ಇವತ್ತು ಭಾನುವಾರ, ಗುರುಪೂರ್ಣಿಮೆ, ಬೆಳಗಿನಿಂದಲೂ ಅನೇಕ ಭಕ್ತರು ಮಹಾಪುರುಷ ಮಹಾರಾಜರ ದರ್ಶನಕ್ಕಾಗಿ ಬರುತ್ತಿದ್ದಾರೆ. ಆದರೆ ಸ್ವಾಮಿಗಳ ದೇಹಸ್ಥಿತಿ ಉತ್ತಮಗೊಂಡಿಲ್ಲ. ಭಕ್ತರೊಬ್ಬರು ಪ್ರಣಾಮ ಸಲ್ಲಿಸಿ, ಕುಶಲ ಪ್ರಶ್ನೆ ಕೇಳಿದಾಗ ಮಹಾಪುರುಷಜಿ ಹೇಳಿದರು: “ದೇಹಸ್ಥಿತಿ ಅಷ್ಟೇನೂ ಸರಿಯಾಗಿಲ್ಲ. ಅದು ಹೇಗೆ ಸರಿಯಾದೀತು ಹೇಳಪ್ಪಾ? ಇನ್ನು ಮೇಲೆ ಶರೀರ ದಿನದಿನವೂ ಕ್ಷೀಣವಾಗುತ್ತಲೇ ಹೋಗುತ್ತದೆ. ಶರೀರ ಧರ್ಮವೇ ಹಾಗೆ, ಷಡ್ವಿಕಾರಾತ್ಮಕ ದೇಹ, ‘ಜಾಯತೇ, ಆಸ್ತಿ, ವರ್ಧತೇ, ವಿಪರಿಣಮತೇ, ಅಪಕ್ಷೀಯತೇ, ನಶ್ಯತಿ.’ (ಹುಟ್ಟುತ್ತದೆ, ಇರುತ್ತದೆ, ಬೆಳೆಯುತ್ತದೆ, ಸವೆಯುತ್ತದೆ, ಬದಲಾಗುತ್ತದೆ, ಸಾಯುತ್ತದೆ.) ಇನ್ನು ಮೇಲೆ ಕ್ರಮ ಕ್ರಮವಾಗಿ ಕಟ್ಟಕಡೆಯ ವಿಕಾರದ ಕಡೆಗೆ ಚಲಿಸುತ್ತದೆ, ಎಲ್ಲ ದೇಹಗಳಿಗೂ ಇದೇ ಪರಿಣಾಮ.”

ಭಕ್ತ: “ನೀವು ಮನಸ್ಸು ಮಾಡಿದರೆ ಗುಣ ಹೊಂದುತ್ತದೆ.”

ಮಹಾಪುರುಷಜಿ: “ಇಲ್ಲವಯ್ಯಾ, ಅದು ಸಾಧ್ಯವಲ್ಲ. ಒಂದಲ್ಲ ಒಂದು ದಿನ ಎಲ್ಲ ದೇಹಗಳೂ ನಶಿಸಲೇಬೇಕು. ‘ಇವತ್ತೇ ಇಲ್ಲವೆ ನೂರುವರ್ಷಗಳ ತರುವಾಯ ದೇಹ ಮೃತ್ಯುವಶವಾಗುತ್ತದೆ.’ ಅರಿಯೆಯಾ? ದೇಹಕ್ಕೆ ನಾಶವಿದ್ದೇ ಇದೆ. ಅದು ನಿಶ್ಚಯ, ಈ ನನ್ನ ಒಡಲು ದೀರ್ಘಕಾಲ ಬಾಳಿದೆ- ಎಪ್ಪತ್ತಾರೊ ಎಪ್ಪತ್ತೇಳೊ ವರ್ಷ. ಇನ್ನೆಷ್ಟು ಕಾಲ ಅದು ಬಾಳೀತು? ಈ ದೇಹಕ್ಕೆ ನಾಶ ಒದಗಿದರೆ ನನಗೇನಂತೆ? ನಾನಂತೂ ದೇಹವಲ್ಲ, ಶ್ರೀಗುರು ಕೃಪೆಯಿಟ್ಟು ನನಗದನ್ನು ತೋರಿಸಿದ್ದಾರೆ. ಪಾಂಚಭೌತಿಕ ದೇಹ ಪಂಚಭೂತಗಳಲ್ಲಿ ಸೇರಿ ಹೋಗುತ್ತದೆ. ನಾನು ಆ ದಿವ್ಯಧಾಮಕ್ಕೆ ಹೊರಟುಬಿಡುತ್ತೇನೆ, ಎಲ್ಲಿ ಜರೆ ಇಲ್ಲವೊ, ಮೃತ್ಯು ಇಲ್ಲವೊ, ಸುಖ ಇಲ್ಲವೊ, ದುಃಖ ಇಲ್ಲವೊ ಆ ಅಮೃತ ಧಾಮಕ್ಕೆ. ಶ್ರೀ ಗುರು ತನ್ನ ಅಪಾರ ಕೃಪೆಯಿಂದ ಆ ಜ್ಞಾನವನ್ನು ಸಮೃದ್ಧಿಯಾಗಿ ಕೊಟ್ಟಿದ್ದಾರೆ, ಕೊಡುತ್ತಲೂ ಇದ್ದಾರೆ.”

ಬೆಳಿಗ್ಗೆ ಒಂಬತ್ತೂವರೆ ಗಂಟೆಯ ಹೊತ್ತಿನಲ್ಲಿ ಮಹಾಪುರುಷಜಿ ದೇವರ ಮನೆಗೆ ಹೋಗಿ ಇಬ್ಬರು ಭಕ್ತರಿಗೆ ದೀಕ್ಷೆ ಕೊಟ್ಟರು. ದೇವರ ಮನೆಯಿಂದ ಹಿಂತಿರುಗಿ ಬಂದು ಆರಾಮಕುರ್ಚಿಯ ಮೇಲೆ ಒರಗಿ ಪ್ರಶಾಂತರಾಗಿ ಕುಳಿತಿದ್ದರು. ಆಗ ಭಕ್ತರೊಬ್ಬರು ಬಂದು ತುಸು ನೊಂದ ದನಿಯಿಂದಲೆ ಕೇಳಿದರು”ಇವತ್ತೂ ಕೆಲವು ಭಕ್ತರಿಗೆ ದೀಕ್ಷೆ ಕೊಡೋಣಾಯಿತೆ?”

ಮಹಾಪುರುಷಜಿ: “ಹೌದು, ಶ್ರೀ ಶ್ರೀ ಠಾಕೂರರ ಹೆಸರನ್ನು ಕೊಟ್ಟೆ.”

ಭಕ್ತ: “ನಿಮ್ಮ ದೇಹಸ್ಥಿತಿ ಬಹಳ ಕೆಟ್ಟಿದೆ. ಈಗಲೂ ನೀವು ದೀಕ್ಷೆ ಕೊಡುವುದರಿಂದ ಅದಿನ್ನೂ ಕೆಡುತ್ತದೆ, ಮಹಾರಾಜ್.”

ಮಹಾಪುರುಷಜಿ: “ಹಾಗಾದರೆ ಏನು ಮಾಡಲಿ, ನೀನೆ ಹೇಳು ನೋಡೋಣ. ಜನ ಅಷ್ಟು ಕಾತರರಾಗಿ ಕೇಳಿಕೊಂಡಾಗ ನಾನು ಇಲ್ಲ ಎನ್ನುವುದು ಹೇಗೆ? ಅವರ ವ್ಯಾಕುಲತೆಯನ್ನು ಕಂಡಾಗ ನನ್ನ ಮನಸ್ಸು ನೆಮ್ಮದಿಯಾಗಿರಲು ಸಾಧ್ಯವೇ ಇಲ್ಲ. ದೇಹ ಇರುವವರೆಗೂ ಈ ಸುಖ ದುಃಖ ಇರುತ್ತವೆ. ಇಂದಲ್ಲ ನಾಳೆ ದೇಹವೂ ನಾಶಹೊಂದುತ್ತದೆ, ಅದೂ ನಿಶ್ಚಯ. ಆದ್ದರಿಂದ ಇರುವಷ್ಟು ದಿನ ಅದು ಏನಾದರೂ ಅಲ್ಪ ಸ್ವಲ್ಪ ಲೋಕ ಕಲ್ಯಾಣಕಾರ್ಯ ಮಾಡಲಿ. ಲೋಕಕ್ಕೆ ಕಲ್ಯಾಣ ಮಾಡುತ್ತ ಮಾಡುತ್ತಿರುವಾಗಲೆ ಈ ಒಡಲು ಬಿದ್ದು ಹೋದರೆ ಅದೂ ಒಳಿತೆ. ಒಂದೆ ಒಂದು ಜೀವಕ್ಕಾದರೂ ಸರಿ, ಈ ದೇಹದ ಮುಖಾಂತರ ಯಥಾರ್ಥ ಹಿತವಾದರೆ ದೇಹ ಸಾರ್ಥಕವಾಗುತ್ತದೆ.”

ಸ್ವಲ್ಪ ಹೊತ್ತಿನಲ್ಲಿಯೇ ಭಕ್ತರೊಬ್ಬರು ಬಂದು ಪ್ರಣಾಮ ಮಾಡಿ ಮಹಾಪುರುಷಜಿಯ ಬಳಿ ನಿಂತುಕೊಂಡರು. ಆತನು ತನ್ನ ತಾಯಿ ತಂದೆಯರನ್ನು ಕೂಡು ಪೂರಿಯ ಪವಿತ್ರ ಕ್ಷೇತ್ರಕ್ಕೆ ಯಾತ್ರೆ ಹೋಗಿ ಆಗ ತಾನೆ ಹಿಂತಿರುಗಿದ್ದನು. ಆತ ಆ ವಿಚಾರವನ್ನೆಲ್ಲ ಹೇಳಿದ ಮೇಲೆ ಮಹಾಪುರುಷಜಿ ಹೇಳಿದರು: “ಬಹಳ ಒಳ್ಳೆಯದು, ನಿನ್ನ ತಾಯಿ ತಂದೆ ಧನ್ಯರಾದರು; ನಿನಗೂ ಶ್ರೀ ಜಗನ್ನಾಥನ ದರ್ಶನ ದೊರೆಕೊಂಡಿತು.” ಹೀಗೆಂದು ನಗತೊಡಗಿದರು.

ಭಕ್ತರು: “ಹಿಂದೆಯೂ ನಾನೊಂದು ಸಾರಿ ಅಲ್ಲಿಗೆ ಯಾತ್ರೆ ಹೋಗಿದ್ದೆ. ಆದರೆ ಆ ಕಾಲ ಒಳ್ಳೆಯದಾಗಿರಲಿಲ್ಲ. ಅನೇಕರು ಹೇಳುತ್ತಾರೆ, ಆ ಕಾಲದಲ್ಲಿ ದರ್ಶನ ಮಾಡಿದರೆ ಯಾವ ಫಲವೂ ಇಲ್ಲ ಎಂದು.”

ಮಹಾಪುರುಷಜಿ: “ನೋಡಯ್ಯಾ, ನಾವು ಅದನ್ನೆಲ್ಲ ಮನಸ್ಸಿಗೆ ತೆಗೆದು ಕೊಳ್ಳುವುದೇ ಇಲ್ಲ. ದೇವರ ದರ್ಶನ ಮಾಡುವುದಕ್ಕೆ ಕಾಲ ಆಕಾಲ ಎಂದರೇನು? ಎಲ್ಲ ಕಾಲವೂ ಒಳ್ಳೆಯ ಕಾಲವೆ. ಭಗವಂತನ ದರ್ಶನ ಮಾಡಿದರೆ ಅಕಾಲವೂ ಕೂಡ ಸಕಾಲವಾಗುತ್ತದೆ. ಭಗವಂತ-ಅವನು ಚಿರಮಂಗಲಮಯ” ಹೀಗೆಂದು ಹಾಡತೊಡಗಿದರು:

‘ನಿನ್ನ ನಾಮ ಮಂಗಲ, ನಿನ್ನ ಧಾಮ ಮಂಗಲ
ನಿನ್ನ ಕಾರ್ಯ ಮಂಗಲ, ನೀನೆ ಸರ್ವಮಂಗಲ!’

ಈ ಗಾನವನ್ನು ಮತ್ತೆ ಮತ್ತೆ ಹಾಡುತ್ತಾ ಹೇಳಿದರು: “ಸ್ವಾಮೀಜಿ ಇದನ್ನು ಬಹಳ ಚೆನ್ನಾಗಿ ಹಾಡುತ್ತಿದ್ದರು.”

* * *