಆಮೇಲೆ ಸ್ವಲ್ಪ ಪ್ರಸಾದ ತೆಗೆದುಕೊ.”

* * *