ಕೆಲವು ತಿಂಗಳುಗಳಿಂದಲೂ ಶ್ರೀರಾಮಕೃಷ್ಣರ ಅಂತರಂಗ ಸಂನ್ಯಾಸಿ ಶಿಷ್ಯ ಸ್ವಾಮಿ ಸುಬೋಧಾನಂದರು ಬೇಲೂರು ಮಠದಲ್ಲಿ ಇರುತ್ತಿದ್ದರು. ಅವರು ಕಠಿಣವಾದ ಕ್ಷಯರೋಗದಿಂದ ನರಳುತ್ತಿದ್ದರು. ಅವರ ಚಿಕಿತ್ಸೆ ಮತ್ತು ಸೇವಾದಿ ವ್ಯವಸ್ಥೆಗಳನ್ನು ಮಹಾಪುರುಷಜಿ ನೋಡಿಕೊಳ್ಳುತ್ತಿದ್ದರು. ಏನೇ ಮಾಡಿದರೂ ಅವರ ಕಾಯಿಲೆ ದಿನದಿನಕ್ಕೂ ಉಲ್ಬಣಸ್ಥಿತಿಗೇರುತ್ತಿತ್ತು. ಆದರೆ ಮಹಾಪುರುಷಜಿಯ ಮನಸ್ಸಿಗೆ ಸುಬೋಧಾನಂದರ ಕಾಯಿಲೆ ಅಷ್ಟು ವಿಷಮಸ್ಥಿತಿಗೇರಿದೆ ಎಂಬ ವಿಚಾರದಲ್ಲಿ ವಿಶ್ವಾಸವಿರಲಿಲ್ಲ. ಯಾರಾದರೂ ವಿಚಾರಿಸಿದರೆ ‘ಖೋಕಾಗೆ* ಏನಾಗಿದೆ? ಕ್ರಮೇಣ ಎಲ್ಲ ಸರಿಹೋಗುತ್ತದೆ. ಶ್ರೀಗುರು ಅವನ ಕೆಲಸಕ್ಕಾಗಿ ಎಷ್ಟು ದಿನ ಇರಿಸುತ್ತಾನೆಯೋ ಅಷ್ಟು ದಿನ ಇರುತ್ತೇವೆ, ಇರಲೇಬೇಕಾಗುತ್ತದೆ. ಅದೇ ನಿಜವಾದ ಸಂಗತಿ. ಯಾರು ಏನೇ ಹೇಳಿದರೂ ನನಗೆ ಹಾಗೆ ಅನ್ನಿಸುತ್ತದೆ. ಖೋಕಾದ್ದೂ   ಅಷ್ಟೇ, ನನ್ನದೂ ಅಷ್ಟೇ. ನಮಗೇನೂ ಈ ಮಾನುಷ ವೈದ್ಯದ ವಿಷಯದಲ್ಲಿ ಅಷ್ಟೊಂದೇನೂ ನಂಬಿಕೆಯಿಲ್ಲ. ಕೃಷ್ಣ ಪೊರೆಯ ಕೊಲುವರಾರು? ಅವನು ಎಲ್ಲಿಯವರೆಗೆ ರಕ್ಷಿಸುತ್ತಾನೆಯೊ ಅಲ್ಲಿಯವರೆಗೆ ಖೋಕಾಗೆ ಏನೂ ಆಗುವುದಿಲ್ಲ.’ ಆಮೇಲೆ ಡಾಕ್ಟರುಗಳಿಂದ ಸುಬೋಧಾನಂದರ ಸ್ಥಿತಿ ವಿಷಮಕ್ಕೇರಿದೆ ಎಂದು ತಿಳಿದ ಮೇಲೆ ಮಹಾಪುರುಷಜಿ ತುಂಬ ಉತ್ಕಂಠಿತರಾಗಿ “ಆ! ಏನಂತೆ? ಇಲ್ಲ. ಅಷ್ಟು ದೂರ ಹೋಗಿಲ್ಲ. ಖೋಕಾ ಕಾಯಿಲೆ ಅಷ್ಟಕ್ಕೇರಿದೆಯೆ?” ಈ ಎರಡೂ ಮೂರು ಮಾತುಗಳಲ್ಲಿಯೆ ಎಂತಹ ಹೃದಯಾವೇಗ ಪ್ರಕಾಶಿತವಾಯಿತು ಎಂದರೆ ಪ್ರತ್ಯಕ್ಷ ನೋಡಿದವರಿಗಲ್ಲದೆ ಅನ್ಯರಿಗೆ ಸ್ವಾಮಿಗಳ ಮನಸ್ಸಿನ ಕಳವಳಿಕೆ ಅರಿವಾಗುವುದು ದುಃಸಾಧ್ಯ.

ಇವತ್ತು ಶುಕ್ರವಾರ, ಡಿಸೆಂಬರ್ ಎರಡನೆಯ ತೇದಿ. ಸ್ವಾಮಿ ಸುಬೋಧಾನಂದರು ಬೆಳಗಿನ ಹೊತ್ತು ಎಷ್ಟೋ ಉತ್ತಮಗೊಂಡಂತೆ ತೋರಿದರು. ಸ್ವಾಮಿ ಶುದ್ಧಾನಂದರು ಅವರನ್ನು ನೋಡಲು ಹೋದಾಗ ಅವರು “ಏನು ಸುಧೀರ್ ಎಲ್ಲ ಕ್ಷೇಮವೋ? ಎಲ್ಲ ಸರಿಯಾಗಿ ನಡೆಯುತ್ತಿದೆಯೊ?” ಇತ್ಯಾದಿಯಾಗಿ ಪ್ರಶ್ನಿಸಿದರು. ಆ ಸಂವಾದ ವಿಚಾರ ಕೇಳಿದ ತರುವಾಯ ಮಹಾಪುರುಷಜಿಯ ಮನಸ್ಸು ಎಷ್ಟೋ ಪ್ರಫುಲ್ಲಿತವಾಯಿತು. ಅವರು ಮತ್ತೆ ಮತ್ತೆ ಹೇಳಿದರು: “ಇವತ್ತೇನೊ ಖೋಕಾ ಚೆನ್ನಾಗಿರಬೇಕೆಲ್ಲವೆ? ಸುಧೀರ್ ಸಂಗಡ ಅನೇಕ ಮಾತುಕತೆ ಆಡಿದರಂತೆ.” ಆದರೆ ಹಗಲು ಮುಂಬರಿದಂತೆಲ್ಲ ಸ್ವಾಮೀ ಸುಬೋಧಾನಂದರ ಶರೀರಸ್ಥಿತಿ ಕೆಡುತ್ತ ಹೋಯಿತು. ಆ ಭಗ್ನ ದೇಹಪಂಜರದಿಂದ ಪ್ರಾಣಪಕ್ಷಿ ಹಾರಿಹೋಗುವುದೆ ಖಂಡಿತ; ಮತ್ತೆ ಅದರಲ್ಲಿ ಆಬದ್ಧವಾಗುವುದಿಲ್ಲ ಎಂಬಂತೆ ಭಾಸವಾಗುತ್ತಿತ್ತು.

ಮಹಾಪುರುಷಜಿಗೆ ಆ ಸುದ್ದಿ ತಿಳಿಸಿರಲಿಲ್ಲ. ಆದರೆ ಅವರು ಯಾವುದೋ ಅಜ್ಞಾತಕಾರಣಕ್ಕಾಗಿ ಇಂದು ತುಂಬ ಅಸ್ಥಿರವಾಗಿ ಬಿಟ್ಟಿದ್ದರು. ಮಧ್ಯಾಹ್ನಾತ್ಪರ ಎಂದಿನಂತೆ ವಿಶ್ರಾಂತಿ ನಿದ್ರೆ ಮಾಡಲಿಲ್ಲ. ತಮ್ಮ ಕೊಠಡಿಯಲ್ಲಿ ಮೆಲ್ಲಮೆಲ್ಲನೆ ಅಡ್ಡಾಡುತ್ತ ಇದ್ದರು. ಒಮ್ಮೆ ಕಿಟಕಿಯ ಬಳಿ ಬಂದಾಗ ನಿಂತರು. ಸಂನ್ಯಾಸಿ ಒಬ್ಬರು ಮಠದ ವರಾಂಡದಲ್ಲಿ ಹೋಗುತ್ತಿದ್ದುದನ್ನು ಕಂಡು “ಯಾರದು ಹೋಗುವವರು?” ಎಂದು ಕೇಳಿದರು. ಪಕ್ಕದಲ್ಲಿದ್ದ ಸೇವಕ ಸಾಧು ಒಬ್ಬರು ಹೋಗುತ್ತಿರುವವರು ಯಾರು ಎಂಬುದನ್ನು ತಿಳಿಸಿದರು. ಅದಕ್ಕೆ ಮಹಾಪುರುಷಜಿ “ಇದೇನು ಭರತ್ (ಸ್ವಾಮಿ ಅಭಯಾನಂದರು) ಇಷ್ಟು ಹೊತ್ತು ಮಾಡಿಕೊಂಡು ಊಟಕ್ಕೆ ಹೋಗುತ್ತಿದ್ದಾನೆ?” ಎಂದು ಪ್ರಶ್ನಿಸಿದರು. ಆಮೇಲೆ ಹೇಳಿದರು “ಭರತನ ಭಾವ ಎಷ್ಟು ಶ್ಲಾಘನೀಯ. ಮನೆಯ ಯಜಮಾನಿಯಾದ ಗೃಹಿಣಿಯಂತೆ ಎಲ್ಲರ ಊಟ ಆಯಿತೆ ಇಲ್ಲವೆ ನೋಡಿಕೊಂಡ ಮೇಲೆಯೆ ತಾನು ಊಟಕ್ಕೆ ಹೋಗುತ್ತಾನೆ. ಮಠದಲ್ಲಿ ಸಾಧು ಭಕ್ತರ ಸೇವೆ ಸರಿಯಾಗಿ ನಡೆದರೆ ಶ್ರೀಗುರು ಪ್ರಸನ್ನರಾಗುತ್ತಾರೆ. ಅವರು ಹೇಳುತ್ತಿದ್ದರು, ‘ಭಾಗವತ, ಭಕ್ತ, ಭಗವಾನ್-ಮೂರು ಒಂದೇ’ ಎಂದು. ಸಾಧು ಮತ್ತು ಭಕ್ತರಲ್ಲಿಯೆ ಅವರ ಪ್ರಕಾಶ ವಿಶೇಷವಾಗಿರುತ್ತದೆ.”

ಅಪರಾಹ್ನ ಮೂರು ಗಂಟೆಯಾದ ಅಲ್ಪಾಂತರದಲ್ಲಿಯೆ ಸ್ವಾಮಿ ಸುಬೋಧಾನಂದರು ಮಹಾಸಮಾಧಿಯೋಗದಿಂದ ಶ್ರೀಗುರು ಪಾದಪದ್ಮದಲ್ಲಿ ಐಕ್ಯವಾದರು. ಮಠದಲ್ಲೆಲ್ಲ ಗಂಭೀರ ವಿಷಾದ ಛಾಯೆ ಹಬ್ಬಿತ್ತು. ಆ ದುರ್ವಾರ್ತೆಯನ್ನು ಕೇಳಿದೊಡನೆ ಮಹಾಪುರುಷಜಿ ಒಂದು ಕ್ಷಣಕಾಲ ಮಾತ್ರ ಬೆಚ್ಚಿದ್ದರು. ಭಾವ ಸಂಯಮ ಮಾಡಿಕೊಂಡು ಅವರ ಸಾವಿನ ವಿವರಗಳನ್ನೆಲ್ಲ ಕೇಳಿ ತಿಳಿದು ಕೊಂಡರು. ಆದರೂ ಅವರ ಭಾವ ಅತ್ಯಂತ ಗಂಭೀರವಾಗಿತ್ತು.

ಮರುದಿನ ಬೆಳಿಗ್ಗೆ ಸ್ವಾಮಿ ವಿಜ್ಞಾನಾನಂದರು (ಶ್ರೀರಾಮಕೃಷ್ಣರ ಅಂತರಂಗ ಶಿಷ್ಯರಲ್ಲೊಬ್ಬರು) ಅಲಹಾಬಾದಿನಿಂದ ಹಠಾತ್ತಾಗಿ ಆಗಮಿಸಿದರು. ಅವರನ್ನು ಕಂಡೊಡನೆ ಮಹಾಪುರುಷಜಿ ಹಾಯ್ ಹಾಯ್ ಎಂದು ಅಳತೊಡಗಿದರು. ಅವರ ಹೃದಯದಲ್ಲಿ ಅಷ್ಟೊಂದು ಶೋಕಾನಲ ಅಡಗಿತ್ತೆಂದು ಯಾರು ಊಹಿಸಿರಲಿಲ್ಲ. ಬಹಳ ಹೊತ್ತು ಚಿಕ್ಕಮಕ್ಕಳಂತೆ ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಆ ಮೇಲೆ ಸ್ವಲ್ಪ ಶಾಂತರಾಗಿ ಮೆಲ್ಲಮೆಲ್ಲನೆ ವಿಜ್ಞಾನಾನಂದರೊಡನೆ ಕುಶಲ ಪ್ರಶ್ನಾದಿಗಳಲ್ಲಿ ತೊಡಗಿ ಸುಬೋಧಾನಂದರ ವಿಚಾರವಾಗಿ ಬಹಳ ಮಾತುಕತೆ ಆಡಲಾರಂಭಿಸಿದರು.

ಮಹಾಪುರುಷಜಿ ಹೇಳಿದರು: “ಖೋಕಾ ಬಾಲಕ ಕಾಲದಿಂದಲೂ ತ್ಯಾಗಿ ಮತ್ತು ಕಠೋರಿ; ಅಲ್ಲದೆ ತುಂಬ ಸರಳ. ನಾನೊಮ್ಮೆ ಕಾಶಿಯಲ್ಲಿ ವಂಶೀದತ್ತರ ತೋಟದ ಮನೆಯಲ್ಲಿ ಇರುತ್ತಿದ್ದೆ. ಖೋಕ ಅಲ್ಲಿಗೆ ದೋಲಿಯ ಮೇಲೆ ಬಂದರು; ಶರೀರ ಅಸ್ವಸ್ಥವಾಗಿದ್ದರೂ ಅತ್ತಕಡೆ ಕಡೆಗಣ್ಣೂ ಹಾಕುತ್ತಿರಲಿಲ್ಲ. ಬಹಳ ದಿನಗಳ ಮೇಲೆ ನನ್ನನ್ನು ಕಂಡು ಅವರಿಗೆ ತುಂಬ ಆನಂದವಾಗಿತ್ತು. ಏನು ನಕ್ಕಿದ್ದು! ನಕ್ಕು ನಕ್ಕು ಜ್ವರ ಕೂಡ ಬಂದುಬಿಟ್ಟಿತು. ನಾನು ಅವರನ್ನು ಬ್ರಾಹ್ಮಣಮ್ಮನ ಹತ್ತಿರ ಕರೆದುಕೊಂಡು ಹೋದೆ. ಅವರ ಸ್ಥಿತಿ ಸ್ವಲ್ಪ ಸುಧಾರಿಸಿದ ಮೇಲೆ ಡಾಕ್ಟರ್ ಗೋವಿಂದಬಾಬು ಅವರ ಬಳಿಗೆ ಕೊಂಡೊಯ್ದೆ. ಕ್ರಮೇಣ ಕಾಯಿಲೆ ಗುಣವಾಯಿತು. ಆಮೇಲೆ ನಾನೂ ಅವರೂ ಕಾಶಿಯಲ್ಲಿ ಕೆಲವು ಕಾಲ ಒಟ್ಟಿಗಿದ್ದೆವು. ಖೋಕಾ ಅಂದರೆ ಖೋಕ (ಹುಡುಗ) ! ಠಾಕೂರರ ಬಳಿಗೆ ಅವರು ಹೋದದ್ದೂ ಹುಡುಗರಾಗಿದ್ದಾಗಲೆ. ಠಾಕೂರರಿಗೆ ಅವರನ್ನು ಕಂಡರೆ ತುಂಬ ಅಕ್ಕರೆ; ಸ್ವಾಮೀಜಿಗೂ ಅಷ್ಟೇ.”

ಸ್ವಲ್ಪ ಕಾಲ ಸುಮ್ಮನಿದ್ದು ಒಂದು ಹಾಡು ಹೇಳತೊಡಗಿದರು: “ನಿನ್ನಾಟವನ್ನು ನೋಡಿ ನಾ ಮೂಕನಾಗಿಹೆನು, ಓ ಲೀಲಾಮಯಿ!” ಇತ್ಯಾದಿ. ಮತ್ತೆ ಹೇಳಿದರು, “ಈ ಹಾಡನ್ನು ತ್ರೈಲೋಕ್ಯನಾಥ ಸಂನ್ಯಾಲರು ಠಾಕೂರರು ದೇಹತ್ಯಾಗ ಮಾಡಿದ ಮೇಲೆ ಕಾಶೀಪುರದ ಶ್ಮಶಾನಘಟ್ಟದಲ್ಲಿ ಹಾಡಿದ್ದರು. ಅವಳ ಲೀಲೆ ಅರಿಯುವುದ ಬಹಳ ಕಷ್ಟ; ಕಾಣುವುದಿಲ್ಲವೆ ಖೋಕಾ ಎಂಥಾ ರೀವಿಯಲ್ಲಿ ದೇಹತ್ಯಾಗ ಮಾಡಿ ಠಾಕೂರರ ಹತ್ತಿರಕ್ಕೆ ಹೋಗಿಬಿಟ್ಟರು? ಅವರು ಕರೆ ಕಳುಹಿಸಿದರೆ ನಾವು ಹೋಗಲೇಬೇಕು! ಠಾಕೂರರು ತಮ್ಮ ಮಕ್ಕಳನ್ನು ಒಬ್ಬೊಬ್ಬರನ್ನಾಗಿ ಹಿಂದಕ್ಕೆ ಕರೆಸಿಕೊಳ್ಳುತ್ತಿದ್ದಾರೆ: ನನ್ನನ್ನು ಏಕೆ ಇಲ್ಲಿಟ್ಟಿದಾರೆಯೋ ಅವರಿಗೇ ಗೊತ್ತು. ಅವರ ಹೋತನ್ನ ಅವರು ಎಲ್ಲಿ ಕಡಿದಾದರೂ ಬಲಿ ಕೊಡಬಹುದು; ತಲೆಯನ್ನೊ ಬಾಲವನ್ನೊ! ಎಲ್ಲ ಅವರಿಚ್ಛೆಯಂತೆ. ನನ್ನನ್ನು ಯಾವ ಸ್ಥಿತಿಯಲ್ಲಿ ಇಟ್ಟಿದ್ಧಾರೆ ಎಂದರೆ ಸರಿಯಾಗಿ ನಗಲೂ ಆರೆ. ಹಿಂದಿನ ವಿಚಾರ ಮಾತನಾಡುವುದಕ್ಕೆ ಕೂಡ ಜೊತೆಯ ಜನ ಇಲ್ಲ. ಆದರೂ ನಾನು ಇರಲೇಬೇಕಾಗಿದೆ.”

ಸಾಯಂಕಾಲದಲ್ಲಿ ಆವೊತ್ತಿನವರೆಗೂ ಖೋಕಾ ಮಹಾರಾಜರ ಸೇವಾ ಶುಶ್ರೂಷೆ ಮಾಡುತ್ತಿದ್ದವರನ್ನು ಮಹಾಪುರುಷಜಿಯ ಸನ್ನಿಧಿಗೆ ಕರೆತರಲಾಯಿತು. ಅವರು ಯಾರು ಹಿಂದಿನ ದಿನದಿಂದ ಊಟ ಮಾಡಿರಲಿಲ್ಲ; ದುಃಖದಿಂದ ಅಳುತ್ತಾ ಇದ್ದರು. ಅವರನ್ನು ನೋಡಿದಾಗ ಮಹಾಪುರುಷಜಿಯ ಕಣ್ಣು ಹನಿಗೂಡಿದವು. ಉಕ್ಕಿಬರುತ್ತಿದ್ದ ತಮ್ಮ ದುಃಖವನ್ನು ತಡೆದುಕೊಂಡು ಬಂದವರಿಗೆ ಸಾಂತ್ವನ ಹೇಳಿದರು. “ನೀವೆ ಹೇಳಿ, ಖೊಕಾ ಮಹಾರಾಜ್ ಎಲ್ಲಿಗೆ ಹೋಗಿದ್ದಾರೆ? ಠಾಕೂರರಲ್ಲಿದ್ದಾರೆ. ನನ್ನ ಮಾತಿನಲ್ಲಿ ವಿಶ್ವಾಸವಿಡಿ. ಸುಮ್ಮನೆ ಅತ್ತರೆ ಏನು ಪ್ರಯೋಜನ? ಈ ಎಲ್ಲ ಶೋಕ -ಮೋಹಗಳೂ ಅಜ್ಞಾನದಲ್ಲಿ ನೆಲಸಿವೆ. ದೇವರಮನೆಗೆ ಹೋಗಿ. ಸ್ವಲ್ಪ ಧ್ಯಾನಮಾಡಿ, ಪ್ರಾರ್ಥನೆ ಮಾಡಿ, ‘ಸ್ವಾಮೀ, ಜ್ಞಾನ ಕೊಡು, ಭಕ್ತಿ ಕೊಡು’ ಎಂದು. ದೇವರು ಶಕ್ತಿ ಕೊಡುತ್ತಾನೆ. ಅವನನ್ನು ಧ್ಯಾನಿಸಿದರೆ ಈ ಅವಿಶ್ವಾಸ ಅಜ್ಞಾನ ಎಲ್ಲ ತೊಲಗುತ್ತವೆ. ಬರಿದೆ ಅತ್ತರೆ ಏನಾಗುತ್ತದೆ? ನನಗೂ ಅಳು ಬರುವುದಿಲ್ಲ ಎಂದಲ್ಲ. ನಾನೂ ಅತ್ತಿದ್ದೇನೆ. ಆದರೆ ಒಡನೆಯ ಜ್ಞಾನವೂ ಬರುತ್ತದೆ. ಆಗಲೇ ಬಂದೂ ಇದೆ. ಠಾಕೂರರು ನನ್ನನ್ನು ಇನ್ನೂ ಇಲ್ಲಿ ಇಟ್ಟಿದ್ದಾರೆ. ನನ್ನ ಮಾತು ಕೇಳಿ; ಹೋಗಿ ಏನಾದರೂ ಸ್ವಲ್ಪ ಊಟ ಮಾಡಿ. ನಿಮಗೆ ಎಷ್ಟು ತಾನೆ ಶೋಕ ಇದ್ದೀತು? ಖೋಕಾ ಮಹಾರಾಜರನ್ನ ಕಂಡಿದ್ದಾದರೂ ನೀವು ಎಷ್ಟು ಕಾಲದಿಂದ? ನೀವು ಅವರನ್ನು ಅರಿತಿರುವುದಾದರೂ ಎಷ್ಟು? ನಾನೊಬ್ಬನೆ ಒಂಟಿಯಾಗಿ ಒಬ್ಬರ ಸಾವಿನ ತರುವಾಯ ಮತ್ತೊಬ್ಬರ ಸಾವಿನ ದುಃಖವನ್ನು ಮೌನವಾಗಿ ಸಹಿಸಬೇಕಾಗಿದೆ. ಸಹಿಸುತ್ತಲೂ ಇದ್ದೇನೆ. ಏನು ಮಾಡೋದು? ಶ್ರೀಗುರು ತನ್ನ ವಿಭೂತಿಗಳನ್ನೆಲ್ಲ ಹಿಂದಕ್ಕೆಳೆದುಕೊಳ್ಳುತ್ತಿದ್ದಾರೆ. ಅದನ್ನು ತಡೆಗಟ್ಟುವುದಕ್ಕೆ ಯಾರಿಂದ ಸಾಧ್ಯ? ಅವರೊ (ಶ್ರೀರಾಮಕ್ರಷ್ಣರ ಅಂತರಂಗ ಶಿಷ್ಯರು) ಒಬ್ಬೊಬ್ಬರೇ ಹೊರಡುತ್ತಿದ್ದಾರೆ, ನನ್ನನ್ನು ಶರಶಯ್ಯೆಗೆ ಬಿಟ್ಟು. ನನಗಂತೂ ನನ್ನ ಪಕ್ಕೆಲುಬು ಕಿತ್ತಂತೇ ಆಗುತ್ತಿದೆ.”

ಸ್ವಲ್ಪ ಹೊತ್ತು ಸುಮ್ಮನಿದ್ದು ಖೋಕಾ ಮಹಾರಾಜರ ಸೇವಕಗಣಕ್ಕೆ ಸಮಾಧಾನ ನೀಡಿ, ಊಟ ಮಾಡುವಂತೆ ಮತ್ತೆ ಮತ್ತೆ ಹೇಳಿದರು. ಅವರೆಲ್ಲ ಒಂದಿನಿತು ಸಮಾಧಾನ ಪಡೆದವರಾಗಿ ಬೀಳ್ಕೊಟ್ಟ ಬಳಿಕ ಮಹಾಪುರುಷಜಿ ಹೇಳಿದರು: “ಪಾಪ! ಅವರಿಗೆ ತುಂಬ ಪೆಟ್ಟು! ಸಮಾಧಾನ ತಂದುಕೊಳ್ಳವುದಕ್ಕೆ ಇನ್ನೂ ಸ್ವಲ್ಪ ಕಾಲ ಬೇಕು. ಆದರೆ ಆ ಶಾಂತಿಮಯಿ ಜಗನ್ಮಾತೆ ಎಲ್ಲರ ಹೃದಯದಲ್ಲಿಯೂ ಇದ್ದಾಳೆ. ಆಕೆಯ ಕಾಲಕ್ರಮೇಣ ಎಲ್ಲರಿಗೂ ಶಾಂತಿ ನೀಡುತ್ತಾಳೆ.”

* * *

ಯುಗದೊಳ್ಪಿಗೆ ಜಗದೊಳ್ಪಿಗೆ
ನಿನ್ನೊಳ್ಪನೆ ನೀಂ ಗೆಲ್ಲು |  – ‘ಶತಮಾನ ಸಂಧ್ಯೆ’ ‘ಅಗ್ನಿಹಂಸ’ ದಿಂದ* ಸ್ವಾಮಿ ಸುಬೋಧಾನಂದರನ್ನು ಅವರು ಕರೆಯುತ್ತಿದ್ದ ರೀತಿ.