ಬೈಗಿನ ಹೊತ್ತು ಸುಮಾರು ಐದು ಗಂಟೆಯ ಸಮಯ. ಮಹಾಪುರುಷಜಿ ಅವರ ಕೊಠಡಿಯಲ್ಲಿ ಕೂತಿದ್ದಾರೆ. ಕೆಲವು ದಿನಗಳಿಂದ ಅವರ ಮೈಸರಿಯಾಗಿಲ್ಲ ಶೀತ, ಕೆಮ್ಮು, ಜ್ವರ ಆಗಾಗ ಬರುತ್ತಿದೆ. ಸರಿಯಾಗಿ ಮಾತಾಡುವುದಕ್ಕೂ ಕಷ್ಟವಾಗುತ್ತಿತ್ತು. ಆದರೆ ಜನರ ಹೃದಯ ವ್ಯಾಕುಲತೆಯನ್ನೂ ಕಷ್ಟದುಃಖಗಳನ್ನೂ ನೋಡಿದಾಗ ಅವರ ಪ್ರಾಣವೆ ಕಣ್ಣೀರಿಡುತ್ತಿತ್ತು. ಅಂತಹ ಸಮಯಗಳಲ್ಲಿ ಅವರ ಭಾವಸ್ಥಿತರೆ ತಪ್ಪಿ ಅಲ್ಲೋಲಕಲ್ಲೋಲವಾಗಿಬಿಡುತ್ತಿತ್ತು. ದುಃಖಿಳ ಜೀವಕ್ಕೆ ಸಾಂತ್ವನೆ ಶಾಂತಿಗಳನ್ನು ನೀಡುವ ಸಲುವಾಗಿ ತಮ್ಮ ಒಡಲಿನ ಬೇನೆಯನ್ನೆಲ್ಲ ಮರೆತುಬಿಡುತ್ತಿದ್ದರು.

ನಿವೃತ್ತ ನ್ಯಾಯಾಧೀಶರೊಬ್ಬರು ಜೊತೆಯಲ್ಲಿ ಹೆಂಡತಿಯನ್ನೂ ಮಗನನ್ನೂ ಮತ್ತು ವಿಧವೆಯಾದ ತಮ್ಮ ಮಗಳನ್ನೂ ಕರೆದುಕೊಂಡು ಬಂದರು. ಅವರೆಲ್ಲರೂ ಸಾಷ್ಟಾಂಗ ಪ್ರಣಾಮ ಮಾಡಿ ಎದ್ದು ನಿಲ್ಲಲು, ಸ್ವಾಮಿಗಳು ತುಂಬ ವಾತ್ಸಲ್ಯದಿಂದ ಅವರನ್ನೆಲ್ಲ ಕುಳಿತುಕೊಳ್ಳುವಂತೆ ಹೇಳಿದರು. ನೆಲದ ಮೇಲೆ ಬಿಚ್ಚಿದ್ದ ಒಂದು ಚಾಪೆಯ ಮೇಲೆ ಅವರೆಲ್ಲ ಕೂತುಕೊಂಡರು. ಒಂದೆರಡು ಮಾತುಕತೆಯಾದ ಮೇಲೆ ಆ ಗೃಹಸ್ಥರು ತಮ್ಮ ಮಗಳ ಕಡೆ ಕೈತೋರಿಸಿ ಹೇಳಿದರು: “ಈಕೆ ನನ್ನ ಮಗಳು. ಮೊನ್ನೆ ಮೊನ್ನೆ ಇವಳ ಗಂಡ ತೀರಿಕೊಂಡರು. ತುಂಬ ಗೋಳಿಡುತ್ತಿದ್ದಾಳೆ. ಆ ಶೋಕದಿಂದ ಸ್ವಲ್ಪವೂ ಸಮಾಧಾನ ತಂದುಕೊಳ್ಳಲು ಅಸಮರ್ಥೆಯಾಗಿದ್ದಾಳೆ. ಆದ್ದರಿಂದಲೆ ತಮ್ಮ ಬಳಿಗೆ ಕರೆತಂದೆ.”

ಕೇಳುತ್ತಾ ಕೇಳುತ್ತಾ ಮಹಾಪುರುಷಜಿ ‘ಅಯ್ಯೊ ಅಯ್ಯೊ’ ಎನ್ನತೊಡಗಿದರು; ಮತ್ತೆ ಸ್ವಲ್ಪಹೊತ್ತು ಮೌನವಾಗಿದ್ದು ಗಂಭೀರಭಾವದಿಂದ ಮೆಲ್ಲ ಮೆಲ್ಲಗೆ ಹೇಳಿದರು: “ಸಂಸಾರದ ರೀತಿಯೆ ಹಾಗೆ, ತಾಯಿ. ದುಃಖ ವಿಯೋಗ, ಕಷ್ಟ, ಸಂಕಟ-ಇದೇ ಸಂಸಾರ. ಈ ಲೋಕದಲ್ಲಿ ನಿಜವಾದ ಸುಖ, ಶಾಶ್ವತವಾದ ಶಾಂತಿ ಬಹಳ ಅಪೂರ್ವ. ಹುಟ್ಟು ಸಾವು, ಸಾವು ಹುಟ್ಟು ಈ ಚಕ್ರ ಪ್ರವಾಹವನ್ನು ಯಾರೂ ತಡೆಗಟ್ಟಲಾರರು. ಅದಾವುದೂ ಮನುಷ್ಯರ ಕೈಯಲ್ಲಿಲ್ಲ. ಭಗವಂತನೊಬ್ಬನೆ ಈ ಜಗತ್ತಿನ ಸೃಷ್ಟಿ ಸ್ಥಿತಿ ಲಯಕರ್ತ. ಅಲ್ಲದೆ ಅವನ ಇಚ್ಛೆಯಿಂದಲೆ ಈ ಜೀವ ಸಂಸಾರ ಆತ್ಮಗ್ರಹಣಮಾಡಿ ಬರುತ್ತದೆ. ಅವನು ಇಲ್ಲಿ ಇರಿಸುವಷ್ಟು ದಿನ ಇರುತ್ತದೆ. ಅವನು ಇಚ್ಛೆಪಟ್ಟಾಗ ಹಿಂದಕ್ಕೆ ಕರೆಯಿಸಿಕೊಳ್ಳುತ್ತಾನೆ. ಇದೊಂದನ್ನು ಮಾತ್ರ ನಾವು ಚೆನ್ನಾಗಿ ತಿಳಿದುಕೊಳ್ಳಬೇಕು-ಜನ್ಮ, ಸ್ಥಿತಿ ಮತ್ತು ಮೃತ್ಯು ಇವುಗಳ ಏಕಮಾತ್ರ ಕರ್ತೃ ಆ ಭಗವಂತ. ಅವನೇ ಈ ಜೀವವನ್ನು ಸಂಸಾರದಲ್ಲಿ ತಂದೆ, ತಾಯಿ, ಹೆಣ್ಣು, ಗಂಡು, ಮಗ, ಬಾಂಧವರು ಎಂಬ ನಾನಾ ರೂಪಗಳಲ್ಲಿ ವ್ಯವಹರಿಸಲು ಕಳುಹಿಸುತ್ತಾನೆ; ಒಂದಲ್ಲ ಒಂದು ಸಂಬಂಧದಲ್ಲಿ ಆ ಜೀವ ಸಿಕ್ಕಿಬೀಳುವಂತೆ ಮಾಡುತ್ತಾನೆ; ಆಮೇಲೆ ಯಾವಾಗ ಇಚ್ಛೆ ಬಂದರೆ ಆವಾಗ ಹಿಂದಕ್ಕೆ ಕರೆಯುತ್ತಾನೆ. ಎಲ್ಲಿಯವರೆಗೆ ಮನುಷ್ಯ ಇದನ್ನು ಅರಿಯುವುದಿಲ್ಲವೋ ಮತ್ತು ಆ ಅರಿವನ್ನು ಹೃದಯಾನುಭವವನ್ನಾಗಿ ಮಾಡಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ದುಃಖಶೋಕಾಧೀನನಾಗಿಯೆ ಇರುತ್ತಾನೆ. ಆದರೆ ಆ ಜ್ಞಾನ ಆ ಧಾರಣೆ ಪಕ್ವವಾಯಿತೆಂದರೆ, ದೃಢವಾಯಿತೆಂದರೆ ಶೋಕತಾಪಗಳಿಂದ ಪಾರಾಗುತ್ತಾನೆ. ದುಃಖಪಡುವುದಕ್ಕೂ  ಕಾರಣವಿರುವುದಿಲ್ಲ. ಆದರೆ ಒಂದನ್ನು ನೋಡಿಕೊಳ್ಳಬೇಕು. ದೇವರು ಯಾರು ಯಾರೊಡನೆ ನಮ್ಮ ಸಂಬಂಧವನ್ನು ಗೊತ್ತುಮಾಡಿ ನಮ್ಮನ್ನಿಲ್ಲಿಗೆ ಕಳುಹಿಸಿದ್ದಾನೆಯೊ ಆ ಸಂಬಂಧಗಳ ಸೇವೆಯಲ್ಲಿ ಸ್ವಲ್ಪವೂ ಉದಾಸೀನರಾಗಿರಬಾರದು. ಹಾಗೆ ಉದಾಸೀನ ಮಾಡಿದರೆ ಅದಕ್ಕಾಗಿ ದುಃಖಪಡಬೇಕಾಗುತ್ತದೆ. ಶೋಕ ಮಾಡುವುದೊಂದೆ ಮನುಷ್ಯನ ಕೆಲಸವಲ್ಲ; ಮಾಡಬೇಕಾದ ಇತರ ಕೆಲಸ ಕಾರ್ಯಗಳೂ ಇವೆ. ಸಂಸಾರದ ಕೆಲಸ ಕಾರ್ಯದ ಜೊತೆಗೆ-ಯಾವುದು ಜೀವಿತದ ತುದಿ ಗುರಿಯೊ ಅದರ ಕಡೆಗೂ ಮುಂಬರಿಯಬೇಕು. ಅದು ಬಿಟ್ಟು ಸುಮ್ಮನೆ ಗೋಳಿಡುತ್ತಾ ಶೋಕಿಸುತ್ತಾ ಕುಳಿತರೆ ಏನು ಬಂತು? ಬದುಕು ಬಂದಿರುವುದು ಬರಿಯ ಗೋಳಿಡುವುದಕ್ಕಲ್ಲ. ಜನ್ಮ, ಜರೆ, ಮೃತ್ಯುಗಳಿಂದ ಪಾರಾಗಬೇಕು; ಪ್ರೇಮಾಸ್ಪದನಾದ ಶ್ರೀಭಗವಂತನ ಸಾಕ್ಷಾತ್ಕಾರ ಮಾಡಿಕೊಳ್ಳಬೇಕು; ಹಾಗೆ ಮಾಡುವುದರಿಂದಲೆ ಸರ್ವ ದುಃಖಾವಸಾನವೂ ಸಾಧ್ಯ.

ಯಂ ಲಬ್ಧ್ವಾ ಚಾಪರಂ ಲಾಭಂ ಮನ್ಯತೇ ನಾಧಿಕಂ ತತಃ |
ಯಸ್ಮಿನ್ ಸ್ಥಿತೋ ನ ದುಃಖೇನ ಗುರುಣಾಪಿ ವಿಚಾಲ್ಯತೇ ||

“ಯಾವುದನ್ನು ಪಡೆದ ಮೇಲೆ ಇನ್ನುಳಿದ ಯಾವುದನ್ನೂ ಅದಕ್ಕಿಂತ ಅಧಿಕವೆಂದು ಮನುಷ್ಯನು ಭಾವಿಸುವುದಿಲ್ಲವೊ, ಯಾವುದರಲ್ಲಿ ನೆಲೆಸಿದ ಮೇಲೆ ಎಂತಹ ಗುರುತರವಾದ ದುಃಖದಿಂದಲೂ ವಿಚಲಿತನಾಗುವುದಿಲ್ಲವೊ.”

“ದುಃಖ ಕಷ್ಟಗಳನ್ನೂ ಪ್ರೇಮಮಯನಾದ ಶ್ರೀ ಭಗವಂತನ ಆಶೀರ್ವಾದಗಳೆಂದರಿತು ಸಾನಂದಿಂದ ಸ್ವೀಕರಿಸಬೇಕು. ಭಗವಂತನಿಗೆ ಸಂಪೂರ್ಣ ಶರಣಾಗತವಾಗದಿದ್ದರೆ ಈ ಎಲ್ಲ ಶೋಕತಾಪಗಳನ್ನೂ ಅವಿಚಲಿತಭಾವದಿಂದ ಸಹಿಸಲು ಸಾಧ್ಯಾವಾಗುವುದಿಲ್ಲ. ಸಾಧಾರಣ ಮನುಷ್ಯನಿಗೆ ಸಂಸಾರದ ಘಾತ ಪ್ರತಿಘಾತಗಳನ್ನು ಸಹಿಸುವುದು ತುಂಬ ಕಷ್ಟಕರ. ನಿಜವಾದ ಭಕ್ತನಿಗೆ ಮಾತ್ರ, ಭಗವಂನಲ್ಲಿರುವ ಶ್ರದ್ಧೆಯ ಬಲದಿಂದ, ಈ ಶೋಕತಾಪಗಳಿಂದ ಎದೆಗೆಡದಿರಲು ಸಾಧ್ಯ. ಅಲ್ಲದೆ ಮಾನವನ ಜೀವಿತದ ಲಕ್ಷಣಗಳೂ ಇವೆ -ಶ್ರದ್ಧಾ ಭಕ್ತಿ, ಶುದ್ಧಪ್ರೇಮ, ಸಾಧನೆ, ಭೂಮಾನಂದಾನುಭೂತಿ. ದೇವರ ಕಡೆಗೆ ಮುಂಬರಿಯ ಬೇಕಯ್ಯಾ. ಎಷ್ಟು ಆ ಕಡೆ ಹರಿದರೆ ಅಷ್ಟೂ ಶಾಂತಿ. ಈ ಸಂಸಾರದಲ್ಲಿ ಯಾವುದರಲ್ಲಿಯೂ ಶಾಂತಿಯಿಲ್ಲ; ಶ್ರೀ ಭಗವಂತನ ಶ್ರೀ ಚರಣವೊಂದೇ ಶಾಂತಿಧಾಮ.”

* * *

ಅಮೃತಂ ಚೈವ ಮೃತ್ಯುಶ್ಚ ದ್ವಯಂ ದೇಹೇ ಪ್ರತಿಷ್ಠಿತಂ |
ಮೃತ್ಯುರಾಪದ್ಯತೇ ಮೋಹಾತ್ ಸತ್ಯೇನಾಪದ್ಮತೇಮೃತಂ || -ಮಹಾಭಾರತ

“ಅಮೃತ ಮತ್ತು ಮೃತ್ಯು ಎರಡೂ ದೇಹದಲ್ಲಿ ಪ್ರತಿಷ್ಠಿತವಾಗಿವೆ. ಮೋಹದ ದಾರಿ ಹಿಡಿದರೆ ಮೃತ್ಯುವನ್ನು ಸಂಧಿಸುತ್ತೇವೆ; ಸತ್ಯಮಾರ್ಗದಲ್ಲಿ ನಡೆದರೆ ಅಮೃತವನ್ನು ಸೇರುತ್ತೇವೆ.”