ಇವತ್ತು, ಮಧ್ಯಾಹ್ನ ಸ್ವಲ್ಪ ಮುಂಚೆ, ಶಿವುದಾದ (ಶ್ರೀರಾಮಕೃಷ್ಣರ ಅಣ್ಣನ ಮಗ) ದಕ್ಷಿಣೇಶ್ವರದಿಂದ ಆಗಮಿಸಿದರು. ಅವರು ಶ್ರೀಮಹಾಪುರುಷಜಿಗೆ ಕಾಳಿಯ ಪ್ರಸಾದವನ್ನೂ ಸಿಂಧೂರವನ್ನೂ ಕೊಟ್ಟರು. ಬೈಗಿನ ಹೊತ್ತು ವಿಶ್ರಾಂತಿಯ ನಂತರ, ಶಿವುದಾದ ಮತ್ತೆ ಮಹಾಪುರುಷಜಿ ಅವರನ್ನು ನೋಡುವುದಕ್ಕಾಗಿ ಬಂದರು. ಮಹಾಪುರುಷಜಿ ಅವರನ್ನು ಮೊದಲೆ ಹಾಕಿದ್ದ ಆಸನದಲ್ಲಿ ಕುಳಿತುಕೊಳ್ಳಹೇಳಿ, “ನಿನ್ನೆ ನಿಮ್ಮನೆ ಕುರಿತು ತುಂಬಾ ಯೋಚಿಸುತ್ತಿದ್ದೆ. ದಕ್ಷಿಣೇಶ್ವರವನ್ನು ಕುರಿತು ಯೋಚಿಸುತ್ತ ಯೋಚಿಸುತ್ತಾ ನಿಮ್ಮನ್ನು ಯೋಚಿಸುತ್ತಿದ್ದೆ. ನೀವು ತಾಯಿಯ ಪೂಜೆಯನ್ನು ವಿಶೇಷ ಭಕ್ತಿಯಿಂದ ಮಾಡುತ್ತೀರಿ; ಆದ್ದರಿಂದಲೇ ನಿಮ್ಮ ಆಲೋಚನೆ ಮನಸ್ಸಿಗೆ ಬಂದದ್ದು.”

ಶಿವುವಾದ: “ಸರಿ ಸರಿ, ಅದಕ್ಕೆ ಮತ್ತೆ! ತಾವೆ ನನ್ನನ್ನು ಇಲ್ಲಿಗೆ ಎಳೆದದ್ದು, ತಾವು ಎಳೆದಿರಿ; ನಾ ಬಂದೆ.”

ಮಹಾಪುರುಷಜಿ: “ದಾದ, ನೀವು ನಿಜವಾಗಿಯೂ ತಾಯಿಯ ಪೂಜೆಯನ್ನು ತುಂಬಾ ಭಕ್ತಿಯಿಂದ ಮಾಡುತ್ತೀರಿ, ಭಕ್ತಿ ವಿಶ್ವಾಸ ಇಲ್ಲದ ಬರೀ ಪೂಜೆಯಿಂದ ಏನೂ ಆಗುವುದಿಲ್ಲ. ಭಕ್ತಿ ವಿಶ್ವಾಸಪೂರ್ಣವಾದ ಶ್ರದ್ಧೆಯ ಶಕ್ತಿಯಿಂದಲೆ ಮೃಣ್ಮಯೀ ಮೂರ್ತಿ ಚಿನ್ಮಯೀ ಆಗಿಬಿಡುತ್ತದೆ. ನಿಮಗೆ ಗೊತ್ತಿಲ್ಲವೆ ಶ್ರೀಠಾಕೂರರ ಭಕ್ತಿಯ ಜೋರಿನಿಂದಲೇ ದಕ್ಷಿಣೇಶ್ವರದಲ್ಲಿ ತಾಯಿ ಜಾಗ್ರತಳಾಗಿ ಬಿಟ್ಟಳು; ಹಾಗೆ ನೋಡಿದರೆ, ಕಾಳೀ ಮಾತೆಯ ಮೂರ್ತಿಗಳಿರುವ ಅನೇಕ ಮಂದಿರಗಳಿವೆ; ಆದರೆ ಆ ಮಂದಿರಗಳಲ್ಲೆಲ್ಲ ತಾಯಿ  ಚಿನ್ಮಯೀ ಆಗಿ ಎಚ್ಚತ್ತಿದ್ದಾಳೆಯೇ? ನೀವು ಶ್ರದ್ಧಾ ಭಕ್ತಿಗಳಿಂದ ತಾಯಿ ಪೂಜೆ ಮಾಡಿದರೆ ಆಕೆ ಅಲ್ಲಿ ಜಾಗ್ರತ ಸಾನ್ನಿಧ್ಯಳಾಗಿಯೇ ನಿಲ್ಲುತ್ತಾಳೆ. ಶ್ರೀರಾಮಕೃಷ್ಣರು ಯಾವ ವಂಶದಲ್ಲಿ ಹುಟ್ಟಿಬಂದರೋ ಅದೇ ವಂಶಕ್ಕೆ ಸೇರಿದವರು ನೀವು ನೀವೇನು ಕಮ್ಮಿ? ಶ್ರೀರಾಮಕೃಷ್ಣರಲ್ಲಿ ಪ್ರವಹಿಸುತ್ತಿದ್ದ ರಕ್ತವೇ ನಿಮ್ಮ ನಾಳಗಳಲ್ಲಿಯೂ ಹರಿಯುತ್ತಿದೆ. ನಿಮ್ಮ ಮೇಲೆ ತಾಯಿಯ ಕೃಪೆ ವಿಶೇಷ ರೀತಿಯಲ್ಲಿದೆ. ದಕ್ಷಿಣೇಶ್ವರದಲ್ಲಿ ಅಮ್ಮ ಕಾಳಿ ತುಂಬಾ ಜಾಗ್ರತೆ; ಅಲ್ಲಿ ಅಮ್ಮನವರ ಸಾನ್ನಿಧ್ಯಪ್ರಕಾಶ ವಿಶೇಷವಾಗಿದೆ.”

ಶಿವುದಾದ: “ಅದನ್ನು ಕೊಂಚ ಕೊಂಚ ನಿಮ್ಮ ಆಶೀರ್ವಾದ ಬಲದಿಂದಲೂ ಅಮ್ಮನವರ ಕೃಪೆಯಿಂದಲೂ ತಿಳಿಯಲು ಸಮರ್ಥನಾಗಿದ್ದೇನೆ. ಮೊದಲು ಮೊದಲು ಪೂಜಾದಿ ಕಾರ್ಯಗಳಲ್ಲಿ ತೊಡಗುವಾಗ ಪೂಜಾದಿ ವಿಶೇಷಗಳೊಂದೂ ಸರಿಯಾಗಿ ಗೊತ್ತಿಲ್ಲದ ಕಾರಣ ನನಗೆ ಹೆದರಿಕೆಯಾಗುತ್ತಿತ್ತು. ಯಾವುದಾದ ಮೇಲೆ ಯಾವ ಪೂಜೆ ಮಾಡಬೇಕು ಅದೂ ಗೊತ್ತಿರಲಿಲ್ಲ. ಆದರೆ ಅಮ್ಮನವರನ್ನು ಹೃತ್ಪೂರ್ವಕವಾಗಿ ಪ್ರಾರ್ಥಿಸಿ ಪೂಜೆಗೆ ಕುಳಿತುಕೊಂಡರೆ, ನನಗೆ ಚೆನ್ನಾಗಿ ಕೇಳಿಸುವಂತೆ ಯಾರೋ ಹೇಳುತ್ತಿದ್ದರು; ‘ಇದಾದ ಮೇಲೆ ಅದನ್ನು ಮಾಡು: ಈಗ ದಶಮಹಾ ವಿದ್ಯೆಯ ಪೂಜೆ ಆರಂಭಿಸು’ ಎಂದೆಲ್ಲ. ಎಲ್ಲವನ್ನೂ ನನಗೆ ಯಾರೋ ಹೇಳಿಕೊಡುತ್ತಿದ್ದರು. ಆ ವಾಣಿ ಎಷ್ಟು ಸ್ಪಷ್ಟವಾಗಿ ಕೇಳಿಸುತ್ತಿತ್ತು ಎಂದರೆ ನಾನು ಸುತ್ತ ನಾಲ್ಕು ಕಡೆಗೂ ನೋಡುತ್ತಿದ್ದೆ. ಯಾರು ಮಾತಾನಾಡಿದರು ಎಂದು?”

ಮಹಾಪುರುಷಜಿ: “ಹಾಗಲ್ಲದೆ! ದಕ್ಷಿಣೇಶ್ವರದ ಅಮ್ಮ ಕಾಳಿಯಂತೆ ಅಷ್ಟೊಂದು ಜಾಗ್ರತವಾಗಿರುವ ಮೂರ್ತಿ ಮತ್ತೊಂದಿಲ್ಲ. ಶ್ರೀರಾಮಕೃಷ್ಣರು ತಮ್ಮ ಭಕ್ತಿಬಲದಿಂದ ಅಮ್ಮನವರನ್ನು ಅಲ್ಲಿ ಜೀವಂತಗೊಳಿಸಿದರು. ದಾದ, ಠಾಕೂರರ ಲೀಲಾಸಮಸ್ತವನ್ನೂ ನೀವು ನೋಡಿದ್ದೀರಿ. ನೀನು ಪೂಜೆ ಮಾಡುವಾಗಲೆಲ್ಲ ಜೊತೆ ಜೊತೆಗೇ ತಾಯಿ ಜೀವಂತವಾಗಿದ್ದಾಳೆಂದು ಭಾವಿಸಬೇಕು.”

ಶಿವುದಾದ: “ಅದಕ್ಕೆ ಪ್ರಮಾಣವೂ ಯಥೇಷ್ಟವಾಗಿ ಸಿಕ್ಕಿದೆ. ನಾನು ಹುಡುಗನಾಗಿದ್ದಾಗಲೆ ಪೂಜೆ ಪ್ರಾರಂಭಮಾಡಿದಾಗ ಪ್ರತಿ ರಾತ್ರಿಯೂ ಮಲಗುವುದಕ್ಕೆ ಮುನ್ನ ಅಮ್ಮನವರಿಗೆ ಹೇಳುತ್ತಿದ್ದೆ: ‘ಅಮ್ಮಾ ನಾನಿನ್ನು ಮಲಗಿ ನಿದ್ದೆ ಮಾಡುತ್ತೇನೆ. ಬೆಳಿಗ್ಗೆ ಮುಂಚೆ ಏಳುತ್ತೇನೆಯೊ ಇಲ್ಲವೊ? ಬೆಳಗಿನ ಮಂಗಳಾರತಿಗೆ ಸರಿಯಾಗಿ ಎಬ್ಬಿಸಿಬಿಡಮ್ಮ’ ಎಂದು. ಪ್ರತಿದಿನವೂ ಬೆಳಿಗ್ಗೆ ಮಂಗಳಾರತಿ ಸಮಯಕ್ಕೆ ಸರಿಯಾಗಿ ಎಬ್ಬಿಸಿ ‘ಏಳು! ಏಳು! ಮಂಗಳಾರತಿ ಸಮಯವಾಯ್ತು’ ಎಂದು ಹೇಳುತ್ತಿದ್ದಳು. ಇನ್ನೂ ಎಷ್ಟು ತೋರಿಸಿದ್ದಾಳೆ ತಾಯಿ ನನ್ನ ಮೇಲೆ ಕೃಪೆಯಿಟ್ಟು.”

ಹೀಗೆ ಅನೇಕ ಪ್ರಕಾರದ ಮಾತುಕತೆಯಾಡಿ ಶಿವುದಾದ ಮಹಾಪುರುಷಜಿಯನ್ನು ಬೀಳ್ಕೊಟ್ಟು ದಕ್ಷಿಣೇಶ್ವರಕ್ಕೆ ಹೋದರು. ಅವರು ಹೋದಮೇಲೆ ಮಹಾಪುರುಷಜಿ ಹೇಳಿದರು: “ಆಹಾ! ಶಿವುದಾದ ಎಷ್ಟು ಸರಳ! ಆತನ ಮೇಲೆ ತಾಯಿಯ ಕೃಪೆ ಬಹಳ. ಸರಳ ಹೃದಯದಲ್ಲಿ ತಾಯಿ ಬಹುಬೇಗ ಮೈದೋರುತ್ತಾಳೆ.”

* * *