ಬೆಳಿಗ್ಗೆ ಮಠದ ಸಾಧುಗಳು ಬ್ರಹ್ಮಚಾರಿಗಳು ಒಬ್ಬೊಬ್ಬರಾಗಿ ಮಹಾಪುರುಷ ಮಹಾರಾಜರಿಗೆ ಪ್ರಣಾಮ ಸಲ್ಲಿಸಲು ಬರತೊಡಗಿದರು. ಜಾಂದಿ ಆಶ್ರಮಕ್ಕೆ ಸೇರಿದ ಬ್ರಹ್ಮಚಾರಿಯೊಬ್ಬರು ಕೆಲವು ದಿನಗಳಿಂದ ಬೇಲೂರು ಮಠದಲ್ಲಿ ಇರುತ್ತಿದ್ದರು. ಅವರು ಪ್ರಣಾಮ ಸಲ್ಲಿಸಿದ ಮೇಲೆ ಮಹಾಪುರುಷಜಿ ಕೇಳಿದರು: “ಜಾಂದಿಯಲ್ಲಿ ನಿನಗೆ ಕೆಲಸಕಾರ್ಯ ಬಹಳ ಇರುತ್ತದೆ. ಇಲ್ಲಿ ಬೇಲೂರು ಮಠದಲ್ಲಿರುವಾಗಲೆ ಚೆನ್ನಾಗಿ ಜಪ ಧ್ಯಾನ ಮಾಡುತ್ತಿದ್ದೀಯಲ್ಲವೆ? ಪ್ರಾತಃಕಾಲ ಸಂಧ್ಯಾಕಾಲ ಮತ್ತು ರಾತ್ರಿಯ ವೇಳೆಗಳ್ಲಿ ತುಂಬ ಜಪ ಧ್ಯಾನ ಮಾಡಬೇಕು ಇದು ದೊಡ್ಡ ಜಾಗ್ರತ ಸ್ಥಾನ. ಸ್ವಾಮೀಜಿ ಠಾಕೂರರನ್ನು ತಲೆಯ ಮೇಲೆಯೆ ಹೊತ್ತು ತಂದು ಇಲ್ಲಿ ಕೂರಿಸಿದ್ದಾರೆ. ಇಲ್ಲಿ ಶ್ರೀರಾಮಕೃಷ್ಣ ಪರಮಹಂಸರು ವಿಶೇಷ ರೀತಿಯಲ್ಲಿ ಪ್ರಕಾಶವಾಗಿದ್ದಾರೆ. ಅಲ್ಲದೆ ಸ್ವಾಮಿಜಿ (ವಿವೇಕಾನಂದರು), ಮಹಾರಾಜ್ (ಬ್ರಹ್ಮಾನಂದರು), ಬಾಬುರಾಂಮಹಾರಾಜ್(ಪ್ರೇಮಾನಂದರು). -ಅವರೆಲ್ಲರೂ ಈ ಸ್ಥಾನದಲ್ಲಿ ಎಷ್ಟೊಂದು ಸಾಧನೆ ಭಜನೆ ಮಾಡಿದ್ದಾರೆ! ಸ್ವಾಮೀಜಿ ತಮ್ಮ ಶರೀರತ್ಯಾಗ ಮಾಡಿದ್ದು ಈ ಸ್ಥಾನದಲ್ಲಿಯೆ. ಈ ಸಾಧನ ಮಹಾತ್ಮ್ಯೆ ಎಷ್ಟೆಂದು ಹೇಳಲಿ! ಸಾಧನೆ ಭಜನೆಗಳಿಗೆ ಇಂತಹ ಅನುಕೂಲ ಸ್ಥಾನ ಮತ್ತೆಲ್ಲಿಯೂ ದೊರೆಯಲಾರದು. ಈ ಸ್ಥಾನ ಆಧ್ಯಾತ್ಮಶ್ರೀಯಿಂದ ತುಂಬಿ ತುಳುಕುತ್ತಿದೆ. ಎಷ್ಟು ಪೂಜಾಸ್ತೋತ್ರ, ಎಷ್ಟು ನಾಮಕೀರ್ತನ ಈ ಸ್ಥಾನದಲ್ಲಿ ನಡೆದಿದೆ ಮತ್ತು ನಡೆಯುತ್ತಿದೆ! ಎಷ್ಟು ಭಕ್ತ ಸಮಾಗಮ, ಎಷ್ಟು ಹೋಮ, ಎಷ್ಟೆಲ್ಲ ಕರ್ಮಕ್ರಿಯೆ! ಎಷ್ಟು ದಿನ ಇಲ್ಲಿರುತ್ತೀಯೋ ಅಷ್ಟು ದಿನ ಚೆನ್ನಾಗಿ ಜಪ ಧ್ಯಾನ ಮಾಡಿ, ಆನಂದಲಾಭ ಹೊಂದು. ಎಷ್ಟು ಧ್ಯಾನ ಜಪ ಮಾಡಿದೆರ ಅಷ್ಟೂ ಗೊತ್ತಾಗುತ್ತದೆ ನಿನಗೆ ಈ ಸ್ಥಾನದ ಮಹಾತ್ಮ್ಯೆ. ನೀನು ಗುರುಮಹಾರಾಜರ ಭಕ್ತ; ಅವರಲ್ಲಿ ಅನನ್ಯಭಕ್ತಿಯಿಂದ ಮೊರೆಯಿಡು; ನಿನಗೆ ಅನುಗ್ರಹ ಲಭಿಸುತ್ತದೆ; ನಿನ್ನ ಪ್ರಾಣಪೂರ್ಣವೂ ಆನಂದಮಯವಾಗುತ್ತದೆ.”

ಬ್ರಹ್ಮಚಾರಿ: “ಎಷ್ಟೊ ಎಷ್ಟೋ ಸಾರಿ ಪ್ರಶ್ನೆ ನಮಗೆ ಬರುತ್ತವೆ. ನಿಮ್ಮನ್ನು ಕೇಳಬೇಕು ಅಂತಾ ಮಾಡುತ್ತೇನೆ. ಕೆಲವು ಸಮಯ ಸಂದೇಹಗಳೂ ಮೂಡುತ್ತವೆ. ಆದರೆ ನಿಮ್ಮ ಸಾಮೀಪ್ಯಕ್ಕೆ ಬಂದಾಗ ಎಲ್ಲ ಮರೆತುಹೋಗುತ್ತವೆ. ನನಗೇನೂ ಸಂದೇಹಗಳೆ ಇಲ್ಲ ಎನ್ನುವಂತಾಗುತ್ತದೆ. ಎಲ್ಲ ಸಮಸ್ಯೆಗಳೂ ಪರಿಹಾರವಾದಂತೆ ಆಗುತ್ತವೆ!”

ಮಹಾಪುರುಷಜಿ: (ಸಸ್ನೇಹ) “ಏನು ಸಂದೇಹ ಮನಸ್ಸಿನಲ್ಲಿ ಮೂಡುತ್ತವೆ ಹೇಳಬಾರದೆ? ಏನು ಸಂದೇಹ ಬಂದರೂ ನನ್ನೊಡನೆ ಹೇಳಬಹುದು. ಆದರೆ ನೀನು ತಿಳಿದುಕೊಳ್ಳಬೇಕು. ಎಲ್ಲ ಸಂದೇಹಗಳಿಗೂ ನಿನ್ನ ಒಳಗಣಿಂದಲೆ ಸಮಾಧಾನ ದೊರೆಯುತ್ತದೆ. ಶ್ರೀಗುರು ನಮ್ಮೆಲ್ಲರಲ್ಲಿಯೂ ಇದ್ದಾನಲ್ಲವೆ; ಆತನೆ ಎಲ್ಲರ ಅಂತರಾತ್ಮ. ಎಲ್ಲ ಸಂದೇಹಗಳಿಗೂ ಆತನು ಒಳಗಿಂದಲೆ ಪರಿಹಾರ ನೀಡುತ್ತಾನೆ. ಆದರೆ ನಿನ್ನ ಸಂದೇಹಗಳನ್ನು ಆತನಿಗೆ ಅರಿಕೆ ಮಾಡಿಕೊಳ್ಳಬೇಕಾದುದು ಅವಶ್ಯಕ.”

ಹೀಗೆ ಹೇಳುತ್ತಾ ಈ ಅರ್ಥದ ಹಾಡನ್ನು ಹಾಡತೊಡಗಿದರು:

‘ನಿನ್ನಲ್ಲಿಯೆ ನೀನಿರು, ಓ ಮನವೇ!
ಏಕಿಂತಲೆಯುವೆ ಇಲ್ಲಿ ಅಲ್ಲಿ?
ಕಾಣು, ನಿನ್ನುರದಂತವುರದೊಳೆ ಇಹನು ದಿವ್ಯಗುರು;
ಕೊಂಬೆಕೊಂಬೆಗೆ ಕೋಟಿ ಬಯಕೆಯ ಕರೆವ ಕಲ್ಪತರು |’

“ಎಲ್ಲವೂ ನಿನ್ನೊಳಗೇ ಇದೆ. ಆದರೆ ಹುಡುಕಬೇಕಯ್ಯಾ, ಹುಡುಕಬೇಕು.”

ಸ್ವಲ್ಪ ಹೊತ್ತಾದ ಮೇಲೆ ಇನ್ನೊಬ್ಬ ಬ್ರಹ್ಮಚಾರಿ ಪ್ರಣಾಮ ಮಾಡಲು ಬಂದರು. ಆತನ ತಲೆಯಲ್ಲಿ ಶಿಖೆ ಅತ್ಯಲ್ಪ ಪ್ರಮಾಣಕ್ಕೆ ಇಳಿದುದನ್ನು ಕಂಡು ಸ್ವಾಮೀಜಿ ಇಂತೆಂದು ಮೃದುಭರ್ತ್ಸನೆ ಮಾಡಿದರು: “ಏಕೆ ನಿನ್ನ ಜುಟ್ಟು ಇಷ್ಟೊಂದು ಮೋಟು ಆಗಿಬಿಟ್ಟಿದೆಯಲ್ಲಾ! ನೀನಿನ್ನೂ ಬ್ರಹ್ಮಚಾರಿ; ಆಗಲೆ ಶಿಖೆಯನ್ನು ಇದೆಯೊ ಇಲ್ಲವೊ ಎನ್ನುವಂತೆ ಈ ಮಟ್ಟಕ್ಕೆ ಕತ್ತರಿಸಿಕೊಂಡಿದ್ದೀಯೆ ಏಕೆ? ಶಿಖೆ ತೆಗೆದು ಹಾಕಿಬಿಟ್ಟರೆ ಸಂನ್ಯಾಸಿ ಆಗಿಬಿಟ್ಟೆ ಎಂದು ತಿಳಿದುಕೊಂಡಿದ್ದೀಯೋ ಏನೊ? ಅಯ್ಯಾ, ಸಂನ್ಯಾಸ ಎಂಬುದು ಒಳಗಿನಿಂದ ಬೆಳೆಯುವ ವಸ್ತು ಕಣಯ್ಯ, ಹೊರಗಿನಿಂದ ಕಳೆಯುವ ಕೂದಲಲ್ಲ. ಜುಟ್ಟು ಕತ್ತರಿಸಿ ಕೊಟ್ಟು ಅದನ್ನು ಪಡೆಯಲಾರೆ.”

ಸ್ವಲ್ಪ ಹೊತ್ತಾದ ಮೇಲೆ ಸ್ವಾಮಿ ಯತೀಶ್ವರಾನಂದರು ಬಂದು ಪ್ರಣಾಮ ಸಲ್ಲಿಸಿ ನಿಂತುಕೊಂಡರು. ಕುಶಲ ಪ್ರಶ್ನಾದಿ ಆದ ಅನಂತರ ಮಹಾಪರುಷಜಿ ಕೇಳಿದರು: “ಏನು ಯತೀಶ್ವರ, ಮದರಾಸಿಗೆ ಹೋಗುವುದು ಯಾವಾಗ ಅಂತಾ ಗೊತ್ತು ಮಾಡಿದೆ?”

ಸ್ವಾಮಿ ಯತೀಶ್ವರಾನಂದರು: “ಒಂಭತ್ತನೆಯ ತಾರೀಖು ಹೊರಡೋಣ ಅಂತ ಮಾಡಿದ್ದೇನೆ. ಅದಕ್ಕೆ ಮೊದಲು ದಿನಗಳೂ ಒಳ್ಳೆಯದಿಲ್ಲ, ಆಶ್ಲೇಷ, ಮಾಘ, ತ್ರಹಸ್ಪರ್ಷ, ಗುರುವಾರದ ವಾರವೇಳಾ ಹೀಗೆಲ್ಲ ಬರುತ್ತದೆ. ಆದ್ದರಿಂದಲೇ ಒಂಭತ್ತನೆಯ ತಾರೀಖು ಹೋಗುವುದೆಂದು ನಿಶ್ಚಯಿಸಿದೆ.”

ಮಹಾಪುರುಷಜಿ: “ಒಳ್ಳೇದು. ಆದರೆ ನೀವೆಲ್ಲ ಕೆಲಸಗಾರರು. ಹೀಗೆ ಶುಭಾಶುಭ ದಿನಲಕ್ಷಣಗಳನ್ನು ಲೆಕ್ಕಾಹಾಕುತ್ತಾ ಕುಳಿತರೆ ಹೇಗಾಗುತ್ತದೆ? ಯಾರಿಗೆ ಕೆಲಸಕಾರ್ಯ ಏನೂ ಇಲ್ಲವೋ ಅಂಥವರು ಬೇಕಾದರೆ ಕೂರುವುದಕ್ಕೂ ಏಳುವುದಕ್ಕೂ ಪಂಚಾಂಗ ನೋಡುತ್ತಿರಬಹುದು. ಶ್ರೀ ಠಾಕೂರರೂ ಹೇಳುತ್ತಿದ್ದರು, ಯಾರು ಅದನ್ನೆಲ್ಲ ನಂಬುತ್ತಾರೊ ಅವರಿಗೆ ಮಾತ್ರ ಅದು ತಗಲುತ್ತದೆ. ಉಳಿದವರಿಗೆ ಏನೂ ಆಗುವುದಿಲ್ಲ. ಅಲ್ಲದೆ ನೀವೆಲ್ಲ ತಾಯಿಯ ಭಕ್ತರು; ತಾಯಿ ನಿಮ್ಮನ್ನು ಸರ್ವಾವಸ್ಥೆಗಳಲ್ಲಿಯೂ ರಕ್ಷಿಸುತ್ತಿದ್ದಾಳೆ, ಮುಂದೆಯೂ ರಕ್ಷಿಸುತ್ತಾಳೆ. ಭಗವಂತನ ನಾಮಸ್ಮರಣೆಮಾಡಿ ಪ್ರಯಾಣ ಹೊರಟರೆ ಯಾವ ವಿಪತ್ತೂ ಬರುವುದಿಲ್ಲ. ಆತನ ನಾಮ ಮಹಿಮೆಯಿಂದ ವಿಪತ್ತೂ ಸಂಪತ್ತಾಗಿ ಪರಿವರ್ತಿತವಾಗುತ್ತದೆ.”

ಹೀಗೆಂದು ಹಾಡತೊಡಗಿದರು:

ಯಾರು ಪಯಣ ಹೊರಡುವಂದು
ದುರ್ಗೆ ದುರ್ಗೆ ದುರ್ಗೆ ಎಂದು
ತಾಯ ನೆನೆವರೋ
ಅವರಿಗಿಹನು ಶಿವನೆ ರಕ್ಷ
ಶೂಲವಿಡಿದ ಶೂಲಪಾಣಿ
ತಾನೆ ಕಾವಲು |

ತುಲಸೀದಾಸನ ಒಂದು ಪದ್ಯವೂ ಅದನ್ನೇ ಹೇಳುತ್ತದೆ:

ಎಲ್ಲ ತಿಥಿ ಮೇಣ್ ಅತಿಥಿ, ಎಲ್ಲಾ ವಾರಾ ತಾರಾ
ದೇವನಡಿಯ ನೆನೆವ ಮನಕೆ ಭದ್ರವಯ್ಯ ಭಾರ |

“ಯಾವ ದಿನ ಹೃದಯ ತುಂಬಿ ಭಗವಂತನನ್ನು ನೆನೆಯುತ್ತೇವೆಯೊ ಆ ದಿನವೆ ಶುಭದಿನ.”

* * *