ಸಾಯಂಕಾಲ, ಮಳೆ ಮುಸಲಧಾರೆಯಾಗಿ ಹೊಯ್ಯುತ್ತಿತ್ತು. ಮಹಾಪುರುಷಜಿ ತಮ್ಮ ಕೊಠಡಿಯಲ್ಲಿ ಕುಳಿತಿದ್ದರು. ಬಂಗಾಳದ ಪ್ರಸಿದ್ಧ ಪ್ರತಿಷ್ಠಾನವೊಂದರಲ್ಲಿ (ಎಂದರೆ, ಲೋಕೋಪಕಾರಿಯಾದ ಸಾರ್ವಜನಿಕ ಸಂಸ್ಥೆ) ಕೆಲಸ ಮಾಡುತ್ತಿದ್ದ ಭಕ್ತರಿಬ್ಬರು ಸ್ವಾಮಿಗಳ ದರ್ಶನಕ್ಕಾಗಿ ಬಹಳ ಹೊತ್ತಿನಿಂದಲೂ ಕಾಯುತ್ತಿದ್ದರು. ದೇಹದ ಆಸ್ವಸ್ಥತೆಯ ನಿಮಿತ್ತ ಹೆಚ್ಚು ಜನ ದರ್ಶನಾರ್ಥಿಗಳೊಡನೆ ಮಾತಾಡಲಾಗಲಿ, ಅವರನ್ನು ನೋಡಲಾಗಲಿ ಸ್ವಾಮಿಗಳಿಗೆ ಆಗುತ್ತಿರಲಿಲ್ಲ. ಸ್ವಲ್ಪ ಹೊತ್ತು ಕಳೆದ ಮೇಲೆಯೆ ಆ ಇಬ್ಬರು ಕರ್ಮೀ ಭಕ್ತರನ್ನೂ ಮಹಾಪುರುಷಜಿಯ ಸನ್ನಿಧಿಗೆ ಕರೆದೊಯ್ಯಲಾಯಿತು. ಅವರಿಬ್ಬರೂ ಪ್ರಣಾಮಸಲ್ಲಿಸಿದ ತರುವಾಯ ಅವರಲ್ಲೊಬ್ಬರು ಹೇಳಿದರು: “ಮಹಾರಾಜ್, ತಮ್ಮ ಬಳಿ ಸ್ವಲ್ಪ ಉಪದೇಶ ಪಡೆಯುವುದಕ್ಕಾಗಿ ಬಂದಿದ್ದೇವೆ. ತಾವು ಶ್ರೀರಾಮಕೃಷ್ಣ ದೇವರ ಅಂತರಂಗ ಸಂತಾನ. ನಮ್ಮನ್ನು ಆಶೀರ್ವದಿಸಬೇಕು. ಅಪ್ಪಣೆಯಾದರೆ ಒಂದೆರಡು ಪ್ರಶ್ನೆ ಕೇಳಬೇಕೆಂದಿದ್ದೇವೆ.”

ಮಹಾರಾಜ್: “ಒಳ್ಳೇದು, ಏನು ಕೇಳಬೇಕೊ ಕೇಳಿ.”

ಭಕ್ತ: “ಜಗತ್ತಿನ ಕಲ್ಯಾಣಕ್ಕಾಗಿ ಭಗವತಿಯ ತನುಧಾರಣಮಾಡಿ ಠಾಕೂರ ಶ್ರೀರಾಮಕೃಷ್ಣದೇವರಾಗಿ ಅವತೀರ್ಣಳಾದಳು. ಅವರು ಸ್ಥೂಲ ಶರೀರದಲ್ಲಿರುವಾಗ ತಮ್ಮ ಅಂತರಂಗ ಶಿಷ್ಯರನ್ನೆಲ್ಲ ಒಟ್ಟುಗೂಡಿ ಒಂದು ಸಂಘ ರಚನೆ ಮಾಡಿದರು; ಮತ್ತು ತಮ್ಮ ಆ ಶಿಷ್ಯರಿಗೆ ಕೊಡುವುದರ ಮೂಲಕವಾಗಿ ತಮ್ಮ ಸಮಗ್ರ ಜೀವನದ ಸಾಧನೆಯಿಂದ ಲಬ್ಧವಾದ ಸಮಸ್ತ ಶಕ್ತಿಯನ್ನೂ ಆ ಸಂಘದಲ್ಲಿ ನಿಹಿತ ಮಾಡಿದ್ದರು. ಆ ಸಂಘ ಈಗಲೂ ನಡೆಯುತ್ತಿದೆ. ಆದರೆ ನಮ್ಮ ಪ್ರಶ್ನೆ: ಅವರು ತಮ್ಮ ಅಂತರಂಗ ಶಿಷ್ಯರನ್ನು ಸಂಘಬದ್ಧರನ್ನಾಗಿ ಮಾಡಿದುದು ಹೇಗೆ? ಯಾವ ಬಂಧನದಿಂದ ಆ ಸಕಲರನ್ನೂ ಏಕತ್ರವನ್ನಾಗಿ ಮಾಡಿದರು?”

ಮಹಾರಾಜ್: “ಪ್ರೇಮವೆ ಏಕಮಾತ್ರ ಬಂಧನ. ಅವರು ಪ್ರೇಮ ಸೂತ್ರದಿಂದಲೇ ನಮ್ಮೆಲ್ಲರನ್ನೂ ಒಂದುಗೂಡಿಸಿ ಕಟ್ಟಿದರು. ನಾವೆಲ್ಲರೂ ಅವರ ಪ್ರೇಮದಿಂದ ಆಕೃಷ್ಟರಾಗಿ, ಅವರ ಮಾತುಕತೆಯ ವಿಶ್ವಾಸದಿಂದ ಮುಗ್ಧರಾಗಿ, ಅವರೆಡೆಗೆ ಬಂದೆವು; ಮತ್ತು ಕ್ರಮಕ್ರಮವಾಗಿ ಒಂದಾಗಿ ನಿಂತೆವು. ನಮ್ಮ ಮೇಲೆ ಅವರ ಅಕ್ಕರೆ ಎಂತಹ ಪ್ರಮಾಣದಲ್ಲಿ ಇತ್ತು ಎಂದರೆ ಅದರೊಡನೆ ಹೋಲಿಸಿದರೆ ತಂದೆ ತಾಯಿ ಮೊದಲಾದವರ ಅಕ್ಕರೆಯೂ ಅಕಿಂಚಿತ್‌ಕರ ಎಂಬಂತೆ ತೋರುತ್ತಿತ್ತು. ಅವರು ಕಟ್ಟಿದ ಸಂಘ ಈಗಲೂ ಆ ಪ್ರೇಮದಿಂದಲೆ ಬದ್ಧವಾಗಿ ನಡೆಯುತ್ತಿದೆ. ಇಲ್ಲಿ ಎಲ್ಲರನ್ನೂ ಒಟ್ಟುಗೂಡಿ ಕಟ್ಟಿ ಸಂಘಬದ್ಧರನ್ನಾಗಿ ಮಾಡಿರುವ ಏಕಮಾತ್ರ ಸಂಯೋಗ ಸೂತ್ರವೆಂದರೆ ಪ್ರೇಮವೆ.”

ಭಕ್ತ: “ಗೊತ್ತಾಯಿತು. ಆದರೆ ಯಾವ ಪ್ರೇಮಶಕ್ತಿಯಿಂದ ಶ್ರೀ ಠಾಕೂರರು ತಮ್ಮನ್ನೆಲ್ಲಾ ಒಂದುಗೂಡಿಸಿದರೊ, ಯಾವುದನ್ನು ತಮ್ಮೆಲ್ಲರ ಹೃದಯದಲ್ಲಿಯೂ ಇಟ್ಟರೊ ಆ ಪ್ರೇಮಶಕ್ತಿ ಕಾಲಪ್ರವಾಹಕ್ಕೆ ಸಿಕ್ಕಿ ಕ್ರಮೇಣ ಕ್ಷೀಣವಾಗಿ ಕ್ಷಯಿಸುತ್ತದೆ. ಆ ಶಕ್ತಿ ಅಳಿಯದಂತೆ ಅದರ ಅಖಂಡತ್ವವನ್ನು ಕಾಪಾಡುವುದು ಹೇಗೆ? ಯಾವ ಉಪಾಯದಿಂದ ಆ ಶಕ್ತಿಧಾರೆ ಜಗತ್ತಿನ ಕಲ್ಯಾಣಕ್ಕಾಗಿ ಬಹುಕಾಲ ಅವಿಚ್ಛಿನ್ನವೂ ಅವ್ಯಾಹತವೂ ಆಗಿರುವಂತೆ ಮಾಡಬಹುದು?”

ಮಹಾರಾಜ್: “ನೋಡು ಈ ನಶ್ವರ ಜಗತ್ತಿನಲ್ಲಿ ಯಾವುದೂ ಚಿರಸ್ಥಾಯಿಯಲ್ಲ, ಯಾವ ಶಕ್ತಿಯೂ ಒಂದೇ ಸಮನಾಗಿ ಚಿರಕಾಲವೂ ಕಾರ್ಯಕಾರಿಯಾಗಿ ಇರುವುದಿಲ್ಲ. ಶಕ್ತಿಯ ಒಂದೇ ಸಮನಾಗಿ ಚಿರಕಾಲವೂ ಕಾರ್ಯಕಾರಿಯಾಗಿ ಇರುವುದಿಲ್ಲ. ಶಕ್ತಿಯ ಗತಿ ಹೇಗೆ ಗೊತ್ತೇ? ಅಲೆಯಂತೆ. ಶಕ್ತಿಯ ಲೀಲೆ ಅಲೆಗಳ ಚಲನೆಯಂತೆ, ಒಮ್ಮೆ ಅತಿವೇಗದಿಂದ ಹಿಗ್ಗಿ ಮೇಲಕ್ಕೆ ಏಳುತ್ತದೆ; ಒಮ್ಮೆ ಮಂದಗತಿಯಿಂದ ಕುಗ್ಗಿ ಕೆಳಕ್ಕೆ ಬೀಳುತ್ತದೆ. ಲೀಲಾಪ್ರಪಂಚದಲ್ಲಿ ಶಕ್ತಿಸ್ವರೂಪ ಸರ್ವದಾ ಹೀಗೆಯೆ. ಇಂದಿನ ಮಂದಗತಿಯೇ ಮುಂದಿನ ವೇಗಶಾಲೀಗತಿಗೆ ಸೂಚನೆ. ಆ ಶಕ್ತಿಯನ್ನು ಅವ್ಯಾಹತವಾಗಿ ಮಾಡುವುದು ಹೇಗೆ ಎಂಬುದನ್ನು ಮನುಷ್ಯ ಅರಿಯುವುದು ಎಂದು? ತಾಯಿ ಒಬ್ಬಳಿಗೆ ಗೊತುತ. ಯಾವ ಮಹಾ ಶಕ್ತಿಯಿಂದ ಈ ಜಗತ್ತಿನ ಶಕ್ತಿ ಸಮೂಹಗಳೆಲ್ಲ ಉದ್ಭವವಾಗಿವೆಯೊ ಆ ತಾಯಿ ಒಬ್ಬಳಿಗೆ ಗೊತ್ತು ಈ ಶಕ್ತಿಯನ್ನು ಹೇಗೆ ಅವ್ಯಾಹತವಾಗಿ ಇಡುವುದು ಎಂದು. ಯಾವ ಆದ್ಯಾಶಕ್ತಿ ಮಹಾಮಾಯೆ ಜಗತ್ತಿನ ಕಲ್ಯಾಣಕ್ಕಾಗಿ ಅವತಾರ ಮಾಡಿದಳೋ ಅವಳಿಗೇ ಗೊತ್ತು ಏನು ಮಾಡಿದರೆ ಎಷ್ಟು ಕಾಲ ಈ ಶಕ್ತಿ ವೇಗವತಿಯಾಗಿ ಇರಲು ಸಾಧ್ಯವೆಂದು. ನಾವು ನಮ್ಮ ಕಡೆಯಿಂದ, ತಾಯಿಯ ಮೇಲೆ ಸಂಪೂರ್ಣಭಾವದಿಂದ ನಿರ್ಭರರಾಗಿ ಇರುವುದನ್ನು ಉಳಿದು ಬೇರೆ ಯಾವ ಉಪಾಯವೂ ಇಲ್ಲ.”

ಭಕ್ತ: ನಾವು ಠಾಕೂರರಾದ ಶ್ರೀರಾಮಕೃಷ್ಣ ದೇವರನ್ನೆ ಜೀವನದ ಆದರ್ಶವನ್ನಾಗಿ ಮಾಡಿಕೊಂಡಿದ್ದೇವೆ. ಆ ಆದರ್ಶಕ್ಕೆ ಅನುಗುಣವಾಗಿ ನಮ್ಮ ಬದುಕನ್ನು ರಚಿಸಲು ಪ್ರಯತ್ನಿಸುತ್ತಿದ್ದೇವೆ. ಅದಕ್ಕೆ ವಿಶೇಷವಾಗಿ ನಿಮ್ಮ ಸಹಾಯದ ಭಿಕ್ಷೆ ಬೇಕಾಗಿದೆ. ತಾವು ನಮಗಿತು ಬೆಳಕು ನೀಡಬೇಕು. ತಾವು ಶ್ರೀರಾಮಕೃಷ್ಣರ ಅಂತರಂಗ ಶಿಷ್ಯೋತ್ತಮರಲ್ಲಿ ಒಬ್ಬರಾಗಿದ್ದೀರಿ.

ಮಹಾರಾಜ್: “ಅಯ್ಯಾ, ಶ್ರೀರಾಮಕೃಷ್ಣರನ್ನು ಜೀವನದ ಆದರ್ಶವನ್ನಾಗಿ ಮಾಡಿಕೊಂಡಿರುವ ನೀವು ನಿಜವಾಗಿಯೂ ಧನ್ಯರು! ಅವರೇ ಈ ಯುಗದ ಈಶ್ವರ, ಯಾರು ಅವರ ಅಡಿದಾವರೆಗಳಲ್ಲಿ ಶರಣಾಗತರಾಗುತ್ತಾರೆಯೊ ಅವರಿಗೆ ಶ್ರೇಯಸ್ಸು ಶತಸ್ಸಿದ್ಧ. ನಾನು ನಿಮ್ಮನ್ನು ಹೃದಯ ತುಂಬಿ ಆಶೀರ್ವದಿಸುತ್ತೇನೆ: ನಿಮಗೆ ಶಕ್ತಿ ಲಾಭವಾಗಲಿ. ನಿಮಗೆ ಮಂಗಳವಾಗಲಿ! ಸಾರ್ಥಕವಾಗಲಿ ನಿಮ್ಮ ಮಾನವ ಜನ್ಮ! ನೀನು ಕೇಳಿದೆಯಲ್ಲ ಆ ಬೆಳಕು. ಅದು ನಿನ್ನೊಳಗಿಂದಲೆ ಲಭಿಸುತ್ತದೆ. ನೀನು ಎಷ್ಟೆಷ್ಟು ಒಳಕ್ಕೆ ಹೊಗುತ್ತೀಯೊ, ಅಂತರದಿಂದ ಅಂತರತಮ ಪ್ರದೇಶಕ್ಕೆ ಪ್ರವೇಶಿಸುತ್ತೀಯೊ ಅಷ್ಟಷ್ಟೂ ಹೆಚ್ಚಾಗಿ ಆ ಬೆಳಕನ್ನು ಪಡೆಯುತ್ತೀಯೆ. ಬೆಳಕು ಹೊರಗಡೆ ಎಲ್ಲಿಯೂ ಇಲ್ಲ. ಎಲ್ಲ ಒಳಗಡೆಯೆ, ಎಲ್ಲ ಒಳಗಡೆಯೆ. ಆ ಬೆಳಕಿನ ರೂಪಿಯಾದ ತಾಯಿ ಎಲ್ಲರ ಹೃದಯದಲ್ಲಿಯೂ ಇದ್ದಾಳೆ. ಬ್ರಹ್ಮದಿಂದ ಹಿಡಿದು ಕೀಟ ಪರಮಾಣು ಸರ್ವತ್ರ ಅವಳೆ. ಆ ಆದಿ ಭೂತೆಯಾದ ಮಹಾಮಾಯೆಯ ಪದದಡಿ ಪ್ರಾರ್ಥನೆ ಮಾಡು; ಬೀಗದ ಕೈ ಇರುವುದೆಲ್ಲ ಅವಳ ಕೈಲೇ. ಅವಳು ಸ್ವಲ್ಪ ಕೃಪೆದೋರಿ ಬೀಗದ ಕೈ ತಿರುಗಿಸಿದರೆ ಬೆಳಕಿನ ರಾಜ್ಯವೇ ಬಾಗಿಲು ತೆರೆಯುತ್ತದೆ. ಆ ಚೈತನ್ಯ ರೂಪಿಣಿ ಸರ್ವನಿಯಂತ್ರೀ ಆದ್ಯಾಶಕ್ತಿಯೆ ಮನ ಬುದ್ಧಿ ಅಹಂಕಾರ ಎಲ್ಲದರ ಕರ್ತ್ರೀ, ಎಲ್ಲ ಜಗತ್ತುಗಳ ಆಕರ. ಆ ತಾಯಿಯಿಂದಲೆ ನಾವೆಲ್ಲ ಹೊಮ್ಮಿದ್ದೇವೆ; ಆ ತಾಯಿಯಲ್ಲಿಯೆ ಲಯಹೊಂದುತ್ತೇವೆ.”

ಏತಸ್ಮಾಜ್ಞಾಯತೇ ಪ್ರಾಣೋ ಮನಃ ಸರ್ವೇಂದ್ರಿಯಾಣಿ ಚ |
ಖಂ ವಾಯುರ್ ಜ್ಯೋತಿರಾಪಃ ಪೃಥಿವೀ ವಿಶ್ವಸ್ಯ ಧಾರಿಣೀ ||

“ಇದರಿಂದಲೇ ಪ್ರಾಣ, ಮನಸ್ಸು, ಎಲ್ಲ ಇಂದ್ರಿಯಗಳೂ, ಆಕಾಶ, ವಾಯು, ಅಗ್ನಿ, ನೀರು, ವಿಶ್ವವೆಲ್ಲವನ್ನು ಹಿಡಿದು ನಿಲ್ಲಿಸಿರುವ ಪೃಥಿವೀತತ್ತ್ವ ಸರ್ವವೂ ಉದ್ಭವಿಸಿವೆ.”

“ಅಲ್ಲದೆ ಆ ಆದ್ಯಾಶಕ್ತಿ, ಆ ಬ್ರಹ್ಮಶಕ್ತಿ ಈ ಬುದ್ಧಿಗೆ ಅಗೋಚರ. ಶುದ್ಧ ಮನಸ್ಸಿನಲ್ಲಿ ಮಾತ್ರ ಅವಳು ಪ್ರಕಾಶಿತೆಯಾಗುತ್ತಾಳೆ. ಸಾಧನೆ ಭಜನಾದಿಗಳಿಂದ ಮನುಷ್ಯ ಅವಳನ್ನು ಮುಟ್ಟಲಾಗಲಿ ಅರಿಯಲಾಗಲಿ ಸಾಧ್ಯವಲ್ಲ. ಅವಳು ಸ್ವಯಂಪ್ರಭೆ, ಅವಳ ಚೈತನ್ಯಶಕ್ತಿಯಿಂದಲೆ ಜಗತ್ತು ಚೈತನ್ಯಮಯ.”

ನ ತತ್ರ ಸೂರ‍್ಯೋ ಭಾತಿ ನ ಚಂದ್ರ ತಾರಕಂ |
ನೇಮಾ ವಿದ್ಯುತೋ ಭಾಂತಿ ಕುತೋ-ಯಮಗ್ನಿಃ ||
ತಮೇವ ಭಾಂತಮನುಭಾತಿ ಸರ್ವಂ |
ತಸ್ಯ ಭಾಸಾ ಸರ್ವಮಿದಂ ವಿಭಾತಿ ||

“ಅಲ್ಲಿ ಸೂರ್ಯನು ಹೊಳೆಯುವುದಿಲ್ಲ. ಚಂದ್ರತಾರೆಗಳು ಬೆಳಗುವುದಿಲ್ಲ. ಈ ವಿದ್ಯುತ್ತೂ ಅಲ್ಲಿ ಪ್ರಕಾಶಿಸುವುದಿಲ್ಲ; ಇನ್ನು ಈ ಅಗ್ನಿಯ ಮಾತೇನು? ಅವನು ಪ್ರಕಾಶಿಸುವುದರಿಂದಲೇ ಸಮಸ್ತ ವಸ್ತುಗಳೂ ಅವನ ಹಿಂದೆ ಹಿಂದೆಯೇ ಪ್ರಕಾಶಿಸುತ್ತವೆ. ಅವನ ಜ್ಯೋತಿಯಿಂದಲೇ ಈ ಎಲ್ಲವೂ ಹೊಳೆಯುತ್ತಿವೆ. ನೀನು ಆ ಅಮ್ಮನ ಅಡಿ ಹಿಡಿ; ಅವಳು ನಿನ್ನೊಳಗೇ ಇದ್ದಾಳೆ. ಅವಳೆಯ ನಿನಗೆ ಜ್ಯೋತಿಯ ದಾರಿಯನ್ನು ತೋರಿಸಿಕೊಡುತ್ತಾಳೆ.”

ಭಕ್ತ: “ತಾವು ತಮ್ಮ ಸುದೀರ್ಘಜೀವನವ್ಯಾಪಿಯಾದ ತಪಸ್ಯೆಯಿಂದ ಏನನ್ನು ಕಲಿತಿದ್ದೀರಿ ಎಂಬುದನ್ನು ನಮಗೂ ಸ್ವಲ್ಪ ತಿಳಿಸಿ, ನಮಗೂ ಆ ಬೆಳಕಿನ ದಾರಿಯನ್ನು ತೋರಿ, ತೆರೆದು, ಆಶೀರ್ವಾದ ಮಾಡಬೇಕಾಗಿ ಪ್ರಾರ್ಥನೆ.”

ಮಹಾಪುರುಷಜಿ: (ವಾತ್ಸಲ್ಯಪೂರ್ವಕವಾಗಿ) “ಹೇಳಿದೆನಲ್ಲಾ ಮಗು ಆ ಬೆಳಕು ಒಳಗೆಯೆ ಇದೆ. ಒಳಕ್ಕೆ ಆಳವಾಗಿ ಮುಳುಗು; ಬೆಳಕು ದೊರೆಯುತ್ತದೆ.”

ಮುಳುಗು ಮುಳುಗು ಮುಳುಗು ಮನವೆ |
ಚೆಲ್ವುಕಡಲ ಆಳಕೆ:
ಪ್ರೇಮ ರತ್ನ ಧನವ ಪಡೆವೆ
ಮುಳುಗು ಪಾತಾಳಕೆ.

ದಿನ ಹೋದಂತೆಲ್ಲ ಈ ಭಾವನೆ ನನ್ನಲ್ಲಿ ದೃಢವಾಗುತ್ತಹೋಗುತ್ತಿದೆ. ಅದನ್ನುಳಿದು ಬೇರೆ ದಾರಿ ಇಲ್ಲ. ಎಲ್ಲವೂ ಒಳಗೆಯೆ ಇದೆ. ಶ್ರೀರಾಮಕೃಷ್ಣರು ಹಾಡುತ್ತಿದ್ದುದು:

ನಿನ್ನಲಿಯೆ ನೀನಿರು, ಓ ಮನವೆ |
ಏಕಿಂತಲೆಯುವೆ ಅಲ್ಲಿಲ್ಲಿ?
ಕಾಣೊಳಗೆಯೆ ನಿನ್ನೆದೆಯಂತಃಪುರದಲ್ಲಿ
ಸಕಲಾಶೆಯ ಸುರತರುವಿಹುದಲ್ಲಿ
ಅವನಿಹನಲ್ಲಿಯೆ ಆ ದಿವ್ಯನು ಸ್ಪರ್ಷಮಣಿ.
ನಿನ್ನಭಿಲಾಷೆಯ ಸರ್ವಾಪೇಕ್ಷೆಯ ಸಿದ್ಧಿಯ ರತ್ನಖನಿ
ನೀನರಿಯೈ, ಓ ಮನವೆ,
ಚಿಂತಾಮಣಿಯಾತನ ಮಂದಿರದಾ ಬಾಗಿಲ ಮೂಲೆಯಲಿ
ಸಕಲೇಷ್ಟಗಷ್ಟೈಶ್ವರ್ಯವೆ ಸೂಸಿದೆ ಇದ್ದಿದೆ ಕೆದರಿದೆ ಚೆಲ್ಲಿ |’

ಅದಕ್ಕೇ ನಾನು ಹೇಳುವುದಯ್ಯಾ, ಹುಡುಕು ನಿನ್ನೆದೆಯಂತಃಪುರದಲ್ಲಿ. ಅದೇ ಸರ‍್ವೋಪದೇಶದ ಸಾರಸರ‍್ವಸ್ವ. ಅಮ್ಮನಲ್ಲಿ ಶರಣಾಗತನಾಗು, ಮಗುವಿನಂತೆ ಕಣ್ಣೀರು ಸುರಿಸಿ, ಅವಳನ್ನು ಬೇಡು, ವ್ಯಾಕುಲನಾಗಿ. ಆಗಳೀಗ ಬೆಳಕನ್ನು ಕಾಣಲು ಸಮರ್ಥನಾಗುತ್ತೀಯೆ, ನಾವೂ ಈ ವಿಚಾರವಾಗಿ ಠಾಕೂರರನ್ನು ಕೇಳಿದಾಗಲೆಲ್ಲ ಅವರು ನಮಗೆ ಇದನ್ನೆ ಹೇಳುತ್ತಿದ್ದರು: ‘ಅಮ್ಮನ ಹತ್ತಿರ ದಮ್ಮಯ್ಯ ಗುಡ್ಡೆ ಹಾಕಿಕೋ; ಅವಳೇ ದಾರಿ ಮಾಡಿಕೊಡುತ್ತಾಳೆ’ ಎಂದು. ಅವರು ನಮಗೆ ಪದೇ ಪದೇ ಈ ಉಪದೇಶ ಮಾಡುತ್ತಿದ್ದರು. ನಾನೂ, ಮಗೂ, ನಿಮಗೆ ಅದನ್ನೆ ಹೇಳುತ್ತೇನೆ: ಕಣ್ಣೀರು ಸುರಿಸುತ್ತಾ ‘ಅಮ್ಮಾ, ಮೈದೋರು, ಅಮ್ಮಾ ಕಾಣಿಸಿಕೊ ಎಂದು ಅಂಗಲಾಚಿ ಬೇಡಿಕೊ!’ ‘ನೀನೆ ನೋಡುತ್ತೀಯೆ, ಆನಂದಮಯಿ ನಿನ್ನ ಹೃದಯಕ್ಕೆ ಆನಂದ ಶಾಂತಿಗಳನ್ನು ನೀಡುತ್ತಾಳೆ.’ ನಿಶ್ಚಯವಾಗಿಯೂ ನೀಡಿಯೇ ನೀಡುತ್ತಾಳೆ.

ಭಕ್ತ: “ಬೆಳಕು ಒಳಗಣಿಂದಲೆ ಬರುತ್ತದೆ ಎಂಬುದೇನೊ ಕೇವಲ ಸತ್ಯ. ಆದರೆ ಅದನ್ನು ಪಡೆಯುವುದಕ್ಕೆ ಬಹಿಃಶಕ್ತಿಯ ಸಹಾಯ ಬೇಕಲ್ಲವೆ? ಗುರು ಶಕ್ತಿಯ ಪ್ರಯೋಜನವೂ ಇದೆ ಅಲ್ಲವೆ? ಆ ಶಕ್ತಿಯನ್ನು ತಮ್ಮಿಂದ ಬೇಡುತ್ತೇವೆ.

ಮಹಾರಾಜ್: “ನಾನು ಅಂತಃಕರಣಪೂರ್ವಕವಾಗಿ ಆಶೀರ್ವಾದ ಮಾಡುತ್ತೇನೆ. ನಿಮ್ಮ ಹೃದಯಕ್ಕೆ ಶಾಂತಿ ಬರಲಿ. ಅಂತಹ ಶಾಂತಿಧಾಮಕ್ಕೆ ನಿಮ್ಮನ್ನು ಕೊಂಡೊಯ್ಯುವ ದಾರಿಯನ್ನು ನಿಮಗೆ ಹೇಳಿದ್ದೇನೆ. ಉಳಿದುದೆಲ್ಲ ನಿಮ್ಮ ಕೈಯಲ್ಲಿಯೆ ಇದೆ. ಹೊರಗಡೆಯಿಂದ ಸೂಚನೆಗಳು ಮಾತ್ರ ಬರುತ್ತವೆ. ಉಳಿದುದೆಲ್ಲವನ್ನೂ- ಸ್ವಪ್ರಯತ್ನದಿಂದಲೆ ಸಾಧಿಸಬೇಕು. ಗುರುಶಕ್ತಿ ಎಂದರೆ ಆ ಸೂಚನೆಯೆ. ಆ ದಿಕ್ಕಿನಲ್ಲಿ ಮುಂದುವರಿದಂತೆಲ್ಲ ದಾರಿ ಸ್ಪಷ್ಟವಾಗುತ್ತಾ ಹೋಗುತ್ತದೆ.”

ಭಕ್ತ: “ಮಹಾರಾಜ್. ನಮ್ಮದು ಇನ್ನೊಂದು ಪ್ರಶ್ನೆ ಇದೆ; ಕೃಪೆಮಾಡಿ ಉತ್ತರ ದಯಪಾಲಿಸುತ್ತೀರಾ? ಸ್ವಾಮಿ ಶಾರದಾನಂದ ಲಿಖಿತ ಶ್ರೀ ಶ್ರೀರಾಮಕೃಷ್ಣ ಲೀಲಾಪ್ರಸಂಗದಲ್ಲಿ ಓದಿದ್ದೇವೆ: ‘ಶ್ರೀರಾಮಕೃಷ್ಣ ದೇವರು ಕಠೋರ ಸಾಧನೆಯ ಅನಂತರವೆ ನಿರ್ವಿಕಲ್ಪ ಸಮಾಧಿ ಪಡೆದರು. ಆ ಶ್ರೇಷ್ಠ ಜ್ಞಾನ ಲಾಭವಾದ ಮೇಲೆ, ಅವರು ಜಗನ್ಮಾತೆಯ ನಿರ್ದೇಶಾನುಸಾರವಾಗಿ ಮದುವೆಯಾದ ಹೆಂಡತಿಯನ್ನು ತಮ್ಮ ಹತ್ತಿರದಲ್ಲಿಯೆ ಇಟ್ಟುಕೊಂಡು, ಅವರನ್ನೂ ಇತರ ಅಂತರಂಗ ಭಕ್ತರಂತೆಯೆ ನೋಡಿಕೊಳ್ಳುತ್ತಾ ಎಲ್ಲ ವಿಧವಾದ ಶಿಕ್ಷಾದೀಕ್ಷಾದಿಗಳನ್ನು ನೀಡದರಲ್ಲದೆ, ಕ್ರಮಕ್ರಮೇಣ ಅವರನ್ನೂ ತತ್ತ್ವಜ್ಞಾನಕ್ಕೆ ಅಧಿಕಾರಿಣಿಯನ್ನಾಗಿ ಮಾಡಿದರು. ಹೀಗೆ ಶ್ರೀ ಠಾಕೂರರ ಬ್ರಹ್ಮ ಸಾಕ್ಷಾತ್ಕಾರದ ತರುವಾಯ ಭಕ್ತಿರಂಗಿಯಾಗಿದ್ದುದೂ, ಮತ್ತು ತಮ್ಮ ಹೆಂಡತಿಯನ್ನು ಪಕ್ಕದಲ್ಲಿಯೆ ಇಟ್ಟುಕೊಂಡಿದ್ಧುದೂ ಏನನ್ನು ಸೂಚಿಸುತ್ತದೆ? ಶ್ರೀ ರಾಮಕೃಷ್ಣರು ಯುಗಾಚಾರ್ಯರು, ಯುಗಧರ್ಮ ಸಂಸ್ಥಾಪನಾರ್ಥವಾಗಿ ಈ ಜಗತ್ತಿಗೆ ಅವತರಿಸಿದರು; ಮತ್ತು ತಮ್ಮ ಜೀವನದ ಆದರ್ಶದಿಂದಲೆ ಲೋಕಕ್ಕೆ ಯುಗಧರ್ಮ ನಿರ್ದೇಶನ ಮಾಡಿಕೊಟ್ಟರು. ಭವಿಷ್ಯತ್ಕಾಲದಲ್ಲಿ ಜನರು ಹೇಗೆ ಬದುಕಿ ಬಾಳು ಸಾಗಿಸಬೇಕು ಎಂಬುದನ್ನು ಅವರು ತಮ್ಮ ಬದುಕಿನ ಇಂಗಿತದಿಂದಲೆ ಸೂಚಿಸಿದರಲ್ಲವೆ?”

ಮಹಾಪುರುಷಜಿ: “ಹೌದು, ಶ್ರೀ ಶ್ರೀಮಾತೆ ತಮ್ಮ ಸ್ವಾಮೀ ಚರಣಪ್ರಾಂತದಲ್ಲಿರಲು ದಕ್ಷಿಣೇಶ್ವರಕ್ಕೆ ಆಗಮಿಸಿದಾಗ ಶ್ರೀ ಠಾಕೂರರು ಅವರನ್ನು ಅಟ್ಟಲಿಲ್ಲ. ಬದಲಾಗಿ ಸರ್ವ ಪ್ರಯತ್ನದಿಂದಲೂ ಅವರು ತಮ್ಮ ಬಳಿಯೆ ಇರಲು ಸಾವಕಾಶಾನು ಕೂಲಗಳನ್ನು ಕಲ್ಪಸಿದರು; ಮತ್ತು ತುಂಬ ಯತ್ನದಿಂದ ತಾಯಿಯವರಿಗೆ ಸಾಧನೆ ಭಜನಾದಿಗಳ ವಿಚಾರವಾಗಿ ಉಪದೇಶ ಕೊಟ್ಟರು, ಪ್ರೋತ್ಸಾಹಿಸಿದರು. ಎಲ್ಲ ತೆರನಾದ ಸಹಾಯವನ್ನೂ ನೀಡಿದರು. ಆದರೆ ಅದನ್ನೆಲ್ಲ ಅವರು ಮಾಡಿದ್ದು ನಿರ್ವಿಕಲ್ಪ ಸಮಾಧಿಯ ತರುವಾಯವೆ.”

“ಆ ಸಂಬಂಧದಲ್ಲಿ ಶ್ರೀ ಠಾಕೂರರು ನಮಗೆ ಏನು ಹೇಳಿದ್ದಾರೆ ಎಂಬುದನ್ನು ಕೇಳಿದರೆ ನಿಮಗೆ ಗೊತ್ತಾಗುತ್ತದೆ. ಅವರು ಹೇಳಿದರು: ಕಾಳೀ ಮಂದಿರದಲ್ಲಿ ಯಾವ ಅಮ್ಮ ಇದ್ದಾಳೆಯೊ ಆ ಅಮ್ಮನೆ ಇಲ್ಲಿಯೂ (ತಮ್ಮ ಶರೀರವನ್ನು ನಿರ್ದೇಶಿಸುತ್ತಾ) ವಿರಾಜಮಾನೆಯಾಗಿದ್ದಾಳೆ, ಅಲ್ಲದೆ ಅದೇ ಅಮ್ಮನೆ ನನ್ನ ಬಳಿಯೂ ಇದ್ದಾಳೆ (ಶ್ರೀ ಶ್ರೀಮಾತೆಯ ರೂಪದಲ್ಲಿ). ಏಕೆ? ಶ್ರೀಗುರು ಹಾಗೇಕೆ ಮಾಡಿದರು ಎಂಬುದನ್ನು ಅರಿಯಲು ಆಶಿಸಲೂ ಇಲ್ಲ, ಪ್ರಯತ್ನಿಸಲೂ ಇಲ್ಲ. ನೀನು ತಿಳಿಯ ಬಲ್ಲೆಯಾದರೆ ತಿಳಿಯಬಹುದು. ಠಾಕೂರರು ಹಾಗೆ ಮಾಡಿದರು, ಅಷ್ಟು ಮಾತ್ರ ನಮಗೆ ಗೊತ್ತು.”

“ಸ್ವಯಂ ಭಗವಂತನೆ ನರದೇಹಧಾರಣೆಮಾಡಿ ಶ್ರೀರಾಮಕೃಷ್ಣರ ರೂಪದಲ್ಲಿ ಅವತರಿಸಿದನು. ಅವರ ವರ್ತನೆಗಳ ಉದ್ದೇಶವರಿಯಲು ನಮ್ಮಂತಹ ಕ್ಷುದ್ರ ಬುದ್ಧಿಗಳಿಗೆ ಅಸಾಧ್ಯ. ಅಲ್ಲದೆ ಅರಿಯಬೇಕೆಂಬ ಪ್ರವೃತ್ತಿಯೂ ಯಾವಾಗಲೂ ಉಂಟಾಗಲಿಲ್ಲ. ಸ್ವಾಮೀಜಿ ವಿಶ್ವವಿಜಯಿಯಾಗಿ ಅಮೇರಿಕೆಯಿಂದ ಹಿಂತಿರುಗಿದ ಮೇಲೆ ಗಿರೀಶಬಾಬು ಒಂದು ದಿನ ಅವರಿಗೆ ಹೇಳಿದರು: ‘ನೋಡು, ನರೇನ್, ನೀನೊಂದು ಕೆಲಸಮಾಡಿಕೊಡಬೇಕೆಂದು ನಾವೆಲ್ಲ ಆಗ್ರಹಪೂರ್ವಕವಾಗಿ ಕೇಳಿಕೊಳ್ಳುತ್ತೇವೆ.’ ಸ್ವಾಮೀಜಿಯಲ್ಲಿ ಗಿರೀಶಬಾಬುವಿಗೆ ಬಹಳ ವಿಶ್ವಾಸ, ಸಲಿಗೆ. ಅದಕ್ಕೆ ಹಾಗೆ ಮಾತಾಡಿದ್ದು. ಸ್ವಾಮೀಜಿಯೂ ಆಗ್ರಹಪೂರ್ವಕವಾಗಿಯೆ ಹೇಳಿದರು: ‘ಅದೇಕೆ ಹಾಗೆ ಮಾತಾಡ್ತೀರಿ? ಏನು ಮಾಡಬೇಕೋ ಹೇಳಬಾರದೆ?’ ಆಗ ಗಿರೀಶಬಾಬು ಹೇಳಿದರು: ‘ನೀನು ಠಾಕೂರರ ಜೀವನಚರಿತ್ರೆ ಒಂದನ್ನು ಬರೆಯಲೇಬೇಕು.’ ಅದನ್ನು ಕೇಳಿದೊಡನೆಯೆ ಸ್ವಾಮೀಜಿ ಹಠಾತ್ತನೆ ಚಕಿತರಾಗಿ, ಎರಡು ಕೈಗಳನ್ನೂ ಜೋಡಿಸಿಕೊಂಡು, ಗಂಭೀರಭಾವದಿಂದ ಹೇಳಿದರು: ‘ನೋಡಿ ಗಿರೀಶಬಾಬು, ಅದೊಂದನ್ನು ಮಾತ್ರ ನನ್ನನ್ನು ಕೇಳಬೇಡಿ. ಅದೊಂದು ಕೆಲಸ ಬಿಟ್ಟು ಇನ್ನೇನು ಹೇಳಿದರೂ ಆನಂದದಿಂದ ಮಾಡ್ತೇನೆ. ಈ ಪೃಥ್ವಿಯನ್ನೆ ತಲೆ ಕೆಳಗೆಮಾಡು ಎಂದರೂ ಸರಿ ಆಗಲಿ, ಆದರೆ ಈ ಕೆಲಸ ಮಾಡಲಾರೆ. ಅವರು ಎಷ್ಟು ದೊಡ್ಡವರು, ಎಂತಹ ಮಹಾನ್ ವ್ಯಕ್ತಿ ಎಂಬುದನ್ನು ಒಂದಿನಿತಾದರೂ ಅರಿಯಲು ಶಕ್ತನಾಗಿಲ್ಲ. ಅವರ ಜೀವನದ ಒಂದು ಕಣವನ್ನು ಕೂಡ ಅರಿಯಲು ನನ್ನಿಂದಾಗಿಲ್ಲ. ನಿಮ್ಮ ಮಾತು ಕೇಳಿದರೆ ಶಿವನನ್ನ ಮಾಡೋಕೆ ಹೋಗಿ ಮಂಗನ್ನ ಮಾಡಿದಂತೆ ಆದೀತು! ಅದೊಂದು ಆಗೋದಿಲ್ಲ ನನ್ನಿಂದ.’

“ಸ್ವಾಮೀಜಿಯಂಥಾ ಮಹಾಮೇಧಾವಿಗೇ ಅವರ ಕಾರ್ಯಕಲಾಪಗಳನ್ನು ಒಂದಿನಿತೂ ತಿಳಿದುಕೊಳ್ಳಲಾಗಲಿಲ್ಲ ಎಂದಮೇಲೆ ನಮ್ಮಂಥವರ ವಿಷಯ ಏನು ಹೇಳೋದು? ನಾವು ಅದನ್ನೆಲ್ಲ ತಿಳಿದುಕೊಳ್ಳೋ ಪ್ರಯತ್ನವನ್ನೂ ಮಾಡಲಿಲ್ಲ. ಅವರನ್ನು ಅರಿಯುವುದಕ್ಕೆ ಮನುಷ್ಯರಿಗೆ ಸಾಧ್ಯವೆ? ನಿನಗೇನಾದರೂ ಸಾಧ್ಯವಾದರೆ ನೋಡು. ಪ್ರತಿಯೊಬ್ಬ ಮಾನವನೂ ತನ್ನ ಬುದ್ಧಿವೃತ್ತಿದ್ವಾರವಾಗಿ ಎಲ್ಲ ವಿಷಯಗಳನ್ನೂ ತಿಳಿದುಕೊಳ್ಳಲು ಪ್ರಯತ್ನಿಸುತ್ತಾನೆ. ನಾವು ಹೇಳುತ್ತೇವೆ ‘ಸ್ವಾಮೀ, ನಿನ್ನನ್ನು ಅರಿಯಬೇಕೆಂದು ನಾವು ಕೇಳಿಕೊಳ್ಳುವುದಿಲ್ಲ, ನಿನ್ನ ಅಡಿದಾವರೆಗಳಲ್ಲಿ ಶ್ರದ್ಧೆ ವಿಶ್ವಾಸಗಳು ಬಲಿಯುವಂತೆ ಅನುಗ್ರಹಿಸು.’ ಅವರೂ ಕೃಪೆಯಿಟ್ಟು ನಮ್ಮ ಪ್ರಾರ್ಥನೆಗೆ ಕಿವಿಗೊಡುತ್ತಾರೆ.”

ಭಕ್ತ: “ಮಹಾರಾಜ್, ಆಶೀರ್ವಾದ ಮಾಡಿ, ನಮಗೂ ಹಾಗೆಯೆ ವಿಶ್ವಾಸ ಭಕ್ತಿ ಶ್ರದ್ಧೆ ಲಭಿಸುವಂತೆ, ನಮಗೂ ಶಾಂತಿ ಲಾಭವಾಗುವಂತೆ.”

ಮಹಾಪುರುಷಜಿ: “ಆಗಲಯ್ಯ, ಮನಮುಟ್ಟಿ ಆಶೀರ್ವದಿಸುತ್ತೇನೆ, ನಿನ್ನ ಜ್ಞಾನ ವೃದ್ಧಿಯಾಗಲಿ; ನಿನಗೆ ಶಾಂತಿಯಾನಂದ ಲಭಿಸಲಿ, ನಿನ್ನ ಕೈಲಾದಮಟ್ಟಿಗೆ ನಿನ್ನಿಂದ ದೇಶಕಲ್ಯಾಣ ಕಾರ್ಯ ನಡೆಯಲಿ, (ಕಣ್ಣು ಮುಚ್ಚಿಕೊಂಡು) ಹೃತ್ಪೂರ್ವಕವಾಗಿ ಪ್ರಾರ್ಥಿಸುತ್ತೇನೆ, ನಿನಗಾಗಿ, ನೀನು ಮುಂಬರಿಯುವಂತಾಗಲಿ! ಭಗವಂತನ ಕಡೆಗೆ ಬೇಗ ಬೇಗ ನಡೆ ಸಾಗಲಿ!”

ಆ ಇಬ್ಬರೂ ಭಕ್ತರೂ ಮಹಾಪುರುಷಜಿಯ ಪಾದಧೂಳಿಯನ್ನು ಶಿರಸಾಧರಿಸಿ ಬೀಳ್ಕೊಂಡರು, ಅವರ ಮುಖಭಾವದಿಂದ ಅವರು ಪರಿಪೂರ್ಣ ಹೃದಯರಾಗಿದ್ದರು ಎಂಬುದು ತೋರುತ್ತಿತ್ತು.

* * *

ಕೇವಲಂ ಶಾಸ್ತ್ರಮಾಶ್ರಿತ್ಯ ನ ಕರ್ತವ್ಯೋ ವಿನಿರ್ಣಯಃ |
ಯುಕ್ತಿಹೀನವಿಚಾರೇ ತು ಧರ್ಮಹಾನಿಃ ಪ್ರಜಾಯತೇ |

“ಕೇವಲ ಶಾಸ್ತ್ರವನ್ನೇ ಆಶ್ರಯಿಸಿ ಕರ್ತವ್ಯ ನಿರ್ಣಯ ಮಾಡಬೇಡ. ಯುಕ್ತಿಹೀನವಾದ ವಿಚಾರದಿಂದ ಧರ್ಮಹಾನಿ ಉಂಟಾಗುತ್ತದೆ.”

* * *