ಸಂಭಾಷಣೆ ತೀರ್ಥಯಾತ್ರಾದಿಗಳ ವಿಚಾರವಾಗಿ ತೊಡಗಿತ್ತು. ಸಂನ್ಯಾಸಿಯೊಬ್ಬರು ಬದರೀನಾರಾಯಣ ಮೊದಲಾದ ಪವಿತ್ರಕ್ಷೇತ್ರಗಳಲ್ಲಿ ಪರ್ಯಟನ ಮಾಡಿ ಆಗತಾನೆ ಹಿಂತಿರುಗಿ ಬಂದಿದ್ದರು. ಆ ಸಂಬಂಧವಾಗಿ ಮಠದ ಕೆಲವು ಸಂನ್ಯಾಸಿಗಳಲ್ಲಿ ಪಡೆಮಾತು ನಡೆಯುತ್ತಿತ್ತು.

ಮಹಾಪುರುಷಜಿ: “ಅದೇನು ದೊಡ್ಡ ಕಷ್ಟ. ತೀರ್ಥಯಾತ್ರೆ? ಸ್ವಲ್ಪ ಕಷ್ಟಸಹಿಷ್ಣುತೆ ಬೇಕಾಗುತ್ತೆ ಅಷ್ಟೆ. ಆದರೆ ಭಗವಂತನಲ್ಲಿ ಭಕ್ತಿ ವಿಶ್ವಾಸಗಳನ್ನು ಸಂಪಾದಿಸುವುದೇ ಅತಿ ದುರ್ಲಭವಾದ್ದು. ನೀವು ಎಷ್ಟೋ ಸಂನ್ಯಾಸಿಗಳನ್ನು ನೋಡುತ್ತೀರಿ. ಅವರೆಲ್ಲ ನಾಲ್ಕು ಧಾಮಗಳಿಗೂ (ಭರತಖಂಡದ ಚತುರ್ದಿಕ್ಕುಗಳಲ್ಲಿರುವ ತೀರ್ಥಕ್ಷೇತ್ರಗಳು) ಹೋಗಿ ಬಂದಿರುತ್ತಾರೆ. ಇನ್ನೂ ಅನೇಕ ಪವಿತ್ರ ಸ್ಥಳಗಳಿಗೂ. ಆದರೆ ಅವರಲ್ಲಿ ಭಗವದನುರಾಗಿಗಳೆಷ್ಟಿದ್ದಾರೆ? ವಿವೇಕ ವೈರಾಗ್ಯ ಸಾಧನೆ ಮಾಡಿದವರು ಎಷ್ಟಿದ್ದಾರೆ? ಅಂತಹ ಸತ್ ಸಾಧುಗಳೆ ಇಲ್ಲ ಎಂದಲ್ಲ, ಆದರೆ ಅಂಥವರ ಸಂಖ್ಯೆ ಬಹಳ ಕಡಿಮೆ.”

“ಆಧ್ಯಾತ್ಮ ಭೂಮಿಕೆಯಲ್ಲಿ ಮುಂದುವರಿಯುವುದು ತುಂಬ ಕಷ್ಟ ಮೊದಲನೆಯದಾಗಿ, ಯಾರ ಜೀವನದಲ್ಲಿ ಒಂದು ಲಿವಿಂಗ್ ಐಡಿಯಲ್ (ಜೀವಂತ ಆದರ್ಶ) ಇರುವುದಿಲ್ಲವೊ ಅವರ ಪಕ್ಷಕ್ಕೆ ಅದೊಂದು ಮಹಾ ದೂರೂಹ್ಯ ವ್ಯಾಪಾರ. ಸುಕೃತ ವಶದಿಂದ ಯಾರಾದರೂ ಒಬ್ಬ ಐಡಿಯಲ್ ಪರ್ಸನಾಲಿಟಿಯ (ಆದರ್ಶ ಮಾನವನ) ಟಚ್ (ಸಂಸ್ಪರ್ಶ) ದೊರೆತರೆ ಮುನ್ನಡೆ ತುಸು ಮಟ್ಟಿಗೆ ಸುಲಭ ಸಾಧ್ಯವಾಗುತ್ತದೆ; ಇಲ್ಲದೆ ಹೋದರೆ ಆಧ್ಯಾತ್ಮಿಕ ಪ್ರಗತಿ ಅತಿ ದುಸ್ಸಾಧ್ಯವಾಗಿ ಬಿಡುತ್ತದೆ. ಒಮ್ಮೆ ಜೀವನದ ಆದರ್ಶ ಸ್ಪಷ್ಟವಾಯಿತೆಂದರೆ ಭಗವಂತನ ಕೃಪೆಯಿಂದ ಮೆಲ್ಲಮೆಲ್ಲಗೆ ಅತ್ತಕಡೆಗೆ ಮುಂಬರಿಯಬಹುದು. ಆದರೆ ಮಾತ್ರ, ಅವನ ಕೃಪೆಯ ಮೇಲೆಯ ಸರ್ವವೂ ನಿಲ್ಲುತ್ತದೆ.”

“ನಮಗೆ ಅಂತಹ ಒಬ್ಬ ಆದರ್ಶಪುರುಷನಾದ ಮಹಾಮಾನವನ ಸಾನಿಧ್ಯ ಸಂಸ್ಪರ್ಶಗಳು ದೊರೆತದ್ದು ನಮ್ಮ ಅದೃಷ್ಟ. ಭಗವತ್ ಸಾಕ್ಷಾತ್ಕಾರ ಪಡೆದ ಮನುಷ್ಯ ಏನಾಗುತ್ತಾನೆ ಎಂಬುದೆಲ್ಲವನ್ನೂ ನಾವು ನಮ್ಮ ಜೀವನದಲ್ಲಿ ಕಣ್ಣಾರೆ ಕಂಡಿದ್ದೇವೆ. ಆತನು ಯುಗಾವತಾರನಾಗಿ ಬಂದನು, ಮತ್ತು ನಮ್ಮನ್ನೂ ಕೃಪೆಯಿಟ್ಟು ತನ್ನ ಸಂಗಿಗಳನ್ನಾಗಿ ಕರೆತಂದನು. ಅದೇನು ಸಾಮಾನ್ಯ ಸೌಭಾಗ್ಯ ವಿಷಯವೆ? ನಾವು ಸ್ವಯಂ ಭಗವಂತನ ಸಾಕ್ಷಾತ್ ಸಂಸ್ಪರ್ಶದಲ್ಲಿಯೆ ಬಂದೆವು. ನಾವು ಆತನನ್ನು ಕಂಡೆವು; ಆತನ ದರ್ಶನದಲ್ಲಿಯೆ ನಮ್ಮ ಜೀವನವನ್ನು ಕಂಡರಿಸಿದೆವು. ನಮ್ಮ ಭಾಗಕ್ಕೆ ಭಗವತ್ ಸಾಕ್ಷಾತ್ಕಾರದ ದಾರಿ, ಅತ್ಯಂತ ಸುಲಭವೂ ಸುಗಮವೂ ಆಗಿ ಮಾಡಲ್ಪಟ್ಟಿತು. ನಾವು ಧನ್ಯ! ಆದರೆ ಯಾರು ಶ್ರೀರಾಮಕೃಷ್ಣರನ್ನು ನೋಡಿಲ್ಲವೋ, ಯಾರು ಅವರ ಪೂತಸಂಗಲಾಭ ಪಡೆಯಲಿಲ್ಲವೋ, ಅಂಥವರು ನಮ್ಮನ್ನು ನೋಡುತ್ತಿದ್ದಾರೆ; ನಮ್ಮ ಮುಖಾಂತರ ಶ್ರೀರಾಮಕೃಷ್ಣರನ್ನು ಅರಿಯಲೂ ಪಡೆಯಲೂ ಪ್ರಯತ್ನಿಸುತ್ತಿದ್ದಾರೆ. ಅಂಥವರೂ ಕೂಡ ಈ ಲೋಕದಲ್ಲಿರುವ ಇತರ ಕೋಟಿ ಕೋಟಿ ನರನಾರಿಯರಿಗಿಂತ ಎಷ್ಟೋ ಭಾಗ್ಯವಂತರಾಗಿದ್ದಾರೆ. ಏನು ಹೇಳ್ತಿಯ! ಸ್ವಯಂ ಭಗವಂತನೇ ನರದೇಹ ಧಾರಣೆಮಾಡಿ ಬಂದನು- ಅದೂ ನಿನ್ನೆ ಮೊನ್ನೆ! ನಮ್ಮ ಕಣ್ಣು ಮುಂದೆಯೆ ಸಮಸ್ತ ಲೀಲಾನಾಟಕವೂ ನಡೆಯಿತಲ್ಲ. ಎಂತಹ ಕಠೋರ ಸಾಧನೆಯ ಅಗ್ನಿಯನ್ನೇ ಆತ ಪ್ರಜ್ವಲಿಸುವಂತೆ ಮಾಡಿದ! ಆ ಬೆಂಕಿಯ ಕಾವನ್ನು ಈಗಲೂ ಜನ ಅನುಭವಿಸಿ ನೋಡಬಹುದು, ಇದೇನು ಅಲ್ಪಯುಗವೇ? ಇದು ನಿಜವಾಗಿಯೂ ಮಹಾ ಪುಣ್ಯಯುಗ! ಈ ಯುಗದಲ್ಲಿ ಯಾರು ಶ್ರೀರಾಮಕೃಷ್ಣರ ನಾಮಗ್ರಹಣ ಮಾಡಿ, ಆತನ ಜೀವನವನ್ನೆ ಆದರ್ಶವಾಗಿಟ್ಟುಕೊಂಡು, ಭಗವಲ್ಲಾಭದ ಮಾರ್ಗದಲ್ಲಿ ಮುಂದುವರಿಯುತ್ತಾರೊ ಅಂತಹವರಿಗೆ ಎಲ್ಲ ಸುಲಭ ಸುಗಮವಾಗುತ್ತದೆ. ತಮ್ಮ ಬದುಕನ್ನು ಶ್ರೀರಾಮಕೃಷ್ಣರ ಬದುಕಿಗೆ ಅನುಸಾರಿಯಾಗಿ ಮಾಡಿಕೊಂಡರೆ, ತಮ್ಮ ಬಾಳನ್ನು ಅವರ ಬಾಳಿನ ಅಚ್ಚಿನಲ್ಲಿಯೆ ಕರುವಿಟ್ಟುಕೊಂಡರೆ ಈಶ್ವರ ಸಾಕ್ಷಾತ್ಕಾರ ಬಹಳ ಸುಲಭವಾಗುತ್ತದೆ. ಆದರೆ ಅಂತಹ ಜನ ಎಲ್ಲಿ ಸಿಗುತ್ತಾರೆ?”

ಸಂನ್ಯಾಸಿ: “ಮಹಾರಾಜ್, ಈಶ್ವರ ಸಾಕ್ಷಾತ್ಕಾರ ಮಾಡುವುದು ಸುಲಭವೆ?”

ಮಹಾಪುರುಷಜಿ: “ಸುಲಭವಲ್ಲ” ಎಂದವರು ಹಾಡಲು ತೊಡಗಿದರು:

ಜಗದ ಗಡಿಬಿಡಿಯ ಸಂತೆಯಲಿ, ಓ ತಾಯಿ,
ಗಾಳಿಪಟಗಳನಾಡುತಿರುವೆ.
ಆಶೆಯೆಂಬುದು ಗಾಳಿ ಬೀಸಲವು ಹಾರುವುವು ಮೇಲೆ ಮೇಲೆ,
ಬಿಗಿದು ಹಿಡಿದಿರಲು ನಿನ್ನ ಮಾಯಾ ಸೂತ್ರಲೀಲೆ.
ಹಾರುವಾ ನೂರ್ ಕೋಟಿ ಗಾಳಿಪಟಗಳಲಿ
ಹೆಚ್ಚೆಂದರೊಂದೆರಡೆ ಬಿಡುಗಡೆಯ ಪಡೆಯುವುವು ದಾರ ಕಡಿದು;
ಆ ಮುಕ್ತಪಟಗಳನು ಕಂಡು ಕೇಕೆ ಹಾಕುತ ನಗುವೆ
ಹಿಗ್ಗಿ ಕುಣಿದು ನೀನು ಓ ತಾಯಿ |

* * *

ಮುನುಷ್ಯಾಣಾಂ ಸಹಸ್ರೇಷು ಕಶ್ಚಿದು ಯತತಿ ಸಿದ್ಧಯೇ |
ಯತತಾಮಪಿ ಸಿದ್ಧಾನಾಂ ಕಶ್ಚಿನ್ ಮಾಂ ವೇತ್ತಿ ತತ್ತ್ವತಃ ||

“ಸಹಸ್ರ ಸಹಸ್ರ ಮನುಷ್ಯರಲ್ಲಿ ಎಲ್ಲಿಯೊ ಒಬ್ಬಿಬ್ಬರು ಸಿದ್ಧಿಗಾಗಿ ಯತ್ನಿಸುತ್ತಾರೆ. ಹಾಗೆ ಯತ್ನಿಸುವ ಸಾಧಕರಲ್ಲಿ ಒಂದೊ ಅರ್ಧವೊ ನನ್ನನ್ನು ತತ್ತ್ವತಃ ಅರಿಯಲು ಸಮರ್ಥರಾಗುತ್ತಾರೆ.”

“ಈಶ್ವರ ಸಾಕ್ಷಾತ್ಕಾರ ಮಾಡುವುದು ತುಂಬ ಕಠಿನ ವ್ಯಾಪಾರ. ಅದೂ ಭಗವಂತನ ಕೃಪೆಯಿಲ್ಲದೆ ಸಾಧ್ಯವೇ ಇಲ್ಲ. ಅವನ ಕೃಪೆಯೊಂದಾದರೆ ಸಹಸ್ರ ಸಹಸ್ರ ಸಂವತ್ಸರಗಳಿಂದ ಅಂಧಕಾರ ಕವಿದ ಕೋಣೆಯಲ್ಲಿ ಜ್ಯೋತಿ ಥಟ್ಟನೆ ಮಿಂಚಿ ಬೆಳಿಗಿ ಪ್ರಜ್ವಲಿಸಲೂ ಸಾರ್ಧಯ. ಅವನ ಕೃಪಾಸಿಂಧು! ಜೀವದುಃಖ ಕಾತರನಾಗಿ, ಜೀವಿಗಳನ್ನು ಉದ್ಧಾರಮಾಡುವುದಕ್ಕಾಇಗ, ಅವನು ನರದೇಹ ಧಾರಣ ಮಾಡಿ ಮೈದೋರಿದನು. ಹಾಗಲ್ಲದೆ ಆ ಮೈದೋರಿಕೆಗೆ ಇನ್ನೇನು ಪ್ರಯೋಜನವಿದೆ ಹೇಳು? ಅವನು ಸ್ವಯಃಪೂರ್ಣ; ಅವನಿಗೇನಿದೆ ಅಭಾವ?”