ಮಹಾಪುರುಷಜಿಯ ಶರೀರ ಅಸ್ವಸ್ಥ. ರಕ್ತದ ಒತ್ತಡ ತುಂಬಾ ಹೆಚ್ಚಾಗಿದೆ. ಡಾಕ್ಟರುಗಳು ಚಿಕಿತ್ಸಾಧೀನದಲ್ಲಿ ಇದ್ದಾರೆ. ತಿರುಗಾಡುವುದಾಗಲಿ ಮಾತಾಡುವುದಾಗಲಿ ಯಾವ ವಿಧವಾದ ಶ್ರಮವೂ ಆಗಬಾರದೆಂದು ಹೇಳಿದ್ದಾರೆ. ಇತ್ತೀಚೆಗೆ ಅವರು ಉಪ್ಪರಿಗೆಯಿಂದ ಇಳಿದುಬಂದು ಎಂದಿನಂತೆ ತಿರುಗಾಡುವುದಕ್ಕೂ ಸಾಧ್ಯವಾಗದೆ ನಿಲ್ಲಿಸಿಬಿಟ್ಟಿದಾರೆ. ಯಾವೊತ್ತಾದರೂ ಸಾಯಂಕಾಲ ಒಮ್ಮೆ ತಮ್ಮ ಕೊಠಡಿಯ ಪಶ್ಚಿಮ ವರಾಂಡದಲ್ಲಿ ತುಸು ಕಾಲಾಡುತ್ತಿದ್ದರು; ಅಥವಾ ಒಮ್ಮೊಮ್ಮೆ ಗಂಗಾನದಿಗೆ ಅಭಿಮುಖವಾಗಿರುವ ವರಾಂಡದಲ್ಲಿ. ಇವತ್ತು ಸಾಯಂ ಸಮಯದಲ್ಲಿ ಗಂಗಾಭಿಮುಖವಾಗಿರುವ ವರಾಂಡಕ್ಕೆ ಕಾಲಾಡಲು ಹೋದರು. ಗಂಗಾದರ್ಶನವಾದೊಡನೆ ಕೈಮುಗಿದು “ಜಯ ತಾಯಿ ಗಂಗೆ!” ಎಂದು ಪ್ರಣಾಮ ಸಲ್ಲಿಸುತ್ತಾ “ಠಾಕೂರರು ಗಂಗೆಯನ್ನು ‘ಬ್ರಹ್ಮವಾರಿ’ ಎಂದು ಕರೆಯುತ್ತಿದ್ದರು. ಗಂಗೆಯ ಗಾಳಿ ಎಲ್ಲಿಯವರೆಗೆ ಬೀಸುತ್ತದೆಯೊ ಅಲ್ಲಿಯವರೆಗೂ ಇರುವುದೆಲ್ಲ ಪವಿತ್ರವಾಗುತ್ತದೆ.”

ಆಮೇಲೆ ದೂರದಲ್ಲಿ ಕಾಣುತ್ತಿದ್ದ ದಕ್ಷಿಣೇಶ್ವರವನ್ನು ನೋಡಿ ಶ್ರೀ ಶ್ರೀ ಭವತಾರಿಣಿಗೆ ನಮಸ್ಕಾರ ಮಾಡಿದರು. ಗಂಗೆಯ ಆಚೆಯ ದಡದಲ್ಲಿದ್ದ ಶ್ರೀ ರಾಮಕೃಷ್ಣರ ಸಮಾಧಿಸ್ಥಾನವನ್ನು ಕುರಿತು ಪ್ರಣಾಮ ಸಲ್ಲಿಸಿದರು. ಈ ಸಾರಿ ದೊಣ್ಣೆಯೂರಿಕೊಂಡು ನಿಧಾನವಾಗಿ ನಡೆಯತೊಡಗಿ ಸ್ವಾಮಿ ವಿವೇಕಾನಂದರು ಇರುತ್ತಿದ್ದ ಕೊಠಡಿಯ ಬಳಿಗೆ ಬಂದು ಕೈಜೋಡಿಸಿ ಸ್ವಾಮೀಜಿಗೆ ಪ್ರಣಾಮ ಮಾಡಿದರು. ಪಕ್ಕದಲ್ಲಿ ಸೇವೆಗೆ ಒಬ್ಬರು ಸದಾ ಇರುತ್ತಿದ್ದರು. ಮೆಲ್ಲಮೆಲ್ಲಗೆ ಕುಂಟಿ ನಡೆಯುತ್ತಾ ಅವರೊಡನೆ ಹೇಳಿದರು: “ನೋಡಿದೆಯಾ ಶರೀರ ಏನು ಅವಸ್ಥೆಗೆ ಬಂದುಬಿಟ್ಟಿದೆ! ಎರಡು ಹೆಜ್ಜೆ ಇಡುವುದೂ ಕಷ್ಟವಾಗಿದೆಯಲ್ಲಾ! ಆದರೆ ಇದೇ ಒಡಲು, ಇದೇ ಕಾಲು ಎಷ್ಟು ಬೆಟ್ಟ ಪರ್ವತ ಹತ್ತಿ ಇಳಿದಿವೆ! ಎಷ್ಟು ದೇಶ ದೇಶಾಂತರಸುತ್ತಿವೆ! ಎಷ್ಟು ಕಠೋರ ತಪಸ್ಯೆಯನ್ನು ಆಚರಿಸಿವೆ. ಆಗ ನನ್ನ ಹತ್ತಿರ ಎಷ್ಟೋ ಸಮಯ ಒಂದು ಬಟ್ಟೆಗಿಂತಲೂ ಹೆಚ್ಚಾಗಿ ಇರುತ್ತಿರಲಿಲ್ಲ. ಅದನ್ನೇ ಅರ್ಧ ಬಟ್ಟೆಯನ್ನು ಸೊಂಟಕ್ಕೆ ಸುತ್ತಿಕೊಂಡು ಇನ್ನರ್ಧವನ್ನು ಹೊದ್ದುಕೊಳ್ಳುತ್ತಿದ್ದೆ. ಪರಿವ್ರಾಜಕನಾಗಿ ದಾರಿ ನಡೆಯುತ್ತಿದ್ದಾಗ ಹಾದಿಯ ಬಳಿಯ ಕೊಳದಲ್ಲಿಯೋ ಕೆರೆಯಲ್ಲಿಯೋ   ಸ್ನಾನಮಾಡಿ, ಆ ಬಟ್ಟೆಯನ್ನು ಒಗೆದು ಹರಡಿ ಅದು ಆರುವವರೆಗೆ ಕೌಪೀನ ಮಾತ್ರ ಧಾರಿಯಾಗಿರುತ್ತಿದ್ದೆ.

“ಮರದ ಕೆಳಗೆ ಮಲಗಿ ನಿದ್ದೆ ಮಾಡಿಯೆ ಎಷ್ಟೋ ರಾತ್ರಿಗಳನ್ನು ಕಳೆಯುತ್ತಿದ್ದೆ. ಆಗ ನನಗೆ ತೀವ್ರ ವೈರಾಗ್ಯ; ಶರೀರಕ್ಕೆ ಸುಖಕೊಡುವ ವಿಚಾರವೆ ಮನಸ್ಸಿಗೆ ಬರುತ್ತಿರಲಿಲ್ಲ; ಕಠೋರತೆಯಲ್ಲಿಯೆ ಆನಂದವಿರುತ್ತಿತ್ತು. ಕೈಯಲ್ಲೇನೂ ಇಲ್ಲದೆ ಎಷ್ಟು ಸುತ್ತಿದ್ದೇನೆ; ಆದರೆ ಎಲ್ಲಿಯೂ ಯಾವ ವಿಪತ್ತಿಗೂ ಒಳಗಾಗಲಿಲ್ಲ. ಶ್ರೀ ಗುರುವೆ ಸರ್ವದಾ ನನ್ನ ಜೊತೆಯಲ್ಲಿದ್ದುಕೊಂಡು ಯಾವ ವಿಪದಾಪಗಳೂ ಬರದಂತೆ ನನ್ನನ್ನು ರಕ್ಷಿಸುತ್ತಿದ್ದರು. ಎಂದೂ ಹೊಟ್ಟೆಗಿಲ್ಲದೆ ಕಷ್ಟಪಡುವಂತಾಗಲಿಲ್ಲ. ನಿಜ, ಕೆಲವು ದಿನಗಳಲ್ಲೇನೊ ಹೊಟ್ಟೆಗೆ ಸಾಕಾಗುವಷ್ಟು ಸಿಗುತ್ತಿರಲಿಲ್ಲ. ಅದರಲ್ಲಿ ಒಂದು ಅನುಭವ ಚೆನ್ನಾಗಿ ನೆನಪಿಗೆ ಬರುತ್ತದೆ. ಒಂದು ದಿನ ಒಬ್ಬ ಸಾಧುಗಳನ್ನು ನೋಡುವುದಕ್ಕಾಗಿ  ಬಿಠೂರಿಗೆ ಹೋಗುತ್ತಿದ್ದೆ. ಮಧ್ಯಾಹ್ನದ ಹೊತ್ತು ದಾರಿಯ ಪಕ್ಕದ ಒಂದು ಮರದಡಿ ಆಯಾಸ ಪರಿಹಾರಕ್ಕಗಿ ಕುಳಿತಿದ್ದೆ. ಆವೊತ್ತು ಏನನ್ನೂ ತಿಂದಿರಲಿಲ್ಲ. ಸಮೀಪದಲ್ಲಿ ಎಲ್ಲಿಯೂ ಮನುಷ್ಯಾವಾಸವಿರಲಿಲ್ಲ. ಆ ಸಮಯಕ್ಕೆ ಸರಿಯಾಗಿ ಪಕ್ಕದಲ್ಲಿದ್ದ ಒಂದು ಬೇಲದ ಮರದಿಂದ ಒಂದು ದೊಡ್ಡ ಹಣ್ಣು ದೊಪ್ಪೆಂದು ನೆಲಕ್ಕೆ ನನ್ನದೆರುಗೇ ಬಿದ್ದು ಬಿರಿಯಿತು. ನಾನು ಆ ಕಡೆ ಈ ಕಡೆ ನೋಡಿದೆ. ಯಾರಾದರೂ ಇದ್ದಾರೆಯೊ ಎಂದು. ಯಾರೂ ಇರಲಿಲ್ಲ. ಸರಿ, ಹಣ್ಣನ್ನು ಹೆರಕಿಕೊಂಡು ಹಸಿವಾರೆ ಹೊಟ್ಟೆ ತುಂಬ ತಿಂದೆ. ಹಣ್ಣೂ ದೊಡ್ಡದಾಗಿತ್ತು.”

“ಆಗ ನನ್ನ ಹೃದಯವನ್ನೆಲ್ಲಾ ವ್ಯಾಕುಲತೆ ಮತ್ತು ಅಶಾಂತಿ ತುಂಬಿರುತ್ತಿತ್ತು, ಭಗವದ್ದರ್ಶನಕ್ಕಾಗಿ. ಹೋಗುತ್ತಾ ಹೋಗುತ್ತಾ ಭಗವಂತನ ಸ್ಮರಣ ಮನನ ಮಾಡುತ್ತಿದ್ದೆ. ಜನರ ಸಂಗ ಎಂದರೆ ನನಗೆ ಆಗುತ್ತಿರಲಿಲ್ಲ. ಅದಕ್ಕಾಗಿ ಹೆಚ್ಚಾಗಿ ಜನಸಂಚಾರವಿರುತ್ತಿದ್ದ ರಸ್ತೆಗಳನ್ನು ಬಿಟ್ಟು ಬೇರೆ ರಸ್ತೆಗಳಲ್ಲಿಯೆ ಸಾಮಾನ್ಯವಾಗಿ ಸಂಚರಿಸುತ್ತಿದ್ದೆ. ಬೈಗಾಗಲು ಎಲ್ಲಿಯಾದರೂ ಒಂದು ಆಶ್ರ ಹುಡುಕಿ, ರಾತ್ರಿಯನ್ನೆಲ್ಲ ನನ್ನ ಭಾವಗಳಲ್ಲಿ ಮಗ್ನನಾಗಿಯೆ ಕಳೆಯುತ್ತಿದ್ದೆ. ಸಾಧನೆ ಭಜನೆಗೆ ಉತ್ತಮ ಸಮಯ ಎಂದರೆ ರಾತ್ರಿ. ಹೊರಗಿನ ಕೋಲಾಹಲ ಏನೆಂದೂ ಇರುವುದಿಲ್ಲ; ಮನಸ್ಸೂ ತನಗೆ ತಾನೆ ಶಾಂತವಾಗುತ್ತದೆ. ಹೀಗೇ ಅನೇಕ ದಿನ ಅಲೆದಾಡಿದೆ. ಹೀಗೆ ನಿರಾಶ್ರಯವಾಗಿ ನಿರಾಧಾರವಾಗಿ ನಿಃಸಮ್ಬಲವಾಗಿ ಗೊತ್ತು ಗುರಿಯಿಲ್ಲದೆ ಕೆಲವು ಕಾಲ ಕಳೆದರೆ ಭಗವಂತನ ಮೇಲೆ ಒಂದು ಪೂರ್ಣ ನಿರ್ಭರತೆ ಉಂಟಾಗುತ್ತದೆ. ಸಂಪತ್ತಿನಲ್ಲಾಗಲಿ ವಿಪತ್ತಿನಲ್ಲಾಗಲಿ ಅವನೊಬ್ಬನೆ ರಕ್ಷಾಕರ್ತನು ಎಂಬ ಭಾವ ಚೆನ್ನಾಗಿ ಬಲಿತು ಪಕ್ವವಾಗುತ್ತದೆ.”

ಅಷ್ಟೂ ಹೊತ್ತಿಗೆ ಮಹಾಪುರುಷಜಿ ಒಂದು ಕುರ್ಚಿಯ ಬಳಿಗೆ ಬಂದಿದ್ದರು. ಅದರ ಮೇಲೆ ಕುಳಿತುಕೊಂಡು ಹೇಳುತ್ತಿದ್ದುದನ್ನು ಮುಂದುವರಿಸಿದರು: “ಈಗಲಾದರೂ ಶ್ರೀಗುರು ನನ್ನನ್ನು ತನ್ನ ಸೇವಾಕಾರ್ಯಕ್ಕಾಗಿ ಇಲ್ಲಿ ಇರಿಸಿದ್ದಾರೆ, ಈಗ ನನಗೆ ಎಲ್ಲಿಗೆ ಹೋಗುವುದಕ್ಕೂ ಇಚ್ಛೆಯೂ ಇರುವುದಿಲ್ಲ; ನಾನು ಅವರ ನಡುವೆ ಇದ್ದುಕೊಂಡು ತುಂಬ ಆನಂದದಲ್ಲಿದ್ದೇನೆ. ಈ ಸ್ಥಾನವೋ, ಇದೇ ವೈಕುಂಠ! ಸ್ವಯಂ ಜಗನ್ನಾಥನೆ ಇಲ್ಲಿದ್ದಾನೆ ಜಗತ್ತಿನ ಕಲ್ಯಾಣಾರ್ಥವಾಗಿ. ಅಲ್ಲದೆ ಸ್ವಾಮೀಜಿಯಂತಹ ಸಿದ್ಧ ಮಹಾಪುರುಷರೂ ಇಲ್ಲಿದ್ದಾರೆ. ಎಷ್ಟು ಮಹಾಭಾವ, ಎಷ್ಟು ಆಧ್ಯಾತ್ಮಿಕ ಅನುಭವ ಇಲ್ಲಿ ಪ್ರಕಟವಾಗಿದೆ? ಆತ್ಮಾರಾಮರಾಧ ನಮ್ಮು ಶ್ರೀಠಾಕೂರರು ಇಲ್ಲಿದ್ದಾರೆ; ಅವರ ಅಂತರಂಗ ಕೋಟಿಗೆ ಸೇರಿದವರೆಲ್ಲರೂ ಇಲ್ಲಿಯೇ ಸೂಕ್ಷ್ಮದೇಹದಿಂದಿದ್ದಾರೆ; ಬೇಕಾದರೆ ಅವರನ್ನು ನೋಡಲೂಬಹುದು.”

“ಎಲ್ಲಿಯಾಗಲಿ ಯಾರಾದರೊಬ್ಬ ಸಾಧಕ ಸಿದ್ಧಿ ಲಾಭ ಪಡೆದನೆಂದರೆ ಅದರಿಂದಲೆ ಆ ಸ್ಥಾನ ತೀರ್ಥಪರಿಣತವಾಗುತ್ತದೆ. ಅದಕ್ಕಾಗಿಯೆ ಇದು ಮಹಾ ತೀರ್ಥ! ಪವಿತ್ರಕ್ಷೇತ್ರ! ಈ ಸ್ಥಳದ ಒಂದೊಂದು ಧೂಳಿನ ಕಣವೂ ಎಷ್ಟೊಂದು ಪವಿತ್ರವಾದುದ್ದು! ಠಾಕೂರರೂ ಸ್ವಾಮೀಜಿಯೂ ಎಂಥವರಾಗಿದ್ದರು ಎಂಬುದನ್ನು ಅರಿಯುವುದಕ್ಕೆ ಲೋಕಕ್ಕೆ ಇನ್ನೂ ಬಹುಕಾಲ ಬೇಕಾಗುತ್ತದೆ. ಜಗತ್ತಿನ ಹಿತಕ್ಕಾಗಿ ಇಷ್ಟು ದೊಡ್ಡ ಆಧ್ಯಾತ್ಮಿಕ ಶಕ್ತಿ ಸಹಸ್ರ ಸಹಸ್ರ ವರ್ಷಗಳಲ್ಲಿಯೂ ಒಮ್ಮೆ ಆವಿರ್ಭೂತವಾಗಿಲ್ಲ. ಬುದ್ಧದೇವ ಬಂದನು; ಅವನು ಬಂದು ಹೋದ ನೂರಾರು ವರ್ಷಗಳ ತರುವಾಯ ಲೋಕದ ಜನ ಅವನನ್ನು ಸ್ವಲ್ಪ ಸ್ವಲ್ಪ ಅರಿಯತೊಡಗಿತು. ಅವನ ಉದಾರ ಬೋಧೆ ಜಗತ್ತಿನಲ್ಲೆಲ್ಲ ಹಬ್ಬಿತು. ಗೊತ್ತಾಗುವುದಿಲ್ಲವೆ, ಬುದ್ಧದೇವನ ಒಂದು ಹಲ್ಲನ್ನು ಎಲ್ಲಿಗೋ ತೆಗೆದುಕೊಂಡು ಹೋದುದಕ್ಕಾಗಿ ಏನು ಪುರಾಣವಾಯಿತು! ಅದರ ಸ್ಮಾರಕವಾಗಿ ಎಂತಹ ಅದ್ಭುತವಾದ ದಂತಮಂದಿರ ರಚನೆಯಾಗಿಹೋಯಿತು! ಇಲ್ಲಿಯೂ ಠಾಕೂರ್, ಶ್ರೀಮಾತೆ, ಸ್ವಾಮೀಜಿ ಎಲ್ಲರ ಭಸ್ಮಾಸ್ಥಿಯೂ ಇದೆ. ಇದನ್ನೆಲ್ಲ ಭಾವಿಸಿದರೆ ನನಗೆ ರೋಮಾಂಚನವೇಳುತ್ತದೆ!  ಈ ಬೇಲೂರು ಮಠದ ಧೂಳೀಸ್ಪರ್ಶನಕ್ಕಾಗಿ ದೇಶಾಂತರಗಳಿಂದ ಎಷ್ಟೊಂದು ಜನ ಧಾವಿಸಿ ಬರುತ್ತಾರೆ! ಅದರ ಸೂಚನೆಯೂ ಈಗಾಗಲೆ ಕಂಡು ಬರುತ್ತಿದೆ. ಠಾಕೂರರ ದೇಹತ್ಯಾಗನಂತರ ಇನ್ನೂ ಐವತ್ತು ಪೂರೈಸಿಲ್ಲ; ಆದರೂ, ಕಾಣುವುದಿಲ್ಲವೆ, ಈಗಾಗಲೆ ಅವರ ಪ್ರಭಾವದಿಂದ ಲೋಕದಲ್ಲಿ ಎಂತಹ ಆಧ್ಯಾತ್ಮಿಕ ಪರಿವರ್ತನೆ ಆಗಲಾರಂಭವಾಗಿದೆ. ಇದನ್ನೆಲ್ಲ ಕಾಣುವ ಪುಣ್ಯ ಪಡೆದಿರುವ ನಾವೇ ಧನ್ಯ! ನೀವಂತೂ ಇನ್ನೂ ಎಷ್ಟೋ ಹೆಚ್ಚು ಕಾಣುತ್ತೀರಿ.”

“ಶ್ರೀ ಠಾಕೂರರ ಕಾರ್ಯವಿದ್ದದ್ದು ಭಾವರಾಜ್ಯದಲ್ಲಿ. ಆಧ್ಯಾತ್ಮಿಕ ರಾಜ್ಯದಲ್ಲಿ. ಅವರ ಜೀವನಾದರ್ಶ ಸಮಗ್ರ ಜಗತ್ತಿನಲ್ಲೆಯೆ ಒಂದು ಅಮೂಲ್ಯ ಪರಿವರ್ತನೆಯನ್ನು ಶೀಘ್ರವಾಘಿಯೆ ಉಂಟುಮಾಡುತ್ತದೆ. ಈಗಾಗಲೆ ಅದರ ಪೂರ್ವ ಸೂಚನೆ ಕಾಣುತ್ತಿದೆ. ಯೋಗಿನ್ ಮಹಾರಾಜ್(ಸ್ವಾಮಿ ಯೋಗನಂದರು) ಒಂದು ಮಾತು ಹೇಳುತ್ತಾ ಇದ್ದು: ‘ಅನೇಕ ಮತಧರ್ಮಗಳು ಚಿರಕಾಲದಿಂದಲೂ ಇವೆ, ರಾಶಿ ರಾಶಿ ಶಾಸ್ತ್ರ ಗ್ರಂಥಗಳೂ ಇವೆ, ತೀರ್ಥಕ್ಷೇತ್ರಗಳೂ ಅಸಂಖ್ಯವಾಗಿವೆ- ಎಲ್ಲ ದೇಶಗಳಲ್ಲಿಯೂ, ಆದರೂ ಧರ್ಮಗ್ಲಾನಿಯಾಗುತ್ತದಲ್ಲ ಏತಕ್ಕೆ? ಕಾಲಪ್ರಭಾವದಿಂದ ಈ ಆದರ್ಶಗಳ ಸತ್ತ್ವವೆಲ್ಲ ನಷ್ಟವಾಗುವುದರಿಂದಲೆ, ಆದ್ದರಿಂದಲೆ ಶ್ರೀ ಭಗವಂತನು ಅವತರಿಸುತ್ತಾನೆ – ಧರ್ಮದ ಗೂಢ ರಹಸ್ಯಗಳನ್ನು ಬೋದಿಸುವುದಕ್ಕಾಗಿ, ಆದರ್ಶವನ್ನು ತೋರಿಸುವುದಕ್ಕಾಗಿ.’ ಸ್ವಾಮಿ ಈ ಸಾರಿ ಬರುವಾಗ ಜಗತ್ತಿನ ಎಲ್ಲ ಮತಧರ್ಮಗಳ ಜೀವಂತ ಆದರ್ಶರೂಪವಾಗಿ ಬಂದಿದ್ದಾನೆ. ಅದಕ್ಕಾಗಿಯೆ ಆತನು ನಾನ ಮತಗಳಲ್ಲಿ ಸಾಧನೆ ಮಾಡಿದ್ದು, ಸರ್ವಭಾವಗಳಲ್ಲಿಯೂ ಸಿದ್ಧಿ ಲಾಭ ಪಡೆದದ್ದು. ಜಗತ್ತಿನ ಪ್ರತಿಯೊಂದು ಮತಕ್ಕೂ ಅದರದರ ಧರ್ಮಾದರ್ಶದ ಮೂರ್ತ ವಿಗ್ರಹವಾಗಿದೆ ಶ್ರೀಗುರುವಿನ ಜೀವನ. ನೀನೆ ನೋಡುತ್ತಿಯೆ, ಆತನ ಅಲೌಕಿಕ ಜೀವನದಿಂದ ಒಬ್ಬೊಬ್ಬ ಪ್ರತ್ಯೇಕ ಮತಾವಲಂಭಿಯೂ ಹೊಸ ಬೆಳಕನ್ನು ಪಡೆಯುತ್ತಾನೆ. ಹೊಸ ಆಶೆಯನ್ನೂ ಹೊಸ ಪ್ರೇರಣೆಯನ್ನೂ ಕಾಣುತ್ತಾನೆ, ಅಲ್ಲದೆ ಆತನ ಜೀವನಾದರ್ಶದಿಂದ ತನ್ನ ಧರ್ಮಜೀವನವನ್ನು ಕರುವಿಟ್ಟುಕೊಳ್ಳುತ್ತಾನೆ.”

ಬರುಬರುತ್ತಾ ಕತ್ತಲಾಯಿತು. ಮಹಾಪುರುಷಜಿ ಮೆಲ್ಲಗೆ ತಮ್ಮ ಕೊಠಡಿಗೆ ನಡೆದು ಮಂಟದ ಮೇಲೆ ಕುಳಿತರು, ಪಶ್ಚಿಮಕ್ಕೆ ಮುಕವಾಗಿ ಕೈಜೋಡಿಸಿಕೊಂಡು. ಅವರೆದುರಿಗೆ ಗೋಡೆಯ ಮೇಲೆ ಶ್ರೀರಾಮಕೃಷ್ಣರ ಒಂದು ಬೃಹದಾಕಾರದ ಭಾವಚಿತ್ರ ಇತುತ. ಕೊಠಡಿಯಲ್ಲಿ ಇನ್ನೂ ಅನೇಕ ದೇವದೇವಿಯರ ಚಿತ್ರಪಟಗಳಲ್ಲಿದ್ದುವು. ಮಹಾಪುರುಷಜಿ ಶ್ರೀಗುರುವನ್ನೂ ಇತರ ದೇವದೇವಿಯರನ್ನೂ ಕುರಿತು ಪ್ರಣಾಮ ಮಾಡಿ ನೀರವವಾಗಿ ಕುಳಿತರು. ಅಷ್ಟುಹೊತ್ತಿಗೆ ದೇವಮಂದಿರದಲ್ಲಿ ಆರತಿ ಪ್ರಾರಂಭವಾಯಿತು. ಸಾಧುಗಳೂ ಭಕ್ತರೂ ಮಧುರಕಂಠದಿಂದಲೂ ಸಮಸ್ವರದಿಂದಲೂ ಆರತಿಯ ಭಜನ ಗೀತೆಯನ್ನು ಹಾಡತೊಡಗಿದರು. ಅದಾದ ಮೇಲೆ ಕೊನೆಯಲ್ಲಿ ದೇವೀ ಪ್ರಣಾಮ ಸ್ತ್ರೋತ್ರವನ್ನು ಹಾಡಿದರು. ಮಹಾಪುರುಷಜಿ ತಮ್ಮ ಕೊರಳನ್ನೂ ನಿವೇದಿಸಿ ಸ್ತ್ರೋತ್ರಗೈಯತೊಡಗಿದರು:

ಓಂ ಸರ್ವಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ |
ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋsಸ್ತುತೇ ||

ಸೃಷ್ಟಿ ಸ್ಥಿತಿ ವಿನಾಶಾನಾಂ ಶಕ್ತಿಭೂತೇ ಸನಾತನಿ |
ಗುಣಾಶ್ರಯೇ ಗುಣಮಯೇ ನಾರಾಯಣಿ ನಮೋsಸ್ತುತೇ ||

ಶರಣಾಗತ ದೀನಾರ್ತ ಪರಿತ್ರಾಣ ಪರಾಯಣೇ |
ಸರ‍್ವಸ್ಯಾರ್ತಿಹರೇ ದೇವಿ ನಾರಾಯಣಿ ನಮೋsಸ್ತುತೇ ||

ಸರ್ವಸ್ವರೂಪವೇ ಸರ್ವೇಶೇ ಸರ್ವಶಕ್ತಿ ಸಮನ್ವಿತೇ |
ಭಯೇಭ್ಯಸ್ತ್ರಾಹಿ ನೋ ದೇವಿ ದುರ್ಗೇ ದೇವಿ ನಮೋsಸುತ್ತೇ ||

ಬರಬರುತ್ತಾ ನಿಶ್ಯಬ್ದತೆ ಸರ್ವತ್ರವ್ಯಾಪಿಯಾಯಿತು. ಮಹಾಪುರುಷಜಿಯೂ ಅದೇ ಭಾವಮುದ್ರೆಯಲ್ಲಿ ಕುಳಿತಿದ್ದರು. ಕಣ್ಣುಮುಚ್ಚಿ, ಧ್ಯಾನಸ್ಥರಾಗಿ.

* * *