ಸಾಯಂಕಾಲ. ಬಾನೆಲ್ಲ ಮುಗಿಲು ಕವಿದಿತ್ತು. ಮಹಾಪುರುಷಜಿ ತಮ್ಮ ಕೊಠಡಿಯಲ್ಲಿ ಆರಾಮಕುರ್ಚಿಯ ಮೇಲೆ ಒರಗಿಕೊಂಡು ‘ಏಷ್ಯಾ’ ಎಂಬ ಮಾಸಪತ್ರಿಕೆಯಲ್ಲಿ ಸ್ವಾಮೀಜಿಯ ವಿಚಾರವಾಗಿ ರೊಮೇನ್ ರೊಲಾ ಬರೆದಿದ್ದ ಲೇಖನವನ್ನು ಗಮನವಿಟ್ಟು ಓದುತ್ತಾ ಕುಳಿತಿದ್ದರು. ಆ ಸಮಯದಲ್ಲಿ ಅನುಚರರೊಬ್ಬರು ಮಹಾಪುರುಷಜಿಗೆ ಪ್ರಣಾಮ ಸಲ್ಲಿಸುವ ಸಲುವಾಗಿ ಬಂದಿದ್ದ ಭಕ್ತರೊಬ್ಬರನ್ನು ಕರೆದುಕೊಂಡು ಬಂದು “ಇವರು ಶ್ರೀ ಶ್ರೀ ಮಹಾಮಾತೆಯವರಿಂದ ದೀಕ್ಷೆ ತೆಗೆದುಕೊಳ್ಳುವ ಕೃಪೆಗೆ ಪಾತ್ರರಾದವರು; ತಮ್ಮ ದರ್ಶನಕ್ಕಾಗಿ ಬಂದಿದ್ದಾರೆ” ಎಂದರು. ಭಕ್ತರೂ ತುಂಬ ಭಕ್ತಿಯಿಂದ ನಮಸ್ಕಾರ ಮಾಡಿ ಎದ್ದು ನಿಂತರು. ಅವರ ಕೈಜೋಡಿಸಿತ್ತು. ಕಣ್ಣು ತೊಯ್ದಿತ್ತು. ಮಹಾಪುರುಷಜಿ ಸ್ನೇಹಪೂರ್ವಕವಾಗಿ ಕೇಳಿದರು: “ಅಯ್ಯಾ, ನಿನಗೆ ಮಾತೆಯ ಕೃಪೆಯಾಗಿತ್ತೆ?”

ಭಕ್ತ: “ಹೌದು, ಅವರಿಂದಲೆ ನನಗೆ ದೀಕ್ಷೆಯ ಕೃಪೆಯಾದದ್ದು.”

ಮಹಾಪುರುಷಜಿ: “ನೀನು ಬಹಳ ಅದೃಷ್ಟವಂತ, ತಾಯಿಯ ಕೃಪೆ ಪಡೆಯಬೇಕಾದರೆ. ಇನ್ನು ನಿನಗೆ ಕಳವಳ ಬೇಕಾಗಿಲ್ಲ. ನಮ್ಮಮ್ಮ ಸಾಧಾರಣ ಎಂದು ಬಗೆಯಬೇಡ. ಜಗತ್ತಿನ ಕಲ್ಯಾಣಕ್ಕಾಗಿ, ಜೀವರಿಗೆ ಮುಕ್ತಿಕೊಡುವ ಸಲುವಾಗಿ ಸ್ವಯಂ ಜಗಜ್ಜನನಿಯೇ ಲೀಲಾದೇಹ ಧಾರಣೆಮಾಡಿ ಅವತರಿಸಿದ್ದಾರೆ.”

ಭಕ್ತ: “ತಾವೊಂದಿಷ್ಟು ಆಶೀರ್ವಾದ ಮಾಡಬೇಕು. ಶ್ರೀ ಶ್ರೀಮಾತೆಯ ಪಾದಪದ್ಮದಲ್ಲಿ ನನ್ನ ಭಕ್ತಿ ವಿಶ್ವಾಸಗಳು ದೃಢವಾಗುವಂತೆ.”

ಮಹಾಪುರುಷಜಿ: “ಹಾಗೆಯೆ ಆಗಲಿ ಅಯ್ಯಾ, ಹಾಗೆಯೆ ಆಗಲಿ! ನೀನೇನಾದರೂ ಕೊಂಚ ಜಪಗಿಪ ಮಾಡುತ್ತಾ ಇದ್ದೀಯಾ? ನಿತ್ಯವೂ ಸ್ವಲ್ಪ ಜಪ, ಪ್ರಾರ್ಥನೆ ಎಲ್ಲ ಮಾಡುತ್ತಿರು.”

ಭಕ್ತ: “ನಾವು ಸಂಸಾರದಲ್ಲಿ ಬಿದ್ದಿದ್ದೇವೆ. ಮೂರು ಹೊತ್ತು ಧನ ಸಂಪಾದನೆ ಮೊದಲಾದ ಆಲೋಚನೆಗಳಲ್ಲಿಯೆ ಕಳೆಯುತ್ತದೆ. ಇನ್ನು ಭಗವಂತನ ನಾಮೋಚ್ಚಾರಣೆ ಮಾಡುವುದೆಲ್ಲ? ತಾವು ಆಶೀರ್ವದಿಸಬೇಕು, ಈ ಎಲ್ಲ ಪ್ರತಿಭಂಧಕಗಳೂ ತೊಲಗಿಹೋಗುವಂತೆ.”

ಮಹಾಪುರುಷಜಿ: “ಅಯ್ಯಾ, ಸಂಸಾರದ ಕೆಲಸ ಏನು ಇಪ್ಪತ್ತು ನಾಲ್ಕು ಗಂಟೆಯೂ ಮಾಡುತ್ತೀಯಾ? ಏನು ಹಗಲೂ ಬೈಗೂ ಹಣ ಹಣ ಹಣ ಎಂದು ಚಿಂತಿಸುತ್ತೀಯಾ? ದೇವರ ಹೆಸರನ್ನು ಒಂದಿನಿತಾದರೂ ಹೇಳುವುದಿಲ್ಲವೆ? ಹೊತ್ತು ಎಷ್ಟಾದರೂ ಆಗಲಿ, ದಿನವೂ ನಿಯಮಿತ ಭಾವದಿಂದ ಒಂದಿಷ್ಟಾದರೂ ಮಾಡಬೇಕು; – ಹತ್ತು ನಿಮಿಷ, ಕೊನೆಗೆ ಐದೆ ನಿಮಿಷ, ಅದೂ ಆಗದಿದ್ದರೆ ಎರಡೊ ಮೂರೊ ನಿಮಿಷ. ಅಂತೂ ನಿತ್ಯವೂ ನಿಯಮಿತಭಾವದಿಂದ ಒಂದಿಷ್ಟು ಅಭ್ಯಾಸ ಮಾಡಲೇಬೇಕು; ಆದರೆ ಮಾಡುವುದನ್ನೆಲ್ಲ ಪ್ರಾಣಭರದಿಂದ ಹೃತ್ಪೂರ್ವಕವಾಗಿ ಮಾಡು. ತುಲಸೀದಾಸ ಹೇಳುತ್ತಾನೆ ‘ಒಂದು ಘಂಟೆ, ಅರ್ಥ ಘಂಟೆ, ಕೊನೆಗೆ ಅರ್ಧದಲ್ಲಿ ಅರ್ಧ ಎಂದು ಮೊದಲಾಗಿ. ಬೇಕಾದ್ದೆಂದರೆ ಅಯ್ಯಾ, ಆಂತರಿಕತೆ. ತಾಯಿ ಅಂತರ‍್ಯಾಮಿನೀ; ಅವಳು ನೋಡುವುದು ಹೊತ್ತನ್ನಲ್ಲ ಚಿತ್ತವನ್ನು. ತಾಯಿ ತನ್ನ ಕಡೆಗೆ ನಿನ್ನ ಹೃದಯದ ತುಡಿತ ಎಷ್ಟಿದೆ ನೋಡುತ್ತಾಳೆ. ನೀನು ಎಂತಹ ಸ್ಥಿತಿಯಲ್ಲಿದ್ದರೂ ಪ್ರಾರ್ಥನೆಯನ್ನೇನೊ ಪ್ರಾಣಪೂರ್ವಕವಾಗಿ ಮಾಡು; ‘ಅಮ್ಮಾ, ದಯೆಗೆಯ್! ದಯೆಗೆಯ್! ನಿನ್ನ ಶ್ರೀಪಾದಪದ್ಮಗಳಲ್ಲಿ ಭಕ್ತಿ ವಿಶ್ವಾಸಗಳನ್ನು ದಯೆಗೆಯ್!’ ಶ್ರೀಗುರುಮಹಾರಾಜ್ ಹೇಳುತ್ತಿದ್ದರು, ಗೃಹಸ್ಥರ ಕರೆಗೆ ದೇವರು ಬೇಗನೆ ಕಿವಿಗೊಡುತ್ತಾನೆ ಎಂದು. ಸಂಸಾರಿ ಒಂದಿಷ್ಟು ಕೂಗಿದರೆ ಸಾಕು, ಅವನು ಬೇಗ ಕೃಪೆದೋರುತ್ತಾನೆ. ಏಕೆಂದರೆ ಅವನು ಅಂತರ‍್ಯಾಮಿ. ಅವನಿಗೆ ಗೊತ್ತು, ಅವರ ಹೆಗಲ ಮೇಲೆ ಎಂತಹ ದೊಡ್ಡ ಹೊರೆ ಹೇರಿದೆ ಎಂದು. ಒಂದು ಸ್ವಲ್ಪದರದಲ್ಲಿಯೆ ಆತ ಸಂಸಾರಿಗಳ ಮೇಲೆ ದಯೆದೋರುತ್ತಾನೆ – ‘ಪಾಪ ಅವರ ತಲೆ ಮೇಲೆ ಎಷ್ಟು ಸಾವಿರ ಮಣ ಭಾರ ಹೇರಿದೆ; ಆದರೂ ನನ್ನ ದರ್ಶನಕ್ಕಗಿ ಹಾತೊರೆಯುತ್ತಾರಲ್ಲಾ’ ಎಂದು. ಅಂದರೆ ಅಲ್ಲದರಲ್ಲಿಯೆ ಭಗವಂತನು ಗೃಹೀಭಕ್ತರಲ್ಲಿ ಪ್ರಸನ್ನನಾಗುತ್ತಾನೆ. ಅದಕ್ಕೇ ನಾನು ಹೇಳುವುದಯ್ಯಾ, ಎಷ್ಟು ಕಾಲ ಸಾಧ್ಯವಾದರೆ ಅಷ್ಟುಕಾಲ, ದಿನವೂ ಸ್ವಾಮಿಯನ್ನು ಕೂಗಿ ಕರೆಯಬೇಕು ಎಂದು.

ಭಕ್ತ: “ಒಂದು ಸ್ವಲ್ಪ ಸ್ವಲ್ಪವನ್ನೇನೊ ದಿನವೂ ಮಾಡುತ್ತಿದ್ದೇನೆ – ಸ್ವಲ್ಪ ಜಪ, ಸ್ವಲ್ಪ ಧ್ಯಾನ. ಸ್ವಲ್ಪ ಪ್ರಾರ್ಥನೆ ಹೀಗೆ. ಆದರೆ ಅಷ್ಟರಿಂದ ನನಗೆ ತೃಪ್ತಿಯಾಗಿಲ್ಲ. ಸಮಯವಿದ್ದರೆ ಇನ್ನೂ ಸ್ವಲ್ಪ ಹೊತ್ತು ಮಾಡಬೇಕೆಂದು ಆಸೆ. ಆದರೆ ಸಮಯವಾಗುವುದಿಲ್ಲ.”

ಮಹಾಪುರುಷಜಿ: “ಏನು ಮಾಡುತ್ತಿದ್ದೀಯೋ ಅದನ್ನು ಶ್ರದ್ಧೆಯಿಂದ ಪ್ರಾಣಪೂರ್ವಕವಾಗಿ ಮಾಡುತ್ತಿರು. ಅದರಿಂದಲೇ ಕಲ್ಯಾಣಸಾಧನೆಯಾಗುತ್ತದೆ.”

ಭಕ್ತ: “ನನಗೆ ಇನ್ನೊಂದೇ ಪ್ರಶ್ನೆ ಕೇಳುವುದಿದೆ. ಆದರೆ ತಮ್ಮ ದೇಹ ಸ್ಥಿತಿಯನ್ನು ನೋಡಿ ತೊಂದರೆಯಾಗುತ್ತದೆ ಎಂದು ಹೆದರಿಕೆ.”

ಮಹಾಪುರುಷಜಿ: “ಹೇಳಬಾರದೆ ಅದಕ್ಕೇನಂತೆ?”

ಭಕ್ತ: “ತಾಯಿ ಮಂತ್ರವನ್ನೇನೊ ಕೊಟ್ಟರು. ನಾನೂ ಅದನ್ನು ಜಪಿಸುತ್ತಿದ್ದೇನೆ. ಆದರೆ ಅದರ ಅರ್ಥ ನನಗೆ ಗೊತ್ತಿಲ್ಲ; ಅವರೂ ಹೇಳಲಿಲ್ಲ.”

ಮಹಾಪುರುಷಜಿ: “ಮಂತ್ರ ಜಪಮಾಡುತ್ತಿದ್ದೀಯಷ್ಟೇ? ಅದೇನೆ ಮುಖ್ಯ. ಮಂತ್ರಕ್ಕೆ ಮತ್ತೇನು ಅರ್ಥ? ಮಂತ್ರ ಭಗವಂತನ ಹೆಸರು. ಅದರ ಜೊತೆಗಿರುವ ಬೀಜವಿದೆಯಲ್ಲಾ ಅದು ಬೇರೆ ಬೇರೆ ದೇವದೇವಿಯರನ್ನು ಕುರಿತ ಭಾವಪ್ರಕಾಶನ ಶಬ್ದ. ಬೀಜ ಮತ್ತು ನಾಮ ಒಟ್ಟಾದರೆ ಮಂತ್ರ. ಒಟ್ಟಿನಲ್ಲಿ ಮಂತ್ರ ಭಗವಂತನನ್ನು ನೆನೆಸುವ ವಿಧಾನ. ಮಂತ್ರ ಜಪ ಮಾಡುವುದೆಂದರೆ ದೇವರನ್ನು ಕರೆದಂತೆಯೆ. ಅದರ ಅರ್ಥ ಇನ್ನೂ ವಿವರವಾಗಿ ತಿಳಿದ ಮಾತ್ರಕ್ಕೆ ಏನು ಬರುತ್ತದೆ ಹೇಳಯ್ಯಾ! ಸರಳಹೃದಯದ ವಿಶ್ವಾಸದಿಂದ ಆ ಮಹಾಮಂತ್ರವನ್ನೂ ಜಪಿಸುತ್ತಾ ಹೋಗು. ಅದರಿಂದಲೆ ನಿನಗೆ ಶ್ರೇಯಸ್ಸು ಸಿದ್ಧಿಸುತ್ತದೆ.”

ಭಕ್ತ: “ತಾವು ಆಶೀರ್ವಾದ ಮಾಡಬೇಕು, ಈ ಭವಬಂಧನದಿಂದ ನಾನು ಮುಕ್ತನಾಗಲು ಶಕ್ತನಾಗುವಂತೆ.”

ಮಹಾಪುರುಷಜಿ: “ಹೃತ್ಪೂರ್ವಕವಾಗಿ ಆಶೀರ್ವಾದ ಮಾಡುತ್ತೇನಯ್ಯಾ, ಹಾಗೆಯೆ ಆಗಲಿ!”

* * *