ಬೆಳಿಗ್ಗೆ ಸುಮಾರು ಏಳೂವರೆ ಗಂಟೆಯ ಸಮಯ. ಮಹಾಪುರುಷಜಿ ತುಸು ಮೈನೀವಿಕೊಳ್ಳುವುದಕ್ಕಾಗಿ ಹಾಸಿಗೆ ಮೇಲೆ ಮಲಗಲು ಸಿದ್ಧರಾಗುತ್ತಿದ್ದರು. ಆಗ ಸ್ವಾಮಿ ಶರ್ವಾನಂದರು ಬಂದು ಪ್ರಣಾಮ ಮಾಡಿ ಕೇಳಿದರು: “ನಿನ್ನೆ ರಾತ್ರಿ ಚೆನ್ನಾಗಿ ನಿದ್ದೆ ಬಂತೆ, ಮಹಾರಾಜ್?”

ಮಹಾರಾಜ್: “ಹೂಂ, ತಕ್ಕಮಟ್ಟಿಗೆ ನಿದ್ದೆ ಮಾಡಿದೆ.”

ಶರ್ವಾನಂದರು: “ಹೇಗಿದೆ ದೇಹಸ್ಥಿತಿ?”

ಮಹಾರಾಜ್: (ನಗುನಗುತ್ತಾ) “ಎಲ್ಲಿಯವರೆಗೆ ರಾಮನ ನಾಮ ಅಲ್ಲಿಯವರೆಗೆ ಎಲ್ಲಾ ಕ್ಷೇಮ ಭಗವಂತನ ನಾಮೋಚ್ಚಾರಣೆ ಮಾಡಲು ಸಾಧ್ಯವಾಗುವವರೆಗೆ ಎಲ್ಲವೂ ಕ್ಷೇಮ.

ಹಾಗೆಂದವರು ತುಸುಹೊತ್ತಿನ ಮೇಲೆ ಗಂಭೀರಭಾವದಿಂದ ಹೇಳಿದರು: “ಒಟ್ಟಿನಲ್ಲಿ ದೇಹಸ್ಥಿತಿ ಸರಿಯಾಗಿಲ್ಲ. ದಿನದಿನವೂ ಕ್ಷೀಣಿಸುತ್ತಿದೆ. ಅವನಿಚ್ಛೆ ಎಲ್ಲಿಯ ತನಕ ಇರಿಸುತ್ತದೆಯೊ ಅಲ್ಲಿಯ ತನಕ ಇರುತ್ತದೆ. ಅವನ ಕೆಲಸ ಆಗುವುದಿದ್ದರೆ ಈ ಒಡಕಲು ಮಡಕೆಯಿಂದಲೂ ಅದನ್ನು ಸಾಧಿಸುತ್ತಾನೆ, ಅವನ ಇಚ್ಛೆಗೆ ಎಲ್ಲವೂ ಸಂಭವ; ಅಲ್ಲದೆ ಹಾಗೆಯೇ ಆಗಿಸುತ್ತಲೂ ಇದ್ದಾನೆ. ಈಗಲೂ ಈ ಭಗ್ನ ಪಾತ್ರೆಯಿಂದಲೆ ಅವನ ಕೆಲಸ ಮಾಡಿಸುತ್ತಿದ್ದಾನೆ. ಕಾಣುವುದಿಲ್ಲೆ? ನನಗೆ ನಾಲ್ಕು ಮಾಡು ನಡೆಯಲು ಸಾಧ್ಯವಾಗುತ್ತಿಲ್ಲ. ಆದರೂ ಅವನ ಕೆಲಸ ಹೇಗೋ ನನ್ನ ಕೈಲಿ ಮಾಡಿಸುತ್ತಲೆ ಇದ್ದಾನೆ.”

ಶರ್ವಾನಂದರು: “ನಿಶ್ಚಯ, ಮಹಾರಾಜ್, ನಿಮ್ಮ ದೇಹ ಇರುವವರೆಗೂ ನಮಗೂ ಜಗತ್ತಿಗೂ ಕಲ್ಯಾಣಕರ. ನಿಜವಾದ ಕೆಲಸ ನಿಮ್ಮಂಥವರಿಂದಲೆ ಸಾಧ್ಯ. ನಿಮ್ಮ ಒಂದು ಮಾತಿನಿಂದ ಆಗುವ ಕೆಲಸ ನಮ್ಮಂಥವರ ನೂರು ಪ್ರಯತ್ನಗಳಿಂದಲೂ ಸಾಧ್ಯವಾಗುವುದಿಲ್ಲ.”

ಮಹಾರಾಜ್: “ಎಲ್ಲವೂ ಗುರುಮಹಾರಾಜರ ಇಚ್ಛೆ. ದೇವರು ಕೃಪೆಯಿಟ್ಟು ಯಾರಿಗೆ ಎಷ್ಟು ಕೆಲಸ ಮಾಡಲು ಬಿಡುತ್ತಾನೆಯೊ ಅಷ್ಟು ಸೇವೆ ಮಾತ್ರ ಅವನಿಂದ ಸಾಧ್ಯವಾಗುತ್ತದೆ. ಶ್ರೀಗುರು ತನ್ನ ಕೆಲಸಕ್ಕೆ ಯಂತ್ರ ರೂಪವಾಗಿ ಯಾರನ್ನು ಆರಿಸುತ್ತಾನೆಯೊ ಅವನೇ ಧನ್ಯ. ಶ್ರೀರಾಮಕೃಷ್ಣರು ಸ್ವಯಂ ಭಗವಾನ್: ಯುಗಧರ್ಮ ಸಂಸ್ಥಾಪನಾರ್ಥವಾಗಿ ಯುಗಾವತಾರನಾಗಿ ಬಂದಿದ್ದಾರೆ. ಅವರ ಕಾರ್ಯದಲ್ಲಿ ಸಹಾಯಕವಾಗಿ ಆಯ್ಕೆಗೊಳ್ಳುವುದೊಂದು ಸಾಮಾನ್ಯ ಸೌಭಾಗ್ಯವೇ? ಶ್ರೀ ಗುರುದೇವನ ಭಾವವೈಶಾಲ್ಯ ಸಾಧಾರಣ ಮಾನವನ ಮತಿಗೆ ನಿಲುಕುವುದಾದರೂ ಹೇಗೆ ಸಾಧ್ಯ? ಅವನೆ ಕೃಪೆಮಾಡಿ ನಮಗೆ ತೋರಿಸದಿದ್ದರೆ ಆ ನಾಲ್ಕೈದಡಿಯ ಕಿರುವೊಡಲಿನಲ್ಲಿ ಎಂತಹ ವಸ್ತು ಇದ್ದಿತೆಂದಾಗಲಿ, ಎಂತಹ ಮಹಾಶಕ್ತಿಗೆ ಅದು ಲೀಲಾರಂಗವಾಗಿದ್ದಿತೆಂದಾಗಲಿ ನಮಗೆ ಹೇಗೆ ಗೊತ್ತಾಗಲು ಸಾಧ್ಯ.”

ತುದಿಯ ಕಾಣದೆ ವೇದವೇದಾಂತಗಳು ತಡವುರಿತೆ ಕತ್ತಲಲ್ಲಿ,

ನೀ ನಿನ್ನನರಿವಂತೆ ಕೃಪೆಮಾಡದಿರೆ ನಿನ್ನನರಿವರಾರು?

“ಅವನೆ ಕೃಪೆಯಿಟ್ಟು ತಿಳಿಯುವಂತೆ ಮಾಡಿದರೆ ಎಲ್ಲವೂ ತಿಳಿಯುತ್ತದೆ; ಇಲ್ಲದೆ ಇದ್ದರೆ ಅವನನ್ನು ತಿಳಿಯುವರಾರು? ಹೊರನೋಟಕ್ಕೆ ಅವರು ಸಾಧಾರಣ ಮನುಷ್ಯನಂತೆ-ಊಟ ಮಾಡುತ್ತಿದ್ದರು, ನಿದ್ದೆ ಮಾಡುತ್ತಿದ್ದರು, ಅಲ್ಲಿಗಿಲ್ಲಿಗೆ ಹೋಗಿಬರುತ್ತಿದ್ದರು. ಆದರೆ ಅವರೊಳಗಡೆ ಎಂತಹ ಶಕ್ತಿಯಿತ್ತು? ಅದನ್ನು ಜನ ಹೇಗೆ ಅರಿತಾರು? ಅವರ ಅಪಾರ ಶಕ್ತಿಯ ಆಟ ಲೋಕಕ್ಕೆ ಕಾಲಾಂತರದಲ್ಲಿ ಗೊತ್ತಾಗುತ್ತಾ ಹೋಗುತ್ತದೆ. ಆಧ್ಯಾತ್ಮಿಕ ಜಗತ್ತಿನಲ್ಲಿ ಒಂದು ಮಹಾ ವಿಷ್ಲವವೇ ಉಂಟಾಗುತ್ತದೆ. ಶ್ರೀಗುರು ಕೃಪೆಯಿಟ್ಟು ನಮಗೆ ಎಷ್ಟೊಂದನ್ನು ತೋರಿಸುತ್ತಿದ್ದಾರೆ ಎಂದು ನಾನು ಯಾರಿಗೆ ಹೇಳಲಿ? ಯಾರಿಗೆ ಹೇಳಲಿ; ತಿಳಿದುಕೊಳ್ಳುವವರೂ ಯಾರಿದ್ದಾರೆ? ಅವರ ವಿಷಯವಾಗಿ ಇಲ್ಲಿ (ತಮ್ಮ ಎದೆಯ ಮೇಲೆ ಕೈಯಿಟ್ಟು ತೋರಿಸುತ್ತಾ) ಏನೇನು ನಡೆಯುತ್ತಿದೆ ಎಂಬುದನ್ನು ಯಾರಿಗೆ ವಿವರಿಸಲಿ? ಯಾರೂ ಇಲ್ಲ, ಅದನ್ನೆಲ್ಲ ತಿಳಿದುಕೊಳ್ಳಲಾರ. ಮಹಾರಾಜ್ (ಸ್ವಾಮಿ ಬ್ರಹ್ಮಾನಂದರು) ಇರುವ ತನಕ ನನ್ನ ಹೃದಯವನ್ನೆಲ್ಲ ಅವರೆದುರು ಬಿಚ್ಚಿ, ಮನಸ್ಸು ಹಗುರ ಮಾಡಿಕೊಳ್ಳಲು ಸಾಧ್ಯವಾಗುತ್ತಿತ್ತು. ಕೇವಲ ಅವರಿಗೆ ಹೇಳಲು ನನಗೆ, ಇಬ್ಬರಿಗೂ ಆನಂದವಾಗುತ್ತಿತ್ತು. ಅದೆಲ್ಲ ಅತಿ ಗುಹ್ಯ ವಿಷಯ; ಅದನ್ನು ಕುರಿತು ಏಕಾಂತವಾಗಿಯೇ ಮಾತಾಡಿಕೊಳ್ಳುತ್ತಿದ್ದೆವು. ಅವರೂ ಕೂಡ ಅನೇಕ ವೇಳೆ ಅವರ ರಹಸ್ಯಾನುಭವಗಳನ್ನು ಹೇಳುತ್ತಿದ್ದರು. ಈಗ ಅದೆಲ್ಲ ಸಾಧ್ಯವಲ್ಲ. ಈಗ ಆ ಎಲ್ಲ ಅನುಭೂತಿಯನ್ನೂ, ಆ ಎಲ್ಲ ವಿಚಾರಗಳನ್ನೂ ಹೃದಯದೊಳಗೇ ಇಟ್ಟು ಕೊಂಡಿರಬೇಕಾಗಿದೆ, ಹೇಳಬಹುದಾದವರು ಯಾರೂ ಸಿಗುವುದಿಲ್ಲವಾದ್ದರಿಂದ. ಎಲ್ಲವೂ ಅವನ ಇಚ್ಛೆ. ಆದರೆ ಆಂತರಿಕವಾಗಿ ಪ್ರಾರ್ಥಿಸುತ್ತೇನೆ: ಜಗತ್ತಿಗೆ ಕಲ್ಯಾಣವಾಗಲಿ, ನಿಮಗೆಲ್ಲ ಶ್ರೇಯಸ್ಸಾಗಲಿ, ನಿಮಗೆಲ್ಲ ಶಾಂತಿ ಲಭಿಸಲಿ.”

ಆಬ್ರಹ್ಮಸ್ತಂಭಪರ‍್ಯಂತಾ ಜಗದಂತರ್ವ್ಯವಸ್ಥಿತಾಃ
ಪ್ರಾಣಿನಃ ಕರ್ಮಜನಿತಸಂಸಾರವಶವರ್ತಿನಃ
ಯತಸ್ತನೋ ನ ತೇ ಧ್ಯಾನೇ ಧ್ಯಾನಿನಾಮುಪಕಾರಕಾಃ
ಅವಿದ್ಯಾಂತರಗತಾಃ ಸರ್ವೇ ತೇ ಹಿ ಸಂಸಾರ ಗೋಚರಾಃ  – ಭವಿಷ್ಯತ್ ಪುರಾಣ

“ಚತುರ್ಮುಖ ಬ್ರಹ್ಮನಿಂದ ಹಿಡಿದು ಸಣ್ಣ ಹುಲ್ಲೆಸಳಿನವರೆಗೆ ಲೋಕದೊಳಗಿರುವ ಎಲ್ಲವೂ ಕರ್ಮಜನಿಕ ಸಂಸಾರವಶರ್ತಿಗಳಾಗಿರುವುದರಿಂದ ಅವು ಯಾವುವೂ ಧ್ಯಾನಿಗಳಿಗೆ ಧ್ಯಾನ ಉಪಕಾರ ಮಾಡಲಾರವು; ಏಕೆಂದರೆ, ಅವೆಲ್ಲವೂ ಅವಿದ್ಯೆಯ ಒಳಗಿದ್ದು ಹುಟ್ಟು ಸಾವಿನ ಸಂಸಾರ ಭೂಮಿಕೆಯಲ್ಲಿಯೆ ಚಲಿಸುತ್ತಿರುತ್ತವೆ ಅಲ್ಲವೆ?”

* * *