ಜ್ಯೇಷ್ಠಮಾಸ. ತುಂಬ ಸೆಕೆಯಾಗಿತ್ತು. ಮಹಾಪುರುಷಜಿಗೆ ರಾತ್ರಿ ಸರಿಯಾಗಿ ನಿದ್ರೆಯೆ ಬರುತ್ತಿರಲಿಲ್ಲ. ಆ ಕಾರಣದಿಂದ ಅವರಿಗೆ ಬೆಳಗಿನ ಹೊತ್ತು ತುಂಬ ತೊಂದರೆಯಾಗುತ್ತಿತ್ತು. ಹಾಸಿಗೆಯ ಮೇಲೆ ಕುಳಿತುಕೊಂಡೆ ಬಂದವರೊಡನೆ ಮಾತುಕತೆ ನಡೆಸುತ್ತಿದ್ದರು. ಇವತ್ತು ಪ್ರಾತರುಪಾಹಾರವನ್ನು ಪೂರೈಸಿ ಉಪ್ಪರಿಗೆಯ ವರಾಂಡದಲ್ಲಿಯೆ ಕೊಂಚ ಅತ್ತ ಇತ್ತ ಅಡ್ಡಾಡಿದರು. ನಡೆದಾಡುವುದೂ ಅವರಿಗೆ ತುಂಬಾ ಕಷ್ಟಕರವಾಗಿತ್ತು; ಆದರೂ ಸ್ವಲ್ಪ ಅಭ್ಯಾಸ ಬಿಡಬಾರದು ಎನ್ನುವುದಕ್ಕಾಗಿ ಹಾಗೆ ಮಾಡುತ್ತಿದ್ದರು. ತುಸು ಹೊತ್ತಿನಲ್ಲಿಯೆ ತುಂಬ ಬಳಲಿ ಒಂದು ಕುರ್ಚಿಯ ಮೇಲೆ ಕುಳಿತುಕೊಂಡರು. ಆಮೇಲೆ ಮಲಗಿ ವಿಶ್ರಾಂತಿ ತೆಗೆದುಕೊಳ್ಳಲು ತಮ್ಮ ಕೊಠಡಿಯ ಕಡೆಗೆ ಮೆಲ್ಲಗೆ ನಡೆಯತೊಡಗಿದರು. ತುಂಬ ನಿಧಾನವಾಗಿ ಹೆಜ್ಜೆಯಿಡುತ್ತಾ, ಪಕ್ಕದಲ್ಲಿರುವವರಿಗೆ ನಗುತ್ತಾ ಹೇಳಿದರು ಹೆಜ್ಜೆ ಹೆಜ್ಜೆಗೂ: “ತಿಪ್ಪಾ! ತಿಪ್ಪಾ! ತಿಪ್ಪಾ!”

ಹಾಸಿಗೆಗೆ ಹಿಂದಿರುಗಿದ ಮೇಲೆ ಹೇಳತೊಡಗಿದರು:

“ನೋಡಿದೆಯಾ ದೇಹ ಯಾವ ಅವಸ್ಥೆಗೆ ಬಂದಿದೆ? ಎರಡು ಹೆಜ್ಜೆ ಹಾಕುವುದು ನನಗೆ ಕಷ್ಟವಾಗುತ್ತದೆ. ಒಂದೇ ಸಾರಿಗೆ ಇನ್‌ವ್ಯಾಲಿಡ್ (ನಿತ್ಯರೋಗಿ) ಆಗಿಬಿಟ್ಟಿದ್ದೇನೆ. ಎಲ್ಲ ಮಹಾಮಾಯೆಯ ಆಟ. ಇದೇ ನನ್ನ ದೇಹ ಎಷ್ಟೋ ಸಾರಿ ಬೆಟ್ಟ ಏರಿದೆ, ಬೆಟ್ಟ ಇಳಿದಿದೆ. ಅದೂ ಕಾಲುನಡಿಗೆಯಲ್ಲಿಯೆ! ಇದೇ ದೇಹ ಎಷ್ಟು ಕಠೋರತೆಯನ್ನು ಸಹಿಸಲಿಲ್ಲ! ಈಗ ನೋಡಿದೆಯಾ ಎರಡು ಹೆಜ್ಜೆ ನಡೆಯುವುದಕ್ಕೂ ಕಷ್ಟವಾಗುತ್ತಿದೆ! ಉಪ್ಪರಿಗೆ ಇಳಿದು ಹೋಗಿಯೇ ಎಷ್ಟೋ ಕಾಲವಾಗಿಬಿಟ್ಟಿದೆ! ಹಿಂದೆ ಎಷ್ಟು ಅಲೆದಾಡಿದೆ, ಎಷ್ಟು ಜಾಗಗಳನ್ನು ನೋಡಿದೆ! ಶ್ರೀ ಗುರುಮಹಾರಾಜರ ಇಚ್ಛೆಯಿಂದ ಬೇಕಾದಷ್ಟು ಸುತ್ತಿದ್ದೇನೆ: ಈಗ ಇನ್ನೆಲ್ಲಿಗೂ ಹೋಗುವ ಆಸೆಯಿಲ್ಲ. ಅಲ್ಲಿಗಿಲ್ಲಿಗೆ ಹೋಗಿಬರುವ ಆಸೆಯ ವಾಸನೆಯನ್ನು ಕೂಡ ಬೇರು ಸಹಿತ ಕಿತ್ತು ಹಾಕಿಬಿಟ್ಟಿದ್ದಾರೆ ಶ್ರೀಗುರು. ಈಗ ಅಂತಹ ಆಸೆಯ ಯಾವ ವಾಸನೆಯೂ ನನ್ನಲ್ಲಿಲ್ಲ. ಶ್ರೀಠಾಕೂರರು ಯಾವ ಸ್ಥಿತಿಯಲ್ಲಿ ನನ್ನನ್ನಿರಿಸುತ್ತಾರೆಯೊ ಆ ಸ್ಥಿತಿಯಲ್ಲಿಯೆ ನನಗೆ ಆನಂದ. ಹೊರಗಿನ ಆಕ್ಟಿವಿಟಿ (ಕರ್ಮವ್ಯಾಪರ) ಕಡಿಮೆಯಾದಂತೆಲ್ಲ ಒಳಗಿನ ಆಕ್ಟಿವಿಟಿ ಹೆಚ್ಚುತ್ತಾ ಇದೆ. ಹೊರಗಿನ ಜಗತ್ತಿನಿಂದ ಮನಸ್ಸು ಹಿಂತಿರುಗಿದಂತೆಲ್ಲ ಒಳಗಿನ ಜಗತ್ತಿನಲ್ಲಿ ಹೆಚ್ಚು ಹೆಚ್ಚಾಗಿ ಮುಂದುವರಿಯುತ್ತಿದೆ. ಅಲ್ಲದೆ ಈ ದೇಹ ಮನಸ್ಸು ಬುದ್ಧಿ ಇವುಗಳಿಗೆಲ್ಲ ಅತೀತವಾಗಿರುವ ತತ್ತ್ವವಸ್ತುವನ್ನೂ ಠಾಕೂರರು ಕೃಪೆಯಿಟ್ಟು ನನಗೆ ತೋರಿಸುತ್ತಿದ್ದಾರೆ. ಈಗ ಒಳಗೆಯೆ ಪ್ರಾಣಶಕ್ತಿಯ ಕ್ರಿಯೆ ವಿಶೇಷವಾಗಿ ನಡೆಯುತ್ತಿದೆ. ಶಾಸ್ತ್ರಗಳಲ್ಲಿ ಯಾವ ಎಲ್ಲ ಅನುಭೂತಿಗಳ ವಿಚಾರ ಉಲ್ಲೇಖವಾಗಿದೆಯೊ ಆ ಎಲ್ಲವನ್ನೂ ಪ್ರಭು ಕೃಪೆಯಿಟ್ಟು ನನ್ನ ಅನುಭವಕ್ಕೆ ಸ್ಪಷ್ಟ ಮಾಡಿ ತಂದು ಕೊಡುತ್ತಿದ್ದಾನೆ.”

“ನಾನು ಶರೀರ ಅಲ್ಲ; ಷಟ್ ವಿಕಾರಗಳೆಲ್ಲ ಶರೀರಕ್ಕೆ ಸಂಬಂಧಪಟ್ಟುವು. ನಾನಾದರೊ ನಿತ್ಯ – ಶುದ್ಧ – ಬುದ್ಧ – ಮುಕ್ತಸ್ವಭಾವನಾದ ಆ ಸನಾತನ ಪರಮ ಪುರುಷ. ಶ್ರೀ ಗುರು ಕೃಪೆಯಿಂದ ಆ ಜ್ಞಾನವನ್ನು ಸಂಪೂರ್ಣವಾಗಿ ಕೊಟ್ಟಿದ್ದಾರೆ. ತುಂಬ ಹಣ್ಣುಮಾಡಿ ಕೊಟ್ಟುಬಿಟ್ಟಿದ್ದಾರೆ. ಆದ್ದರಿಂದಲೆ ದೇಹದ ಸುಖ, ಅಸುಖ, ಜರಾ, ವ್ಯಾಧಿ ಇತ್ಯಾದಿಗಳನ್ನು ಒಂದುನಿತೂ ಮನಸ್ಸಿಗೆ ಹಾಕಿಕೊಳ್ಳುವುದೆ ಇಲ್ಲ, ದೇಹದ ಧರ್ಮ ದೇಹಕ್ಕೆ. ಹಿಂದೆ ಯಾವ ಜ್ಞಾನ ಮತ್ತು ಅನುಭವಗಳನ್ನು ಪ್ರಯತ್ನಪೂರ್ವಕವಾಗಿ ಮಾತ್ರವೆ ಪಡೆಯುತ್ತಿದ್ದೆನೊ ಅವು ಈಗ ಯಾವ ಪ್ರಯತ್ನವೂ ಇಲ್ಲದೆ ಸಹಜವಾಗಿಯೆ ಅನುಭೂತವಾಗುತ್ತಿದೆ. ಶ್ರೀ ಠಾಕೂರರು ಆ ಎಲ್ಲ ಉಚ್ಚ ಉಚ್ಚ ಅನುಭೂತಿಗಳನ್ನು ಕೃಪೆತೋರಿ ನೀಡುತ್ತಿದ್ದಾರೆ. ಆ ಅಮೃತಧಾಮದ ಪಥವನ್ನು ಅವರು ಕೃಪೆಯಿಟ್ಟು ಪರಿಷ್ಕಾರ ಮಾಡಿ ಕೊಟ್ಟಿದ್ದಾರೆ. ದೇಶ, ಕಾಲ, ಪಾತ್ರ ಈ ಎಲ್ಲವೂ ಹೊರಗಡೆಯ ವಿಷಯಗಳು. ಮನಸ್ಸು ಸಮಾಹಿತವಾದಾಗ ಈ ಯಾವುದರ ಬೋಧವೂ ಸ್ವಲ್ಪ ಮಾತ್ರವೂ ಇರುವುದಿಲ್ಲ.”

“ನಾನು ಆಲ್ಮೋರದಲ್ಲಿ ಇದ್ದಾಗ ಹಿಮಾಲಯದ ಅನೇಕ ಸುಂದರ ಸ್ಥಾನಗಳನ್ನು ನೋಡಿದೆ, ಅವು ನಿಜವಾಗಿಯೂ ಸಾಧನೆ ಭಜನೆ ದೃಷ್ಟಿಯಿಂದ ಅತ್ಯಂತ ಅನುಕೂಲವಾಗಿರುವ ಸ್ಥಾನಗಳೆ. ಅಲ್ಲಿಯ ಪ್ರಕೃತಿ ಸೌಂದರ್ಯವೂ ಎಣೆಯಿಲ್ಲದ್ದು. ಅಂತಹ ಜಾಗಗಳಲ್ಲಿಯೂ ಧ್ಯಾನಮಾಡುತ್ತಾ ಮಾಡುತ್ತಾ ನನಗೇನು ತೋರಿತೆಂದರೆ – ಮನಸ್ಸು ಯಾವಾಗ ಒಂದು ಸ್ವಲ್ಪ ಅಂತರ್ಮುಖವಾಗಲು ಆರಂಭವಾಗುತ್ತದೆಯೊ ಅವಾಗ ಮರಗಿಡ ಬಿಟ್ಟ ಗುಡ್ಡ ಚಳಿಸೆಕೆ ಆ ಎಲ್ಲದರ ಬೋಧವೂ ಅಳಿಸಿ ಹೋಗುತ್ತದೆ. ಶರೀರವೂ ಇದೆಯೊ ಇಲ್ಲವೊ ಆ ಜ್ಞಾನವೂ ಇರುವುದಿಲ್ಲ ಎಂದಮೇಲೆ ಇನ್ನುಳಿದ ಬಾಹ್ಯಿಕ ವಿಷಯಗಳ ವಿಚಾರ ಹೇಳುವುದೇನು.”

“ಆ ಅನಂತ ಸೌಂದರ್ಯದ ಆಕರವಾದ ಪ್ರೇಮಘನ ಭಗವಂತನ ಶ್ರೀಚರಣದಲ್ಲಿ ಮನಸ್ಸು ಒಮ್ಮೆಲೀನವಾಯಿತೆಂದರೆ ಆಗ ಈ ಎಲ್ಲ ಹೊರಗಿನ ಸೌಂದರ್ಯಕ್ಕೆ ಅಲ್ಲಿ ಸ್ಥಳವೆಲ್ಲಿರುತ್ತದೆ? ಅಲ್ಲದೆ ಈ ಬಾಹ್ಯದಲ್ಲಿ ಆನಂದವೂ ಲಭಿಸುವುದಿಲ್ಲ. ಆ ಭೂಮಾನಂದದ ಆಸ್ವಾದ ಒಮ್ಮೆ ಆಯಿತೆಂದರೆ ಜಾಗತಿಕವಾದ ಈ ಎಲ್ಲ ಆನಂದವೂ ತುಚ್ಛ ಎಂದು ಬೋಧವಾಗುತ್ತದೆ. ‘ಯೋ ವೈ ಭೂಮಾ ತತ್ಸುಖಂ ನಾಲ್ಪೇ ಸುಖಮಸ್ತಿ, ಭೂಮೈವ ಸುಖಂ’ – ‘ಯಾವುದು ಭೂಮವೇ ಸುಖ’ ಆ ವಿರಾಟ್ ಭಗವಂತನ ಒಂದು ಅಂಶದಲ್ಲಿಯೆ ಈ ಜಗತ್ ಸಂಸಾರ, ಚಂದ್ರ, ಸೂರ್ಯ, ಗ್ರಹ, ನಕ್ಷತ್ರ ಮತ್ತು ಈ ಲೋಕದ ಸೃಷ್ಟಿಯಲ್ಲಿರುವುದು, ಮತ್ತು ಇನ್ನುಳಿದೆಲ್ಲ ಅವ್ಯಕ್ತ, ಎಲ್ಲವೂ ಇವೆ. ‘ಪಾದೋ-ಸ್ಯ ವಿಶ್ವಭೂತಾನಿ ತ್ರಿಪಾದ ಸ್ಯಾಮೃತಂ ದಿವಿ.’ ಅವನನ್ನು ಯಾರೂ ಯಾವಾಗಲೂ ಅರಿಯಲು ಸಮರ್ಥರಾಗಿಲ್ಲ; ಮುಂದೆಯೂ ಅರಿಯಲಾರರು. ಮಾನುಷ ಕ್ಷುದ್ರ ಮನ ಬುದ್ಧಿಯಿಂದ ಆ ವಿರಾಟ್ ಭಗವಂತನನ್ನು ಅರಿಯುವುದು ಹೇಗೆ? ಆದ್ದರಿಂದಲೆ ಭಗವಂತ ಗೀತೆಯಲ್ಲಿ ಹೇಳಿದ್ದಾನೆ.”

ಅಥವಾ ಬಹುನೈತೇನ ಕಿಂ ಜ್ಞಾತೇನ ತವಾರ್ಜುನ |
ವಿಷ್ಠಭ್ಯಾಹಮಿದಂ ಕೃತ್ಸ್ನ ಮೇಕಾಂಶೇನ ಸ್ಥಿತೋ ಜಗತ್ ||

“ಅಥವಾ, ಹೇ ಅರ್ಜುನ, ಈ ಅಸಂಖ್ಯ ವಸ್ತುವಿವರಗಳನ್ನು ತಿಳಿಯುವುದರಿಂದ ನಿನಗೇನು ಪ್ರಯೋಜನ? ಒಂದೇ ಮಾತಿನಲ್ಲಿ ಹೇಳುವುದಾದರೆ ನಾನೇ ಈ ಸಮಗ್ರ ಜಗತ್ತನ್ನೂ ನನ್ನ ಒಂದು ಅಂಶದಿಂದಲೆ ಧಾರಣಮಾಡಿ ಇದ್ದೇನೆ.”

‘ಏಕಾಂಶೇನ’ – ಈ ಏಕಾಂಶದಲ್ಲಿ ಏನಿದೆಯೋ ಅದನ್ನೇ ಮನುಷ್ಯ ತಿಳಿವಳಿಕೆಗೆ ತಂದುಕೊಳ್ಳಲಾರ; ಇನ್ನು ಉಳಿದಿದ್ದು ದೂರದ ಮಾತು. ನಿಜ, ಈಗೀಗ ಪಾಶ್ಚಾತ್ಯ ವಿಜ್ಞಾನ ಮುಂದುವರಿದಂತೆಲ್ಲ ಹೊಸ ಹೊಸ ತತ್ತ್ವಗಳು ಅನೇಕವಾಗಿ ಆವಿಷ್ಕೃತವಾಗುತ್ತಿವೆ. ವೈಜ್ಞಾನಿಕರು ಸೂಕ್ಷ್ಮ ಸಂಶೋಧನೆಗಳ ಮುಖಾಂತರ ಕಂಡುಹಿಡಿದಿರುವ ತಮ್ಮ ನೂತನ ಯಂತ್ರಗಳ ಸಹಾಯದಿಂದ ಎಷ್ಟೋ ಹೊಸ ಹೊಸ ಗ್ರಹನಕ್ಷತ್ರಾದಿಗಳು ದೃಷ್ಟಿ ಗೋಚರವಾಗುವಂತೆ ಮಾಡಿದ್ದಾರೆ. ಆದರೆ ಅರಿಯಬೇಕಾದ ತತ್ತ್ವಗಳು ಇನ್ನೆಷ್ಟೋ ಇವೆ; ಅವುಗಳ ಎತ್ತರ ಬಿತ್ತರ ಆಳಗಳನ್ನು ಗೊತ್ತು ಹಚ್ಚುವ ಗಡಿಬಿಡಿಯಲ್ಲಿ ವೈಜ್ಞಾನಿಕರೇ ದಿಗ್‌ಭ್ರಾಂತರಾಗುತ್ತಿದ್ದಾರೆ. ಆದರೆ ಯಂತ್ರಾದಿಗಳ ನೆರವಿನಿಂದ ಏನನ್ನು ಕಂಡಿದ್ದಾರೋ ಅದನ್ನು ಅಭ್ರಾಂತವೆಂದೂ ಹೇಳುವಂತಿಲ್ಲ. ಹತ್ತು ವರ್ಷದ ಹಿಂದೆ ಒಂದು ತರಹ ಹೇಳಿದ್ದರು: ಇಂದು  ಹತ್ತು ವರ್ಷದ ಮೇಲೆ ಮತ್ತೊಂದು ತರಹ ಹೇಳುತ್ತಿದ್ದಾರೆ. ಅದಕ್ಕಾಗಿಯೆ ಶ್ರೀಗುರು ಹೇಳುತ್ತಿದ್ದರು: ‘ತಾಯೀ, ನಿನ್ನನ್ನು ಅರಿಯುವ ಗೊಡವೆ ನನಗೆ ಬೇಡ. ನಿನ್ನನ್ನು ಯಾವಾಗ ಯಾರು ತಾನೆ ಅರಿತಿದ್ದರು? ಅರಿಯುತ್ತಾರೆ? ಆದರೆ ಇಷ್ಟು ಮಾಡು: ನಿನ್ನ ಭುವನ ಮೋಹಿನೀ ಮಾಯೆಯಿಂದ ನಾನು ಮುಗ್ಧನಾಗದಂತೆ, ನಿನ್ನ ಶ್ರೀಪಾದಪದ್ಮದಲ್ಲಿ ಶುದ್ಧಭಕ್ತಿ ದೊರೆಯುವಂತೆ.’ ಜೀವನದ ಉದ್ದೇಶವೂ ಅದೆತಾನೆ, – ಹೇಗಾದರೂ ಮಾಡಿ ನಮ್ಮ ಮನಸ್ಸು ತಾಯಿಯ ಶ್ರೀಪಾದಪದ್ಮದ ಕಡೆಗೇ ತಿರುಗುವಂತೆ ಮಾಡಿಕೊಳ್ಳುವುದು. ಒಮ್ಮೆ ಆಕೆಯ ಶ್ರೀಪಾದಪದ್ಮದಲ್ಲಿ ಮನಸ್ಸು ಲೀನವಾಯಿತೆಂದರೆ ಆಮೇಲೆ ಭಯ ಇಲ್ಲ.

ಯಂ ಲಬ್ಧ್ವಾ ಚಾಪರಂ ಲಾಭಂ ಮನ್ಯತೇ ನಾಧಿಕಂ ತತಃ |
ಯಸ್ಮಿನ್ ಸ್ಥಿತೋ ನ ದುಃಖೇನ ಗುರುಣಾಪಿ ವಿಚಾಲ್ಯತೇ ||

ಅಂತಹ ಶುದ್ಧ ಭಕ್ತಿ, ಶುದ್ಧ ಜ್ಞಾನ ಆಕೆಯ ಕೃಪೆಯಿಲ್ಲದೆ ದೊರೆಯುವುದಿಲ್ಲ. ಆದ್ದರಿಂದ ಅವಳೇ ಕೃಪೆಯಿಂದ ಭಕ್ತಿ ಜ್ಞಾನಗಳನ್ನು ದಯಪಾಲಿಸುತ್ತಾಳೆ; ಅಂತಃಕರಣಪೂರ್ವಕವಾಗಿ ಶರಣಾಗತರಾಗಿದ್ದರೆ ಅವಶ್ಯವಾಗಿಯೆ ಆಕೆ ಕೃಪೆದೋರುತ್ತಾಳೆ. ಪ್ರಪಂಚವನ್ನೆಲ್ಲ ಅಲೆದಲೆದು ಸುತ್ತು, ತೀರ್ಥಕ್ಷೇತ್ರಗಳನ್ನೆಲ್ಲ ಪರ್ಯಟನಮಾಡು, ಅಂತೂ ಆಕೆಯ ಕೃಪೆಯಿಲ್ಲದೆ ಹೋದರೆ ಏನೂ ಆಗುವುದಿಲ್ಲ. ಮಠದ ಹುಡುಗರಿಗೂ ಅದನ್ನೇ ಹೇಳುತ್ತೇನೆ. ಅವರು ಇಲ್ಲಿಗೆ ಹೋಗಬೇಕು, ಅಲ್ಲಿಗೆ ಹೋಗಬೇಕು ಎಂದು ಹಟಹಿಡಿದಾಗ, ‘ವತ್ಸರಿರ, ಸುಮ್ಮನೆ ಇಲ್ಲಿ ಅಲ್ಲಿ ಏಕೆ ಸುತ್ತುತ್ತೀರಿ? ಶರಣಾಗತರಾಗಿ ಶ್ರೀಠಾಕೂರರ ಬಾಗಿಲಲ್ಲಿಯೆ ಇರಿ; ಮತ್ತೆ ಇನ್ನೇನು ಮಾಡುವುದೂ ಅವಶ್ಯಕವಿಲ್ಲ. ಬೇಕಾದ್ದೊಂದೇ – ಆಂತರಿಕ ಶರಣಾಗತಿ.’ ನಾವು ಕೂಡ ಸಂಪೂರ್ಣಶರಣಾಗತರಾಗಿಬಿಟ್ಟೆ ಇದ್ದೇವೆ. ನಮಗೆ ಅವರು ಕೃಪೆಯಿಟ್ಟು ಎಲ್ಲವನ್ನೂ ಕೊಟ್ಟಿದ್ದಾರೆ, ಇನ್ನೂ ಕೊಡುತ್ತಲೂ ಇದ್ದಾರೆ. ನಾನು ಹೃತ್ಪೂರ್ವಕವಾಗಿ ಪ್ರಾರ್ಥಿಸುತ್ತೇನೆ. ಸರ್ವರಿಗೂ ಆ ಪೂರ್ಣಜ್ಞಾನ, ಪೂರ್ಣಭಕ್ತಿ ಸಂಪೂರ್ಣವಾಗಿ ಲಭಿಸಲಿ!”

ಕಣ್ಣು ಮುಚ್ಚಿಕೊಂಡು ಮುಗಿದ ಕೈಗಳನ್ನೆತ್ತಿ, ಗಂಭೀರವಾಗಿ, ಭಾವ ಪೂರ್ವಕವಾಗಿ ಹೇಳಿದರು: ‘ಯದ್ ಗತ್ವಾನ ನಿವರ್ತಂತೇ ತದ್ ಧಾಮ ಪರಮಂ ಮಮ!’ ಯಾವುದನ್ನು ಸೇರಿದ ಮೇಲೆ ಮರಳಿ ಬರುವುದಿಲ್ಲವೊ ಆ ಪರಮಧಾಮವೆ ನನ್ನದು!’

* * *