ಮೂರು ನಾಲ್ಕು ದಿನಗಳಿಂದಲೂ ಮಳೆ ಮುಸಲಧಾರೆಯಾಗಿ ಹೊಯ್ದು ಇವೊತ್ತು ಸ್ವಲ್ಪ ಹೊಳವಾಗಿ ಬಿಸಿಲು ತೋರಿಸಿಕೊಂಡಿದೆ. ಇವೊತ್ತು ಗುರುಪೂರ್ಣಿಮೆ. ಅನೇಕ ಭಕ್ತರು ಮಠಕ್ಕೆ ಬಂದಿದ್ದಾರೆ. ಕೆಲವರಿಗೆ ದೀಕ್ಷಾದಿಗಳೂ ನಡೆದಿವೆ. ಬೈಗಿನ ಹೊತ್ತು ಮಹಾಪುರುಷ ಮಹಾರಾಜರು ತಮ್ಮ ಕೊಠಡಿಯಲ್ಲಿ ಕುರ್ಚಿಯ ಮೇಲೆ ಕೂತುಕೊಂಡಿದ್ದರು.  ಪ್ರಣಾಮ ಸಲ್ಲಿಸಿ ಹೋಗಲು ಅನೇಕ ಭಕ್ತರು ಬಂದರು; ಎಲ್ಲರನ್ನೂ ಸಸ್ನೇಹ ಕುಶಲ ಪ್ರಶ್ನಾದಿಗಳಿಂದ ಹರಸಿದರು. ಕೊನೆಯಲ್ಲಿ ಆ ದಿನ ಹೊಸದಾಗಿ ದೀಕ್ಷೆ ತೆಗೆದುಕೊಂಡಿದ್ದ ಭಕ್ತರು ಕುಳಿತುಕೊಂಡರು. ಅವರಿಗೆ ತಾವು ಕೇಳಿ ತಿಳಿದುಕೊಳ್ಳಬೇಕಾಗಿದ್ದ ಕೆಲವು ಪ್ರಶ್ನೆಗಳಿದ್ದುವು. ಅವರಲ್ಲೊಬ್ಬರು “ಮಹಾರಾಜ್, ನಿತ್ಯವೂ ಎಷ್ಟು ಜಪ ಮಾಡಬೇಕು ಎಂಬ ವಿಚಾರದಲ್ಲಿ ಏನಾದರೂ ನಿರ್ದಿಷ್ಟ ನಿಯಮವಿದೆಯೆ?” ಎಂದು ಕೇಳಿದರು.

ಮಹಾಪುರುಷಜಿ: “ಇಲ್ಲ, ಅಂತಹ ನಿಯಮವೇನೂ ಇಲ್ಲ. ಎಷ್ಟು ಜಪ ಮಾಡಿದರೆ ಅಷ್ಟು ಒಳ್ಳೆಯದು. ಎಷ್ಟು ಹೆಚ್ಚು ಮಾಡಿದರೆ ಅಷ್ಟೂ ಮಂಗಳ. ಆದರೆ ಯಾರಿಗಾದರೂ ತಾನು ದಿನಕ್ಕೆ ಐದೋ ಹತ್ತೋ ಸಾವಿರ ಸಾರಿ ಜಪ ಮಾಡಬೇಕೆಂದು ಮನಸ್ಸಿದ್ದರೆ ಆತ ಆ ಸಂಖ್ಯಾನಿಷ್ಠೆಯಿಂದ ಹೃತ್ಪೂರ್ವಕವಾಗಿ ಜಪಮಾಡಲು ಸಮರ್ಥನಾದರೆ ಅದು ನಿಜವಾಗಿಯೂ ವಿಶೇಷ ಶ್ರೇಯಸ್ಕರವೆ.”

ಭಕ್ತ: “ದಾರಿಯ ಮೇಲೆ ನಡೆಯುತ್ತಾ ನಡೆಯುತ್ತಾ ಜಪಮಾಡಲು ಇಚ್ಛೆಯಾದರೆ ಮಾಡಬಹುದೆ?”

ಮಹಾಪುರುಷಜಿ: “ಅದಕ್ಕೇನಂತೆ? ಮಾಡಬಹುದು! ಜಪಮಾಡುವುದಕ್ಕೆ, ಭಗವಂತನ ನಾಮೋಚ್ಚಾರಣಮಾಡುವುದಕ್ಕೆ, ಯಾವಾಗ ಇಚ್ಛೆಯಾದರೆ ಆವಾಗ ಮಾಡಬಹುದು. ಅದಕ್ಕೆ ಕಾಲ ಅಕಾಲ ಇಲ್ಲ. ಸ್ಥಾನ ಆಸ್ಥಾನ ಇಲ್ಲ. ಆದರೆ ಭಕ್ತಿಯಿಂದ ಮಾಡಬೇಕು, ಅಷ್ಟೆ. ಆಗಲೆ ಆನಂದಾನುಭವವಾಗುವುದು, ಪ್ರಾಣದಲ್ಲಿ ಶಾಂತಿ ನೆಲಸುವುದು ಒಳಗಣಿಂದ ಜಪಮಾಡಬೇಕು ಎಂಬ ಆಶೆ ಯಾವಾಗ ಉಂಟಾಗುತ್ತದೆಯೋ ಹತ್ತು ನಿಮಿಷವಾಗಲಿ, ಅರ್ಧಗಂಟೆಯಾಗಲಿ, ಒಂದು ಗಂಟೆಯಾಗಲಿ, ಹೆಚ್ಚೆ ಆಗಲಿ, ಆವಾಗಲೆ ಜಪಮಾಡಬಹುದು. ಆದರೆ ಬಲಾತ್ಕರಿಸಬಾರದು. ಬಲಾತ್ಕಾರದಿಂದ ಜಪಮಾಡಿದರೆ ಅಷ್ಟು ಪರಿಣಾಮಕಾರಿಯಾಗುವುದಿಲ್ಲ. ಜಪ ಪ್ರೇಮಸಂಬಂಧಿಯಾದ್ದು. ಭಗವಂತನಿಗೂ ಭಕ್ತನಿಗೂ ಇರುವ ಸಂಬಂಧ ಅನುರಾಗರೂಪವಾದದ್ದು. ಬಲತ್ಕಾರಕ್ಕೂ ಅದಕ್ಕೂ ಬಹುದೂರ. ಆದರೆ ಪ್ರಾಣಭರದಿಂದ ಪ್ರಾರ್ಥನೆಯನ್ನೇನೋ ಮಾಡಬೇಕು; ‘ಹೇ ಪ್ರಭೂ, ನನ್ನನ್ನು ನಿನ್ನವನನ್ನಾಗಿ ಮಾಡಿಕೋ. ನನಗೆ ಅರಿವಿಲ್ಲ; ನಿನ್ನನ್ನು ಹೇಗೆ ಒಲಿಸಬೇಕೋ ಅದನ್ನೂ ಅರಿಯೆ. ನೀನೇ ಕೃಪೆಮಾಡಿ ನನ್ನನ್ನು ನಿನ್ನೆಡೆಗೆ ಎಳೆದುಕೊ; ನಿನ್ನನ್ನು ಒಳಿಸುವುದು ಹೇಗೆ ಎಂಬುದನ್ನು ಕಲಿಸು.”

ಇನ್ನೊಬ್ಬ ನವದೀಕ್ಷಿತರಾದ ಭಕ್ತರು ಕೇಳಿದರು: “ಮಹಾರಾಜ್, ನಾವು ಪ್ರಾಣಾಯಾಮವನ್ನೂ ಅಭ್ಯಾಸಮಾಡಬೇಕೇನು?”

ಮಹಾಪುರುಷಜಿ: “ಪ್ರಾಣಾಯಾಮ ಮಾಡಬೇಕೆಂದು ನಾವು ಯಾರಿಗೂ ಹೇಳುವುದಿಲ್ಲ. ಅದು ಆವಶ್ಯಕವೂ ಇಲ್ಲ.”

ಭಕ್ತ: “ಪ್ರಾಣಾಯಾಮ ಸಂಬಂಧವಾಗಿ ನೀವು ಬರೆದ ಲೇಖನದಲ್ಲಿ ಭಗವಂತನ ನಾಮೋಚ್ಚಾರಣೆ ಮಾಡುವಾಗ ವಾಯುರೋಧವಾಗುತ್ತದೆ ಎಂದು ಹೇಳಿದ್ದೀರಿ.”

ಮಹಾಪುರುಷಜಿ: “ಹೌದು, ಅದೇನೊ ಆಗುತ್ತದೆ; ಪ್ರೇಮಪೂರ್ವಕವಾಗಿ ಭಗವನ್ನಾಮೋಚ್ಚಾರಣೆ ಮಾಡುತ್ತಿರುವಾಗ ಮನಸ್ಸು ಕ್ರಮೇಣ ಸ್ಥಿರವಾಗಿ ಪ್ರಾಣಾಯಾಮ ತನಗೆ ತಾನಾಗಿಯೆ ನಡೆಯುತ್ತದೆ. ಅಲ್ಲದೆ ನಿನಗೆ ಹಾಗೆ ಮನಸ್ಸಾದರೆ ಜಪದ ಮಧ್ಯೆ ಜೊತೆಜೊತೆಗೆ ವಾಯುಧಾರಣವನ್ನು ಅಭ್ಯಸಿಸಬಹುದು. ಆದರೆ ರೇಚಕ ಕುಂಭಕ ಪೂರಕ ಎಂದು ರಾಜಯೋಗದಲ್ಲಿ ಹೇಳಿರುವುದನ್ನೆಲ್ಲ ಮಾಡಬೇಕಾದ ಅಗತ್ಯವೇನೂ ಇಲ್ಲ. ನಿಜವಾಗಿಯೂ ಬೇಕಾದ್ದೆಂದರೆ ಪ್ರೇಮ ಮತ್ತು ಹೃತ್ಪೂರ್ವಕತೆ. ಭಗವಂತನು ಸತ್ಯಸ್ವರೂಪ ಮತ್ತು ಅಂತರ‍್ಯಾಮಿ. ಎಲ್ಲರ ಹೃದಯದಲ್ಲಿಯೂ ಅವನೇ ಚೈತನ್ಯರೂಪದಲ್ಲಿ ಇದ್ದಾನೆ, ಅಹೈತುಕೀ ಕೃಪಾಸಿಂಧು. ಅವನ ಕೃಪೆಯಾಗದೆ, ಅಯ್ಯಾ, ಯಾವುದು ನೆರವಾಗುವುದಿಲ್ಲ ಜಪಮಾಡು, ಧ್ಯಾನಮಾಡು, ಪ್ರಾಣಯಾಮಮಾಡು, ಯಾಗ ಯಜ್ಞ ಏನು ಬೇಕಾದರೂ ಮಾಡು. ಯಾವುದರಿಂದಲೂ ಏನೂ ಆಗುವುದಿಲ್ಲ, ಅವನ ಕೃಪೆಯಾಗುವವರೆಗೆ. ಆದರೆ ಇದು ಸತ್ಯ, ಯಾರಿಗೆ ಭಗವಂತನು ನಿಜವಾಗಿಯೂ ಬೇಕಾಗುತ್ತಾನೆಯೋ ಅವನಿಗೆ ಕೃಪೆದೋರಿ ದರ್ಶನ ಕೊಡುತ್ತಾನೆ.”

ಭಕ್ತ: “ಸಂಧ್ಯಾ, ಗಾಯತಿ, ಇದನ್ನೆಲ್ಲ ಮಾಡಬೇಕೆ?”

ಮಹಾಪುರುಷಜಿ: “ಸಂಧ್ಯಾ, ಗಾಯತ್ರಿ ಅವೆಲ್ಲ ವೈದಿಕ ವ್ಯಾಪಾರ. ಅದನ್ನೆಲ್ಲ ಮಾಡಿದರೆ ಬಹಳ ಒಳ್ಳೆಯದೆ. ಒಂದು ವೇಳೆ ಸಂಧ್ಯಾ ಅನುಷ್ಠಾನ ಮಾಡಲು ಏನಾದರೂ ಅನಾನುಕೂಲವಿದ್ದರೆ ಬಿಟ್ಟರೂ ಬಿಡಬಹುದು. ಆದರೆ ಗಾಯತ್ರೀ ಜಪವನ್ನು ಮಾತ್ರ ಆವಶ್ಯಕವಾಗಿ ಮಾಡಲೇಬೇಕು. ಗಾಯತ್ರಿ ಒಂದು ಅತಿ ಉಚ್ಚಾಂಗದ ಉಪಾಸನೆ. ಅದು ಭೂರ್ಭುವಃ ಸ್ವಃ ಇತ್ಯಾದಿ ಲೋಕಗಳನ್ನು ಪ್ರಸರಮಾಡಿದ ಆದಿಪುರುಷನಿಗೆ ನಾವು ಸಲ್ಲಿಸುವ ಪ್ರಾರ್ಥನೆ, ನಮಗೆ ಸದ್ಬುದ್ಧಿ ದಯಪಾಲಿಸಲಿ ಎಂದು.”

ಕ್ರಮಕ್ರಮವಾಗಿ ಭಕ್ತರೆಲ್ಲ ಒಬ್ಬೊಬ್ಬರಾಗಿ ಕೊಠಡಿಯಿಂದ ಹೊರಟು ಹೋದರು; ಹೊಸದಾಗಿ ದೀಕ್ಷೆ ತೆಗೆದುಕೊಂಡ ಒಬ್ಬರು ಮಾತ್ರ ಕುಳಿತೇ ಇದ್ದರು. ಏನೋ ಗೋಪನೀಯವಾದ ಸ್ವಂತ ವಿಚಾರವನ್ನು ಹೇಳಬೇಕೆಂದು ಅವರ ಆಸೆ. ಮಹಾಪುರುಷಜಿ ಒಬ್ಬರೆ ಇರುವುದು ನೋಡಿಕೊಂಡು ಆ ಭಕ್ತರು ಸಕರುಣ ಭಾವದ ಮೃದುಸ್ವರದಿಂದ ತಮ್ಮ ಹೃದಯಕಥೆಯನ್ನು ಬಿನ್ನವಿಸಿದರು: “ಮಹಾರಾಜ್, ನಾನು ಜೀವನದಲ್ಲಿ ಅನೇಕ ನೀಚಕಾರ್ಯಗಳನ್ನು ಮಾಡಿದ್ದೇನೆ. ನಾನು ಮಹಾಪಾಪಿ. ತಾವು ಕೃಪೆದೋರಿ ತಮ್ಮ ಚರಣದಲ್ಲಿ ಸ್ಥಾನ ಕೊಡಬೇಕು; ಕೃಪೆಮಾಡಬೇಕು; ಇಲ್ಲದೆ ಇದ್ದರೆ ನನ್ನ ಗತಿ ಏನಾಗುವುದೋ? ನನಗೆ ಹೆದರಿಕೆಯಾಗುತ್ತದೆ, ನನ್ನ ಜೀವನದ ಪಾಪ ಕಥೆಯನ್ನೆಲ್ಲ ನಿಮಗೆ ಹೇಳಿದರೆ ನೀವು ನನ್ನನ್ನು ತಿರಸ್ಕರಿಸಿಬಿಡುತ್ತೀರಿ ಎಂದು.”

ಹೀಗೆಂದು ಹೇಳಿ ಆತನು ತುಸುಹೊತ್ತು ಮೌನವಾಗಿ ಮತ್ತೆ ಏನನ್ನೊ ಹೇಳತೊಡಗುತ್ತಿರುವಾಗಲೆ, ಮಹಾಪುರುಷಜಿಯ ಮುಖ ಕಣ್ಣು ಎಲ್ಲ ಕೆಂಪೇರಿ ಗಂಭೀರಭಾವದಿಂದಲೂ ಹೇಳಿದರು: “ಅಯ್ಯಾ, ಭಯವೇಕೆ? ಇವತ್ತಿನಿಂದ ನೀನು ಸರ್ವಪಾಪಗಳಿಂದಲೂ ಮುಕ್ತನಾಗಿದ್ದೀಯೆ. ಇದರಲ್ಲಿ ವಿಶ್ವಾಸವಿಡು. ಶ್ರೀಗುರು ಮಹಾರಾಜ್ ಕೃಪೆದೋರಿ ನಿನ್ನನ್ನು ತಮ್ಮ ಮಡಿಲಿಗೆ ಎತ್ತಿಹಾಕಿಕೊಂಡಮೇಲೆ ಹೆದರಿಕೆ ಏಕಯ್ಯಾ? ಈಗ ನೀನು ಅವರವನಾಗಿದ್ದೀಯೆ. ನಮ್ಮ ಶ್ರೀಗುರುದೇವರು ಅಹೈತುಕೀ ಕೃಪಾಸಿಂಧು, ದೀನದಯಾಲು, ಕಪಾಲಮೋಚನ ಮುಕ್ತಿದಾತ. ನೀನೀಗ ಅವರ ಚರಣಾಶ್ರಿತ. ಇವತ್ತಿನಿಂದ ನೀನು ನವಕಲೇವರ ಧಾರಣಮಾಡಿದ್ದೀಯೆ, ನಿನಗೆ ಪುನರ್ಜನ್ಮವಾಗಿದೆ, ಇನ್ನು ನೀನು ಆ ಪಾಪೀ ತಾಪೀ ಯಾರು ಅಲ್ಲವಯ್ಯಾ. ಇವತ್ತಿನಿಂದ ನೀನು ಅವರ ಕಂದ; ಅವರ ದಾಸನಾಗಿ ಹೋಗಿದ್ದೀಯೆ ತಿಳಿಯಿತೇನಯ್ಯಾ? ಶ್ರೀ ಠಾಕೂರರು ಕೃಪೆಮಾಡಿ, ನಿನ್ನ ಮೈಯ ಧೂಳಿಯನ್ನೆಲ್ಲ ಕೊಡಹಿ, ನಿನ್ನನ್ನು ಆದರಪೂರ್ವಕವಾಗಿ ತಮ್ಮ ಸೊಂಟಕ್ಕೆತ್ತಿಕೊಂಡಿದ್ದಾರೆ, ಇಂದಿನಿಂದ ಆ ಹಿಂದಿನ ದುಷ್ಕೃತಿ ಕಥೆಯನ್ನೆಲ್ಲ ಮರೆತುಬಿಡು; ಆ ಭಾವನೆಗಳನ್ನೆಲ್ಲ ತಲೆಯೆತ್ತದಂತೆ ಮನಸ್ಸಿನಿಂದಾಚೆಗೆ ತಳ್ಳಿಬಿಡು. ಇನ್ನು ಆನಂದದಿಂದ ಪ್ರೇಮಭರನಾಗಿ ಭಕ್ತಿಪೂರ್ವಕವಾಗಿ ಅವನ ನಾಮೋಚ್ಚಾರಣೆ ಮಾಡು. ಬದುಕೆಲ್ಲ ಮಧುಮಯವಾಗಿ ಹೋಗುತ್ತದೆ.”

ಭಕ್ತ: “ಮನದ ಸಂಸ್ಕಾರದ ಗತಿಯನ್ನು ನಾನಿನ್ನೂ ತಡೆಗಟ್ಟಲು ಸಮರ್ಥನಾಗಿಲ್ಲ. ರಿಪುದಮನಮಾಡಲು ಶಕ್ತನಾಗುವಂತೆ ನನಗೆ ಆಶೀರ್ವಾದ ಮಾಡಿ.”

ಮಹಾಪುರುಷಜಿ: “ಆಶೀರ್ವಾದವೇನೋ ಇದ್ದೇ ಇದೆ. ಆದರೆ ನೀನೂ ಪ್ರಯತ್ನಿಸಬೇಕು. ನಿನಗೆ ಮಕ್ಕಳುಗಿಕ್ಕಳೂ ಇದ್ದಾರೆ; ಇನ್ನಾದರೂ ಸ್ವಲ್ಪ ಸಂಯಮ ಅಭ್ಯಾಸಮಾಡಿ, ಬದುಕಿನ ದಿಕ್ಕನ್ನು ಬದಲಾಯಿಸು. ಭೋಗಿಸಿದ್ದು ಎಷ್ಟೋ ಆಗಿದೆ; ಇನ್ನೆಷ್ಟು? ನಿಜ. ಬರಿಯ ಬಲಾತ್ಕಾರದಿಂದ ಪ್ರಯೋಜನವಾಗುವುದಿಲ್ಲ, ಹೃತ್ಪೂರ್ವಕವಾಗಿ ನೀನು ಸಾಧನೆ ಮಾಡಿದರೆ ಕ್ರಮೇಣ ಅವನು ನಿನ್ನ ದೇಹ ಪ್ರಾಣ ಮನಸ್ಸು ಎಲ್ಲವನ್ನೂ ಪವಿತ್ರವನ್ನಾಗಿ ಮಾಡುತ್ತಾನೆ.”

* * *