ಭಕ್ತನೊಬ್ಬನಿಗೆ ಸಂನ್ಯಾಸಿಯಾಗಬೇಕು ಎಂಬ ಪ್ರಬಲ ಇಚ್ಛೆಯಿದ್ದಿತು. ಆತನು ತನ್ನ ಆ ಅಭಿಲಾಷೆಯನ್ನು ಮಹಾಪುರುಷಜಿಗೆ ತಿಳಿಸಿದನು. ಅದಕ್ಕೆ ಅವರು “ಆ ವಿಚಾರ ನನಗೇನು ಗೊತ್ತು? ಸಂನ್ಯಾಸಿಯಾಗಲೇಬೇಕು ಎಂಬುದು ನಿನ್ನ ಹೃದಯದ ಅಭಿಲಾಷೆಯಾಗಿದ್ದರೆ ಸರಿ, ಹಾಗೆಯೆ ಮಾಡು. ಸಂಸಾರದ ಅನಿತ್ಯತೆ ನಿನಗೆ ಬೋಧವಾಗಿದ್ದರೆ ಒಳ್ಳೆಯದೆ ಆಯಿತು. ಎಲ್ಲಿಗಾದರೂ ಹೋಗು. ಚೆನ್ನಾಗಿ ಸಾಧನೆ ಭಜನೆ ಮಾಡು. ಅದರ ವಿಚಾರವಾಗಿ ನನ್ನ ‘ಬೇಕು ಬೇಡ’ ನಿನಗೇನು ಪ್ರಯೋಜನ? ಭಗವಂತನ ನಾಮಗ್ರಹಣಪೂರ್ವಕವಾಗಿ ಅವನಲ್ಲಿ ಶರಣು ಹೋಕ್ಕು ಸಂಸಾರವನ್ನು ತ್ಯಾಗ ಮಾಡುವುದೇನೂ ಮಹಾಭಾಗ್ಯದ ವಿಷಯ. ಭಗವಂತನ ಕೃಪೆಯಿಂದ ಮಾತ್ರವೇ ಅದು ಸಾಧ್ಯಾವಾಗುತ್ತದೆ. ಈಗ ನೀನು ಶ್ರೀರಾಮಕೃಷ್ಣ ಮಠ ಮಿಷನ್ನಿಗೆ ಸೇರುವುದೇನೂ ಆವಶ್ಯಕವಲ್ಲ. ಮೊದಲು ಸಾಧನೆ ಭಜನೆಯಲ್ಲಿ ಸಂಪೂರ್ಣವಾಗಿ ಮಗ್ನನಾಗು. ತರುವಾಯು ನಿನ್ನ ಅಂತರ್ವಾಣಿ ಆದೇಶವಿತ್ತರೆ ಸಂಸ್ಥೆಗೆ ಸೇರಿ ಸೇವಾಕಾರ್ಯದಲ್ಲಿ ತೊಡಗಬಹುದು.”

* * *

ಬೋಧೋಪಾಸ್ತ್ಯೋರ್ವಿಶೇಷಃ ಕ ಇತಿ ಚೇದುಚ್ಯತೇ ಶೃಣು |
ವಸ್ತುತಂತ್ರೋ ಭವೇದ್ಬೋಧಃ ಕರ್ತೃತಂತ್ರಮುಪಾಸನಮ್ || -‘ಪಂಚದಶೀ’

“ಜ್ಞಾನಕ್ಕೂ ಉಪಾಸನೆಗೂ ಇರುವ ಭೇದವೇನು? – ಎಂದರೆ ಕೇಳು: ಜ್ಞಾನವು ವಸ್ತುವಿನ ಅಧೀನವಾದದ್ದು, ಉಪಾಸನೆಯು ಉಪಾಸಕನ ಅಧೀನವಾದದ್ದು.”