ಚಳಿಗಾಲ ಬಳಿಸಾರುತ್ತಿದೆ ಎಂಬ ಸೂಚನೆ ಕೊಡುವಂತೆ ವಾಯುಗುಣ ಸ್ವಲ್ಪ ಸ್ವಲ್ಪ ಶೀತಲವಾಗುತ್ತಿದೆ. ಸಂಧ್ಯಾಕಾಲ. ಸಂಜೆಯ ಮಂಗಳಾರತಿ ಮುಗಿದ ಮೇಲೆ ಮಠದ ಸಂನ್ಯಾಸಿಗಳೂ ಬ್ರಹ್ಮಚಾರಿಗಳೂ ಸರ್ವರೂ ಧ್ಯಾನದಿಗಳಲ್ಲಿ ನಿರತರಾಗಿದ್ದಾರೆ. ಒಂದು ಅನಿರ್ವಚನೀಯವಾದ ಶಾಂತಿ ಮತ್ತು ಗಾಂಬೀರ್ಯ ಸರ್ವತ್ರ ವ್ಯಾಪಕವಾಗಿದೆ.

ಮಹಾಪುರುಷಜಿ ಕೊಠಡಿಯೂ ಸಂಪೂರ್ಣ ನಿಶ್ಯಬ್ದವಾಗಿದೆ. ಹಸಿರು ದೀಪವೊಂದು ಅಲ್ಲಿ ಬೆಳಗುತ್ತಿದೆ. ಮಹಾಪುರುಷಜಿ ಪಶ್ಚಿಮಕ್ಕೆ ಮುಖ ಹಾಕಿಕೊಂಡು ಸುಖಾಸನದಲ್ಲಿ ಕುಳಿತಿದ್ದಾರೆ, ಧ್ಯಾನಮಗ್ನರಾಗಿ. ಅನುಚರರೊಬ್ಬರು ಪಕ್ಕದಲ್ಲಿ ನಿಂತು ಬೀಸಣಿಗೆಯಿಂದ ಮೆಲ್ಲ ಮೆಲ್ಲನೆ ಬೀಸುತ್ತಿದ್ದಾರೆ, ಸೊಳ್ಳೆ ಓಡಿಸುವ ಸಲುವಾಗಿ. ಅಂತಹ ಪರಿಸ್ಥಿತಿಯಲ್ಲಿಯೆ ಅನೇಕ ಕ್ಷಣಗಳು ಕಳೆದು ಹೋದವು. ಕೊಠಡಿಯ ನಿಶ್ಯಬ್ದತೆ ಬರಬರುತ್ತಾ ಗಂಭೀರತರವಾಯಿತು. ಹಾಗೆಯೆ ಅವರ ಶಾಂತ ಮುಖಮಂಡಲವೂ ಮತ್ತಷ್ಟು ಪ್ರದೀಪ್ತವಾಯಿತು. ಪ್ರತಿದಿನ ಪದ್ಧತಿಯಂತೆ ಮಠದ ಸಾಧುಗಳಲ್ಲಿ ಕೆಲವರು ಸಾಯಂ ನಮಸ್ಕಾರ ಸಲ್ಲಿಸುವ ಸಲುವಾಗಿ ನಡುನಡುವೆ ಬಂದವರು ಅವರ ಧ್ಯಾನಮಗಗ್ನ ಸ್ಥಿತಿಯನ್ನು ನೋಡ ದೂರದಿಂದಲೆ ಪ್ರಣಾಮಮಾಡಿ ಹಿಂತಿರುಗಿದರು. ಕ್ರಮೇಣ ರಾತ್ರಿ ಒಂಬತ್ತು ಗಂಟೆ ಹೊಡೆಯಿತು; ಆದರೂ ಸ್ವಾಮಿಗಳು ತಮ್ಮ ಗಂಭೀರ ಧ್ಯಾನೋನ್ನತಿಯಿಂದ ಕೆಳಗಿಳಿಯಲಿಲ್ಲ. ಸ್ವಲ್ಪ ಹೊತ್ತಾದ ಮೇಲೆ ಮಹಾಪುರುಷಜಿಯ ಕಂಠದಿಂದ ಮೆಲ್ಲಮೆಲ್ಲನೆ ಓಂಕಾರಧ್ವನಿ ಹೊಮ್ಮತೊಡಗಿತು. ಅಲ್ಲದೆ ಕ್ರಮಕ್ರಮವಾಗಿ ಅದು ಇನ್ನೂ ಸ್ವಲ್ಪ ಸ್ಪಷ್ಟತರವಾಗಿ ಹರಿಃ ಓಂ ಹರಿಃ ಓಂ ಎಂಬ ಉಚ್ಚಾರಣವಾಗಿ ಕೇಳಿಬಂದಿತು. ಇನ್ನೂ ತುಸುಹೊತ್ತಾದ ಮೇಲೆ ‘ಹೊತ್ತೆಷ್ಟಾಗಿದೆ?’ ಎಂದು ಪ್ರಶ್ನೆಸಿದರು, ಅನುಚರ ಸಾಧು ಮೆಲ್ಲಗೆ ಸ್ವಲ್ಪ ಸಂಕೋಚದಿಂದಲೆ “ಆಗಲೆ ಒಂಬತ್ತು ಗಂಟೆ ಹೊಡೆಯಿತು, ಮಹಾರಾಜ್”, ಎಂದು ಉತ್ತರವಿತ್ತರು.

ಮಹಾಪುರುಷಜಿ: “ಠಾಕೂರರ ನೈವೇದ್ಯಕ್ಕೆ ಗಂಟೆಯಾಯಿತೆ?”

ಅನುಚರ: “ಎಂದೊ ಆಯಿತು. ದೇವರ ಮನೆಗೆ ನೈವೇದ್ಯ ತೆಗೆದುಕೊಂಡು ಹೋಗಿ ಬಹಳ ಹೊತ್ತಾಯಿತು; ಈಗೇನು ಹಿಂದಕ್ಕೆ ತರುವ ಸಮಯವಾಗಿರಬಹುದು.”

ಮಹಾಪುರುಷಜಿ ಅಷ್ಟು ಹೆಚ್ಚು ಹೊತ್ತು ಧ್ಯಾನಮಗ್ನರಾಗಿದ್ದುದನ್ನು ನೋಡಿ ಅನುಚರ ಸಾಧುವಿಗೆ ಮನಸ್ಸಿನಲ್ಲಿಯೆ ಕಳವಳವಾಗತೊಡಗಿತು. ಏಕೆಂದರೆ ಡಾಕ್ಟರು ಅಷ್ಟಲ್ಲದೆ ಹೇಳಿದ್ದರು. ಮಹಾಪುರುಷಜಿ ಬಹಳ ಹೊತ್ತು ಧ್ಯಾನಾದಿಗಳಲ್ಲಿ ತೊಡಗಬಾರದೆಂದು. ಹಾಗೆ ಮಾಡಿದರೆ ಅವರ ಶರೀರಕ್ಕೆ ತುಂಬಾ ತೊಂದರೆ ಎಂದು. ಅದನ್ನು ನೆನೆದ ಅನುಚರ ಸಾಧು ತುಂಬ ದೃಢ ಮನಸ್ಸುಮಾಡಿ ಪ್ರಶ್ನೆ ಕೇಳುವ ಸಾಹಸಕ್ಕೆ ಕೈಹಾಕಿದರು: “ತಾವು ಇಷ್ಟು ಹೊತ್ತು ಧ್ಯಾನ ಮಾಡುವುದಾದರೂ ಏತಕ್ಕೆ? ಈ ಕಣ್ಣುಗಳಿಂದಲೆ ಕಣ್ಣು ಬಿಟ್ಟುಕೊಂಡೆ ತಾವು ಠಾಕೂರರನ್ನು ನೋಡಬಲ್ಲಿರಿ, ಅವರೊಡನೆ ಮಾತನಾಡಬಲ್ಲಿರಿ, ಹೀಗಿರಲಿ ತಾವು ಅಷ್ಟು ಹೊತ್ತು ಧ್ಯಾನ ಮಾಡುವುದೇಕೆ? ಅದರಿಂದ ಏನು ಪ್ರಯೋಜನ?”

ಮಹಾಪುರುಷಜಿ ಸ್ನೇಹವಿಗಲಿತ ಕಂಠದಿಂದ ಮೆಲ್ಲಮೆಲ್ಲನೆ ಹೇಳಿದರು: “ಹೌದಯ್ಯಾ, ನೀ ಹೇಳಿದ್ದು ನಿಜ. ನಮ್ಮ ಪ್ರಯತ್ನ ಒಂದಿನಿತೂ ಬೇಕಾಗದೆ ಅವರೇ ಕೃಪೆಮಾಡಿ ನಮಗೆ ಕಾಣಿಸಿಕೊಳ್ಳುತ್ತಾರೆ; ಅಲ್ಲದೆ ಅವಶ್ಯಬಿದ್ದರೆ ನಮ್ಮೊಡನೆ ಮಾತುಕತೆಯನ್ನೂ ನಡೆಸುತ್ತಾರೆ. ಶ್ರೀಗುರುಮಹಾರಾಜ್, ಶ್ರೀ ಶ್ರೀ ಮಾತೆ, ಶ್ರೀ ಸ್ವಾಮೀಜಿ ಮೊದಲಾದವರೆಲ್ಲರೂ ನಮ್ಮ ಮೇಲೆ ತುಂಬ ದಯೆ ತೋರುತ್ತಿದ್ದಾರೆ. ನಿಶ್ಚಯ, ಅವರನ್ನು ನೋಡಬೇಕಾದರೆ ನಾನು ಧ್ಯಾನ ಮಾಡಬೇಕಾದುದೇನೂ ಇಲ್ಲ. ಅದಕ್ಕಾಗಿ ಅಲ್ಲ ನಾನು ಧ್ಯಾನಮಾಡುವುದು. ಹಾಗಾದರೆ ಏತಕ್ಕೆ? ಹೇಳುತ್ತೇನೆ ಕೇಳು: ಈ ಸ್ಥಳದಿಂದ (ನನ್ನಿಂದ) ಅನೇಕರು ದೀಕ್ಷೆ ತೆಗೆದುಕೊಂಡು ಹೋಗಿದ್ದಾರೆ. ಆದರೆ ಅವರೆಲ್ಲರೂ ಸಮಾನವಾಗಿ ಧ್ಯಾನ ಜಪ ಮಾಡಲು ಸಮರ್ಥರಾಗುವುದಿಲ್ಲ. ಇನ್ನು ಕೆಲವರಿದ್ದಾರೆ, ಅವರೇನೊ ಧ್ಯಾನ ಜಪ ಮಾಡಲು ಸಮರ್ಥರಾಗುವುದಿಲ್ಲ. ಇನ್ನು ಕೆಲವರಿದ್ದಾರೆ, ಅವರೇನೊ ಧ್ಯಾನ ಜಪ ಮಾಡುತ್ತಾರೆ; ಆದರೆ ಅವರವರ ಕರ್ಮ ಸಂಸ್ಕಾರ ಸಂಬಂಧವಾದ ಬಾಧೆ ವಿಘ್ವಗಳಿರುವುದರಿಂದ ಧರ್ಮಪಥದಲ್ಲಿ ಹೆಚ್ಚು ಮುಂದುವರಿಯಲು ಸಾಧ್ಯವಾಗುವುದಿಲ್ಲ. ಅವರ ಸಲುವಾಗಿ ಪ್ರತ್ಯೇಕ ಭಾವದಿಂದ ನಾನು ವಿಶೇಷ ರೀತಿಯಲ್ಲಿ ಪ್ರಾರ್ಥನಾದಿಗಳನ್ನು ಮಾಡಬೇಕಾಗಿದೆ. ಸ್ವಲ್ಪ ಮನಃ ಸಂಯಮ ಮಾಡಿ ಕುಳಿತರೆ ಅವರೆಲ್ಲರ ಮುಖಚಹರೆ ಬಗೆಗಣ್ಣಿಗೆ ಹೊಳೆಯುತ್ತದೆ. ಆಗ ಒಬ್ಬೊಬ್ಬರನ್ನಾಗಿ ತೆಗೆದುಕೊಂಡು ಅವರಿಗಾಗಿ ಪ್ರಾರ್ಥನೆ ಮಾಡುತ್ತೇನೆ. ಧರ್ಮಪಥದಲ್ಲಿ ಅವರು ಮುಂದುವರಿಯದಂತೆ ಅಡ್ಡಲಾಗಿರುವ ಪ್ರತಿಬಂಧಗಳನ್ನೆಲ್ಲ ದೂರ ಮಾಡಿಕೊಡಬೇಕಾಗುತ್ತದೆ. ಅದೂ ಅಲ್ಲದೆ ಇತರ ಅನೇಕರಿಗೂ ಸಾಂಸಾರಿಕ ದುಃಖ ಕಷ್ಟಗಳಿರುತ್ತವೆ; ಅದರ ವ್ಯವಸ್ಥೆಯನ್ನೂ ಮಾಡಬೇಕಾದುದಿರುತ್ತದೆ. ಶ್ರೀಗುರುವೆ ಒಳಗಣ್ಣಿನಿಂದ ಪ್ರೇರಣೆಕೊಟ್ಟು ನಮ್ಮಿಂದ ಇದನ್ನೆಲ್ಲ ಮಾಡಿಸುತ್ತಾನೆ; ಸಂಸಾರದ ಶೋಕತಾಪ ದುಃಖಕಷ್ಟಗಳಿಗೆ ಕೊನೆಯಿಲ್ಲ. ಸಮಗ್ರ ಜಗತ್ತು ಶಾಂತಿ ಪಡೆಯಲೆಂದು, ದುಃಖ ಕಷ್ಟಗಳು ಕಡಿಮೆಯಾಗಲೆಂದು, ಎಲ್ಲ ಮಾನವರೂ ಭಗವಂತನ ಕಡೆಗೆ ಏರುವಂತಾಗಲೆಂದು ನಮ್ಮ ಏಕಮಾತ್ರ ಪ್ರಾರ್ಥನೆ ಅಷ್ಟೆ. ನಮ್ಮ ಸ್ವಂತಕ್ಕಾಗಿ ನಾವು ಏನನ್ನೂ ಮಾಡುವುದಿಲ್ಲವಯ್ಯಾ.”

ಮಹಾಪುರುಷಜಿಯ ಒಂದೊಂದು ಮಾತು ಅದರ ಹೃದಯವೇಗಕ್ಕೆ ಸಾಕ್ಷಿಯಾಗಿತ್ತು. ಅವರ ಪ್ರಾಣದ ಪ್ರೇಮದ ಬುಗ್ಗೆ ಹೊಮ್ಮಿ ಚಿಮ್ಮಿ ಹರಿಯುವಂತೆ ತೋರುತ್ತಿತ್ತು. ಕಂಪಿತ ಕಂಠದಿಂದ ಮತ್ತೆ ಮುಂದುವರಿದರು: “ಅವನೇ ಎಲ್ಲವನ್ನೂ ಮಾಡಿಸುತ್ತಿರುವವನು. ಆ ಪ್ರೇಮಮಯನಾದ ಪ್ರಭುವೇ ಇಲ್ಲಿ ಒಳಗೆ ಕುಳಿತುಕೊಂಡು ನಾನಾ ಭಾವಗಳಿಂದ ಆಟವಾಡುತ್ತಿದ್ದಾನೆ. ಅವನು ಹೇಗೆ ಆಡಿಸುತ್ತಾನೆಯೊ ಹಾಗೆಯೆ ನಾನು ಆಡುತ್ತೇನೆ. ಏನನ್ನು ಹೇಳುತ್ತಾನೆಯೊ ಅದನ್ನೇ ಹೇಳುತ್ತೇನೆ. ನಾನು ಅವನ ಕೈಯ ಸಾಮಾನ್ಯ ಯಂತ್ರ ಮಾತ್ರ-ಅದೂ ಮುರುಕಲು ಯಂತ್ರ. ಆದರೆ ಅವನು ಪ್ರವೀಣ. ಒಳ್ಳೆ ನುರಿತ ಆಟಗಾರ; ಮುರುಕಲು ದಾಳದಿಂದಲೂ ಆಟ ಗೆಲ್ಲಬಲ್ಲ; ಅವನು ಮಾಡುತ್ತಿರುವುದೂ ಅದನ್ನೆ. ಹಾಗಲ್ಲದಿದ್ದರೆ, ನೀನೆ ಹೇಳು, ನನ್ನಿಂದೇನು ಸಾಧ್ಯ? ಪಾಂಡಿತ್ಯವಿಲ್ಲ, ವಾಗ್ಮಿತೆಯಿಲ್ಲ, ಮತ್ತೇನೊಂದೂ ಇಲ್ಲ; ನೋಡುವುದಕ್ಕಾದರೂ ಚೆನ್ನಾಗಿದ್ದೇನೆಯೆ? ಅದೂ ಇಲ್ಲ! ಇದೋ ಮುದಿ ಶರೀರ; ಉಪ್ಪರಿಗೆಯಿಂದ ಕೆಳಗೆ ಇಳಿದುಹೋಗುವುದಕ್ಕೂ ಆಗುವುದಿಲ್ಲ. ಆದರೂ ಇದರಿಂದಲೆ ಅವನು ತನ್ನ ಕೆಲಸವನ್ನು ಸಾಗಿಸುತ್ತಾ ಇದ್ದಾನೆ. ಎಷ್ಟು ಜನ ಬರುತ್ತಾರೆ! ಬಂದವರೆಲ್ಲರ ಹತ್ತಿರ ಮಾತು ಕೂಡ ಆಡುವುದು ಕಷ್ಟವಾಗುತ್ತದೆ, ಅಷ್ಟೊಂದು ಜನ ಬರುತ್ತಾರೆ. ಬಂದವರು ಹೇಳುತ್ತಾರೆ- ‘ನೀವೇನೂ ಮಾತಾಡುವುದು ಬೇಡ. ನಿಮ್ಮ ದರ್ಶನ ಮಾತ್ರದಿಂದಲೆ ನಮ್ಮ ಪ್ರಾಣದ ಬೇಗೆಯೆಲ್ಲ ಆರಿಹೋಗುತ್ತದೆ, ಸಂದೇಹಗಳೆಲ್ಲ ಪರಿಹಾರವಾಗುತ್ತವೆ.’ ನನಗೇನೂ ಗೊತ್ತಿಲ್ಲ, ಪ್ರಭೂ, ಜಯ್ ನಿನಗೆ ಜಯ್! ಧನ್ಯ, ಪ್ರಭೂ! ನಿನ್ನ ಮಹಿಮೆಯನ್ನು ಯಾರು ಅರಿಯುತ್ತಾರೆ ಹೇಳು? ನಾನೋ ಇದನ್ನೆಲ್ಲ ನೋಡಿ ಕೇಳಿ, ಬೆರಗಾಗಿದ್ದೇನೆ; ಅವಾಕ್ಕಾಗಿದ್ದೇನೆ. ಈ ಶರೀರದಲ್ಲಿ ಆತನೆಯೆ ಎಷ್ಟು ಪ್ರಕಾರಗಳಲ್ಲಿ ಆಟವಾಡುತ್ತಿದ್ದಾನೆ! ಅದನ್ನೆಲ್ಲ ಯಾರಿಗೆ ಹೇಳಲಯ್ಯಾ, ಯಾರು ತಿಳಿದುಕೊಳ್ಳುತ್ತಾರೆ? ನನ್ನೊಳಗೆ ಮತ್ತು ಹೊರಗೆ ಎಲ್ಲೆಲ್ಲಿಯೂ ಅವನೆ ಆಟವಾಡುತ್ತಿದ್ದಾನೆ.

“ಆವೊತ್ತು ಸುಧೀರ್(ಸ್ವಾಮಿ ಶುದ್ಧಾನಂದರು ಕೇಳಿದರು: ‘ನಿಮ್ಮ ಹತ್ತಿರ ಅನೇಕ ಜನ ದೀಕ್ಷೆ ತೆಗೆದುಕೊಂಡು ಹೋಗಿದ್ದಾರಲ್ಲಾ ಅವರ ವಿಷಯವನ್ನೆಲ್ಲ ಹೇಗೆ ನೆನಪಿಟ್ಟುಕೊಳ್ಳುತ್ತೀರಿ? ಅವರನ್ನೆಲ್ಲ ನೀವು ಗುರುತಿಸುವುದಕ್ಕಾಗುತ್ತದೆಯೆ?’ ಅದಕ್ಕೆ ನಾನು ಹೇಳಿದೆ: ‘ಇಲ್ಲ. ಅವರನ್ನೆಲ್ಲ ನೆನಪಿಟ್ಟುಕೊಂಡಿಲ್ಲ. ಯಾರು ಯಾರು ದೀಕ್ಷೆ ತೆಗೆದುಕೊಂಡಿದ್ದಾರೆ? ಅವರ ಊರು ಮನೆ ಯಾವುದು? ಅವರೇನು ಮಾಡುತ್ತಾರೆ, ಮಾಡುವುದಿಲ್ಲ-ಅದನ್ನೆಲ್ಲ ಕಟ್ಟಿಕೊಂಡು ನನಗೇನು? ನಾನು ಭಗವಂತನ ನಾಮೋಚ್ಚಾರಣೆ ಮಾಡುತ್ತೇನೆ; ಆತನ ಸ್ಮರಣ ಮನ ಮಾಡುತ್ತೇನೆ; ಮತ್ತಾವುದನ್ನೂ ನಾನರಿಯೆ. ಇನ್ನು ದೀಕ್ಷೆ ವಿಷಯವೆ? ಜನರನ್ನು ಪ್ರೇರಿಸಿ ಇಲ್ಲಿಗೆ ಕರೆತರುವುದೂ ಆತನೆ; ಈ ಶರೀರದಲ್ಲಿ ಕೂತುಕೊಂಡು ಎಲ್ಲರಿಗೂ ಕೃಪೆದೋರುವವನೂ ಆತನೆಯೆ. ಹಾಗಲ್ಲದೆ ನನ್ನನ್ನೆ ನೋಡುವುದಕ್ಕಾಗಿದ್ದರೆ ಅಷ್ಟೊಂದು ಜನ ಏಕೆ ಬರಬೇಕು? ಆದ್ದರಿಂದ, ಆತನೆಯೆ ಈ ಶರೀರವನ್ನು ಆಶ್ರಯ ಮಾಡಿಕೊಂಡು ತನ್ನ ಲೀಲೆ ನಡೆಸುತ್ತಾ ಇದ್ದಾನೆ. ಅವನ ಆಶೀರ್ವಾದದಿಂದ ನಾನೂ ಧನ್ಯವಾಗುತ್ತಿದ್ದೇನೆ. ಇಲ್ಲಿಗೆ ಯಾರು ಬಂದರೂ ಅವರನ್ನು ನಾನು ಅವನ ಚರಣಪದ್ಮಕ್ಕೇ ಸಮರ್ಪಿಸುತ್ತೇನೆ. ‘ಇದನ್ನು ತೆಗೆದುಕೊ. ಪಾದಕ್ಕೆ ಹಾಕಿದ್ದೇನೆ; ನಿನ್ನ ವಸ್ತು ನೀ ತೆಗೆದುಕೊ!’ ಅಂತ ಹೇಳ್ತೇನೆ. ಪೂಜೆ ಮಾಡುವವರು ದೇವರ ಪಾದಕ್ಕೆ ತರತರದ ಹೂವುಗಳನ್ನು ಅರ್ಪಿಸುವಂತೆ ನಾನೂ ತರತರದ ಜನರನ್ನು ನನ್ನ ಅಂಜಲಿಗೆ ತೆಗೆದುಕೊಂಡು ಆತನ ಶ್ರೀಚರಣಕ್ಕೆ ಹಾಕುತ್ತೇನೆ. ಅದೆಲ್ಲವನ್ನೂ ಅವನು ಸ್ವೀಕರಿಸುತ್ತಾನೆ. ಅದನ್ನೂ ನಾನು ಸ್ಪಷ್ಟವಾಗಿ ಕಾಣುತ್ತೇನೆ. ಅವನು ಅವರ ಹೊರೆಯನ್ನೆಲ್ಲ ಹೊತ್ತುಕೊಳ್ಳುತ್ತಾನೆ. ಅವರ ಕಲ್ಯಾಣ ಅಕಲ್ಯಾಣ ಎಲ್ಲದರ ಭಾರವೂ ಆತನದೆ; ಎಲ್ಲದರ ಕರ್ತನೂ ಆತನೆ. ಆದರೆ ನನ್ನ ಮನದ ಶುಭೇಚ್ಛೆ ಅವರ ಪರವಾಗಿ ಎಲ್ಲ ಸಮಯಗಳಲ್ಲಿಯೂ ಇದ್ದೆ ಇರುತ್ತದೆ. ಪ್ರಭುವಿನ ಇಚ್ಛೆಗೆ ಅಧೀನವಾಗಿ- ನಾನೂ ಸರ್ವದಾ ಅವರ ಕಲ್ಯಾಣವನ್ನೆ ಚಿಂತಿಸುತ್ತೇನೆ; ಅವರ ಕಲ್ಯಾಣಕ್ಕಾಗಿ ನಿರಂತರವೂ ಪ್ರಾರ್ಥನೆ ಮಾಡುತ್ತೇನೆ.”

* * *