ಸಾಯಂಕಾಲ. ಮಹಾಪುರುಷಜಿ ಆಗ ತಾನೆ ಕ್ಷೌರ ಪೂರೈಸಿಕೊಂಡಿದ್ದರು. ವರಾಹನಗರದ ಅನಾಥಶ್ರಮದ ಸಂನ್ಯಾಸೀ ಸೇವಕರೊಬ್ಬರನ್ನು ಕಂಡು, ಬಳಿಗೆ ಕರೆದು, ಹತ್ತಿರ ಕುಳ್ಳಿರಿಸಿಕೊಂಡು ಒಂದೆರಡು ಮಾತುಕತೆಯಾದ ಮೇಲೆ ಹೇಳಿದರು; “ನಿನಗೆ ಈಗ ಹೇಗೆ ಆಗುತ್ತದೆ, ಹೋಗುವುದಕ್ಕೆ? ಸ-ಹಿಂತಿರುಗಿ ಬರಲಿ; ಆಮೇಲೆ ಹೋಗಬಹುದಾದರೆ ಹೋಗುವಿಯಂತೆ. ಅಲ್ಲದೆ, ಈಗ ನೀನು ಹೋಗುವುದಾದರೂ ಏತಕ್ಕೆ? ಇಲ್ಲಿಯೇ, ನಿನ್ನ ಕೆಲಸ ಕಾರ್ಯ ಎಲ್ಲ ಮುಗಿಸಿದ ಮೇಲೆ, ಬೇಕಾದಷ್ಟು ಸಮಯವಿರುತ್ತದೆ ಧ್ಯಾನ ಜಪ ಮಾಡುವುದಕ್ಕೆ. ಅದೆಲ್ಲ ಮನಸ್ಸಿನ ವ್ಯಾಪಾರ. ಮನಸ್ಸೊಂದು ಭಗವನ್ಮುಖಿಯಾದರೆ ಸರ್ವಾವಸ್ಥೆಗಳಲ್ಲಿಯೂ ಧ್ಯಾನ ಜಪಕ್ಕೆ ಬೇಕಾಗುವ ಸಮಯವನ್ನು ಅದು ಕಂಡುಕೊಳ್ಳುತ್ತದೆ. ಬೇಕಾದ್ದು ಆಂತರಿಕ ವ್ಯಾಕುಲತೆ. ಇಲ್ಲಿ ನೀನು ಧ್ಯಾನ ಜಪ ಮಾಡಲಾರೆಯಾದರೆ ಇನ್ನೆಲ್ಲಿಯೂ ಮಾಡಲಾರೆ. ಶ್ರೀ ಠಾಕೂರರು ಹೇಳುತ್ತಿದ್ದರು: ‘ಯಾರಿಗೆ ಇಲ್ಲಿ ಸಾಧ್ಯವೊ ಅವರಿಗೆ ಅಲ್ಲಿಯೂ ಸಾಧ್ಯ.’ ತುಂಬ ಸತ್ಯದ ಮಾತು ಕಣಯ್ಯಾ. ಪೂರ್ಣ ವ್ಯಾಕುಲತೆಯಿಂದ ಮೊರೆಯಿಡು, ಪ್ರಾರ್ಥಿಸು. ಅವನು ನಿನಗೆ ಭಕ್ತಿ ವಿಶ್ವಾಸಗಳನ್ನು ಯಥೇಚ್ಛವಾಗಿ ದಯಪಾಲಿಸುತ್ತಾನೆ. ಎಲ್ಲಿಗೆ ಹೋಗ್ತೀಯಾ? ಏಕೆ ಹೋಗಬೇಕು? ಅವನ ಕೆಲಸವನ್ನೆ ಮಾಡುತ್ತಿದ್ದೀಯ. ಅದೇನು ಅಲ್ಪ ವಿಷಯವೆ?”

ಸಂನ್ಯಾಸಿ: “ಕಾ…ಸಿಕ್ಕಿದಾಗಲೆಲ್ಲ ಬಾಯಿಗೆ ಬಂದ ಹಾಗೆ ಹೇಳ್ತಾರೆ” ಎಂದು ಹೇಳುತ್ತಾ ಅಳತೊಡಗಿದರು.

ಮಹಾಪುರುಷಜಿ: “ನನಗೂ ಹಾಗೆ ಅನ್ನಿಸಿತ್ತು, ನಿಮ್ಮಿಬ್ಬರಿಗೂ ಏನೋ ಮನಸ್ತಾಪ ಉಂಟಾಗಿದೆಯೆಂದು. ಯಾತಕ್ಕೆ ಅವರು ಹಾಗೆ ಅನ್ನೋದು? ನೀನೇನೊ ಅಂಥವನಲ್ಲ ಅನ್ನೋದು ನನಗೆ ಚೆನ್ನಾಗಿ ಗೊತ್ತು, ಕಾ… ಅವರನ್ನು ಒಂದು ಸಾರಿ ಬಂದು ನನ್ನನ್ನು ಕಾಣುವುದಕ್ಕೆ ಹೇಳು. ಅವರಿಗೂ ವಿವರಿಸಿ ಹೇಳ್ತಿನಿ. ನೀನು ಇದನ್ನೆಲ್ಲ ಮನಸ್ಸಿಗೆ ಹಾಕಿಕೊಳ್ಳಬೇಡಯ್ಯಾ. ನಿನಗೆ ಗೊತ್ತಿಲ್ಲವೆ, ಒಂದು ಕಡೆ ಇರುವ ಪಾತ್ರೆಗಳು ಚಲಿಸುವಾಗ ತುಸು ತಗಲಾಟ ಸದ್ದು ಆಗಿಯೆ ಆಗುತ್ತದೆ. ಅದಕ್ಕೆ ಯಾರು ಏನು ಮಾಡುವುದಕ್ಕಾಗುತ್ತದೆ? ಕ್ರಮೇಣ ಸರಿಹೋಗುತ್ತದೆ. ಒಂದೇ ಕೈಯಿಂದ ಚಪ್ಪಾಳೆ ಆಗುತ್ತದೆಯೆ? ಅವರು ಏನಾದರೂ ಹೇಳಿಕೊಳ್ಳಲಿ, ಸಹಿಸಿಕೊಂಡು ಸುಮ್ಮನೀರು. ನೀನು ಸ್ವಲ್ಪ ವಿನಯದಿಂದಿರಬೇಕು. ನೀನೂ ಕೊಂಚ ತ್ಯಾಗಮಾಡಬೇಕು. ಶ್ರೀ ಗುರುವಿಗೆ, ಆತನ ಕಾರ್ಯಕ್ಕಾಗಿ ದೇಹ, ಪ್ರಾಣ, ಮನಸ್ಸು ಎಲ್ಲವನ್ನೂ ಅರ್ಪಿಸಿದ್ದೀಯ. ಆತನ ಕಾರ್ಯಸಿದ್ಧಿಗಾಗಿ ಇದನ್ನೂ ನೀನು ಸಹಿಸಬೇಕು, ಸ್ವಲ್ಪ ತಾಳ್ಮೆ ಅಭ್ಯಾಸ ಮಾಡಬೇಕು. ಸ್ವಲ್ಪ ತ್ಯಾಗಕ್ಕೆ ಸಿದ್ಧವಾಗಬೇಕು. ಎಲ್ಲ ಅವನ ಕೆಲಸಕ್ಕಾಗಿ. ಪ್ರಭು ನಿನಗೆ ಅಶೇಷಕಲ್ಯಾಣ ಉಂಟುಮಾಡುತ್ತಾನೆ.”

ಸಂನ್ಯಾಸಿ: “ಹಾಗೆ ಮಾಡಲು ಸಾಧ್ಯವಾಗುವಂತೆ ತಾವು ನನ್ನನ್ನು ಆಶೀರ್ವದಿಸಬೇಕು.”

ಮಹಾಪುರುಷಜಿ: “ಸಾಧ್ಯವಾಗಿಯೇ ಆಗುತ್ತದೆ. ನಾನು ಆಶೀರ್ವಾದ ಮಾಡುತ್ತೇನೆ. ಅಯ್ಯಾ, ಮನಮುಟ್ಟಿ ಆಶೀರ್ವಾದ ಮಾಡುತ್ತೇನೆ. ಆದರೆ ನೀನೂ ಗುರುಮಹಾರಾಜರಿಗೆ ಹೃತ್ಪೂರ್ವಕವಾಗಿ ಪ್ರಾರ್ಥನೆ ಸಲ್ಲಿಸಬೇಕು. ಅವರು ನಿನಗೆ ಮತ್ತಷ್ಟು ಶಕ್ತಿ ಕೊಡುತ್ತಾರೆ. ಅವರಿಗಾಗಿ ನೀನು ಎಲ್ಲವನ್ನೂ ತ್ಯಾಗಮಾಡಿ ಬಂದಿದ್ದೀಯೆ. ಯಾವುದನ್ನೆ ಆಗಲಿ ನಿನಗೆ ಕೊಡದೆ ಅವರು ಹಿಡಿದಿಟ್ಟುಕೊಳ್ಳುವುದಿಲ್ಲ. ನೀವು ನಾಲ್ಕು ಜನ ಒಂದು ಕಡೆ ಒಟ್ಟಿಗೆ ಇರಲಾರದೆ ಹೋದರೆ ಅವರ ಕೆಲಸ ಆಗುವುದು ಹೇಗೆ? ಅವರಿಗಾಗಿ ತಾಳ್ಮೆಗೆಡದಿರು; ಯಾರು ಏನಾದರೂ ಹೇಳಿಕೊಳ್ಳಲಿ, ಒಳ್ಳೆಯದೊ ಕೆಟ್ಟುದೊ, ನೀವೆಲ್ಲ ಸಾಧುಗಳು. ‘ಒಳ್ಳೆಯದಾಗಲಿ ಉದ್ಧಾರವಾಗಲಿ’ ಎಂದು ಇಲ್ಲಿಗೆ ಬಂದಿದ್ದೀರ. ಆತ್ಮೋದ್ಧಾರವಲ್ಲದೆ ನಿಮ್ಮಲ್ಲಿ ಬೇರೆ ಯಾವ ವಾಸನೆಯಾಗಲಿ ಕಾಮನೆಯಾಗಲಿ ಇಲ್ಲ. ನಿಮಗೆ ಬೇಕಾಗಿರುವುದು ಭಗವಂತನೊಬ್ಬನೆ. ನಾಲ್ಕಾರು ಜನ ಒಟ್ಟು ಸೇರಿ ಕೆಲಸ ಮಾಡುವಾಗ ಇಂತಹ ತಾತ್ಕಾಲಿಕವಾದ ಭಿನ್ನಭಿಪ್ರಾಯ ತಿಕ್ಕಾಟ ಇದ್ದೇ ಇರುವುದು ಅನಿವಾರ್ಯ. ಅದರಲ್ಲಿ ವಿಚಿತ್ರವೂ ಇಲ್ಲ.ಅದು ವಿಲಕ್ಷಣವೂ ಅಲ್ಲ; ಅದೆಲ್ಲ ಸ್ವಾಭಾವಿಕ. ಅವನ್ನೆಲ್ಲ ಒಳಗೆ ಇಟ್ಟುಕೊಳ್ಳಬಾರದು, ಮನಸ್ಸಿಗೆ ಹಾಕಿಕೊಳ್ಳಬಾರದು. ಅವು ಬರುತ್ತವೆ, ಹೋಗುತ್ತವೆ. ಏಕೆಂದರೆ ನಿಮ್ಮ ಜೀವನದ ಏಕಮಾತ್ರ ಲಕ್ಷ್ಯ ಎಂದರೆ ಭಗವತ್ ಸಾಕ್ಷಾತ್ಕಾರ. ಈ ಎಲ್ಲ ರಾಗ ದ್ವೇಷಾದಿಗಳು ನಿಮ್ಮ ಅಂತರಾತ್ಮವನ್ನು ಕಲುಷಿತಮಾಡಲಾರವು. ನನಗೆ ಹಾಗೆ ತೋರುತ್ತೆ. ನೀವು ಮಾಡುತ್ತಿರುವ ಈ ಕೆಲಸಕಾರ್ಯಗಳನ್ನೆಲ್ಲ ಸೇವಾಜ್ಞಾನದಿಂದಲ್ಲವೆ ಮಾಡುತ್ತಿರುವುದು! ಆದ್ದರಿಂದಲೆ ನಿಮ್ಮ ಮನಸ್ಸು ದಿನದಿನವೂ ಹೆಚ್ಚು ಹೆಚ್ಚು ಶುದ್ಧವಾಗುತ್ತದೆ. ಈ ಕೆಲಸದಲ್ಲಿ ನಿಮಗೆ ಯಾವ ವಿಧವಾದ ಸ್ವಾರ್ಥ ಬುದ್ಧಿಯೂ ಇಲ್ಲ. ಈ ಸೇವಾಕಾರ್ಯದೊಡನೆ ನಿಮ್ಮ ಸಾಧನೆ ಭಜನೆಗಳನ್ನೂ ಮಾಡಿಕೊಂಡು ಹೋಗಬೇಕು. ಎಷ್ಟು ಸಮಯ ಸಿಕ್ಕಿದರೆ ಅಷ್ಟು ಸಮಯ; ಸಾಧ್ಯವಾದಾಗಲೆಲ್ಲ ಕೂತುಕೊಂಡು ಜಪಮಾಡಿ. ಮನಸ್ಸಿನಲ್ಲಿ ಏನಾದರೂ ದುರ್ಬಲತೆ ತಲೆದೋರಿದರೆ; ಏನಾದರೂ ಅಭಾವ ಭೋದೆ ಅಥವಾ ಅರಕೆಯಾದರೆ ಠಾಕೂರರಿಗೆ ಹೇಳಿಕೊಳ್ಳಿ. ಅತ್ಯಂತ ವ್ಯಾಕುಲ ಭಾವದಿಂದ ಮೊರೆಯಿಟ್ಟು ಕರೆದರೆ ಗುರು ಓಕೊಳ್ಳುತ್ತಾನೆ. ಚೆನ್ನಾಗಿ ನಾಮಜಪ ಮಾಡು. ನಾಮಜಪದಿಂದ ದೇಹ ಮನಸ್ಸು ಶುದ್ಧಿಗೊಳ್ಳುತ್ತವೆ; ಮೈಲಿಗೆಯೆಲ್ಲ ತೊಳೆದು ಹೋಗುತ್ತದೆ. ಸಾಧುವಾಗುತ್ತೇನೆಂದು ನೀನು ಎಲ್ಲ ಬಿಟ್ಟು ಬಂದೆ; ಇನ್ನು ಭಗವಾನ್ ಲಾಭವೊಂದೇ ನಿನ್ನ ಜೀವನದ ಉದ್ದೇಶವಯ್ಯಾ. “ತುಲ್ಯನಿಂದಾಸ್ತುತಿರ್ಮೌನೀ ಸಂತುಷ್ಟೋ ಯೇನಕೇನಚಿತ್” ಎಂಬುದೆ ನಿನ್ನ ಆದರ್ಶವಾಗಬೇಕು. ಸ್ತುತಿನಿಂದೆಗಳಲ್ಲಿ ಸಮಭಾವ, ನೀರವವಾಗಿ ಇರುವುದು ಎಂದರೆ ಮೌನ, ಬಂದದ್ದರಲ್ಲಿಯೆ ಬಂದಷ್ಟರಲ್ಲಿಯೆ ತೃಪ್ತಿ-ಆ ಸ್ಥಿತಿ. ಭಗವದ್ ಭಾವದಲ್ಲಿಯೆ ನಿನ್ನ ಪ್ರಜ್ಞೆ ಸುಸ್ಥಿತವಾಗಬೇಕು. ಯಾರು ಏನಾದರೂ ಹೇಳಿಕೊಳ್ಳಲಿ, ನಿನಗೇನಂತೆ?”

ಆಲಿಸುತ್ತಾ ಆಲಿಸುತ್ತಾ ಸಂನ್ಯಾಸಿ ಶೋಕಾತಿಶಯದಿಂದ ಬಿಕ್ಕಿ ಬಿಕ್ಕಿ ಅಳುತ್ತಾ ಮಹಾಪುರಷಜಿಯ ಪಾದಗಳನ್ನು ಗಾಢವಾಗಿ ಹಿಡಿದಪ್ಪಿಕೊಂಡು “ಮಹಾರಾಜ್, ಹಾಗೆ ಆಶೀರ್ವಾದ ಮಾಡಿ, ನಿಂದೆ ಸುತ್ತಿ ಎರಡೂ ಒಂದಾಗುವಂತೆ, ಭಗವದ್ ಭಾವದಲ್ಲಿಯೆ ಮಗ್ನನಾಗಿರುವಂತೆ!”

ಮಹಾಪುರುಷಜಿ ಸಮಾಧಾನಪಡಿಸಿದಷ್ಟೂ ಆತನಿಗೆ ಶೋಕವುಕ್ಕಿ ಬಾಲಕನಂತೆ ಕರುಣಸ್ವರದಿಂದ ರೋದಿಸತೊಡಗಿದನು. ಮಹಾಪುರುಷಜಿ ಹೇಳಿದರು: “ಒಳ್ಳೆಯದು, ಹಾಗೆ ಆಗುತ್ತದಯ್ಯಾ. ಅಂತಹ ಸ್ಥಿತಿಯೆ ನಿನಗೆ ನಿಶ್ಚಯವಾಗಿ ಒದಗುತ್ತದೆ. ಶ್ರೀಗುರು ತನ್ನೆಡೆಗೆ ನಿನ್ನನ್ನು ಕರೆತಂದಿರುವುದೇ ಅವನ ಅಪಾರ ಕೃಪೆಯನ್ನು ತೋರಿಸುತ್ತದೆ.” ಸ್ವಲ್ಪ ಹೊತ್ತು ಸುಮ್ಮನಿದ್ದು ಆಮೇಲೆ ಅತ್ಯಂತ ಸ್ನೇಹವಾಣಿಯಿಂದ ಮತ್ತೆ ಹೇಳಿದರು: “ಈಗ ಸ್ವಲ್ಪ ದೇವರಮನೆಗೆ ಹೋಗು. ಅಲ್ಲಿ ಕುಳಿತು ಸ್ವಲ್ಪ ಜಪಮಾಡಿ ಪ್ರಾರ್ಥನೆ ಮಾಡು;- ಹೃದಯ ಎಷ್ಟೋ ಹಗುರವಾಗುತ್ತದೆ. ಆಮೇಲೆ ಸ್ವಲ್ಪ ದೇವರ ಪ್ರಸಾದ ತೆಗೆದುಕೊ. ಇನ್ನು ಮೇಲೆ ನಿನಗೆ ಪುರಸತ್ತು ಸಿಕ್ಕಾಗಲೆಲ್ಲ ಇಲ್ಲಿಗೆ ಬಾ. ಮಠದಲ್ಲಿ ಅನೇಕ ಸಾಧುಗಳೂ ಬ್ರಹ್ಮಚಾರಿಗಳೂ ಇದ್ದಾರೆ. ಅವರೊಡನೆ ಹೊಂದಿಕೆ ಬಳಕೆ ಮಾಡುತ್ತೀಯಷ್ಟೆ?”

* * *