ಸ್ವಾಮಿ ಶಿವಾನಂದರು ಉಪಯೋಗಿಸಿ ಬಿಟ್ಟಿದ್ದ ಒಂದು ಜೊತೆ ಹಳೆಯ ಪಾದರಕ್ಷೆ ಬೇಕು ಎಂದು ಒಬ್ಬರು ಭಕ್ತರು ಕಾಗದ ಬರೆದಿದ್ದರು, ಅದನ್ನು ಪೂಜೆಮಾಡಬೇಕೆಂದು ಅವರ ಅತ್ಯಂತ ಆಂತರಿಕ ಆಕಾಂಕ್ಷೆಯಾಗಿತ್ತು. ಆ ಸಂದರ್ಭದಲ್ಲಿ ಮಹಾಪುರುಷಜಿ ಹೇಳಿದರು:

“ಪಾದರಕ್ಷೆ ಪೂಜಿಸಲಿ ಇನ್ನೇನಾದರೂ ಮಾಡಲಿ, ಅತ್ಯಂತ ಆವಶ್ಯಕವಾದುದೆಂದರೆ ಭಗವಂತನಲ್ಲಿ ಭಕ್ತಿ. ದೇವರು ನೋಡುವುದು ಹೃದಯವನ್ನು. ಭಕ್ತಿಯಿಂದ ಏನನ್ನು ಮಾಡಿದರೂ ಭಗವಂತನು ಪ್ರೀತನಾಗುತ್ತಾನೆ. ಕಾಣುವುದಿಲ್ಲವೆ, ಮಣ್ಣಿನಲ್ಲಿ ಶಿವನನ್ನು ಮಾಡಿ ಪೂಜಿಸಿ, ಭಕ್ತಿಲಾಭ ಪಡೆಯುತ್ತಾರೆ; ಚೈತನ್ಯಲಾಭ ಪಡೆಯುತ್ತಾರೆ! ಮುಕ್ತಿಲಾಭ ಪಡೆಯುತ್ತಾರೆ! ವಿಗರಹ ಮಣ್ಣಿನದಾದರೇನು? ಭಕ್ತಪ್ರೇಮದಿಂದ ಪೂಜಿಸಿದರೆ ಭಗವಂತನು ಪ್ರಸನ್ನನಾಗಿ ಪೂಜೆಯನ್ನು ಸ್ವೀಕರಿಸುತ್ತಾನೆ; ಜಡವಸ್ತುವಿನಿಂದ ತಯಾರಿಸಿದರೂ ಚಿನ್ಮಯವಾಗುತ್ತದೆ, ಜೀವಂತವಾಗಿಬಿಡುತ್ತದೆ. ಎಲ್ಲದರ ಸಾರವಸ್ತುವೆಂದರೆ ಭಕ್ತಿ. ಎಲ್ಲಿ ಭಕ್ತಿ ಇರುತ್ತದೆಯೊ ಅಲ್ಲಿ ಭಗವಂತನ ಕೃಪೆಯೂ ಇರುತ್ತದೆಂದು ತಿಳೀ. ಈ ಬಾಹ್ಯಿಕ ಪೂಜೆ ಕೇವಲ ಉಪಲಕ್ಷ್ಯ ಮಾತ್ರ.”

* * *

ಚಿತಿಃ ಸ್ವತಂತ್ರಾ ವಿಶ್ವಸಿದ್ದಿಹೇತುಃ |
ಸ್ವೇಚ್ಛಯಾ ಸ್ವಭಿತ್ತೌ ವಿಶ್ವಮುನ್ಮೀಲಯತಿ || -ಪ್ರತ್ಯಭಿಜ್ಞಾಹೃದಯ

“ಸ್ವತಂತ್ರವಾದ ಚಿತ್ತು ಹೇತುವಾಗಿ ವಿಶ್ವವು ಹೊಮ್ಮುತ್ತದೆ; ಸ್ವಭಿತಿಯಲ್ಲಿ ಸ್ವೇಚ್ಛೆಯಿಂದಲೆ ವಿಶ್ವದ ಉನ್ಮೀಲನವಾಗುತ್ತದೆ.”