ಕೆಲದಿನಗಳಿಂದ ಮಹಾಪುರುಷಜಿಯ ಮೈ ಸರಿಯಾಗಿಲ್ಲ. ಸ್ವಲ್ಪ ಸ್ವಲ್ಪ ಜ್ವರವೂ ಬರುತ್ತಿದೆ. ರಕ್ತದ ಒತ್ತಡವೂ ಅತ್ಯಧಿಕವಾಗಿದೆ; ಅಲ್ಲದೆ ಹೃದಯ ಕ್ರಿಯೆಯೂ ತೊಂದರೆಗಿಟ್ಟುಕೊಂಡಿದೆ. ಕೆಲವು ಸಾರಿ ಉಸಿರಾಡುವುದಕ್ಕೇ ತುಂಬ ಕಷ್ಟವಾಗಿ ರಾತ್ರಿಯೆಲ್ಲ ನಿದ್ದೆಮಾಡುವುದಕ್ಕೂ ಆಗುತ್ತಿಲ್ಲ. ತೆಗೆದುಕೊಳ್ಳುತ್ತಿದ್ದ ಆಹಾರವೆಂದರೆ ಸ್ವಲ್ಪ ಗಂಜಿ. ಡಾಕ್ಟರ್ ಅಜಿತನಾಥರಾಯ ಚೌಧರಿ ಮಹಾಶಯರು ಚಿಕಿತ್ಸೆ ನಡೆಸುತ್ತಿದ್ದರು. ಡಾಕ್ಟರ್ ಹೆಚ್ಚು ಕಡಿಮೆ ದಿನನಿತ್ಯವೂ ಬಂದು ಹೋಗುತ್ತಿದ್ದರು. ಆದರೆ ಮಹಾಪುರುಷಜಿ ಮಾತ್ರ ತಮ್ಮ ಕಾಯಿಲೆಯನ್ನು ಅಷ್ಟೇನೂ ಮನಸ್ಸಿಗೆ ಹಾಕಿಕೊಳ್ಳುತ್ತಿರಲಿಲ್ಲ. ಯಾವಾಗಲೂ ಸಂತೋಷಚಿತ್ತರಾಗಿ, ಎಲ್ಲರೊಡನೆಯೂ ಈಶ್ವರೀಯ ಪ್ರಸಂಗಾದಿಯಲ್ಲಿ ತನ್ಮಯರಾಗುತ್ತಿದ್ದರು. ಅವರನ್ನು ನೋಡಿದರೆ ಯಾವ ಶಾರೀರಿಕ ಗ್ಲಾನಿಯೂ ಇದ್ದವರಂತೆ ಮನಸ್ಸಿಗೆ ಕಾಣುತ್ತಿರಲಿಲ್ಲ.

ಇವತ್ತು ಸಂಜೆಯಾದ ಮೇಲೆ ಡಾಕ್ಟರ್ ಬಂದರು. ಮಹಾಪುರುಷಜಿ ನಗುಮೊಗದಿಂದ ಅವರ ಯೋಗಕ್ಷೇಮ ವಿಚಾರಿಸಿದರು. ಕುಶಲ ಪ್ರಶ್ನೆಗೆ ಸೂಕ್ತವಾಗ ಉತ್ತರಕೊಟ್ಟು ಡಾಕ್ಟರು ರೋಗದ ಸ್ಥಿತಿಯ ಪರೀಕ್ಷೆಗೆ ತೊಡಗಿದರು, ಜ್ವರ ೧೦೦ ಡಿಗ್ರಿ ಇತ್ತು; ರಕ್ತದ ಒತ್ತಡ ೨೩೦: ಅಲ್ಲದೆ ಪಿಂಡವೂ ಹಿಗ್ಗಲಿಸಿತ್ತು. ಡಾಕ್ಟರ್ “ಹೇಗಿದ್ದೀರಿ, ಮಹಾರಾಜ್?” ಎಂದು ಕೇಳಿದರು.

ಮಹಾಪುರುಷಜಿ: “ಚೆನ್ನಾಗಿದ್ದೇನೆ. ಎಲ್ಲಿಯವರೆಗೆ ಭಗವಂತನ ಸ್ಮರಣ ಮನನ ಮಾಡಲು ಸಾಧ್ಯವೋ, ಅವನ ನಾಮ ಗುಣಗಾನಮಾಡಲು ಸಾಧ್ಯವೋ ಅಲ್ಲಿಯವರೆಗೆ ನಾನು ಚೆನ್ನಾಗಿದ್ದೇನೆ.”

ಡಾಕ್ಟರ್: “ಆದರೂ ಈ ಕಾಯಿಲೆ ನಿಮ್ಮನ್ನು ತುಂಬ ದುರ್ಬಲಗೊಳಿಸಿದೆ.”

ಮಹಾಪುರುಷಜಿ: “ಅದಕ್ಕೆ ನಾನೇನು ಮಾಡಲಿ? ನೀನು ಕೂಡ ಏನು ಮಾಡಬಲ್ಲೆ ಹೇಳಯ್ಯ, ಶರೀರ ಹೋಗುತ್ತದೆ- ಯಾವ ಶರೀರವೂ ಚಿರಕಾಲ ಉಳಿಯುವುದಿಲ್ಲ. ನನಗೆ ಗೊತ್ತು ಈ ಶರೀರ ನನ್ನದಲ್ಲ, ಈ ಶರೀರ ತಾಯಿಗೆ ಸೇರಿದ್ದು. ಅವಳ ಇಚ್ಛೆ ಏನೋ ಅದು ಆಗುತ್ತದೆ, ತಾಯಿ ಇರಿಸಿದರೆ ಇರುತ್ತದೆ, ಇಲ್ಲದಿದ್ದರೆ ಹೋಗುತ್ತದೆ, ತಿಳಿಯಿತೆ? ಇದು ಉಳಿಯಬೆಕು ಎನ್ನುವುದೂ ನನ್ನ ಇಚ್ಛೆಯಿಲ್ಲ; ಹೋಗಬೇಕು ಎನ್ನುವುದೂ ನನ್ನ ಇಚ್ಛೆಯಲ್ಲ. ಅಯ್ಯಾ ಎಲ್ಲ ತಾಯಿಯ ಇಚ್ಛೆ. ಅವಳ ಇಚ್ಛೆ ಎಂತೊ ಅದಾಗುತ್ತದೆ. ನೀನು ಏನು ಮಾಡಬೇಕೋ ಅದನ್ನು ಮಾಡು-ನಾನು ಬೇಡ ಎನ್ನುವುದಿಲ್ಲ. ಆದರೆ ನನಗೆ ಚೆನ್ನಾಗಿ ಗೊತ್ತು. ಏನೇನು ಮಾಡಬೇಕೋ ಅದನ್ನು ತಾಯಿ ಮಾಡುತ್ತಾಳೆ; ನೀನು ಏನನ್ನೂ ಮಾಡಲಾರೆ, ಶರತ್ ಮಹಾರಾಜರ ದೇಹತ್ಯಾಗದ ಜೊತೆ ಜೊತೆಗೆ ಈ ಶರೀರವೂ ಪಯಣ ಹೊರಟಿದೆ. ಅವತ್ತಿನಿಂದ ನನ್ನ ಮನಸ್ಸು ಪ್ರಾಣ ಎಲ್ಲ ಶ್ರೀ ಠಾಕೂರರ ಪಾದಪದ್ಮದಲ್ಲಿ ಒಮ್ಮೆಯೆ ಲೀನವಾಗಿಬಿಟ್ಟಿದೆ. ಈ ಶರೀರ ಈಗ ಇದೆ ಎನ್ನುವುದು ಬರಿಯ ಹೆಸರಿಗೆ ಮಾತ್ರ. ಅದು ಹೇಗೆ ಉಳಿದುಕೊಂಡಿದೆಯೋ ಏತಕ್ಕೆ ಉಳಿದಿದೆಯೋ ಶ್ರೀ ಠಾಕೂರ್ ಒಬ್ಬರಿಗೆ ಗೊತ್ತು.”

ಒಂದೆರಡು ಮಾತುಕತೆ ಆದಮೇಲೆ ಡಾಕ್ಟರ್ ಅಜಿತ್‌ಬಾಬು ಹೇಳಿದರು: “ಮಹಾರಾಜ್, ನನ್ನದೊಂದು ಬೇಡಿಕೆ ಇದೆ, ನಮ್ಮೆಲ್ಲರ ಇಚ್ಛೆ ಏನೆಂದರೆ ನೀಲ ರತನಬಾಬುಗಳಿಗೊಮ್ಮೆ ತೋರಿಸೋಣ ಎಂದು. ಸಂಗತಿಯನ್ನೆಲ್ಲ ಅವರಿಗೂ ತಿಳಿಸಿ ಆಗಿದೆ. ನಾನು ಫೀಸಿನ ವಿಚಾರ ಎತ್ತಿದಾಗ ಅವರು ತುಂಬ ದುಃಖಿತರಾಗಿ ಹೇಳಿದರು, ‘ಮಿಷನ್ನಿನ ಪ್ರೆಸಿಡೆಂಟರ ಹತ್ತಿರ ದುಡ್ಡು ತೆಗೆದುಕೊಳ್ಳುವುದೆ? ಚಿಃ ಚಿಃ! ಅವರಿಗೆ ಸೇವೆ ಮಾಡುವ ಭಾಗ್ಯ ಒದಗಿದರೆ ನಾವೆ ಧನ್ಯ ಎಂದು ಭಾವಿಸಬೇಕು.”

ಮಹಾಪುರುಷಜಿ: “ಆತ ದೊಡ್ಡ ಜೀವ, ಅದಕ್ಕಾಗಿ ಹಾಗೆ ಹೇಳಿದ್ದು. ಆತ ಬರಲಿ. ನಾನೇನು ಬೇಡ ಎನ್ನವುದಿಲ್ಲ, ಆದರೆ ವಿಷಯ ಅದಲ್ಲ, ಸುಮ್ಮನೆ ಆತನಿಗೆ ತೊಂದರೆ ಕೊಡುವುದೆಂದರೆ ನನಗೆ ತುಂಬ ಸಂಕೋಚವಗುತ್ತದೆ. ಏನಾಗಬೇಕೊ ತಾಯಿ ಮಾಡುತ್ತಾಳೆ.”

ಡಾಕ್ಟರ್ ನೀಲರತನ್ ಸರ್ಕಾರ್ ಅವರು ಬಂದು ತಮ್ಮನ್ನು ನೋಡಲು ಮಹಾಪುರುಷಜಿ ಅನುಮತಿಕೊಟ್ಟುದಕ್ಕಾಗಿ ಅಜಿತ್‌ಬಾಬುವಿಗೆ ತುಂಬ ಸಂತೋಷವಾಯಿತು. ಅವರು ಔಷಧೋಪಚಾರದ ವಿಚಾರವಾಗಿ ನಾನಾ ಪ್ರಕಾರವಾಗಿ ಮಾತುಕತೆ ಆಡಿದರು. ಮಹಾಪುರುಷಜಿಯೂ ತುಂಬಾ ಕುತೂಹಲದಿಂದಲೂ ತಾಳ್ಮೆಯಿಂದಲೂ ಎಲ್ಲವನ್ನೂ ಆಲಿಸಿದರು. ನಡುವೆ ಒಮ್ಮೆ ಅಜಿತಬಾಬುವಿನ ಮಾತಿಗೆ ಮಹಾಪುರುಷಜಿ ಹೇಳಿದರು: “ನಿನಗೊಂದು ರಹಸ್ಯ ಹೇಳ್ತೇನೆ ಕೇಳು. ಯಾರು ಸಮಾಧಿಸ್ಥಿತಿಯನ್ನು ಅನುಭವಿಸಿದ್ದಾರೆಯೋ ಅವರಿಗೆ ಯಾವತ್ತೂ ಯಾವ ವಿಧವಾದ ಶಿರೋವೇದನೆಗಳೂ ಉಂಟಾಗುವುದಿಲ್ಲ. ಕಡೆಗೆ ತಲೆತಿರುಗುವುದಾಗಲಿ, ತಲೆನೋವಾಗಲಿ, ಕೂಡ ಆಗುವುದಿಲ್ಲ.” ಮಾತಿನ ಮಧ್ಯೆ ಒಂದು ಕಡೆ ಅಜಿತಬಾಬು ಹೇಳಿದರು: “ಹೃದಯ ಎಂದೂ ನಿಲ್ಲುವುದಿಲ್ಲ. ಶ್ವಾಸಕೋಶದ ಕ್ರಿಯೆಯನ್ನು ಕೊಂಚಕಾಲ ನಿಲ್ಲಿಸಲು ಸಾಧ್ಯವಾಗಬಹುದು. ಆದರೆ ಹೃದಯ ಕ್ರಿಯೆಗೆ ವಿರಾಮ ಕೊಡುವುದು ಎಂದಿಗೂ ಸಾಧ್ಯವಿಲ್ಲ.”

ಅದಕ್ಕೆ ಮಹಾಪುರುಷಜಿ ಹೇಳಿದರು: “ಕೆಲವು ಸ್ಥಿತಿಗಳಲ್ಲಿ ಹೃದಯಕ್ರಿಯೆ ಕೂಡ ನಿಲ್ಲುತ್ತದೆ. ಸಮಾಧಿಸ್ಥಿತಿಯಲ್ಲಿ ಹೃದಯಕ್ಕೆ ಸೊಗಸಾದ ವಿಶ್ರಾಮ ಲಭಿಸುತ್ತದೆ.”

* * *

ಇಳಿತಂದುದು ಈ ಭೂಮಿಗೆ ಅವತಾರದ ಮೇಲವತಾರ;
ಆದುದ್ಧಾರಕೆ ಸಾವಿರಮಡಿಯಿಹುದಾಗುವ ಉದ್ಧಾರ,
ಯುಗಚಕ್ರವ ಮುನ್ನೂಂಕಲು ಇವು ಗುರುದೇವನ ಶಕ್ತಿ;
ನಮಗಿಂದಿಗೆ ಬೇಕಾದುದು ಉದ್ಧಾರದ ಆಸಕ್ತಿ!  – ಶತಮಾನ ಸಂಧ್ಯೆ