ಅಪರಾಹ್ನ. ಇವತ್ತು ಭಾನುವಾರವಾದ್ದರಿಂದ ಮಠದಲ್ಲಿ ಭಕ್ತರ ಸಮಾಗಮ ತುಂಬಾ ಇತ್ತು. ಮಹಾಪುರುಷಜಿಯ ಕೊಠಡಿಯೂ ಕಿಕ್ಕಿರಿದು ಹೋಗಿತ್ತು. ಅವರೂ ಆನಂದಮಯರಾಗಿ ಸಕಲರೊಡನೆಯೂ ಮಾತುಕತೆ ನಡೆಸುತ್ತಿದ್ದರು. ಅಲ್ಲಿಗೆ ಬಂದ ಗೃಹಸ್ಥರೊಬ್ಬರು ಸ್ವಾಮಿಗಳಿಗೆ ಭಕ್ತಿಯಿಂದ ಪ್ರಣಾಮ ಮಾಡಿದ ಬಳಿಕ “ಹೇಗಿದ್ದೀರಿ, ಮಹಾರಾಜ್?” ಎಂದು ಕೇಳಿದರು.

ಮಹಾರಾಜ್: “ಚೆನ್ನಾಗಿದ್ದೇನೆ.”

ಭಕ್ತ: (ಕಾತರಭಾವದಿಂದ) “ಆದರೆ ನಿಮ್ಮ ಶರೀರ ನೋಡಿದರೆ ಹಾಗೆ ಕಾಣಿಸುವುದಿಲ್ಲ. ಶರೀರ ತುಂಬ ಕೆಟ್ಟುಹೋದಂತೆ ಕಾಣುತ್ತದೆ.”

ಮಹಾರಾಜ್: “ಓ, ನೀನು ಶರೀರದ ವಿಷಯ ಕೇಳಿದೆಯಾ? ಶರೀರ ಏನೂ ಚೆನ್ನಾಗಿಲ್ಲ; ಆದರೆ ನಾನು ಚೆನ್ನಾಗಿದ್ದೇನೆ. ಈ ನಾಲ್ಕು ಜನರ ಸಂಗದಲ್ಲಿ ದೇವರ ವಿಷಯ ಮಾತಾಡೋದು, ಭಗವಂತನ ನಾಮೋಚ್ಚಾರಣೆ ಮಾಡೋದು ಇಂಥಾ ಕೆಲಸಗಳಲ್ಲಿ ಆನಂದವಾಗಿರುತ್ತದೆ. ‘ಎಲ್ಲಿಯವರೆಗೆ ರಾಮನ ನಾಮ ಅಲ್ಲಿಯವರೆಗೆ ಜಾನಕಿ ಕ್ಷೇಮ!’ ಎಲ್ಲಿಯವರೆಗೆ ಸೀತಾದೇವಿ ಶ್ರೀರಾಮಚಂದ್ರನ ಹೆಸರು ಹೇಳಲು ಸಮರ್ಥೆಯಾಗಿರುತ್ತಾಳೆಯೊ ಅಲ್ಲಿಯವರೆಗೆ ಚೆನ್ನಾಗಿಯೆ ಇರುತ್ತಾಳೆ.’ ಎಲ್ಲಿಯತನಕ ಬಾಯಿಯಿಂದ ರಾಮನಾಮೋಚ್ಚಾರಣೆ ಸಾಧ್ಯವೋ ಅಲ್ಲಿಯ ತನಕ ಚೆನ್ನಾಗಿದ್ದೇನೆ ಎಂದು ಹೇಳಬೇಕು. ದೇವರ ನಾಮೋಚ್ಚಾರಣೆಯ ಉದ್ದೇಶವಾಗಿಯೆ ದೇಹಧಾರಣೆ ಮಾಡುವುದು. ಅದು ಸಾಧ್ಯವಾಗಿರುವವರೆಗೆ ಎಲ್ಲಾ ಸರಿಯಾಗಿದೆ ಎಂದೇ ಅರ್ಥ. ಹರಿ ಮಹಾರಾಜ್ (ಸ್ವಾಮಿ ತುರೀಯಾನಂದರು) ಹೇಳುತ್ತಿದ್ದರು: ‘ನೋವು ದೇಹಕ್ಕೆ; ನೀನು ಆನಂದದಿಂದಿರು ಓ ಮನವೆ!’ ತುಂಬಾ ಸೊಗಸಾದ ಮಾತು! ದುಃಖ ಕಷ್ಟ ಎಲ್ಲ ದೇಹಕ್ಕೆ. ದೇಹದ ಒಳಗೆ ಯಾರು ಇದ್ದಾನೆಯೋ ಅವನಿಗೆ ದುಃಖ ಕಷ್ಟ ಎಲ್ಲ ದೇಹಕ್ಕೆ. ದೇಹದ ಒಳಗೆ ಯಾರು ಇದ್ದಾನೆಯೋ ಅವನಿಗೆ ದುಃಖ ಕಷ್ಟ ಯಾವುದೂ ಇಲ್ಲ, ಅವನು ಆನಂದ ಸ್ವರೂಪ. ಅವನು ಬೇರೆ ಬೇರೆ ದೇಹಗಳಲ್ಲಿ ಇದ್ದಾನೆ; ಆದರೆ ಸ್ವರೂಪದಲ್ಲಿ ಬೇರೆ ಬೇರೆ ಆಗಿಲ್ಲ. ನಾವು ಆ ಸ್ವರೂಪ ಸಾಕ್ಷಾತ್ಕಾರ ಮಾಡಿಕೊಳ್ಳಬೇಕು. ಅವನನ್ನು ಅರಿಯದಿರುವುದರಿಂದಲೇ ಈ ಗಡಿಬಿಡಿ, ಗೋಳು.”

ಭಕ್ತ: “ನಮ್ಮ ತಿಳಿವಳಿಕೆ ಅಲ್ಲಿಯವರೆಗೆ ಏರಲಾರದು. ನಾವು ತಮ್ಮನ್ನು ನೋಡುತ್ತಿದ್ದೇವೆ. ತಮ್ಮ ದೇಹ ಸುರಕ್ಷಿತವಾಗಿರುವುದೇ ನಮಗೆ ಬೇಕಾದ್ದು.”

ಮಹಾರಾಜ್: “ನಿಮಗೇನೋ ಅದು ಬೇಕಾಗಿರಬಹುದು, ಆದರೆ ನನಗೆ ಗೊತ್ತು-ನಾನು ದೇಹ ಅಲ್ಲ ಎಂದು. ಅಲ್ಲದೆ ನಿಮ್ಮೊಡನೆ ನನಗೆ ಏನು ಸಂಬಂಧವಿದೆಯೋ ಅದೂ ದೇಹಕ್ಕೆ ಸಂಬಂಧಪಟ್ಟದ್ದಲ್ಲ ಎಂದು; ಮತ್ತು ದೇಹನಾಶವಾದರೆ ಆ ಸಂಬಂಧ ನಾಶವಾಗುವುದಿಲ್ಲ ಎಂದು; ಅಯ್ಯಾ, ಈ ಒಡಲು ಎರಡು ದಿನದ್ದು; ಆದರೆ ಆತ್ಮ ನಿತ್ಯ; ಆದ್ದರಿಂದ ಆತ್ಮ ಸಂಬಂಧವೂ ನಿತ್ಯ. ಏನೇ ಮಾಡು ನೀನು, ಈ ಒಡಲು ಸದಾಕಾಲವೂ ಇರಲಾರದು. ರಾಮಮೋಹನ ರಾಯ್ ತುಂಬ ಚೆನ್ನಾಗಿ ಹೇಳಿದ್ದಾರೆ:”

ಯತ್ನಿಸಿದರೆ ತೃಣಕಣ ತಾನಪ್ಪುದು ಯುಗಾಆಯು;
ಆದರೆ ಯತ್ನದಿ ಚಿರವಾಗದೊ ಒಡಲಿನ ವಾಯು |
ನಿನ್ನವರಾರು? ನೀನಾರವನು?
ಆರನು ಕರೆಯುವೆ ನಿನ್ನವರೆಂದು?

ಈ ಅಜ್ಞಾನವನ್ನು ದೂರ ಮಾಡಬೇಕು. ಮಾನವ ಅಜ್ಞಾನವಶನಾಗಿ ದೇಹವನ್ನೇ ‘ನಾನು’ ಎಂದು ಭಾವಿಸಿ ತುಂಬ ಕಷ್ಟಕ್ಕೀಡಾಗುತ್ತಾನೆ. ಇದರ ಪರಿತ್ರಾಣೋಪಾಯ ಏನು ಗೊತ್ತೆ? ಇದಕ್ಕಿರುವ ದಾರಿ ಒಂದೆ-ಅವನನ್ನು ಅರಿಯುವುದು. ಅವನು ಶುದ್ಧ ಬುದ್ಧ ಮುಕ್ತ ಸ್ವಭಾವನಾಗಿದ್ದಾನೆ. ಎಲ್ಲರ ಅಂತರಾತ್ಮನೂ ಅವನೆ. ಅವನನ್ನು ತಿಳಿದೊಡನೆ ಮನುಷ್ಯ ದುಃಖ ಕಷ್ಟಗಳಿಂದ ಪಾರಾಗುತ್ತಾನೆ. ಅದನ್ನೆ ಶ್ರೀಭಗವಂತನು ಗೀತೆಯಲ್ಲಿ ಹೇಳಿದ್ದು. ನನ್ನನ್ನೊಮ್ಮೆ ಸರಿಯಾಗಿ ಅರಿತನೆಂದರೆ ಎಂತಹ ಮಹಾ ದುಃಖದಿಂದಲೂ ಆ ಜೀವ ವಿಚಲಿತವಾಗುವುದಿಲ್ಲ ಎಂದು. ಈ ತತ್ತ್ವಜ್ಞಾನ ಲಭಿಸಿತೆಂದರೆ ಮನುಷ್ಯ ಸರ್ವಾವಸ್ಥೆಗಳಲ್ಲಿಯೂ ಮೇರುವಿನಂತೆ ಅಚಲವಾಗಿ ಸ್ಥೈರ್ಯದಿಂದಿರುತ್ತಾನೆ.”

ಭಕ್ತ: “ಏನು ಮಾಡಿದರೆ ಆ ತತ್ತ್ವಜ್ಞಾನ ನನಗೆ ಲಭಿಸುತ್ತದೆ? ನಮಗೂ ಆ ಅವಸ್ಥೆ ಲಭಿಸುವಂತೆ ಆಶೀರ್ವಾದ ಮಾಡಬೇಕು.”

ಈ ಪ್ರಶ್ನೆ ಕೇಳಿ ಮಹಾಪುರುಷಜಿ ಮಹರಾಜರ ಮನಸ್ಸು ಯಾವುದೋ ಅನ್ಯಲೋಕದಲ್ಲಿ ಚಲಿಸತೊಡಗಿದಂತೆ ತೋರಿತು. ಅವರು ತುಂಬ ಗಂಭೀರ ಮತ್ತು ಶಾಂತ ಭಾವದಿಂದ ಹೇಳತೊಡಗಿದರು: “ಅಯ್ಯಾ, ನಮ್ಮಲ್ಲಿ ಆಶೀರ್ವಾಧವಲ್ಲದೆ ಬೇರೆ ಏನೂ ಇಲ್ಲ. ನಾನು ಹೃತ್ಪೂರ‍್ವಕವಾಗಿಯೆ ಆಶೀರ‍್ವದಿಸುತ್ತೇನೆ. ಯಾರಾದರಾಗಲಿ ಭಗವಂತನ ಕಡೆಗೆ ಚಲಿಸುತ್ತಿರುವುದನ್ನು ನೋಡಿದರೆ ನಮ್ಮ ಹೃದಯದಲ್ಲಿ ಎಂತಹ ಆನಂದ ಸಂಚಾರವಾಗುತ್ತದೆ ಎಂಬುದನ್ನು ನಿನಗೆ ಹೇಗೆ ಹೇಳಲಿ! ಯಾರು ಆಧ್ಯಾತ್ಮ ರಾಜ್ಯದಲ್ಲಿ ಮುಂದುವರಿಯುತ್ತಿರುತ್ತಾರೋ ಯಾರ ಹೃದಯ ಭಗವಂತನ ಆರಾಧನೆಯಲ್ಲಿ ತೊಡಗಿರುತ್ತದೆಯೋ ಅವರೆಲ್ಲ ನಮಗೆ ಪರಮಾತ್ಮೀಯರು. ಅವರೆಲ್ಲ ವಿಶೇಷ ರೀತಿಯಲ್ಲಿ ನಮ್ಮವರೆ! ನಮ್ಮ ನಿರಂತರ ಪ್ರಾರ್ಥನೆಯೂ ಅದೇ: ಲೋಕಕ್ಕೆ ಕಲ್ಯಾಣವಾಗಲಿ, ಜನರು ಭಗವಂತನ ಶ್ರೀಚರಣದ ದಿಕ್ಕಿಗೆ ಮುಂದುವರಿಯಲಿ ಎಂದು. ಜನರು ಅನಿತ್ಯಸಂಸಾರದ ಮಾಯಾಬಂಧನಗಳಿಂದ ಪಾರಾಗಿ ಭಗವಂತನನ್ನು ಪಡೆಯುವಂತೆ ನೆರವಾಗುವುದೇ ನಮ್ಮ ಸರ್ವಸಾಧನೆಯಾಗಿದೆ.”

ಶ್ರೀ ಠಾಕೂರರು ಹೇಳುತ್ತಿದ್ದರು: ‘ಕೃಪೆಯ ಗಾಳಿ ನಿರಂತರವೂ ಬೀಸುತ್ತಿದೆ. ಹಡಗಿನ ಪಟ ಬಿಚ್ಚುವುದೊಂದೆ ನಿನ್ನ ಕೆಲಸ.’ ಶ್ರೀ ಭಗವಂತನ ಕೃಪೆ ಸರ್ವದಾ ಇದೆ. ಆದರೆ ಅದನ್ನು ಪಡೆಯುವುದಕ್ಕೆ ಪ್ರಯತ್ನಮಾಡಬೇಕು. ನಾವೇನೊ ಆಶೀರ್ವಾದ ಮಾಡಿಯೆಮಾಡುತ್ತೇವೆ; ನೀನೂ ವ್ಯಾಕುಲ ಹೃದಯದಿಂದ ಅವನನ್ನು ಕರೆಯಬೇಕು. ನೋಡುತ್ತೀಯೆ ಅವನ ದಯೆ ಎಂಥಾದ್ದೆಂದು! ಅವನು ಕೃಪೆ ನೀಡಲೆಂದು ಸದಾ ಕೈಚಾಚಿಕೊಂಡೆ ಇದ್ದಾನೆ. ಅವನ ಹೆಸರು ಹೇಳು, ಅವನ ಭಜನೆ ಮಾಡು, ಸದಾ ಸರ್ವದಾ ಅವನ ಸ್ಮರಣಮನನ ಮಾಡು. ನಿನ್ನ ಹೃದಯದ ಅಂತರಾಳದಿಂದ ಮೊರೆಯಿಟ್ಟು ಕರೆ. ಅವನ ಕೃಪೆ ಎಂಥಾದ್ದೆಂದು ನಿನಗೇ ಗೊತ್ತಾಗುತ್ತದೆ. ಆ ಕೃಪೆ ಯಾವ ಪ್ರಮಾಣದಲ್ಲಿ ನಿನ್ನ ಮೇಲೆ ಸುರಿಯುತ್ತದೆಂದರೆ ಅದನ್ನು ತಾಳುವುದರಲ್ಲಿಯೆ ನೀನು ತತ್ತರಿಸಿ ಹೋಗುತ್ತೀಯೆ. ನಿನ್ನ ಮಾನವಜನ್ಮ ಧನ್ಯವಾಗುತ್ತದೆ. ಅವನ ಕೃಪೆ ಮಾತ್ರ ಇಲ್ಲದೆ ಹೋದರೆ ಏನೊಂದು ಆಗುವುದಿಲ್ಲ. ಅವನೇ ತನ್ನ ಮಾಯೆಯಿಂದ ಜಗತ್ತನ್ನೆಲ್ಲ ಮೋಹಿತವನ್ನಾಗಿ ಮಾಡಿದ್ದಾನೆ. ಆದ್ದರಿಂದಲೆ ಸರ್ವದಾ ಪ್ರಾರ್ಥನೆ ಮಾಡುತ್ತಿರಬೇಕು. ‘ಹೇ ಪ್ರಭು, ನಿನ್ನ ಭುವನಮೋಹಿನೀ ಮಾಯೆಯಿಂದ ನನ್ನನ್ನು ಮೋಹ ಮೂರ್ಛಿತನನ್ನಾಗಿ ಮಾಡಬೇಡ. ನಿನ್ನ ಶ್ರೀ ಪಾದಪದ್ಮದಲ್ಲಿ ಶುದ್ಧ ಭಕ್ತಿ ಮೂಡುವಂತೆ ಕೃಪೆಮಾಡು, ನನ್ನ ಮಾನವ ಜನ್ಮ ಧನ್ಯವಾಗಲಿ!’ ಎಂದು.

“ಅವನೊಮ್ಮೆ ಮೊಗವೆತ್ತಿ ತನ್ನ ಕೃಪಾಕಟಾಕ್ಷವನ್ನು ಬೀರದಿದ್ದರೆ ಈ ಮಾಯೆಯನ್ನು ಅತಿಕ್ರಮಿಸಲು ಯಾರಿಗೆ ತಾನೆ ಸಾಧ್ಯ? ಚಂಡಿ ಹೇಳುತ್ತದೆ: ‘ಸೈಷಾ ಪ್ರಸನ್ನಾ ವರದಾ ನೃಣಾಂ ಭವತಿ ಮುಕ್ತಯೇ.’ ಮುಕ್ತಿಯನ್ನು ಕೊಡುವವಳು ಪ್ರಸನ್ನೆಯೂ ವರದೆಯೂ ಆಗಿರುವ ತಾಯಿಯೆ. ಅಂದರೆ ತಾಯಿ ನಮ್ಮ ಪ್ರಾರ್ಥನಾದಿಗಳಿಂದ ಸಂತುಷ್ಟೆಯಾಗಿ ಮನುಷ್ಯನಿಗೆ ಮುಕ್ತಿಯನ್ನು ದಯಪಾಲಿಸುತ್ತಾಳೆ. ಆಗಲೆಯೆ ಜೀವ ಮಾಯಾಮುಕ್ತವಾಗಿ ಅದಕ್ಕೆ ಶಿವತ್ವ ಪ್ರಾಪ್ತವಾಗುತ್ತದೆ. ಅವಳ ದಯೆ ಇಲ್ಲದಿದ್ದರೆ ಈ ಮಾಯಾ ಬಂಧನದಿಂದ ಬಿಡುಗಡೆ ಹೊಂದುವುದು ಬಹಳ ಕಠಿನ. ಆದರೆ ಇದೂ ಸತ್ಯ; ಯಾರು ಹಂಬಲಿಸಿ ಹಲುಬಿ ಹೃತ್ಪೂರ್ವಕವಾಗಿ ಪ್ರಾರ್ಥಿಸುತ್ತಾರೆಯೊ ಅವರ ಕರೆಗೆ ಓಗೊಟ್ಟು, ಅವರ ಮಾಯೆಯ ಆವರಣವನ್ನು ಸರಿಸಿಕೊಡುತ್ತಾಳೆ. ನೀನು ಸಂಸಾರದಲ್ಲಿ ಇದ್ದೀಯೆ. ಆದ್ದರಿಂದಲೆ ನಿನ್ನ ಪ್ರಾರ್ಥನೆಗೆ ಮೊರೆಗೆ ಹೆಚ್ಚಾಗಿ ಕಿವಿಗೊಡುತ್ತಾಳೆ. ಸಂಸಾರಿಗಳ ಮೇಲೆ ಆಕೆಯ ಕೃಪೆ ವಿಶೇಷ. ಏಕೆಂದರೆ ಆಕೆಗೂ ಗೊತ್ತು, ನಿಮ್ಮ ತಲೆಯ ಮೇಲೆ ಎಷ್ಟು ಮಣದ ಭಾರ ಹೊರಿಸಿದ್ದಾಳೆ ಎಂದು. ಸಂಸಾರದ ದುಃಖ ತಲೆಯ ಮೇಲೆ ಎಷ್ಟು ಮಣದ ಭಾರ ಹೊರಿಸಿದ್ದಾಳೆ ಎಂದು. ಸಂಸಾರದ ದುಃಖ ಕಷ್ಟಗಳ ಬೆಂಕಿಯಲ್ಲಿ ನೀವೂ ಬೇಯುತ್ತಿದ್ದೀರಿ. ಆದ್ದರಿಂದಲೆ ನೀವೊಂದಿಷ್ಟು ಪ್ರಾರ್ಥನೆ ಮಾಡಿದರೆ ಸಾಕು, ಮೊರೆಯಿಟ್ಟರೆ ಸಾಕು, ಅವಳು ಸಂತುಷ್ಟೆಯಾಗುತ್ತಾಳೆ. ಮೊರೆಗೇಳಿ, ಅಯ್ಯೋ ಪಾಪ ಎಂದು, ದೌಡಾಯಿಸಿ ಬಂದು ನಿಮ್ಮ ಹೆಗಲ ಹೊರೆಯನ್ನು ಇಳಿಸುತ್ತಾಳೆ. ಆದರೆ ನಿಮ್ಮ ಮೊರೆ, ಪ್ರಾರ್ಥನೆ ಅಂತಃಕರಣ ಪೂರ್ವಕವಾಗಿರಬೇಕು.

ಸಂಸಾರದಲ್ಲಿ ಕೆಲಸಕಾರ್ಯಗಳೂ ಹೊರೆಹೊಣೆಗಳೂ ಬಹಳ ಇರುತ್ತವೆ. ಈ ಸೃಷ್ಟಿ ಎಲ್ಲಿಯವರೆಗೆ ಇರುತ್ತದೆಯೊ ಅಲ್ಲಿಯವರೆಗೆ ಹೊರೆ ಹೊಣೆ ಕೆಲಸ ಕಾರ್ಯ ಇದ್ದೇ ಇರುತ್ತದೆ. ಆದರೆ ಅದೆಲ್ಲದರ ನಡುವೆ ಸ್ವಲ್ಪ ಸಮಯ ಮಾಡಿ ಕೊಂಡು ಏಕಾಂತದಲ್ಲಿ ತಾಯಿಗೆ ಮೊರೆಯಿಡಬೇಕು. ಹಾಗೆ ಮಾಡದೆ ಇದ್ದರೆ ತುಂಬ ವಿಪತ್ತಿಗೆ, ಸಂಕಟಕ್ಕೆ ಈಡಾಗಬೇಕಾಗುತ್ತದೆ. ತಾಯಿಯನ್ನು ಹಿಡಿದುಕೊಂಡೇ ಸಂಸಾರದಲ್ಲಿ ತೊಡಗಿದ್ದರೆ ಹೆಚ್ಚೇನೂ ಅಪಾಯವಿರುವುದಿಲ್ಲ. ಏನೇ ಕೆಲಸವಿರಲಿ, ಅದರ ಮಧ್ಯೆಯೆ ಭಗವಂತನ ಸ್ಮರಣ ಮನನ ಮಾಡಲೇಬೇಕು. ಒಂದು ಕೈಯಿಂದ ಅವನ ಶ್ರೀಪಾದಪದ್ಮವನ್ನು ಕ್ಷಣಮಾತ್ರವೂ ಬಿಡದೆ ಹಿಡಿದುಕೊಂಡಿರು, ಇನ್ನೊಂದು ಕೈಯಿಂದ ಸಂಸಾರದ ಕೆಲಸಕಾರ್ಯ ನಡೆಸು. ಕೆಲಸ ಕಾರ್ಯ ಎಲ್ಲ ಮುಗಿದಮೇಲೆ ಎರಡೂ ಕೈಯಿಂದಲೂ ಆ ಶ್ರೀಚರಣವನ್ನು ಬಲವಾಗಿ ಹಿಡಿದುಕೊ, ಬಿಗಿಯಾಗಿ ಎದೆಗಪ್ಪಿಕೊ.

* * *