ಬ್ರಾಹ್ಮ ಮುಹೂರ್ತ; ನೀರವ ನಿಷ್ಟಂದ ಪ್ರಕೃತಿ ನಡುವೆ ಸಮಗ್ರ ಜಗತ್ತೂ ಧ್ಯಾನಮಗ್ನವಾದಂತಿದೆ. ಪ್ರಶಾಂತವಾದಂತಿದೆ. ಪ್ರಶಾಂತವಾದ ಅಂಬರವಿತಾನದ ಅಡಿಯಲ್ಲಿ ಮಂದಿರಗಳೂ ಧ್ಯಾನಮೌನಮುದ್ರಿತವಾಗಿವೆ. ಅದೂರದಲ್ಲಿಯೆ ಪೂತಸಲಿಲೆಯಾದ ಭಾಗೀರಥಿ ಧೀರಪ್ರವಾಹಿನಿಯಾಗಿದೆ. ಪವನನೂ ಮೃದು ಮಂದ. ಮಠದಲ್ಲಿ ಉಷೆಯ ನಸುಬೆಳಕುಗತ್ತಲಲ್ಲಿ ಸಂನ್ಯಾಸಿಗಳು ಮೆಲುನಡೆಯಿಂದ ಸದ್ದು ಮಾಡದಂತೆ ತಮ್ಮ ಧ್ಯಾನದಿ ಕರ್ಮಗಳಿಗೆ ಚಲಿಸುತ್ತಿದ್ದಾರೆ. ಸಕಲವೂ ಅಂತರ್ಮುಖ. ಮಹಾಪುರುಷ ಮಹಾರಾಜರೂ ತಮ್ಮ ಹಾಸಿಗೆಯ ಮೇಲೆ ಬಹಳ ಹೊತ್ತಿನಿಂದ ಎದ್ದು ಕೂತುಕೊಂಡಿದ್ದಾರೆ. ಅವರ ಮನಸ್ಸು ಯಾವ ಆನಂದ ಲೋಕದಲ್ಲಿ ವಿಚಾರಣ ಮಾಡುತ್ತಿದೆಯೊ ಯಾರು ಬಲ್ಲರು?

ಹಾಗೆಯೆ ಸ್ವಲ್ಪಕಾಲ ಕಳೆಯಿತು. ಉಷೆಯ ಮಂಗಲಕರ ಸ್ಪರ್ಶದಿಂದ ಪೂರ್ವಾಕಾಶವು ರಕ್ತಿಮಾಭವಾಗಿ ಬರುಬರುತ್ತಾ ಈಷತ್ ಉಜ್ವಲವೂ ಆಗ ತೊಡಗಿತು. ವಿಹಗಕುಲವು ಈಶಗುಣಗಾನ ಮಾಡುವಂತೆ ಹಾಡಲಾರಂಭಿಸಿತು. ಶ್ರೀ ಶ್ರೀ ಠಾಕೂರ ಮಂದಿರದಲ್ಲಿ ಶಂಖಧ್ವನಿ ಮಂಗಳಾರತಿಗೆ ಎಲ್ಲರನ್ನೂ ಆಹ್ವಾನಿಸಿತು. ಮಂಗಳಾರತಿಯಾದ ಮೇಲೆ ದೇವರಮನೆಯಲ್ಲಿ ಉಷಾಭಜನೆ ಆರಂಭವಾಯಿತು.

ಇವತ್ತು ಸೋಮವಾರ. ಆದ್ದರಿಂದ ಮಹಾದೇವನ ಭಜನೆ ನಡೆಯುತ್ತಿತ್ತು. ಸಾಧುವೊಬ್ಬರು ಶಿವಭಕ್ತನಾದ ದೇವಿಸಹಾಯದಿಂದ ರಚಿತವಾಗಿದ್ದು ಮಹಾ ಪುರುಷಜಿಗೆ ವಿಶೇಷ ಪ್ರಿಯವಾಗಿದ್ದ ಎರಡು ಹಾಡುಗಳನ್ನು ಹಾಡಿದರು – ‘ಗಂಗಾಧರ ಮಹಾದೇವ. ಕೇಳನ್ನಯ ಬಿನ್ನಹವ’ ಮತ್ತು ‘ಓ ಶಿವ, ನನ್ನೀ ನೌಕೆಯನಾ ಪಾರಕೆ ಸಾಗಿಸು.’ ಕೊನೆಯಲ್ಲಿ ‘ಯೋಗಾಸನದಲ್ಲಿ ಯೋಗೀಂದ್ರ ಶಿವನು ಮಹಾಧ್ಯಾನ ಮಗ್ನನಾಗಿಹನು,’ ಎಂಬ ಹಾಡನ್ನೂ ಹಾಡಿದರು. ಹಾಡಿನ ಮಧುರನಾದ ಮಠವನ್ನೆಲ್ಲ ವ್ಯಾಪಿಸಿತು. ಗಾನವನ್ನು ಆಲಿಸುತ್ತಾ ಮಹಾಪುರುಷಜಿ ಗಭೀರಧ್ಯಾನದಲ್ಲಿ ಮಗ್ನವಾಗಿ ಹೋದರು, ಸ್ಪಂದಹೀನ, ನಿರ್ನಿಮೇಷ.

ಕ್ರಮೇಣ ಮಹಾಪುರುಷಜಿ ಧ್ಯಾನದಿಂದ ಸಾಮಾನ್ಯಭೂಮಿಕೆಗೆ ಇಳಿತಂದರೂ ಅವರ ಮನಸ್ಸು ಇನ್ನೂ ಶಿವಾನಂದದ ಸಾಗರದಲ್ಲಿಯೆ ಮುಳುಗಿ ಹೋಗಿತ್ತು. ನಡುನಡುವೆ ಅಸ್ಫುಟಸ್ವರದಲ್ಲಿ ‘ಓಂ ನಮಶ್ಯಿವಾಯ’ ಮತ್ತು ‘ಹರಿ ಓಂ ತತ್ ಸತ್’ ಎಂದೂ, ಮತ್ತೊಮ್ಮೆ ‘ಭಂ ಭಂ ಮಹಾದೇವ್’ ಎಂದೂ ಹೇಳಿಕೊಳ್ಳುತ್ತಿದ್ದರು. ಅಷ್ಟು ಹೊತ್ತಿಗಾಗಲೆ ಮಠದ ಅನೇಕ ಸಾಧುಗಳೂ ಬ್ರಹ್ಮಚಾರಿಗಳೂ ಮಹಾಪುರುಷಜಿಯ ಕೊಠಡಿಯಲ್ಲಿ ನೆರೆದಿದ್ದರು. ಅವರು ಕ್ರಮೇಣ ಪ್ರಕೃತಿಸ್ಥರಾಗಿ ಅಲ್ಪಸ್ವಲ್ಪ ಮಾತುಕತೆಗೆ ಆರಂಭಮಾಡಿದರು.

ಮಾತು ಗಿರೀಶಚಂದ್ರ ಘೋಷರಿಂದ ರಚಿತವಾಗಿದ್ದ ಆ ಕೊನೆಯ ಹಾಡಿನ ವಿಚಾರವಾಗಿಯೆ ನಡೆದಿತ್ತು. ಮಹಾಪುರುಷಜಿ ‘ಆಹಾ ಗಿರೀಶಬಾಬು ಎಂತಹ ಹಾಡನ್ನು ರಚಿಸಿದ್ದಾರೆ!’ ಎಂದರು. ತಾವೆ ಆ ಹಾಡನ್ನು ಹಾಡತೊಡಗಿದರು. ಮತ್ತೆ ಹೇಳಿದರು: “ಶ್ರೀ ಠಾಕೂರರ ದಯೆಯಿಲ್ಲದಿದ್ದರೆ ಅವರಿಂದ ಅಂತಹ ಹಾಡನ್ನು ರಚಿಸಲಾಗುತ್ತಿರಲಿಲ್ಲ. ಸಾಕ್ಷಾತ್ ಶಿವದರ್ಶನವಾದಂತೆಯೆ ಆ ಹಾಡನ್ನು ಬರೆದಿದ್ದಾರೆ. ಎಂತಹ ಸುಂದರ ಗಂಭೀರ ಧ್ಯಾನವಸ್ಥೆ. ಧ್ಯಾನಸ್ಥಿತಿ ಗಾಢವಾದಂತೆಲ್ಲ ಭೂತ ಭವಿಷ್ಯತ್ಕಾಲ ಭಾವನೆಯೆ ಒಂದಿನಿತೂ ಇರುವುದಿಲ್ಲ. ಇರುವುದೆಂದರೆ ವರ್ತಮಾನದ ಬೋಧ ಮಾತ್ರ, ಅದೂ ಅಸ್ಪಷ್ಟ. ಅದರಿಂದಲೆ ಗಿರೀಶಬಾಬು ಹೇಳಿರುವುದು- ‘ಕಾಲ ವರ್ತಮಾನ ಬದ್ಧ’ ಎಂದು. ಆಗ ಕಳೆದ ಕಾಲ ಎಂಬ ಬೋಧೆಯೆ ಇರುವುದಿಲ್ಲ. ಇರುವುದೊಂದೇ ವರ್ತಮಾನಕಾಲ ಭಾವ. ಆದರೆ ಮನಸ್ಸು ಸಂಪೂರ್ಣ ಸಮಾಧಿಸ್ಥವಾಯಿತೆಂದರೆ ವರ್ತಮಾನಕಾಲ ಭಾವವೂ ಇರುವುದಿಲ್ಲ. ಅದು ತ್ರಿಕಾಲಾತೀತವಾದ ಅವಸ್ಥೆ. ಆ ಅವಸ್ಥೆಯನ್ನು ವರ್ಣಿಸುವುದಕ್ಕೂ ಆಗುವುದಿಲ್ಲ. ಅದಕ್ಕೆ ಸ್ವಾಮೀಜಿ ಹೇಳಿದ್ದು ‘ನುಡಿಗೆ ಬಗೆಗೆ ನಿಲುಕದುದು. ತಿಳಿದವನಿಗೆ ತಿಳಿಯುವುದು!’ ಅದು ಸಾಧಾರಣ ಅವಸ್ಥೆಯಲ್ಲ. ಸಮಾಧಿಯಿಂದ ಇಳಿದು ಬಂದ ಮೇಲೆ ಅದರ ಆನಂದವನ್ನು ಹೇಳುವುದಕ್ಕೆ ಹೋದರೆ ಹುಡುಕಿದರೂ ಮಾತು ಸಿಕ್ಕುವುದಿಲ್ಲ.”

“ನಾವೇ ನೋಡಿದ್ದೇವೆ. ಶ್ರೀಠಾಕೂರರು ನಿರ್ವಿಕಲ್ಪ ಸಮಾಧಿಯಿಂದ ಇಳಿಯುವ ಸಮಯದಲ್ಲಿ ಇನ್ನೂ ಅದರ ಭಾವಾವೇಶದಲ್ಲಿ ಇರುವಾಗಲೆ, ಆ ಅವಸ್ಥೆಯನ್ನು ವರ್ಣಿಸುವುದಕ್ಕಾಗಿ ಎಷ್ಟೇ ಪ್ರಯತ್ನ ಮಾಡಿದರೂ ಸಾಧ್ಯವಾಗುತ್ತಿರಲಿಲ್ಲ. ಆಮೇಲೆ ಹೇಳುತ್ತಿದ್ದರು: ‘ಆ ಅವಸ್ಥೆಯನ್ನು ಎಲ್ಲರಿಗೂ ವರ್ಣಿಸಿ ಹೇಳಬೇಕೆಂದು ನನಗೇನೊ ಬಹಳ ಆಶೆ. ಆದರೆ ಆಗುವುದಿಲ್ಲ, ಯಾರೋ ಬಾಯಿಮುಚ್ಚಿ ಹಿಡಿದ ಹಾಗಾಗುತ್ತದೆ.’ ದಿಟಕ್ಕೂ ಆ ಅವಸ್ಥೆಯನ್ನು ವರ್ಣಿಸುವುದಕ್ಕೆ ಆಗುವುದಿಲ್ಲ. ‘ತಿಳಿದವನಿಗೆ ತಿಳಿಯುವುದು,’ ಅನುಭವೈಕವೇದ್ಯ.”

ಪ್ರತ್ಯುಷೆಯಲ್ಲಿ ದೇವಮಂದರಿದಲ್ಲಿ ಭಜನೆ ಮಾಡುತ್ತಿದ್ದ ಆ ಸಾಧು, ಮಹಾಪುರುಷಜಿಗೆ ಪ್ರಣಾಮ ಮಾಡಲು ಬಂದರು. ಅವರನ್ನು ಕುರಿತು ಹೇಳಿದರು: “ನೋಡು, ಠಾಕೂರರ ಸನ್ನಿಧಿಯಲ್ಲಿ ನೀನು ಶಿವಸ್ತೋತ್ರ ಮಾಡುವಾಗಲೆಲ್ಲ ಒಂದೆರಡು ತಾಯಿಯ ಸ್ತೋತ್ರಗಳನ್ನೂ ಅವಶ್ಯವಾಗಿ ಹಾಡಬೇಕು. ಯಾವುದಾದರೂ ದೇವೀವಿಷಯುಕವಾದ ಒಂದೆರಡು ಹಾಡು ಹಾಡಿಯೆ ಭಜನೆಯನ್ನು ಮುಕ್ತಾಯಗೊಳಿಸಬೇಕು. ಇದನ್ನು ಚೆನ್ನಾಗಿ ಮನಸ್ಸಿನಲ್ಲಿಟ್ಟುಕೊ. ನಿನಗೆ ಗೊತ್ತಾಗುವುದಿಲ್ಲ, ಅದಕ್ಕೇ ನಾನು ಹೇಳುತ್ತಿದ್ದೇನೆ. ನೀನು ಹಾಡುವುದು ಶ್ರೀ ಠಾಕೂರರಿಗೆ, ಠಾಕೂರರೆ ನಿನ್ನ ಗಾನವನ್ನು ಕೇಳುತ್ತಿರುತ್ತಾರೆ ಎಂಬ ಭಾವದಿಂದಲೇ ಭಜನೆ ಮಾಡಬೇಕು. ಶ್ರೀ ಠಾಕೂರರಿಗೆ ಒಂದೇ ಸಮನಾಗಿ ಶಿವಸ್ತೋತ್ರಗಳನ್ನು ಕೇಳಲಾಗುತ್ತಿರಲಿಲ್ಲ. ಒಂದು ದಿನ ದಕ್ಷಿಣೇಶ್ವರಕ್ಕೆ ಒಬ್ಬ ದೊಡ್ಡ ಗಾಯಕರು ಬಂದರು, ಶ್ರೀ ಗುರುಮಹಾರಾಜರ ಮುಂದೆ ಹಾಡಿ ಅವರನ್ನು ಸಂತೋಷ ಪಡಿಸುವುದಕ್ಕೆ. ಅವರು ತುಂಬ ವಿದ್ವಾಂಸರು, ಅದ್ಭುತವಾಗಿ ಹಾಡುತ್ತಿದ್ದರು. ಅವರು ಮೊದಲಿನಿಂದಲೆ ಶಿವನನ್ನು ಕುರಿತ ಹಾಡುಗಳನ್ನು ಹಾಡಲು ಶುರುಮಾಡಿದರು. ಠಾಕೂರರು ಒಂದೆರಡು ಹಾಡು ಕೇಳುತ್ತಲೆ ಸಮಾಧಿಸ್ಥರಾಗಿಬಿಟ್ಟರು – ಒಮ್ಮೆಗೆ ನಿರ್ವಿಕಲ್ಪ ಸಮಾಧಿ! ನಾವು ಯಾರೂ ಅದಕ್ಕೆ ಮೊದಲು ಠಾಕೂರರು ಆ ರೀತಿ ಸಮಾಧಿಸ್ಥರಾದುದನ್ನು ಕಂಡಿರಲಿಲ್ಲ. ಒಂದೆ ಸಾರಿಗೆ ಅವರ ಮುಖ ಕೆಂಪಾಯಿತು. ದಿವ್ಯಾವಿಷ್ಟರಾದರು. ಅವರ ಶರೀರದ ಗಾತ್ರ ಎಂದಿಗಿಂತಲೂ ದೊಡ್ಡದಾಗಿ ಕಾಣಿಸಿತು, ಮೈಯಲ್ಲಿ ನವಿರು ನಿಮಿರಿತು. ಅದೆಂತಹ ದೃಶ್ಯ! ಅದನ್ನೇನೆಂದು ಹೇಳಲಿ? ಹೀಗೆ ಆ ಭಾವದಲ್ಲಿಯೆ ಬಹಳ ಹೊತ್ತು ಕಳೆಯಿತು, ಆದರೂ ಸಮಾಧಿ ಭಂಗವಾಗಲೊಲ್ಲದು. ಹಾಡುಗಾರಿಕೆಯೂ ಮುಂದುವರಿಯುತ್ತಲೆ ಇತ್ತು. ನಾವೆಲ್ಲ ಸ್ತಂಭಿತರಾಗಿ ನಿರ್ವಾಕಾದೆವು. ಠಾಕೂರರ ಅಂತಹ ಗಂಭೀರ ಸಮಾಧಿಸ್ಥಿತಿಯನ್ನಾಗಲಿ, ಅವರ ಶರೀರ ಅಷ್ಟು ದೊಡ್ಡದಾಗಿ ತೋರಿದ ಅಂತಹ ಮೂರ್ತಿಯನ್ನಾಗಲಿ ನಾವು ಮತ್ತಾವಾಗಲೂ ನೋಡಿದಂತೆ ನೆನಪಿಲ್ಲ. ಬಹಳ ಹೊತ್ತಾದ ಮೇಲೆ ಠಾಕೂರರು ಹಠಾತ್ತನೆ ‘ಊಃ ಊಃ’ ಎನ್ನತೊಡಗಿದರು, ಒಳಗೆ ಏನೋ ನೋವಾಗುತ್ತಿದೆ ಎಂಬಂತೆ. ಆಮೇಲೆ ಬಹಳ ಕಷ್ಟದಿಂದ ‘ಶಕ್ತಿ ಹಾಡು’ ಎಂದು ಹೇಳಿದರು. ಶಕ್ತಿ ವಿಷಯಕವಾದ ಗಾನ ಹಾಡಬೇಕೆಂಬುದು ಅವರ ಇಂಗಿತ ಇರಬೇಕು ಎಂದು ತಿಳಿದು, ಹಾಡುಗಾರರಿಗೆ ತಾಯಿಯ ವಿಷಯಕವಾಗಿ ಹಾಡುವಂತೆ ಹೇಳಲು ಅವರೂ ಒಡನೆಯ ದೇವಿಸ್ತುತಿಗಳನ್ನು ಗಾಯನ ಮಾಡತೊಡಗಿದರು. ಆಮೇಲೆ ಅವರು ಹೇಳಿದರು: ಆ ದಿನ ಅವರ ಮನಸ್ಸು ತುಂಬ ಗಂಭೀರ ಸಮಾಧಿಯಲ್ಲಿ ಮುಳುಗಿ ಹೋಗಿತ್ತಂತೆ; ಅದನ್ನು ಕೆಳಕ್ಕೆ ತರುವುದಕ್ಕೆ ಎಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲವಂತೆ. ಶ್ರೀಗುರುಮಹಾರಾಜ್ ಬಹುಕಾಲ ನಿರ್ವಿಕಲ್ಪ ಸಮಾಧಿಯಲ್ಲಿರಲು ಇಷ್ಟಪಡುತ್ತಿರಲಿಲ್ಲ. ಬಹುಕಾಲ ನಿರ್ವಿಕಲ್ಪ ಸಮಾಧಿಯಲ್ಲಿರಲು ಇಷ್ಟಪಡುತ್ತಿರಲಿಲ್ಲ. ಅವರು ಬಂದದ್ದು ಜಗತ್ತಿನ ಕಲ್ಯಾಣಕ್ಕಾಗಿ. ಆದರೆ ನಿರ್ವಿಕಲ್ಪ ಸಮಾಧಿಯಲ್ಲಿಯೆ ಇದ್ದು ಬಿಟ್ಟರೆ ಲೋಕದ ಕೆಲಸ ಮಾಡುವ ಸಂಭವ ಇರುವುದಿಲ್ಲ. ಆದ್ದರಿಂದಲೆ ಅವರು ಭಕ್ತರ ಸಂಗದಲ್ಲಿ ಭಕ್ತಿಯ ಭಾವವನ್ನೆ ಆಶ್ರಯಿಸಿರಲು ಇಷ್ಟಪಟ್ಟುದು. ಶಿವನ ಧ್ಯಾನವೆಂದರೆ ನಿರ್ವಿಕಲ್ಪ ಅವಸ್ಥೆ. ಅಲ್ಲಿ ಈ ಸೃಷ್ಟಿಯೂ ಇಲ್ಲ, ಜೀವಜಗತ್ತೂ ಇಲ್ಲ. ಠಾಕೂರರ ಮನಸ್ಸಿನ ಸ್ವಾಭಾವಿಕ ಗತಿ ಇದ್ದುದೇ ನಿರ್ವಿಕಲ್ಪದ ದಿಕ್ಕಿಗೆ. ಅವರು ವಾಸನಾ ರೂಪವಾಗಿ ಏನಾದರೂ ಸಣ್ಣಪುಟ್ಟ ಆಶೆಗಳನ್ನು ಇಟ್ಟುಕೊಂಡು ತಮ್ಮ ಮನಸ್ಸನ್ನು ಕೆಳಗಿಳಿಯುವಂತೆ ಮಾಡಿಕೊಳ್ಳುತ್ತಿದ್ದರು. ಅವರಲ್ಲಿ ಎಲ್ಲವೂ ಅದ್ಭುತವೇ ಆಗಿತ್ತು.”

ಸ್ವಲ್ಪ ಹೊತ್ತು ಸುಮ್ಮನಿದ್ದು, ತರುವಾಯ ಸೇವೆಗಿದ್ದ ಸಾಧುವೊಬ್ಬರನ್ನು ಕುರಿತು ಕೇಳಿದರು: “ಇವತ್ತು ಸೋಮವಾರ. ನಮ್ಮ ಶಿವಮಹಿಮ್ಮಃ ಸ್ತೋತ್ರ ಪಾಠವಾಗುವುದಿಲ್ಲವೆ? ಯಾವಾಗ?” “ಈಗಲೆ ಆಗುತ್ತದೆ, ಮಹಾರಾಜ್”, ಎಂದು ಹೇಳಿ ಆ ಸೇವಕ ಸಾಧು ಹತ್ತಿರವಿದ್ದ ಮೇಜಿನ ಮೇಲಿಂದ ಒಂದು ಸ್ತೋತ್ರದ ಪುಸ್ತಕ ತೆಗೆದುಕೊಂಡು ಅದರಿಂದ ಶಿವಮಹಿಮ್ನಃ ಸ್ತೋತ್ರವನ್ನು ರಾಗವಾಗಿ ವಾಚನಮಾಡತೊಡಗಿದರು. ಮಹಾಪುರುಷಜಿ ಕೈ ಜೋಡಿಸಿಕೊಂಡು ಕುಳಿತಿದ್ದರು- ಚಕ್ಷು ಮುದ್ರಿತವಾಗಿತ್ತು. ಸ್ತೋತ್ರ ಪಾಠ ಮುಂದುವರಿಯಿತು; ಮಹಾಪುರುಷಜಿಯೂ ಜೊತೆಜೊತೆಗೆ ಹಾಡತೊಡಗಿದರು:

ಮಹಿಮ್ನಃ ಪಾರಂ ತೇ ಪರಮವಿದುಷೋ ಯದ್ಯಸದೃಶೀ
ಸ್ತುತಿರ್ಬ್ರಹ್ಮಾದಿನಾಮಪಿ ತದವಸನ್ನಾಸ್ತ್ವಯಿ ಗಿರಃ |
ಅಥಾವಾಚ್ಯಃ ಸರ್ವಃ ಸ್ವಮತಿಪರಿಣಾಮಾವಧಿ ಗೃಣನ್
ಮಮಾಪ್ಯೇಷ ಸ್ತೋತ್ರೇ ಹರ ನಿರಪವಾದಃ ಪರಿಕರಃ ||

(ನಿನ್ನ ಮಹಿಮೆಯ ಪರಮಪಾರಮಂ ತಿಳಿಯದೆನ್ನೀ ಸ್ತೋತ್ರವ್ಯಲ್ಪಮೆನೆ, ದೇವ,
ಬ್ರಹ್ಮಾದಿ ದೇವರ್ಕಳಾ ಸ್ತೋತ್ರಂಗಳುಂ ತಾಂ ಪೂರ್ಣತಾ ದೂರಮಲ್ತೆ?
ತಮ್ಮ ಮತಿಪರಿಣಾಮದಧಿಯಲಿ ನುತಿಗೆಯ್ವರಲ್ಲಿ ತಾಮಾಗೆ ನಿದೋಷಿಗಳ್
ನನ್ನ ಈ ಸ್ತೋತ್ರಪ್ರಯತ್ನಮುಂ, ಓ ಪರಮಗುರು, ಕೇಳ್, ತಾಮನಿಂದ್ಯಮಲ್ತೆ?)

ಅತೀತಃ ಪಂಥಾನಂ ತವ ಚ ಮಹಿಮಾ ವಾಙ್ಮನಸಯೋರ್
ಅತದ್‌ವ್ಯಾವೃತ್ಯಾ ಯಂ ಚಕಿತಮಭಿದತ್ತೇ ಶ್ರುತಿರಪಿ |
ಸ ಕಸ್ಯ ಸ್ತೋತವ್ಯಃ ಕತಿವಿಧಗುಣಃ ಕಸ್ಯ ವಿಷಯಃ
ಪದೇ ತ್ವರ್ವಾಚೀನೇ ಪತತಿ ನ ಮನಃ ಕಸ್ಯನ ವಚಃ ||

(ಮಹಿಮೆ ನಿನ್ನದು ವಾಙ್ಮನಾತೀತಮಾಗಿರ್ದೊಡಂ
ಶ್ರುತಿಗಳುಂ ಚಕಿತಹೃದಯದಿ ನೇತಿಯೆಂದಿರ್ದೊಡಂ
ಗುಣಕೆ ಗಡಿಯಿಲ್ಲ ನುಡಿಗೆಡೆಯಿಲ್ಲಮೆನೆ ಸೋಲ್ತಡಂ
ನಿನ್ನ ಅರ್ವಾಚೀನ ಪದಕೆರಗದಿರ್ಪ ವಾಙ್ಮನಗಳೊಳವೆ ಪೇಳ್?)

* * *

ತ್ರಯೀ ಸಾಂಖ್ಯಂ ಯೋಗಃ ಪಶುಪತಿಮತಂ ವೈಷ್ಣವಮಿತಿ
ಪ್ರಭಿನ್ನೇ ಪ್ರಸ್ಥಾನೇ ಪರಮಿದಮದಃ ಪಥ್ಯಮಿತಿ ಚ |
ರುಚಿನಾಂ ವೈಚಿತ್ರ್ಯಾದ್ ಋಜುಕುಟಿಲ ನಾನಾ ಪಥಜುಷಾಂ
ನೃಣಾಮೇಕೋ ಗಮ್ಯಸ್ತ್ವಮಸಿ ಪಯಸಾಮರ್ಣವ ಇವ ||

(ವೇದತ್ರಯಂ ಸಾಂಖ್ಯಂ ಯೋಗಂ ಪಶುಪತಿಮತಂ ವೈಷ್ಣವಂ ಮೇಣ್
ಭಿನ್ನ ಭಿನ್ನ ಸ್ಥಾನದಿಂ ಪರಮದಂ ಪರಮಿದಂ ಪಥ್ಯಮೆಂಬರ್:
ರುಚಿಗಳೊಳ್ ವೈಚಿತ್ರ್ಯಿದಿಂ ಋಜುಕುಟಿಲ ನಾನಾಪಥಂಗಳಲ್ತೆ ಪೇಳ್?
ದಿಟದಿ ನೀನೊರ್ವನೆಯೆ ಗಮ್ಯನೈ, ಪೊಳೆಗಳ್ಗೆ ಪೆರ್ಗಡಲವೋಲ್ |)

* * *

ನಮೋ ನೇದಿಷ್ಠಾಯ ಪ್ರಿಯದವ ದವಿಷ್ಠಾಯ ಚ ನಮೋ
ನಮಃ ಕ್ಷೋದಿಷ್ಠಾಯ ಸ್ಮರಹರ ಮಹಿಷ್ಠಾಯ ಚ ನಮಃ |
ನಮೋ ವರ್ಷಿಷ್ಠಾಯ ತ್ರಿನಯನ ಯವಿಷ್ಠಾಯ ಚ ನಮೋ
ನರ್ಮ ಸರ್ವಸ್ಮೈತೇ ತದಿದಮತಿಸರ್ವಾಯ ಚ ನಮಃ ||

(ನಮೋ ಬಳಿಯಂಗೆ, ಪ್ರಿಯದವಗೆ ದೂರಂ ಮೇಣ್ ನಮೋ,
ಕಿರಿದರೊಳ್ ಕಿರಿಯಂಗೆ ನಮೋ, ಸ್ಮರಹರೆಗೆ ಪೆರ‍್ಮಂಗೆ ನಮೋ,
ಪಳೆಯ ಪಳೆಯಂಗೆ ನಮೋ, ನವೋನವತ್ರಿಯಂಗೆ ಮೇಣ್ ನಮೋ,
ಸರ್ವಮಾರ್ಪಂಗೆ ನಮೋ, ಮೇಣ್ ಸರ್ವಮುಂ ಮೀರ್ವಂಗೆ ನಮೋ ನಮಃ |)

ಬಹುಲರಜಸೇ ವಿಶ್ವೋತ್ಪತ್ವೌ ಭವಾಯ ನಮೋ ನಮಃ
ಪ್ರಬಲತಮಸೇ ತತ್‌ಸುಹಾರೇ ಹರಾಯ ನಮೋ ನಮಃ |
ಜನಸುಖಕೃತೇ ಸತ್ತ್ವೋದ್ರಿಕ್ತೌ ಮೃಡಾಯ ನಮೋ ನಮಃ
ಪ್ರಮಹಸಿ ಪದೇ ನಿಸ್ತ್ರೈಗುಣ್ಯೇ ಶಿವಾಯ ನಮೋ ನಮಃ ||

ವಿಶ್ವೋತ್ಪತ್ತಿ ಬಹುಲ ರಜೋಮಯ ಭವರೂಪಗೆ ನಮೋ ನಮಃ
ತತ್ ಸಂಹಾರಕ್ಕೆ ಪ್ರಬಲತಮೋಮಯ ಹರರೂಪಗೆ ನಮೋ ನಮಃ
ಸತ್ತ್ವೋದ್ರಿಕ್ತಂ ತಾಂ ಜನಸುಖಕೃತ ಮೃಡರೂಪಗೆ ನಮೋ ನಮಃ
ನಿಸ್ತ್ರೈಗುಣ್ಯಂ ಪ್ರಮಹಸಿಪದಾ ಶಿವರೂಪಗೆ ನಮೋ ನಮಃ |)

* * *

ಅಸಿತಗಿರಿಸಮಂ ಸ್ಯಾತ್ ಕಜ್ಜಲಂ ಸಿಂಧುಪಾತ್ರಂ
ಸುರತರುವರಶಾಖಾ ಲೇಖನೀ ಪತ್ರಮುರ್ವೀ |
ಲಿಖಿತ ಯದಿ ಗೃಹೀತ್ವಾ ಶಾರದಾ ಸರ್ವಕಾಲಂ
ತದಪಿ ತವ ಗುಣಾನಾಮೀಶ ಪಾರಂ ನ ಯಾತಿ ||

(ಸಿಂಧುಪಾತ್ರದೊಳಸಿಗಿರಿ ಬರೆವ ಮಸಿಯಾದೊಡಂ,
ದೇವತರು ಶಾಖೆ ಲೇಖನಿಯಾದೊಡಂ.
ಪತ್ರಮಿಳೆಯಾಗಿ ಶಾರದ ಬರೆಯೆ ಸರ್ವಕಾಲಂ
ಗೋಚರವೆ ನಿನ್ನ ಗುಣಗಣದ ಪಾರಂ?)

* * *

ತವ ತತ್ತ್ವಂನ ಜಾನಾಮಿ ಕೀದೃಶೋsಸಿ ಮಹೇಶ್ವರ |
ಯಾದೃಶೋsಸಿ ಮಹಾದೇವ ತಾದೃಶಾಯ ನಮೋ ನಮಃ ||

(ನಿನ್ನ ತತ್ತ್ವವನರಿಯೆನೈ ನೀನೆಂತಿರುವೆಯೆಂದು. ಹೇ ಮಹೇಶ್ವರ! ಎಂತಿಹೆಯೊ, ಮಹಾದೇವ, ಅಂತಿಹಗೆ ನಮೋ ನಮಃ!)

ಕೊನೆಯ ಒಂದೆರಡು ಶ್ಲೋಕಗಳನ್ನು ಮಹಾಪುರುಷಜಿ ಮತ್ತೆ ಮತ್ತೆ ಗಟ್ಟಿಯಾಗಿ ಕೊರಳೆತ್ತಿ ಹೇಳಿಕೊಂಡರು, ಕ್ಷಣಕಾಲ ಸರ್ವವೂ ನಿಶ್ಯಬ್ದವಾಯಿತು. ಆಮೇಲೆ ಮಹಾಪುರುಷಜಿ ಮೆಲ್ಲಮೆಲ್ಲನೆ ಹೇಳಿದರು “ನಾವು ನೋಡಿದ್ದೇವೆ, ಶ್ರೀ ಗುರುಮಹಾರಾಜರಿಗೆ ಶಿವಮಹಿಮ್ನಃ ಸ್ತೋತ್ರವನ್ನು ಪೂರ್ತಿಯಾಗಿ ಕೇಳಲಾಗುತ್ತಲೆ ಇರಲಿಲ್ಲ. ಒಂದೆರಡು ಸ್ತೊತ್ರ ಕೇಳಿಯೆ ಸಮಾಧಿಸ್ಥರಾಗಿ ಬಿಡುತ್ತಿದ್ದರು, ‘ಅಸಿತಗಿರಿಸಮಮ ಸ್ಯಾತ್’ ಮತ್ತು ತವತತ್ತ್ವಂನ ಜಾನಾಮಿ’ ಎಂಬೆರಡು ಶ್ಲೋಕಗಳನ್ನು ಮಾತ್ರ ತಾವೇ ಮಧ್ಯೆ ಮಧ್ಯೆ ಉಚ್ಚರಿಸುತ್ತಿದ್ದರು, ‘ತವತತ್ತ್ವಂನ ಜಾನಾಮಿ’ ಎಂಬ ಶ್ಲೋಕವನ್ನು ಮತ್ತೆ ಮತ್ತೆ ಹೇಳಿಕೊಳ್ಳುತ್ತಾ ಬಾಷ್ಪಪೂರ್ಣ ಲೋಚನರಾಗಿ ಕಂಬನಿಗರೆಯುತ್ತಿದ್ದರು. ಅವರು ಅಳುತ್ತಾ ಅಳುತ್ತಾ ಹೇಳುತ್ತಿದ್ದರು: ‘ನಿನ್ನ ಸ್ವರೂಪ ಯಾರು ತಿಳಿಯುತ್ತಾರೆ ಪ್ರಭೂ? ನೀನು ಯಾರೊ ಎಂದು ಯಾರಿಗೆ ಗೊತ್ತು? ನನಗೆ ನಿನ್ನನ್ನು ತಿಳಿಯುವುದೂ ಬೇಡ, ಅರಿಯವುದೂ ಬೇಡ, ಪ್ರಭೂ. ಕೇವಲ ನಿನ್ನ ಶ್ರೀ ಪಾದಪದ್ಮದಲ್ಲಿ ನನಗೆ ಶ್ರದ್ಧಾಭಕ್ತಿಯನ್ನು ದಯಪಾಲಿಸು!’ ಯಾರು ತಾನೆ ಅವನನ್ನು ಅರಿಯಬಲ್ಲರು?”

ಆಮೇಲೆ ಆ ಶ್ಲೋಕಗಳಲ್ಲಿ ಕೆಲವುದರ ವಂಗಭಾಷಾನುವಾದವನ್ನು ಮಹಾಪುರುಷಜಿಯ ನಿರ್ದೇಶಾನುಸಾರವಾಗಿ ಓದಲಾಯಿತು.

‘ನೀಲಗಿರಿಯೇ ಮಸಿಯಾಗಿ, ಸಮುದ್ರವೆ ಮಸಿಕುಡಿಕೆಯಾಗಿ, ಕಲ್ಪತರು ಶಾಖೆಯೆ ಲೇಖನಿಯಾಗಿ, ಪೃಥ್ವಿಯೆ ಪತ್ರವಾಗಿ, ಸಾಕ್ಷಾತ್ ಶಾರದೆಯೆ ಚಿರಕಾಲವೂ ಬರೆದರೂ, ಹೇ ಈಶ್ವರ, ನಿನ್ನ ಗುಣಗಳನ್ನು ಬರೆದು ಪೂರೈಸಲಳವಲ್ಲ.

‘ಹೇ ಮಹೇಶ್ವರ, ನೀನು ಹೇಗಿದ್ದೀಯೋ ಆ ನಿನ್ನ ತತ್ತ್ವ ನನಗೆ ಗೊತ್ತಿಲ್ಲ. ಹೇ ಮಹಾದೇವ, ಹೇಗಿದ್ದೀಯೊ ಹಾಗಿರುವಾಗ ನಿನಗೆ ನಮಸ್ಕಾರ ಮಾಡುತ್ತೇನೆ.’

ತರುವಾಯ ಮಹಾಪುರುಷಜಿ ಹೇಳಿದರು: “ಯೋಗಿಶ್ವರ ಶಿವನು ಸಂನ್ಯಾಸಿ ಗುರು. ಅದಕ್ಕಾಗಿಯೆ ಸ್ವಾಮೀಜಿ ಚಿಕ್ಕಂದಿನಿಂದಲೂ ಶಿವನ ಧ್ಯಾನದಲ್ಲಿಯೆ ಇಷ್ಟವುಳ್ಳವರಾಗಿದ್ದುದು. ಶಿವನಂತೆ ಸರ್ವತ್ಯಾಗಿಯಾಗದಿದ್ದರೆ ಮನಸ್ಸು ಎಂದಿಗೂ ಸಮಾಧಿಸ್ಥವಾಗುವುದಿಲ್ಲ.”

* * *