ಇವೊತ್ತು ಸ್ವಾಮಿ ಬ್ರಹ್ಮಾನಂದರ ಜನ್ಮ ದಿನ. ಮುಂಜಾನೆ ತುಂಬ ನಸುಕಿನಲ್ಲಿಯೆ ನಿದ್ದೆಯಿಂದೆದ್ದೊಡನೆ ಶ್ರೀರಾಮಕೃಷ್ಣ, ಶ್ರೀಮಾತೆ ಮತ್ತು ಸ್ವಾಮೀಜಿ ಇವರಿಗೆ ಪ್ರಣಾಮ ಮಾಡಿ, ಸ್ವಾಮಿ ಬ್ರಹ್ಮಾನಂದರಿಗೂ ನಮಸ್ಕರಿಸಿದರು. ನಡು ನಡುವೆ “ಜಯ್ ರಾಜ ಮಹಾರಾಜ್ ಕೀ ಜಯ್!” ಎಂದು ಹೇಳಿಕೊಳ್ಳುತ್ತಿದ್ದರು.

ಶ್ರೀ ಗುರುಮಹಾರಾಜರಿಗೆ ಮಂಗಳಾರತಿಯಾಗುವಾಗ ಪೂಜಾಮಂದಿರದಲ್ಲಿ ಉಷಾ ಭಜನೆಯಾಗುತ್ತಿತ್ತು. ಇವೊತ್ತು ಸೋಮವಾರವಾದ್ದರಿಂದ ಶಿವಪರ ಸ್ತುತಿಗಳನ್ನೆ ವಿಶೇಷವಾಗಿ ಗಾಯನ ಮಾಡಲಾಗುತ್ತಿತ್ತು. ಆದರೂ ಆ ದಿನ ಬ್ರಹ್ಮಾನಂದಸ್ವಾಮಿಗಳು ಜನ್ಮದಿನವಾದ ಪ್ರಯುಕ್ತ ಶ್ರೀಕೃಷ್ಣಪರವಾದ ಗೀತೆಗಳನ್ನೂ ಹಾಡುವಂತೆ ಮಹಾಪುರುಷಜಿ ಹೇಳಿಕಳಿಸಿದರು. ಅದರಂತೆ ‘ಏಳು ಕೃಷ್ಣ! ಮೋಹನ!’ ಮೊದಲಾದ ಗೀತೆಗಳನ್ನು ಹಾಡಲಾಯಿತು. ಕೊನೆಯಲ್ಲಿ

‘ಕೇಶವ ಕುರು ಕರುಣಾ ದೀನೆ, ಕುಂಜಕಾನನಚಾರೀ’

ಎಂಬ ಹಾಡನ್ನು ಹಾಡಿದರು. ಹಾಡು ಕೇಳಿ ಮಹಾಪುರುಷಜಿ ತುಂಬ ಆನಂದಪಟ್ಟರು.

ಕ್ರಮೇಣ ಬೆಳ್ಳಗೆ ಬೆಳಗಾಯಿತು. ಮಹಾಪುರುಷಜಿಯ ಕೊಠಡಿಯಲ್ಲಿ ಗುಂಪು ಹೆಚ್ಚಿತು. ಮಠದ ಸಾಧುಗಳೂ ಭಕ್ತೂ ಬಂದು ನೆರೆದರು. ಅವರೂ ಕೂಡ ಬಂದವರೆಲ್ಲರೊಡನೆಯೂ ಸಂತೋಷದಿಂದ ಮಾತುಕತೆಯಾಡುತ್ತಿದ್ದರು. ಹೇಳಿದರು: “ಇದೊಂದು ಹಿರಿಯ ದಿನ – ಸ್ವಾಮಿ ಬ್ರಹ್ಮಾನಂದರ ಜನ್ಮದಿನ. ಅವರು ಬ್ರಹ್ಮಜ್ಞಪುರುಷರು. ಬಹುಕಾಲಕ್ಕೊಮ್ಮೆ ಅಂತಹ ಉಚ್ಚ ಆಧ್ಯಾತ್ಮಿಕ ಸಂಪನ್ ಮಹಾಪುರುಷರು ಲೋಕಕಲ್ಯಾಣಕ್ಕಾಗಿ ಸಂಸಾರದಲ್ಲಿ ಅವತರಿಸುತ್ತಾರೆ. ಸಮಸ್ತ ಪ್ರಥ್ವಿಯೂ ಅಂಥವರ ಪಾದಸ್ಪರ್ಶದಿಂದ ಧನ್ಯವಾಗುತ್ತದೆ. ಅವರೇನು ಲೋಕ ಸಾಧಾರಣವೇ? ಅವರು ಈಶ್ವರಕೋಟಿ, ಶ್ರೀ ಭಗವಂತನ ಸಂಗಾತಿ, ಶ್ರೀರಾಮಕೃಷ್ಣ ದೇವರ ಮಾನಸಪುತ್ರ.”

“ಶ್ರೀಠಾಕೂರರಿಂದಲೆ ಕೇಳಿದ್ದೇವೆ: ರಾಖಾಲ್ ಮಹಾರಾಜ್ (ಸ್ವಾಮಿ ಬ್ರಹ್ಮಾನಂದರು) ದಕ್ಷಿಣೇಶ್ವರಕ್ಕೆ ಮೊದಲ ಸಾರಿ ಬರುವ ಮುನ್ನವೆ, ತಾಯಿ (ಜಗನ್ಮಾತೆ) ಹಠಾತ್ತಾಗಿ ಒಂದು ಶಿಶುವನ್ನು ತಂದು ಅವರ ತೊಡೆಯ ಮೇಲಿಟ್ಟು ಹೇಳಿದಳು ‘ಇದು ನಿನ್ನ ಮಗು.’ ಶ್ರೀಗುರುಮಹಾರಾಜ್ ಅದನ್ನು ನೋಡಿ ಭಯದಿಂದ ಮೈನಡುಗಿನ ತಾಯಿಯನ್ನು ಕೇಳಿದರಂತೆ ‘ನನಗೆ ಹೇಗೆ ಮಗು ಆದೀತು? ನಾನು ಸಂನ್ಯಾಸಿ’ ಅದಕ್ಕೆ ತಾಯಿ ನಗುನಗುತ್ತಾ ಹೇಳಿದಳಂತೆ: ‘ಇದು ಸಾಂಸಾರಿಕ ಶಿಶು ಅಲ್ಲ. ಇದು ಮಾನಸಪುತ್ರ!’ ಅದನ್ನು ಕೇಳಿದ ಮೇಲೆ ಅವರು ಶಾಂತರಾದರಂತೆ. ಅದಾದ ತರುವಾಯವೆ ರಾಖಾಲ್ ಮಹಾರಾಜ್ ದಕ್ಷಿಣೇಶ್ವರಕ್ಕೆ ಬಂದಾಗ ಠಾಕೂರರು ಅವರನ್ನು ನೋಡಿದೊಡನೆ ಗುರುತಿಸಿದರಂತೆ, ತಾಯಿ ತಮಗೆ ನೀಡಿ ತೋರಿಸಿದ ಮಗುವೆ ಅವರು ಎಂದು. ರಾಖಾಲ್ ಮಹಾರಾಜ್ ಕೂಡ ದಕ್ಷಿಣೇಶ್ವರಕ್ಕೆ ಬಂದಂದು ಮೊದಲುಗೊಂಡು ಗುರುಮಹಾರಾಜ್‌ರೊಡನೆ ಒಂದು ಐದು ವರ್ಷದ ಬಾಲಕನಂತೆಯೆ ನಡೆದುಕೊಳ್ಳತೊಡಗಿದರು. ಹಟಗಾರ ಮಗುವಿನಂತೆ ಶ್ರೀ ಠಾಕೂರರನ್ನು ಎಷ್ಟೊಂದು ಪೀಡಿಸುತ್ತಿದ್ದರು! ಅದು ಬೇಕು, ಇದು ಬೇಕು ಎಂದು ಎಷ್ಟು ಸಾರಿ ಮುನಿದುಕೊಳ್ಳುತ್ತಿದ್ದರು! ಒಮ್ಮೊಮ್ಮೆ ಅವರ ಹೆಗಲ ಮೇಲೆಯೆ ಹತ್ತಿ ಕೂತುಕೊಳ್ಳುತ್ತಿದ್ದರು! ಒಮ್ಮೊಮ್ಮೆ ತೊಡೆಯೇರುತ್ತಿದ್ದರು ಇನ್ನೂ ಏನೇನೋ! ನೋಡುವುದಕ್ಕೆ ಎಷ್ಟು ಅದ್ಭುತವಾಗಿರುತ್ತಿತ್ತು! ಅದೆಲ್ಲ ಐಶ್ವರಿಕ ವ್ಯಾಪಾರ! ಲೌಕಿಕ ದೃಷ್ಟಿಯಿಂದಾಗಲಿ ಲೌಕಿಕ ಬುದ್ಧಿಯಿಂದಾಗಲಿ ಅದನ್ನೆಲ್ಲ ಒಂದಿಷ್ಟೂ ತಿಳಿದುಕೊಳ್ಳುವುದಕ್ಕೆ ಆಗುವುದಿಲ್ಲ.

ಮಧ್ಯಾಹ್ನದ ವೇಳೆಗೆ ಸ್ವಾಮಿ ಬ್ರಹ್ಮಾನಂದರ ಮಂದಿರದಲ್ಲಿ ಅವರಿಗೆ ಪ್ರಿಯವಾಗಿದ್ದ ವಿವಿಧ ನೈವೇದ್ಯಗಳನ್ನು ಅರ್ಪಿಸಲಾಯಿತು. ಮಹಾಪುರುಷಜಿ ಆ ಪ್ರಸಾದವನ್ನು ಅಂಗುಲಿಯ ಅಗ್ರಭಾಗದಿಂದ ಭಕ್ತಿಪೂರ್ವಕವಾಗಿ ಗ್ರಹಣ ಮಾಡುತ್ತಾ ಹೇಳಿದರು: “ರಾಖಾಲ್ ಮಹಾರಾಜರಿಗೆ ಬಗೆಬಗೆಯ ಭಕ್ಷ್ಯ ಭೋಜ್ಯಗಳನ್ನು ತಿನ್ನುವುದೆಂದರೆ ಇಷ್ಟ; ಇತರರಿಗೆ ಕೊಟ್ಟು ತಿನ್ನಿಸುವುದರಲ್ಲಿಯೂ ಅಷ್ಟೇ ಇಷ್ಟವಿತ್ತು. ಆಹಾ! ಅವರು ಬೇಲೂರು ಮಠಕ್ಕೆ ಆಗಮಿಸಿದರೆಂದರೆ ಏನು ಆನಂದದ ಸಂತೆಯೆ ನೆರೆಯುತ್ತಿತ್ತು – ಎಷ್ಟ ಜನ! ಸಾಧುಭಕ್ತರ ಮಧ್ಯೆ ಧ್ಯಾನಜಪ, ಪೂಜಾಪಾಠ; ಭಜನೆ ಕೀರ್ತನೆ, ರಂಗರಸ, ತಿನ್ನೋದು ಕೊಡೋದು ಎಲ್ಲ ನಿತ್ಯ ವ್ಯಾಪಾರವಾಗಿಬಿಡುತ್ತಿತ್ತು, ಆನಂದವೆ ಅಲ್ಲೋಲ ಕಲ್ಲೋಲವಾದಂತೆ. ಆ ದಿನಗಳೇ ದಿನಗಳು! ಅದೂ ಒಂದು ಕಾಲವಾಗಿತ್ತು! ಸ್ವಾಮಿ ಬ್ರಹ್ಮಾನಂದರಂತಹ ಬ್ರಹ್ಮಜ್ಞ ಪುರುಷರಿಂದಲೇ ಸಾಧ್ಯ, ಜನರಿಗೆ ನಾನಾ ಭಾವಗಳಿಂದ ಆನಂದವೀಯವುದಕ್ಕೆ.”

ಮಾತಾಡುತ್ತಾ ಆಡುತ್ತಾ ಮಹಾಪುರುಷಜಿ ಬ್ರಹ್ಮಾನಂದರ ಚಿತ್ರಪಟವೊಂದನ್ನು ತರುವುದಕ್ಕೆ ಹೇಳಿದರು. ಚಿತ್ರಪಟವನ್ನು ಕೊಟ್ಟಮೇಲೆ ಅದನ್ನು ತೆಗೆದುಕೊಂಡು ಹಣೆಗೂ ಎದೆಗೂ ಮುಟ್ಟಿಸಿಕೊಂಡರು. ಆಮೇಲೆ ಆ ಚಿತ್ರವನ್ನೆ ಎವೆಯಿಕ್ಕದೆ ದಿಟ್ಟಿಸುತ್ತಾ ಹೇಳಿದರು: “ನೋಡಿದಿರಾ ಎಂತಹ ರಾಜಸದೃಶವಾದ ಚಹರೆ! ಎಂತಹ ಕಣ್ಣು! ಎಂತಹ ಮುಖ! ಕುಳಿತಿರಲಿ ನಿಂತಿರಲಿ ಅವರು ನಿಜವಾಗಿ ರಾಜರು. ಅದಕ್ಕಾಗಿಯೆ ಸ್ವಾಮೀಜಿ ಅವರನ್ನು ‘ರಾಜ’ ಎಂದು ಕರೆದದ್ದು ‘ರಾಜ ಬಂದ!’ ‘ರಾಜನಿಗೆ ಕೊಡು!’ ‘ರಾಜನ್ನ ಕರೆ!’ ‘ರಾಜಗೆ ಹೇಳು!’ ‘ರಾಜನ ಮಠ’ – ಹೀಗೆಲ್ಲ, ರಾಖಾಲ್ ಮಹಾರಾಜ್‌ಗೆ ಆ ಹೆಸರು ಕೊಟ್ಟದ್ದು ಸ್ವಾಮೀಜಿಯೆ. ಈ ಮಠ ಸಮಸ್ತವೂ ಅವರದ್ದೆ; ನಾವು ಯಾರು? ಈ ಮಠಕ್ಕಾಗಿ ಅವರು ಏನೇನು ಮಾಡಿದ್ದಾರೆ; ಎಷ್ಟೆಷ್ಟು ದುಡಿದಿದ್ದಾರೆ! ಒಂದೊಂದು ಇಟ್ಟಿಗೆಯೂ ಅವರ ನೆನಪಿನ ಘಟ್ಟಿಯಾಗಿದೆ. ತಮ್ಮ ಎದೆಯ ರಕ್ತವನ್ನು ನೀರು ಮಡಿ ಹೊಯ್ದು ಕಲಸಿ ಇದನ್ನೆಲ್ಲ ಕಟ್ಟಿದರು. ಈಗಲೂ ಅವರೇ ಎಲ್ಲವನ್ನೂ ಮಾಡುತ್ತಿರುವುದು. ನಾವು ಅವರ ಅಳು-ಅವರ ಪಾದುಕೆಯನ್ನು ತಲೆಯಲ್ಲಿ ಹೊತ್ತು ಈ ಸ್ಥಾನದಲ್ಲಿ ಕೂತಿದ್ದೇವೆ. ಭರತ ಹೇಗೆ ರಾಮಚಂದ್ರನ ಪಾದುಕೆಯನ್ನು ಸಿಂಹಾಸನದ ಮೇಲಿಟ್ಟು ರಾಜಶಾಸನ ಮಾಡುತ್ತಿದ್ದನೋ ನಾವೂ ಹಾಗೆಯೆ ರಾಖಾಲ್ ಮಹಾರಾಜರ ಪಾದುಕೆಗಳನ್ನು ತಲೆಯಲ್ಲಿಟ್ಟುಕೊಂಡೆ ಅವರ ಕೆಲಸ ನಡೆಸುತ್ತಿದ್ದೇವೆ. ಅವರು ಹೇಗೆ ಬುದ್ಧಿಕೊಡುತ್ತಾರೊ ಹಾಗೆ ಕೆಲಸ ಮಾಡುತ್ತೇವೆ. ಮಹಾರಾಜ್ ಮೇಲೆ ಸ್ವಾಮೀಜಿಗೆ ಏನು ಶ್ರದ್ಧೆ, ಎಷ್ಟು ಪ್ರೀತಿ! ‘ಗುರುವತ್ ಗುರುಪುತ್ರೇಷು’ ಎಂಬುದೇ ಅವರ ಭಾವವಾಗಿತ್ತು.”

ಸ್ವಲ್ಪ ಸುಮ್ಮನಿದ್ದು ತರುವಾಯ ಅಲ್ಲಿ ನಿಂತಿದ್ದವರನ್ನೆಲ್ಲ ಸಂಲಕ್ಷಿಸಿ ಹೇಳಿದರು: “ಮಹಾರಾಜ್ ಯಾರು ಗೊತ್ತೆ? ಅವರು ವ್ರಜದ ರಾಖಾಲ, ಬೃಂದಾವನದ ಶ್ರೀಕೃಷ್ಣ ಸಂಗಾತಿ. ಠಾಕೂರ್ ಹೇಳುತ್ತಿದ್ದರು, ‘ಕೊನೆಹೊತ್ತಿನಲ್ಲಿ ಅವರ ನಿಜಸ್ವರೂಪ ಏನು ಎಂಬುದು ಅವರಿಗೆ ದರ್ಶನ ಗೋಚರವಾಗುತ್ತದೆ’ ಎಂದು. ಠಾಕೂರರು ಏನು ಹೇಳುತ್ತಿದ್ದರೋ ಅದೇ ನಡೆಯಿತು. ಅವರ ಅವಸಾನ ಸಮಯದಲ್ಲಿ ಮಹಾರಾಜ್ ತಮಗಾಗುತ್ತಿದ್ದ ನಾನಾ ರೀತಿಯ ದರ್ಶನಗಳನ್ನು ಕುರಿತು ಆಡತೊಡಗಿದರು: ‘ನಾನು ಬೃಂದಾವನದ ಗೋಪ. ವ್ರಜದ ರಾಖಾಲ. ನನ್ನ ನೂಪುರ ತೆಗೆದುಕೊಂಡು ಬನ್ನಿ; ಕೃಷ್ಣನ ಕೈಹಿಡಿದುಕೊಂಡು ಕುಣಿಯುತ್ತೇನೆ. ಅಯ್ಯೊ, ನಿಮಗೆ ಕಣ್ಣಿಲ್ಲ; ಕಮಲದಲ್ಲಿ ನಿಂತಿರುವ ನನ್ನ ಕೃಷ್ಣನನ್ನು ಕಾಣಲಾರಿರಾ!’ ಇತ್ಯಾದಿ. ಯಾವಾಗ ಅಂತಹ ದರ್ಶನಾದಿಗಳ ವಿಚಾರ ಅವರು ಹೇಳತೊಡಗಿದರೊ ಆವಾಗಲೆ ನಮಗೆ ತಿಳಿದುಹೋಯ್ತು, ಅವರ ಶರೀರ ಇನ್ನು ಉಳಿಯುವುದಿಲ್ಲ ಎಂದು.”

ಮಹಾಪುರುಷಜಿ ಇಂದು ಬ್ರಹ್ಮಾನಂದರ ಸವಿನೆನಪುಗಳಿಂದ ವಿಭ್ರಮೋಲ್ಲಾಸಗೊಂಡಂತೆ ತೋರಿದರು. ಮತ್ತೆ ಹೇಳತೊಡಗಿದರು: “ಎಂತಹ ತಪಸ್ಯೆ ಮಾಡಿದರು ಮಹಾರಾಜ್! ಶ್ರೀ ಗುರುಮಹಾರಾಜರ ಅತ್ಯಂತವಾದ ಆದರಕ್ಕೆ ಪಾತ್ರರಾಗಿದ್ದರೂ ಅವರು ಎಂತೆಂತಹ ಕಠೋರ ಸಾಧನೆಗಳನ್ನು ಮಾಡಲಿಲ್ಲ! ಅವರಂಥವರ ಕಾರ್ಯಗಳೆಲ್ಲ ಲೋಕಶಿಕ್ಷಣ ಮಾತ್ರಕ್ಕಾಗಿಯೆ. ಒಮ್ಮೆ ಹರಿ ಮಹಾರಾಜರ (ಸ್ವಾಮಿ ತುರೀಯಾನಂದ) ಅವರೂ ಒಟ್ಟಿಗೆ ವಾಸಿಸುತ್ತಾ ತಪಸ್ಯಾ ನಿರತರಾದರು. ಅವರಿಬ್ಬರೂ ಅಕ್ಕಪಕ್ಕದ ಕುಟಿಗಳಲ್ಲಿಯೆ ವಾಸಿಸುತ್ತಿದ್ದರು. ಆದರೆ ತಪಸ್ಯೆ ಎಷ್ಟು ತೀವ್ರವಾಗಿತ್ತೆಂದರೆ ಒಬ್ಬರೊಡನೊಬ್ಬರು ಮಾತಾಡುತ್ತಲೂ ಇರಲಿಲ್ಲ. ಈಗೊಮ್ಮೆ ಆಗೊಮ್ಮೆ ಇಬ್ಬರೂ ಸಂಧಿಸುತ್ತಿದ್ದುದೇನೋ ಉಂಟು; ಆದರೆ ಇಬ್ಬರೂ ತಮ್ಮ ತಮ್ಮ ಭಾವಾವಸ್ಥೆಯಲ್ಲಿಯೆ ಮಗ್ನರಾಗಿರುತ್ತಿದ್ದುದರಿಂದ ಮಾತುಕತೆ ಆಡುವುದಕ್ಕೆ ಯಾರೊಬ್ಬರಿಗೂ ಮನಸ್ಸಾಗುತ್ತಿರಲಿಲ್ಲ. ಪರಸ್ಪರ ವಿಶ್ವಾಸದಲ್ಲಿ ಒಬ್ಬರನ್ನೊಬ್ಬರು ಮೀರಿಸುತ್ತಿದ್ದರೂ ಒಮ್ಮೆಮ್ಮೆ ಇಪ್ಪತ್ತು ಮೂವತ್ತು ದಿನಗಳಾದರೂ ಸರಿಯೆ, ಒಬ್ಬರೊಡನೊಬ್ಬರು ಮಾತುಕತೆ ನಡೆಸುತ್ತಿರಲಿಲ್ಲ.”

* * *