ಢಾಕಾ ಪಟ್ಟಣದಲ್ಲಿ ಹಿಂದೂ ಮುಸಲ್ಮಾನರ ಹೊಡೆದಾಟದಲ್ಲಿ ಅಭಾವ ಗ್ರಸ್ತರಾದವರಿಗೆ ಸೇವೆಸಲ್ಲಿಸುವುದಕ್ಕಾಗಿ ಶ್ರೀರಾಮಕೃಷ್ಣ ಮಿಷನ್ ಏರ್ಪಾಡು ಮಾಡಿತ್ತು. ಅದಕ್ಕೆ ಬೇಕಾಗುವ ಹಣದ ಬೇಡಿಕೆಗಾಗಿ ಪತ್ರಿಕೆಗಳಲ್ಲಿ ಬಿನ್ನಹಗಳನ್ನು ಮುದ್ರಿಸಲಾಗಿತ್ತು. ಬೆಳಗಿನ ವೇಳೆ ಅನೇಕರು ಮಹಾಪುರುಷಜಿಗೆ ಪ್ರಣಾಮ ಸಲ್ಲಿಸಲು ಅವರ ಕೊಠಡಿಯಲ್ಲಿ ನೆರೆದಿದ್ದರು. ಸಂನ್ಯಾಸಿಯೊಬ್ಬರು ಅಡ್ಡಬಿದ್ದು ನಿಂತ ಮೇಲೆ ಮಹಾಪುರುಷಜಿ ಕೇಳಿದರು: “ಏನು ರಿಲೀಫ್‌ಗೆ (ಸೇವಾಕಾರ್ಯಕ್ಕೆ) ಹಣ ಬರುತ್ತಿದೆಯೆ?”

ಸಂನ್ಯಾಸಿ: “ಇಲ್ಲ, ಮಹಾರಾಜ್, ಹೆಚ್ಚೇನೂ ಬರುತ್ತಿಲ್ಲ.”

ಮಹಾಪುರುಷಜಿ: “ಬರುತ್ತದೆ, ಕ್ರಮೇಣ. ಹಣಕ್ಕಾಗಿ ಚಿಂತಿಸಬೇಡ. ಅವನ ಕೆಲಸ; ಅವನೆ ಬೇಕಾದ ಹಣ ಒದಗಿಸಿಕೊಡುತ್ತಾನೆ.”

ಸಂನ್ಯಾಸಿ: “ಇದರಲ್ಲೊಂದು ಧರ್ಮಸಂಕಟವಿದೆ. ಇಂತಹ ಪ್ರಸಂಗಗಳಲ್ಲಿ ಮನಸ್ಸಿನ ಸ್ಥೈರ್ಯವನ್ನೆ ಕಾಪಾಡಿಕೊಳ್ಳುವುದು ಕಷ್ಟವಾಗುತ್ತದೆ; ಆ ಪಾಷಂಡಿಗಳು ಎಂತಹ ಅಮಾನುಷ ಅತ್ಯಾಚಾರಗಳನ್ನು ಮಾಡಿಬಿಟ್ಟಿದ್ದಾರೆ?”

ಮಹಾಪುರುಷಜಿ: “ಅದೇನೋ ಹೌದು, ಮಗು. ಆದರೆ ನಮ್ಮ ಕೆಲಸ ಸೇವೆ ಮಾಡುವುದು; ಸೇವೆಮಾಡಿ ಚಿತ್ತಶುದ್ಧಿ ಸಾಧಿಸುವುದು. ಸ್ವಾಮೀಜಿ ಹೇಳಿಲ್ಲವೆ ‘ಇತರರಿಗೆ ಒಳ್ಪು ಮಾಡುವುದರಿಂದ ನಮ್ಮ ಒಳ್ಪನ್ನೆ ಸಾಧಿಸುತ್ತೇವೆ’ ಎಂದು. ಅನ್ಯರಿಗೆ ಉಪಕಾರಮಾಡಿ ನಮ್ಮ ಕಲ್ಯಾಣ ಸಾಧನೆ – ಅದೆತಾನೆ ನಮ್ಮ ಸೇವೆಯ ಉದ್ದೇಶ. ಈ ಎಲ್ಲ ಕೆಲಸಕಾರ್ಯಗಳ ನಡುವೆ ನಿನ್ನನ್ನು ನೀನು ಚೆನ್ನಾಗಿ ಪರೀಕ್ಷೆ ಮಾಡಿಕೊಳ್ಳಬಹುದು. ಹೊರಗಡೆಯಿಂದ ಯಾವ ತೆರನಾದ ಭಾದೆ ವಿಘ್ನಗಳೂ ಬರಬಹುದು, ಆದರೆ ಅವನ ಕೆಲಸವನ್ನು ಮಾತ್ರ ನೀನು ಅವಿಚಲಿತ ಭಾವದಿಂದ ಮಾಡಬೇಕು. ‘ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯಚ,’ ‘ತನ್ನ ಮುಕ್ತಿಲಾಭ ಮತ್ತು ಜಗತ್ತಿನ ಕಲ್ಯಾಣ ಇವಕ್ಕಾಗಿ.’ – ಇದೇಯೆ ನಿನ್ನ ಜೀವನದ ಆದರ್ಶ. ನಿನ್ನ ದೃಷ್ಟಿ ಯಾವಾಗಲೂ ಊರ್ಧ್ವ ದಿಕ್ಕಿಗೆ ಇರಬೇಕು. ನಿನ್ನ ಆದರ್ಶ ಯಾವ ರೀತಿ ಮಹತ್ತಾಗಿದೆಯೋ ನಿನ್ನ ಹೃದಯವೂ ಅದೇ ರೀತಿ ವಿಶಾಲವಾಗಿರಬೇಕು.”

“ಈ ಎಲ್ಲ ಕೋಮುವಾರು ಮಾರಾಮಾರಿ, ಕಲಹ, ವಿವಾದಗಳ ಹಿಂದೆ ನನಗೆ ಕಾಣಿಸುತ್ತಿದೆ, ಆ ಸರ್ವಕಲ್ಯಾಣಮಯೀ ಮಹಾಮಾಯೆಯ ಹಸ್ತ. ಆಕೆಯ ಶುಭ ಇಚ್ಛೆಯಿಂದಲೆ ಇವೆಲ್ಲ ಆಗುತ್ತಿವೆ; ಆದ್ದರಿಂದ ಇದರ ಫಲ ಒಳ್ಳೆಯದು ಆಗುತ್ತದೆ. ಇದರಿಂದ ಹಿಂದೂಗಳಲ್ಲಿ ಐಕಮತ್ಯ ಸಿದ್ಧಿಯಾಗುತ್ತದೆ; ಅವರು ಸಂಘಬದ್ಧರಾಗುವುದನ್ನು ಕಲಿಯುತ್ತಾರೆ. ಒಬ್ಬರು ಮತ್ತೊಬ್ಬರಿಗಾಗಿ ಮರುಗುವುದನ್ನೂ ಪರಸ್ಪರ ಸಹಾನುಭೂತಿಯನ್ನೂ ಕಲಿಯುತ್ತಾರೆ. ಐಕಮತ್ಯ ಸಂಘಟನೆ, ಪರಸ್ಪರ ಸಹಾನುಭೂತಿ – ಇವು ಈಗ ಬಹಳ ಆವಶ್ಯಕವಾಗಿವೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಹಿಂದೂಗಳು ಒಗ್ಗಟ್ಟಾಗಿ ಸಂಘಬದ್ಧರಾಗಬೇಕು. ಹೊರಗಿನ ಒತ್ತಾಯವಿಲ್ಲದೆ ಬಹುಕಾಲದಿಂದಿರುವ ಈ ಜಡತ್ವ ನೀಚತ್ವಗಳು ಒಂದೇ ಬಾರಿಗೆ ಕಳಚಿ ಬೀಳುತ್ತವೆಯೇ? ನಿನಗೆ ವಿಶ್ವಾಸವಿರಲಿ. ಈ ಎಲ್ಲವೂ ತಾಯಿಯ ಇಚ್ಚೆಯಿಂದಲೇ ನಡೆಯುತ್ತಿವೆ, – ಇದರಿಂದ ಕೊನೆಗೆ ಹಿಂದೂ ಜನಾಂಗದ ಕಲ್ಯಾಣ ಸಾಧಿತವಾಗುತ್ತದೆ. ಸಮಗ್ರ ಜನಾಂಗದ ಹೃದಯದಲ್ಲಿಯೆ ಒಂದು ನವ ಜಾಗ್ರತಿ ಉಂಟಾಗುತ್ತದೆ. ಈ ಜನಾಂಗದ ಶ್ರೀ ಠಾಕೂರರೂ ಸ್ವಾಮಿಜಿಯೂ ಜನ್ಮವೆತ್ತಿದ್ದಾರೆ ಎಂದಮೇಲೆ ಇದರ ಸರ್ವಾಂಗೀಣ ಸಂಪೂರ್ಣ ಉನ್ನತಿ ಆಗಿಯೆ ಆಗುತ್ತದೆ.”

ಬೈಗು ಸುಮಾರು ಐದು ಗಂಟೆಯ ಹೊತ್ತಿಗೆ ಸ್ವಾಮಿ ಅಜಯಾನಂದರು. ಕಲ್ಕತ್ತಾದಿಂದ ಬಂದರು. ಮಹಾಪುರುಷಜಿಯ ಕೊಠಡಿಯನ್ನು ಪ್ರವೇಶಿಸಿ “ಮಹಾರಾಜ್, ರಿಲೀಫ್ ಕೆಲಸಕ್ಕಾಗಿ ಮಹನೀಯರೊಬ್ಬರು ಐನೂರು ರೂಪಾಯಿ ಕೊಟ್ಟಿದ್ದಾರೆ; ಬೇಕಾಗಿ ಬಂದರೆ ಇನ್ನೂ ಸ್ವಲ್ಪ ಕೊಡುತ್ತೇನೆ ಎಂದೂ ಮಾತು ಕೊಟ್ಟಿದ್ದಾರೆ; ಸುದ್ದಿ ಕೇಳಿ ಮಹಾಪುರುಷಜಿಗೆ ತುಂಬಾ ಸಂತೋಷವಾಯಿತು. ಎರಡೂ ಕೈಗಳನ್ನೂ ಜೋಡಿಸಿ ಕಣ್ಣುಮುಚ್ಚಿ “ಜಯ್ ತಾಯೀ! ಅವಳ ಲೀಲೆಯನ್ನು ಯಾರು ಅರಿಯುತ್ತಾರೆ? ಅವಳೇ ಒಂದು ರೂಪದಿಂದ ಕಷ್ಟಕೊಡುತ್ತಾಳೆ, ಮತ್ತೊಮ್ಮೆ ಅವಳೇ ಇನ್ನೊಂದು ರೂಪದಿಂದ ಜನರ ಮನಸ್ಸಿನಲ್ಲಿ ದುಃಖ ವಿಮೋಚನೆಯ ಭಾವವನ್ನೂ ಕೊಡುತ್ತಾಳೆ. ‘ಯಾ ದೇವೀ ಸರ್ವಭೂತೇಷು ದಯಾ ರೂಪೇಣ ಸಂಸ್ಥಿತಾ! ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ!! ‘ಯಾವ ದೇವಿ ಎಲ್ಲ ಪ್ರಾಣಿಗಳ ಹೃದಯದಲ್ಲಿ ದಯಾರೂಪದಲ್ಲಿ ಅವಸ್ಥಿತೆಯಾಗಿದ್ದಾಳೆಯೋ ಆ ದೇವಿಗೆ ಮತ್ತೆ ಮತ್ತೆ ನಮಸ್ಕಾರ. ಒಂದು ಕೈಯಿಂದ ಸಂಹರಿಸುತ್ತಾಳೆ; ಮತ್ತೊಂದು ಕೈಯಿಂದ ವರವನ್ನೂ ಅಭಯವನ್ನೂ ಕೊಡುತ್ತಾಳೆ. ಸ್ವಾಮೀಜಿ ಹೇಳುತ್ತಿದ್ದರು ‘ಕಾಳೀಮೂರ್ತಿಯೆ ಭಗವಂತನ ಪೂರ್ಣ ಪ್ರತಿಮೆ’ ಎಂದು. ಸೃಷ್ಟಿ ಸ್ಥಿತಿ ಲಯ- ಎಲ್ಲದರ ಕರ್ತೆಯೂ ಅವಳೆ. ಒಂದು ಕಡೆ ಕತ್ತಿಯಿಂದ ಕತ್ತರಿಸುತ್ತಾಳೆ: ಇನ್ನೊಂದು ಕಡೆ ವರಾಭಯದಾಯಿನಿಯಾಗಿದ್ದಾಳೆ! ಇದಲ್ಲವೇ ಭಗವಂತನ ಲೀಲೆ! ಈ ರೀತಿ ಅವನು ಅಷ್ಟು ಜನಕ್ಕೆ ಕಷ್ಟ ಕೊಡುತ್ತಾನೆ, ಕ್ಷಾಮ ರೂಪದಲ್ಲಿ, ರೋಗ ರೂಪದಲ್ಲಿ ಶೋಕರೂಪಸಲ್ಲಿ! ಮತ್ತೆ ಇನ್ನೊಂದು ರೂಪದಲ್ಲಿ, ಅವನೆಯೆ ಅನೇಕರ ಹೃದಯದಲ್ಲಿ ದುಃಖ ವಿಮೋಚನೆಯ ಪ್ರೇರಣೆಯನ್ನೂ ಉಂಟು ಮಾಡುತ್ತಾನೆ. ಧನ್ಯ, ತಾಯಿ, ನೀನು! ನಿನ್ನ ಲೀಲೆಯನ್ನು ಯಾರು ಅರಿಯುತ್ತಾರೆ? ಇಲ್ಲಿಯವರೆಗೆ ಯಾರೂ ತಿಳಿಯಲಿಲ್ಲ. ಮುಂದೆಯೂ ತಿಳಿಯುವುದಿಲ್ಲ. ಸೃಷ್ಟಿಯ ಆದಿಯಿಂದ ಹಿಡಿದು ಎಂದೂ ಯಾರೂ ಯಾವ ಯೋಗಿಯೂ ಯಾವ ಋಷಿಯೂ ಯಾರು ಅವಳನ್ನರಿಯಲು ಸಮರ್ಥರಾಗಲಿಲ್ಲ. ಅನಂತ ಲೀಲಾಮಯೀ ತಾಯಿ,”

ಆರು ನಿನ್ನನರಿವಯ್ಯಾ? ನೀನು ಮೈದೋರದಿದರೆ?
ಹೇ ಅನಂತ, ವೇದವೇದಾಂತಗಳೂ ನಿನ್ನಂತ ಕಾಣದೆಯೆ ತೊಳಲುತಿವೆ ಕತ್ತಲಲ್ಲಿ!

ಅದಕ್ಕಾಗಿಯೆ ಠಾಕೂರರು ಹೇಳುತ್ತಿದ್ದದು: ‘ತಾಯೀ, ನಾನು ನಿನ್ನನ್ನು ತಿಳಿಯಲೆಳಸುವುದಿಲ್ಲ, ಯಾರು ತಾನೆ ನಿನ್ನನರಿತಾರು? ಯಾರು ಎಂದೂ ಅರಿಯಲಾಗಿಲ್ಲ, ಅರಿಯುವುದೂ ಸಾಧ್ಯವಲ್ಲ. ಆದರೆ ಇಷ್ಟು ಮಾಡು ತಾಯಿ, ನಿನ್ನ ಭುವನಮೋಹಿನೀ ಮಾಯೆಯಿಂದ ನಾನು ಮುಗ್ಧನಾಗದಂತೆ ಮಾಡು: ಕೃಪೆಯಿಟ್ಟು ನಿನ್ನ ಶ್ರೀಪಾದಪದ್ಮದಲ್ಲಿ ಭಕ್ತಿವಿಶ್ವಾಸಗಳನ್ನು ನೀಡು.’ (ಕೈ ಜೋಡಿಸಿ) ತಾಯೀ, ನಮಗೆ ಭಕ್ತಿ ವಿಶ್ವಾಸಗಳನ್ನು ನೀಡು. ಭಕ್ತಿ ವಿಶ್ವಾಸಗಳನ್ನು ನೀಡು.”

* * *