ಇವತ್ತು ಜನ್ಮಷ್ಟಮಿ. ಶ್ರೀಕೃಷ್ಣನು ಹುಟ್ಟಿದ ದಿನ. ಬೆಳಗಿನ ಜಾವದಿಂದಲೆ ಮಹಾಪುರುಷಜಿ ಶ್ರೀಕೃಷ್ಣನ ವಿವಿಧ ನಾಮಗಳನ್ನು ಆಗಾಗ್ಗೆ ಹೇಳಿಕೊಳ್ಳುತ್ತಿದ್ದರು. ಮತ್ತೆ ಮತ್ತೆ ಮಧುರ ಕಂಠದಿಂದ ‘ಗೋವಿಂದ, ಗೋವಿಂದ’ ಎಂಬ ನಾಮವನ್ನು ಉಚ್ಚರಿಸುತ್ತಿದ್ದರು. ಶ್ರೀಕೃಷ್ಣನನನ್ನು ಕುರಿತು ಸ್ತೋತ್ರಗಳನ್ನೂ ಮತ್ತೆ ಮತ್ತೆ ಹಾಡಿಕೊಳ್ಳುತ್ತಿದ್ದರು. ಆಗಾಗ್ಗೆ ನಾಮಗಾನಮಾಡುತ್ತಿದ್ದರು. ಕ್ರಮ ಕ್ರಮೇಣ ಮಠದ ಸಾಧುಗಳೂ ಬ್ರಹ್ಮಚಾರಿಗಳೂ ದರ್ಶನ ಮತ್ತು ಪ್ರಣಾಮಮಾಡುವ ಸಲುವಾಗಿ ಬಂದರು; ಪ್ರಣಾಮಮಾಡಿದ ಮೇಲೆ ಕೆಲವರು ಅಲ್ಲಿಯ ನೆಲದ ಮೇಲೆ ನಿಂತುಕೊಂಡಿದ್ದರು. ಆ ಮಾತು ಈ ಮಾತು ಸಾಗುತ್ತಿತ್ತು. ಕೊನೆಗೆ ಓಂಕಾರನಂದ ಸ್ವಾಮಿಗಳನ್ನು ನಿರ್ದೇಶಿಸಿ ಮಹಾಪುರುಷಜಿ ಹೇಳಿದರು: “ಇವೊತ್ತು ಮಹಾದಿನ, ಸಹಸ್ರಾರುವರ್ಷಗಳ ಹಿಂದೆ ಇದೇ ದಿನದಲ್ಲಿ ಶ್ರೀ ಭಗವಂತನೇ ಜಗತ್ತಿನ ಕಲ್ಯಾಣಕ್ಕಾಗಿ ಶ್ರೀಕೃಷ್ಣರೂಪಧಾರಣೆ ಮಾಡಿ ಭೂಲೋಕದಲ್ಲಿ ಅವತರಿಸಿದನು. ಇಂದಿಗೂ ಕೋಟಿ ಕೋಟಿ ನರನಾರಿಯರು ಅವನ ಹೆಸರಿನಿಂದ ಅನುಪ್ರಾಣಿತರಾಗುತ್ತಾರೆ. ಅಲ್ಲದೆ ಶಾಂತಿಪಡೆಯುತ್ತಾರೆ. ಅತ್ಯಂತ ಆನಂದಿತರಾಗುತ್ತಾರೆ.”

“ಇಂತಹ ದಿನಗಳಲ್ಲಿ ಶ್ರೀ ಗುರುಮಹಾರಾಜರು ಎಂದಿಗಿಂತಲೂ ಸಮಧಿಕವಾಗಿ ಸಮಾಧಿಸ್ಥಿತಿಯಲ್ಲಿರುತ್ತಿದ್ದುದನ್ನು ನಾವು ನೋಡಿದ್ದೇವೆ. ಅವರು ಪ್ರಯತ್ನಪಟ್ಟರೂ ಆ ದಿವ್ಯಾವೇಶದಿಂದ ಸ್ವವಶರಾಗಲು ಆಗುತ್ತಿರಲಿಲ್ಲ. ಅವರ ಮನಸ್ಸಿನ ಗತಿ ಸ್ವಾಭಾವಿಕವಾಗಿಯೆ ಊರ್ಧ್ವದಿಕ್ಕಿಗೇರುತ್ತಿತ್ತು. ವಿಶೇಷವಾದ ಬಲಪ್ರಯತ್ನ ಪ್ರಯೋಗದಿಂದಲೆ ತಮ್ಮ ಮನಸ್ಸನ್ನು ಮರ್ತ್ಯಭೂಮಿಕೆಗೆ ಎಳೆತರ ಬೇಕಾಗುತ್ತಿತ್ತು. ಲೋಕಕಲ್ಯಾಣಕ್ಕಾಗಿ ತಾಯಿ ಅವರ ಮನಸ್ಸನ್ನು ಒಂದು ಸ್ವಲ್ಪ ಕೆಳಗಡೆಗೆ ತಂದಿರಿಸುತ್ತಿದ್ದಳು. ಆಹಾ, ಎಂಥಾ ದೃಶ್ಯ! ಎಂಥೆಂಥಾ ಭಾವಾವಸ್ಥೆಗಳಲ್ಲಿ ಇರುತ್ತಿದ್ದರೆಂದರೆ ಅವರಿಗೆ ಮಾತುಕತೆ ಆಡುವುದಕ್ಕೂ ಆಗುತ್ತಿರಲಿಲ್ಲ. ಅದೆಂತಹ ಭಗವತ್ ಪ್ರೇಮ! ಕಣ್ಣೀರು ದಳದಳ ಎಂದು ಧಾರಾಕಾರವಾಗಿ ಹರಿಯುತ್ತಿತ್ತು. ಅಂತಹ ಪ್ರೇಮಾಶ್ರುಪಾತವನ್ನು ಎಲ್ಲಿಯೂ ಯಾರಲ್ಲಿಯೂ ನೋಡಿಲ್ಲ. ‘ಕಥಾಮೃತ ‘ದಲ್ಲಿ ಅಲ್ಲಲ್ಲಿ ಅದರ ಅಲ್ಪಸ್ವಲ್ಪ ವರ್ಣನೆಯನ್ನು ಮಾತ್ರ ಕಾಣುತ್ತೇವೆ. ಅಲ್ಲದೆ ಅದನ್ನೇನು ವರ್ಣಿಸುವುದಕ್ಕಾಗುತ್ತದೆಯೇ? ಕಂಡವರೇ ಕಂಡರು! ಬಾವ, ಸಮಾಧಿ ಅವೆಲ್ಲ ಅವರಲ್ಲಿ ನಿತ್ಯ ವ್ಯಾಪಾರಗಳಾಗಿದ್ದುವು. ಮಾಸ್ಟರ್ ಮಹಾಶಯ ನಿತ್ಯವೂ ಅವರ ಹತ್ತಿರ ಇರಲಾಗುತ್ತಿರಲಿಲ್ಲ. ಶನಿವಾರ, ಭಾನುವಾರ ಅಥವಾ ಇತರ ರಜಾದಿನಗಳ್ಲಿ ದಕ್ಷಿಣೇಶ್ವರಕ್ಕೋ ಮತ್ತೆಲ್ಲಿಗೋ ಅವರ ಬಳಿಗೆ ಬರುತ್ತಿದ್ದರು. ಆ ಸಮಯಗಳಲ್ಲಿ ಅವರು ತಾವೆ ಕಣ್ಣಾರೆ ಏನೇನನ್ನು ನೋಡುತ್ತಿದ್ದರೊ ಅದನ್ನು ಮಾತ್ರ ಬರೆದಿಡಲು ಪ್ರಯತ್ನ ಮಾಡಿದ್ದಾರೆ.”

* * *

ಶಾಂತಾ ಮಹಾಂತೋ ನಿವಸಂತಿ ಸಂತೋ
ವಸಂತವತ್ ಲೋಕಹಿತಂ ಚರನ್ತಃ |
ತೀರ್ಣಾಃ ಸ್ವಯಂ ಭೀಮಭವಾರ್ಣವಂ ಜನಾನ್
ಅಹೇತುನಾನ್ಯಾನ್ ಅಪಿ ತಾರತನ್ತಃ ||  – ವಿವೇಕಚೂಡಾಮಣಿ

“ಸಂತರಾದವರು ಕೆಲವರಿದ್ದಾರೆ. ಅವರು ಲೋಕಕ್ಕೆ ವಸಂತದಂತೆ ಹಿತವಾದುದನ್ನೇ ಮಾಡುತ್ತಾ ಚಲಿಸುತ್ತಾರೆ. ಭೀಮ ಭವಾರ್ಣವವನ್ನು ತಾವು ಉತ್ತರಿಸಿ, ಅಹೇತುಕವಾದ ಕ್ರಪೆಯಿಂದ ಇತರರನ್ನೂ ದಾಟಿಸುತ್ತಾರೆ.”