ಬೆಳಗಿನ ಹೊತ್ತು ಮಠದ ಸಾಧುಗಳು ಪ್ರಣಾಮ ಸಲ್ಲಿಸುವ ಸಲುವಾಗಿ ಕ್ರಮಕ್ರಮವಾಗಿ ಮಹಾಪುರುಷಜಿಯ ಕೊಠಡಿಯಲ್ಲಿ ಸೇರಿದರು. ಸ್ವಾಮಿ ವಿಜಯಾನಂದರು ಪ್ರಣಾಮಮಾಡಿ ಎದ್ದು ನಿಲ್ಲಲು ಮಹಾಪುರುಷಜಿ ಹೇಳಿದರು “ಈಗ ನೀವು ಏನು ಅಧ್ಯಯನ ಮಾಡುತ್ತಿದ್ದೀರಿ?”

ಸ್ವಾಮಿ ವಿಜಯಾನಂದ: “ಶ್ರೀಮದ್ ಭಾಗವತಾಧ್ಯಯನವಾಗುತ್ತಿದೆ.”

ಮಹಾಪುರುಷಜಿ: “ಭಾಗವತದ ಯಾವ ಭಾಗ?”

ಸ್ವಾಮಿ ವಿಜಯಾನಂದ: “ಅವಧೂತನ ಇಪ್ಪತ್ತನಾಲ್ಕು ಗುರುಗಳಿಗೆ ಸಂಬಂಧಪಟ್ಟ ಭಾಗ. ಓಂಕಾರನಂದ ಓದುತ್ತಾರೆ, ನಾನು ಕೇಳುತ್ತೇನೆ. ಕೆಲವು ಸಾರಿ ಅವರು ಮೊದಲೇ ಓದಿಕೊಂಡು ಬಂದು ನನಗೆ ಕಥನ ರೂಪದಲ್ಲಿ ಹೇಳುತ್ತಾರೆ. ಅವರ ಪ್ರೋತ್ಸಾಹದಿಂದಲೆ ನಾನು ಭಾಗವತ ಓದುತ್ತಿರುವುದು. ನಾನು ವೈಷ್ಣವ ದರ್ಶನಗಳನ್ನೂ ಓದಬೇಕೆಂದು ಅವರು ಒತ್ತಾಯಮಾಡುತ್ತಿದ್ದಾರೆ, ಆದ್ದರಿಂದ ಅದನ್ನೂ ಮಾಡುತ್ತಿದ್ದೇನೆ.”

ಮಹಾಪುರುಷಜಿ: “ನಾವೂ ಸ್ವಾಮೀಜಿಯ ಸಂಗಡ ಹೀಗೆಯೆ ಅಧ್ಯಯನ ಜಿಜ್ಞಾಸೆ ಮಾಡುತ್ತಿದ್ದೆವು. ಒಂದೊಂದು ಸಮಯದಲ್ಲಿ ಒಂದೊಂದು ಭಾವದಲ್ಲಿರುತ್ತಿದ್ದರು. ಸ್ವಾಮೀಜಿ. ನಮ್ಮನ್ನೂ ಆಯಾ ಭಾವ ಸ್ಥಿತಿಗೇರುವಂತೆ ಉತ್ತೇಜಿತರನ್ನಾಗಿ ಮಾಡುತ್ತಿದ್ದರು. ಒಮ್ಮೊಮ್ಮೆ ಜ್ಞಾನಮಾರ್ಗದಲ್ಲಿ ಜಿಜ್ಞಾಸೆ, ಒಮ್ಮೊಮ್ಮೆ ಭಕ್ತಿಮಾರ್ಗದಲ್ಲಿ, ಹೀಗೆ. ಒಂದೊಂದು ಸಾರಿ ನಾವು ಯಾವುದಾದರೊಂದೇ ಭಾವಸ್ಥಿತಿಯಲ್ಲಿ ಇಡೀ ಒಂದು ತಿಂಗಳಾದರೂ ಇದ್ದು ಬಿಡುತ್ತಿದ್ದೆವು. ದಿನಾ ರಾತ್ರಿ ಸರ‍್ವಕ್ಷಣವೂ ಆ ಒಂದೇ ಭಾವ ನಮ್ಮ ನ್ನಾಕ್ರಮಿಸುತ್ತಿತ್ತು. ಉಣ್ಣುವಾಗ, ಮಲಗುವಾಗ, ಕೂತಿರುವಾಗ ಎಲ್ಲ ಸಮಯದಲ್ಲೂ ಆ ಒಂದೇ ಆಲೋಚನೆ, ಒಂದೇ ವಿಚಾರ, ನಮ್ಮದಾಗಿರುತ್ತಿತ್ತು. ಜೊತೆಜೊತೆಗೆ ಆ ಭಾವನೆಯ ಸಾಧನೆಯನ್ನೆ ಕೈಕೊಳ್ಳುತ್ತಿದ್ದೆವು. ಸ್ವಾಮೀಜಿಗೆ ಬುದ್ಧದೇವನ ಭಾವಪ್ರಪಂಚವೆಂದರೆ ಬಹಳ ಪ್ರೀತಿ. ಬೌದ್ಧ ದರ್ಶನವನ್ನು ಚೆನ್ನಾಗಿ ಓದಿಕೊಂಡಿದ್ದರು. ಅವರ ವಿಚಾರವೂ ಏಕಸ್ಥಾನೀಯವಾಗಿರುತ್ತಿರಲಿಲ್ಲ. ಆ ಕಾಲದಿಂದಲೆ ಸ್ವಾಮೀಜಿಯ ಭಾವ, ಭಾಷೆ, ಬುದ್ಧಿ, ತರ್ಕ ಎಲ್ಲವು ಒಂದು ಅದ್ಭುತ ರೀತಿಗೆ ತಿರುಗಿದ್ದು. ಅವರ ಸಾಮಾನ್ಯವಾದ ಮಾತುಕತೆಯೂ ಉಚ್ಚಭಾವದಿಂದ, ಪಾಂಡಿತ್ಯಪೂರ್ಣವಾದ ಭಾಷೆಯಿಂದ ಕೂಡಿರುತ್ತಿತ್ತು. ಅವರಿಗೆ ಮಿಲ್ಟನ್ ಕವಿಯ ಶೈಲಿಯೆಂದರೆ ತುಂಭಾ ಇಷ್ಟ. ವಿಚಾರ ತರ್ಕ ಎಲ್ಲಕ್ಕೂ ಮಿಲ್ಟನ್ನಿನ ಶೈಲಿಯನ್ನೇ ಬಳಸುತ್ತಿದ್ದರು. ಸ್ವಾಮೀಜಿ ಅಮೆರಿಕಾಕ್ಕೆ ಹೋಗುವ ಮುನ್ನ, ಭಾರತದ ಒಂದು ಪ್ರಾಂತದಿಂದ ಮತ್ತೊಂದು ಪ್ರಾಂತಕ್ಕೆ ಪರಿವ್ರಾಜಕನ ಅವಸ್ಥೆಯಲ್ಲಿ ತಿರುಗುತ್ತಿದ್ದಾಗ, ಒಂದು ಸಾರಿ ಜುನಾಘಡ ಸಂಸ್ಥಾನದ ದಿವಾನರನ್ನು ಸಂಧಿಸುವ ಪ್ರಸಂಗವೊದಗಿತ್ತು. ದಿವಾನರು ಅವರೊಡನೆ ಮಾತುಕಡೆಯಾಡುತ್ತಾ ಮುಗ್ಧರಾಗಿ ‘ಸ್ವಾಮೀಜಿ, ನಿಮ್ಮ ಭವಿಷ್ಯತ್ತು ಅಸಾಮಾನ್ಯ ತೇಜೋಗೌರವಪೂರ್ಣವಾಗಿದೆ’ ಎಂದಿದ್ದರಂತೆ. ಅದೂ ನಿಜವೇ ಆಯಿತು. ಅಮೆರಿಕಾದಲ್ಲಿ ಇದ್ದಾಗ ಚಿಕಾಗೊ ಪಾರ್ಲಿಮೆಂಟಿಗೆ ಹೋಗಿ ಸರ್ವಧರ್ಮ ಸಮ್ಮೇಳನದಲ್ಲಿ ನಿಂತಿದ್ದು ಸ್ವಾಮೀಜಿಗೆ ತುಸು ಸಭಾಕಂಪ ಅನುಭವಕ್ಕೆ ಬಂತಂತೆ. ಸಹಜವೆ! ಎಷ್ಟು ದೊಡ್ಡ ಸಭೆ; ಸಹಸ್ರ ಸಹಸ್ರ ಜನ ನೆರೆದಿದ್ದಾರೆ. ಅದರಲ್ಲಿಯೂ ಸಮಾಜದ ಅತ್ಯುಚ್ಚವರ್ಗದವರು. ವಿದ್ವತ್ ಶಿರೋಮಣಿಗಳು! ಸ್ವಾಮೀಜಿಗೆ ಏನು ಹೇಳಬೇಕೊ ಮೊದಲು ಗೊತ್ತಾಗಲಿಲ್ಲ, ಏಕೆಂದರೆ ಉಪನ್ಯಾಸಕ್ಕೆ ಯಾವ ವಿಧವಾದ ಸಿದ್ಧತೆಯನ್ನೂ ಮಾಡಿಕೊಂಡು ಹೋಗಿರಲಿಲ್ಲ. ಡಾಕ್ಟರ್ ಬರೋಸ್ ಎರಡು ಮೂರು ಸಾರಿ ಅವರನ್ನು ಮಾತಾಡಲು ಕರೆದರೂ ಸ್ವಾಮೀಜಿ ಸ್ವಲ್ಪ ಸಮಯ ಬೇಕು ತಾಳಿ, ತಾಳಿ, ಎಂದು ಕಾಲವಂಚನೆಯ ಉಪಾಯ ಹೂಡಿದರು. ಇದ್ದಕ್ಕಿದ ಹಾಗೆ ಒಂದು ಶ್ಲೋಕ ಮನಸ್ಸಿಗೆ ಬಂತು.

ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರಿಂ |
ಯತ್ ಕೃಪಾ ತಮಹಂ ವಂದೇ ಪರಮಾನಂದ ಮಾಧವಂ ||

“ಯಾರ ಕೃಪೆಯಿಂದ ಮೂಕನೂ ವಾಚಾಲನಾಗುತ್ತಾನೆಯೊ ಯಾರ ಕೃಪೆಯಿಂದ ಹೆಳವನೂ ಪರ್ವಲಂಘನ ಮಾಡಬಲ್ಲವನಾಗುತ್ತಾನೆಯೊ ಆ ಪರಮಾನಂದ ಸ್ವರೂಪನಾದ ಭಯ ಎಲ್ಲ ಬಿಟ್ಟು ಓಡಿತು. ಮನಸ್ಸಿನಲ್ಲಿ ಶ್ರೀಗುರುಮಹಾರಾಜರಿಗೆ ಪ್ರಣಾಮ ಸಲ್ಲಿಸಿ, ಎದ್ದು ನಿಂತರು. ಮುಂದೇನು ನಡೆಯಿತೋ ಅದನ್ನು ನೀನು ಓದಿರಬೇಕು, ಅವರ ಬಾಯಿಂದ ಜಗತ್ತು ಒಂದು ನೂತನ ಸಂದೇಶದ ವಾಣಿಯನ್ನಾಲಿಸಿತು. ಅವರ ಭಾಷಣವೋ ಸರ್ವೋತ್ತಮವಾಗಿತ್ತು. ಎಲ್ಲವೂ ಶ್ರೀ ಶಕ್ತಿಯ ಲೀಲೆ ಕಾಣಯ್ಯಾ. ಸ್ವಾಮೀಜಿ ಶ್ರೀ ಗುರುಮಹಾರಾಜರ ಸಾಕ್ಷಾತ್ ಯಂತ್ರಸ್ವರೂಪರಾಗಿಬಿಟ್ಟರು. ತಮ್ಮ ಧರ್ಮದ ಶ್ರೇಷ್ಠತ್ವ ಸ್ಥಾಪನೆಯ ಸಲುವಾಗಿ ವಿದ್ವತ್ ಪೂರ್ಣವಾದ ಭಾಷಣಗಳನ್ನು ಸಿದ್ದಮಾಡಿಕೊಂಡು ಬಂದಿದ್ದ ಪಂಡಿತೋತ್ತಮರೆಲ್ಲ ಸ್ವಾಮೀಜಿಯ ಪ್ರಕಾಶದ ಇದಿರಿನಲ್ಲಿ ಮಂಕಾಗಿ ಕಾಣಿಸಿದರು.

“ಸ್ವಾಮೀಜಿಯ ವಿಜಯವನ್ನು ಕಂಡ ಅಮೆರಿಕದ ಜನರು ಚಂದಾ ಎತ್ತಿ ಹಣ ಕೂಡಿಸಿ, ಕ್ರೈಸ್ತ ಧರ್ಮವನ್ನು ಬೋಧಿಸಿ ಪ್ರಚಾರಮಾಡುವ ಸಲುವಾಗಿ ಡಾಕ್ಟರ್ ಬರೋಸ್ ಅವರನ್ನು ಭಾರತ ಮೊದಲಾದ ದೇಶಗಳಿಗೆ ಕಳಿಸಿದರು. ಡಾಕ್ಟರ್ ಬರೋಸ್ ಅವರನ್ನು ಭಾರತ ಮೊದಲಾದ ದೇಶಗಳಿಗೆ ಕಳಿಸಿದರು. ಡಾಕ್ಟರ್ ಬರೋಸ್ ಭಾರತಕ್ಕೂ ಬಂದು ಅನೇಕ ಕಡೆಗಳಲಿ ಸಂಚರಿಸಿ ಭಾಷಣಗಳನ್ನು ಕೊಟ್ಟರು. ಆದರೆ ಅದರಿಂದೇನೂ ಫಲ ಆಗಲಿಲ್ಲ. ಸ್ವಾಮೀಜಿ ಪಾಶ್ಚಾತ್ಯ ದೇಶಗಳಲ್ಲಿ ವೇದಾಂತ ಪ್ರಚಾರ ಮಾಡಲು ಪ್ರಾರಂಭ ಮಾಡಿದರು. ಅವರ ಭಾಷಣಾದಿಗಳ ವರದಿ ನಮ್ಮಲ್ಲಿಗೂ ಮುಟ್ಟಿತು. ಆ ಉಪನ್ಯಾಸಗಳನ್ನು ಓದಿದಾಗ ಮೊದಮೊದಲು ನಮಗೆ ಅವು ಸ್ವಾಮೀಜಿಯ ಭಾಷಣಗಳೇ ಎಂಬ ವಿಚಾರದಲ್ಲಿ ನಂಬಿಕೆ ಹುಟ್ಟಲಿಲ್ಲ. ಅವುಗಳಲ್ಲಿ ನಮಗೆ ಪರಿಚಿತವಾಗಿದ್ದ ಭಾವಗಳನ್ನಾಗಲಿ ಆಲೋಚನೆಗಳನ್ನಾಗಲಿ ಭಾಷಾ ರೀತಿಯನ್ನಾಗಲಿ ಅವರು ಉಪಯೋಗಿಸಿರಲಿಲ್ಲ, ಎಲ್ಲ ಬದಲಾವಣೆಯಾಗಿತ್ತು. ಭಾಷೆ ಭಾವ ಎಲ್ಲ ಬೇರೆಯಾಗಿತ್ತು. ಹೊಸ ಸಂದೇಶ, ಹೊಸ ಭಾಷೆ. ಅಮೆರಿಕಾಕ್ಕೆ ಹೋಗುವ ಮುನ್ನ ಈ ದೇಶದಲ್ಲಿದ್ದಾಗ ಅವರ ಮಾತುಕತೆಯೆಲ್ಲ ಜ್ಞಾನಮಾರ್ಗದ ಕಡೆಗೇ ವಿಶೇಷವಾಗಿರುತ್ತಿತ್ತು. ಅವರ ಭಾಷೆಯು ಪಾಂಡಿತ್ಯಪೂರ್ಣ ಮತ್ತು ದಾರ್ಶನಿಕವಾಗಿರುತ್ತಿತ್ತು. ಆದರೆ ಆ ದೇಶಗಳಲ್ಲಿ ಮಾಡಿದ ಭಾಷಣಗಳಲ್ಲಿ ಭಾಷೆ ಎಷ್ಟು ಸರಳವೋ ಭಾವವೂ ಅಷ್ಟೇ ಸರಳ; ಅಲ್ಲದೆ ಭಕ್ತಿಪೂರ್ಣ. ತರುವಾಯ ಸ್ವಾಮೀಜಿ ಈ ದೇಶಕ್ಕೆ ಹಿಂತಿರುಗಿ ಬಂದ ಮೇಲೆ ಹೇಳಿದರು: ‘ಅಯ್ಯೊ ಆ ಭಾಷಣಗಳನ್ನೆಲ್ಲ ನಾನು ಮಾಡಿದೆನೇನು? ನನ್ನ ಬಾಯಿಂದ ಠಾಕೂರರೇ ಎಲ್ಲವನ್ನೂ ಆಡಿಸಿದ್ದು ‘. ವಾಸ್ತವಿಕವೂ ಅದೇ.”

* * *