ಮಠದಲ್ಲಿ ಶ್ರೀ ಶ್ರೀ ದುರ್ಗಾಪೂಜಾ ಮಹೋತ್ಸವ ಜರುಗುತ್ತಿತ್ತು. ಶಿಲ್ಪಿ ಪ್ರತಿಮಾ ನಿರ‍್ಮಾಣಕಾರ್ಯದಲ್ಲಿ ತೊಡಗಿದ್ದನು. ಮಹಾಪುರುಷಜಿ ತಾಯಿಯ ಆಲೋಚನೆಯಲ್ಲಿ ಆನಂದಮಗ್ನಾತ್ಮರಾಗಿ ಮಕ್ಕಳಂತೆ ಮತ್ತೆ ಮತ್ತೆ ‘ಅಮ್ಮಾ! ಅಮ್ಮಾ!’ ಎಂದುಕೊಳ್ಳುತ್ತಿದ್ದರು. ಅನೇಕ ವೇಳೆ ತಮ್ಮ ಹೃದಯದ ಅವೇಗವನ್ನು ತಡೆಯಲಾರದೆ ತಾಯಿಯ ಆಗಮನವನ್ನು ಕುರಿತ ಆಗಮನೀ ಗಾನಗಳನ್ನು ಹಾಡುತ್ತಿದ್ದರು. ಮತ್ತೊಮ್ಮೆ ಯಾರಾದರೂ ಮಠದ ಸಾಧುಗಳಿಗೆ ಒಂದೆರಡು ಹೊಸ ಆಗಮನೀ ಗೀತೆಗಳನ್ನು ಕಲಿಸುತ್ತಿದ್ದರು. ಅವರ ಹೃದಯದ ಆನಂದ ಸಹಸ್ರ ಧಾರೆಗಳಲ್ಲಿ ಎಂಬಂತೆ ಹರಿಯುತ್ತಿತ್ತು.

ನಿನ್ನೆ ಶ್ರೀ ಶ್ರೀ ತಾಯಿಯೆ ‘ಬೋಧನ’ (ಪೂಜಾಪರ್ವದಲ್ಲಿ ನಡೆಸುವ ಪ್ರಾಣಪ್ರತಿಷ್ಠಾಪನಾರೂಪದ ಒಂದು ಕರ್ಮ) ನಡೆದಿತ್ತು. ಬೆಳಿಗ್ಗೆ ಸ್ವಾಮಿ ತಪಾನಂದರು ಒಂದು ಗೀತೆಯನ್ನು ತುಂಬ ಭಾವಪೂರ್ಣವಾಗಿ ಹಾಡಿದ್ದರು. ಮಹಾಪುರುಷಜಿ ನಡುನಡುವೆ ಅದರಲ್ಲಿ ತನ್ಮಯರಾಗಿ ‘ಆಹಾ! ಆಹಾ!’ ಎನ್ನುತ್ತಿದ್ದರು. ಅಲ್ಲದೆ ತಮ್ಮನ್ನು ತಾವೆ ವಶದಲ್ಲಿಟ್ಟುಕೊಳ್ಳಲಾಗಲಿಲ್ಲ. ತುಂಬ ಕಷ್ಟದಿಂದ ಭಾವಸಂವರಣಮಾಡಿ ಗಾನಮಾಡುತ್ತಿದ್ದವರಿಗೆ ಹೇಳಿದರು, ‘ಹೋಗು!’ ಹೋಗು! ನಿಲ್ಲಿಸು! ಸಾಕು! ನಡುಬೀದಿಯಲ್ಲಿ ಮಡಕೆ ಹೊತ್ತು ಹಾಕುವಂತೆ ಮಾಡಿಬಿಟ್ಟೆ ನನಗೆ ನೀನು. (ತಮ್ಮ ಆಧ್ಯಾತ್ಮಿಕ ಭಾವಾವೇಗವನ್ನು ತಡೆಯಲಾರದಂತೆ ಮಾಡಿ ಎಲ್ಲರ ಮುಂದೆಯೂ ಪ್ರದರ್ಶಿಸುವಂತೆ ಮಾಡಿಬಿಟ್ಟೆ ಎಂದರ್ಥ.) ನನ್ನ ಸ್ಥಿತಿ ಒಣಗಿದ ಬೆಂಕಿಕಡ್ಡಿಯಂತಾಗಿದೆ, ಠಾಕೂರರು ಹೇಳುತ್ತಾ ಇದ್ದರು ‘ಒಂದು ಚೂರು ಗೀಚಿದರೆ ಸಾಕು ಭುಗ್ಗೆಂದು ಹೊತ್ತಿಕೊಳ್ಳುತ್ತದೆ.’ ನನ್ನ ಅವಸ್ಥೆಯೂ ಹಾಗೆ ಆಗಿದೆ.’ ತಮ್ಮ ಭಾವಾವೇಗವನ್ನು ನಿಗ್ರಹ ಮಾಡಿಕೊಳ್ಳಲಾರದುದಕ್ಕಾಗಿ ಸ್ವಲ್ಪ ಲಜ್ಜಿತರಾದರು.

ಇಂದು ಸಪ್ತಮೀ ತಿಥಿ. ದುಗಾಪೂಜೆಯ ಪ್ರಥಮ ದಿನ. ಬೆಳಿಗ್ಗೆ ನಾಲ್ಕು ಗಂಟೆಯಿಂದಲೂ ಗಾಯಕರು ತಾಯಿಯ ಆಗಮನವನ್ನು ವರ್ಣಿಸುವ ಆಗಮನೀ ಹಾಡುಗಳನ್ನು ಹಾಡುತ್ತಿದ್ದರು. ದೇವರ ಮನೆಯಲ್ಲಿಯೂ ಮೊದಲೇ ನಿರ್ದೇಶಿಸಿದಂತೆ ಅದೇ ಹಾಡುತ್ತಿದ್ದರು.

ಬಾನೊಳು ಹೊಳೆಯಿತು ಶಾರದ ಸಪ್ತಮಿ ಉಷೆ:
ಬಂದಳೂ ದಶಭುಜೆ ತಾಯ್ ಅದೊ ಬೆಳಗಲು ಹತ್ತು ದೆಸೆ |

ಇತ್ಯಾದಿ.

ಮಹಾಪುರುಷಜಿಯೂ ನಡುನಡುವೆ ಆ ಹಾಡಿನೊಡನೆ ತಮ್ಮ ಕೊರಳನ್ನು ಸೇರಿಸಿ ಹಾಡುತ್ತಿದ್ದರು; ಕೊನೆಗೆ ತಾವೇ ಒಂದು ಹಾಡು ಹಾಡತೊಡಗಿದರು:

ಎಚ್ಚರಗೊಳಿಸದಿರುಮೆಯನು, ಎಲೆ ಜಯೆ;
ಏನೇನೊ ಗೆಯ್ದಿಂಬಳಿ ಇದೆ ತಾನೆಯೆ ಮಲಗಿಹಳಭಯೆ

ಇತ್ಯಾದಿ.

ಕ್ರಮೇಣ ಪೂಜಾಮಂಟಪದಲ್ಲಿ ಪೂಜೆ ಆರಂಭವಾಯಿತು. ಮಠದ ಸಾಧುವೃಂದವೂ ಅನೇಕ ಭಕ್ತನರನಾರಿಯರೂ ದಳದಳವಾಗಿ ಮಹಾಪುರುಷಜಿಯ ಸಮೀಪದಲ್ಲಿ ಕುಳಿತಿದ್ದರು. ಅವರು ಸಕಲರನ್ನೂ ಹೃದಯ ತುಂಬಿ ಹರಸುತ್ತಿದ್ದರು. ‘ಅಮ್ಮ ಬಂದಿದ್ದಾಳೆ. ಆನಂದದಿಂದಿರಿ, ಕುಣಿದು ನಲಿದು ಹಾಡಿ ತಣಿಯಿರಿ!’ ಎಂದು ಹುರಿದುಂಬಿಸುತ್ತಿದ್ದರು. ಪ್ರತಿ ಮಹೂರ್ತದಲ್ಲಿಯೂ ಮಹಾಪುರುಷಜಿ ತುಂಬ ವ್ಯಸ್ತಭಾವದಿಂದ ಪೂಜೆ ಎಷ್ಟು ದೂರ ಮುಂದುವರಿದಿದೆ ಎಂಬುದನ್ನು ಕೇಳಿಕೇಳಿ ಸುದ್ದಿ ತರಿಸಿಕೊಳ್ಳುತ್ತಿದ್ದರು. ಪ್ರಾಣಪ್ರತಿಷ್ಠೆಯ ಸಮಯದಲ್ಲಿ ಅವರಿಗೆ ತಡೆಯಲಾಗಲಿಲ್ಲ; ತಾವೇ ಪೂಜಾಮಂಟಪಕ್ಕೆ ಹೋಗುವುದಕ್ಕಾಗಿ ಉತ್ಸುಕತೆಯನ್ನು ವ್ಯಕ್ತಗೊಳಿಸಿದರು. ಅವರನ್ನು ಕುರ್ಚಿಯೊಂದರ ಮೇಲೆ ಕೂರಿಸಿ ಸೇವಕ ಸಾಧುಗಳು ಅದನ್ನು ಪೂಜಾಮಂಟಪದೆಡೆಗೆ ಹೋಗುವುದಕ್ಕಾಗಿ ಉತ್ಸುಕತೆಯನ್ನು ವ್ಯಕ್ತಗೊಳಿಸಿದರು. ಅವರನ್ನು ಕುರ್ಚಿಯೊಂದರ ಮೇಲೆ ಕೂರಿಸಿ ಸೇವಕ ಸಾಧುಗಳು ಅದನ್ನು ಪೂಜಾಮಂಟಪದೆಡೆಗೆ ಎತ್ತಿಕೊಂಡೊಯ್ದರು. ತಾಯಿಯ ಶಿಶು ಮಹಾಪುರುಷಜಿ ಕೈಜೋಡಿಸಿ ಆಕೆಯ ಇದಿರು ನಿಂತರು. ಅದೆಂತಹ ದೃಶ್ಯ ಎಂಬುದನ್ನು ಹೇಳಿ ತಿಳಿಸಲು ಸಾಧ್ಯವಲ್ಲ. ಪ್ರಾಣಪ್ರತಿಷ್ಠೆ ಮುಗಿದಮೇಲೆ ಮಹಾಪುರುಷಜಿ ತಾಯಿಗೆ ಭಕ್ತಿಭರದಿಂದ ಪ್ರಣಾಮಮಾಡಿ ಉಪ್ಪರಿಗೆಗೆ ಹಿಂತಿರುಗಿದರು. ಅವರ ಭಾವ ತುಂಬ ಗಂಭೀರವಾಗಿತ್ತು. ಮುಖಮಂಡಲ ಒಂದು ಸ್ವರ್ಗೀಯ ಜ್ಯೋತಿಯಿಂದ ಪ್ರದೀಪ್ತವಾಗಿತ್ತು.

ದಿನವೆಲ್ಲ ಮಠದಲ್ಲಿ ಜನಜಂಗುಳಿ. ಇವತ್ತು ಯಾರು ಬೇಕಾದರೂ ಅಲ್ಲಿಗೆ ಬರಬಹುದಾಗಿತ್ತು. ಮಹಾಪುರುಷಜಿ ಸಕಲರಿಗೂ ಪ್ರಾಣಭರದಿಂದ ಆಶೀರ್ವಾದ ಮಾಡಿದರು. ಪರಿಪೂರ್ಣ ಹೃದಯರಾದ ಭಕ್ತಗಣವೂ ಪ್ರಸಾದ ತೆಗೆದುಕೊಂಡ ಮೇಲೆ ಹಿಂತಿರುಗಿತು.

ಸಂಜೆ ಆರತಿಯಾದ ಮೇಲೆ ಮಠದ ಸಾಧುಗಳು ‘ಕಾಲಿಕೀರ್ತನೆ’ ಮಾಡುತ್ತಿದ್ದರು. ಮಠದ ಸಾಧುಗಳಲ್ಲಿ ಒಂದಿಬ್ಬರು ಮೂವರು ಮಹಾಪುರುಷಜಿಯ ಕೊಠಡಿಯಲ್ಲಿ ನೆರೆದಿದ್ದರು. ಇವತ್ತು ಅವರು ದಿನವೆಲ್ಲ ಆನಂದದಿಂದಿದ್ದರು. ಒಂದಿನಿತೂ ಬಳಲಿಕೆ ತೋರಲಿಲ್ಲ. ಬಳಿಯಿದ್ದ ಸಾಧುವಿನ ಕಡೆ ತಿರುಗಿ ಹೇಳಿದರು: “ನೋಡು, ಮಠದಲ್ಲಿ ಮಾತೆಯ ಪೂಜೆ ನಡೆಯುವಂತೆ ಮತ್ತೆಲ್ಲಿಯೂ ಆಗುವುದಿಲ್ಲ. ಇಲ್ಲಿಯ ಪೂಜೆ ಎಂದರೆ ಶುದ್ಧ ಭಕ್ತಿಯ ಪೂಜೆ. ನಮಗೆ ಇಲ್ಲಿ ಯಾವ ಕಾಮನೆಯೂ ಇಲ್ಲ: ನಾವು ಕೇವಲ ಅಮ್ಮನವರ ಒಲವಿಗಾಗಿ ಪೂಜೆ ನಡೆಸುತ್ತೇವೆ. ನಮ್ಮದು ಒಂದೇ ಪ್ರಾರ್ಥನೆ, ‘ಅಮ್ಮಾ, ನಮಗೆ ನೀನು ಪ್ರಸನ್ನಳಾಗು, ಭಕ್ತಿ ವಿಶ್ವಾಸಗಳನ್ನು ದಯಪಾಲಿಸು ಮತ್ತು ಲೋಕಕ್ಕೆಲ್ಲಾ ಕಲ್ಯಾಣವಾಗುವಂತೆ ಮಾಡು.’ ಅಲ್ಲವೇನು, ಹೇಳು? ಇಷ್ಟು ಜನ ಸಾಧುಗಳೂ ಬ್ರಹ್ಮಚಾರಿಗಳೂ ಶುದ್ಧಪೂರ್ಣ ಹೃದಯದಿಂದ ಆರಾಧನೆ ಮಾಡಿದರೆ ಅಮ್ಮ ಪ್ರಸನ್ನಳಾಗದಿರುವುದಕ್ಕೆ ಆಗುತ್ತದೆಯೇ? ನೀವೆಲ್ಲರೂ ಸರ್ವತ್ಯಾಗಿಗಳಾದ ಮುಮುಕ್ಷುಗಳು. ನೀವೆಲ್ಲ ಕಾತರ ಭಾವದಿಂದ ಕರೆದರೆ ಅಮ್ಮ ಮೈದೋರದೆ ಇರುವುದಕ್ಕಾಗುತ್ತದೆಯೆ? ಇಲ್ಲಿ ತಾಯಿ ಯಾವ ಪ್ರಮಾಣದಲ್ಲಿ ಪ್ರಕಾಶಿತಳಾಗಿದ್ದಾಳೆಯೋ ಆ ಪ್ರಮಾಣದಲ್ಲಿ ಇನ್ನೆಲ್ಲಿಯೂ ಆಗಿಲ್ಲವಯ್ಯಾ, ನಾನು ಸ್ಪಷ್ಟವಾಗಿ ಹೇಳುತ್ತೇನೆ ಕೇಳು. ಜನ ಲಕ್ಷ ಲಕ್ಷ ರೂಪಾಯಿ ಖರ್ಚುಮಾಡಬಹುದು ಪೂಜೆಗೆ, ಆದರೆ ಇಂತಹ ಅಪೂರ್ವ ಶ್ರದ್ಧಾಭಕ್ತಿಗಳನ್ನು ಎಲ್ಲಿಂದ ತರುವುದು? ನಮ್ಮದು ಅತ್ಯಂತ ಸಾತ್ತ್ವಿಕಪೂಜೆ. ಆಹಾ! ಅನಂಗ(ಪೂಜೆ ಮಾಡುವ ಸಾಧು ಒಬ್ಬರ ಚಿಕ್ಕ ಹೆಸರು) ತುಂಬುಹೃದಯದಿಂದ ಎಲ್ಲ ಪೂಜಾ ಕಾರ್ಯಗಳನ್ನೂ ನೆರವೇರಿಸುತ್ತಾನೆ. ಶಾಸ್ತ್ರ ಹೇಳುತ್ತದೆ, ಪ್ರತಿಮೆ ಸುಂದರವಾಗಿದ್ದರೆ, ಪೂಜಕ ಭಕ್ತಿಮಂತನಾಗಿದ್ದರೆ, ಪೂಜೆಯಲ್ಲಿ ನೆರವಾಗುವವನು ಶುದ್ಧಸತ್ತ್ವನೂ ನಿಷ್ಕಾಮನೂ ಆಗಿದ್ದರೆ, ಆಗ ಅಂತಹ ಪೂಜೆಯಲ್ಲಿ ಭಗವಂತನ ವಿಶೇಷ ಆವಿರ್ಭಾವ ಉಂಟಾಗುತ್ತದೆ. ಇಲ್ಲಿ ಮಠದಲ್ಲಿ ಅವೆಲ್ಲವೂ ಇವೆ, ಸರಿಯಾಗಿವೆ. ಆದ್ದರಿಂದಲೆ ತಾಯಿಯ ಇಂತಹ ಆವಿರ್ಭಾವ! ಮಠದಲ್ಲಿ ಪೂಜಾ ವಿಧಾನ ಸರ್ವವೂ ಸಮರ್ಪಕವಾಗಿವೆ.

“ನಮ್ಮ ಠಾಕೂರರು ಬಂದದ್ದು ಧರ್ಮಸಂಸ್ಥಾಪನಾರ್ಥವಾಗಿ. ಅವರ ಆಗಮನಕ್ಕೆ ಮುನ್ನ ಪೂಜಾದಿಕರ್ಮಗಳೆಲ್ಲ ಒಂದು ರೀತಿಯಲ್ಲಿ ಲೋಪಪೂರ್ಣವಾಗಿದ್ದವು. ಸತ್ತೇ ಹೋಗಿದ್ದುವು ಎಂದರೂ ಎನ್ನಬಹುದು. ಶ್ರೀರಾಮಕೃಷ್ಣರು ಅವತರಿಸಿದ ಮೇಲೆ ಎಲ್ಲಕ್ಕೂ ಒಂದು ನೂತನ ಪ್ರಾಣೋದಯವಾಯಿತು. ಆದ್ದರಿಂದಲೆ ಈ ಎಲ್ಲವೂ ಪುನರ್ಜೀವಿತವಾಗಿ ಮೇಲೆದ್ದಿವೆ. ಈಗ ಮತ್ತೆ ಅನೇಕೆ ಜನ ಈ ಪೂಜಾದಿನಗಳಲ್ಲಿ ಅನುಷ್ಠಾನ ಮಾಡತೊಡಗಿದ್ದಾರೆ. ನಮ್ಮ ಆ ವರಾಹನಗರದ ಮಠದಲ್ಲಿ ಸ್ವಾಮೀಜಿ ಈ ದುರ್ಗಾಪೂಜೆ ಆರಂಭಮಾಡಿದರು. ಅಂದರೆ ಆಗ ಈ ಪೂಜೆಯನ್ನು ಒಂದು ಘಟ್ಟದಲ್ಲಿ ಮಾಡುತ್ತಿದ್ದೆವಷ್ಟೆ. ಒಮ್ಮೆ ಅಲ್ಲಿ ಒಂದು ಹೋತದ ಬಲಿಯೂ ಆಯಿತು. ಸುರೇಶಬಾಬು ಆ ಹೋತವನು ಕೊಂಡಿದ್ದರು. ಇಡೀ ಹೋತವನ್ನೇ ಹೋಮಾಗ್ನಿಗೆ ಕೊಡಲಾಯಿತು. ಮಾಸ್ಟರ್ ಮಹಾಶಯ ಮತ್ತು ಇತರ ಭಕ್ತರಿಗೆ ಅದು ಸರಿಬೀಳಲಿಲ್ಲ. ಅವರೆಲ್ಲ ಆ ವಿಷಯದಲ್ಲಿ ಶ್ರೀ ಶ್ರೀ ಮಹಾಮಾತೆಯಯವರಿಗೆ ದೂರುಕೊಟ್ಟರು. ಅವರು ‘ಇತರರ ಮನಸ್ಸಿಗೆ ಅದರಿಂದ ಸಂಕಟವಾಗುವ ಪಕ್ಷದಲ್ಲಿ ಅದನ್ನೇಕೆ ಬಿಡಬಾರದು?’ ಎಂದರು. ಆಮೇಲೆ ಹೋತದ ಬಲಿ ನಿಂತುಹೋಯಿತು. ತರುವಾಯ ಈ ಮಠಕ್ಕೆ ಬಂದಮೇಲೆಯೂ ಸ್ವಾಮೀಜಿಯೆ ಮೊದಲನೆಯ ಪ್ರತಿಮಾಪೂಜೆ ನಡೆಸಿದರು. ಆ ಪೂಜೆಗೆ ಶ್ರೀ ಶ್ರೀ ಮಾತೆಯೂ ಬಂದಿದ್ದರು. ಪಕ್ಕದ ಮನೆಯಲ್ಲಿಯೆ ಕೆಲವು ದಿನ ಇಳಿದುಕೊಂಡಿದ್ದರು. ಅವರು ಹೇಳಿದರು-ಇಲ್ಲಿಗೆ ಪ್ರತಿವರ್ಷವೂ ತಾಯಿ ದುರ್ಗೆ ಬರುತ್ತಾ ಇರುತ್ತಾಳೆ ಎಂದು.”

ಒಬ್ಬರು ಸಂನ್ಯಾಸಿ: “ಮಹಾರಾಜ್, ಹೋತದ ಬಲಿ ಕೊಡದೆ ಪೂಜೆ ನಡೆಸುವುದಕ್ಕೆ ಆಗುವುದಿಲ್ಲವೆ?”

ಮಹಾಪುರುಷಜಿ: “ಯಾಕಾಗುವುದಿಲ್ಲ? ತಾಯಿಯೆ ಅಲ್ಲವೆ ವೈಷ್ಣವೀ ಶಕ್ತಿರೂಪದಲ್ಲಿ ಅವತೀರ್ಣಳಾಗಿರುವವಳು ಶ್ರೀರಾಮಕೃಷ್ಣರಲ್ಲಿ?. ನಮ್ಮ ಮಠದಲ್ಲಿ ಪಶುಬಲಿ ನಡೆಯುವುದಿಲ್ಲ. ನಮ್ಮ ಪೂಜೆ ಸಾತ್ತ್ವಿಕ. ಮನುಷ್ಯರಲ್ಲಿರುವ ಪ್ರಕೃತಿ ಭೇದಗಳನ್ನು ಆಶ್ರಯಿಸಿ ಯಾರಿಗೆ ಯಾವ ತರಹದ ಪೂಜೆ ಎಂಬುದನ್ನು ಶಾಸ್ತ್ರ ಹೇಳುತ್ತವೆ-ಸಾತ್ತ್ವಿಕ, ರಾಜಸಿಕ, ಮತ್ತು ತಾಮಸಿಕ. ಸಾತ್ತ್ವಿಕ ಪೂಜೆಯಲ್ಲಿ ಬಾಹ್ಯಿಕವಾದ ಯಾವ ಆಡಂಬರವೂ ಇಲ್ಲ; ಅಲ್ಲಿ ಯಾವ ಗಂಟೆಯೂ ಇಲ್ಲ. ಬರಿಯ ಭಕ್ತಿಯ ಪೂಜೆ. ನಿಷ್ಕಾಮಭಾವದಿಂದ ತಾಯಿಯ ಪ್ರೀತಿಗಾಗಿ ಪೂಜೆ. ನಾವು ಅದೇ ಭಾವದಿಂದ ಪೂಜೆ ಮಾಡುತ್ತೇವೆ. ಯಾರ ಪ್ರಕೃತಿ ರಾಜಸಿಕ ಅಥವಾ ತಾಮಸಿಕವೊ ಅಂತಹ ಜನರ ಪೂಜೆಯು ಅದೇ ಗುಣದ್ದಾಗಿರುತ್ತದೆ. ಸಕಾಮಪೂಜೆ ತುಂಬ ಆಡಂಬರ  ಅಟ್ಟಹಾಸದ್ದಾಗಿರುತ್ತದೆ. ಅವರಿಗಾಗಿ ಶಾಸ್ತ್ರ ಪಶುಬಲಿ ಮೊದಲಾದುವನ್ನು ವ್ಯವಸ್ಥೆ ಮಾಡಿರುತ್ತದೆ. ಒಟ್ಟಿನಲ್ಲಿ ಮುಖ್ಯವಾದದ್ದೇನು? ಆಕೆಯ ಶ್ರೀಪಾದಪದ್ಮದಲ್ಲಿ ಶ್ರದ್ಧಾಭಕ್ತಿ ಲಭಿಸಬೇಕು. ಈ ಎಲ್ಲ ಪೂಜಾದಿಗಳ ಉದ್ದೇಶವೂ ಅದೇ ತಾನೆ? ಒಮ್ಮೆ ಮಾತೆಯನ್ನು ಹೃದಯ ಮಂದಿರದಲ್ಲಿ ಪ್ರತಿಷ್ಠಿತಳನ್ನಾಗಿ ಮಾಡಿಕೊಂಡರೆ ಆಮೇಲೆ ಈ ಬಾಹ್ಯಕ ಆಡಂಬರದ ಪ್ರಯೋಜನವೆ ಇರುವುದಿಲ್ಲ. ಈಗ ತಾಯಿ ಇಲ್ಲಿಗೆ ಬಂದಿದ್ದಾಳೆ. ಅವಳೊಡನೆ ಆನಂದದಿಂದಿರೋಣ. ನಮ್ಮ ಪೂಜೆಯಲ್ಲಿ, ಅಯ್ಯಾ, ವಿಸರ್ಜನೆಯೂ ಇಲ್ಲ. ತಾಯಿ ತರುವಾಯ ಹೋಗುವುದಾದರೂ ಎಲ್ಲಿಗೆ? ಅವಳು ಇಲ್ಲಿಯೆ ಸದಾ ವಿರಾಜಮಾನೆ. ‘ಸಂವತ್ಸರ ವ್ಯತೀತೇತು ಪುನರಾಗಮನ ಚ’ ‘ವರುಷದ ಕೊನೆಯಲ್ಲಿ ಮರಳಿ ಬಾ’ ಎಂದೆಲ್ಲ ಬೀಳ್ಕೊಡಿಕೆಯ ಮಾತುಗಳೂ ಬಾಹಿರದ ಹೇಳಿಕೆ, ಸಾಧಾರಣರ ರೀತಿ, ಅಮ್ಮ ಯಾವಾಗಲೂ ನಮ್ಮ ಹೃದಯ ಮಂದಿರಗಳಲ್ಲಿ ನೆಲಸಿದ್ದಾಳೆ ಎಂಬುದೆ ನಮ್ಮ ತಿಳಿವಳಿಕೆ.”

* * *

ಆತ್ಮಾನಂ ರಥಿನಂವಿದ್ಧಿ ಶರೀರಂ ರಥಮೇವ ತು |
ಬುದ್ಧಿಂ ತು ಸಾರಥಿಂ ವಿದ್ಧಿ ಮನಃ ಪ್ರಗ್ರಹಮೇವ ಚ ||  – ಕಠೋಪನಿಷತ್ತು

“ಆತ್ಮವನ್ನೆ ರಥಿ ಎಂದು ತಿಳಿ; ಶರೀರವೆ ರಥ; ಬುದ್ಧಿಯೆ ಸಾರಥಿ; ಮನಸ್ಸೆ ಪ್ರಗ್ರಹ (ನಿಯಂತ್ರಿಸುವ ಹಗ್ಗ).”