ಬೆಳಗಿನ ಹೊತ್ತು ಮಹಾಪುರುಷಜಿ ತಮ್ಮ ಕೋಣೆಯಲ್ಲಿ ಕುಳಿತಿದ್ದರು. ಮಠದ ಬಹುಮಂದಿ ಸಾಧುಗಳೂ ಅಲ್ಲಿದ್ದರು. ಮಾತುಕತೆ ಅನೇಕ ವಿಚಾರವಾಗಿ ನಡೆದಿತ್ತು. ಕೆಲದಿನಗಳಿಂದಲೂ ಮಠದಲ್ಲಿ ಸಂಜೆಯ ಹೊತ್ತು ಒಂದು ವ್ಯಾಸಂಗ ಗೊಷ್ಠಿ ನಡೆಯುತ್ತಿತ್ತು. ಹೆಚ್ಚು ಕಡಿಮೆ ಮಠದ ಎಲ್ಲ ಸಂನ್ಯಾಸಿಗಳೂ ಅದರಲ್ಲಿ ಭಾಗವಹಿಸುತ್ತಿದ್ದರು. ವ್ಯಾಸಂಗದ ವಿಷಯವು ಸ್ವಾಮಿ ವಿವೇಕಾನಂದರು ರಚಿಸಿದ್ದ ಮಠದ ನಿಯಮಾವಳಿಯನ್ನು ಕುರಿತದ್ದಾಗಿತ್ತು. ಒಂದೊಂದೆ ನಿಯಮವನ್ನು ಓದಿ, ಅದನ್ನು ಚರ್ಚಿಸಲಾಗುತ್ತಿತ್ತು. ಮಠದ ಹಿರಿಯ ಸ್ವಾಮಿಗಳಾದ ಶುದ್ಧಾನಂದರು ವಿರಜಾನಂದರು ಶರ್ವಾನಂದರು ಮೊದಲಾದವರು ಕ್ಲಿಷ್ಟವಾದ ಸಮಸ್ಯೆಗಳಿಗೆ ಉತ್ತರ ಕೊಡುತ್ತಿದ್ದರು. ವ್ಯಾಸಂಗಗೋಷ್ಠಿಯ ವಿಚಾರವಾಗಿ ಮಹಾಪುರುಷಜಿ ಹೇಳಿದರು: “ಇಂತಹ ಕ್ಲಾಸ್ ಮಾಡುವುದು ಒಳ್ಳೆಯದು. ಇದು ಮಠ; ಇಲ್ಲಿ ಹಗಲಿರುಳೂ ಪೂಜೆಯೋ ಪಾಠವೋ ಧ್ಯಾನವೋ ಜಪವೋ ಆಲೋಚನೆಯೋ ನಡೆಯುತ್ತಲೆ ಇರಬೇಕು.”

ಒಬ್ಬರು ಸ್ವಾಮಿಗಳು: “ಈಗ ಮಠದ ನಿಯಮಾವಳಿ ಓದುತ್ತಿದ್ದೇವೆ.”

ಸ್ವಾಮೀಜಿ: “ಬಹಳ ಒಳ್ಳೆಯದು, ಸ್ವಾಮೀಜಿಯ (ವಿವೇಕಾನಂದರ) ಮಾತೆಂದರೆ ಋಷಿವಾಕ್ಯ. ಎಲ್ಲವೂ ಸೂತ್ರಪ್ರಾಯ. ಒಂದೊಂದು ಸೂತ್ರಪ್ರಾಯ. ಒಂದೊಂದು ಸೂತ್ರವಾಕ್ಯದ ಮಧ್ಯೆ ಎಷ್ಟೆಷ್ಟು ಭಾವ ಅಡಗಿರುತ್ತದೆ! ಆ ಒಂದೊಂದು ಸೂತ್ರವನ್ನೂ ಕುರಿತು ಪರಸ್ಪರ ಆಲೋಚನೆ ಮಾಡಿ ಮಥಿಸಿದರೆ ಎಂತೆಂತಹ ನೂತನ ಭಾವಗಳು ಪ್ರಕಾಶಿತವಾಗಬಹುದು! ಮಠದಲ್ಲಿ ಇಂತಹವು ಎಷ್ಟು ನಡೆದರೂ ಅಷ್ಟೂ ಒಳಿತೆ.”

“ಪ್ರತಿಯೊಬ್ಬರೂ ತಮ್ಮ ಜೀವಿತಲಕ್ಷ್ಯದ ಕಡೆಗೆ ಗಮನ ಕೊಡಬೇಕು. ಭಗವದ್‌ಭಕ್ತಿ, ವಿಶ್ವಾಸ, ಪ್ರೇಮ, ಪ್ರೀತಿ, ಪವಿತ್ರತೆ, ಪರಸ್ಪರಾನುಕಂಪೆ, ಈ ಎಲ್ಲವೂ ಜೀವನದ ಉದ್ದೇಶವಾಗಬೇಕು. ಸಂಗತ್ಯಾಗಮಾಡಿ ಮನೆಗಿನೆ ಎಲ್ಲ ಬಿಟ್ಟು ಇಲ್ಲಿಗೆ ಬಂದಿದ್ದೇವೆ; ಅದಕ್ಕೇನು ಅರ್ಥ? ಇಲ್ಲಿ ಸಂಘಬದ್ಧರಾಗಿ ನಾವಿರುವುದಾದರೂ ಏಕೆ? ತ್ಯಾಗ ಜೀವನಲದಲ್ಲಿ ಮುಂದುವರಿಯುವುದಕ್ಕೆ; ಅದಕ್ಕಾಗಿ ನಾವು ಪ್ರಾಣಪೂರ್ವಕವಾದ ಪ್ರಾರ್ಥನೆ ಮಾಡುತ್ತಿರಬೇಕು.”

ಪಕ್ಕದಲ್ಲಿ ನಿಂತಿದ್ದ ಸಂನ್ಯಾಸಿಯೊಬ್ಬರನ್ನು ಕುರಿತು ಮಹಾಪುರುಷಜಿ ಕೇಳಿದರು: “ನೀನು ವ್ಯಾಸಂಗಕ್ಕೆ ಹೋಗುತ್ತಾ ಇದ್ದೀಯಾ?”

ಸಂನ್ಯಾಸಿ: “ಇಲ್ಲ, ಮಹಾರಾಜ್. ಸಂಜೆಯ ಹೊತ್ತಿಗೆ ಕೆಲಸ ಗಿಲಸ ಮಾಡಿ ದಣಿದು ಸಾಕಾಗಿ ಹೋಗಿರುತ್ತೆ. ಕ್ಲಾಸಿಗೆ ಹೋಗುವುದಕ್ಕೆ ಸಾಧ್ಯವಾಗುತ್ತಿಲ್ಲ.”

ಸ್ವಾಮೀಜಿ: “ಅದಲ್ಲ. ಇಂತಹ ಆಲೋಚನೆಗಳಲ್ಲಿ ಭಾಗಿಯಾಗುವುದು ಮೇಲು. ಸ್ವಾಮೀಜಿ ದೂರದೃಷ್ಟಿಯ ಋಷಿ. ಮುಂದೆ ಏನಾಗುತ್ತೆ ಇಲ್ಲ ಎಂಬುದು ಅವರಿಗೆ ಗೊತ್ತಿತ್ತು; ಮಠದ ಮಾರ್ಗದರ್ಶನಕ್ಕಾಗಿ ಈ ನಿಯಮಾವಳಿ ರಚಿಸಿದ್ದಾರೆ. ಅವರ ಮಾತುಗಳನ್ನು ಕುರಿತು ನಾವು ಎಷ್ಟೆಷ್ಟು ಆಲೋಚಿಸುತ್ತೇವೆಯೊ, ಎಷ್ಟೆಷ್ಟು ಪಾಲಿಸುತ್ತೇವೆಯೊ ಅಷ್ಟಷ್ಟೂ ನಮಗೆ ಕಲ್ಯಾಣಕರ. ನಾವು ಸಾಧುಗಳು. ಭಗವತ್‌ಸಾಕ್ಷಾತ್ಕಾರವೆ ನಮ್ಮ ಜೀವನದ ಏಕಮಾತ್ರ ಉದ್ದೇಶ. ಈ ಸಂಸಾರ ಅಪಾಯಬಹುಳವಾದ ಸ್ಥಾನ.  ಇಲ್ಲಿಯ ನೂರಾರು ಕೆಲಸಕಾರ್ಯಗಳಲ್ಲಿ ನಮ್ಮ ಧ್ಯೇಯದತ್ತ ಗುರಿತಪ್ಪದೆ ಸಾಗುವುದೆಂದರೆ ಕಷ್ಟಸಾಧ್ಯ. ಕೆಲವೊಮ್ಮೆ ಕಾಲು ಜಾರುವ ಸಂಭವವೂ ಉಂಟು. ಗುರುಮಹಾರಾಜ್ ಹೇಳುತ್ತಿರಲಿಲ್ಲವೆ; ‘ಗದ್ದೆಯ ಎತ್ತರವಾದ ಅಂಚಿನಲ್ಲಿ ನಡೆಯುವಾಗ ಮಕ್ಕಳು ಜಾರಿ ಬೀಳುತ್ತವೆ. ಅಪ್ಪನ ಕೈಯನ್ನು ತಾನೆ ಹಿಡಿದುಕೊಂಡಿರುವ ಮಗು ಹಿಡಿತ ತಪ್ಪಿಹೋಗಿ ಬೀಳುವ ಅವಕಾಶವಿರುತ್ತದೆ. ಆದರೆ ಯಾವ ಮಗುವಿನ ಕೈಯನ್ನು ಅಪ್ಪನೆ ಹಿಡಿದುಕೊಂಡಿರುತ್ತಾನೆಯೊ ಆ ಮಗುವಿಗೆ ಬೀಳುವ ಅಪಾಯವಿರುವಿದಿಲ್ಲ.’ ಅದರಂತೆಯೆ ನಾವೂ ಈ ಸಂಸಾರದ ಕುಟಿಲ ದುರ್ಗಮ ಪಥದಲ್ಲಿ ಚಲಿಸುತ್ತಿದ್ದೇವೆ; ನಮಗೂ ಕಾಲುಜಾರಿ ಬೀಳಬಹುದಾದ ಅಪಾಯ ಬಹುಮಟ್ಟಿಗೆ ಇದೆ. ಆದರೆ ಶ್ರೀಗುರುವೇ ನಮ್ಮ ಕೈ ಹಿಡಿದುಕೊಳ್ಳುವ ಪಕ್ಷದಲ್ಲಿ ಬೀಳುವ ಸಂಭವವಿರುವುದಿಲ್ಲ. ಗುರುಮಹಾರಾಜರು ನಿಜವಾಗಿಯೂ ನಮ್ಮನ್ನು ಕೈ ಹಿಡಿದು ನಡೆಸುತ್ತಿದ್ದಾರೆ; ಅಲ್ಲದಿದ್ದರೆ ಎಲ್ಲಿ ಯಾವಾಗ ಜಾರುತ್ತಿದ್ದೆವೊ ಯಾರು ಬಲ್ಲರು? ಆದ್ದರಿಂದಲೆ ಮನೋವಾಕ್ಕಾಯಪೂರ್ವಕವಾಗಿ ಪ್ರಾರ್ಥನೆ ಮಾಡಬೇಕು ಹೀಗೆಂದು: ‘ಹೇ ಸ್ವಾಮಿ ನಮ್ಮನ್ನು ಕೈಹಿಡಿದುಕೊಂಡಿರು. ನಾವು ದುರ್ಬಲರು; ಪದೇಪದೇ ಪದಸ್ಖಲನವಾಗುವ ಸಂಭವವಿದೆ. ಆದರೆ ನೀನು ಕೈ ಹಿಡಿದುಕೊಂಡರೆ ನಾವು ಗೆದ್ದಂತೆಯೆ!’ ಅವನೇ ನಮ್ಮ ಪ್ರಾಣದ ಪ್ರಾಣ; ಅವನು ಒಳಗೆಯೆ ಇದ್ದಾನೆ. ಕಾತರಭಾವದಿಂದ ಪ್ರಾರ್ಥಿಸಿದರೆ ಅವನು ನಮ್ಮ ಮೊರೆಗೆ ಕಿವಿಗೊಟ್ಟೇಗೊಡುತ್ತಾನೆ. ಆತನು ಈ ಯುಗದ ಯುಗಾವತಾರನಲ್ಲವೆ? ಯುಗಧರ್ಮ ಸಂಸ್ಥಾಪನಾರ್ಥವಾಗಿ ಶ್ರೀ ಶ್ರೀರಾಮಕೃಷ್ಣ ರೂಪಧಾರಣೆಮಾಡಿ ಬಂದನಲ್ಲವೆ? ಅವನು ನಮಗೆ ಕೃಪೆದೋರುತ್ತಾನೆ; ತೋರಿಸುತ್ತಲೇ ಇದ್ದಾನೆ. ಅಲ್ಲದಿದ್ದರೆ ನಮ್ಮನ್ನೇಕೆ ಇಲ್ಲಿಗೆ ಕರೆತರುತ್ತಿದ್ದನು? ‘ಜೃಂಭೀತಯುಗ-ಈಶ್ವರ ಜಗದೀಶ್ವರ ಯೋಗಸಹಾಯ್’ ‘ಜಗದೀಶ್ವರನಾದ ಅವನು ಈ ಯುಗದೀಶ್ವರನಾಗಿ ಸಂಭವಿಸಿದ್ದಾನೆ’ ಎಂಬುದು ಸ್ವಾಮಿಜಿಯ ವಚನ ಕಾಣಯ್ಯಾ. ಅವನು ಯು-ಈಶ್ವರ. ಈ ಯುಗದಲ್ಲಿ ಯಾರು ಆತನಿಗೆ ಶರಣಾಗತರಾಗುತ್ತಾರೋ ಅವರ ಕಲ್ಯಾಣವಾಗಿಯೇ ತೀರುತ್ತದೆ. ಶರಣಾಗತಿ ಮತ್ತು ಪ್ರಾರ್ಥನೆ; (ಕೈಜೋಡಿಸಿಕೊಂಡು) ‘ಸ್ವಾಮೀ ನಮ್ಮಲ್ಲಿ ತ್ಯಾಗವೈರಾಗ್ಯ ಹೆಚ್ಚುವಂತೆ ಮಾಡು. ನಮ್ಮನ್ನು ಪವಿತ್ರರನ್ನಾಗಿ ಮಾಡು; ನಮ್ಮ ನಮ್ಮ ನಡುವೆ ಪ್ರೀತಿ ಅನುಕಂಪ ಮೂಡುವಂತೆ ಮಾಡು. ನಮ್ಮನ್ನು ಕೈ ಹಿಡಿದು ನಡೆಸು.’

“ಪರನಿಂದೆ, ಪರಚರ್ಚೆ ಇವೆಲ್ಲ ತುಂಬ ಕೆಟ್ಟ ಚಾಳಿ. ಅವು ಮನಸ್ಸನ್ನು ಕೆಳಕೆಳಕ್ಕೇ ಎಳೆಯುತ್ತವೆ. ಎಷ್ಟು ಸಾಧ್ಯವೊ ಅಷ್ಟು ಹೊತ್ತು ಭಗವಂತನ ಧ್ಯಾನ, ಜಪ, ಪೂಜೆ, ಪಠಾದಿಗಳಲ್ಲಿ ತೊಡಗಿರಬೇಕು; ಉಳಿದ ಕಾಲವನ್ನೆಲ್ಲ ಸುಮ್ಮನಿದ್ದುಕೊಂಡು ಸ್ಮರಣಮನನಗಳಲ್ಲಿ ಕಳೆಯುವುದು ಮೇಲು. ಸಂಘಬದ್ಧವಾಗಿರುವುದರಲ್ಲಿ ಅವಶ್ಯಕತೆಯೂ ಇದೆ. ಉಪಕಾರಿಕತೆಯೂ ಇದೆ. ಅದಕ್ಕಾಗಿಯೆ ಸ್ವಾಮೀಜಿ ಈ ಸಂಘಸೃಷ್ಟಿ ಮಾಡಿದರು; ಜೊತೆಜೊತೆಗೆ ಸೇವಾದಿ ಶುದ್ಧ ಕರ್ಮಗಳ ಆಚರಣೆಗೂ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.”

* * *