ಇಂದು ವೈಶಾಖ ಪೂರ್ಣಿಮೆ; ಬುದ್ಧ ದೇವನ ಜನ್ಮ ದಿನವಾದ್ದರಿಂದ ಬುದ್ಧ ಪೂರ್ಣಿಮೆ. ಬೆಳಗಿನಹೊತ್ತು ಬುದ್ಧಜೀವನವನ್ನು ಕುರಿತ ಸಮಾಲೋಚನೆ ನಡೆಯಿತು. ಮಠದ ಅನೇಕ ಸಂನ್ಯಾಸಿಗಳು ಭಾಷಣ ಮಾಡಿದರು. ರಾತ್ರಿ ಬುದ್ಧ ದೇವನ ಪ್ರತಿಮೆಯನ್ನು ಪತ್ರಪುಷ್ಟ ಮಾಲ್ಯಾದಿಗಳಿಂದ ಶೋಭಾಯಮಾನವಾಗುವಂತೆ ಅಲಂಕರಿಸಿದ್ದರು, ಭಜನೆಯ ತುರುವಾಯ ಬುದ್ಧದೇವನ ಜೀವನ ಚರಿತ್ರೆಯ ಪಠನವಾಯಿತು. ಸ್ವಾಮಿ ಶುದ್ಧಾನಂದರು ಬಂಗಾಳಿಯಲ್ಲಿಯೂ ಸ್ವಾಮಿ ಶರ್ವಾನಂದರು ಇಂಗ್ಲೀಷಿನಲ್ಲಿಯೂ ಬುದ್ಧನ ಬದುಕು ಬೋಧನೆಗಳ ವಿಚಾರವಾಗಿ ಉಪನ್ಯಾಸ ಮಾಡಿದರು.

ರಾತ್ರಿ ಭೋಜನಾನಂತರ ಓಂಕಾರಾನಂದಸ್ವಾಮಿಗಳು ಮಹಾಪುರುಷಜಿಯ ಕೊಠಡಿಗೆ ಬಂದು ಮಾತುಕತೆ ನಡೆಸಿದರು. ಮಾತಿನ ನಡುವೆ ಅವರು “ಇವೊತ್ತು ಒಂದು ಮಹಾದಿನ. ಮಠದಲ್ಲಿಯೂ ಅದನ್ನು ಆಚರಿಸುತ್ತಿದ್ದೇವೆ. ಸಾಯಂಕಾಲ ಭಾಷಣಾದಿಗಳು ನಡೆದುವು” ಎಂದರು.

ಅದಕ್ಕೆ ಮಹಾಪುರುಷಜಿ: “ಹೌದು, ನಿಜವಾಗಿಯೂ ಮಹಾದಿನ, ‘thrice blessed day!’ (ಮುಮ್ಮಡಿ ಪವಿತ್ರ ದಿನ) ಆಗಿದೆ. ಆ ಕೀರ್ತನೆ ಹಾಡಿದರಷ್ಟೆ. ‘ಶಾಂತಿಯನರಸುವೆ; ಎಲ್ಲಿದೆ ಶಾಂತಿ? ಐತಂದೆನು ನಾನೆಲ್ಲಿಂದ? ಹೊಗುತ್ತಿಹೆನೆಲ್ಲಿಗೆ ನಾ?”

ಓಂಕಾರಾನಂದರು: “ಇಲ್ಲ, ಅದನ್ನು ಹಾಡಲಿಲ್ಲ. ಯಾರಿಗೂ ಆ ಕೀರ್ತನೆ ಪೂರ್ತಿಯಾಗಿ ಗೊತ್ತಿರಲಿಲ್ಲ.”

ಮಹಾಪುರುಷಜಿ: “ಅದು ಬಹಳ ಸೊಗಸಾದ ಗೀತೆ, ಗಿರೀಶಬಾಬು ರಚಿಸಿದ್ದು.”

ಹಾಗೆಂದು ತಾವೆ ಹಾಡತೊಡಗಿದರು. ಆಮೇಲೆ ಹೇಳಿದರು: “ಗಿರೀಶ ಬಾಬು ಎಷ್ಟು ಚೆನ್ನಾಗಿ ರಚಿಸಿದ್ದಾರೆ? ಆ ಭಾವ ಬಹಳ ಚೆನ್ನಾಗಿ ವರ್ಣಿತವಾಗಿದೆ. ಬುದ್ಧ ದೇವ, ಎಂದರೆ ಆಗಿನ ರಾಜಕುಮಾರ ಸಿದ್ಧಾರ್ಥ. ತನ್ನ ಹೆಂಡತಿ ‘ಗೋಪ’ಳೊಡನೆ ಆಮೋದಪ್ರಮೋದದಲ್ಲಿ ತೊಡಗಿದ್ದಾಗ ಆಕಾಶಪಥದಲ್ಲಿ ಅಪ್ಸರೆಯರು ಆ ಹಾಡನ್ನು ಹಾಡುತ್ತಾ ಹೋಗುತ್ತಾರೆ. ಅನಿರೀಕ್ಷಿತವಾಗಿ ಅದನ್ನು ಆಲಿಸಿದ ಸಿದ್ಧಾರ್ಥನ ಮನಸ್ಸು ತಟಕ್ಕೆ ಬೋಗವಿಮುಖವಾಗುತ್ತದೆ. ಅಂತರಂಗದಲ್ಲಿ ಒಂದು ಎಚ್ಚರ ಉಂಟಾಗಿ, ಭೋಗಲಾಲಸೆ ಉದಾಸಭಾವಕ್ಕೆ ತಿರುಗುತ್ತದೆ. ಹೇಳಿಕೊಳ್ಳುತ್ತಾನೆ: ‘ಶಾಂತಿಯನರಸುವೆ, ಓ ಎಲ್ಲಿದೆ ಶಾಂತಿ? ಈ ಹಾಡನ್ನು ಹಾಡುತ್ತಿರುವವರು ಯಾರು? ಅದು ನನಗೆ ಗೊತ್ತು. ನನ್ನ ಚಿರಪರಿಚಿತ ಗೀತೆ!’ ತಂದೆ ಶುದ್ಧೋದನ ಮಹಾರಾಜನಿಗೆ ಮಗನ ಉದಾಸಭಾವದ ವಿಚಾರ ಗೊತ್ತಾಗಿ, ಅವನನ್ನು ಮತ್ತೆ ಭೋಗದ ಕಡೆ ತಿರುಗಿಸಲು ನಾನಾ ಪ್ರಕಾರ ಪ್ರಯತ್ನ ಮಾಡುತ್ತಾನೆ. ಆದರೆ ಮೋಹ ನಿದ್ರೆಯಿಂದ ಎಚ್ಚತ್ತ ಚೇತನ ಮತ್ತೆ ಆ ಕಡೆ ತಿರುಗಲೊಲ್ಲದೆ ಹೋಯಿತು. ಆಮೇಲೆ ಒಂದು ರಾತ್ರಿ ಬುದ್ಧ ಅರಮನೆಯನ್ನು ಪರಿತ್ಯಜಿಸಿ ಹೊರಟು ಹೋದ… ಮಧ್ಯಯಾನದ ವಿಚಾರವಾಗಿಯೂ ‘ಲಲಿತವಿಸ್ತರ ‘ವನ್ನೆ ಅವಲಂಬಿಸಿ ಗಿರೀಶಬಾಬು ಮತ್ತೊಂದು ಹಾಡನ್ನು ಕಟ್ಟಿದ್ದಾರೆ:”

‘ಜಾಣ್ಮೆಯಿಂದ ತಂತಿ ಕಟ್ಟಿ ನನ್ನ ವೀಣೆ ಜೋಡಿಸಿದೆ.
ತಿಳಿದ ಕೈ ಮಿಡಿಯೆ ಅದು ಸುರಿಯುವುದು ಗಾನಮಧು.
ಅತಿಯೆ ಬಿಗಿಯೆ ತಂತಿ ಹರಿದು ದನಿಯೆ ಹೊಮ್ಮದು.
ಶಿಥಿಲಗೈಯ್ಯೆ ವಿಕೃತಿಗೊಂಡು ಸ್ವರವೆ ಚಿಮ್ಮದು’

ಅದೆಂಥಾ ಕಾಲವಾಗಿತ್ತು-ಏನು ತ್ಯಾಗ, ಏನು ವೈರಾಗ್ಯ, ಏನು ತಪಸ್ಯೆ! ಭಗವಂತನು ಭೂಮಿಗೆ ಬಂದಾಗ ಆಧ್ಯಾತ್ಮಿಕತೆಯ ಒಂದು ಪ್ರವಾಹವೇ ಹರಿಯುತ್ತದೆ. ಅನೇಕರ ಹೃದಯದಲ್ಲಿ ಜ್ಞಾನಜ್ಯೋತಿ ತಳತಳಿಸುತ್ತದೆ; ಅನೇಕರು ಮುಕ್ತರಾಗುತ್ತಾರೆ.

ಓಂಕಾರಾನಂದರು: “ಪಾರ್ಶ್ವನಾಥ ಬೆಟ್ಟದಲ್ಲಿ ತಪಸ್ಸು ಮಾಡುತ್ತಿದ್ದ ಸುಮಾರು ಇಪ್ಪತ್ತೈದು ಜನ ಸಂನ್ಯಾಸಿಗಳು ಸಿದ್ಧಿ ಪಡೆದರು. ಅದರಲ್ಲಿ ಹದಿನೈದೋ ಹದಿನಾರೋ ಜೈನ ಸಂನ್ಯಾಸಿಗಳು; ಮಿಕ್ಕವರು ಬೌದ್ಧರು.”

ಮಹಾಪುರುಷಜಿ: “ಒಂದು ಕಾಲದಲ್ಲಿ ನಾವು ಬೌದ್ಧಧರ್ಮದ ವಿಚಾರವಾಗಿ ತುಂಬಾ ಆಲೋಚನೆ ವಿಚಾರ ಮಾಡುತ್ತಿದ್ದೆವು. ಅದು ಬಹಳ ಹಿಂದಿನ ಕಥೆ. ಆಗ ಸ್ವಾಮೀಜಿ ಮೊದಲಾದವರು ಕಾಶೀಪುರದ ತೋಟದ ಮನೆಯಲ್ಲಿ ಶ್ರೀ ಶ್ರೀ ಠಾಕೂರರ ಸಂಗಡ ಇರುತ್ತಿದ್ದೆವು. ಬೌದ್ಧಧರ್ಮದ ವಿಚಾರವಾಗಿ ಸ್ವಾಮೀಜಿಗೆ ತುಂಬಾ ವ್ಯುತ್ಪತ್ತಿಯಿತ್ತು; ನಾವೂ ಸ್ವಲ್ಪ ಸ್ವಲ್ಪ ಓದಿಕೊಂಡಿದ್ದೆವು. ವಾದ ಪ್ರತಿವಾದ ತುಂಬ ಬಿಸಿಯಾಗಿಯೆ ನಡೆಯುತ್ತಿತ್ತು. ಈಶ್ವರಗೀಶ್ವರ ಯಾವುದರಲ್ಲಿಯೂ ನಮಗೆ ಆಗ ನಂಬುಗೆಯಿರಲಿಲ್ಲ. ಕೆಲವು ಭಕ್ತರಿಗೆ ಆ ನಮ್ಮ ಮನೋಧರ್ಮವನ್ನು ಕಂಡು ಮನಸ್ಸು ನೋಯುತ್ತಿತ್ತು. ಸ್ವಾಮೀಜಿ ತಾವೇ ವಾದಕ್ಕೆ ಹೋಗುತ್ತಿರಲಿಲ್ಲ. ನನ್ನನ್ನು ಚುಚ್ಚಿ ಅವರ ಮೇಲೆ ಬಿಡುತ್ತಿದ್ದರು. ನಾನೂ ಜೋರಾಗಿಯೆ ವಾದ ಮಾಡುತ್ತಿದ್ದೆ. ಸ್ವಾಮೀಜಿ ಅದನ್ನೆಲ್ಲ ಕೇಳುತ್ತ ತಮಾಷೆ ನೋಡುತ್ತಿದ್ದರು. ಒಮ್ಮೊಮ್ಮೆ ನಾನು-ಶರೀರಬುದ್ಧಿ ಇರುವುದೇ ಅನ್ಯಾಯವೆಂದೂ ಧ್ಯಾನಕ್ಕೆ ಅದು ವ್ಯಾಘಾತರೂಪವಾದದ್ದೆಂದೂ ವಾದಿಸುತ್ತಿದ್ದೆ. ಈಶ್ವರ ಭಾವನೆಯೂ ಕೂಡ ಮನಸ್ಸನ್ನು ನಿರ್ವಿಷಯಗೊಳಿಸುವುದಕ್ಕೆ ಅಡ್ಡಿ ತರುತ್ತದೆ ಎಂದು ಹೇಳುತ್ತಿದ್ದೆ, ಬರಿಯ ಬಾಯಲ್ಲಿ ಹಾಗೆ ಹೇಳುತ್ತಿದ್ದುದು ಮಾತ್ರವೆ ಅಲ್ಲ; ನಮ್ಮ ಧ್ಯಾನ, ಅನುಭವ ಎಲ್ಲ ಆ ಸ್ವರೂಪದ್ದೆ ಆಗಿದ್ದುವು. ಆ ಕಾಲದಲ್ಲಿ ನಾವು ಬೇರೆಯ ರೀತಿ ಆಲೋಚಿಸುವುದಕ್ಕೆ ಆಗುತ್ತಲೆ ಇರಲಿಲ್ಲ. ಆ ಭಾವದಲ್ಲಿಯೇ ನಾವು ಮುಳುಗಿಹೋಗಿದ್ದೆವು. ಕ್ರಮೇಣ ಈ ಸುದ್ದಿ ಕೆಲವು ಭಕ್ತರ ಮುಖಾಂತರ ಗುರುಮಹಾರಾಜರ ಕಿವಿಗೂ ಬಿತ್ತು. ಅವರೆಂದರು: ‘ಅವರು ಹೇಳುವುದೂ ಸತ್ಯವೆ. ಸಾಧನೆ ಮಾಡುತ್ತಿರುವಾಗ ಭಗವಂತನನ್ನೂ ಒಪ್ಪದ ಒಂದು ಅವಸ್ಥೆ ಸಾಧಕನಿಗೆ ಬರುತ್ತದೆ’ – ಆ ಭಾವ ಬಹುದಿನಗಳವರೆಗೂ ನಮ್ಮಲ್ಲಿತ್ತು. ಶ್ರೀರಾಮಕೃಷ್ಣರ ಮಹಾಸಮಾಧಿಯ ಅನಂತರ ನಾವು ವರಾಹನಗರದ ಮಠಕ್ಕೆ ಬಂದಮೇಲೆಯೂ ಆ ಭಾವನಾವಸ್ಥೆ ಇದ್ದೇ ಇತ್ತು. ನಾವಿನ್ನೂ ನಿರೀಶ್ವರ ವಾದಿಗಳೇ ಆಗಿದ್ದೆವು. ಒಂದು ದಿನ ಗುರುಮಹಾರಾಜರು ನನಗೆ ಕಾಣಿಸಿಕೊಂಡು ‘ಗುರುವೆ ಸರ್ವಸ್ವ ಕಾಣಯ್ಯ, ಗುರುವಿಗಿಂತ ಹಿರಿಯರಿಲ್ಲ’ ಎಂದು ಹೇಳಿದರು. ಆ ದರ್ಶನವಾದಂದಿನಿಂದ ಅಂತಹ ಭಾವಗಳೆಲ್ಲಾ ಬಿಟ್ಟು ಹೋದವು; ಮತ್ತೆ ಹಿಂತಿರುಗಲಿಲ್ಲ. ಶ್ರೀ ಶ್ರೀ ಠಾಕೂರರೂ ಯುಗಾವತಾರರಲ್ಲವೆ? ಯುಗಧರ್ಮ ಸಂಸ್ಥಾಪನೆಗಾಗಿ ಬಂದವರಲ್ಲವೆ? ಅಂಥವರು ಸಂಕುಚಿತವೂ ಏಕದೇಶೀಯವೂ ಆಗಿರುವ ಆ ಭಾವನೆಗಳನ್ನೆಲ್ಲ ನಮ್ಮಲ್ಲಿ ಉಳಿಯಗೊಡುತ್ತಾರೇನು?”

ಸ್ವಾಮಿ ಓಂಕಾರಾನಂದ: “ಒಂದು ಸಾರಿ ನೀವು ಗುರುಮಹಾರಾಜರಿಗೆ ಏನನ್ನೂ ತಿಳಿಸದೆಯೆ ಬುದ್ಧಗಯೆಗೆ ನುಣಿಚಿಕೊಂಡು ಹೋಗಿರಲಿಲ್ಲವೆ?”

ಮಹಾಪುರುಷಜಿ: “ಹೌದು, ಸ್ವಾಮೀಜಿಯ ಸಂಗಡ ಹೋಗಿದ್ದೆವು. ಅಲ್ಲಿಗೆ ಹೋಗಿ ಬೋಧಿತರುಮೂಲದಲ್ಲಿ ಧ್ಯಾನಕ್ಕೆ ಕುಳಿತೆವು. ತುಂಬ ಧ್ಯಾನಮಗ್ನರೂ ಆದೆವು. ಆಗ, ಇದ್ದಕ್ಕಿದ್ದ ಹಾಗೆ ಸ್ವಾಮೀಜಿ ಭಾವಾವಸ್ಥೆಯಲ್ಲಿ ಹಾಯ್ ಹಾಯ್ ಎಂದು ಆಕ್ರಂದಿಸುತ್ತ ನನ್ನನ್ನು ಬಿಗಿದಪ್ಪಿಬಿಟ್ಟರು. ನಾನು ಅವರ ಪಕ್ಕದಲ್ಲಿಯೆ ಕೂತಿದ್ದೆ. ಆಮೇಲೆ ಕ್ರಮಕ್ರಮವಾಗಿ, ಸಹಜ ಮನುಷ್ಯರೋಪಾದಿಯಲ್ಲಿ ಪ್ರಕೃತಿಸ್ಥರಾಗಿ, ಸ್ವಾಮೀಜಿ ಮತ್ತೆ ಗಾಢ ಧ್ಯಾನಮಗ್ನರಾಗಿಬಿಟ್ಟರು. ಮರುದಿನ ಮಾತುಕತೆಯ ನಡುವೆ ಆ ವಿಚಾರವಾಗಿ ನಾನು ಸ್ವಾಮೀಜಿಗೆ ಪ್ರಶ್ನೆ ಹಾಕಿದ್ದಕ್ಕೆ ಅವರು ಹೇಳಿದರು: ‘ಮನಸ್ಸಿನಲ್ಲಿ ಒಂದು ಗಂಭೀರ ವೇದನೆಯ ಅನುಭವವಾಯಿತು. ಎಲ್ಲವೂ ಹಾಗೆಯೇ ಇವೆ . ಇಲ್ಲಿ ಆ ಬುದ್ಧದೇವನ ಭಾವ ಘನೀಭೂತವಾಗಿ ಇದೆ. ಆತನ ತ್ಯಾಗ, ವೈರಾಗ್ಯ, ಆತನ ಆ ಮಹಾಪ್ರಾಣತೆ, ಆತನ ಗಂಭೀರ ಆಧ್ಯಾತ್ಮಿಕತೆ ಎಲ್ಲವೂ ಇವೆ. ಆದೆ ಆತನೆಲ್ಲಿ? ಈ ಎಲ್ಲಾ ಭಾವಗಳ ಘನೀಭೂತ ಮೂರ್ತಿಯಾದ ಆ ಬುದ್ಧದೇವ, ಅವನೆಲ್ಲಿ? ಬುದ್ಧದೇವನ ವಿರಹ ಎಷ್ಟರಮಟ್ಟಿಗೆ ಪ್ರಾಣ ಸ್ಪಂದಿಯಾಯಿತೆಂದರೆ ನನಗೆ ಸಹಿಸಲು ಸಾಧ್ಯವಾಗಲಿಲ್ಲ. ಆ ಕಾರಣಕ್ಕಾಗಿಯೆ ಆಕ್ರಂದಿಸುತ್ತಾ ನಿಮ್ಮನ್ನು ಅಪ್ಪಿಬಿಟ್ಟಿದ್ದು ‘. ಬುದ್ಧಗಯೆಯಲ್ಲಿ ನಾವಿದ್ದುದು ಕೆಲವೇ ದಿನಗಳಾದರೂ ಮನಸ್ಸೆಲ್ಲಾ ಅತ್ಯಂತ ಆನಂದಮಯವಾಗಿತ್ತು.”

ಓಂಕಾರಾನಂದರು: “ಬುದ್ಧಗಯೆಯಲ್ಲಿ ಬುದ್ಧದೇವನು ಅಡಿಯಿಟ್ಟು ಎಡೆಗಳಲ್ಲಿ ಅಮೃತಶಿಲೆಯ ಪದ್ಮಗಳನ್ನು ಕಡೆದು ನಿಲ್ಲಿಸಿದ್ದಾರೆ.”

ಮಹಾಪುರುಷಜಿ: “ಹೌದು, ಸಿದ್ಧಿಲಾಭವಾದ ಮೇಲೆ ಆತನಿಗೆ ಎಂತಹ ಆನಂದಾನುಭವವಾಯಿತೆಂದರೆ, ಇಡಿ ರಾತ್ರಿಯನ್ನೆಲ್ಲಾ ಹಿಂದಕ್ಕೂ ಮುಂದಕ್ಕೂ ಸುಮ್ಮನೆ ತಿರುಗುತ್ತಲೆ ಕಳೆದನಂತೆ. ಆತ್ಮಾರಾಮನಾಗಿ ಆನಂದಾತಿಶಯದಿಂದ ಸುಮ್ಮನೆ ಸುಳಿಸುಳಿದು ಸುತ್ತಿದನಂತೆ.”

ಆ ಇರುಳು ಭಗವಾನ್ ಬುದ್ಧದೇವನ ವಿಚಾರವಾಗಿ ಬಹಳ ಹೊತ್ತು ಮಾತುಕತೆ ನಡೆಯಿತು.

* * *