ಸಂನ್ಯಾಸಿಯೊಬ್ಬರು ಬೇಲೂರು ಮಠದಲ್ಲಿ ಸ್ವಲ್ಪಕಾಲ ವಿಶ್ರಾಂತಿ ಪಡೆಯುತ್ತಿದ್ದು, ತರುವಾಯ ತಮ್ಮ ಕರ್ಮಕ್ಷೇತ್ರವಾದ ಶ್ರೀರಾಮಕೃಷ್ಣ ಮಿಶನ್ನಿನ ಒಂದು ಶಾಖಾಕೇಂದ್ರಕ್ಕೆ ಹೊರಡಲು ಹವಣಿಸುತ್ತಿದ್ದರು. ಬೆಳಿಗ್ಗೆ ಅವರು ಮಹಾಪುರುಷಜಿಗೆ ಪ್ರಣಾಮ ಸಲ್ಲಿಸಲು ಬಂದಾಗ ಅವರಿಗೆ ಮಹಾಪುರುಷಜಿ ವಿಶ್ವಾಸದಿಂದ ಹೇಳಿದರು: “ಇವತ್ತು ಯ…ಅಲ್ಲಿಗೆ ಹೊರಡುತ್ತಾರೆ. ಈ ಸಾರಿ ನೀನು ಬಹಳ ದಿನ ಬೇಲೂರು ಮಠದಲ್ಲಿ ಇದ್ದು ಬಿಟ್ಟೆ. ಆ ನಿನ್ನ ಕರ್ಮಕೇಂದ್ರವೂ ಶ್ರೀರಾಮಕೃಷ್ಣಶ್ರಮವೇ: ಅದೂ ಶ್ರೀಗುರುಮಹಾರಾಜರ ಸ್ಥಾನವೇ: ಅಲ್ಲಿಗೇ ಹಿಂತಿರುಗಿ ಹೋಗು. ನೀವೆಲ್ಲ ಭಕ್ತರು; ನೀವೆಲ್ಲಿಗೆ ಹೋದರೆ ಅಲ್ಲಿಗೆ ನಿಮ್ಮೊಡನೆ ಶ್ರೀಗುರು ಬರುತ್ತಾರೆ. ತನ್ನ ಭಕ್ತರೆಲ್ಲಿದ್ದರೆ ಅಲ್ಲಿ ಭಗವಂತನಿರುತ್ತಾನೆ. ಅವನಿಗೆ ತನ್ನ ಭಕ್ತರನ್ನು ಕಂಡರೆ ಬಹಳ ಪ್ರೇಮ. ‘ನಾರದ, ನನ್ನ ಭಕ್ತರು ನನ್ನನ್ನು ಸ್ತ್ರೋತ್ರ ಮಾಡುವಲ್ಲಿ ನಾನು ಮೈದೋರುತ್ತೇನೆ.’

“ಈಗಾಗಲೆ ಸ್ವಲ್ಪ ಹೆಚ್ಚುಕಡಮೆ ಶ್ರೀರಾಮಕೃಷ್ಣರ ಭಕ್ತರು ಎಲ್ಲೆಲ್ಲಿಯೂ ಇದ್ದಾರೆ. ಇನ್ನು ಮುಂದೆ ಇನ್ನೂ ಹೆಚ್ಚು ಜನರು ಭಕ್ತರಾಗುತ್ತಾರೆ. ನಿನಗೆ ತಿಳಿಯದೇನು? ಅವರು ದೇಹತ್ಯಾಗ ಮಾಡಿ ನಾಲ್ವತ್ತೆರಡೂ ನಾಲ್ವತ್ತುಮೂರೊ ವರ್ಷ ಮಾತ್ರ ಆಗಿವೆ. ಈ ಅಲ್ಪಾವಧಿಯಲ್ಲಿಯೆ ಏನೇನಾಗಿದೆ ನೋಡು! ಕಾಲ ಕಳೆದಂತೆಲ್ಲ ಜನಕ್ಕೆ ಅವರ ಮಹಿಮೆ ಹೆಚ್ಚು ಹೆಚ್ಚಾಗಿ ಗೋಚರವಾಗುತ್ತದೆ. ಹಾಗೆಯೆ ಅವರ ಭಕ್ತರ ಸಂಖ್ಯೆಯೂ ಹೆಚ್ಚುತ್ತಿದೆ. ಭಗವಂತನು ನರದೇಹ ಧಾರಣೆ ಮಾಡಿ ಅವತರಿಸಿದಾಗಲೆಲ್ಲ ಹಾಗಾಗುತ್ತದೆ. ಸತ್ಯ ತನ್ನನ್ನು ತಾನೆ ಸ್ಥಾಪಿಸಿಕೊಳ್ಳುತ್ತದೆ. ಸೂರ್ಯನಿಗೆ ತನ್ನನ್ನು ತಾನು ತೋರಿಸಿಕೊಳ್ಳುವುದಕ್ಕೆ ಇನ್ನಾವುದಾದರೂ ಬೇರೆ ಬೆಳಕಿನ ಸಹಾಯ ಬೇಕೇನು? ಶ್ರೀರಾಮಕೃಷ್ಣರ ವಿಚಾರವೂ ಹಾಗೆಯೆ. ಅವರು ತಮ್ಮನ್ನು ತಾವೆ ಪ್ರಕಾಶಪಡಿಸಿಕೊಳ್ಳುತ್ತಿದ್ದಾರೆ. ಅವರೇನು ಹುಸಿ ಪ್ರವಾದಿಯಲ್ಲ. ಅವರು ಸ್ವಯಂ ಭಗವಂತನ ಅವತಾರ; ದೇವರೆ ನರದೇಹಧಾರಣೆ ಮಾಡಿ ಜೀವರ ಸಂಕಟ ಪರಿಹಾರ ಮಾಡುವ ಲೋಕ ಕಲ್ಯಾಣಕ್ಕಾಗಿ ಅವತಾರ ಮಾಡಿದ್ದಾನೆ. ಎಲ್ಲರೂ ಅವರಿಗೆ ತಲೆಬಾಗಲೇಬೇಕು. ಶ್ರೀರಾಮಕೃಷ್ಣ ಎಂಬ ಹೆಸರೆ ಈ ಯುಗದ ಮಂತ್ರ. ಯಾರು ಶ್ರೀ ಠಾಕೂರರ ಮರೆಹೋಗುತ್ತಾರೆಯೊ ಅವರೆಲ್ಲ ಉದ್ಧಾರವಾಗುತ್ತಾರೆ.”

“ಈಚೀಚೆಗೆ ಪ್ರತಿಯೊಂದು ದೇಶದಲ್ಲಿಯೂ ಆಲೋಚನಾಪರರಾದವರೆಲ್ಲರ ಮನಸ್ಸೂ ಶ್ರೀರಾಮಕೃಷ್ಣರ ಮತ್ತು ಸ್ವಾಮೀಜಿಯವರ ವಿಚಾರದಲ್ಲಿ ತುಂಬ ಗೌರವಿಟ್ಟುಕೊಂಡಿರುವವರು ಬಹಳ ಮಂದಿ ಇದ್ದಾರೆ. ತಮ್ಮ ಹೃದಯವನ್ನು ಹೊರಗೆಡಹಲು ಅವರು ಸ್ವಲ್ಪ ಹಿಂಜರಿಯುತ್ತಿದ್ದಾರೆ. ಅದೂ ಸ್ವಾಭಾವಿಕವೆ ಏಕೆಂದರೆ, ಎಷ್ಟೆಂದರೂ ಇಂಡಿಯಾ ದೇಶ ಇಂಗ್ಲೆಂಡಿನ ಅಧಿನದಲ್ಲಿರುವ ಅಡಿಯಾಳು ನಾಡಲ್ಲವೆ? ಆದ್ದರಿಂದಲೆ ಅವರು ಭಾರತೀಯ ಭಾವಗಳನ್ನೂ ಭಾರತೀಯ ವ್ಯಕ್ತಿಗಳನ್ನೂ ಬಹಿರಂಗವಾಗಿ ಸ್ವೀಕರಿಸಲು ಹಿಂಜರಿಯುತ್ತಾರೆ. ಆದರೆ ಕಾಲಕ್ರಮೇಣ ಅವರು ಹಿಂಜರಿಕೆಯಿಂದ ಪಾರಾಗುತ್ತಾರೆ. ಶ್ರೀರಾಮಕೃಷ್ಣರು ಒಬ್ಬ ಲೋಕಗುರು. ಅವರ ಭಾವಗಳನ್ನು ಎಲ್ಲರೂ ಸ್ವೀಕರಿಸಲೇಬೇಕಾಗುತ್ತದೆ. ಅದನ್ನವರು ಬಹಿರಂಗವಾಗಿ ಒಪ್ಪಿಕೊಳ್ಳಲಿ ಬಿಡಲಿ ಚಿಂತೆಯಿಲ್ಲ. ಈಗೀಗ ಅನೇಕ ಪಾಶ್ಚಾತ್ಯರ ಮನಸ್ಸಿನಲ್ಲಿ ವೇದಾಂತದ ಭಾವಾಲೋಚನೆಗಳೆಲ್ಲ ತಮ್ಮ ದೇಶದಲ್ಲಿಯೆ ಹುಟ್ಟದವರೆಂದೂ ಹೊರದೇಶದಿಂದ ಬಂದವಲ್ಲವೆಂದೂ ಭಾಸವಾಗಿತೊಡಗಿ, ಹಾಗೆ ಅಂದುಕೊಳ್ಳುತ್ತಲೂ ಇದ್ದಾರೆ.”

* * *