ಮಹಾಪುರುಷ ಮಹಾರಾಜರ ಶರೀರಸ್ಥಿತಿ ಏನೂ ಚೆನ್ನಾಗಿಲ್ಲ. ರಕ್ತದ ಒತ್ತಡ ಬಹಳ ಏರಿತ್ತು; ಹಿಂದಿನ ರಾತ್ರಿ ನಿದ್ದೆಯೂ ಸರಿಯಾಗಿ ಬಂದಿರಲಿಲ್ಲ. ಬೆಳಗಾದೊಡನೆ ಒಂದು ಮಹಾ ದುಃಖವಾರ್ತೆಯೂ ಬಂದಿತು. ಪೂಜ್ಯ ಮಾಸ್ಟರ್ ಮಹಾಶಯರು (‘ಶ್ರೀ ರಾಮಕೃಷ್ಣ ಕಥಾಮೃತ’ ಅಥವಾ ‘ವಚನವೇದ’ದ ಕರ್ತೃ) ಬೆಳಿಗ್ಗೆ ಸುಮಾರು ಆರೂಕಾಲು ಗಂಟೆಗೆ ತಮ್ಮ ನಶ್ವರ ದೇಹ ತ್ಯಾಗಮಾಡಿ ಶ್ರೀ ಶ್ರೀ ಠಾಕೂರರಲ್ಲಿ ಐಕ್ಯವಾಗಿದ್ದರು. ತೀರಿಕೊಳ್ಳುವಾಗ ಅವರಿಗೆ ಎಪ್ಪತ್ತೆಂಟು ವರ್ಷ. ಆ ವಾರ್ತೆ ಕಿವಿಗೆ ಬಿದ್ದೊಡನೆಯೆ ಮಹಾಪುರುಷಜಿ ಶೋಕಾಕುಲಚಿತ್ತರಾಗಿ ಸುಮ್ಮನೆ ಕುಳಿತುಬಿಟ್ಟರು. ಆದರೆ ತಮ್ಮ ಭಾವವನ್ನು ಬಹಳ ಕಾಲ ಮರೆ ಮಾಚಲಾರದೆ ಬಳಿಯಿದ್ದ ಸಾಧು ಬ್ರಹ್ಮಚಾರಿಗಳಿಗೂ ಭಕ್ತರಿಗೂ ಹೀಗೆಂದರು: “ಠಾಕೂರರು ನನ್ನ ಶರೀರಸ್ಥಿತಿಯನ್ನು ಹೇಗಿಟ್ಟಿದ್ದಾರೆ ಎಂದರೆ ಮಾಸ್ಟರ್ ಮಹಾಶಯರನ್ನು ಅವರ ಕೊನೆಗಾಲದಲ್ಲಿ ಸ್ವಲ್ಪ ಹೋಗಿ ನೋಡಿಕೊಂಡು ಬರುವುದಕ್ಕೂ ಕೂಡ ಆಗಲಿಲ್ಲ. ಅವರಂತೂ ತಮ್ಮ ಭಕ್ತರನ್ನು ಒಬ್ಬೊಬ್ಬರನ್ನಾಗಿ ಹಿಂದಕ್ಕೆಳೆದುಕೊಳ್ಳುತ್ತಿದ್ದಾರೆ; ಶೋಕತಾಪದ ಭಾರವನ್ನೆಲ್ಲ ಹೊರುವುದಕ್ಕೆ ನನ್ನೊಬ್ಬನನ್ನು ಮಾತ್ರ ಉಳಿಸಿದ್ದಾರೆ. ಅವರಿಚ್ಛೆ ಏನಿದೆಯೋ ಅವರೊಬ್ಬರಿಗೇ ಗೊತ್ತು. ಆಹಾ! ಮಾಸ್ಟರ್ ಮಹಾಶಯ ಇಡೀ ಕಲ್ಕತ್ತೆಗೇ ಒಂದು ಬೆಳಕಾಗಿದ್ದರು! ಎಷ್ಟು ಜನ ಭಕ್ತರು ಅವರಿಂದ ಠಾಕೂರರ ವಿಷಯ ಕೇಳಿ ಶಾಂತಿ ಪಡೆಯುತ್ತಿದ್ದರು! ಈ ತೆರವು ಮತ್ತೆ ತುಂಬಲಾರದು. ಅವರ ಹತ್ತಿರ ಶ್ರೀ ರಾಮಕೃಷ್ಣರ ವಿಚಾರವಲ್ಲದೆ ಬೇರೆ ಯಾವುದರ ಪ್ರಸ್ತಾಪವೂ ಇರುತ್ತಿರಲಿಲ್ಲ. ಅವರ ಬದುಕೆಲ್ಲ ಶ್ರೀರಾಮಕೃಷ್ಣಮಯವಾಗಿತ್ತು. ಶ್ರೀಠಾಕೂರರೂ ಅವರನ್ನು ಎಷ್ಟು ವಿಶ್ವಾಸದಿಂದ ಕಾಣುತ್ತಿದ್ದರು! ದಕ್ಷಿಣೇಶ್ವರದಲ್ಲಿಯೇ ಎಷ್ಟು ದಿನ ಇರುತ್ತಿದ್ದರು!

ಅವರ ಅಡಿಗೆ ಊಟ ಕೂಡ ತುಂಬ ಸಾಧರಣವಾಗಿತ್ತು. ಅನ್ನ, ಹಾಲು. ಶ್ರೀ ಠಾಕೂರರೇ ಸ್ವತಃ ಕೆಲಸದ ಆಳಿಗೆ ಹೇಳಿ ಅವರಿಗೆ ಒಂದು ಅರ್ಧ ಸೇರು ಒಳ್ಳೆಯ ಹಾಲನ್ನು ತಂದುಕೊಡುವಂತೆ ಗೊತ್ತು ಮಾಡಿದ್ದರು. ಮಾಸ್ಟರ್ ಮಹಾಶಯರ ಶರೀರವೂ ಕೂಡ ತುಂಬ ಬಲಿಷ್ಠವಾಗಿತ್ತು. ಆದ್ದರಿಂದಲೆ ಶ್ರೀ ರಾಮಕೃಷ್ಣರಿಗೆ ಅಷ್ಟೊಂದು ಸೇವಾ ಕಾರ್ಯಮಾಡಲು ಅವರಿಗೆ ಸಾಧ್ಯವಾಯಿತು. ಶ್ರೀಠಾಕೂರರ ಬಾಯಿಂದ ಏನೇನೆಲ್ಲ ಕೇಳುತ್ತಿದ್ದರೊ ಅವನ್ನೆಲ್ಲ ಮನೆಗೆ ಹೋದ ಮೇಲೆ ದಿನಚರಿ ಬರೆದಿಡುತ್ತಿದ್ದರು. ತರುವಾಯು ಆ ದಿನಚರಿಯಿಂದಲೆ ‘ಶ್ರೀರಾಮಕೃಷ್ಣ ಕಥಾಮೃತ’ ಎಂಬ ಅದ್ಭುತ ಗ್ರಂಥರಚನೆ ಮಾಡಿದರು. ಅವರ ಸ್ಮೃತಿ ಶಕ್ತಿಯೂ ಅದ್ಭುತವಾಗಿತ್ತು. ಅವರು ಬರೆದಿಟ್ಟುಕೊಂಡಿದ್ದೆಲ್ಲ ಅಲ್ಪಸ್ವಲ್ಪ; ಟಿಪ್ಪಣಿ ರೂಪವಾದುದು. ಅದಷ್ಟರ ಆಧಾರದ ಮೇಲೆ ಧ್ಯಾನಮಾಡುತ್ತಾ ಮಾಡುತ್ತಾ ಪುನಃ ಸ್ಮರಣ ಶಕ್ತಿಯಿಂದ ಉಳಿದುದೆಲ್ಲವನ್ನೂ ಬರೆದು ಕಥಾಮೃತ ಎಂಬ ಅದ್ಭುತ ಗ್ರಂಥರಚನೆ ಮಾಡಿದರು. ಅವರು ಶ್ರೀರಾಮಕೃಷ್ಣರ ಅಂತರಂಗ ಶಿಷ್ಯ ವರ್ಗಕ್ಕೆ ಸೇರಿದವರು. ಆ ಕೆಲಸ ನಿರ್ವಹಿಸುವುದಕ್ಕಾಗಿಯೊ ಏನೊ ಶ್ರೀ ಗುರುಮಹಾರಾಜ್ ಅವರನ್ನು ತಮ್ಮ ಜೊತೆಗೆ ಕರೆತಂದರು.

“ಶನಿವಾರ ಭಾನುವಾರ ಮತ್ತು ಇತರ ಆಡಿಕೆಯ ದಿನಗಳಲ್ಲಿ ಮಾಸ್ಟರ್ ಮಹಾಶಯ ಠಾಕೂರರ ಬಳಿಗೆ ಬರುತ್ತಿದ್ದರು. ಅಲ್ಲದೆ ಶ್ರೀಠಾಕೂರರು ಕಲ್ಕತ್ತೆಗೆ ಹೋದಾಗಲೂ ಅಥವಾ ಇನ್ನೆಲ್ಲಿಗಾದರೂ ಭೇಟಿಯಿತ್ತಾಗಲೂ ಅವರನ್ನು ಬಂದು ನೋಡುತ್ತಿದ್ದರು. ವಿಶೇಷ ಕುತೂಹಲದ ವಿಷಯಗಳನ್ನು ಕುರಿತು ಸಂವಾದ ನಡೆಯುತ್ತಿದ್ದಾಗ ಮತ್ತು ಜನರು ಅಲ್ಲಿದ್ದ ಸ್ಥಳವನ್ನೆಲ್ಲ ಕಿಕ್ಕಿರಿದು ತುಂಬಿ ಆಲಿಸುತ್ತಿದ್ದಾಗ ಶ್ರೀ ಗುರುಮಹಾರಾಜ್ ಹಠಾತ್ತನೆ ಮಾಸ್ಟರ್ ಮಹಾಶಯರ ಕಡೆ ನೋಡಿ ‘ಗೊತ್ತಾಯಿತೆ, ಮಾಸ್ಟರ್? ಈ ವಿಷಯವನ್ನು ಚೆನ್ನಾಗಿ ಗಮನಿಸಿ ಮನದಟ್ಟುಮಾಡಿಕೊ’ ಎನ್ನುತ್ತಿದ್ದರು. ಕೆಲವು ಸಮಯಗಳಲ್ಲಿ ಅವರ ನೆನಪಿನ ಅನುಕೂಲಕ್ಕಾಗಿಯೊ ಎಂಬಂತೆ ಮಾತಾಡಿದ ವಿಷಯಗಳನ್ನೆ ಪುನಃ ಪುನಃ ಹೇಳುತ್ತಿದ್ದರು. ಎಲ್ಲರನ್ನೂ ಬಿಟ್ಟು ಮಾಸ್ಟರ್ ಮಹಾಶಯರಿಗೇ ಏಕೆ ಹೇಳುತ್ತಿದ್ದರು ಎಂಬುದರ ಅರ್ಥ ಆಗ ನಮಗೆ ಹೊಳೆಯಲಿಲ್ಲ.

“ಠಾಕೂರರ ಮಾತುಕತೆ ಎಷ್ಟು ಸೊಗಸಾಗಿದ್ದುವು ಎಂದರೆ ನಾನೂ ಕೂಡ ಅಲ್ಪಸ್ವಲ್ಪ ಬರೆದಿಟ್ಟುಕೊಳ್ಳುವುದಕ್ಕೆ ಆರಂಭಮಾಡಿದೆ. ಒಂದು ದಿನ ದಕ್ಷಿಣೇಶ್ವರದಲ್ಲಿ ಅತ್ಯಂತ ಗಮನವಿಟ್ಟು ಅವರ ಮುಖದ ಕಡೆ ನೋಡುತ್ತಾ ಸಂವಾದವನ್ನು ಆಲಿಸುತ್ತಿದ್ದೆ. ಮಾತುಕತೆ ಬಹಳ ಸೊಗಸಾಗಿತ್ತು. ಬರೆದಿಟ್ಟು ಕೊಳ್ಳಬೇಕೆಂಬ ಭಾವನೆಯಿಂದಲೆ ನಾನು ಅಷ್ಟೊಂದು ಗಮನವಿಟ್ಟು ಕೇಳುತ್ತಿದ್ದೆ ಎಂಬುದು ಅವರಿಗೆ ಗೊತ್ತಾಗಿ, ತಟಕ್ಕನೆ “ಏನೋ, ಹೀಗೇಕೆ ಕೇಳುತ್ತಿದ್ದೀಯೊ?” ಎಂದುಬಿಟ್ಟರು. ನಾನು ಸ್ವಲ್ಪ ಪೆಚ್ಚಾದೆ. ಅದನ್ನು ಕಂಡು ಠಾಕೂರ್ ಹೇಳಿದರು. ‘ನೀನೇನು ಅದನ್ನು ಮಾಡಬೇಕಾಗಿಲ್ಲ; ನಿನ್ನ ಜೀವನವೇ ಬೇರೆ.’ ನನಗನ್ನಿಸಿತು. ನನ್ನ ಮನಸ್ಸಿನಲ್ಲಿದ್ದದ್ದು ಅವರಿಗೆ ಗೊತ್ತಾಗಿಯೆ ಹಾಗೆ ಹೇಳಿದರು ಎಂದು. ಆವತ್ತಿನಿಂದ ಅವರ ಸಂಭಾಷಣೆ ಬರೆದಿಟ್ಟುಕೊಳ್ಳಬೇಕೆಂಬ ಸಂಕಲ್ಪವನ್ನೆ ಗಂಗಾ ಜಲಕ್ಕೆ ಸಮರ್ಪಿಸಿಬಿಟ್ಟೆ!”

ಮರುದಿನ ಬೆಳಿಗ್ಗೆ ಕೆಲಜನ ಭಕ್ತರು ಕಲ್ಕತ್ತಾದಿಂದ ಬೇಲೂರ ಮಠಕ್ಕೆ ಬಂದರು. ಅವರೆಲ್ಲರೂ ಬಹಳ ಕಾಲದಿಂದಲೂ ಮಾಸ್ಟರ್ ಮಹಾಶಯರ ಬಳಿಗೆ ಹೋಗಿ ಬರುತ್ತಿದ್ದವರೇ: ಅಲ್ಲದೆ ಅವರ ಸೇವೆಯನ್ನು ವಿಶ್ವಾಸದಿಂದ ಮಾಡುತ್ತಿದ್ದವರೇ. ಅವರೆಲ್ಲರೂ ಮಾಸ್ಟರ್ ಮಹಾಶಯರ ನಿಧನದಿಂದ ತುಂಬ ವಿಷಣ್ಣಭಾವರಾಗಿದ್ದರು. ಮಹಾಪುರುಷಜಿ ಅವರಿಂದ ಮಾಸ್ಟರರ ದೇಹತ್ಯಾಗ ಸಮಯದ ವಿವರಣಗಳನ್ನೆಲ್ಲ ಅತ್ಯಂತ ಆಸಕ್ತಿಚಿತ್ತರಾಗಿ ಕೇಳಿ ತಿಳಿದುಕೊಂಡು ಅವರಿಗೆ ಸ್ನೇಹ ವಿಗಳಿತ ಕಂಠದಿಂದ ಹೇಳಿದರು: “ಆಃ ನಿಮಗೇನೊ ದೊಡ್ಡ ಪೆಟ್ಟೆ ಬಿದ್ದಂತಾಗಿದೆ! ಗಾಯ ಹಸಿಯಾಗಿದೆ. ಯಾರ ಯಾವ ಮಾತೂ ಸಮಾಧಾನ ತರಲಾರದು. ವಿನಯ ಎಲ್ಲಿ? ಅವನಿಗಂತೂ ಸಹಿಸಲಸಾಧ್ಯವಾಗಿರಬೇಕು. ಅವನು ಬಹುಕಾಲ ಅವರ ಬಳಿಯಿದ್ದು ಹೃತ್ಪೂರ್ವಕವಗಿ ಸೇವೆಮಾಡಿದ್ದಾನೆ. ಏನು ಮಾಡುವುದಕ್ಕೆ ಆಗುತ್ತದೆ? ಅದು ಯಾರ ಕೈಯಲ್ಲೂ ಇಲ್ಲ. ಶ್ರೀರಾಮಕೃಷ್ಣರೇ ತಮ್ಮ ಭಕ್ತರನ್ನೆಲ್ಲ ಹಿಂದಕ್ಕೆ ಕರೆಸಿಕೊಳ್ಳುತ್ತಿದ್ದಾರೆ; ಆದರೆ ನಮಗೆ ಗೊತ್ತು ಮಾಸ್ಟರ್ ಮಹಾಶಯರ ಸಂಬಂಧ, ನಮ್ಮ ಜೊತೆಗಾಗಲಿ ಠಾಕೂರರ ಜೊತೆಗಾಗಲಿ, ಚಿರಂತನವಾದದ್ದು, ತಿಳಿಯಿತೆ? ಈ ಸಂಬಂಧ ಅಳಿಯತಕ್ಕದ್ದಲ್ಲ. ಮಾಸ್ಟರ್ ಮಹಾಶಯರ ದೇಹ ಹೋದುದರಿಂದ ಎಲ್ಲವೂ ಹೋಯಿತೆಂದು ಮರೆತು ಕೂಡ ಆಲೋಚಿಸಬೇಡಿ. ಎಂದಿಗೂ ಇಲ್ಲ!”

ಈ ರೀತಿ ಬಹಳ ಹೊತ್ತು ಮಾತುಕತೆ ನಡೆಸಿದ ಮೇಲೆ ಮಹಾಪುರುಷಜಿ ಭಕ್ತರಿಗೆಲ್ಲ ಅಭಯನೀಡಿ, ಬೀಳ್ಕೊಳ್ಳುವ ಸಮಯದಲ್ಲಿ ಆಶೀರ್ವಾದ ಪೂರ್ವಕವಾಗಿ ಹೇಳಿದರು: “ಅಯ್ಯಾ ಭಯವೇಕೆ? ಠಾಕೂರರಿದ್ದಾರೆ, ನಾವೂ ಸಶರೀರವಾಗಿಯೆ ಇನ್ನೂ ಇದ್ದೇವೆ. ಸಮಯ ಸಿಕ್ಕಿದಾಗಲೆಲ್ಲ ಮಠಕ್ಕೆ ಬನ್ನಿ.”

ಭಕ್ತರೆಲ್ಲ ಹೋದಮೇಲೆ ಮಹಾಪುರುಷಜಿ ಹೇಳಿದರು: “ಆಃ! ಭಕ್ತರಿಗೆಲ್ಲ ಒಂದು ಆಶ್ರಯಸ್ಥಲವಾಗಿದ್ದರು ಮಾಸ್ಟರ್ ಮಹಾಶಯ. ಎಷ್ಟೊ ಪ್ರಾಣಗಳಿಗೆ ಅವರು ಶಾಂತಸನ್ನಿಧಿಯಾಗಿದ್ದರು. ವಿಶೇಷವಗಿ ಶರತ್ ಮಹಾರಾಜರು ಹೋದ ಮೇಲೆ ಅನೇಕರು ಅವರ ಬಳಿಗೆ ಹೋಗುತ್ತಿದ್ದರು. ಅವರೂ ಬಳಲಿಕೆಯಿಲ್ಲದೆ ಠಾಕೂರರ ವಿಷಯವಾಗಿ ಮಾತನಾಡಿ ಬಹು ಜೀವರಿಗೆ ಶಾಂತಿ ದಯಪಾಲಿಸುತ್ತಿದ್ದರು. ಈ ತೆರವು ತುಂಬಲಾರದು. ಅವರು ಪುಣ್ಯಾತ್ಮರು. ಠಾಕೂರರ ಕೆಲಸ ಎಷ್ಟೊಂದು ಮಾಡಿದ್ದಾರೆ! ಕಥಾಮೃತದ ಒಂದು ಭಾಗ ಬರೆದು ಅವರು ತೀರಿಕೊಂಡಿದ್ದರೂ ಅವರ ಹೆಸರು ಚಿರಕಾಲವೂ ಅಮರವಾಗಿರುತ್ತಿತ್ತು! ಅವರ ಕೃತಿ ಕೀರ್ತಿ ಎರಡೂ ಅಕ್ಷಯ!”

* * *

ನೈವ ವಾಚಾ ನ ಮನಸಾ ಪ್ರಾಪ್ಪುಂ ಶಕ್ಯೋ ನ ಚಕ್ಷುಷಾ |
ಅಸ್ತೀತಿ ಬ್ರುವತೋsನ್ಯತ್ರ ಕಥಂ ತದುಪಲಭ್ಯತೇ || – ಕಠೋಪನಿಷತ್ತು

“ಆತ್ಮವು ಮಾತಿಗಾಗಲಿ ಮನಸ್ಸಿಗಾಲಿ ಕಣ್ಣು ಮೊದಲಾದ ಇಂದ್ರಿಯಗಳಿಗಾಗಲಿ ಗೋಚರವಾಗುವುದಿಲ್ಲ. ಇದೆ ಎಂದು ಯಾರೂ ಕಂಡಿದ್ದಾರೆಯೊ ಅವರಿಂಗ ತಾನೆ ನಮಗೆ ಅದರ ಸಾಕ್ಷಾತ್ಕರಣ ಸಾಧ್ಯವಾಗುತ್ತದೆ!”