ಭಕ್ತರೊಬ್ಬರು ವಕೀಲಿ ಮಾಡುತ್ತಿದ್ದರು, ಅವರನ್ನು ಕಂಡರೆ ಮಹಾ ಪುರುಷಜಿಗೆ ಬಹಳ ವಿಶ್ವಾಸ. ಅವರು ಬಂದು ಸ್ವಾಮಿಗಳಿಗೆ ಸಾಷ್ಟಾಂಗ ಪ್ರಣಾಮ ಮಾಡಿ, ಅವರ ಪಾದದ ಸಮೀಪ ಕುಳಿತುಕೊಂಡು ಕುಶಲಪ್ರಶ್ನಾದಿಗಳಲ್ಲಿ ತೊಡಗಿದರು.

ಭಕ್ತ: “ಮಹಾರಾಜ್, ಹೃದಯದಲ್ಲಿ ಶಾಂತಿಯೆ ಇಲ್ಲ. ಯಾವಾಗಲೂ ಏನೋ ಅಸ್ಥಿರತೆ.”

ಸ್ವಾಮೀಜಿ: “ಅವನ ಹೆಸರನ್ನು ಜಪ ಮಾಡುತ್ತಾ ಹೋಗು. ಕ್ರಮೇಣ ಶಾಂತಿಯುಂಟಾಗುತ್ತೆ. ಅದು ಸಾಧ್ಯವಾಗದಿದ್ದರೆ, ಬೆಳಗಿನಲ್ಲಿ ಸ್ವಲ್ಪ ಹೊತ್ತು ನಿಯಮಾಸನಸ್ಥನಾಗು. ಕ್ರಮವಾಗಿ ಧ್ಯಾನಮಾಡು.”

ಭಕ್ತ: “ಅದನ್ನೇನೊ ಮಾಡಿಯೆ ಮಾಡುತ್ತಿದ್ದೇನೆ. ಆದರೆ ಅದರಿಂದ ಪ್ರಾಣದ ಆಶೆಗೆ ತೃಪ್ತಿಯೊದಗುತ್ತಿಲ್ಲ. ಇನ್ನೂ ಹೆಚ್ಚು ಮಾಡಬೇಕೆಂದೇನೊ ಆಶೆ; ಆದರೆ ಸಮಯ ಒದಗಿಸಿಕೊಳ್ಳುವುದೆ ಕಷ್ಟವಾಗಿದೆ. ಬೆಳಿಗ್ಗೆ ಸಂಜೆ ಜಪ ಧ್ಯಾನದಲ್ಲಿ ಕುಳಿತಿರುವಾಗಲೇನೊ ತುಂಬ ಆನಂದವಾಗುತ್ತೆ. ಎಷ್ಟು ಆನಂದವಾಗುತ್ತೆ ಎಂದರೆ ಆಸನ ಬಿಟ್ಟೇಳಲೂ ಮನಸ್ಸಾಗುವುದಿಲ್ಲ. ಆದರೆ ಏನು ಮಾಡೋದು? ಕೆಲಸದ ಎಳೆತ ಹಿಡಿದೆಬ್ಬಿಸುತ್ತದೆ.”

ಸ್ವಾಮೀಜಿ: “ಅದಕ್ಕೇನು ಮಾಡೊದು ಹೇಳು. ನಿನ್ನ ಕೈಗೆ ಮೀರಿದ್ದು. ಆದರೆ ಮನದಲ್ಲಿಯೆ ಸ್ಮರಣಮನನಗಳನ್ನು ಅಭ್ಯಾಸಮಾಡು. ಅವನು ಅಂತರ‍್ಯಾಮಿ. ಅವನಿಗೆ ನಿನ್ನ ಹೃದಯದ ವ್ಯಾಕುಲತೆ ಚೆನ್ನಾಗಿ ಗೊತ್ತಾಗುತ್ತದೆ. ಅವನು ನಿನಗೆ ಕೃಪೆದೋರಿದ್ದಾನೆ; ಇನ್ನೂ ಹೆಚ್ಚಾಗಿ ತೋರಿಯೂ ತೋರುತ್ತಾನೆ. ನಿನ್ನ ಪ್ರಾಣದ ಅತೃಪ್ತ ವಾಸನೆಯನ್ನು ಪೂರ್ಣಗೊಳಿಸಿಯೆಗೊಳಿಸುತ್ತಾನೆ. ಅವನು ವಾಂಛಾ ಕಲ್ಪತರು. ತನ್ನ ಬಳಿ ಯಾರು ಏನನ್ನು ಬೇಡಿದರೆ ಅದನ್ನು ಅವರಿಗೆ ಕೊಡುತ್ತಾನೆ. ನೀನು ಪ್ರಾಣಭರನಾಗಿ ಅವನ ನಾಮಜಪ ಮಾಡು; ಅವನನ್ನು ಧ್ಯಾನಮಾಡು; ಸಮಯ ಸಿಕ್ಕಿದಾಗಲೆಲ್ಲ ಸ್ಮರಣ ಮನನ ಮಾಡು. ಅವನ ಸ್ಮರಣ ಮನನಗಳಿಗೆ ಸಮಯ ಅಸಮಯ, ಕಾಲ, ಅಕಾಲ, ಸ್ಥಾನ ಅಸ್ಥಾನ ಯಾವುದೂ ಇಲ್ಲ. ತುಂಬ ವ್ಯಾಕುಲಭಾರ ಹೃದಯದಿಂದ ಪ್ರಾರ್ಥನೆ ಮಡು, ‘ಪ್ರಭೂ, ದಯೆ ತೋರು. ನೀನು ವಿದೇಶಗಳಲ್ಲಿರುವ ಎಷ್ಟೊಂದು ಜನರಿಗೆ ಕೃಪೆದೋರಿದ್ದೀಯ! ನನಗೆ ಏಕೆ ತೋರುವುದಿಲ್ಲ? ನಿನ್ನ ಮಕ್ಕಳಲ್ಲಿಯೆ ಒಬ್ಬರು (ತಮ್ಮನ್ನೇ ನಿರ್ದೇಶಿಸುತ್ತಾ) ನಿನ್ನನ್ನು ಕರೆಯುವುದನ್ನು ನನಗೆ ಕಲಿಸಿಕೊಟ್ಟಿದ್ದಾರೆ. ನಾನೂ ನಿನ್ನ ಕೃಪೆಗಾಗಿ ಅವರು ಕಲಿಸಿಕೊಟ್ಟಂತೆ ನಿನ್ನನ್ನು ಕರೆಯುತ್ತಿದ್ದೇನೆ. ನಿನ್ನನ್ನು ಈ ರೀತಿ ಕರೆಯುವುದಕ್ಕೆ ಹೇಳಿಕೊಟ್ಟವನು ನಿನ್ನ ಪುತ್ರನೇ’ ಹೀಗೆಂದು ಪ್ರಾರ್ಥಿಸು. ನಿಶ್ಚಯವಾಗಿಯೂ ಕೃಪೆದೋರುತ್ತಾನೆ. ದೇಹ ಮನಸ್ಸು ಪ್ರಾಣ ಎಲ್ಲವನ್ನೂ ಅವನ ಚರಣತಲಕ್ಕೆ ಸಮರ್ಪಿಸಿರುವ ಅವನ ಚರಣದಾಸರು ನಾವು. ನಾವು ಹೇಳುತ್ತೇವೆ, ಅವನು ನಿನಗೆ ಕೃಪೆದೋರುತ್ತಾನೆ.”

ಭಕ್ತ: (ಸಾಶ್ರುನಯನನಾಗಿ) “ನೀವು ಕೃಪೆ ಮಾಡಬೇಕು; ನೀವು ಠಾಕೂರರಿಗೆ ಸ್ವಲ್ಪ ಹೇಳಬೇಕು; ಆವಾಗ ಎಲ್ಲ ಸರಿಹೋಗುತ್ತೆ.”

ಸ್ವಾಮೀಜಿ: “ಅಯ್ಯಾ, ನಮ್ಮ ಆಶೀರ್ವಾದ ಇದ್ದೇ ಇದೆ. ಇಲ್ಲದಿದ್ದರೆ ಇಷ್ಟೊಂದೇಕೆ ನಿನಗೆ ಹೇಳಬೇಕಾಗಿತ್ತು? ಶ್ರೀಗುರುಮಹಾರಾಜರು ಜೀವರ ಉದ್ದಾರಕ್ಕಾಗಿಯೆ ಬಂದರು. ನಾವು ಅವರ ದಾಸರು. ನಮಗೂ ಆ ಆಶೆಯ ಹೊರತು ಬೇರಾವುದೂ ಕಾಮನೆ ಇಲ್ಲ. ನಾವೇನು ಸಾಧನ ಭಜನ ಮಾಡಲಿ ಅದೆಲ್ಲ ಲೋಕದ ಕಲ್ಯಾಣಕ್ಕಾಗಿಯೆ ಮಾಡುತ್ತೇವೆ. ಹಾಗಲ್ಲದೆ ನಮಗೇ ಸ್ವಂತಕ್ಕಾಗಿ ಏನು ಬೇಕಾಗಿದೆ? ಅವನು ನಮಗೆ ಎಲ್ಲವನ್ನೂ ಇತ್ತು ನಮ್ಮನ್ನು ಸರ್ವವಿಧದಿಂದಲೂ ಪೂರ್ಣರನ್ನಾಗಿ ಮಾಡಿದ್ದಾನೆ. ಯಾವುದರಲ್ಲಿಯೂ ನಮ್ಮನ್ನು ಅಪೂರ್ಣವಾಗಿಟ್ಟಲ್ಲ. ಆದರೂ ಜೀವರ ಕಲ್ಯಾಣಾರ್ಥವಾಗಿ ನಮ್ಮಿಂದ ಭಜನೆ ಮಾಡಿಸುತ್ತಿದ್ದಾನೆ.

ಭಕ್ತ: “ನಾನು ಹೇಗೆ ಧ್ಯಾನ ಮಾಡಲಿ? ಶ್ರೀಗುರುವಿನ ಪೂರ್ಣರೂಪವನ್ನು ಕಣ್ಣಿಗೆ ಕಟ್ಟಿದ ಹಾಗೆ ಚಿತ್ರಿಸಿಕೊಳ್ಳುವುದು ನನಗೆ ಕಷ್ಟವಾಗುತ್ತದೆ.”

ಸ್ವಾಮೀಜಿ: “ಅದಾಗದಿದ್ದರೆ ಠಾಕೂರರ ಒಂದೊಂದು ಅಂಗವನ್ನು ಬೇರೆ ಬೇರೆಯಾಗಿ ಕುರಿತು ಧ್ಯಾನಮಾಡು. ಮೊದಲು ಶ್ರೀಚರಣ ಕುರಿತುಧ್ಯಾನ ಮಾಡು ತರುವಾಯ ಕ್ರಮಕ್ರಮವಾಗಿ ಅಂಗಪ್ರತ್ಯಂಗ. ಆಮೇಲೆ ಠಾಕೂರರ ಸಮಸ್ತ ಮೂರ್ತಿಯನ್ನೂ ಒಮ್ಮೆಯೆ ಧ್ಯಾನಿಸಲು ಪ್ರಯತ್ನಮಾಡು. ಹಾಗೆ ಮಾಡುವುದೇ ಲೇಸು.”

ಭಕ್ತ: “ತಾಯಿಯ ಮೂರ್ತಿ ಧ್ಯಾನಮಾಡಲು ನನಗೆ ಸಾಧ್ಯವಾಗುವುದಿಲ್ಲ. ನನಗೆ ಭಯವಾಗುತ್ತದೆ. ಠಾಕೂರರ ಮೂರ್ತಿಧ್ಯಾನ ಸ್ವಲ್ಪಮಟ್ಟಿಗೆ ಮಾಡಬಲ್ಲೆ.”

ಸ್ವಾಮೀಜಿ: “ಒಳ್ಳೆಯದು; ಠಾಕೂರರ ಮೂರ್ತಿಧ್ಯಾನ ಮಾಡಬಲ್ಲೆಯಷ್ಟೆ? ಸಾಕೇ ಸಾಕು. ತಾಯಿಯ ಮೂರ್ತಿಧ್ಯಾನವನ್ನು ಪ್ರತ್ಯೇಕವಾಗಿ ಮಾಡದಿದ್ದರೂ ಚಿಂತೆಯಿಲ್ಲ. ಏಕೆಂದರೆ ಎಲ್ಲವೂ ಠಾಕೂರರ ಒಳಗೆ ಇದೆ, ತಾಯಿಯೂ ಇದ್ದಾಳೆ. ಠಾಕೂರರು ಸಮಸ್ತ ದೇವದೇವಿಯರ ಭಾವಘನ ಮೂರ್ತಿ. ಹಿಂದೆ ಆವಿರ್ಭೂತವಾದ ದೇವದೇವಿಯರೆಲ್ಲರೂ, ಮುಂದೆ ಆವಿರ್ಭೂತರಾಗುವ ದೇವ ದೇವಿಯರೂ ಎಲ್ಲರೂ ಠಾಕೂರರ ಒಳಗೇ ಇದ್ದಾರೆ. ಆದ್ದರಿಂದಲೆ ಠಾಕೂರರನ್ನು ಧ್ಯಾನಿಸಿದರೆ ಸರ್ವ ದೇವದೇವಿಯರನ್ನೂ ಧ್ಯಾನಿಸಿದಂತೆಯೇ ಆಗುತ್ತದೆ. ಆದರೆ ಆ ಜ್ಞಾನ ಮಾತ್ರ ಒಳಗಡೆ ಅತ್ಯಂತ ಆವಶ್ಯಕವಾಗಿ ಇರಬೇಕು.”

ಭಕ್ತ: ಮಹಾರಾಜ್, ಜಪ ಹೇಗೆ ಮಾಡಬೇಕು ಅಪ್ಪಣೆ ಕೊಡಿಸಿ.”

ಸ್ವಾಮೀಜಿ: “ಜಪಮಾಡುವ ಅತ್ಯುತ್ತಮ ವಿಧಾನ ಎಂದರೆ ಮನಸ್ಸಿನಲ್ಲಿಯೆ ದೇವರ ಹೆಸರನ್ನು ಉಚ್ಚರಿಸುವುದು. ಮನೋಜಪವೆ ಸರ್ವಶ್ರೇಷ್ಠ. ಮಾಲೆ ಹಿಡಿದು ಜಪಮಾಡುವುದು ಒಳ್ಳೆಯದು; ಕೈಬೆರಳು ಎಣಿಸಿ ಜಪಮಾಡುವುದೂ ಅದಕ್ಕಿಂತಲೂ ಒಳ್ಳೆಯದು. ಎಲ್ಲಕ್ಕಿಂತಲೂ ಮನಸ್ಸಿನಲ್ಲಿಯೆ ಜಪಮಾಡುವುದು ಸರ್ವಶ್ರೇಷ್ಠ. ಮನಸ್ಸಿನಲ್ಲಿಯೇ ಈಶ್ವರನಾಮ ಜಪಮಾಡುವುದು ಸವೋತ್ಕೃಷ್ಟ. ಜಪಮಣಿ ಎಣಿಸಿ ಅಥವಾ ಬೆರಳ ತುದಿ ಎಣಿಸಿ ಜಪ ಮಾಡುವಾಗ ಮನಸ್ಸಿನ ಗಮನ ಲೆಕ್ಕದ ಕಡೆಗೆ ಹೋಗುವುದು ಅನಿವಾರ್ಯ. ಇದರಿಂದ ಪೂರ್ಣಮನಸ್ಸನ್ನು ಜಪದ ಕಡೆಗೆ ಕೊಡಲಾಗುವುದಿಲ್ಲ. ಏಕಾಗ್ರತೆಗೆ ಸ್ವಲ್ಪಮಟ್ಟಿಗೆ ವ್ಯಾಘಾತ ಉಂಟಾಗುತ್ತದೆ. ಹೃತ್ಪೂರ್ವಕವಾದ ಭಕ್ತಿಪ್ರೇಮಗಳಿಂದ ಜಪ ಮಾಡುವುದಾದರೆ ಲೆಕ್ಕ ಏಕೆ ಬೇಕು? ಅದೇನು ಸಂತೆಯಲ್ಲಿ ವ್ಯಾಪಾರ ಮಾಡಿದ ಹಾಗೆಯೇ? ಎಷ್ಟು ದುಡ್ಡಿಗೆ ಇಷ್ಟು ದಿನಸಿ ಎಂದು? ಭಗವಂತ ಭಾವ ನೋಡುತ್ತಾನೆ. ಅವನು ನೋಡುವುದು ಹೃದಯದ ಅಭೀಪ್ಸೆಯನ್ನು. ಭಕ್ತಿ ಒಂದಿದ್ದರಾಯಿತು, ಉಳಿದುದಾವುದನ್ನೂ ಲೆಕ್ಕಿಸಬೇಕಾಗಿಲ್ಲ. ಪ್ರೇಮಭರದಿಂದ ಅವನ ನಾಮವನ್ನು ಒಮ್ಮೆ ಜಪಿಸಿದರೂ ಸಾಕು ಮನಸ್ಸು ಪ್ರಾಣ ಆನಂದಪೂರ್ಣವಾಗುತ್ತವೆ. ಪ್ರೇಮ ಸಹಿತವಾಗಿ ಒಂದೇ ಒಂದು ಸಾರಿ ಅವನ ಹೆಸರು ಹೇಳಿದರೂ ಸಾಕು, ಲಕ್ಷ ಲಕ್ಷ ಬಾಯಿ ಜಪಕ್ಕಿಂತಲೂ ಹೆಚ್ಚಿನ ಪರಿಣಾಮವಾಗುತ್ತದೆ. ನೀನಿಂದು ದೇವಮಂದಿರಕ್ಕೆ ಹೋಗಿದ್ದೆಯಾ?”

ಭಕ್ತ: “ಇಲ್ಲ. ಮಹಾರಾಜ್, ಈಗ ಹೋಗುತ್ತೇನೆ.”

ಸ್ವಾಮೀಜಿ: “ಅವಶ್ಯ ಹೋಗಬೇಕು. ಅವನ ಸ್ಥಾನಕ್ಕೆ ಬಂದಿದ್ದೀಯ; ಮೊದಲು ಅವನ ದರ್ಶನ ತೆಗೆದುಕೊಳ್ಳಬೇಕು. ಹೋಗು ಮೊದಲು ದೇವರ ಮನೆಗೆ ಹೋಗು. ಸಾನ್ನಿಧ್ಯದಲ್ಲಿ ಕುಳಿತು ಸ್ವಲ್ಪ ಜಪಮಾಡು, ಆನಂದವಾಗುತ್ತದೆ. ನಮ್ಮ ಶ್ರೀಗುರು ತುಂಬ ಜೀವಂತ ದೇವರು. ಇಲ್ಲಿ ಆತನ ವಿಶೇಷ ಪ್ರಕಾಶ. ನಿಜ ಆತನು ಎಲ್ಲೆಲ್ಲಿಯೂ ಇದ್ದಾನೆ; ಆದರೆ ಇಲ್ಲಿಯೂ ಆತನ ಭಕ್ತರ ಹೃದಯಗಳಲ್ಲಿಯೂ ಆತನ ವಿಶೇಷ ಪ್ರಕಾಶ, ಕೊಂಚ ಪ್ರಸಾದ ತೆಗೆದುಕೊಳ್ಳುವುದಕ್ಕೆ ಮರೆಯಬೇಡ.”

* * *

ಯೋನಿಮನ್ಯೇ ಪ್ರಪದ್ಯಂತೇ ಶರೀರತ್ವಾಯ ದೇಹಿನಃ
ಸ್ಥಾಣುಮನ್ಯೇsನುಸಂಯನ್ತಿ ಯಥಾ ಕರ್ಮ ಯಥಾ ಶ್ರುತಃ  – ಕಠೋಪನಿಷತ್ತು

“ಮರಣಾನಂತರ ಕೆಲವು ಚೇತನಗಳು ಶರೀರಧಾರಣೆಗಾಗಿ ಬೇರೆ ಬೇರೆಯೆ ಗರ್ಭಗಳನ್ನು ಸೇರುತ್ತವೆ; ಮತ್ತೆ ಕೆಲವು ಸ್ಥಾವರಗಳನ್ನು ಆಶ್ರಯಿಸುತ್ತವೆ; ಅವರವರ ಕರ್ಮ ಮತ್ತು ಜ್ಞಾನಾನುಸಾರವಾಗಿ.”